ಅಬಚೂರಿ‌ನ ಪೋಸ್ಟಾಫೀಸು ಕತೆಯಲ್ಲಿ ಕಾಣುವ ಹಳ್ಳಿ ಜಗತ್ತು 

Date: 28-02-2025

Location: ಬೆಂಗಳೂರು


"ನಾಗರಿಕತೆಯ ದಾಳಕ್ಕೆ ಇಡೀ ಊರು ಕುಟುಂಬ ಎಲ್ಲದರಲ್ಲಿ ಆಗುವ ಬದಲಾವಣೆ ಆ ಬದಲಾವಣೆಯನ್ನು ಜೀರ್ಷಿಸಿಕೊಳ್ಳಲಾಗದಂತಹ ಪರಿಸ್ಥಿತಿ ಇವೆಲ್ಲವೂ ಕಥೆಯ ಒಂದು ಭಾಗವಾಗಿ ಕಾಣುತ್ತದೆ. ತೇಜಸ್ವಿಯವರು ಸಾಮಾನ್ಯವಾಗಿ ಭಾಷಾ ಬಳಕೆ ರೂಪಕ ಪ್ರತಿಮೆಗಳನ್ನು ಇಡದೆ ನೇರಾತಿನೇರ ಸಂಭಾಷಣೆಯನ್ನು ಕಟ್ಟಿಕೊಟ್ಟಿರುತ್ತಾರೆ," ಎನ್ನುತ್ತಾರೆ ಅಂಕಣಗಾರ್ತಿ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ "ಅಬಚೂರಿ‌ನ ಪೋಸ್ಟಾಫೀಸು" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.

ನಾಡಿನ ಖ್ಯಾತ ಬರಹಗಾರರು ಹಾಗೂ ನವ್ಯ ಸಾಹಿತ್ಯ ಸಂದರ್ಭದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಪ್ರಬುದ್ಧ ಬರವಣಿಗೆಯ ಮೂಲಕ ಚಿರಪರಿಚಿತರಾದ ತೇಜಸ್ವಿಯವರು ಸಹ್ಯಾದ್ರಿ ತಪ್ಪಲಿನ ಮಲೆನಾಡಿನ ಶಿವಮೊಗ್ಗ ಜಿಲ್ಲೆ ಕುಪ್ಪಳ್ಳಿಯಲ್ಲಿ 1938 ರಲ್ಲಿ ಜನಿಸಿದರು. ಕುವೆಂಪು ಮತ್ತು ಹೇಮಾವತಿ ಅವರ ಹಿರಿಯ ಮಗನಾಗಿ ಜನಿಸಿದ ಇವರು ಉನ್ನತ ವ್ಯಾಸಂಗವನ್ನೆಲ್ಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ ಇವರಲ್ಲಿ ಪರಿಸರ ಕಾಳಜಿ ಅನುಭವಗಳ ಸಂಪತ್ತು ಬರಹ ರೂಪದಲ್ಲಿ ಮೂಡಿಬಂದಿದೆ. ಸಂಪ್ರದಾಯದ ವಿರುದ್ಧ ಗಂಭೀರ ಚಿಂತನೆಯಲ್ಲಿ ತೊಡಗಿಕೊಂಡವರು.

“ಸ್ವಗತ ಲಹರಿ ಮತ್ತು ಇತರ ಕವನಗಳು” ಇವರ ಕವನ ಸಂಕಲನಗಳ ಸಂಗ್ರಹವಾದರೆ, “ಹುಲಿಯೂರಿನ ಸರಹದ್ದು” (1962), “ಅಬಚೂರಿನ ಪೋಸ್ಟ್ ಆಫೀಸ್” (1971) ಎರಡು ಕಥಾ ಸಂಕಲನಗಳು. “ಯಮಳ ಪ್ರಶ್ನೆ” (1964) ಇದು ಅವರ ಏಕಾಂತ ನಾಟಕ. “ವ್ಯಕ್ತಿ ವಿಶಿಷ್ಟ ಸಿದ್ಧಾಂತ” (1964) ಇದು ವೈಚಾರಿಕ ಪ್ರಬಂಧಗಳ ಸಂಕಲನ. “ಸ್ವರೂಪ” (1966) “ನಿಗೂಢ ಮನುಷ್ಯರು” (1976) ಕಿರು ಕಾದಂಬರಿ. “ಕರ್ವಾಲೋ” (1980) ಮತ್ತು ಚಿದಂಬರ ರಹಸ್ಯ (1985) ಹಾಗೂ ಜುಗಾರಿ ಕ್ರಾಸ್ (1994) ಇವುಗಳು ಪ್ರಸಿದ್ಧ ಕಾದಂಬರಿಗಳು. “ಕಾಡು ಮತ್ತು ಕ್ರೌರ್ಯ” (1966) ಕ್ಕೂ ಮೊದಲು ಬರೆದ ಕೃತಿಯಾಗಿದೆ. ಇವರ “ಚಿದಂಬರ ರಹಸ್ಯ ಕೃತಿಗೆ 1987 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ”.ಅಬಚೂರಿನ “ಪೋಸ್ಟ್ ಆಫೀಸ್“ ಕಥೆಗೆ 1973 ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಾಂತೀಯ ಚಿತ್ರ ಪ್ರಶಸ್ತಿ ಪಡೆಯಿತು. “ತಬರನ ಕಥೆ” ಚಿತ್ರಕ್ಕೆ 1986ರಲ್ಲಿ ಸ್ವರ್ಣ ಕಮಲ ಪ್ರಶಸ್ತಿ ಲಭಿಸಿತು”. 1987ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರಿಗೆ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿ.

ಅಬಚೂರಿನ ಪೋಸ್ಟ್ ಆಫೀಸ್ ಕಥೆಯಲ್ಲಿ ಬೋಬ್ಬಣನೆಂಬ ಪೋಕರಿ ಇದ್ದವನು ಅಲ್ಲೀಜಾನ್ ಸಾಬರ ತೋಟದಲ್ಲಿ ರೈಟರಾಗಿ ಕೆಲಸ ಮಾಡುತ್ತಿದ್ದವನು. ಓದು ಬರಹ ಕಲಿತ ಇಂಗ್ಲಿಷ್ ತಿಳಿದವನಾಗಿದ್ದರಿಂದ ಡೆಲ್ಲಿಯ ಸಂಪರ್ಕ ಸಾಧಿತ ಪೋಸ್ಟ್ ಆಫೀಸ್ಗೆ ಬೋಬಣ್ಣನೇ ಪೋಸ್ಟ್ ಮಾಸ್ಟರ್ ಆಗುವಂತಾಯ್ತು. ಬೊಮ್ಮಣ್ಣ ಹೆಂಡತಿ ಕಾವೇರಿ. ಅತ್ತೆ ಮಾಚಮ್ಮ. ಅತ್ತೆಯ ಮನೆಯಲ್ಲೇ ಇದ್ದಾತ ಬೋಬಣ್ಣನಿಗೆ ಪೋಸ್ಟ್ ಆಫೀಸ್ ಮನೆ ಒಂದೇ ಆಯ್ತು. ಅಕ್ಷರ ತಿಳಿದ್ದವನಾದ್ದರಿಂದ ಊರಿನ ಕಾಗದ ಬರೆಯುವುದು ಓದಿ ತಿಳಿಸುವುದು ಸಹ ಇವನ ಕೆಲಸವಾಗಿತ್ತು. ಪೋಸ್ಟ್ ಆಫೀಸ್ನ ಕಾರ್ಯ ಕುಂಠಿತಗೊಂಡರೆ ಪೋಸ್ಟ್ ಆಫೀಸ್ ಮುಚ್ಚುವ ಭಯ ಬಂದಿರುವ ಕಾರಣದಿಂದ ಊರೂರು ಅಲೆದು ಎಲ್ಲರಿಗೂ ಅಂಚೆ ಪತ್ರದ ತಿಳಿವು ಎಲ್ಲದರ ಮನವರಿಕೆ ಮಾಡಿದ್ದರ ಪ್ರಯುಕ್ತ ಎಲ್ಲರೂ ಇವನಲ್ಲಿ ಕಾಗದ ಬರೆಸಿ ಓದಿಸಿ ಮಾಡುವುದರಿಂದ ಹೆಚ್ಚು ಹೆಚ್ಚು ಕೆಲಸ ಬೋಬಣ್ಣನ ಕೈಗೆ ತಗಲುವಂತಾಯ್ತು. ಜೊತೆಗೆ ಪೋಸ್ಟ್ ಆಫೀಸು ಒಂದು ರೀತಿಯಲ್ಲಿ ಎಲ್ಲರ ವಿಚಾರ ವಿನಿಮಯ ಮಾಡಿಕೊಳ್ಳುವ ಸಾರ್ವಜನಿಕ ಕ್ಲಬ್ ಅಥವಾ ಹೋಟೆಲ್ ತರ ಆಯಿತು. ಇದರೊಟ್ಟಿಗೆ ಬೆಲಾಯುಧನೆಂಬ ವ್ಯಕ್ತಿಗೆ ಬಂದ ಪತ್ರ ಓದಿದ್ದು ಅದು ಆತನ ಮಗಳು ಪದ್ಮಿ ವಿಚಾರಕ್ಕೆ ಆಕೆಯ ಶೀಲದ ಕುರಿತಾದ ವಿಚಾರವಾಗಿದ್ದು, ಆ ವಿಚಾರ ಓದಿ ಪೋಸ್ಟ್ ಆಫೀಸ್ನ ಕಡತಗಳನ್ನು ಹಾಕುವ ಜಾಯಿಕಾಯಿ ಪೆಟ್ಟಿಗೆಯಲ್ಲಿ ಪುನಃ ಅಲ್ಲೇ ಬೋಪಣ್ಣ ಇರಿಸಿದ್ದು ಆ ಪತ್ರ ತೆಗೆದುಕೊಂಡು ಹೋಗಲು ಬರದೇ ಇರುವ ಕಾರಣ, ಆತ ಇರುವ ಸ್ಥಳಕ್ಕೆ ಈಗಾಗಲೇ ಕಳಿಸುವ ಸಲುವಾಗಿ, ಅವರಿವರೆನ್ನದೆ ಮುಟ್ಟಿ ಮುಟ್ಟಿ ಜೀರ್ಣಾವಸ್ಥೆಗೆ ತಲುಪಿದ ಆ ಪತ್ರವನ್ನು ನಕಲು ಮಾಡಿ ಕಳಿಸಿದ ಓಬಣ್ಣನ ಮೇಲೆ ಮೂಗೂರಿ ಮೇಸ್ತ್ರಿ ಸಮೇತರಾಗಿ ಊರಿನ ಜನ ಇವನ ಮೇಲೆ ಹೊಡೆದಾಟಕ್ಕೆ ಬರುವುದು, ಇದರ ನಡುವೆ ಅಜೀಜನಿಗೆ ಬಂದ ಪತ್ರ ಓದಿ ಅದರ ಜೊತೆಗಿದ್ದ ನಗ್ನ ಹುಡುಗಿಯ ಫೋಟೋ ನೋಡಿ ಬೋಬಣ್ಣನಲ್ಲಿ ಅಸೆ ಕಾಮನೆ ಬಯಕೆ ಉಂಟಾಗಿದ್ದು, ಅದನ್ನು ತನ್ನ ಹೆಂಡತಿ ಕಾವೇರಿಯಲ್ಲಿ ಪಡೆಯಲತ್ನಿಸಿದ್ದು, ತಾಯಿಯ ಭಯ ದಬ್ಬಾಳಿಕೆ ದರ್ಪಕ್ಕೆ ಗಂಡನನ್ನೇ ತಿರಸ್ಕರಿಸಿದ ಕಾವೇರಿ, ಮಾಚಮ್ಮನ ಹಿಡಿತಕ್ಕೆ,ಹಾಗೂ ಊರಿನವರ ಅವಮಾನಕ್ಕೆ ನಲುಗಿ ಬೋಬಣ್ಣ ಊರನ್ನು ಹಾಗೂ ಸಂಸಾರವನ್ನೇ ತ್ಯಜಿಸುವ ಈ ಕತೆಯೇ ಅಬಚೂರಿನ ಪೋಸ್ಟ್ ಆಫೀಸ್.

ಮೂರು ನಾಲ್ಕು ವರ್ಷದಿಂದ ಪೋಸ್ಟ್ ಆಫೀಸ್ ನ ಕೆಲಸದಿಂದಾಗಿ ನೆಮ್ಮದಿಯಿಂದ ಇದ್ದ ಬೋಬಣ್ಣನಿಗೆ ಈಗ ದುಃಖಿಯಾಗಿ ಅಸಂತುಷ್ಟಿಗೊಂಡವನಾಗಿದ್ದ ಎಂದು ಹೇಳುವ ಲೇಖಕರು ಏನನ್ನು ಪ್ರತಿಪಾದಿಸಲು ಹೊರಟಿದ್ದಾರೆ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ಬಹುಶಃ ಯಾವುದೇ ವಸ್ತು ವಿಚಾರಗಳನ್ನು ಸಹಜವಾಗಿ ವಿಲೇವಾರಿ ಮಾಡುವಂತಹ ಮನಸ್ಥಿತಿ ಮತ್ತು ಅದುವರೆಗೂ ಪಾರಂಪರಿಕವಾಗಿ ನಡೆದು ಬಂದಿರುವಂತಹ ಮೌಲ್ಯಗಳು ಮತ್ತು ಅಕ್ಷರ ಜ್ಞಾನವಿಲ್ಲದ ಹಳ್ಳಿಯ ಜನರ ಅರಿವು ಇವೆಲ್ಲವನ್ನು ಸಮತೋಲನಾತ್ಮಕವಾಗಿ ನಿಭಾಯಿಸುವುದನ್ನು ಇನ್ನಷ್ಟು ಕರಗತ ಮಾಡಿಕೊಳ್ಳಬೇಕಾದ ಅವಶ್ಯಕತೆ ಇತ್ತು ಬೋಬಣ್ಣನಿಗೆ ಎಂದು ಅನಿಸುತ್ತದೆ. ಹಳ್ಳಿಯ ಜನರು ಎಂದಾಕ್ಷಣ ಹಿಂದಿನಿಂದ ಇಂದಿಗೂ ಕೂಡ ಅವರಾರು ಮುಗ್ಧರಾಗಿರುವುದಿಲ್ಲ. ಈ ಸತ್ಯ ನಾಗರಿಕತೆಯ ನಾಗಾಲೋಟಕ್ಕೆ ಒಳಪಟ್ಟ ಜನತೆ ತಿಳಿದುಕೊಳ್ಳಬೇಕಾಗಿರುವುದು ಅವಶ್ಯ. ಕಾಗೆಯ ಕಥೆಗಳನ್ನು ಗುಬ್ಬಿಯ ಕಥೆಗಳನ್ನು ಸಾರಾಸಗಟಾಗಿ ಜೋಡಿಸುವ ಕಲೆ ಹಳ್ಳಿಗರಿಗೆ ಕರಗತ. ಜನಪದ ಸಂಸ್ಕೃತಿಯ ಬೆನ್ನೆಲುಬು ಹಳ್ಳಿಗಳೇ ಆಗಿರುವುದರಿಂದ ಇಂತಹ ಕಲೆ ಸಾಮಾನ್ಯವಾಗಿರುತ್ತದೆ ಎಂದು ಭಾವಿಸಬೇಕಾಗುತ್ತದೆ. ಅದೇ ರೀತಿ ಬೇಲಾಯುಧನಿಗೆ ಬಂದ ಕಾಗದದ ಕಥೆಯು ಇದಕ್ಕೆ ಸೇರ್ಪಡೆಗೊಳ್ಳುವುದು. ಪದ್ಮಿ ಎಂಬ ಹುಡುಗಿ ಪಾತ್ರ ಹಳ್ಳಿಗಳ ನಾಲಿಗೆಗೆ ಆಹಾರವಾಗುತ್ತಾಳೆ. ಆಕೆ ಈ ಕತೆಯಲ್ಲಿ ಎಲ್ಲಿಯೂ ಓದುಗರೆದುರಿಗೆ ಸುಳಿಯುವುದೇ ಇಲ್ಲ. ಕೇವಲ ಪತ್ರದ ಮೂಲಕ ಅ ಪಾತ್ರಕ್ಕೆ ಜೀವ ಬರುತ್ತದೆ. ಅದರಲ್ಲು ಆಕೆಯ ಶೀಲವನ್ನು ಕುರಿತಾಗಿ.ಇದು ಒಂದು ವಿಶೇಷವಾದ ಕಥೆಯ ತಂತ್ರಗಾರಿಕೆ ಎನ್ನಬಹುದು. ಈ ಎಲ್ಲಾ ಘಟನಾವಳಿಗೆಲ್ಲ ಮೂಲ ಕಾರಣ ಬೋಬಣ್ಣ ಹಾಗೂ ಆತನ ಕುತೂಹಲ

ಬೊಬಣ್ಣನ ಕುತೂಹಲ ಪೋಲಿ ಬುದ್ಧಿಯಿಂದಾಗಿ ವಿಚಾರಗಳು ಊರಿನವರ ಬಾಯಿಗೆ ಪುಕ್ಕಟೆ ಮನರಂಜನೆ ಆಗುತ್ತದೆ. ಇಂತಹ ಸನ್ನಿವೇಶವನ್ನು ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬೋಬಣ್ಣ ಸೋಲುತ್ತಾನೆ.ಅಜೀಜ್ ನಿಗೆ ಬಂದ ಯಾವುದೋ ಒಂದು ಪತ್ರವನ್ನು ಒಡೆದು ಓದುವುದರ ಮೂಲಕ ಆ ಕವರಿನೊಳಗಿದ್ದ ನಗ್ನಗೊಂಡ ಫೋಟೋ ಕಂಡು ಬಯಕೆ ಬುಗಿಲೇಳುತ್ತದೆ‌. ಬೋಬಣ್ಣನ ಕಾಮನೆಗಳನ್ನು ಬಡಿದೆಬ್ಬಿಸುತ್ತದೆ. ಹಾಗಂತ ಬೋಬಣ್ಣ ಕೆಟ್ಟವನೆಂದು ಹೇಳಲು ಸಾಧ್ಯವಿಲ್ಲ. ಆದರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲಾರದ ವ್ಯಕ್ತಿಯಾಗಿ ತೋರುವುದು ಕೂಡ ಆತನ ಕುಚೇಷ್ಟೆಯಿಂದಾಗಿ ಹೊರತು ಬೇರೆ ಏನಲ್ಲ .ಇನ್ನು ಬೋಬಣ್ಣನ ಅತ್ತೆ ಮಾಚಮ್ಮಳ ನಿಲುವು ಆಳ್ವಿಕೆಯನ್ನು ಪ್ರತಿನಿಧಿಸುತ್ತದೆ. ತನ್ನ ಕಪಿಮುಷ್ಟಿಯಲ್ಲಿ ಮಗಳು ಇರಲೇಬೇಕು. ಆಕಸ್ಮಿಕವಾಗಿ ಗಂಡ ಬಿಟ್ಟು ತೊಲಗಿದರೂ ಸಹ ಒಂಟಿಯಾಗಿ ಮಕ್ಕಳೊಂದಿಗೆ ಬದುಕಲು ಸಾಧ್ಯ ಯಾಕೆಂದರೆ ಮಾಚಮ್ಮ ಕೂಡ ಗಂಡನಿರದೇನೆ, ಮಗಳನ್ನು ಸಾಕಿ ಸಲಹಿದರ ಪ್ರಯುಕ್ತ ಕಾವೇರಿ ನನಗಷ್ಟೇ ಸೀಮಿತ ಎಂಬ ಮೋಹ ಮತ್ತು ಸ್ವಾರ್ಥ ಎರಡು ಈ ಕತೆಯಲ್ಲಿ ಎದ್ದು ಕಾಣುತ್ತದೆ. ಮಗಳ ಬದುಕು ಹಾಳಾದರೂ ಪರವಾಗಿಲ್ಲ ತನ್ನೊಂದಿಗಿದ್ದು ತನಗೆ ಆಸರೆ ಆಗಬೇಕೆಂದು ಬಯಸುವ ಆಕೆಯ ವ್ಯಕ್ತಿತ್ವದ ಅನಾವರಣ ಮಾಡುತ್ತದೆ ಈ ಕಥೆ.

ನಾಗರಿಕತೆಯ ದಾಳಕ್ಕೆ ಇಡೀ ಊರು ಕುಟುಂಬ ಎಲ್ಲದರಲ್ಲಿ ಆಗುವ ಬದಲಾವಣೆ ಆ ಬದಲಾವಣೆಯನ್ನು ಜೀರ್ಷಿಸಿಕೊಳ್ಳಲಾಗದಂತಹ ಪರಿಸ್ಥಿತಿ ಇವೆಲ್ಲವೂ ಕಥೆಯ ಒಂದು ಭಾಗವಾಗಿ ಕಾಣುತ್ತದೆ. ತೇಜಸ್ವಿಯವರು ಸಾಮಾನ್ಯವಾಗಿ ಭಾಷಾ ಬಳಕೆ ರೂಪಕ ಪ್ರತಿಮೆಗಳನ್ನು ಇಡದೆ ನೇರಾತಿನೇರ ಸಂಭಾಷಣೆಯನ್ನು ಕಟ್ಟಿಕೊಟ್ಟಿರುತ್ತಾರೆ.

“ದಟ್ಟವಾದ ವಿವರಗಳಿಂದ ಕಥೆಯ ಜಗತ್ತನ್ನು ಸ್ಪಷ್ಟವಾಗಿ ಜೀವಂತವಾಗಿ ಸೃಷ್ಟಿಸುತ್ತಾರೆ”. (ಹೊಸಗನ್ನಡ ಸಾಹಿತ್ಯ ರೂಪಗಳು ಪು.169) ಬೋಬಣ್ಣನಂತಹ ವ್ಯಕ್ತಿಯಲ್ಲಿ ಕಂಡು ಕಾಣದಂತಹ ರಸಿಕತೆಗೆ ಅಜೀಜ್ನಗೆ ಬಂದ ನಗ್ನ ಫೋಟೋ ನೋಡಿದಂದಿನಿಂದ ಹೆಂಡತಿಯಲ್ಲಿ ಎಂದೂ ಕಾಣದ ಸೊಬಗನ್ನು ಕಲ್ಪಿಸಿಕೊಳ್ಳುವುದು ಬಯಕೆ ಕಾಮನೆಗಳನ್ನು ಪ್ರತಿನಿಧಿಸುವಂತಿದ್ದರೂ ಸಹ ಕಾವೇರಿಯ ಪಾತ್ರ ಮಾತ್ರ ಆಸೆ ಕನಸುಗಳನ್ನು ಹೊತ್ತಿದ್ದರು ಜೀವವಿರದ ಬೊಂಬೆಯಂತೆ ಸ್ವಂತಿಕೆ ಇರದ ವ್ಯಕ್ತಿತ್ವವನ್ನು ಕತೆ ಉಲ್ಲೇಖಿಸುತ್ತದೆ. ತಾಯಿಯ ಮಾತೆ ಸರ್ವ ಶ್ರೇಷ್ಠ ಎಂದು ತಿಳಿಯುವ “ಕಾವೇರಿ ಬೋಬಣ್ಣನನ್ನು ತಬ್ಬಿಕೊಂಡರೂ ತಾಯಿಗೆ ದ್ರೋಹ ಬಗೆದಂತಾಗುತ್ತಿತ್ತು” ಎಂಬ ಭಾವನೆಯಲ್ಲಿ ತನ್ನ ಬದುಕನ್ನು ತಾನೇ ನಾಶ ಮಾಡಿ ಕೊಳ್ಳುವ ಸ್ವಂತಿಕೆ ಇರದ ಔದಾರ್ಯ ಹೊಂದಿರದ ಪಾತ್ರವಾಗಿ ಕಂಡುಬರುತ್ತದೆ. “ಆ ಹಡಬೆ ದಾಸಣ್ಣನೊಂದಿಗೆ ಅಷ್ಟೊಂದು ನೀವು ಕುಶಾಲಿನಿಂದ ಮಾತಾಡುವಂತದ್ದು ಏನಿತ್ತು?” ಎಂದು ಪ್ರಶ್ನಿಸುವ ಕಾವೇರಿ ತನ್ನ ಮನೆ ಪೋಸ್ಟ್ ಆಫೀಸು ಕಟ್ಟೆ ಪಂಚಾಯಿತಿ ತರ ಆಗಿರುವುದನ್ನು ಸಹಿಸಲಾರಳು. ಅದು ಕೂಡ ತಾಯಿಯ ಮಾತಿನಿಂದಲೇ ಹೊರತು ಸ್ವಂತಿಕೆ ವಿಚಾರದಿಂದಲ್ಲ ಎಂಬುದು ಅವಲೋಕಿಸಬೇಕಾದ ವಸ್ತು ವಿಚಾರ.

ಮೇಷ್ಟ್ರು ಆಗಿರುವ ದಾಸಣ್ಣನನ್ನು ಹಡಬೆ ಎಂದು ಸಂಬೋಧಿಸುವ ಕಾವೇರಿಯ ಮಾತಿನ ಮೂಲಕ ಶಾಲೆ, ಶಿಕ್ಷಕ, ಇವೆಲ್ಲದರ ಮೌಲ್ಯ ಕಳೆದು ಕೊಳ್ಳುವುದನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ ದಾಸಣ್ಣನ ವ್ಯಕ್ತಿತ್ವದ ಮೂಲಕ. ಇವರ ಭಾಷೆಯ ಸರಳೀಕೃತ ಎಲ್ಲರಿಗೂ ಓದುವಂತದ್ದು.
“ಬಹುಶಃ ತೇಜಸ್ವಿಯವರದು ನವ್ಯರಿಗಿಂತ ಶಿವರಾಮ ಕಾರಂತರಿಗೆ ಹತ್ತಿರವಾದ ಸಂವೇದನೆ ಮತ್ತು ಭಾಷೆ ಎಂದರೆ ತಪ್ಪಾಗಲಾರದು “( ಶತಮಾನದ ಕನ್ನಡ ಸಾಹಿತ್ಯ ಪು.ಸಂ 339)

ಮಂಗನ ಕೈಯಲ್ಲಿ ಮಾಣಿಕ್ಯ ನೀಡಿದಾಗ ಏನಾಗಬಹುದೆಂಬ ಸೂಚನೆಯಂತೆ ಯಾವುದೇ ಸವಲತ್ತು ನೀಡಿದರು ಅದನ್ನು ನಿಭಾಯಿಸುವ ಶಕ್ತತೆ ಇಲ್ಲದಿದ್ದಾಗ ಆಚಾತುರ್ಯಗಳು ನಡೆಯುತ್ತವೆ. ಹಾಗೆ ತೇಜಸ್ವಿಯವರ ಕಥೆಯ ಮೂಲಕ ಹೆಣ್ಣಿನ ಪಾತ್ರಕ್ಕೊಂದು ಜೀವಂತಿಕೆ ಮೌಲ್ಯ ಇಲ್ಲದಿರುವುದನ್ನು ನಾವಿಲ್ಲಿ ಕಾಣಬಹುದು. ಜ್ಞಾನದ ಕಣಜಗಳು ಸಮರ್ಪಕವಾಗಿ ತುಂಬದೇ ಇದ್ದಾಗ ಸುದ್ದಿ ಸಮಾಚಾರಗಳು ವಿಕೃತಗೊಳ್ಳುವುದನ್ನು ಕತೆಗಾರರು ಹೇಳಲು ಪ್ರಯತ್ನಿಸಿದ್ದಾರೆ. ಎಂತಹ ವಿಶೇಷ ಸುದ್ದಿಗಳಾದರೂ ಕೂಡ ಗಾಳಿ ಮಾತುಗಳಿಂದ ವಿರೂಪಗೊಳ್ಳುವವು. ಇದರಿಂದಾಗಿ ಸಂಸಾರ ಸಂಬಂಧಗಳು ಶಿಥಿಲಗೊಂಡು ಮನುಷ್ಯನ ಬದುಕನ್ನು ನಾಶ ಮಾಡಿಬಿಡುತ್ತವೆ. ಈ ಹಿನ್ನೆಲೆಯಿಂದ ಇಂದಿನ ಸಮಕಾಲಿನಕ್ಕೂ ಪ್ರಸ್ತುತ ಎನಿಸುವ ಈ ಕಥೆ ವಿಶಿಷ್ಟ ರೀತಿಯ ಚಿಂತನೆಯನ್ನು ಸಮಾಜಮುಖಿಯಾಗಿ ಅನಾವರಣಗೊಳಿಸುತ್ತದೆ.

ಈ ಅಂಕಣದ ಹಿಂದಿನ ಬರಹಗಳು:
ಲಂಕೇಶ್ ಅವರ ನಿವೃತ್ತರು ಎಂಬ ಕಥೆಯಲ್ಲಿ ಕಾಣುವ ಸಣ್ಣತನ
ಶ್ರಾದ್ಧ ಕಥೆಯಲ್ಲಿ ಕಾಣುವ ಆಚಾರದ ದ್ವಂದ್ವ ನಿಲುವು
ರಾಮನ ಸವಾರಿ ಸಂತೆಗೆ ಹೋದದ್ದು ಕಥೆಯಲ್ಲಿ ಕಾಣುವ ವಿಷಮ ದಾಂಪತ್ಯ
ರಾಘವೇಂದ್ರ ಖಾಸನೀಸ ಅವರ ತಬ್ಬಲಿಗಳು ಕಥೆಯಲ್ಲಿ ಸಂಬಂಧಗಳ ಅಸಂಬದ್ಧತೆ
ಅನಂತಮೂರ್ತಿ ಅವರ `ಕ್ಲಿಪ್ ಜಾಯಿಂಟ್' ಕಥೆಯಲ್ಲಿ ಕಾಣುವ ಮೌಲ್ಯಶೋಧನೆ
ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥೆಯಲ್ಲಿ ಕಾಣುವ ಸಾಂಸ್ಕೃತಿಕ ಮುಖಾಮುಖಿ

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ
ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ
ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ
ಯಾರು ಹಿತವರು ನಿನಗೆ ಕಥೆಯೊಳಗಿನ ಕಾಮ
ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ
ಯಾರು ಅರಿಯದ ವೀರನ ತ್ಯಾಗ

ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

MORE NEWS

ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ

10-04-2025 ಬೆಂಗಳೂರು

"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು

06-04-2025 ಬೆಂಗಳೂರು

"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...

ಅಮಾಸ ಕಥೆಯಲ್ಲಿ ಕಾಣುವ ಪುನರಾವರ್ತನಾ ಬದುಕು

04-04-2025 ಬೆಂಗಳೂರು

"ಅಮಾಸ ಕಥೆಯು ಇವರ ದ್ಯಾವನೂರು ಕಥಾ ಸಂಕಲನದಿಂದ ಆಯ್ದುಕೊಂಡ ಕಥೆಯಾಗಿದ್ದು ಇದು ತಬ್ಬಲಿಯಾದ ಅಮಾಸ ಎಂಬ ಹುಡುಗನನ್ನು...