Date: 21-05-2022
Location: ಬೆಂಗಳೂರು
'ಕನ್ನಡ ಲಿಪಿಯು ವಯಕ್ತಿಕ ಬಳಕೆಯ ಹಂತದಿಂದ, ವಿದ್ವತ್ತಿನ ಚಟುವಟಿಕೆಯ ಕಲಿಕಾ ಪ್ರಯತ್ನಗಳಿಂದ ಆಳ್ವಿಕೆಯ ವಲಯಕ್ಕೆ ಬೆಳೆದುಬಂದಿರಬೇಕು. ಆರಂಬಕಾಲದ ಆಳ್ವಿಕೆಯ ಬಗೆಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದರಿಂದ ಕನ್ನಡ ಬಾಶೆ ಮತ್ತು ಲಿಪಿಯ ಮೊದಲ ಹೆಜ್ಜೆಗಳ ತಿಳುವಳಿಕೆ ಪಡೆಯುವುದು ಬಹುಕಶ್ಟ' ಎನ್ನುತ್ತಾರೆ ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳಕೆಯ ಕುರಿತು ವಿವರಿಸಿದ್ದಾರೆ.
ಸದ್ಯ ದೊರೆತಿರುವ ಹಲ್ಮಿಡಿ ಶಾಸನದಿಂದ ಇಂದಿನವರೆಗೆ ಕನ್ನಡ ಲಿಪಿ ಹಲವು ಬಳುಕುಗಳಲ್ಲಿ ಬಿನ್ನಾಣದೊಂದಿಗೆ ಬಳಕೆಯಾಗುತ್ತಾ ಬಂದಿದೆ. ಲಿಪಿಯ ಅಳವಡಿಕೆ ಕ್ರಿಸ್ತಶಕದ ಎಡಬಲದಲ್ಲಿ ಆದರೂ ಸಹಜವಾಗಿಯೆ ಅದರ ಬಳಕೆ ಪ್ರಾಯೋಗಿಕ ಹಂತವನ್ನು ದಾಟಿ ಮೊದಮೊದಲಲ್ಲಿ ಎಲ್ಲೆಲ್ಲಿ ಹೇಗೆಲ್ಲ ಬಳಕೆಗೊಂಡಿದ್ದಿತು ಎಂದು ಹೇಳುವುದಕ್ಕೆ ಸದ್ಯ ಆದಾರಗಳು ಸಿಕ್ಕಿಲ್ಲ ಮತ್ತು ಸಿಗುವುದು ಸುಲಬವೂ ಅಲ್ಲ. ಕಲ್ಬರಹಗಳನ್ನು ಮಾಡುವಾಗ ಅಂತಿಮ ಬರಹವನ್ನು ಸಿದ್ದಪಡಿಸಿಕೊಂಡಾಗ ಪ್ರಾಯೋಗಿಕವಾಗಿ ಬರೆದ ಬರಹವನ್ನು ಅಳಿಸಿಹಾಕಲಾಗುತ್ತಿತ್ತು ಎಂಬ ತಿಳುವಳಿಕೆ ಇದೆ. ಅಲ್ಲದೆ, ಮರ ಮೊದಲಾದವುಗಳ ಮೇಲೆ ಬರೆದವು ಸಹಜವಾಗಿ ಇಶ್ಟು ಕಾಲ ಉಳಿಯಲಾರವು. ಶಾತವಾಹನರ ಕಲ್ಬರಹಗಳಲ್ಲಿ ಳ್ ದ್ವನಿಗೆ ಲಿಪಿಯು ಸಿಗುವುದು ಕನ್ನಡದ ದ್ವನಿಯೊಂದಕ್ಕೆ ಲಿಪಿಯನ್ನ ಬೆಳೆಸಿದ್ದು ಎನಿಸುತ್ತದೆ. ಇದು ಪಾಲಿಯ ಬರವಣಿಗೆಗೆ ಮಾಡಿಕೊಂಡ ಮೊದಲ ವ್ಯತ್ಯಾಸ ಎಂದು ಹೇಳಬಹುದೊ, ಕನ್ನಡಕ್ಕೆ ಅದಾಗಲೆ ಲಿಪಿಯನ್ನು ಅಳವಡಿಸಲಾಗಿದ್ದಿತು ಎಂದು ಹೇಳಬಹುದೊ ಎಂಬುದರ ಬಗೆಗೆ ಹೆಚ್ಚು ತಿಳುವಳಿಕೆ ಸದ್ಯಕ್ಕೆ ಕಶ್ಟ.
ಕನ್ನಡ ಲಿಪಿಯು ವಯಕ್ತಿಕ ಬಳಕೆಯ ಹಂತದಿಂದ, ವಿದ್ವತ್ತಿನ ಚಟುವಟಿಕೆಯ ಕಲಿಕಾ ಪ್ರಯತ್ನಗಳಿಂದ ಆಳ್ವಿಕೆಯ ವಲಯಕ್ಕೆ ಬೆಳೆದುಬಂದಿರಬೇಕು. ಆರಂಬಕಾಲದ ಆಳ್ವಿಕೆಯ ಬಗೆಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದರಿಂದ ಕನ್ನಡ ಬಾಶೆ ಮತ್ತು ಲಿಪಿಯ ಮೊದಲ ಹೆಜ್ಜೆಗಳ ತಿಳುವಳಿಕೆ ಪಡೆಯುವುದು ಬಹುಕಶ್ಟ. ಶಾತವಾಹನರ ಕಾಲದ ಕೊನೆಕೊನೆಗೆ ಇಲ್ಲವೆ ಶಾತವಾಹನರ ಬಳಿಕ ಅದಿಕಾರವನ್ನು ಪಡೆದ ಕದಂಬರ ಕಾಲಕ್ಕೆ ಕನ್ನಡದ ಲಿಪಿಗಳು ಕನ್ನಡ ಬಾಶೆಗೆ ಕಲ್ಲಿನ ಮೇಲೆ ಮೂಡತೊಡಗಿರಬೇಕು. ಇಲ್ಲಿ ಗಮನಿಸಬೇಕಾದ ವಿಶಯವೆಂದರೆ ಕನ್ನಡಕ್ಕೆ ಲಿಪಿ ಬೆಳೆದ ಪ್ರದೇಶವೆಂದ ಕನಗನಹಳ್ಳಿ ಪರಿಸರ, ಈಗ ತಿಳಿದಿರುವ ಹಳೆಯ ಶಾಸನವನ್ನು ಹಾಕಿಸಿರುವ ಕದಂಬರ ರಾಜದಾನಿ ಬನವಾಸಿ ಮತ್ತು ಆ ಶಾಸನ ದೊರಕಿರುವ ಹಲ್ಮಿಡಿ ಇವುಗಳ ನಡುವೆ ಇರುವ ಬೂಗೋಳಿಕ ಅಂತರ. ಒಂದು ಲಿಪಿ ಒಂದು ಪರಿಸರದಿಂದ ಇನ್ನೊಂದು ಪರಿಸರಕ್ಕೆ, ವಿದ್ವತ್ತಿನ ಕ್ಶೇತ್ರದಿಂದ ರಾಜಾಸ್ತಾನಕ್ಕೆ ಪಯಣ ಬೆಳೆಸುವುದು ಇವೆಲ್ಲ ಬಹು ಮಹತ್ವದ ವಿಚಾರಗಳು. ಶಾತವಾಹನರು ಪ್ರಾಕ್ರುತ ಬಾಶೆಗೆ ಬಳಸಿದ ಲಿಪಿಯನ್ನು ಕದಂಬರು ಸಂಸ್ಕ್ರುತಕ್ಕೆ ಬಳಸಿದರು. ಇದಕ್ಕೆ ಬಹು ಮಹತ್ವದ ಮತಪಂತಗಳ ಹಿನ್ನೆಲೆಯನ್ನು ಮಾತನಾಡಲಾಗುತ್ತದೆ. ಅಂದರೆ, ಒಂದು ಬಾಶೆ ಇಲ್ಲವೆ ಲಿಪಿಯ ಪ್ರಯೋಗ ಕೇವಲ ಆಕಸ್ಮಿಕ ಬೆಳವಣಿಗೆ ಆಗಿರಲು ಸಾದ್ಯವಿಲ್ಲ. ಹಾಗಾದರೆ, ಕನಗನಹಳ್ಳಿಯಿಂದ ಬನವಾಸಿಗೆ, ಬನವಾಸಿಯಿಂದ ಹಲ್ಮಿಡಿಗೆ ನಡೆದ ಲಿಪಿಯ ಪಯಣ ಸರಳದ್ದೆಂದೆನಲು ಆಗದು.
ಹೀಗೆ ಶುರುವಾದ ಕನ್ನಡ ಲಿಪಿಯ ಬಳಕೆ ಕಾಲಾಂತರದಲ್ಲಿ ಹಲವು ಬಳುಕುಗಳಲ್ಲಿ ಸುಳಿದು ಬರುತ್ತಿದೆ. ಮೊದಮೊದಲು ಕನ್ನಡ ದ್ವನಿವಿಗ್ನಾನದ ಶೋದದಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಸಹಜವಾಗಿ ಕನ್ನಡ ಬಾಶೆಯನ್ನು ಬರೆಯುವುದಕ್ಕೆ ಬಳಸಲಾಯಿತು. ಮುಂದೆ ಈ ಲಿಪಿಯನ್ನು ಹಲವು ಬಾಶೆಗಳಿಗೆ ಬಳಸಿದೆ. ಪ್ರಾಕ್ರುತ ಮತ್ತು ಸಂಸ್ಕ್ರುತ ಬಾಶೆಗಳನ್ನು ಬರೆಯುವುದಕ್ಕೆ ಬಹುಕಾಲ ಕನ್ನಡ ಲಿಪಿಯನ್ನು ಬಳಸಲಾಗುತ್ತಿತ್ತು. ಪ್ರಾಕ್ರುತ ಮತ್ತು ಸಂಸ್ಕ್ರುತ ಶಾಸನಗಳಲ್ಲಿ ಮತ್ತು ಸಾಹಿತ್ಯ, ಶಾಸ್ತ್ರ ಕ್ರುತಿಗಳಲ್ಲಿ ಕನ್ನಡ ಲಿಪಿಯ ಬಳಕೆ ಆಗಿದೆ. ಇತ್ತೀಚಿನವರೆಗೂ ಈ ಬಾಶೆಗಳನ್ನು ಬರೆಯುವುದಕ್ಕೆ ಕನ್ನಡ ಲಿಪಿಯ ಬಳಕೆ ಚಾಲ್ತಿಯಲ್ಲಿದೆ.
ತೆಲುಗು ಬಾಶೆಯನ್ನಾಡುವ ಪ್ರದೇಶವನ್ನು ಬಹುಕಾಲ ಕನ್ನಡ ಮಾತಾಡುವ ರಾಜಮನೆತನಗಳು ತಮ್ಮ ಸುಪರ‍್ದಿಯಲ್ಲಿ ಇಟ್ಟುಕೊಂಡಿದ್ದವು. ಹಾಗಾಗಿ ತೆಲುಗು ಬಾಶೆಯನ್ನು ಬರೆಯುವುದಕ್ಕೆ ಕನ್ನಡ ಲಿಪಿಯ ಬಳಕೆ ಹೆಚ್ಚೂಕಡಿಮೆ ವಿಜಯನಗರದ ಕಾಲದವರೆಗೆ ಇದ್ದಿತು. ಆನಂತರ ತೆಲುಗು ಲಿಪಿ ಕನ್ನಡದಿಂದ ಬಿನ್ನವಾಗುತ್ತಾ ಇಂದಿನ ಸ್ತಿತಿಗೆ ಬೆಳೆದಿದೆ. ಇವುಗಳ ಹೊರತಾಗಿ ಬಿನ್ನ ಪರಿಸರ ಮತ್ತು ಸಂದರ‍್ಬಗಳಲ್ಲಿ ಕನ್ನಡ ಲಿಪಿಯನ್ನು ಬೇರೆ ಬೇರೆ ಬಾಶೆಗಳಿಗೆ ಬಳಸಲಾಗಿದೆ. ತಮಿಳು, ಮರಾಟಿ, ಮಲಯಾಳಂ, ಅರಾಬಿಕ್, ಪರ‍್ಶಿಯನ್, ಉರ‍್ದು ಮೊದಲಾದ ಬೇರೆ ಬೇರೆ ಬಾಶೆಗಳನ್ನು ಕನ್ನಡ ಲಿಪಿಯಲ್ಲಿ ಬರೆದಿರುವುದನ್ನು ಅಲ್ಲಲ್ಲಿ ಕಾಣಬಹುದು.
ಆದುನಿಕ ಕಾಲದಲ್ಲಿ ಕನ್ನಡ ಲಿಪಿಯ ಬಳಕೆ ಇನ್ನೂ ವಿಸ್ತರಗೊಳ್ಳುತ್ತದೆ. ತುಳು, ಕೊಂಕಣಿ, ಲಂಬಾಣಿ ಮೊದಲಾದ ಕರ‍್ನಾಟಕದ ಮಹತ್ವದ ಬಾಶೆಗಳು ಕನ್ನಡ ಲಿಪಿಯನ್ನು ಬಳಸುತ್ತಿವೆ. ಈ ಬಾಶೆಗಳಲ್ಲಿ ಇಂದು ಸಾಕಶ್ಟು ಸಾಹಿತ್ಯ, ಸಾಮಾಜಿಕ ಜಾಲತಾಣಗಳಲ್ಲಿನ ಬರಹ ಕಂಡುಬರುತ್ತದೆ. ಕರ‍್ನಾಟಕದ ಇನ್ನಿತರ ಸಣ್ಣಸಣ್ಣ ಬಾಶೆಗಳಿಗೆ ಲಿಪಿ ಅಳವಡಿಸುವ ಯೋಚನೆಯಲ್ಲಿ ಕನ್ನಡವನ್ನು ಬಳಸುವ ವಿಚಾರ ಸಹಜವಾಗಿ ಇದೆ.
ಕನ್ನಡ ಲಿಪಿರೂಪದ ಕುರಿತು ಒಂದು ಅಂಶವನ್ನೂ ಹೇಳಬಹುದು. ಕಾಲಾಂತರದಲ್ಲಿ ಕನ್ನಡ ಲಿಪಿರೂಪಗಳು ನಿರಂತರ ಬದಲಾಗುತ್ತಾ ಬರುತ್ತಿವೆ. ಶಾಸನಗಳಲ್ಲಿ ಲಿಪಿರೂಪಗಳು ಕ್ರಮಾನುಗತವಾಗಿ ಬೆಳೆದಿರುವುದನ್ನು ಹಲವೆಡೆ ಪಟ್ಟಿ ಮಾಡಿ ತೋರಿಸಿದೆ. ಇದಲ್ಲದೆ ಕಾಲಾಂತರದ ಬೆಳವಣಿಗೆಯು ಕನ್ನಡ ಬಳಕೆಯಲ್ಲಿರುವ ವಿವಿದ ಪ್ರದೇಶಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ಬೆಳೆಸಿಕೊಂಡಿರುವುದು ಗಮನೀಯ. ಉತ್ತರ ಕರ‍್ನಾಟಕದ, ದಕ್ಶಿಣ ಕರ‍್ನಾಟಕದ, ಕರಾವಳಿ ಬಾಗದ, ತಮಿಳುನಾಡಿನ ಹೀಗೆ ವಿವಿದ ಪ್ರದೇಶಗಳಲ್ಲಿ ಲಿಪಿರೂಪಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬರುತ್ತವೆ. ಈ ವ್ಯತ್ಯಾಸಗಳು ಇತ್ತೀಚಿನವರೆಗೆ ಸಹಜವಾಗಿ ಇದ್ದವು. ಮುದ್ರಣದಿಂದಾಗಿ ಲಿಪಿರೂಪಗಳಲ್ಲಿನ ಬೆಳವಣಿಗೆಯನ್ನು ಸಾದ್ಯಂತವಾಗಿ ನಿಲ್ಲಿಸಿದಂತಾಗಿದ್ದಿತು.
ಮುದ್ರಣದಲ್ಲಿ ದಕ್ಶಿಣ ಕರ‍್ನಾಟಕ ಬಾಗದ ಲಿಪಿರೂಪಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿತು. ಆದರೆ ಕ್ರಮೇಣ ಉಳಿದ ಬಾಗಗಳಲ್ಲಿನ ಲಿಪಿರೂಪಗಳು ಕೂಡ ಮುದ್ರಣಕ್ಕೆ ಬರುತ್ತಿವೆ. ಕರಾವಳಿ ಬಾಗದಲ್ಲಿ ಪತ್ರಿಕೆಯಲ್ಲಿಯೂ ಇಂತಾ ಕೆಲ ಬಿನ್ನರೂಪಗಳು ಬಳಕೆಯಾಗುತ್ತಿವೆ. ಪಟ್ಯಪುಸ್ತಕಗಳಿಗಿಂತ ಬಿನ್ನವಾದ ಲಿಪಿರೂಪಗಳು ಉತ್ತರ ಕರ‍್ನಾಟಕದವರ ಬರವಣಿಗೆಯಲ್ಲಿ ಸಹಜವಾಗಿ ಬಳಕೆಯಲ್ಲಿವೆ. ಈ ಲಿಪಿರೂಪಗಳಲ್ಲಿನ ವ್ಯತ್ಯಾಸಗಳು ಶಿಕ್ಶಕರಿಗೂ, ವಿದ್ಯಾರ‍್ತಿಗಳಿಗೂ ಮತ್ತು ಸಾಮಾನ್ಯ ಪ್ರಜೆಗಳಿಗೂ ಅರಿವಿಲ್ಲದೆ ಸಹಜವಾಗಿ ಬಳಕೆಯಲ್ಲಿರುವುದು ಕುತೂಹಲದ ವಿಚಾರ. ಕೆಲವು ಲಿಪಿರೂಪಗಳಲ್ಲಿನ ವ್ಯತ್ಯಾಸಗಳು ಬಿನ್ನ ಬಾಗದವರಿಗೆ ಓದುವಲ್ಲಿಯೂ ಸಮಸ್ಯೆಯನ್ನು ತರುತ್ತವೆ. ಮುದ್ರಣ ಮತ್ತು ತಂತ್ರಗ್ನಾನ ಎಲ್ಲೆಡೆ ಸಾಮಾನ್ಯವಾಗುತ್ತಿರುವಂತೆಯೆ ಸ್ತಳಿಯತೆಯೂ ಪ್ರಾಮುಕ್ಯತೆಯನ್ನು ಪಡೆಯುತ್ತಾ ಬಿನ್ನ ಬಾಗದಲ್ಲಿನ ಪಾರಂಪರಿಕ ಲಿಪಿವ್ಯತ್ಯಾಸಗಳೂ ತಂತ್ರಗ್ನಾನದೊಳಗೆ ಈಗ ಅವತರಿಸಿ ಬರುತ್ತಿವೆ.
ಈ ಅಂಕಣದ ಹಿಂದಿನ ಬರೆಹ:
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.