ಜಯಶ್ರೀ ಕಂಬಾರ ಅವರ – “ಮಾಧವಿ”

Date: 03-01-2022

Location: ಬೆಂಗಳೂರು


ಜಯಶ್ರೀಯವರ “ಮಾಧವಿ” ನಾಟಕವು ಹಿಂದಿನ ನಾಟಕಕಾರ್ತಿಯರ ಕಥಾನಕವನ್ನೇ ಒಳಗೊಂಡಿದ್ದರೂ ಇಲ್ಲಿ ಕವಿಪಾತ್ರ ಹೊಸದಾಗಿ ಬಂದಿದೆ. ಈ ಆಸ್ಥಾನ ಕವಿಗಳು ಹೇಗೆ ರಾಜರ ಹೊಗಳು ಭಟ್ಟರಾಗಿರುತ್ತಾರೆಂಬುದನ್ನು ಹೇಳಲಾಗಿದೆ’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ 'ಮಹಿಳಾ ರಂಗಭೂಮಿ’ ಅಂಕಣದಲ್ಲಿ ಜಯಶ್ರೀ ಕಂಬಾರ ಅವರ ಮಾಧವಿ ನಾಟಕದ ಕುರಿತು ವಿಶ್ಲೇಷಿಸಿದ್ದಾರೆ. 

ಜಯಶ್ರೀ ಕಂಬಾರ ಅವರು ಒಬ್ಬ ಕವಿಯತ್ರಿಯಾಗಿ ಗಮನ ಸೆಳೆದಿದ್ದಾರೆ. “ಮಾಧವಿ”ಯ ಮೂಲಕ ಅವರು ನಾಟಕಕಾರರಾಗಿಯೂ ರಚಿಸಿದ್ದು ಈ ಕೃತಿ 2013ರಲ್ಲಿ, ಬೆಂಗಳೂರಿನ ಸಪ್ನಬುಕ್ ಹೌಸ್‍ದಿಂದ ಪ್ರಕಟವಾಗಿದೆ. ಜಯಶ್ರೀಯವರು ಪ್ರಸಿದ್ಧ ಸಾಹಿತಿ ಚಂದ್ರಶೇಖರ ಕಂಬಾರರ ಪುತ್ರಿಯಾಗಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಬೆಳೆದುನಿಂತಿದ್ದಾರೆ.

“ಮಾಧವಿ” ಪುರಾಣದ ಕಥೆ. ಯಯಾತಿ ಮಹಾರಾಜನ ಮಗಳಾಗಿದ್ದ ಮಾಧವಿಯನ್ನು ಕುರಿತು ಈಗಾಗಲೇ ಅನೇಕ ಕೃತಿಗಳು ಪ್ರಕಟವಾಗಿವೆ. ಮಾಧವಿಯನ್ನು ಕುರಿತು ಕನ್ನಡದ ಮೊದಲ ನಾಟಕ “ವಿವೇಕೋದಯ” ತಿರುಮಲಾಂಬಾ ಅವರಿಂದ 1922ರಲ್ಲಿ ಪ್ರಕಟವಾಗಿದೆ. ಮಹಾಭಾರತದ ಉದ್ಯೋಗ ಪರ್ವದಲ್ಲಿ 107 ರಿಂದ 124ರ ವರೆಗಿನ ಕಥಾ ಭಾಗವಾದ ವಿಶ್ವಮಿತ್ರ ಗಾಲವರ ವೃತ್ತಾಂತವನ್ನು ತಿರುಮಲಾಂಬಾ ನಾಟಕ ರೂಪದಲ್ಲಿ ರಚನೆ ಮಾಡಿದ್ದಾರೆ. ಈ ನಾಟಕ ಎಂಟು ದೃಶ್ಯಗಳಿಂದ ಕೂಡಿದೆ. ಹಠ, ಅಹಂಕಾರ, ಸ್ವಾರ್ಥ ಭಾವನೆಗಳು ಮನುಷ್ಯರಲ್ಲಿರಲಿ, ಮುನಿಗಳಲ್ಲಿರಲಿ ಅವುಗಳಿಂದ ಎಂತಹ ಕೆಟ್ಟ ಪರಿಣಾಮ ಗಳಾಗುತ್ತವೆಂಬುದನ್ನು ತಿರುಮಲಾಂಬಾ ಈ ನಾಟಕದಲ್ಲಿ ತಿಳಿಸಿದ್ದಾರೆ. ಇಲ್ಲಿಯೂ ಮಾಧವಿಯ ದುರಂತ ಕತೆ ಕಾಣಿಸಿಕೊಂಡಿದೆ.

ಆಧುನಿಕ ನಾಟಕಕಾರ್ತಿಯರಲ್ಲಿ ತಿರುಮಲಾಂಬಾ ಅವರ ನಂತರ “ಮಾಧವಿ” ಕುರಿತು ನಾಟಕ ರಚಿಸಿದವರೆಂದರೆ ಲೀಲಾವತಿ ರಾಮಕೃಷ್ಣ ಅವರು. ಅವರ ‘ನಿತ್ಯಕನ್ಯೆ’ ನಾಲ್ಕು ದೃಶ್ಯಗಳ ಪುಟ್ಟ ನಾಟಕವಾಗಿದೆ. ಪ್ರಸವದ ನಂತರವೂ ಕನ್ಯೆಯಾಗಿಯೇ ಉಳಿಯುವಂತಹ ವರವನ್ನು ಮಾಧವಿ ಪಡೆದಿದ್ದಳೆಂದು ಈ ನಾಟಕ ಹೇಳುತ್ತದೆ. ನಿತ್ಯ ಕನ್ಯತ್ವವೇ ಅವಳಿಗೆ ಹೇಗೆ ಶಾಪವಾಯಿತೆಂಬುದನ್ನು ಈ ನಾಟಕದಲ್ಲಿ ವಿವರಿಸಲಾಗಿದೆ.

ಮಾಧವಿ ಕಥಾವಸ್ತುವನ್ನೊಳಗೊಂಡ “ಮಾಧವಿ” ಕಾದಂಬರಿಯನ್ನು ಅನುಪಮಾ ನಿರಂಜನ ಅವರು ರಚಿಸಿದ್ದಾರೆ. 1976ರಲ್ಲಿ ಈ ಕಾದಂಬರಿ ಪ್ರಕಟವಾಗಿದೆ. ಈ ಕಾದಂಬರಿಯನ್ನು ತೆಲಗು ಹಾಗೂ ಮಲಯಾಳಂ ಭಾಷೆಗಳಿಗೆ ಅನುವಾದಿಸಲಾಗಿದೆ. ಭೀಷ್ಮ ಸಹಾನಿಯಂತಹ ಮಹತ್ವದ ಲೇಖಕರೂ ಕೂಡ ಮಾಧವಿಯನ್ನು ಕುರಿತು ನಾಟಕ ಬರೆದಿದ್ದಾರೆ. ಹೀಗೆ 1922ರಲ್ಲಿ ತಿರುಮಲಾಂಬಾ ಅವರಿಂದ ಪ್ರಾರಂಭವಾದ ಮಾಧವಿ ಕುರಿತಾದ ನಾಟಕದ ರಚನೆಗಳು, ಜಯಶ್ರೀ ಕಂಬಾರ ಅವರ ವರೆಗೆ (2013) ಮುಂದುವರೆದಿವೆ.

ಜಯಶ್ರೀ ಅವರ ಈ ನಾಟಕವು ಐದು ದೃಶ್ಯಗಳನ್ನೊಳಗೊಂಡ ಚಿಕ್ಕ ನಾಟಕವಾಗಿದೆ. ಮೊದಲನೇ ದೃಶ್ಯವು ರಾಜಕುಮಾರಿ ಮಾಧವಿಯ ಸೌಂದರ್ಯ ವರ್ಣನೆಯ ಮೂಲಕ ಪ್ರಾರಂಭವಾಗುತ್ತದೆ. ಸಖಿಯರು ಮಾಧವಿಯ ಚೆಲುವಿಕೆಯನ್ನು ಬಣ್ಣಿಸುತ್ತಾರೆ. ಯಯಾತಿಯ ಮೊದಲನೇ ಮಗಳು ಮಾಧವಿ, ದೇವಯಾನಿ ಮಲತಾಯಿ ಆಗಿ ಕಾಣಿಸಿಕೊಂಡಿದ್ದಾಳೆ. ದೇವಯಾನಿಗೆ ಗಂಡು ಮಕ್ಕಳಿದ್ದಾರೆ. ದೇವಯಾನಿಯ ಮಲತಾಯಿ ಧೋರಣೆಯನ್ನು ಕಂಡ ಯಯಾತಿಯ ಮಾದವಿಗೆ ಪ್ರತ್ಯೇಕ ಅರಮನೆಯನ್ನು ನೀಡಿರುತ್ತಾನೆ. ಹೀಗೆ ತಾಯಿಯಿಲ್ಲದ ಮಾಧವಿ ಅರಮನೆಯಲ್ಲಿ ಒಂಟಿಯಾಗಿಯೇ ಬೆಳೆದಿರುತ್ತಾಳೆ. ಸುಂದರ ಕನಸ್ಸು ಕಾಣುತ್ತಿರುತ್ತಾಳೆ. ಅದ್ದೂರಿಯಾಗಿ ತನ್ನ ಮದುವೆಯಾಗಬೇಕು, ಸ್ವರ್ಗದಲ್ಲಿಯೂ ಕೂಡ ಅಂತಹ ಮದುವೆ ನಡೆದಿರಬಾರದೆಂಬ ಕನಸು ಕಾಣುತ್ತಿರುತ್ತಾಳೆ. ಇಂತಹ ಭಾವನೆಗಳು ಮಾಧವಿಯಿಂದ ಈ ದೃಶ್ಯದಲ್ಲಿ ವ್ಯಕ್ತವಾಗಿವೆ.

ಎರಡನೇ ದೃಶ್ಯವು ಯಯಾತಿಯ ಅರಮನೆಯಲ್ಲಿ ನಡೆಯುತ್ತದೆ. ಯಯಾತಿ-ದೇವಯಾನಿ ಇದ್ದಾರೆ. ವಿಶ್ವಾಮಿತ್ರನ ಶಿಷ್ಯ ಗಾಲವನನೆಂಬ ಮುನಿ, ಅರಮನೆಯನ್ನು ಪ್ರವೇಶಿಸುತ್ತಾನೆ. ಯಯಾತಿ ಮಹಾರಾಜನು ಮುನಿವರನನ್ನು ಗೌರವದಿಂದ ಸ್ವಾಗತಿಸುತ್ತಾನೆ. ತಾನು ಗುರುಕಾಣಿಕೆಯಾಗಿ ವಿಶ್ವಮಿತ್ರ ಮುನಿಗಳಿಗೆ ಒಂದೇ ಕಪ್ಪು ಕಿವಿಯಿರುವ ಎಂಟು ನೂರು ಕುದುರೆಗಳನ್ನು ಕೊಡಬೇಕಾಗಿದೆ. ತಾವು ಕೊಡುಗೈ ದೊರೆಗಳೆಂದು ತಮ್ಮ ಬಳಿ ಬಂದಿದ್ದೇನೆಂದು ಹೇಳುತ್ತಾನೆ. ಆಗ ಯಯಾತಿ ತನ್ನಲ್ಲಿ ಅಷ್ಟೊಂದು ಕುದುರೆಗಳಿಲ್ಲ. ಅವುಗಳ ಬದಲು ಬೇರೇನಾದರೂ ಕೇಳೆಂದು ತಿಳಿಸುತ್ತಾನೆ. ಕುದುರೆಗಳ ಬದಲಾಗಿ ಗಾಲವಮುನಿ ಸಂಪತ್ತನ್ನು ಕೇಳುತ್ತಾನೆ. ಅಷ್ಟೊಂದು ಸಂಪತ್ತು ತನ್ನ ಬಳಿ ಇಲ್ಲವೆಂದು ಯಯಾತಿ ಹೇಳಿದ ಮೇಲೆ, ಗಾಲವನ್ನು ತಮ್ಮ ಮಗಳು ಮಾಧವಿಯನ್ನು ದಾನಮಾಡೆಂದು ಕೇಳುತ್ತಾನೆ. ಅದಕ್ಕೆ ಯಯಾತಿ ಒಪ್ಪುವುದಿಲ್ಲ, ಒಪ್ಪಿದಿದ್ದರೆ ನೀನು ವಚನಭ್ರಷ್ಟನಾಗುವಿಯೆಂದು ಗಾಲವನ್ನು ಹೆದರಿಸುತ್ತಾನೆ. ಇದೇ ಒಳ್ಳೆಯ ಸಮಯವೆಂದು ತಿಳಿದ ದೇವಯಾನಿಯ, ಇಡೀ ಸಂಪತ್ತು-ಸಾಮ್ರಾಜ್ಯ ತನ್ನ ಗಂಡು ಮಕ್ಕಳಿಗಾಗಿರಬೇಕೆಂಬ ಸ್ವಾರ್ಥಕ್ಕಾಗಿ, ಮಾಧವಿಯನ್ನು ದಾನ ಮಾಡ ಬೇಕೆಂದು ಒತ್ತಾಯಿಸುತ್ತಾಳೆ. ಆಗ ಅಸಹಾಯಕನಾದ ಯಯಾತಿಯು ಮೌನವಾಗುತ್ತಾನೆ. ದೇವಯಾನಿಯೇ ಗಾಲವನಿಗೆ ಹೇಳಿ ಮಾಧವಿಯನ್ನು ದಾನ ಮಾಡಿದ್ದೇವೆ, ಕರೆದುಕೊಂಡು ಹೋಗೆಂದು ಕಳಿಸಿಬಿಡುತ್ತಾಳೆ.

ಮೂರನೇ ದೃಶ್ಯದಲ್ಲಿ ದೊರೆ ಹರ್ಯಶ್ವರನ ಅರಮನೆಗೆ ಮಾಧವಿಯನ್ನು ಕರೆತಂದ ಗಾಲವ ಮುನಿ, ಎಂಟುನೂರು ಕುದುರೆಗಳನ್ನು ಕೇಳುತ್ತಾನೆ. ಅವನಲ್ಲಿ ಅಷ್ಟೊಂದು ಕುದುರೆಗಳಿಲ್ಲವೆಂದು ತಿಳಿದ ಮೇಲೆ ಇರುವಷ್ಟು ಕುದುರೆಗಳನ್ನು ಮುಂದಿನ ವರ್ಷ ಬಂದು ಹೊಡೆದುಕೊಂಡು ಹೋಗುತ್ತೇನೆ. ಈ ಕುದುರೆಗಳ ಮೌಲ್ಯಕ್ಕಾಗಿ ಮಾಧವಿಯನ್ನು ನಿನಗೆ ಒಂದು ವರ್ಷಕ್ಕಾಗಿ ಮಾರಾಟ ಮಾಡಿದ್ದೇನೆಂದು ಹೇಳುತ್ತಾನೆ. ಆಗ ಮಾಧವಿಯ ಹೃದಯ ಒಡೆದು ಚೂರುಚೂರಾಗುತ್ತದೆ. ಮುದಿರಾಜನಾದ ಹರ್ಯಶ್ವನು ಮಾಧವಿಯನ್ನು ಒಂದು ವರ್ಷ ಅನುಭವಿಸುತ್ತಾನೆ. ಆಗ ಮಾಧವಿಗೆ ಒಂದು ಮಗವೂ ಆಗುತ್ತದೆ.

ನಾಲ್ಕನೇ ದೃಶ್ಯವು ದೀವೋದಾಸನ ಅರಮನೆಯಲ್ಲಿ ನಡೆದಿದೆ. ಗಾಲವನ್ನು ಮತ್ತಿಷ್ಟು ಕುದುರೆಗಳ ಸಲುವಾಗಿ ದೀವೋದಾಸ ಅರಸನಿಗೆ ಒಂದು ವರ್ಷಕ್ಕಾಗಿ ಮಾಧವಿಯನ್ನು ಮಾರಾಟ ಮಾಡುತ್ತಾನೆ. ದೀವೋದಾಸ ಮಾಧವಿಯ ಸೌಂದರ್ಯಕ್ಕೆ ಮರುಳಾಗಿ ಅವಳನ್ನು ಪ್ರೀತಿಸುತ್ತಿರುತ್ತಾನೆ. ಆದರೆ ಮಾಧವಿಯ ಎದೆಯ ತುಂಬ ದುಃಖ ತುಂಬಿಕೊಂಡಿದೆ. ಆ ಅರಮನೆಯಲ್ಲಿ ದಾಸಿಯೊಂದಿಗೆ ಮಾಧವಿಯು ತನ್ನ ಸಂಕಟಗಳನ್ನೆಲ್ಲ ಹೇಳಿಕೊಳ್ಳುತ್ತಾಳೆ. ತಾನು ರಾಜಕುಮಾರಿಯಾಗಿದ್ದರೂ, ಹೆಣ್ಣೆಂಬ ಕಾರಣಕ್ಕಾಗಿ ಮಾರಾಟದ ವಸ್ತುವಾದೆನಲ್ಲಾ ಎಂದು ಪರಿತಪಿಸುತ್ತಾಳೆ, ಗಂಡಿನ ಕ್ರೌರ್ಯ ಕಂಡು ಮರುಗುತ್ತಾಳೆ.

ಐದನೇಯ ದೃಶ್ಯವು ಕಾಡಿನಲ್ಲಿ ನಡೆದಿದೆ. ಬಿಳಿ ಸೀರೆಯುಟ್ಟು ಕಾಡಿನಲ್ಲಿ ಮಾಧವಿ ನಡೆದಿದ್ದಾಳೆ. ಗಾಲವ ಬರುತ್ತಾನೆ. ಈಗ ಮಾಧವಿ ಜರ್ಜರಿತಳಾಗಿದ್ದಾಳೆ. ಒಬ್ಬೊಬ್ಬ ರಾಜನಿಗೆ ಒಂದೊಂದು ಗಂಡು ಮಗುವನ್ನು ಹೆತ್ತು ಕೊಟ್ಟು ಬಂದು ಈಗ ಬರಿಗೈಲಿ ಹತಾಶಳಾಗಿ ನಿಂತಿದ್ದಾಳೆ. ನೀನು ಹೆತ್ತು ಕೊಟ್ಟು ಬಂದ ಮಕ್ಕಳು ಮುಂದಿನ ಚಕ್ರವರ್ತಿಗಳಾಗುತ್ತಾರೆಂದು ಗಾಲವ ಹೇಳಿದ ಕೂಡಲೇ ಮಾಧವಿಗೆ ಸಿಟ್ಟು ಬರುತ್ತದೆ. ಅದು ನನಗೆ ವರವಲ್ಲ, ಶಾಪವೆಂದು ಹೇಳಿದ ಮಾಧವಿಯು ಈ ದೃಶ್ಯದಲ್ಲಿ ಗಾಲವನ ತೀರ್ಮಾನಗಳನ್ನು ಖಂಡಿಸುತ್ತಾಳೆ. ನಿನ್ನನ್ನು ಯಯಾತಿ ದೊರೆಗೆ ಒಪ್ಪಿಸುತ್ತೇನೆಂದು ಗಾಲವ ಹೇಳಿದಾಗ ಮಾಧವಿಗೆ ಮತ್ತಷ್ಟು ಸಿಟ್ಟು ಬರುತ್ತದೆ. “ನಿನ್ನ ಲೆಕ್ಕ ಚುಕ್ತ ಆದಾಗಲೇ, ನಿನ್ನ ನನ್ನ ಸಂಬಂಧ ಮುಗಿಯಿತು. ಯಯಾತಿ ನನ್ನನ್ನು ದಾನ ಮಾಡಿದಾಗಲೇ ನನ್ನ ಆತನ ಸಂಬಂಧ ಮುಗಿಯಿತೆಂದು ಸ್ಪಷ್ಟಪಡಿಸುತ್ತಾಳೆ. “ನಿನ್ನಂಥ ಅಧಮನ ಹೊಲಸು ನಾಲಗೆಯ ಮೇಲೆ ಅದ್ಯಾವ ಮಂತ್ರ ಶಾಸ್ತ್ರಗಳು ವಾಸವಾಗಿವೆಯೋ!” ಎಂದು ಸಿಡಿದೇಳುತ್ತಾಳೆ. ತೊಲಗು ಇಲ್ಲಿಂದ ಎಂದು ಸಿಟ್ಟಿನಿಂದ ಮಾಧವಿ ಪ್ರತಿಭಟಿಸಿದಾಗ ಗಾಲವ ತಲೆತಗ್ಗಿಸಿ ಹೊರಟು ಹೋಗುತ್ತಾನೆ. ಮಾಧವಿ ಪ್ರೇಕ್ಷಕರತ್ತ ಬೆನ್ನು ಮಾಡುತ್ತಾಳೆ. ಅಲ್ಲಿಗೆ ನಾಟಕ ಮುಕ್ತಾಯವಾಗುತ್ತದೆ.

ಮೂರನೇ ದೃಶ್ಯದ 23ನೇ ಪುಟದಲ್ಲಿ ಮಾಧವಿಯ ಎರಡು ಸಂಭಾಷಣೆಗಳು ಒಂದೇ ಕಾಲಕ್ಕೆ ಬಂದಿವೆ. ಮಾಧವಿಯ ಮೊದಲ ಸಂಭಾಷಣೆಯಾದ ಕೂಡಲೇ ಹರ್ಯಶ್ವರರಾಜನು ಮಾಧವಿಯನ್ನು ಕರೆದುಕೊಂಡು ಹೋಗುತ್ತಾನೆ. ಅದೇ ಪುಟದ ಎರಡನೇ ಸಂಭಾಷಣೆಯಲ್ಲಿ ಮಾಧವಿಯ “ಬನ್ನಿ ಕವಿಗಳೇ ಇಂದೇಕೆ ಇಷ್ಟು ತಡ?” ಎಂದು ಕವಿಯನ್ನು ಸ್ವಾಗತಿಸುತ್ತಾಳೆ. ಕವಿಯನ್ನು ಸ್ವಾಗತಿಸುವುದು, ಮತ್ತು ಅವನೊಂದಿಗೆ ಸಂಭಾಷಣೆಯನ್ನು ನಡೆಸುವುದು ಮತ್ತೊಂದು ದೃಶ್ಯದಲ್ಲಿ ಬರಬಹುದಾಗಿತ್ತು. ಒಂದೇ ದೃಶ್ಯದಲ್ಲಿ ಎರಡು ದೃಶ್ಯಗಳ ಪ್ರಸಂಗಗಳು ಸೇರಿಕೊಂಡು ಗೊಂದಲವನ್ನು ಹುಟ್ಟು ಹಾಕಿವೆ.

ಈ ಮೊದಲು ಹೇಳಿದಂತೆ ಯಯಾತಿ ಮಗಳು ಮಾಧವಿಯನ್ನು ಕುರಿತಂತೆ ಕಾದಂಬರಿ-ನಾಟಕಗಳು ಆಧುನಿಕ ಕಾಲಘಟ್ಟದಲ್ಲಿ ಪ್ರಕಟವಾಗಿವೆ. ಅವುಗಳಲ್ಲಿ ಅನುಪಮಾ ನಿರಂಜನ ಅವರ “ಮಾಧವಿ” ಕಾದಂಬರಿ ಮಾಧವಿಯ ಜೀವನ ವೃತ್ತಾಂತವನ್ನೆಲ್ಲ ಹೇಳುತ್ತದೆ. ಈ ಕಾದಂಬರಿಯಲ್ಲಿ ಮಾಧವಿಯ ಪ್ರತಿಭಟನೆ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಈ ಕಾದಂಬರಿಯಲ್ಲಿ ಮಾಧವಿಯನ್ನು ಕೊಂಡುಕೊಂಡ ಮತ್ತೊಬ್ಬ ಅರಸನ ಪ್ರಸಂಗ ಬರುತ್ತದೆ. ಜಯಶ್ರೀಯವರ ಈ ನಾಟಕದಲ್ಲಿ ಆ ಪ್ರಸಂಗವಿಲ್ಲ. ಭೋಜದೇಶದ ಅಧಿಪತಿ ಉಶೀನ ಅರಸನೂ, ಕೂಡ ಮಾಧವಿಯನ್ನು ಗಾಲವನಿಂದ ಕೊಂಡುಕೊಳ್ಳುತ್ತಾನೆ. ಈತನಿಂದಲೂ ಮಾಧವಿಗೆ ಒಂದು ಮಗುವಾಗುತ್ತದೆ. ಗಾಲವನಿಗೆ ಕುದುರೆಗಳನ್ನು ಹಣವನ್ನು ಕೊಟ್ಟು ಮಾಧವಿಯನ್ನು ಕೊಂಡುಕೊಂಡ ಅರಸರಲ್ಲಿ ಮೂವರು ಇದ್ದಾರೆ. ಈ ಮೂರು ಅರಸರಿಂದ ಮಾಧವಿಗೆ ಒಬ್ಬೊಬ್ಬ ರಾಜಕುಮಾರರು ಹುಟ್ಟುತ್ತಾರೆ. ನಾಲ್ಕನೆ ಹಂತದಲ್ಲಿ ಗಾಳವನ್ನು ಮಾಧವಿಯನ್ನು ವಿಶ್ವಾಮಿತ್ರನಿಗೆ ಗುರುಕಾಣಿಕೆಯಾಗಿ ನೀಡುತ್ತಾನೆ. ವಿಶ್ವಾಮಿತ್ರನಿಂದಲೂ ಮಾಧವಿಗೆ ಒಂದು ಮಗುವಾಗುತ್ತದೆ. ಕೊನೆಗೆ ಮಾಧವಿಯ ನಾಲ್ಕೂ ಮಕ್ಕಳನ್ನು ಬಿಟ್ಟು ಗಾಲವನೊಂದಿಗೆ ಹೊರಡುತ್ತಾಳೆ. ಗಾಲವನು ಆಕೆಯನ್ನು ಪ್ರತಿಷ್ಠಾನ ನಗರಕ್ಕೆ ತಂದು ಯಯಾತಿಗೆ ಒಪ್ಪಿಸಿ ಹೊರಟು ಹೋಗುತ್ತಾನೆ. ಆಗ ಯಯಾತಿಯು ಮತ್ತೆ ಮಗಳಿಗೆ ಸ್ವಯಂವರ ಏರ್ಪಡಿಸಲು ಸಿದ್ಧನಾಗುತ್ತಾನೆ. ಇದನ್ನು ಒಪ್ಪದ ಮಾಧವಿಯು ಎಲ್ಲವನ್ನೂ, ಎಲ್ಲರನ್ನೂ ತ್ಯಜಿಸಿ ಹೊರಟು ಹೋಗುತ್ತಾಳೆಂದು ಅನುಪಮಾ ನಿರಂಜನ ಅವರ ಕಾದಂಬರಿಯಲ್ಲಿ ಹೇಳಲಾಗಿದೆ. ಮಾಧವಿಯಿಂದ ಹುಟ್ಟಿದ ನಾಲ್ಕು ಮಕ್ಕಳ ವಿವರ ಹೀಗಿದೆ;

ಹರ್ಯಶ್ವ ಅರಸನ ಮಗ-ವಸುಮಂತ
ದೀವೋದಾಸ ರಾಜನ ಮಗ -ಪ್ರತರ್ದನ
ಉಶೀನ ಅರಸನ ಮಗ-ಶಿಬಿ
ವಿಶ್ವಾಮಿತ್ರ ಮುನಿಯ ಮಗ - ಅಷ್ಟಕ

ಈ ವಿವರಗಳು ಜಯಶ್ರೀಯವರ ಈ ನಾಟಕದಲ್ಲಿಲ್ಲ. ಇದೊಂದು ಚಿಕ್ಕ ನಾಟಕವಾದುದರಿಂದ ಅಂತಹ ವಿವರಗಳನ್ನೆಲ್ಲ ಕೈಬಿಟ್ಟಿರಬಹುದೆಂದೆನಿಸುತ್ತದೆ. ಅನುಪಮಾ ನಿರಂಜನ ಅವರು ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಈ ಕಥಾನಕವನ್ನು ಕಟ್ಟಿಕೊಟ್ಟಿದ್ದಾರೆ. ಇಂತಹ ಪ್ರಯತ್ನ ಉಳಿದ ಲೇಖಕರಲ್ಲಿ ಕಾಣಿಸುವುದಿಲ್ಲ.

ತಿರುಮಲಾಂಬಾ ಅವರಿಂದ 1922ರಲ್ಲಿ ಪ್ರಕಟವಾದ ಮಾಧವಿ ಕುರಿತು ಪ್ರಥಮ ನಾಟಕದಲ್ಲಿ ವಿಶ್ವಾಮಿತ್ರ-ಗಾಲವರ ವೃತ್ತಾಂತಗಳಿಗೆ ಮಹತ್ವ ಕೊಡಲಾಗಿದೆ. ಮನುಷ್ಯನಲ್ಲಿ ಹಠ, ಅಭಿಮಾನ ಒಳ್ಳೆಯ ಕಾರ್ಯಕ್ಕಿರಬೇಕೇ ಹೊರತು ಕೆಟ್ಟ ಕಾರ್ಯಗಳಿಗಲ್ಲ. ಗಾಲವ ತಾನೊಬ್ಬ ಮುನಿಯೆಂಬುದನ್ನು ಮರೆತು, ಯಯಾತಿಯ ಮಗಳು ಮಾಧವಿಯನ್ನು ದಾನ ಪಡೆದು ಮೂವರು ಅರಸರಿಗೆ ಒಂದೊಂದು ವರ್ಷದ ಅವಧಿಗಾಗಿ ಮಾರುತ್ತಾನೆ. ಕೊನೆಯ ಒಂದು ವರ್ಷ ವಿಶ್ವಾಮಿತ್ರನಿಗೆ ಅರ್ಪಿಸುತ್ತಾನೆ. ಇಲ್ಲಿ ತಿರುಮಲಾಂಬಾ ಅವರು ಮಾಧವಿ ವಿಕ್ರಯವಾಗುವ ಪ್ರಸಂಗವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಪುರುಷನ ಕ್ರೌರ್ಯದ ಬಗೆಗೆ ಮೌನವಹಿಸಿದ್ದಾರೆ. ಅದರ ಬದಲು ಸನಾತನ ಮೌಲ್ಯಗಳಿಗೆ ಉತ್ತೇಜನ ಕೊಟ್ಟಿದ್ದಾರೆ. ಮಾಧವಿಗೆ ಇಲ್ಲಿ ಪಿತೃವಾಕ್ಯ ಪರಿಪಾಲನೆಯೊಂದೇ ಮುಖ್ಯವಾಗಿ ಬಿಡುತ್ತದೆ. ಪುರುಷನ ಆಸೆ, ಆಕಾಂಕ್ಷೆ, ಪ್ರತಿಷ್ಠೆಗಳಿಗೆ ಹೆಣ್ಣೊಂದು ಹೇಗೆ ಬಲಿಯಾಯಿತೆಂಬುದನ್ನು ತಿರುಮಲಾಂಬಾ ತನ್ನ ನಾಟಕದಲ್ಲಿ ಪ್ರಸ್ತಾಪಿಸುವುದೇ ಇಲ್ಲ. ತಂದೆಯ ಮಾತಿಗೆ ತಕ್ಕಂತೆ, ಗಾಲವ ಹೇಳಿದಂತೆ ನಾಲ್ಕು ಜನರ ಬಳಿ ನಾಲ್ಕು ವರ್ಷ ಸಂಸಾರ ನಡೆಸಿ ನಾಲ್ಕು ಮಕ್ಕಳನ್ನು ಹೆತ್ತ ಮಾಧವಿ ಗಾಲವನೊಂದಿಗೆ ಅರಮನೆಗೆ ಬಂದಾಗ ಯಯಾತಿ ಸಾವನ್ನಪ್ಪಿರುತ್ತಾನೆ. ತಂದೆ ಇಲ್ಲದ ಅರಮನೆಯನ್ನು ನಿರಾಕರಿಸಿದ ಮಾಧವಿಯು ತಪಸ್ಸು ಕೂಡಲು ಕಾಡಿಗೆ ಹೋದಳೆಂಬ ಕಥಾನಕವು ತಿರುಮಲಾಂಬಾ ಅವರ ನಾಟಕದಲ್ಲಿದೆ. ತಿರುಮಲಾಂಬಾ ಅವರ ನಾಟಕದಲ್ಲಿ ಮಾಧವಿಯು ಅಂದಿನ ಸಮಾಜ ವ್ಯವಸ್ಥೆಯ ಕಟ್ಟುಪಾಡುಗಳಿಗೆ ಬದ್ಧಳಾಗಿದ್ದುದು ಕಂಡುಬರುತ್ತದೆ. ಅವಳಲ್ಲಿ ಪ್ರತಿಭಟನೆಯ ಒಂದು ಸಣ್ಣ ಧ್ವನಿಯೂ ಕೇಳಿಸುವುದಿಲ್ಲ. ಹೀಗಾಗಿ ತಿರುಮಲಾಂಬಾ ಅವರ ನಾಟಕವು ಸಂಪ್ರದಾಯಿಕವಾಗಿದ್ದು ಅಲ್ಲಿ ಹೊಸತನವಿಲ್ಲ ವೆಂಬುದು ಸ್ಪಷ್ಟವಾಗುತ್ತದೆ.

ಲೀಲಾವತಿ ರಾಮಕೃಷ್ಣ ಅವರು ಬರೆದಿರುವ “ನಿತ್ಯಕನ್ಯೆ” ನಾಟಕದಲ್ಲಿ, ನಾಲ್ಕು ಮಕ್ಕಳನ್ನು ಹೆತ್ತನಂತರವೂ ಮಾಧವಿ ಕನ್ಯೆಯಾಗಿಯೇ ಉಳಿಯುವ ವರವನ್ನು ಪಡೆದ ಕಥಾನಕ ಮಹತ್ವ ಪಡೆಯುತ್ತದೆ. ವರವೆಂದು ತಿಳಿದುಕೊಂಡಿದ್ದ ನಿತ್ಯಕನ್ಯತ್ವವೇ ಮಾಧವಿಗೆ ಶಾಪವಾಗಿ ಕಾಡಿತೆಂಬುದನ್ನು ಲೀಲಾವತಿಯವರು ತಮ್ಮ ನಾಟಕದಲ್ಲಿ ಪ್ರತಿಪಾದಿಸಿದ್ದಾರೆ. ಕುದುರೆಗಳಿಗಿಂತಲೂ ಕಡೆಯಾದ ಮಾಧವಿಯ ಬಗೆಗೆ ಈ ನಾಟಕಕಾರ್ತಿಯಲ್ಲಿ ಅನುಕಂಪವಿದೆ. ಈ ಪರಾವಲಂಬನೆಯ ಜೀವನವು ಹೆಣ್ಣಿಗೊಂದು ಶಾಪವಾಗಿದೆಯೆಂದು ಲೀಲಾವತಿಯವರು ತಮ್ಮ ನಾಟಕದಲ್ಲಿ ಹೇಳಿದ್ದಾರೆ. ಪರಾವಲಂಬನೆ ತಪ್ಪಿದಾಗ ಮಾತ್ರ ಹೆಣ್ಣಿನ ಶೋಷಣೆ ನಿಲ್ಲಬಹುದೆಂದು ಪ್ರತಿಪಾದಿಸಿದ್ದಾರೆ. “ರಾಜಕುಮಾರಿಯಾದವಳು ವೇಶ್ಯಗಿಂತಲೂ ಕಡೆಯಾಗಿ ಬದುಕುವ ಸ್ಥಿತಿಬಂತಲ್ಲಾ” ಎಂಬತಹ ಸಂಭಾಷಣೆಗಳು ಪ್ರೇಕ್ಷಕರ ಮನಸ್ಸನ್ನು ಕರಗಿಸುತ್ತವೆ. “ನೀವು ನಿಜವಾಗಿಯೂ ನನ್ನ ತಂದೆಯೇ?” ಎಂದು ಆಕ್ರೋಶ ವ್ಯಕ್ತಪಡಿಸುವ ಮಾಧವಿಯು ಇಲ್ಲಿ ಯಯಾತಿಯ ವಿರುದ್ಧ ಪ್ರತಿಭಟಿಸುತ್ತಾಳೆ. ಇಲ್ಲಿ ಮಾಧವಿ ತನ್ನ ತಂದೆ ಯಯಾತಿಗೆ ಶಾಪಕೊಡುತ್ತಾಳೆ.

ಜಯಶ್ರೀಯವರ “ಮಾಧವಿ” ನಾಟಕವು ಹಿಂದಿನ ನಾಟಕಕಾರ್ತಿಯರ ಕಥಾನಕವನ್ನೇ ಒಳಗೊಂಡಿದ್ದರೂ ಇಲ್ಲಿ ಕವಿಪಾತ್ರ ಹೊಸದಾಗಿ ಬಂದಿದೆ. ಈ ಆಸ್ಥಾನ ಕವಿಗಳು ಹೇಗೆ ರಾಜರ ಹೊಗಳು ಭಟ್ಟರಾಗಿರುತ್ತಾ ರೆಂಬುದನ್ನು ಹೇಳಲಾಗಿದೆ. ಇಂತಹ ಕವಿಗಳು ವಾಸ್ತವದಿಂದ ದೂರವಿದ್ದು, ಇವರು ರಾಜರು ನೀಡುವ ಭೀಕ್ಷೆಗಾಗಿ ಹೇಗೆ ತಮ್ಮ ತನವನ್ನು ಮಾರಿ ಕೊಂಡಿರುತ್ತಾರೆಂಬುದನ್ನು ತಿಳಿಸಿದ್ದಾರೆ. ಹೆಣ್ಣಿನ ಕುರಿತ ಹೇಳಿಕೆ, ಅವಳ ಸೌಂದರ್ಯದ ವರ್ಣನೆ ಕೇವಲ ಕಾವ್ಯದಲ್ಲಿ ವ್ಯಕ್ತವಾಗಿರುತ್ತವೆಯೇ ಹೊರತು ಅವರ ಹೃದಯಗಳಲ್ಲಲ್ಲವೆಂಬ ಸತ್ಯವನ್ನು ಜಯಶ್ರೀ ತಮ್ಮ ನಾಟಕದಲ್ಲಿ ಪ್ರಸ್ತಾಪಿಸಿದ್ದಾರೆ. ಅರಸರು, ಮುನಿಗಳು ದುಷ್ಟರಾಗಿರುತ್ತಾರೆ, ಅವರ ಜತೆಗೆ ಕವಿಯೂ ಭ್ರಷ್ಟನಾಗಿದ್ದಾನೆಂದು ಹೇಳುವುದರ ಮೂಲಕ ಇಡೀ ಪುರುಷ ಪ್ರಧಾನ ವ್ಯವಸ್ಥೆಯನ್ನೇ ಜಯಶ್ರೀ ಇಲ್ಲಿ ಗೇಲಿ ಮಾಡಿದ್ದಾರೆ.

ಜಯಶ್ರೀಯವರ ಈ ನಾಟಕದ ವೈಶಿಷ್ಟ್ಯತೆಯೆಂದರೆ, ತಾಯ್ತನದ ವಿಸ್ತಾರವನ್ನು ಕಟ್ಟಿಕೊಡುವುದಾಗಿದೆ. ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ” ನಾಟಕದಲ್ಲಿಯೂ ಇದೇ ತಾಯ್ತನದ ಪ್ರಾಮುಖ್ಯತೆ ಇದೆ. ಮಾಧವಿಯ ಬಂಡಾಯಗುಣವನ್ನು ಅನುಪಮಾ ನಿರಂಜನ, ಲೀಲಾವತಿ ರಾಮಕೃಷ್ಣ ಅವರೆಲ್ಲಾ ಈಗಾಗಲೇ ಗುರುತಿಸಿದ್ದಾರೆ. ಜಯಶ್ರೀಯವರೂ ಮಾಧವಿಯಲ್ಲಿದ್ದ ಪ್ರತಿಭಟನೆಯನ್ನು ಕೊನೆಯ ದೃಶ್ಯದಲ್ಲಿ ಪ್ರಕಟಿಸಿದ್ದಾರೆ. ಆದರೆ ಮಾಧವಿಯ ತಾಯ್ತನದ ವಿಷಯಕ್ಕೆ ಜಯಶ್ರೀ ಈ ನಾಟಕದಲ್ಲಿ ಮಹತ್ವ ನೀಡಿದ್ದಾರೆ.

“ಹಸುಗೂಸನ್ನು ಬಿಟ್ಟು ಹೋಗಲೇ?
ಬೆಚ್ಚಗೆ ಎದೆಗವಚಿಕೊಳ್ಳುತ್ತಿದ್ದ ನಾನು
ಒಂದೇ ಕ್ಷಣದಲ್ಲಿ ಬರಿಗೈಯಾಗಿ ಬಿಟ್ಟೆನೆ?
ಕೂಸಿಗೆ ಹಾಲುಣಿಸಲು ನಾನು ಬೇಡವೇ?
ದಯಮಾಡಿ ನೀವಾದರೂ ಇವರಿಗೆಲ್ಲ ತಿಳಿಸಿ ಹೇಳಿ...” (ಪು: 27)

ಮಾಧವಿಯು ಹರ್ಯಶ್ವನ ಅರಮನೆಯಿಂದ ಹೋಗುವಾಗ ಈ ಮಾತನ್ನು ಹೇಳುತ್ತಾಳೆ. ಮುದಿರಾಜನಾದ ಹರ್ಯಶ್ವನು ಗಾಲವನಿಗೆ ಕೊಟ್ಟಮಾತಿನಂತೆ ಒಂದು ವರ್ಷ ಮಾಧವಿಯನ್ನನುಭವಿಸಿ ನಂತರ ಕಳಿಸಿಕೊಡುತ್ತಾನೆ. ಮಾಧವಿಯಿಂದ ಮಗುವನ್ನು ಕಸಿದುಕೊಂಡು ಕಳಿಸಿದಾಗ ಹೆತ್ತ ತಾಯಿಗೆ ಎಷ್ಟು ದುಃಖವಾಗ ಬೇಡ? ಇಂತಹ ಶಿಕ್ಷೆ ಯಾವ ತಾಯಿಗೂ ಬೇಡ! ಇದನ್ನೇ ಜಯಶ್ರೀಯವರು ಇಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ದೀವೋದಾಸ ಅರಸನ ಸ್ವತ್ತಾದ ಮಾಧವಿ ಅಲ್ಲಿಯೂ ಒಂದು ವರ್ಷ ಅವನೊಂದಿಗಿದ್ದು, ಒಂದು ಗಂಡು ಮಗುವನ್ನು ಹೆರುತ್ತಾಳೆ. ಅಲ್ಲಿಯೂ ಹಾಗೇ ಹಾಗುತ್ತದೆ. ಮಾಧವಿ ಅಲ್ಲಿಯೂ ಸಂಕಟವನ್ನನುಭವಿಸುತ್ತಾಳೆ. ದೀವೋದಾಸ ಆ ಮಗುವನ್ನು ಕೊಡದೇ ಹಾಗೆಯೇ ಮಾಧವಿಯನ್ನು ಗಾಲವನಿಗೊಪ್ಪಿಸುತ್ತಾನೆ. ಆ ಮಗುವನ್ನು ಬಿಟ್ಟು ಗಾಲವನೊಂದಿಗೆ ಹೊರಟು ನಿಂತಾಗ ಆಕೆಗೆ ತನ್ನ ಮೊದಲಿನ ಮಕ್ಕಳ ನೆನಪಾಗುತ್ತದೆ.

“ಇವನನ್ನು ನೋಡಿದಾಗ, ಇವನು ಅತ್ತಾಗ, ನಕ್ಕಾಗ
ನನ್ನ ಉಳಿದ ಮಕ್ಕಳು ನೆನಪಿಗೆ ಬರುತ್ತಾರೆ
ಇವನಿಗಿಂತ ದೊಡ್ಡವ ಈಗ ನಡೆಯತೊಡಗಿರಬಹುದು
ಅವನಿಗಿಂತ ದೊಡ್ಡವ ಮಾತನಾಡುತ್ತಿರಬಹುದು!
ಈಗಾಗಲೇ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿರಬಹುದು!
ಹೌದು, ಆತ, ನಾನೆಲ್ಲಿ ಇರುವೆ ಅಂತ ಪ್ರಶ್ನಿಸುತ್ತಿರಬಹುದೇ?
ಅಥವಾ ಮತ್ತಿನ್ನಾರನ್ನೋ ‘ಅಮ್ಮಾ’ ಎಂದು ಕರೆಯುತ್ತಿರಬಹುದೇ?” (ಪು:33)

ಮಾಧವಿಯ ಈ ಮಾತುಗಳನ್ನು ಕೇಳಿದ ಪ್ರೇಕ್ಷಕರಿಗೆ ಕಣ್ಣೀರು ಬರುತ್ತವೆ. ಅಷ್ಟೊಂದು ಪರಿಣಾಮಕಾರಿಯಾಗಿ ಇಲ್ಲಿ ಮಾಧವಿ ಪಾತ್ರವನ್ನು ಚಿತ್ರಿಸಲಾಗಿದೆ. ತಾನು ಹೆತ್ತ ಎಲ್ಲ ಗಂಡು ಮಕ್ಕಳನ್ನು ತೊರೆದು ಹೋಗುವಾಗ ಆ ತಾಯಿಗೆ ಹೇಗೆ ಅನಿಸಿರಬೇಕು? ತಾಯ್ತನ ಎಂದರೇನು? ಅದು ಎಷ್ಟೊಂದು ಮಹತ್ವದ್ದು ಎಂಬುದನ್ನು ಈ ನಾಟಕ ಹೇಳುತ್ತದೆ.

ಜಯಶ್ರೀಯವರು ಕವಿಯಾಗಿರುವುದರಿಂದ ಅವರ ಈ ನಾಟಕದಲ್ಲಿ ಬರುವ ಅನೇಕ ಸಂಭಾಷಣೆಗಳು ಕಾವ್ಯಾತ್ಮಕವಾಗಿವೆ. ಅವುಗಳಲ್ಲಿ ಕೆಲವನ್ನಿಲ್ಲಿ ನೋಡಬಹುದಾಗಿದೆ.

1. ಕೇದಿಗೆ ಬನದೊಳಗಿನಿಂದ ತಿಳಿಗಾಳಿ ಸುಳಿದ ಹಾಗೆ (ಪು:6)
2.ವೈಯಾರದ ಆಕೆಯ ನಡಿಗೆಗೆ ಹೂಬಳ್ಳಿಗಳು ಗಾಳಿಗೆ ವಾಲುವುದನ್ನು ನಿಲ್ಲಿಸಿ ಬಿಲ್ಲಿನಂತೆ ಬಾಗುತ್ತವೆ. (ಪು:6)
3.ನೀನು ನನ್ನ ಜೀವನದ ಕವನ! ನನ್ನ ಒಲವಿನ ಕಾವ್ಯ ನೀನು! (ಪು:28)
4.ಎಲ್ಲ ದುಃಖಗಳಿಂದ ನನ್ನ ತನುವು ಕೊಚ್ಚಿಕೊಂಡು ಹೋಗಿದೆ ದಯಮಾಡಿ ಯಾವ ಪ್ರತಿಮೆಗಳಿಂದಲೂ ನನಗೆ ಬಣ್ಣ ಕೊಡುವ ವ್ಯಥ್ರ್ಯ ಪ್ರಯತ್ನ ಬೇಡ. (ಪು:28)
5.ದಿನಕ್ಕೊಂದು ಹೊಸ ಒಡವೆಯನ್ನು ತೊಡಿಸುವಾಗ ಸತ್ತ ಹೃದಯದ ಮೇಲಿನ ಈ ಗೋರಿಗೆ ಅಲಂಕರಿಸುತ್ತಿದ್ದಾನೆನಿಸುತ್ತದೆ. (ಪು:31)
6.ಎಲ್ಲ ಸ್ಪರ್ಷಗಳನ್ನು ಮೀರಿರುವೆನಾನು ಯಾವ ಸ್ಪರ್ಪದಿಂದಲೂ ಪುಳಕಗೊಳ್ಳಲಾರೆ. (ಪು:32)
7.ಈ ಉತ್ತರಗಳೇ ಹಾಗೆ ಅರ್ಥದ ತರ್ಕಕ್ಕೆ ಸಿಗೋದೇ ಇಲ್ಲ. (ಪು:32)
8.ದೀಪಕ್ಕೂ ದಿಕ್ಕಿಲ್ಲದ ಕೌಡಲ್ಲಿ ಕೂತಿದ್ದೀಯಲ್ಲ ನನ್ನೊಡನೆ ಒಮ್ಮೆ ಮಾತನಾಡು (ಪು:34)
9.ಗೋರಿಯೊಂದಕ್ಕೆ ರೇಶಿಮೆಯ ಬಟ್ಟೆತೊಡಿಸಿ ರತ್ನವಜ್ರಗಳಿಂದ ಅಲಂಕರಿಸಿ ನಿಲ್ಲಿಸಿದಂತೆನಿಸಿತು. (ಪು:38)
10 ಈಗ ಪ್ರಶ್ನೆಯೆಂಬ ದೊಡ್ಡ ದಿಕ್ಕಿಲ್ಲದ ಬಯಲಲ್ಲಿ ನಿಂತಿದ್ದೇನೆ. (ಪು:40)

ಇಂತಹ ಅನೇಕ ಕಾವ್ಯಾತ್ಮಕ ಹಾಗೂ ಅರ್ಥಗರ್ಭಿತ ನುಡಿಗಳು ಈ ನಾಟಕದ ತುಂಬೆಲ್ಲ ತುಂಬಿಕೊಂಡಿವೆ. ಜಯಶ್ರೀಯವರ ಕಾವ್ಯದ ಶಕ್ತಿ ಎಂತಹದೆಂಬುದು ಈ ನಾಟಕದಲ್ಲಿ ಪ್ರಕಟವಾಗಿದೆ. ಕೊನೆಯದಾದ ಐದನೇ ದೃಶ್ಯದಲ್ಲಿ ಗಾಲವನನ್ನು ಮಾಧವಿ ತರಾಟೆಗೆ ತೆಗೆದುಕೊಳ್ಳುತ್ತಾಳೆ. ತಾನು ಈ ನಾಲ್ಕು ವರ್ಷಗಳಲ್ಲಿ ಅನುಭವಿಸಿದ ಸಂಕಟಗಳಿಗೆ ಅಪ್ಪನೇ ಕಾರಣವೆಂದು ನೇರವಾಗಿ ಹೇಳುತ್ತಾಳೆ. ಕೊನೆಗೆ ವಿಶ್ವಾಮಿತ್ರನಿಗೆ ಹುಟ್ಟಿದ ತನ್ನ ಮಗುವನ್ನು ನೋಡಿಕೊಂಡು ಅಲ್ಲೇ ಆಶ್ರಮದಲ್ಲಿ ಗುರು ಪತ್ನಿಯಾಗಿ ಸೇವೆ ಮಾಡುತ್ತಿದ್ದೆ, ಅದಕ್ಕೂ ನೀವು ಒಪ್ಪಲಿಲ್ಲವೆಂದು ಪರಿತಪಿಸುತ್ತಾಳೆ. ನನ್ನನ್ನು ಏನೆಂದು ಕೊಂಡಿರುವೆಯೋ? ಎಂದು ಸಿಟ್ಟಿಗೆ ಬರುತ್ತಾಳೆ. “ನೀನೊಬ್ಬ ಮನುಷ್ಯನಾ? ಎಷ್ಟು ದೋಚಿದರೂ ಸಾಲದೆ ಮತ್ತೆ ಮತ್ತೆ ದುರಾಶೆಯಿಂದ ನನ್ನನ್ನು ಮಾರಿ ಹಣಸಂಪಾದಿಸಿದಿಯಲ್ಲ, ನಿನ್ನಂಥ ಅಧಮನ ಹೊಲಸುನಾಲಗೆಯ ಮೇಲೆ ಅದ್ಯಾವ ಮಂತ್ರ ಶಾಸ್ತ್ರಗಳು ವಾಸವಾಗಿವೆಯೋ? ನನ್ನ ದಾರಿಗೆ ಅಡ್ಡಬರಬೇಡ ತೊಲಗು.” ಎಂದು ಕೊನೆಗೆ ಪ್ರೇಕ್ಷಕರತ್ತ ಬೆನ್ನು ಮಾಡಿ ನಿಲುವುದು ತುಂಬ ಪರಿಣಾಮಕಾರಿಯಾಗಿದೆ. ಮುನಿಗಳು-ರಾಜರು-ಆಸ್ಥಾನಕವಿಗಳು ಎಲ್ಲರೂ ಮಾಧವಿಗೆ ಮೋಸ ಮಾಡುತ್ತಾರೆ. ಹೀಗಾಗಿ, ಈ ಅಸಮಾನತೆಯ ವ್ಯವಸ್ಥೆಯ ವಿರುದ್ಧ ಮಾಧವಿ ಪ್ರತಿಭಟಿಸಿದ್ದಾಳೆ. ಹೀಗೆ ಜಯಶ್ರೀಯವರ ನಾಟಕವು ತಾಯ್ತನದ ಅಭಿವ್ಯಕ್ತಿಯ ಕಾರಣದಿಂದ ವಿಶಿಷ್ಟವಾಗಿದೆ. 

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...