ಜಾತಿಯನ್ನು ಮೀರಿದ ಮಾನವೀಯತೆ


"ಮನುಷ್ಯನ ಹಪಾಹಪಿತನವೊಂದು ಹೆಚ್ಚಿದಾಗ ಅವನದ್ದೆ ಪರಿಸರವನ್ನು ನಾಶ ಮಾಡುವ ಹಂತಕ್ಕೆ ಇಳಿಯುವುದು ಒಂದು ಊರಿಗೆ ಸಂಬಂಧಿಸಿದ ವಿಷಯವಾಗಿ ಕಾಣಿಸುವುದಿಲ್ಲ. ಅದು ನಮ್ಮ ನಡುವೆ ಇಂದು ಏನಾಗಿದೆಯೋ, ಏನಾಗುತ್ತಿದೆಯೋ ಅದರ ಯಥಾವತ್ ರೂಪದಂತೆ ಕಾಣಿಸುತ್ತದೆ," ಎನ್ನುತ್ತಾರೆ ದೀಪ್ತಿ ಭದ್ರಾವತಿ. ಅವರು ಭಾರತಿ ಹೆಗಡೆ ಅವರ ‘ಉಪ್ಪಾಗೆ ಹರಳು’ ಕೃತಿ ಕುರಿತು ಬರೆದ ವಿಮರ್ಶೆ.

ಲೇಖಕಿ "ಭಾರತಿ ಹೆಗಡೆ" ರಚಿಸಿರುವ ಈ ಕಾದಂಬರಿ, ಕಾಡು ಅದರೊಳಗಿನ ಬದುಕು, ಪ್ರಕೃತಿ ಮತ್ತು ಮನುಷ್ಯರ ನಡುವಣ ನಂಟುಗಳನ್ನು ಬಹಳ ಸೂಕ್ಷ್ಮವಾಗಿ ಒಳಗೊಳ್ಳುತ್ತ ಹೋಗುತ್ತದೆ. ಉಪ್ಪಾಗೆ ಹಣ್ಣಿನ ಕಾರಣದಿಂದಲೇ " ಉಪ್ಗಿ" ಎನ್ನುವ ಹೆಸರು ಪಡೆದ ಊರಿನ ಸುತ್ತಮುತ್ತ ನಡೆಯುವ ಇಲ್ಲಿನ ವಿದ್ಯಮಾನಗಳು. ಆ ಊರಿನ‌ ಆಚೆಗೆ ಹರಡಿಕೊಂಡಿರುವ ನಮ್ಮ ಬದುಕಿನ ಕನ್ನಡಿಯಂತೆ ಕಾಣಿಸುತ್ತದೆ.

ಬಡತನದ ಕಾರಣಕ್ಕೆ ಹಣ್ಣಿನ ಬೀಜದ ತುಪ್ಪವನ್ನು ಮಾಡಿಟ್ಟುಕೊಳ್ಳುವ ತರಾತುರಿಯಲ್ಲಿ ಹೆಣ್ಣುಮಕ್ಕಳು ಹಣ್ಣನ್ನು ಹುಡುಕಿ ಹೊರಡುವ ಸಂತೋಷದೊಂದಿಗೆ ಆರಂಭವಾಗುವ ಈ ಕೃತಿ, ಆ ನಂತರ ಒಂದು ಇಡೀ ಕಾಲಘಟ್ಟದ ಬದಲಾವಣೆಯನ್ನು ನೈಜವಾಗಿ ಹೇಳುತ್ತ ಹೋಗುತ್ತದೆ. ವಿಷಾಧದ ಎಳೆಗಳನ್ನು ಮೀಟುತ್ತದೆ. ಮನುಷ್ಯ ಬದುಕಿನ ಎರಡೂ ಮಗ್ಗುಲುಗಳನ್ನು ಅಳೆದು ತೂಗಿ ಅಂಗೈಯ್ಯಲ್ಲಿಟ್ಟು ತೋರಿಸುತ್ತದೆ. ಕೇವಲ ಹೆಣ್ಣುಮಕ್ಕಳ ಆಪತ್ಕಾಲದ ಈ ಹಣ್ಣು ಆ ನಂತರ ಪಡೆದುಕೊಳ್ಳಲು ಮಹತ್ವದಿಂದಾಗಿ ಇಡೀ ಪರಿಸರದಲ್ಲಿ ಆಗುವ ಸ್ಥಿತ್ಯಂತರಗಳು. ಬದಲಾಗುವ ಮನಸ್ಥಿತಿಗಳು. ಹುಟ್ಡಿಕೊಳ್ಳುವ ಮತ್ಸರಗಳು. ಸಜ್ಜನಿಕೆಯ ಮುಖವಾಡಗಳು. ತಕ್ಷಣಕ್ಕೆ ಬದಲಾಗಿಬಿಡುವ ಮನೋಧರ್ಮಗಳು. ಜಾತಿ ರಾಜಕಾರಣ ಓದುಗರನ್ನು ಅಲುಗಾಡಿಸುತ್ತವೆ.

ಮನುಷ್ಯನ ಹಪಾಹಪಿತನವೊಂದು ಹೆಚ್ಚಿದಾಗ ಅವನದ್ದೆ ಪರಿಸರವನ್ನು ನಾಶ ಮಾಡುವ ಹಂತಕ್ಕೆ ಇಳಿಯುವುದು ಒಂದು ಊರಿಗೆ ಸಂಬಂಧಿಸಿದ ವಿಷಯವಾಗಿ ಕಾಣಿಸುವುದಿಲ್ಲ. ಅದು ನಮ್ಮ ನಡುವೆ ಇಂದು ಏನಾಗಿದೆಯೋ, ಏನಾಗುತ್ತಿದೆಯೋ ಅದರ ಯಥಾವತ್ ರೂಪದಂತೆ ಕಾಣಿಸುತ್ತದೆ.

ಇಲ್ಲಿ ಬರುವ ಜಾನಕಿ, ಬಂಗಾರತ್ತೆ, ತಿಪ್ಪ ಈ ಜೀವಗಳು ನೋವನ್ನೇ ತಿಂದರು ಆ ನಂತರದಲ್ಲಿ ಅದನ್ನು ಮೀರುತ್ತ ಜೀವನ ಸಾಫಲ್ಯತೆಯ ಕುರುಹುಗಳಂತೆ ಗೋಚರಿಸುತ್ತವೆ‌.

ಜಾತಿಯನ್ನು ಮೀರಿದ ಮಾನವೀಯತೆ. ಎಲ್ಲಿಯೂ ಸೀಮಿತಗೊಳ್ಳದ ಅಗಾಧ ಜೀವನಪ್ರೀತಿ ಈ ಕಾದಂಬರಿಯ ಮೂಲಸೆಲೆ. ಯಾವುದೇ ಹಂತದಲ್ಲಿಯೂ ಮುಂದೆ ಏನಾಗಬಹುದು ಎನ್ನುವ ಗುಟ್ಟು ಬಿಡದ ಈ ಕೃತಿ ಸಶಕ್ತ ಭಾಷೆ, ಅಚ್ಚುಕಟ್ಟಾದ ನಿರೂಪಣೆ. ಮಲೆನಾಡಿನ ದಟ್ಟ ಅನುಭವವನ್ನು ಎದೆಗೆ ಇಳಿಸುತ್ತದೆ. ಕಾಡಿನ ನಿಗೂಢ ಮೌನದೊಳಗೆ ಅಡಗಿರುವ ನೂರಾರು ಸತ್ಯಗಳ ಹೆಕ್ಕಿ ತೆಗೆಯುವ ಇಲ್ಲಿನ‌ ಕತಾ ಜಗತ್ತು ಅಚ್ಚರಿಯನ್ನು ನಿರಂತರವಾಗಿ ಉಳಿಸುತ್ತದೆ.

ಪರಿಸರಕ್ಕೆ ತಕ್ಕುದಾದ ಹವ್ಯಕ ಭಾಷೆಯ ಸೊಗಡು ಎದ್ದು ಕಾಣಿಸುತ್ತದೆ. ಇಂತಹ ಕತಾಲೋಕವನ್ನು ಕಟ್ಟುವಾಗ ಪಾತ್ರಗಳು ಸ್ಥಳೀಯ ಭಾಷೆಗಳ ಬಳಕೆಯನ್ನು ಬಯಸುತ್ತವೆ. ಮತ್ತು ಅವುಗಳು ಕೃತಿಯ ಸೌಂದರ್ಯ ಹೆಚ್ಚಿಸುತ್ತವೆ ಕೂಡ.

ಹೀಗೆ ಉಪ್ಪಿಗೆಯ ಹಣ್ಣಿನ‌ ಬೀಜವೊಂದು ಚಿಗುರಿ ಮರವಾಗಿ ನಂಬಿದವರ ಬದುಕಿನೊಳಗೆ ಕಸುವು ನೀಡುವ ಹಾಗೆ, ಕತೆಯೊಳಗೊಂದು ಕತೆ ನೇಯುತ್ತ ಒಂದು ಕತೆಗಿಂತಲೂ ಮತ್ತೊಂದು ಕತೆ ಭಿನ್ನವಾಗುತ್ತ ಆ ನಂತರ ಅವರೆಲ್ಲರೂ ಒಂದೇ ಆಗಿ ನೆಲೆ ನಿಲ್ಲುತ್ತದೆ ಅದೆಷ್ಟೋ ದಿನಗಳವರೆಗೆ ಬಿಡದೇ ಕಾಡುತ್ತದೆ. ಇಂತಹ ಒಳ್ಳೆಯ ಕೃತಿಗಾಗಿ ಬಹುರೂಪಿಗೆ ಮತ್ತು ಭಾರತಿ ಹೆಗಡೆಯವರಿಗೆ ಧನ್ಯವಾದ.

MORE FEATURES

ಯಮನೂರ್ ಸಾಹೇಬ ಎಂಬ ಭವರೋಗದ ಬರಹಗಳ ಹಕೀಮ್

23-04-2025 ಬೆಂಗಳೂರು

"ಏನಿಲ್ಲವೆಂದರೂ ಇಲ್ಲಿಯವರೆಗೆ ಬೆಣ್ಣೆಹಳ್ಳಿ ಯಮನೂರ ಸಾಹೇಬ ಅವರು ಮೂರು ಸಾವಿರಕ್ಕೂ ಹೆಚ್ಚು ನಾಟಕಗಳ ರಂಗಸಂಗೀತಕ್ಕ...

ವಿಡಂಬನ ಸಾಹಿತ್ಯಕ್ಕೆ ಒಂದು ಕೊಡುಗೆ

23-04-2025 ಬೆಂಗಳೂರು

"ಎಚ್. ಬಿ. ಎಲ್. ರಾಯರು ಛಂದೋಬದ್ಧವಾಗಿ ಪದ್ಯಗಳನ್ನು ಹೊಸೆಯಬಲ್ಲ ಅಪೂರ್ವ ವ್ಯಕ್ತಿ. ಅಪೂರ್ವ ಯಾಕೆಂದರೆ ಈ ಕಾಲದ ಸ...

ಈ ಕತೆಯಲ್ಲಿ ಎರಡು ಅಪರೂಪದ ತೈಲ ಚಿತ್ರಗಳ ವಿವರಣೆ ಇವೆ

22-04-2025 ಬೆಂಗಳೂರು

“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...