ಲಂಕೇಶ್ ಅವರ ನಿವೃತ್ತರು ಎಂಬ ಕಥೆಯಲ್ಲಿ ಕಾಣುವ ಸಣ್ಣತನ

Date: 20-02-2025

Location: ಬೆಂಗಳೂರು


"ಯಾವುದೇ ಪ್ರಶಸ್ತಿ ಪುರಸ್ಕಾರಗಳ ಬೆನ್ನು ಹಿಡಿಯದೆ ಅದರ ಬಗ್ಗೆ ತಲೆಯೂ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಮ್ಮ ಕಾರ್ಯದಲ್ಲಿ ತಲ್ಲೀನರಾದ ಲಂಕೇಶ್ ಅವರಿಗೆ 1986 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 1993ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಇವರ ನಾಟಕಗಳಲ್ಲಿ ಆಸ್ ಬೋರ್ನ್ ನ ಪ್ರಭಾವವಿರುವುದರಿಂದ ವಿದ್ವಾಂಸರು ಇವರನ್ನು “ಆಧುನಿಕ ರಂಗಭೂಮಿಯ ಆಸ್ ಬೋರ್ನ್” ಎಂದು ಕರೆಯುತ್ತಾರೆ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಲಂಕೇಶ್ ಅವರ "ನಿವೃತ್ತರು" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.

ನವ್ಯ ಕಾಲದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಲಂಕೇಶ್ ಅವರು ಬಹುಮುಖ ಪ್ರತಿಭೆಯುಳ್ಳವರು. ಕವಿಯಾಗಿ,ಕಥೆಗಾರರು ಆಗಿ, ಕಾದಂಬರಿ, ನಾಟಕ, ವಿಮರ್ಶೆ, ಹಾಗೂ ಪತ್ರಿಕೋದ್ಯಮ ಮತ್ತು ಚಲನಚಿತ್ರ ಕ್ಷೇತ್ರಕ್ಕೂ ತಮ್ಮ ಹಸ್ತವನ್ನು ಚಾಚಿ ಅಲ್ಲೂ ಸಹ ಯಶಸ್ಸು ಗಳಿಸಿದವರು. 1935 ರಲ್ಲಿ ಶಿವಮೊಗ್ಗದ ಕೊನಗವಳ್ಳಿ ಎಂಬ ಗ್ರಾಮದಲ್ಲಿ ಜನಿಸಿ, ಅಲ್ಲಿ ಆರಂಭವಾದ ಇವರ ವಿದ್ಯಾಭ್ಯಾಸ ಶಿವಮೊಗ್ಗದ ಇಂಟರ್ಮೀಡಿಯಟ್ ಕಾಲೇಜಿನಲ್ಲಿ ಮುಂದುವರೆದು, ಬೆಂಗಳೂರು ಸೆಂಟರ್ ಕಾಲೇಜಿನಲ್ಲಿ (1955-58) ಇಂಗ್ಲಿಷ್ ನ ಆನರ್ಸ್, ಹಾಗೂ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ (1958-59) ಎಂ. ಎ. ಪದವಿಯನ್ನು ಪಡೆದು ತಾವೇ ಓದಿದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ವಿವಿಧ ಕಡೆ ಅಧ್ಯಾಪನ ವೃತ್ತಿ ನಿರ್ವಹಿಸಿದ ಇವರು ಲಂಕೇಶ್ ಪತ್ರಿಕೆಯನ್ನು ಸಹ ಆರಂಭಿಸಿದರು. ಇವರ ನಿರ್ದೇಶನದ “ಪಲ್ಲವಿ” ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆಯಿತು.

ಲಂಕೇಶ್ ಅವರು ಮೂಲತಃ ಕಥೆಗಾರರು. ಎಂ.ಎ. ವಿದ್ಯಾರ್ಥಿಯಾಗಿದ್ದಾಗಲೇ “ವಾಮನ” ಎಂಬ ಕಥೆ ಬರೆದವರು. “ದಾಳಿ” ಎಂಬ ಕಥೆಯು ಸೇರಿದಂತೆ ಸುಮಾರು 37ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. “ಕೆರೆಯ ನೀರನು ಕೆರೆಗೆ ಚೆಲ್ಲಿ” (1963) ಇವರ ಮೊದಲ ಸಂಕಲನವಾಗಿದೆ. ನಂತರ “ನಾನಲ್ಲ” (1970) “ಸಮಯ”(1990) “ಉಲ್ಲಂಘನೆ”(1996) “ಬಿಚ್ಚು ಮತ್ತು ತಲೆಮಾರು” ಇವರ ಕವನ ಸಂಕಲನಗಳು. “ಪ್ರಸ್ತುತ” ಇದು ಇವರ ವಿಮರ್ಶಾ ಲೇಖನಗಳ ಸಂಕಲನ. “ಬಿರುಕು”( 1967) “ಮುಸ್ಸಂಜೆಯ ಕಥಾ ಪ್ರಸಂಗ” (1978) ಹಾಗೂ “ಅಕ್ಕ” (1991)ಮೂರು ಕಾದಂಬರಿಗಳು. “ತೆರೆಗಳು, ಸಂಕ್ರಾಂತಿ, ಗುಣಮುಖ” ಇವರ ನಾಟಕಗಳು. “ದೊರೆ ಇಡೀಪಸ್ ಹಾಗೂ ಅಂತಿಗೊನೆ” ಇವರ ಅನುವಾದಿತ ನಾಟಕಗಳು. 1977ರಲ್ಲಿ ಇವರ “ಹುಳಿ ಮಾವಿನ ಮರ” ಆತ್ಮಕಥನ ಪ್ರಕಟವಾಯಿತು. “ನೀಲು” ಇವರ ಇನ್ನೊಂದು ವಿಭಿನ್ನ ಮಾದರಿಯ ಕೃತಿಯಾಗಿದೆ.

ಯಾವುದೇ ಪ್ರಶಸ್ತಿ ಪುರಸ್ಕಾರಗಳ ಬೆನ್ನು ಹಿಡಿಯದೆ ಅದರ ಬಗ್ಗೆ ತಲೆಯೂ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಮ್ಮ ಕಾರ್ಯದಲ್ಲಿ ತಲ್ಲೀನರಾದ ಲಂಕೇಶ್ ಅವರಿಗೆ 1986 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 1993ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಇವರ ನಾಟಕಗಳಲ್ಲಿ ಆಸ್ ಬೋರ್ನ್ ನ ಪ್ರಭಾವವಿರುವುದರಿಂದ ವಿದ್ವಾಂಸರು ಇವರನ್ನು “ಆಧುನಿಕ ರಂಗಭೂಮಿಯ ಆಸ್ ಬೋರ್ನ್” ಎಂದು ಕರೆಯುತ್ತಾರೆ.

ಇವರ ನಿವೃತ್ತರು ಕಥೆ ವೈಯಕ್ತಿಕ ನೆಲೆಯಿಂದ ಸಾಮಾಜಿಕ ವಸ್ತು ವಿನ್ಯಾಸದ ಚಿತ್ರಣವನ್ನು ಪ್ರತಿನಿಧಿಸುತ್ತದೆ. ಕಥೆಯ ನಿರೂಪಕ ಅಥವಾ ನಾಯಕ ಲಂಕೇಶಪ್ಪ. ಲಾಲ್ ಬಾಗ್ ನಲ್ಲಿ ಕುಳಿತಿರುತ್ತಾರೆ‌. ಅಲ್ಲಿಗೆ ಧಾವಿಸಿದವರು ನರಸಿಂಗರಾಯರು ಮತ್ತು ಪ್ರಹ್ಲಾದರಾವ್. ಒಂದು ಸಂಜೆ ಲಾಲ್ ಬಾಗ್ ನ ಒಂದು ಬೆಂಚಿನ ಮೂಲೆಗೆ ಕೂತ ಲಂಕೇಶಪ್ಪನಿಗೆ ಅಪರಿಚಿತರಾಗಿ ಬಂದು ಚಿರ ಚಿರಪರಿಚಿತರಾಗುವ ಪ್ರಹ್ಲಾದ ರಾವ್ ಮತ್ತು ನರಸಿಂಗ ರಾಯರು ಇಬ್ಬರು ನಿವೃತ್ತರು. ಒಂದೇ ಆಫೀಸಿನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ನರಸಿಂಗರಾಯರು ಬಾಸ್ ಆಗಿ ಇದ್ದವರು. ಪಕ್ಕದಲ್ಲಿ ಕೂತು ಮಾತನಾಡುವಾಗ ನರಸಿಂಹರಾಯರು ತಮ್ಮ ದರ್ಪ ದರ್ಬಾರ ಕುರಿತು ಮಾತಾಡುತ್ತಿದ್ದರು. ತಮ್ಮ ದರ್ಪ ಧಿಮಾಕನೆಲ್ಲ ಕೇಳಿಸಿಕೊಂಡ ಪ್ರಹ್ಲಾದರಾವ್ ಮತ್ತೊಂದು ದಿನ ಲಂಕೇಶಪ್ಪನ ಹತ್ತಿರ ನರಸಿಂಗರಾಯರ ಗುಣವಾಗುಣಗಳನ್ನೆಲ್ಲ ಅರುಹಿದ. “ಕಚ್ಚೆ ಹರುಕ ಮನುಷ್ಯ ದುಡಿದಿದ್ದನೆಲ್ಲ ಹೆಂಗಸರಿಗೆ ಹಾಕಿದ, ಮೂರು ಜನ ಹೆಂಡಂದಿರ ತಿಂದು ಕೂತ”. ಗುಟ್ಟಾಗಿ ಲಂಕೇಶಪ್ಪನ ಹತ್ತಿರ ಏನೋ ವಿಷಯ ಹೇಳುವ ಸಲುವಾಗಿ ಪ್ರಹ್ಲಾದರಾವ್ ಗೆ ಕಳ್ಳೆಕಾಯಿ ತರಲು ಆಜ್ಣಾಪಿಸಿದ. ನಿವೃತ್ತಿಯಾದ ಮೇಲೆ ಯಾರು ಯಾರಿಗೂ ಬಾಸ್ ಅಲ್ಲ ಎಂಬ ಅರಿವಿನ ಜೊತೆಗೆ ತನ್ನ ವಿಷಯ ಏನಾದರೂ ಹೇಳಬಹುದಾ ಎಂಬ ಆತಂಕದಿಂದ ನರಸಿಂಗರಾಯರ ಮಾತಿಗೆ ಬೆಲೆ ಕೊಡದೆ ಕಳ್ಳೆಕಾಯಿ ತರಲು ಹೋಗಲೇ ಇಲ್ಲ. ಕೈ ಕೆಳಗೆ ಕೆಲಸ ಮಾಡಿದವನ ಮಾತು‌ ವರ್ತನೆ ‌ಸಹಿಸಲಾಗದೆ ಮಾತು ಮಾತಾಗದೆ ಕೈ ಕೈ ಮಿಲಾಯಿಸುವ ಸನ್ನಿವೇಶದಲ್ಲಿ ಎದುರುಗಿದ್ದ ಲಂಕೇಶಪ್ಪ ಇವರ ಜಗಳ ಬಿಡಿಸುವ ಸಂದರ್ಭವೇ ಈ ಕಥಾಹಂದರ.

ಈ ಕಥೆಯಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮನುಷ್ಯ ಎಷ್ಟು ಬೆಳೆದು ದೊಡ್ಡವನಾದರೂ ಆತನ ಸಣ್ಣತನ ಹಿಜುಗುತನ ಮಾತ್ರ ಬೆಟ್ಟದಾಕಾರವಾಗಿಯೇ ಇರುತ್ತದೆ. ಪ್ರಹ್ಲಾದರಾವ್ ಮತ್ತು ನರಸಿಂಗರಾಯ ಒಂದೇ ಆಫೀಸಿನಲ್ಲಿ ಕೆಲಸ ಮಾಡಿದ್ದರಾದರೂ, ನರಸಿಂಗರಾಯನ ಕೈಕೆಳಗೆ ದುಡಿದ ಪ್ರಹ್ಲಾದರಾವ್ ಗೆ ಒಮ್ಮೆಯಾದರೂ ತನ್ನನ್ನು ತಾನು ಧೈರ್ಯವಾಗಿ ದಿಟ್ಟತನದಿಂದ ತನ್ನ ಬಾಸ್ನನ್ನು ಎದುರಿಸಿ ನಿಲ್ಲುವಂತಹ ಸನ್ನಿವೇಶ ಏರ್ಪಟ್ಟಾಗ ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾನೆ. “ರೀ,,ರಾಯರೇ ಅಕ್ಕೋ ಅಲ್ಲಿ ಕಳ್ಳೇ ಕಾಯಿ ಮಾರೋನು ಇದಾನೆ.ಇಗೊ ಎರಡಾಣೆ. ಬೇಗ ಹೋಗಿ “. ಎಂದ ನರಸಿಂಗರಾಯರನ್ನು ಕ್ರೋದದಿಂದ ದಿಟ್ಟಿಸುತ್ತಲೇ “ನೀವೇ ಹೋಗಿ ಬಿಟ್ಟು ಬನ್ನಿ”. ಎಂದವನ ಮಾತು ಕೇಳಿ ನರಸಿಂಗರಾಯರ ಮನಸ್ಸು ವ್ಯಾಘ್ರವಾಯಿತು. ನಿವೃತ್ತಿಯಾದ ಮೇಲೆ ಸ್ನೇಹಿತರಂತೆ ಕಂಡುಬಂದರು ಸಹ ಒಳಗಿನ ಸಣ್ಣತನ ದರ್ಪ ದಬ್ಬಳಿಕೆ ಇದ್ಯಾವುದೋ ಹೋಗಿರಲಿಲ್ಲ.

ಈ ಕಥೆಯಲ್ಲಿ ಬೇರೆ ಯಾವುದೇ ತರದ ಭಾವನಾತ್ಮಕ ಸಂಬಂಧಗಳು ನಮಗೆ ಕಾಣುವುದಿಲ್ಲ ಈ ಕಥೆಯಲ್ಲಿ ಬರುವುದೇ ಕೇವಲ ಮೂರು ಪಾತ್ರಗಳು. ಆ ಪಾತ್ರಗಳಲ್ಲಿ ಮೊದಲೇ ಜೀವಾಂಶ ಭಾವತೀವ್ರತೆ ಯಾವುದು ಇರದ ಯಾಂತ್ರಿಕ ಬದುಕಿನ ಜಡಬಾವ ಹೊಂದಿದ ಹಾಗೂ ಅಹಂನ ಕೋಟೆ ಹೊಂದಿದ ಪಾತ್ರ ಚಿತ್ರಣ. “ಲಂಕೇಶ್ ಅವರ ಕಥೆಗಳ ಮೂಲಕ ವ್ಯಕ್ತವಾಗುವ ಮನಸ್ಥಿತಿಗೆ ಮಾನವ ಮನಸ್ಸಿನ ಆಪ್ತವಾದ ಕ್ಷಣಗಳಿಗೆ ಉದಾತ್ತ ಸಾಧ್ಯತೆಗಳಿಗೆ ಸ್ಪಂದಿಸಲಾರದ ರಿಕ್ತತೆ ಕಾಣುತ್ತದೆ”. (ಜಿ.ಹೆಚ್.ನಾಯಕ ಕನ್ನಡ ಸಣ್ಣ ಕಥೆಗಳು) ಈ ಎರಡು ಪಾತ್ರಗಳು ಭೂತಕಾಲದ ತಮ್ಮ ಅನುಭವ ಮತ್ತು ಪರಂಪರೆಗಳ ನಡುವೆ ತಮ್ಮದೇ ಆದ ಮನಸ್ಥಿತಿಯನ್ನು ಗರಗಸದಂತೆ ಕೊರೆದು ಹರಿತಗೊಳಿಸಿ ಕೂಯ್ಯಲು ತಯಾರಾದಂತೆ ಕಾಣುವ ಪ್ರಹ್ಲಾದರಾವ್ ಮತ್ತು ನರಸಿಂಗರಾಯ ಅವರ ಪಾತ್ರ ಸಂವಿಧಾನಗಳಲ್ಲಿ ಮನುಷ್ಯನ ಮನುಷ್ಯತ್ವವನ್ನು ತೀರ ಉದಾತ್ತ ಚಿಂತನೆಗಳಿಗೆ ಒಳಪಡದೆ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಭೂತವನ್ನು ವಾಸ್ತವದಲ್ಲಿಟ್ಟು ನೋಡುತ್ತಾ ಸಂಕುಚಿತ ಮನೋಭಾವನೆಯನ್ನು ತೋರುವ ಈ ಪಾತ್ರಗಳಲ್ಲಿ ಅಂತಃಕರಣವಾಗಲಿ,ಉದಾತ್ತವಾಗಲಿ, ಪ್ರೀತಿ ಪ್ರೇಮ ಸಂವೇದನೆಶೀಲತೆಯಾಗಲಿ ಕಾಣುವುದಿಲ್ಲ. ‌

ಮನುಷ್ಯ ಗಾತ್ರದಲ್ಲಿ ವಯಸ್ಸಿನಲ್ಲಿ ದೊಡ್ಡವನಾದರೆ ಸಾಲದು. ಸಂಸ್ಕಾರ ತಿಳಿವಳಿಕೆ ಎಲ್ಲದರಲ್ಲೂ ಎತ್ತರದಲ್ಲಿರಬೇಕು. ಈ ಕಥೆಯಲ್ಲಿ ಆ ಎರಡು ಪಾತ್ರಗಳ ಮೂಲಕ ಮಾನಸಿಕ ಆಧೋಗತಿ ತನವನ್ನು ಪ್ರತಿಬಿಂಬಿಸುತ್ತದೆ. ಜಿ.ಎಚ್ ನಾಯಕರು ಹೇಳುವಂತೆ ಅವರದೇ ವಾಕ್ಯದಲ್ಲಿ “ಇಲ್ಲಿ ಮನುಷ್ಯನ ಸಣ್ಣತನದ ಬಗೆಗೆ ಕಾಣುವ ಕತೆಗಾರನ ನೈತಿಕ ಕಾಳಜಿ ಅವರ ಬೇರೆ ಕಥೆಗಳಲ್ಲಿನಂತೆ ನೇತ್ಯಾತ್ಮಕ ಎಂಬಂತೆ ಎನಿಸದೆ ವಿಷಾದ ಎಳೆ ಶಕ್ತಿಯುತವಾಗಿ ಸೇರಿಕೊಂಡಿರುವುದು ಗುಣಾತ್ಮಕವಾಗಿದೆ”.

ಈ ಕಥೆಯಲ್ಲಿ ಕಥೆಗಾರ ಕೊನೆಗೆ ನೀಡುವ ಅಂಶ ಪ್ರಾಕೃತಿಕವಾದಂತಹ ಸಂವೇದನೆಯನ್ನು ಮನುಷ್ಯನೊಂದಿಗೆ ಸಮೀಕರಿಸುತ್ತಾರೆ. ಪ್ರಕೃತಿ ಬೆಳದಂತೆ ಚಿಗುರಿ ವಿಶಾಲವಾಗುತ್ತಾ ನೆರಳಾಗುತ್ತಾ ಆಸರೆಯಾಗುವ ಪರಿಯನ್ನು ಸ್ವಗತವಾಗಿ ಹಾಗೂ ಅಷ್ಟೇ ವಿಷಾದವಾಗಿ ಉಲ್ಲೇಖಿಸುತ್ತಾರೆ. ಮನುಷ್ಯನ ಮನಸ್ಸಿನ ದುರಂತ ಸ್ಥಿತಿಯನ್ನು ವಿಷಾದೊಂದಿಗೆ ತಿಳಿಸುತ್ತಾರೆ.” ಮಾಗಿಯಲ್ಲಿ ಎಲೆಗಳು ಕಳಚಿ ಬರಕಲು ಮರಗಳು, ವಸಂತದಲ್ಲಿ ದಟ್ಟ ಹಸಿರುಟ್ಟು ಉದಾರವಾಗುತ್ತವೆ, ಹರ್ಷದ್ಗಾರ ಮಾಡುತ್ತವೆ”. “ಜೀವರಸವನ್ನು ಹನಿಸಬಾರದೆ?, ಮರದಂತೆ ನಿಂತು ಪಕ್ಷಪಾತವಿಲ್ಲದೆ ಸಣ್ಣತನವಿಲ್ಲದೆ ನೆರಳು ಚೆಲ್ಲಲು ಹೂ ಅರಳಿಸಲು ಸಾಧ್ಯವಾಗಬಾರದೆ?”. ಹೀಗೆ ಹೇಳುವ ನಿರೂಪಕ ಅರ್ಥಾತ್ ಕಥೆಗಾರ ಮನುಷ್ಯನು ಪ್ರಕೃತಿಯ ಒಂದು ಭಾಗವಾದರೂ ಸಹ, ಪ್ರಕೃತಿಯನ್ನು ಅನುಸರಿಸಲಾರ. ನಿಸರ್ಗದಂತೆ ವಿಶಾಲವಾದ ಹರಹವನ್ನು ಬಿಚ್ಚಿಡಲಾರದೆ ತೀರಾ ಸಣ್ಣವನಾಗಿ ಬಿಡುತ್ತಾನೆ. ತನ್ನದೇ ರಾಜ್ಯಕ್ಕೆ ತಾನೇ ಒಡೆಯಯನೆಂಬಂತೆ ದರ್ಪ ದೌಲತ್ತುಗಳನ್ನು ಇರಿಸಿಕೊಂಡು ಸಾಗುವ ಮನುಷ್ಯ, ಪ್ರಕೃತಿಯನ್ನು ಹಾಗೂ ಪ್ರಕೃತಿಯ ಸಿದ್ಧಾಂತಗಳನ್ನು ಒಪ್ಪಿಕೊಳ್ಳದೆ ದುರಂತವಾಗುತ್ತಾನೆ. ಪ್ರಹ್ಲಾದರಾವ್ ಮತ್ತು ನರಸಿಂಹ ರಾಯರು ಇವರಲ್ಲಿ ಇರುವ ನೌಕರಿಯ ಅಸಮಾನತೆ ನಿವೃತ್ತಿಯಾದ ನಂತರವೂ ತೊಲಗಲಿಲ್ಲ. “ಮಧ್ಯಮ ವರ್ಗದ ಬಹಳ ಜನಗಳ ಸಂಬಂಧ ಹೀಗೆ ಆರಂಭವಾಗಿ ನಿಜವಾದ ಅರ್ಥಗ್ರಹಿಕೆ ಇಲ್ಲದೆ ಆಳವಿಲ್ಲದೆ ಸಂಬಂಧವಾಗಿಯೇ ಉಳಿಯುತ್ತದೆ”.(ಶತಮಾನದ ಕನ್ನಡ ಸಾಹಿತ್ಯ-ಪು.ಸಂ.335) ಮೂಲತಃ ಇವರಿಬ್ಬರೂ ಸ್ನೇಹಿತರೇ ಆಗಿರಲಿಲ್ಲ. ಕೇವಲ ಅವಶ್ಯಕತೆಗನುಗುಣವಾಗಿ ಸಾಗಿ ಬಂದ ನಿವೃತ್ತರು ನಂತರ ಮುರಿದು ಬೀಳುವ ಸ್ನೇಹ ಸಂಬಂಧಗಳ ವೈಫಲ್ಯತೆಯನ್ನು ಕಥೆ ಎತ್ತಿ ಹಿಡಿಯುತ್ತದೆ.

ಈ ಕಥೆ ಕೇವಲ ಒಂದೇ ಒಂದು ಸನ್ನಿವೇಶದಲ್ಲಿ ಮೂರು ಪಾತ್ರಗಳೊಂದಿಗೆ ಭೂತ ಪರಂಪರೆಯನ್ನು ಮತ್ತು ವರ್ತಮಾನದ ಸನ್ನಿವೇಶದೊಂದಿಗೆ ಮುಖಾಮುಖಿಯಾಗಿಸುವ ತಂತ್ರವನ್ನು ಕಥೆಗಾರ ಹೆಣೆದಿದ್ದಾರೆ. ಯಾವ ಭಾವ ತೀವ್ರತೆಯೂ ಇರದೇ ಕೇವಲ ಮಾತಿನ ಒಡಂಬಡಿಕೆ ಸೋಗಿನ ಸೊಕ್ಕಿನ ಆಡಂಬರವಂತೆ ಕಂಡುಬರುವ ಕಥೆಯ ಪಾತ್ರ ಚಿತ್ರಣವು, ಸಮಕಾಲೀನ ಸಮಾಜದ ವಸ್ತು ಚಿತ್ರಣ ತಲ್ಲಣ ಸಂವೇದನೆಗಳಿಗೆ ಹೇಳಿ ಮಾಡಿಸಿದಂತಿದೆ
ಈ ಕಥೆ.

ಈ ಅಂಕಣದ ಹಿಂದಿನ ಬರಹಗಳು:
ಶ್ರಾದ್ಧ ಕಥೆಯಲ್ಲಿ ಕಾಣುವ ಆಚಾರದ ದ್ವಂದ್ವ ನಿಲುವು
ರಾಮನ ಸವಾರಿ ಸಂತೆಗೆ ಹೋದದ್ದು ಕಥೆಯಲ್ಲಿ ಕಾಣುವ ವಿಷಮ ದಾಂಪತ್ಯ
ರಾಘವೇಂದ್ರ ಖಾಸನೀಸ ಅವರ ತಬ್ಬಲಿಗಳು ಕಥೆಯಲ್ಲಿ ಸಂಬಂಧಗಳ ಅಸಂಬದ್ಧತೆ
ಅನಂತಮೂರ್ತಿ ಅವರ `ಕ್ಲಿಪ್ ಜಾಯಿಂಟ್' ಕಥೆಯಲ್ಲಿ ಕಾಣುವ ಮೌಲ್ಯಶೋಧನೆ
ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥೆಯಲ್ಲಿ ಕಾಣುವ ಸಾಂಸ್ಕೃತಿಕ ಮುಖಾಮುಖಿ

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ
ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ
ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ
ಯಾರು ಹಿತವರು ನಿನಗೆ ಕಥೆಯೊಳಗಿನ ಕಾಮ
ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ
ಯಾರು ಅರಿಯದ ವೀರನ ತ್ಯಾಗ

ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

MORE NEWS

ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು

28-03-2025 ಬೆಂಗಳೂರು

"ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ...

ಶಿಕ್ಶಣ: ಕೆಲವು ಜನರಲ್ಲಾದ ಮಾತುಗಳು

27-03-2025 ಬೆಂಗಳೂರು

"ಶಿಕ್ಶಣವನ್ನು ಕೊಡುವುದು ಮಕ್ಕಳಿಗೆ. ಹಾಗಾಗಿ ಒಟ್ಟು ಶಿಕ್ಶಣ ವ್ಯವಸ್ತೆಯ ಕೇಂದ್ರ ಬಿಂದು ಮಗು. ಆದ್ದರಿಂದ ಎಲ್ಲ ಆ...

ಸಂಬಂಧ ಕಥೆಯಲ್ಲಿ ಕಾಣುವ ಜಾತಿ ಮತ್ತು ಲಿಂಗರಾಜಕಾರಣ

26-03-2025 ಬೆಂಗಳೂರು

"“ತಪ್ತ, ಫಿನಿಕ್ಸ್, ಗಿಜ್ಜಗನಗೂಡು”, ಇವು ಇವರ ಕಥಾಸಂಕಲನಗಳು. “ಪರಸಂಗದ ಗೆಂಡೆತಿಮ್ಮ, ಭುಜಂ...