ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'

Date: 02-04-2024

Location: ಬೆಂಗಳೂರು


"ಹಿತ್ತಲಕ ಕರಿಬ್ಯಾಡ ಮಾವ ಹಾಡಿನ ದಾವಣಗೆರೆಯ ಶೃತಿ ಪ್ರಹ್ಲಾದ ಇದುವರೆಗೆ ಇಪ್ಪತ್ತೈದಕ್ಕು ಹೆಚ್ಚು ಸಿನೆಮಾಗಳಿಗೆ ಹಾಡಿರುವುದುಂಟು. ಸಂಗೀತ ಲೋಕದ ಅನ್ಯೋನ್ಯ ಪರಿಚಯ ಹೊಂದಿದ್ದ ತನ್ನ ತಾಯಿಯಿಂದಲೇ ಶೃತಿಗೆ ಸಂಗೀತದ ಝೀನ್ಸ್ ವರ್ಗಾವಣೆಯಾದಂತಿದೆ. ಆಕೆಯ ಬಾಲ್ಯದಲ್ಲೇ ಅಂತಹ ಕೆಲವು ಅವಕಾಶಗಳ ಚೆಲ್ಲಿದ ಪ್ರೀತಿಯ ಬೆಳಕು ಕಂಡವಳು," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣಕ್ಕೆ ಬರೆದ ಲೇಖನವಿದು.

ಕಳೆದೆರಡು ವಾರಗಳಿಂದ "ಹಿತ್ತಲಕ ಕರಿಬ್ಯಾಡ ಮಾವ ಭಲೇ ನಾಚಿಕಿ ಆಗತೈತಿ" ಎಂಬ ಉತ್ತರ ಕರ್ನಾಟಕದ ಜವಾರಿ ಹಾಡಿನದೇ ಹವಾ. 'ಕರಟಕ ದಮನಕ' ಎನ್ನುವ ಸಿನೆಮಾದ ಈ ಹಾಡು ಕುರಿತು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ತರಹೇವಾರಿ ರೀಲ್ಸ್. ಹುಚ್ಚುಹಿಗ್ಗಿನ ಪ್ರೀತಿ ಹುಟ್ಟಿಸುವಂತೆ ಹಾಡಿಗೆ ಬಗೆ ಬಗೆಯ ಸ್ವತಂತ್ರ ನೃತ್ಯ ಮಾಡುವ ಚೆಂದ ಚೆಂದದ ರೀಲ್ಸ್ ಝಲಕುಗಳು. ರಿಯಲೀ ಸಧ್ಯಕ್ಕಿದು ಕಂಡಾಪಟ್ಟೆ ಟ್ರೆಂಡಿಂಗ್ ಸಾಂಗ್. ಗಂಡು ಹೆಣ್ಣೆಂಬ ಲಿಂಗಭೇದ ಮತ್ತು ವಯೋಭೇದ ಮರೆತು ಹಾಡಿನ ಮೇಲೆ ಪ್ರತಿನಿತ್ಯವೂ ಹೊಸ ಹೊಸ ಪೋಷ್ಟ್ ಬರುತ್ತಲೇ ಇವೆ. ಇಂತಹದ್ದೊಂದು ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಕುದಿ ಹರೆಯದ ಈ ಹಾಡನ್ನು ಹಾಡಿದ್ದು ದಾವಣಗೆರೆಯ ಶೃತಿ ಪ್ರಹ್ಲಾದ ಉರುಫ್ ಎಸ್. ಪಿ. ಶೃತಿ ಎಂಬ ಭರವಸೆಯ ಯುವಗಾಯಕಿ. ಸಿನೆಮಾ ಸಾಂಗ್ ಬರೆದವರು ಯೋಗರಾಜ ಭಟ್.

ಖರೇ ಹೇಳಬೇಕಂದ್ರ ಇದೊಂದು ಸಾಧಾರಣ ಸಾಹಿತ್ಯದ ಸಾಲುಗಳಿರುವ ರಚನೆ. ಅಲ್ಲಲ್ಲಿ ಕೊಂಚ ಡಬಲ್ ಮೀನಿಂಗ್ ಪಂಚ್ ಕೊಡುವ ಕುರುಸಾಲೆ ಪಡಿ ತಳಿಯಂತಿದೆ ಹಾಡು. ಆದರೆ ಅದರ ಕ್ರೆಡಿಟ್ ಮಾತ್ರ ಸ್ವರ ಸಂಯೋಜಕ ಹರಿಕೃಷ್ಣ ಮತ್ತು ಹಾಡಿದ ಶೃತಿ ಪ್ರಹ್ಲಾದ ಮತ್ತು ಮಾಳು ನಿಪ್ನಾಳ ಇಬ್ರಿಗೂ ಸಲ್ಲಬೇಕು. ಯಥಾರ್ಥ ಮತ್ತು ಮುಗ್ದ ಪ್ರತಿಭೆಯ ಲಯಬದ್ಧತೆಯೊಂದಿಗೆ ಹಾಡಿ ಅವರು ಲೋಕಮೀಮಾಂಸೆಯ ಮನಸು ಗೆದ್ದಿದ್ದಾರೆ. ಆ ಮೂಲಕ ಅದನ್ನು ಜಯಪ್ರಿಯ ಗೊಳಿಸಿರುವುದು ವರ್ತಮಾನದ ಟ್ರೆಂಡಿಂಗ್ ದುನಿಯಾದ ಅತ್ಯಗತ್ಯವೇ ಆಗಿದೆ. ಮುಖ್ಯವಾಗಿ ಹಾಡಿಗೆ ಸಿನೆಮಾದಲ್ಲಿ ಸುಪ್ರಸಿದ್ಧ ನೃತ್ಯಪಟು ಪ್ರಭುದೇವ ಮತ್ತು ನಿಶ್ವಿಕಾ ನಾಯ್ಡು ಅವರ ಚಕ್ಕರಗುಳ್ಳಿ ಇಡುವ ಡಾನ್ಸ್ ಮಾತ್ರ ಮನಮೋಹಕ. ಹೀಗೆ ಹಾಡಿಕೆ ಮತ್ತು ನೃತ್ಯದ ಕಚಗುಳಿಯ ಘಮಲು ಅತ್ಯಾಕರ್ಷಕ. ಒಟ್ಟಿನಲ್ಲಿ ವಿಭಿನ್ನ ಭಾವ ಸಂವೇದನೆ ಹುಟ್ಟು ಹಾಕುತ್ತಿರುವ 'ಹಿತ್ತಲಕ ಕರಿಬೇಡ ಮಾವ' ದಿನದಿಂದ ದಿನಕ್ಕೆ ದಾಖಲೆಯ ದಾಪುಗಾಲು ಹಾಕುತ್ತಲಿದೆ.

ಹಿತ್ತಲಕ ಕರಿಬ್ಯಾಡ ಮಾವ ಹಾಡಿನ ದಾವಣಗೆರೆಯ ಶೃತಿ ಪ್ರಹ್ಲಾದ ಇದುವರೆಗೆ ಇಪ್ಪತ್ತೈದಕ್ಕು ಹೆಚ್ಚು ಸಿನೆಮಾಗಳಿಗೆ ಹಾಡಿರುವುದುಂಟು. ಸಂಗೀತ ಲೋಕದ ಅನ್ಯೋನ್ಯ ಪರಿಚಯ ಹೊಂದಿದ್ದ ತನ್ನ ತಾಯಿಯಿಂದಲೇ ಶೃತಿಗೆ ಸಂಗೀತದ ಝೀನ್ಸ್ ವರ್ಗಾವಣೆಯಾದಂತಿದೆ. ಆಕೆಯ ಬಾಲ್ಯದಲ್ಲೇ ಅಂತಹ ಕೆಲವು ಅವಕಾಶಗಳ ಚೆಲ್ಲಿದ ಪ್ರೀತಿಯ ಬೆಳಕು ಕಂಡವಳು. ಗಾಯಕಿ ಶೃತಿ ಆರಂಭಿಕ ಸಂಗೀತದ ಸಾಮು ತೆಗೆದದ್ದು ಕನ್ನಡದ ಹೆಸರಾಂತ ಗಝಲ್ ಗಾಯಕ ರವೀಂದ್ರ ಹಂದಿಗನೂರ ಗರಡಿಯಲ್ಲಿ.

ಅದು ವಚನ ಮತ್ತು ತತ್ವಪದಗಳನ್ನು ಗಝಲ್ ಶೈಲಿಯಲ್ಲಿ ಕಲಿಸುವ ವಿನೂತನ ಪ್ರಯೋಗಗಳ ಸಂಗೀತ ಶಾಲೆಯೇ ಆಗಿತ್ತು. ಗುರು ರವೀಂದ್ರ ಶಿಷ್ಯತ್ವದಲ್ಲಿ ಹಾಡಲು ಕಲಿತದ್ದು ನೂರಾರು ತತ್ವಪದ ಮತ್ತು ವಚನಗಳನ್ನು. ಅದರಲ್ಲೂ ಲಾಹೋರಿನ ಗುಲಾಮ ಅಲಿ, ಸೂಫಿ ಗಾಯಕಿ ರೇಷ್ಮಾ ಹಾಡುಗಾರಿಕೆಯ ಜಾನಪದೀಯ ವರಸೆ, ಮಟ್ಟುಗಳ ದಟ್ಟ ಪರಿಚಯ ಮಾಡಿಸಿದ್ದು ರವೀಂದ್ರ. ಅಂತೆಯೇ ಗಝಲ್ ಶೈಲಿಯಲ್ಲಿ ವಚನ ಮತ್ತು ತತ್ವಪದಗಳನು ಜುಳು ಜುಳು ಹರಿಯುವ ತಿಳಿನೀರಿನ ಹೊಳೆಯಂತೆ ಹಾಡಬಲ್ಲ ಮಧುರ ಸ್ವರದ ಮಧುಬನದ ಗಾಯಕಿ ನಮ್ಮ ಶೃತಿ. ವಿಶೇಷವಾಗಿ ಕಡಕೋಳ ಮಡಿವಾಳಪ್ಪನ ಅನುಭಾವದ ಜಾತ್ರೆಯಲ್ಲಿ ತತ್ವಪದಗಳನ್ನು ಹಾಡುವ ಅವಕಾಶ ದೊರಕಿದೆ‌.

ಗುರು ರವೀಂದ್ರ ಹಂದಿಗನೂರ ಗತಿಸಿದ ಮೇಲೆ ಸಿನೆಮಾ ಮತ್ತು ರಿಯಾಲಿಟಿ ಶೋಗಳ ದಿವಿನಾದ ಒಡನಾಟ. ಇದುವರೆಗೆ ಕಿರುತೆರೆ ಸಂಗೀತ ಸ್ಪರ್ಧೆಗಳ ಹತ್ತಾರು ರಿಯಾಲಿಟಿ ಶೋಗಳಲ್ಲಿ ಭಾಗಿ. ಅದರಲ್ಲೂ ಮುಖ್ಯವಾಗಿ ಸಮೂಹ ತೀರ್ಪುಗಾರಿಕೆಯ 'ಸರಿಗಮಪ' ರಿಯಾಲಿಟಿ ಶೋ. ಇತ್ತೀಚೆಗೆ ರಾಬರ್ಟ್ ಸಿನೆಮಾದ "ನಿನ್ನೆದುರಲಿ ನಾನು..." ಎಂಬ ‌ಹಾಡನ್ನು ಸೋಜು ಮತ್ತು ಸೊಗಸಾಗಿ ಪ್ರಸ್ತುತ ಪಡಿಸಿ ಜನಮನ್ನಣೆ ಗಳಿಸಿದ್ದುಂಟು. ಅದೇನೇ ಇರಲಿ, ಶೃತಿಯ ಜೇನುದನಿಯ ಗಝಲ್ ಹಾಡುಗಾರಿಕೆಯ ಸೊಗಸಿಗೆ ಸಮನಾದುದು ಮತ್ತೊಂದಿಲ್ಲ. ಅದರಲ್ಲೂ ಆಕೆಯ ಸಿರಿಕಂಠದ ಕಡಕೋಳ ಮಡಿವಾಳಪ್ಪನವರ ತತ್ವಪದಗಳ ಗಝಲ್ ಧಾಟಿಯ ಆಲಾಪನೆಗಳೆಂದರೆ ಹಾಲುಹುಗ್ಗಿ ಉಂಡ ಖಂಡುಗ ಖುಷಿ ಮತ್ತು ಹುರಿದುಂಬಿದ ಸಂಭ್ರಮ.

ತನ್ನ ತಾನು ತಿಳಿದಮೇಲೆ ಇನ್ನೇನಿನ್ನೇನೋ//
ಮೂಕನಾಗಬೇಕೋ ಜಗದೊಳು ಜ್ವಾಕ್ಯಾಗಿರಬೇಕೋ// ಮತ್ತು.,

ಬಸಿರಿಲ್ಲದ ಮಗನ ಹಡೆದೆವ್ವ/
ಹೆಸರೇನಿಡಬೇಕು ಹಡದವ್ವ//

ನಾ ಹೋದಮ್ಯಾಲ ನೀ ಹ್ಯಾಂಗ ಇರತಿ/
ನಾ ನಿನ್ನ ಹ್ಯಾಂಗ ಮರೆಯಲಿ ಗುಣವಂತಿ//

ಮೊದಲಾದ ತತ್ವಪದಗಳನ್ನು ಶೃತಿ ಸ್ವರದಲ್ಲಿ ಕೇಳುತ್ತಲಿದ್ದರೆ ಸ್ವರಮಾಂತ್ರಿಕ ಲೋಕದಲಿ ವಿಹರಿಸಿದ ದಿವ್ಯಾನುಭೂತಿಯ ಅನುಭವ.

ಹರನೇ ನೀನೆನಗೆ ಗಂಡನಾಗಬೇಕಿತ್ತು...

ಅಂತರಂಗದಲ್ಲಿ ಅರಿವಾದೊಡೇನು/
ಬಹಿರಂಗದಲ್ಲಿ ಕ್ರಿಯೆ ಇಲ್ಲದನಕ್ಕರ//

ಇಂತಹ ಅನೇಕ ವಚನಗಳನ್ನು ಶೃತಿ ಕಂಠದಲಿ ಕೇಳುವುದೆಂದರೆ ಅದು ನಾದ ಮಾಧುರ್ಯದ ರಸಾನುಸಂಧಾನ ಮತ್ತು ಅನನ್ಯತೆಯ ಸಾಕ್ಷಾತ್ಕಾರ. ಸಾಲದೆಂಬಂತೆ ತಾದಾತ್ಮ್ಯಗೊಂಡ 'ಶರಣಸತಿ ಲಿಂಗಪತಿ' ಪ್ರೀತಿಯ ಪಾರಮ್ಯ. ಚಿತ್ರಗೀತೆಗಳಿಗಿಂತ ಸುದೀಪ್ತ ಧ್ಯಾನದ ತಾವರೆಯ ಬಾಗಿಲು ತೆರೆದು ತೋರುವ ಸೂಫಿ ಸಂಗೀತದ ತತ್ವಪದ, ವಚನಗಳಿಗೆ ವಿಮಲ ಸರೋವರದ ಚಿತ್ರಕಶಕ್ತಿ. ಏಕೆಂದರೆ ತುಂಬಿದ ಭಾವ ನಾಭಿಯಿಂದ ತುಂಬಿ ತುಳುಕುವ ನಾದಲೀಲೆಯ 'ಶೃತಿ ಸಡಗರ'ವದು.

ಹೈಸ್ಕೂಲ್ ವಿದ್ಯಾರ್ಥಿ ದಿಸೆಯಲ್ಲೇ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ 'ಎದೆತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹಾಡಿದ ಶೃತಿ ಸಂಪ್ರೀತಿ. ಮುಂದುವರೆದು ವಿಜಯಪ್ರಕಾಶ್, ರಾಜೇಶ್ ಕೃಷ್ಣನ್, ಹರಿಹರನ್ ಮೊದಲಾದ ಸಂಗೀತ ದಿಗ್ಗಜರೊಂದಿಗೆ ಜೋಡಿಯಾಗಿ ಹಾಡಿದ ಹೆಗ್ಗಳಿಕೆ. ಹಾಗೆಯೇ ವಿ. ಮನೋಹರ, ಅರ್ಜುನ ಜನ್ಯ, ವಿ. ಹರಿಕೃಷ್ಣ , ಪಳನಿ ಸೇನಾಪತಿ, ಪ್ರದೀಪ ವರ್ಮಾ, ವೀರಸಮರ್ಥ, ಶ್ರೀಧರ ಸಂಭ್ರಮ್ ಮುಂತಾದವರ ಸಂಗೀತ ನಿರ್ದೇಶನದಲ್ಲಿ ಹಾಡಿದ ಹದುಳ ಪ್ರೀತಿಯ ಹೆಮ್ಮೆ. ಕನ್ನಡ ಸಿನೆಮಾಗಳಲ್ಲದೇ ತಮಿಳು, ತೆಲುಗು ಚಿತ್ರರಂಗದಲ್ಲೂ ಗಾಯಕಿ ಎಸ್. ಪಿ. ಶೃತಿಗೆ ಕೆಲವು ಅವಕಾಶಗಳು ದೊರೆತ ಕುಶಲ ಪ್ರೀತಿಯ ಮಾಹಿತಿಗಳಿವೆ.

ಅಗಾಧ ಜ್ಞಾಪಕ ಶಕ್ತಿಯುಳ್ಳ ಶೃತಿಯ ನೆನಪಿನ ಜೀವಕೋಶದಲ್ಲಿ ನೂರಾರು ಮರೆಯಲಾಗದ ನೆನಪುಗಳು. ಅದರಲ್ಲಿ ಅಸಂಖ್ಯಾತ ಸೆಲ್ ಸಂಖ್ಯೆಗಳು ಇವೆಯಂತೆ. ಮತ್ತು ತಾನು ಹಾಡಿದ ನೂರಾರು ಅಲ್ಬಮ್‌ ಸಾಂಗ್ಸ್. ಇದುವರೆಗೆ ಐದುನೂರಕ್ಕೂ ಹೆಚ್ಚು ಅಲ್ಬಮ್‌ ಗೀತೆಗಳನ್ನು ಹಾಡಿದ ಹಿರಿಮೆ. ಆಕೆಯ ಸಂವೇದನಾಶೀಲ ಭಾವಕೋಶದಲ್ಲಿ ಸಂತಸದಷ್ಟೇ ಸಂಕಟಗಳು ತುಂಬಿಕೊಂಡಿವೆ. " ಒಂದು ಮಾತನ್ನೂ ಹೇಳದೇ ಮನೆಬಿಟ್ಟು, ದಾವಣಗೆರೆಯ ರೈಲುವೆ ನಿಲ್ದಾಣದಲ್ಲಿ ಸ್ಕೂಟರ್ ಬಿಟ್ಟು ಹೋದ ಅಂತಃಕರಣದ ಅಪ್ಪ ಇವತ್ತಿಗೂ ಮರಳಿ ಬರಲಿಲ್ಲ." ಇವತ್ತಿಗೂ ಶೃತಿಯ ಅಂತರಂಗ ಬಾರದಿರುವ ಅಪ್ಪನ ಕುರಿತು ಘೋರವಾಗಿ ಕೊರೆಯುತ್ತಲೇ ಇದೆ. ಎಂದಾದರೂ ಅಪ್ಪ ಆಗಮಿಸಬಹುದೆಂಬ ನಿರೀಕ್ಷೆಯ ನೆರಳು ನಿತ್ಯವೂ ಕಾಡುತ್ತಲೇ ಇರುತ್ತದೆ.

ಕಿರುತೆರೆ ಮತ್ತು ಹಿರಿತೆರೆಗಳ ಸಂಗೀತ ಜಗತ್ತಿನಲ್ಲಿ ಅಜಮಾಸು ಎರಡು ದಶಕಗಳನ್ನೇ ಸವೆಸಿರುವ ಶೃತಿ ನಮ್ಮ ಕಲಬುರಗಿಯ ಸೊಸೆ. ಕಲಬುರಗಿಯ ಸಾಫ್ಟವೇರ್ ಇಂಜಿನಿಯರ್ ವಿ. ಪ್ರಶಾಂತ್ ಅವರ ಬಾಳಸಂಗಾತಿ. ಅವರಿಗೆ ಇಬ್ಬರು ಮುದ್ದಾದ ಮಕ್ಕಳು. ಶೃತಿಯ ತಂದೆ ಪ್ರೊ. ಎಸ್. ಕೆ. ಪ್ರಹ್ಲಾದ ವಿ.ಟಿ.ಯು.ಗೆ ಸೇರಿದ ದಾವಣಗೆರೆಯ ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಪ್ರೊ. ಪ್ರಹ್ಲಾದ ಸೇವೆಯಲ್ಲಿದ್ದಾಗಲೇ ಕಾಣೆಯಾಗಿ ಈಗ್ಗೆ ಹದಿನೆಂಟು ವರುಷಗಳೇ ಕಳೆದವು. ತನ್ನ ಸಂಗೀತ ಸಾಧನೆಗಾಗಿ ಅಪ್ಪ ತೋರುತ್ತಿದ್ದ ಪ್ರೀತಿ, ಪ್ರೋತ್ಸಾಹ ನೆನೆದು ಶೃತಿಯ ಕಣ್ಣು ತೇವಗೊಳ್ಳುತ್ತವೆ. ಅಂತೆಯೇ ವರುಷಗಟ್ಟಲೇ ಅಪ್ಪನಿಗಾಗಿ ಹಂಬಲಿಸಿ ಹುಡುಕಾಡಿದ ದಿನಗಳು ಅಸದಳ. ಈಗ ಪ್ರಹ್ಲಾದ ಇದ್ದಿದ್ದರೆ ಅದೆಷ್ಟು ಸಂತಸ ಪಡುತ್ತಿದ್ದರೆಂಬ ಹೇಳಲಾಗದ ಮತ್ತು ಹೇಳದಿರಲಾಗದ ಸಂಕಟ ಅವರ ಕುಟುಂಬದ್ದು ಮಾತ್ರವಲ್ಲ, ಕುಟುಂಬ ವತ್ಸಲರೆಲ್ಲರದ್ದು.

- ಮಲ್ಲಿಕಾರ್ಜುನ ಕಡಕೋಳ
9341010712

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...