ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ

Date: 24-11-2023

Location: ಬೆಂಗಳೂರು


''ಸೋಜಿಗದ ಸಂಗತಿ ಎಂದರೆ ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ತತ್ವಪದಗಳ ಮಹೋನ್ನತ ಕಾಲಘಟ್ಟವನ್ನು ಗುರುತಿಸದೇ ಅದನ್ನು 'ಕತ್ತಲೆಯುಗ' ಎಂದು ಕರೆಯಲಾಗಿದೆ. ಇದು ಸಾಹಿತ್ಯ ಚರಿತ್ರೆಯ ಸಾಂಸ್ಕೃತಿಕ ದುರಂತ. ಹೌದು ಇವತ್ತಿಗೂ ಅಮವಾಸ್ಯೆಯ ಕತ್ತಲೆಯಂದು ಕೆಲವು ಅವಧೂತ ಪರಂಪರೆಯ ಮಠ, ಆಶ್ರಮ, ಗುಂಪಾ, ಕೊಂಪೆಗಳಲ್ಲಿ ತತ್ವಪದಗಳ ಆಹೋರಾತ್ರಿ ಭಜನೆ. ತತ್ವಪದ ಟೀಕು ಸಂವಾದಗಳ ಉಪಾಸನೆ ಜರುಗುತ್ತವೆ,'' ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ `ರೊಟ್ಟಿಬುತ್ತಿ' ಅಂಕಣದಲ್ಲಿ, “ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ” ಕುರಿತು ಲೇಖನವನ್ನು ಬರೆದಿದ್ದಾರೆ.

ಇದೇ 2023 ರ ನವೆಂಬರ್ 25 ರಂದು ಜೇವರ್ಗಿ ಶಹರದಲ್ಲಿ "ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ" ಜರುಗಲಿದೆ. ಜೇವರ್ಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಎಸ್. ಕೆ. ಬಿರಾದಾರ ಅವರ ಬಹಳ ದಿನಗಳ ಕನಸು. ಅಕ್ಷರಶಃ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾದ ಮಹತ್ತರ ಸಾಹಿತ್ಯ ಸಂದೋಹವಿದು. ಜೇವರ್ಗಿ ತಾಲೂಕಿನ ಕ.ಸಾ.ಪ. ಅಧ್ಯಕ್ಷರ ಸಾರಸ್ವತ ಪ್ರೀತಿಯ ಇಂತಹ ಕ್ರಿಯಾಶೀಲತೆ ಶ್ಲಾಘನೀಯ. ಪಕ್ಕದ ಚಿಕ್ಕಜೇವರ್ಗಿಯ ವೃತ್ತಿರಂಗಭೂಮಿ ನಾಟಕಕಾರ ರಾಜಣ್ಣ ಸಮ್ಮೇಳನಾಧ್ಯಕ್ಷರು. ಪ್ರಸ್ತುತ ತತ್ವಪದ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಮಾರಂಭಕ್ಕೆ ಬಿರಾದಾರ ಕರೆದಿದ್ದಾರೆ. ಅವಿಭಜಿತ ಜೇವರ್ಗಿ ತಾಲೂಕು ರಾಜಕೀಯವಾಗಿ ಕರ್ನಾಟಕಕ್ಕೆ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ನೀಡಿದ ಕ್ಷೇತ್ರ. ವಚನ ವಾಙ್ಮಯದ ಪ್ರಮುಖ ವಚನಕಾರ ಷಣ್ಮುಖ ಶಿವಯೋಗಿಗಳ ಸುಕ್ಷೇತ್ರ. ಅದೆಲ್ಲಕ್ಕೂ ಮುಖ್ಯವಾಗಿ ತತ್ವಪದಗಳ ಅಲ್ಲಮನೇ ಆಗಿರುವ ಕಡಕೋಳ ಮಡಿವಾಳಪ್ಪ ಮತ್ತು ಅವರ ಕಾಲದ ಮಹತ್ವದ ತತ್ವಪದಕಾರರ ಕಾಯಕ ಭೂಮಿ ಜೇವರ್ಗಿ ತಾಲೂಕು.

ಹೆಚ್ಚೆಂದರೆ ಇನ್ನೂರೈವತ್ತು ವರುಷಗಳ ಹಿಂದೆ ನಮ್ಮ ಜೇವರ್ಗಿ ಪ್ರಾಂತ್ಯದ ಎಲ್ಲೆಡೆ ತತ್ವಪದ ಸಾಹಿತ್ಯ ಬದುಕಿನ ಸಾಮರಸ್ಯದ ಹೊಳೆ ದಡತುಂಬಿದ ಭೀಮಾನದಿಯಂತೆ ತುಂಬಿ ಹರಿದಿದೆ. ಕಡಕೋಳ ಮಡಿವಾಳಪ್ಪ ಮತ್ತು ಅವರ ಸಮಕಾಲೀನರಾದ ಹತ್ತಾರು ಮಂದಿ ತ್ವಪದಕಾರರು ಬಾಳಿ ಬದುಕಿದ ಅಂದಿನ ತತ್ವಪದಗಳ ಅನುಭಾವದೈಸಿರಿಯ ಬದುಕು ಬಾಳುವೆ ವರ್ತಮಾನಕೆ ಮಾದರಿಯಾದುದು.

ರಾಂಪುರದ ಬಕ್ಕಪ್ಪ, ಚೆನ್ನೂರು ಜಲಾಲಸಾಹೇಬ, ಖೈನೂರು ಕೃಷ್ಣಪ್ಪ, ಕಡ್ಲೇವಾಡ ಸಿದ್ದಪ್ಪ, ತೆಲಗಬಾಳ ರೇವಪ್ಪ, ಅರಳಗುಂಡಗಿ ಬಸಲಿಂಗಮ್ಮ ಮತ್ತು ಭಾಗಮ್ಮ, ಖೈನೂರಿನ ಕಂಬಾರ ರಾಚವ್ವ‌, ಅಮರಖೇಡದ ಮುರಿಗೆಪ್ಪ ಹೀಗೆ ಹತ್ತು ಹಲವು ಮಂದಿ ತತ್ವಪದ ಜಗತ್ತಿನ ವಿಧೇಯ ಜಿಜ್ಞಾಸುಗಳು ಕಡಕೋಳದ ಅನುಭಾವ ಮ್ಯಾಳದಲ್ಲಿ ಕೂಡುತ್ತಿದ್ದರು. ಹಾಗೆ ಕೂಡಿದಾಗ ಜರುಗುತ್ತಿದ್ದ ಜಡರಹಿತ ಅಧ್ಯಾತ್ಮ ಸಂವಾದಗಳ ನೂರಾರು ಘಟನೆಗಳು ದೊರಕುತ್ತವೆ. ಈ ಸಂವಾದಗಳು ಸಮ ಸಮಾಜದ ವಚನ ಚಳವಳಿಯ ಅನುಭವ ಮಂಟಪದ ಅನನ್ಯ ನೆನಪುಗಳಂತಿವೆ. ತನ್ಮೂಲಕ ಅನುಭಾವದ ಅನುಸಂಧಾನ ಕ್ರಿಯೆಗಳನ್ನು ಸಚೇತನವಾಗಿಸುತ್ತವೆ.

ಲಿಂಗಾತೀತ, ಜಾತ್ಯತೀತ ಮತ್ತು ಧರ್ಮಾತೀತವಾದ ಈ ಎಲ್ಲರ ಹೆಸರುಗಳು ಬಹುತ್ವ ಕರ್ನಾಟಕದ ಹೆಸರಿಗೆ ಮುನ್ನುಡಿ ಬರೆದಂತಿವೆ. ಬ್ರಾಹ್ಮಣ, ಮುಸಲ್ಮಾನ, ಕಬ್ಬಲಿಗ, ಹೂಗಾರ, ಲಿಂಗಾಯತ ಹೀಗೆ ಹತ್ತಾರು ಕುಲ ಜಾತಿ ಧರ್ಮದ ಇವರೆಲ್ಲರೂ ಅಂದು ಸೇರುತ್ತಿದ್ದುದು ತತ್ವಪದಗಳ ಅಲ್ಲಮನೆಂದೇ ಕರೆಯಲಾಗುವ ಕಡಕೋಳ ಮಡಿವಾಳಪ್ಪನ ಸಮಕ್ಷಮ. ಅದು ತತ್ವಪದ ಮ್ಯಾಳದ ಕಡಕೋಳ ಮಠದಲ್ಲಿ. ಖಂಡಿತವಾಗಿ ಮಡಿವಾಳಪ್ಪನ ಸಾರಥ್ಯದ ಅಂದಿನ ಸಾಧು ಸಂಪನ್ನರ ಮ್ಯಾಳಕ್ಕೊಂದು ಹೆಸರಿದೆ. ಆದರೆ ಆ ಮ್ಯಾಳದ ಹೆಸರೇನಿರಬಹುದೆಂದು ನನಗೆ ಬಹಳ ವರುಷಗಳಿಂದ ಜಿಜ್ಞಾಸೆಯಾಗಿಯೇ ಉಳಿದಿದೆ. ವಿದ್ವಾಂಸರು, ಸಂಶೋಧಕರು, ಬಲ್ಲ ಮಹಾತ್ಮರು ನೆರವಿಗೆ ಬಂದು ನನ್ನ ಕುತೂಹಲ ತಣಿಸಬೇಕಿದೆ. ಅಂದಿನ ಮೇಳದ ಹೆಸರನ್ನು ಖಚಿತ ಪಡಿಸಬೇಕಿದೆ.

ನಮ್ಮೂರಿಗೆ ನೀವು ಬರಬೇಕಾದರೆ /
ನಮ್ಮ ನಿಮ್ಮ ಮನಸು ಒಂದಾಗಿರಬೇಕು//

ಇದು ಕಡಕೋಳ ಮಡಿವಾಳಪ್ಪನ ಕಾಲದ ಮಹತ್ವದ ತತ್ವಪದ. ಮನುಷ್ಯರ ನಡುವಿನ ಸಹೃದಯ ಸ್ನೇಹ ಸಾಮಿಪ್ಯ, ಸೌಹಾರ್ದಕ್ಕೆ ಇದು ದಿಕ್ಸೂಚಿ ಪದವೇ ಹೌದು. ಜನಗನ್ನಡದ ಸರಳ ಭಾಷೆಯಲ್ಲಿ ಅಧ್ಯಾತ್ಮದ ತಿರುಳನ್ನು ತಿಳಿಸಿಕೊಡುವ ಇಂತಹ ಅನೇಕ ತತ್ವಪದಗಳ ಮೂಲಕ ತತ್ವಪದಕಾರರು ಜನಸಂಸ್ಕೃತಿಯ ಬದುಕನ್ನು ಹಸನು ಮಾಡಿದವರು. ಹೀಗೆ ಕರ್ನಾಟಕದ ತುಂಬಾ ಅಜಮಾಸು ಐದುನೂರು ಮಂದಿ ತತ್ವಪದಕಾರರು ಲೋಕೋಪಯೋಗಿ ಹಾಡುಗಬ್ಬ ಮೆರೆದಿದ್ದಾರೆ. ಬಹುಳ ಪ್ರಜ್ಞೆಯ ಪ್ರತೀಕದಂತೆ ಮಹಿಳೆಯರು ಒಳಗೊಂಡ ಎಲ್ಲಾ ಜಾತಿ ಕುಲ ಧರ್ಮದ ತತ್ವಪದಕಾರರು ಅನುಭಾವದ ಮಾನವೀಯ ತಿರುಳನ್ನು ಬಾಳಿ ಬದುಕಿದ್ದಾರೆ. ಅಂತಹದ್ದೊಂದು ಲೋಕಸಂಸ್ಕೃತಿಯೊಂದಿಗೆ ತತ್ವಪದಗಳು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಭಿನ್ನ ಬಗೆಯ ಕೊಡುಗೆ ನೀಡಿವೆ. ಅದು ಕನ್ನಡ ಪ್ರಜ್ಞೆಯ ವಿಸ್ತಾರವೂ ಹೌದು.

ಸೋಜಿಗದ ಸಂಗತಿ ಎಂದರೆ ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ತತ್ವಪದಗಳ ಮಹೋನ್ನತ ಕಾಲಘಟ್ಟವನ್ನು ಗುರುತಿಸದೇ ಅದನ್ನು 'ಕತ್ತಲೆಯುಗ' ಎಂದು ಕರೆಯಲಾಗಿದೆ. ಇದು ಸಾಹಿತ್ಯ ಚರಿತ್ರೆಯ ಸಾಂಸ್ಕೃತಿಕ ದುರಂತ. ಹೌದು ಇವತ್ತಿಗೂ ಅಮವಾಸ್ಯೆಯ ಕತ್ತಲೆಯಂದು ಕೆಲವು ಅವಧೂತ ಪರಂಪರೆಯ ಮಠ, ಆಶ್ರಮ, ಗುಂಪಾ, ಕೊಂಪೆಗಳಲ್ಲಿ ತತ್ವಪದಗಳ ಆಹೋರಾತ್ರಿ ಭಜನೆ. ತತ್ವಪದ ಟೀಕು ಸಂವಾದಗಳ ಉಪಾಸನೆ ಜರುಗುತ್ತವೆ. ಮತ್ತೊಂದು ಅಚ್ಚರಿಯ ವಿಷಯವೆಂದರೆ ಮರಣ ಸೂತಕದ ಮನೆಗಳಲ್ಲಿ ರಾತ್ರಿ ಪಾರು ಮಾಡಲು ಶವದ ಸಾನಿಧ್ಯದಲ್ಲಿ ತತ್ವಪದಗಳ ಭಜನೆ ಏರ್ಪಡಿಸುವ ಭಜನೆಗಳ ಗಾಯನ ಪರಂಪರೆ ಇವತ್ತಿಗೂ ರೂಢಿಯಲ್ಲಿದೆ. ತತ್ವಪದಗಳು ಮತ್ತು ಪದಕಾರರನ್ನು ಸಾಹಿತ್ಯ ಚರಿತ್ರೆಕಾರರು ಸಂಸ್ಕೃತಿಯ ಪ್ರಧಾನ ಧಾರೆಯಲ್ಲಿ ಗುರುತಿಸಿ ನೋಡಲಿಲ್ಲ. ಅಷ್ಟೇಯಾಕೆ ಅದನ್ನು ಅಧೀನ‌ ಸಂಸ್ಕೃತಿಯಂತೆಯೂ ಕಾಣಲಿಲ್ಲ. ಒಟ್ಟಾರೆ ಅದನ್ನು ಸಾಹಿತ್ಯದ ಪ್ರಕಾರದಂತೆ ನೋಡುವ ಸಹೃದಯತೆ ನಮ್ಮ ಸಾಹಿತ್ಯ ಚರಿತ್ರೆಕಾರರಿಗೆ ಸಾಧ್ಯವಾಗಿಲ್ಲ.

ಆದರೆ ಕಾವ್ಯ ಮೀಮಾಂಸೆಗಿಂತ ಲೋಕ ಮೀಮಾಂಸೆ ವೆಗ್ಗಳವಾದುದು. ತತ್ವಪದಗಳಿಗೆ ಅಂತಹ ಹಿರಿದಾದ ಲೋಕಮೀಮಾಂಸೆ ಇದೆ. ಇದು ಲೋಕಸಂಸ್ಕೃತಿ ಪರಂಪರೆಯ ನೆರಳಲ್ಲಿ ನಿಂತು ತತ್ವಪದಗಳು ಜನರ ನಾಲಗೆಯಲ್ಲಿ ನೆಲೆ ಕಂಡುಕೊಂಡು ಅವು ಮಾನಸಲೋಕದ ಹೃದಯದಲ್ಲಿ ನಲಿದಾಡುತ್ತಲಿವೆ. ಅತ್ಯಾತುರದ ಅಗತ್ಯ ಎಂಬಂತೆ ಹಿರಿತೆರೆ ಕಿರುತೆರೆಯ ಮಾಧ್ಯಮಗಳಲ್ಲಿ, ಮತ್ತು ವಿಶ್ವ ವಿದ್ಯಾಲಯಗಳ ಪಂಡಿತೋತ್ತಮ ವಿದ್ವಾಂಸರ ಜಗತ್ತಿನಲ್ಲಿ ತತ್ವಪದಗಳಿಗೆ ಈಗೀಗ ಎಲ್ಲಿಲ್ಲದ ಬೇಡಿಕೆ ಶುರುವಿಟ್ಟು ಕೊಂಡಿದೆ. ತತ್ವಪದಗಳು ಕೆಲವರಿಗೆ ಪಿ. ಎಚ್ಡಿ. ಮತ್ತಿತರೆ ನೌಕರಿ ನೆರವಿಗೆ ನಿಲ್ಲಬಲ್ಲ ಆಪತ್ಬಂಧುಗಳಾಗಿವೆ. ಏಕತಾರಿ, ಗಝಲ್, ಸೂಫಿ ಗಾಯನದ ದೇಸೀ ಸಂಗೀತ ಪರಂಪರೆಗೆ ಆಧುನಿಕ ಮೆರಗು ದೊರಕಿದೆ. ಅಷ್ಟಲ್ಲದೇ ಆ ದಿಸೆಯಲ್ಲಿ ಪ್ರಯೋಗಾತ್ಮಕ ಪ್ರಯತ್ನಗಳು ಜಾರಿಗೆ ಬರತೊಡಗಿವೆ.

ಅದು ಕನ್ನಡದ ಸಂದರ್ಭದಲ್ಲಂತೂ ಕಂಡಾಪಟಿ ಚುರುಕಾಗಿದೆ. ರಘುದೀಕ್ಷಿತ್ ಗಿಟಾರ್ ಹಿಡಿದು, ವಿಚಿತ್ರ ವಸ್ತ್ರವಿನ್ಯಾಸದೊಂದಿಗೆ ಹಾಡುವ ಫ್ಯುಜನ್ ಶೈಲಿ ಹಾಡುಗಾರಿಕೆ, ನಾದಮಣಿ ನಾಲ್ಕೂರು ಏಕತಾರಿ ಬಳಸಿ ಹಾಡುವುದು, ಏಕತಾರಿ ರಾಮಯ್ಯ, ತಂಬೂರಿ ಜವರಯ್ಯ ದಂಪತಿ, ಮಳವಳ್ಳಿ ಮಹಾದೇವ ಸ್ವಾಮಿಯ ಜನಪದಿ ನೆಲೆಯ ತತ್ವಪದಗಳ ಹಾಡುಗಾರಿಕೆಗೆ ಯುವಲೋಕ ಮುಗಿ ಬೀಳುತ್ತಲಿದೆ. ಎಲೈಟ್ ವೀಣೆಗಳ ನಾದದಲ್ಲಿ ನಮ್ಮ ಏಕತಾರಿಗಳಿಗೆ ಕೆಲವು ಕಾಲ ಜಾಗವಿರಲಿಲ್ಲ. ನೆನಪಿನಾಳದ ಮತ್ತೊಂದು ಸಂಗತಿ ಎಂದರೆ : ಶಿಶುನಾಳ ಶರೀಫರ ತತ್ವಪದಗಳನ್ನು ಸಿ. ಅಶ್ವಥ್ ಸುಗಮದಲ್ಲಿ ಹಾಡುವ ಮೂಲಕ ದಾಖಲೆ ನಿರ್ಮಿಸಿದರು. ಅದೇ ಸಮಯಕ್ಕೆ ರವೀಂದ್ರ ಹಂದಿಗನೂರ ಕಾಕಾ ಕಂಡುಕೊಂಡ ಸೂಫಿ ಸಂಗೀತ ಸಹೋದರಿಕೆಯ ಗಝಲ್ ಶೈಲಿಯಲ್ಲಿ ಕಡಕೋಳ ಮಡಿವಾಳಪ್ಪ ಮತ್ತವರ ಸಮಕಾಲೀನರ ತತ್ವಪದಗಳನ್ನು ಹಾಡುವ ಮುಖೇನ ಮನಗಂಡ ಚರಿತ್ರೆ ಮೆರೆದಿದ್ದಾರೆ. ಗ್ಯಾಜೆಟ್ ಲೋಕದಲ್ಲಂತೂ ತತ್ವಪದಗಳಿಗೆ ಅಪಾರ ಬೇಡಿಕೆ. ಹೀಗೆ ನೂರಾರು ಬಗೆಯ ಪ್ರಯೋಗಗಳು ತತ್ವಪದಗಳ ಗಾಯನ ಪರಂಪರೆಗೆ ಹೊಸ ಹೊಸ ಬಗೆಯ ರೂಪ, ವಿನ್ಯಾಸ ದಕ್ಕಿಸಿ ಕೊಡುತ್ತಿರುವುದು ಉಲ್ಲೇಖನೀಯ.

ತತ್ವಪದಗಳೆಂದರೆ ಜನ ಬದುಕಿನ ಪಲಕುಗಳು. ನಿತ್ಯಬದುಕಿನೊಂದಿಗೆ ತಳಕು ಹಾಕಿಕೊಂಡ ಪದ ಪದರುಗಳು. ತತ್ವಪದ ಎಂಬ ಹೆಸರಲ್ಲೇ ಅದರ ಸರಳಾರ್ಥವಿದೆ. ತತ್ವ ಎನ್ನುವುದು ಫಿಲಾಸಫಿ ಮತ್ತು ಪದ ಎನ್ನುವುದು ಹಾಡು ಗಾಯನಕ್ಕೆ ಸಂವಾದಿಯಾಗಿ ಅರ್ಥೈಸಬಹುದಾಗಿದೆ. ಅಂತೆಯೇ ಕೆಲವರು ಫಿಲಾಸಫಿಕಲ್ ಮ್ಯುಸಿಕ್ ಅಂತ ಮೇಲ್ಮೈ ಮಾತುಗಳಿಂದ ಸರಳೀಕರಿಸುವುದುಂಟು. ವಾಸ್ತವ ಅಷ್ಟೇ ಆಗಿರುವುದಲ್ಲ. ತತ್ವಪದಗಳು ಹಲವು ಸೋಜಿಗ ಹಾಗೂ ನಿಗೂಢಾರ್ಥಗಳ ಆತ್ಮನಿವೇದನೆಗಳು. ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಅರ್ಥಗಳ ಹುಡುಕಾಟದ ಜ್ಞಾನಬಳಕೆ ಅದಾಗಿದೆ. ಮುಖ್ಯವಾಗಿ ಗುರುಮಾರ್ಗ ಪರಂಪರೆ ಅದರ ಒಳನಿಷ್ಠೆ. ಹತ್ತಾರು ಮಂದಿ ವಿದ್ವಾಂಸರು ತತ್ವಪದಗಳ ಮೇಲೆ ಪಾಂಡಿತ್ಯಪೂರ್ಣ ವಿಶ್ಲೇಷಣೆ ಮಾಡಿದ್ದುಂಟು. ಬೌದ್ಧ, ಸಿದ್ಧ, ನಾಥ, ಶಾಕ್ತ, ಶೈವ, ಅದ್ವೈತ, ಆರೂಢ, ಅಚಲ, ಆಜೀವಕ ಹೀಗೆ ಹಲವು ಧಾರೆಗಳ ನುಡಿಗಟ್ಟುಗಳು ತತ್ವಪದಗಳ ಜೋಳಿಗೆ ತುಂಬಾ ಭರಪೂರ ತುಂಬಿವೆಯೆಂದು ಗುರುತಿಸಿದ್ದಾರೆ. ಆದರೆ ತತ್ವಪದಕಾರರು ಮಾತ್ರ ತನ್ನ ತಾನು ತಿಳಿದಂವಗ ಇನ್ನೇನಿನ್ನೇನು/ ತಾನು ಏನು ಒಂದಾದ ಮೇಲೆ ಇನ್ನೇನಿನ್ನೇನು// ಎಂದು ಬಯಲೊಳಗಿನ ನಿರ್ಬಯಲಿನಂತಿದ್ದಾರೆ.

ಅಪ್ಪ ಸಾಧು ಶಿವಣ್ಣ ಒಂದು ಹಗಲು ಒಂದು ರಾತ್ರಿ ಪಾರು ಮಾಡುವಷ್ಟು ತತ್ವಪದಗಳನ್ನು ಹಾಡುತ್ತಿದ್ದ. ಅವಕ್ಕೆ ತಕ್ಕುದಾದ ಸ್ವಾನುಭಾವ ಭರಿತ ಟೀಕುಗಳನ್ನು ಹೇಳುತ್ತಿದ್ದ. ಖುದ್ದು ತಾನು ಹಾಡುವುದಲ್ಲದೇ ಸುತ್ತಮುತ್ತ ಹತ್ತಿಪ್ಪತ್ತು ಹಳ್ಳಿಯ ಹೆಣ್ಣುಮಕ್ಕಳಿಗೂ ತತ್ವಪದಗಳ ತರಬೇತಿ ನೀಡಿ ಸುಲಲಿತ ಹಾಡುಗಾರಿಕೆಗೆ ಸಿದ್ಧಮಾಡಿದ. ಅದು ಅವನಿಗೆ ತನ್ನ ಗುರುದೇವ ಮಹಾರಾಜ ಭೀಮಾಶಂಕರ ಅವಧೂತರಿಗೆ ಸಲ್ಲಿಸುವ ಗುರುಸೇವೆಯಾಗಿತ್ತು.

ವಿಶೇಷವಾಗಿ ಆತ "*ಗುರು ನನ್ನ ‌ಮಡಿವಾಳ ಪಡೆದ ಬೋಧವನು/
ಬಿಡದೇಳ ಭವಮೂಲ ಕಡಿದು ಹಾಕಿದನು//* " ಈ ಪದವನ್ನು ಒಡಲಿನ ಜೀವತುಂಬಿ ಏಕತಾರಿಯಲ್ಲಿ ಹಾಡುತ್ತಿದ್ದರೆ ಅವನ ನರನಾಡಿ ನಾಭಿಯ ತುಂಬಾ ಮಡಿವಾಳಪ್ಪನೇ ಮೈತುಂಬಿ ಹಾಡುವಂತಿತ್ತು. ಇಂತಹ ಹಾಡುಗಾರಿಕೆ ಪರಂಪರೆ ಇತ್ತೀಚೆಗೆ ಬತ್ತಿ ಹೋಗುತ್ತಿರುವುದು ವಿಷಾದಕರ. ಆದರೆ ಸ್ವಾರಸ್ಯಕರ ಸಂಗತಿ ಎಂದರೆ ಜಾಗತೀಕರಣದ ಈ ದಿನಮಾನಗಳಲ್ಲಿ ತತ್ವಪದಗಳು ಹೊಸ ಬಗೆಯ ಗಾಯನ ಸ್ವರೂಪಗಳನ್ನು ಪಡೆದು ಕೊಳ್ಳುತ್ತಲಿವೆ. ಅದೇನೇ ಇರಲಿ ಅವುಗಳ ಅಸ್ತಿತ್ವಕ್ಕೆ ಧಕ್ಕೆ ಬಂದಿಲ್ಲ ಎನ್ನುವುದೇ ಸಮಾಧಾನ. ತತ್ವಪದಗಳ ಅಸ್ಮಿತೆ ಮತ್ತು ಅಭಿವೃದ್ಧಿಗಾಗಿ ತೀವ್ರಸ್ವರೂಪದ ಯೋಜನೆಗಳನ್ನು ಸರಕಾರ ರೂಪಿಸಬೇಕಿದೆ.

ಪ್ರಾಧಿಕಾರ ಮತ್ತು ಪ್ರತಿಷ್ಠಾನಗಳ ಸ್ಥಾಪನೆ

ಸಾಂಸ್ಕೃತಿಕವಾಗಿ ಸರಕಾರ ನಮ್ಮ ಭಾಗವನ್ನು ನಿಕೃಷ್ಟವಾಗಿ ನೋಡಿದೆ. ನಮ್ಮ ಕಲ್ಯಾಣ ಕರ್ನಾಟಕವು ತತ್ವಪದಕಾರರ ಆಡುಂಬೊಲ. ಕಡಕೋಳ ಮಡಿವಾಳಪ್ಪ ತತ್ವಪದಗಳ ಅಲ್ಲಮಪ್ರಭು. ಎಂದೋ ಮಡಿವಾಳಪ್ಪನ ಹೆಸರಿನಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕಿತ್ತು. ಧರ್ಮಸಿಂಗ್ 1972ರಲ್ಲಿ ಮೊದಲ ಸಲ ಶಾಸಕರಾದಾಗ ಅಂತಹದ್ದೊಂದು ಅಪರೂಪದ ಬೇಡಿಕೆ ನಮ್ಮದಾಗಿತ್ತು. ಅವರು ಮುಖ್ಯಮಂತ್ರಿ ಆಗಿದ್ದಾಗ ಅದು ಚಿಟಿಕೆ ಹೊಡೆಯುವಷ್ಟೇ ಸರಳ ಸುಲಭದ್ದಾಗಿತ್ತು. ಅದೇಕೋ ಅವರು ಮನಸು ಮಾಡಲಿಲ್ಲ. ಈಗ ಅವರ ಮಗ ಮೂರನೇ ಬಾರಿಗೆ ಜೇವರ್ಗಿ ಶಾಸಕರಾಗಿದ್ದು ತುಂಬಾ ಪ್ರೀತಿಯಿಂದ ಬೇಡಿಕೆ ಆಲಿಸುತ್ತಾರೆ. ಆದರೆ ಈಡೇರಿಸುವ ದಿಸೆಯಲ್ಲಿ ಗರ್ಜಿನ ಯತ್ನಗಳು ಕಂಡು ಬರುತ್ತಿಲ್ಲ.

ಕಾಗಿನೆಲೆಯ ಕನಕದಾಸ ಅಭಿವೃದ್ಧಿ ಪ್ರಾಧಿಕಾರ ಮತ್ತು ‌ಕನಕ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸೇರಿದಂತೆ ಕೆಲವೆಡೆ ಪ್ರಾಧಿಕಾರಗಳಿವೆ. ಅದೇ ಮಾದರಿಯಲ್ಲಿ ತತ್ವಪದಗಳ ಹರಿಕಾರ ಕಡಕೋಳ ಮಡಿವಾಳಪ್ಪನ ಹೆಸರಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಬೇಕಿದೆ. ರಾಯಚೂರಿನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬರಗೂರು ರಾಮಚಂದ್ರಪ್ಪನವರು ಸಹಿತ ಇದನ್ನೇ ಹೇಳಿದ್ದಾರೆ. ಅಂದಹಾಗೆ ವಚನ ಚಳವಳಿಗೆ ದೊರಕಿದ ಸಾಂಸ್ಕೃತಿಕ ಮಹತ್ವ ತತ್ವಪದ ಚಳವಳಿಗೆ ದೊರಕಿಲ್ಲ ಎಂಬುದು ವಿಷಾದದ ವಿಷಯ.

ಇದಕ್ಕೆ ಪೂರಕ ಎನ್ನುವ ಹಾಗೆ ಹೇಳಲೇಬೇಕಾದ ಇನ್ನೊಂದು ಸಂಗತಿ ಇದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಂದೇ ಒಂದು ಸಾಂಸ್ಕೃತಿಕ ಪ್ರತಿಷ್ಠಾನವಿಲ್ಲ. ಸಾಹಿತ್ಯ, ಸಂಗೀತ, ಲಲಿತಕಲೆ, ರಂಗಭೂಮಿ ಕ್ಷೇತ್ರಗಳಿಗೆ ನಮ್ಮ ಕಲ್ಯಾಣ ಕರ್ನಾಟಕದ ಕೊಡುಗೆ ಅಮೋಘ. ನೂರಾರು ತತ್ವಪದಕಾರರು, ಆಧುನಿಕ ಸಾಹಿತ್ಯದ ಸಿದ್ದಯ್ಯ ಪುರಾಣಿಕ, ಶಾಂತರಸ, ಗೀತಾ ನಾಗಭೂಷಣ, ಚೆನ್ನಣ್ಣ ವಾಲೀಕಾರ, ರಂಗಭೂಮಿಯ ದುರ್ಗಾದಾಸ್, ರಹಿಮಾನವ್ವ ಕಲ್ಮನಿ, ಸುಭದ್ರಮ್ಮ ಮನಸೂರ, ಜೋಳದರಾಶಿ ದೊಡ್ಡನಗೌಡ, ಸಂಗೀತ ಪ್ರಪಂಚದ ಜಂಬಲದಿನ್ನಿ, ಗಝಲ್ ಗುಂಡಮ್ಮ, ಚಿತ್ರಕಲೆಯ ಗರುಡಾದ್ರಿ, ಎಸ್. ಎಂ. ಪಂಡಿತ್, ಅಂದಾನಿ, ಜೆ. ಎಸ್. ಖಂಡೇರಾವ್, ಜಾನಪದದಲ್ಲಂತೂ ದರೋಜಿ ಈರಮ್ಮ ಸೇರಿದಂತೆ ಲೆಕ್ಕವಿಲ್ಲದಷ್ಟು ಕಲಾಕೋವಿದರು. ಇವರ ಪೈಕಿ ಒಬ್ಬರ ಹೆಸರಲ್ಲೂ ಇದುವರೆಗೆ ಒಂದೇಒಂದು ಸಾಂಸ್ಕೃತಿಕ ಪ್ರತಿಷ್ಠಾನ ಸ್ಥಾಪನೆ ಆಗಿಲ್ಲ. ಆದರೆ ಬೇರೆ ಜಿಲ್ಲೆಗಳ ಒಂದೊಂದರಲ್ಲಿ ಎರಡು ಮೂರು ಪ್ರತಿಷ್ಠಾನಗಳಿವೆ. ನಮ್ಮ ಏಳು ಜಿಲ್ಲೆಗಳಲ್ಲಿ ಒಂದೂ ಇಲ್ಲ ಅಂದರೆ ಇದು ಮಲತಾಯಿ ಧೋರಣೆ ಅಲ್ಲದೇ ಮತ್ತೇನು.?

ಮಲ್ಲಿಕಾರ್ಜುನ ಕಡಕೋಳ
‌ ‌ 9341010712

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...