Date: 09-09-2024
Location: ಬೆಂಗಳೂರು
"ನಮ್ಮ ಕಾರು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಕಮಾನಿನೊಳಗೆ ಕಾಲಿಡುತ್ತಿದ್ದಂತೆ ಅವನ ಗೆಳೆಯರ ತಂಡ ಕಾರಿಗೆ ಅಡ್ಡ ಹಾಕಿ ತಡೆದು ನಿಲ್ಲಿಸಿತು. ನಾನು ಕಾರಿಂದ ಕೆಳಗಿಳಿಯುವುದೇ ತಡ, ದೊಡ್ಡದಾದ ಹೂವಿನ ಹಾರಹಾಕಿ ಜೈಘೋಷ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣಕ್ಕೆ ಬರೆದ ಲೇಖನ ನಿಮ್ಮ ಓದಿಗಾಗಿ...
ತತಕ್ಷಣ ಏನು ಹೇಳುವುದೆಂದು ತಿಳಿಯಲೇ ಇಲ್ಲ. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯ ಹೆಬ್ಬಾಗಿಲಿನಂತಹ ದೊಡ್ಡ ಆರ್ಚ್ ಇರುವಲ್ಲೇ ರಾಣೆಬೆನ್ನೂರಿಂದ ಕರೆ ತಂದಿದ್ದ ಎಂಟ್ಹತ್ತು ಮಂದಿ ಸಮವಸ್ತ್ರಧಾರಿಗಳ ಬ್ಯಾಂಡ್ ಸೆಟ್ ಸದ್ದು. ಮೈಲಾರಲಿಂಗ ಶಿಬಾರದ ಕಲಾವಿದ ರಾಘವೇಂದ್ರ ತನ್ನ ಅನೇಕ ಗೆಳೆಯರ ತಂಡದೊಂದಿಗೆ ಅದನ್ನೆಲ್ಲ ಏರ್ಪಾಡು ಮಾಡಿಕೊಂಡಿದ್ದ. ನನಗೆ ಅದೇನೂ ತಿಳಿಯದು. ಅದೇನಾದರೂ ನನಗೆ ಮುಂಚಿತವಾಗಿ ತಿಳಿಸಿದರೆ ಸುತಾರಾಂ ನಾನು ಒಪ್ಪುವುದಿಲ್ಲ ಮಾತ್ರವಲ್ಲ, ಯಾವುದೇ ಕಾರಣಕ್ಕೂ ಬೇಡವೇ ಬೇಡ ಅನ್ನುತ್ತೇನೆಂಬ ಖಾತರಿಯಿಂದ ಅವನು ಅದೆಲ್ಲ ವ್ಯವಸ್ಥೆ ಮಾಡಿಕೊಂಡು ಕಾಯುತ್ತಿದ್ದ.
ನಮ್ಮ ಕಾರು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಕಮಾನಿನೊಳಗೆ ಕಾಲಿಡುತ್ತಿದ್ದಂತೆ ಅವನ ಗೆಳೆಯರ ತಂಡ ಕಾರಿಗೆ ಅಡ್ಡ ಹಾಕಿ ತಡೆದು ನಿಲ್ಲಿಸಿತು. ನಾನು ಕಾರಿಂದ ಕೆಳಗಿಳಿಯುವುದೇ ತಡ, ದೊಡ್ಡದಾದ ಹೂವಿನ ಹಾರಹಾಕಿ ಜೈಘೋಷ. ಜೋರಾದ ಬ್ಯಾಂಡ್ ಸೆಟ್ ಸಪ್ಪಳ. ಅದಂತೂ ಹಾದಿಯಲ್ಲಿ ಹೋಗುವವರೆಲ್ಲರಿಗೂ "ನಾನು ಯಾರಿರಬಹುದೆಂಬ" ಕೌತುಕದ ಕಣ್ನೋಟಕ್ಕೆ ಎಡೆ ಮಾಡಿತ್ತು. ನಾನಂತೂ ನಾಚಿ ನೀರಾಗಿ ಹೋದೆ. ಅದ್ಯಾವುದೋ ಅಸಂಗತ ನಾಟಕದ ರಾಜನ ಮೆರವಣಿಗೆಯ ಸನ್ನಿವೇಶ ನೆನಪಿಗೆ ತರುವಂತಿತ್ತು.
ಅಷ್ಟೇಯಾಕೆ ಕೆ.ಎನ್. ಸಾಳುಂಕೆ ಕವಿಯ ಕೆಲ ನಾಟಕಗಳಲ್ಲಿ ಅಂತಹ ಅತಿರೇಕ ಪ್ರೀತಿಯ ಯಥೇಚ್ಛ ಪ್ರಹಸನಗಳು. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ತೀವ್ರ ಮುಜುಗರದಿಂದ ಹೆಜ್ಜೆ ಹಾಕ ತೊಡಗಿದೆ. ನನ್ನ ಜತೆಗೆ ಹೆಜ್ಜೆ ಹಾಕುತ್ತಿದ್ದ ಅನಸೂಯಗೂ ಅಂತಹದೇ ಮುಜುಗರ. "ಸಾಕು ಬಿಡಿ ವಾದ್ಯ ನುಡಿಸುವ ಬ್ಯಾಂಡ್ ಸೆಟ್ ಸ್ವಾಗತ ಸಾಕು ಸಾಕೆಂದು" ಪರಿ ಪರಿಯಾಗಿ ನಾಚಿ ಮೊರೆ ಇಡುತ್ತಿದ್ದ ನನ್ನ ಮನವಿ ಆಲಿಸುವ ಸ್ಥಿತಿಯಲ್ಲಿ ಅವರು ಯಾರೂ ಇರಲಿಲ್ಲ. ಜಿಲ್ಲಾಧಿಕಾರಿ ಕಚೇರಿ ಆವರಣದ ಮುಂಬಾಗಿಲು ತಲುಪಿದ ಮೇಲೆಯೇ ಬ್ಯಾಂಡ್ ಸೆಟ್ ಸ್ವಾಗತದ ಸದ್ದು ಗಪ್ಪಾದುದು. ಅಷ್ಟಕ್ಕೂ ಅವರೆಲ್ಲರೂ ದಾವಣಗೆರೆ ಪರಿಸರದ ಗ್ರಾಮೀಣ ಕಲಾವಿದರು. ಅವರ ಮುಗ್ಧ ಪ್ರೀತಿ, ಅಭಿಮಾನಕ್ಕೆ ಅಂತರಂಗದ ಸೂಕ್ಷ್ಮ ಸಂವೇದಿ ಮುಜುಗರ ನನ್ನನ್ನು ಮೌನ ಸಂಕೋಚದ ಶರಣಾಗತಿ ಕೊಳದಲ್ಲಿ ಮುಳುಗಿಸಿತ್ತು.
ದಾವಣಗೆರೆ ವೃತ್ತಿರಂಗಭೂಮಿ ರಂಗಾಯಣಕ್ಕೆ ಸರ್ಕಾರ ನನ್ನನ್ನು ನಿರ್ದೇಶಕನೆಂದು ನೇಮಿಸಿದ ನಿಮಿತ್ತ ನಾನು ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾಡಳಿತ ಭವನದಲ್ಲಿರುವ ರಂಗಾಯಣ ಕಚೇರಿಗೆ ಹೋಗಿ ಕಾರ್ಯಭಾರ ವಹಿಸಿಕೊಳ್ಳುವ ಸಂದರ್ಭ. ಈ ಸಂಭ್ರಮಕ್ಕೆ ಇಂತಹ ಮುಗ್ಧ ಪ್ರೀತಿ ತುಂಬಿದ ಹೊಳೆ ಪಕ್ಕದ ತುಂಗಭದ್ರೆಯಂತೆ ಹೀಗೆ ತುಂಬಿ ಹರಿದಿತ್ತು. ಸಣ್ಣ ಖುಷಿಯೆಂದರೆ ಅದಕ್ಕೆಲ್ಲೂ ಕೊಳಕು ರಾಜಕೀಯದ ಸ್ಮೆಲ್ ಇರಲಿಲ್ಲ ಎಂಬ ಸಮಾಧಾನ. ಯತಾರ್ಥ ಕಲೆಯೊಂದರ ಹೇಳಲಾಗದ ಮತ್ತು ಹೇಳದಿರಲಾಗದ ಸಂಕೋಚವೆಂಬ ಪ್ರವಾಹದ ಗೆರೆಗಳನ್ನು ದಾಟುತ್ತಲೇ ನಡೆದೆ. ಅಷ್ಟೊತ್ತಿಗಾಗಲೇ ಜಿಲ್ಲಾಡಳಿತ ಭವನದಲ್ಲಿ ಕಲಾವಿದರು, ನನ್ನ ಪ್ರೀತಿಯ ಅಭಿಮಾನವೇತ್ತರು ಸೇರಿಕೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರೇ ನಮ್ಮ ದಾವಣಗೆರೆ ರಂಗಾಯಣದ ಪ್ರಬಾರ ವಿಶೇಷಾಧಿಕಾರಿ, ಹೆಸರು ರವಿಚಂದ್ರ. ರಂಗಾಯಣ ಸಿಬ್ಬಂದಿಯೊಂದಿಗೆ ನನ್ನ ಬರುವಿಕೆಗೆ ಕಾಯ್ದು ಕುಳಿತಂತಿತ್ತು. ಅದೇನೋ ಅವರಿಗೂ ನನ್ನ ಆಗಮನ ಉಮೇದು ತಂದಿತ್ತು. ರಂಗಾಯಣವೆಂಬ ಸ್ವಾಯತ್ತ ರಂಗಸಂಸ್ಥೆಯ ಅಧಿಕಾರ ವಹಿಸಿಕೊಳ್ಳುವ ಪ್ರಕ್ರಿಯೆಗಳನ್ನು ಪೂರೈಸುವಾಗಲು ಸನ್ಮಿತ್ರರಾದ ಬಾ.ಮ. ಬಸವರಾಜಯ್ಯ, ಸಾಂ. ಹಿ. ಉಮಾಶಂಕರ್, ದಾದಾಪೀರ ನವಿಲೇಹಾಳ್, ಗಂಗಾಧರ ಹಿರೇಮಠ, ಆರ್.ಟಿ. ಅರುಣಕುಮಾರ್, ಎಸ್. ಎಸ್. ಸಿದ್ಧರಾಜು, ಶರಣಬಸಪ್ಪ ಪಾಟೀಲ, ಎನ್. ಎಸ್. ರಾಜು, ಐರಣಿ ಬಸವರಾಜ ಹೀಗೆ ಅನೇಕರು ನೆರೆದೇ ಬಿಟ್ಟರು.
ಕಚೇರಿಯ ಜಾಗ ಸಾಲದೆಂದು ಸಭಾಂಗಣಕ್ಕೆ ಸ್ಥಳಾಂತರ. ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್ ಅವರ ಕಚೇರಿಗೆ ಕರಕೊಂಡು ಹೋಗಿ ನನ್ನನ್ನು ಅವರಿಗೆ ನಮ್ಮ ವಿಶೇಷಾಧಿಕಾರಿ ರವಿಚಂದ್ರ ಪರಿಚಯಿಸಿದ ಪರಿಯೇ ಇನಿತು ಪ್ರೀತಿ ತುಂಬಿ ತಂದಿತ್ತು. ಅವತ್ತು ಜಿಲ್ಲಾಧಿಕಾರಿಗಳು ಕೆಲಸದ ನಿಮಿತ್ತ ಬೇರೆ ಕಡೆ ಹೋಗಿದ್ದರು. ಎಲ್ಲರೂ ಅಲ್ಲಿಂದ ಸಭಾಂಗಣಕ್ಕೆ ಬಂದಾಗ ಅದು ತುಂಬಿ ತುಳುಕಿದ ಮತ್ತೊಂದು ಖುಷಿ. ಅನೇಕ ಪರಿಚಿತ ಮುಖಗಳ ಜತೆಯಲ್ಲಿ ಕೆಲವು ಅಪರಿಚಿತರು ಹಾರ, ಶಾಲುಗಳೊಂದಿಗೆ ಹಾಜರು. ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್ ಅವರ ಅಧ್ಯಕ್ಷತೆಯಲ್ಲಿ ದಿಢೀರ್ ಎಂಬಂತೆ ಪುಟ್ಟ ಸಮಾರಂಭ ಏರ್ಪಟ್ಟಿತು. ಅದೆಲ್ಲ ಚಿಕ್ಕ ಮತ್ತು ಚೊಕ್ಕ ಸಮಾರಂಭ.
ಹಿರೀಕ ರಂಗಮಿತ್ರ ಬಾಮ, ಐರಣಿ ಬಸಣ್ಣ, ದಾದಾಪೀರ್, ಎನ್. ಎಸ್. ರಾಜು ಮತ್ತೆ ಕೆಲವರು ಮಾತಾಡಿದರು. ಕಡೆಯಲ್ಲಿ ನಾನೂ ಮಾತಾಡಿದೆ. ಆದರೆ ಪತ್ರಕರ್ತರಿಗೆ ಕಾರ್ಯಕ್ರಮಕ್ಕೆ ಬರಲು ತಿಳಿಸಿರಲಿಲ್ಲ. ಆದರೇನಂತೆ ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಹೂಬಾ ಹೂಬಾ ಹಾಜರಿದ್ದು ವರದಿ ಮಾಡಿದ್ದಕ್ಕಿಂತ ಹೆಚ್ಚು ಹೆಚ್ಚು ಎಂಬಂತೆ ಆರೇಳು ಕಾಲಂ ಸುದ್ದಿಗಳು ಪ್ರಕಟವಾಗಿದ್ದವು. ಪ್ರಾಯಶಃ ರಂಗಾಯಣ ಎಂಬ ಪದಪುಂಜಕ್ಕೆ ಅಂತಹದ್ದೊಂದು ದಿವಿನಾದ ಮತ್ತು ಚುಂಬಕ ರಂಗಶಕ್ತಿ ಇದ್ದೀತು. ಹೆಗ್ಗಳಿಕೆಯ ವಿಷಯವೆಂದರೆ ಮೈಸೂರಿನ ಮೊಟ್ಟ ಮೊದಲ ರಂಗಾಯಣ ಪ್ರಶಿಕ್ಷಣಾರ್ಥಿಗಳ ಆಯ್ಕೆ ಪ್ರಕ್ರಿಯೆ ಬಿ. ವಿ. ಕಾರಂತರ ಸಾರಥ್ಯದಲ್ಲಿ ಜರುಗಿದ್ದು ಇದೇ ನಮ್ಮ ದಾವಣಗೇರಿಯ ಗುಂಡಿ ಛತ್ರದಲ್ಲಿ. ಅವತ್ತು ಕಡೆಯ ದಿವಸ ಕೊಂಡಜ್ಜಿ ಬೆಟ್ಟದಲ್ಲಿ ಅಡಿಗೆ ಮಾಡಿಕೊಂಡು ಉಂಡುಬಂದ ದ್ಯಾಸವಿನ್ನೂ ನನ್ನ ಭಾವಕೋಶದಲ್ಲಿ ಜತನವಾಗಿದೆ.
ಹಾಗೆ ನೋಡಿದರೆ ನನಗಿದು ಅಧಿಕಾರ ಸ್ವೀಕಾರವಲ್ಲ ಅವಕಾಶ ಸ್ವೀಕಾರ ಕಾರ್ಯ. ಆ ಸಮಾರಂಭ ಮುಗಿದು ರಂಗಾಯಣ ಕಚೇರಿಗೆ ನನ್ನನ್ನು ವಿಶೇಷಾಧಿಕಾರಿ ತುಂಬು ಶಿಷ್ಟಾಚಾರದಿಂದಲೇ ಕರೆದುಕೊಂಡು ಹೋದರು. ಅದು ಜಿಲ್ಲಾಡಳಿತ ಭವನದ ಎರಡನೇ ಮಹಡಿಯ ಮೂವತ್ತೆಂಟನೆ ನಂಬರಿನ ಪುಟ್ಟ ಕೊಠಡಿ. "ದಾವಣಗೆರೆ ವೃತ್ತಿರಂಗಭೂಮಿ ರಂಗಾಯಣ" ಎಂಬ ಹೆಸರಿನ ಕೊಠಡಿಗಿಂತ ದೊಡ್ಡದಾದ ಬೋರ್ಡ್ ಜಾಗವಿಲ್ಲದೇ ಪಕ್ಕದಲ್ಲಿ ಕುಂತಿತ್ತು. ಹೆಚ್ಚೆಂದರೆ ಹತ್ತು ಮತ್ತು ಹದಿನಾಲ್ಕು ಅಡಿ ಅಳತೆಯ ಪುಟ್ಟ ಖೋಲಿ ಅದು. ಅಷ್ಟರಲ್ಲಿಯೇ ಸಿಬ್ಬಂದಿ ಕಚೇರಿ. ಇನ್ನೊಂದು ಖಾಲಿ ಕುರ್ಚಿ, ಅದು ವಿಶೇಷಾಧಿಕಾರಿ ಕುರ್ಚಿ. ಸಧ್ಯ ರವಿಚಂದ್ರ ಪ್ರಬಾರ ವಿಶೇಷಾಧಿಕಾರಿ. ಅದರ ಪಕ್ಕದ್ದು ಕ್ಲರಿಕಲ್ ಸ್ಟಾಫ್ ಸ್ಮಿತಾ ದೇಸಾಯಿ ಕುಂತಿರುವ ಕುರ್ಚಿ. ಕೋಣೆಯ ಹೊರಗಡೆ ಹೊಸ್ತಿಲಲ್ಲಿ ನಾಗರಾಜ ಕುರ್ಚಿ. ಅದೇ ಕೋಣೆಯ ಒಂದು ಮೂಲೆ ಬದಿಯೇ ನನ್ನ ಚೇಂಬರ್, ಮೂರು ಟೇಬಲ್ಲು, ಒಂದು ಗಾಡ್ರೇಜ್ ಬೀರ್, ಕಂಪ್ಯೂಟರ್, ಇದೆಲ್ಲವೂ ಅಷ್ಟು ಪುಟ್ಟ ಜಾಗದಲ್ಲೆ. ರಂಗಾಯಣ ನಿರ್ದೇಶಕ ಕೂಡುವ ಕಾಷ್ಟ ಕುರ್ಚಿಯ ಮೇಲೆ ನನ್ನನ್ನು ಅತ್ಯಂತ ಗೌರವಯುತವಾಗಿ ವಿಶೇಷಾಧಿಕಾರಿ ಕೂರಿಸಿದರು. ಒಂದು ಅವ್ಯಕ್ತ ಭಾವ ಸಡಗರದ ಸುಪ್ತ ಸಂಚಲನೆ. ಆದರೆ ಏನೋ ಸಂಕೋಚ. ನಾನು ಕುಳಿತುಕೊಂಡ ಕೋಣೆಯ ಜಾಗವಷ್ಟೇ ದಾವಣಗೆರೆ ರಂಗಾಯಣವೇ ಎಂಬುದೇ ಮುಜುಗರ.
ನಾನು ಕರ್ನಾಟಕ ರಂಗಸಮಾಜದ ಸದಸ್ಯನಾಗಿ ಕೆಲಸ ಮಾಡಿದ್ದರಿಂದ ಅವತ್ತಿನ ಎಲ್ಲ ರಂಗಾಯಣಗಳನ್ನು ಅನೇಕ ಬಾರಿ ಸುತ್ತಿ ಕಂಡ ಅನುಭವವಿದೆ. ಅದಕ್ಕೂ ಮೊದಲು ಎರಡು ದಶಕಗಳ ಹಿಂದೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯನಾಗಿ ಕೆಲಸ ಮಾಡಿದ ಅನುಭವ. ಮಾತೃ ರಂಗಾಯಣದಂತಿರುವ ಮೈಸೂರು ರಂಗಾಯಣ ಒಂದು ಫುಲ್ ಪ್ಲೆಜ್ಡ್ ರಂಗಾಯಣ ಆಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಇನ್ನುಳಿದಂತೆ ಕಲಬುರ್ಗಿ, ಧಾರವಾಡ, ನೆರೆಯ ಶಿವಮೊಗ್ಗೆಯ ರಂಗಾಯಣಗಳು ಸಾಂಸ್ಕೃತಿಕ ರಂಗ ಸಮುಚ್ಛಯವಾಗಿ ಬೆಳೆದು ನಿಂತಿವೆ. ಮೂರು ವರ್ಷದ ಹಿಂದಿನ ಕಾರ್ಕಳ ಯಕ್ಷ ರಂಗಾಯಣ ಹೇಗಿದೆಯೆಂದು ನಾನು ಕಂಡಿಲ್ಲವಾದರೂ ಮಿತ್ರ ಜೀವನರಾಂ ಸುಳ್ಯ ಚೆಂದಗೊಳಿಸಿದ ನೆನಪಿದೆ. ಈಗಂತೂ ರಂಗಾನುಭಾವಿ ಹಿರಿಯರಾದ ಐತಾಳರು ನಿರ್ದೇಶಕರಾಗಿ ಬಂದಮೇಲೆ ಅದು ಸಹಜವಾಗಿ ಸಮೃದ್ಧಿಯ ಹಾದಿಯಲ್ಲಿ ಸಾಗದಿರದು.
ಅಷ್ಟಕ್ಕೂ ಎಲ್ಲ ರಂಗಾಯಣಗಳು ಬಹಳ ಹಿಂದೆಯೇ ಮೂಲಭೂತ ಸೌಕರ್ಯಗಳಿಂದ ಸಿದ್ಧಗೊಂಡಿದ್ದು ಅವಕ್ಕೆಲ್ಲ ಬಹುದೊಡ್ಡ ಮಾದರಿಯೊಂದು ದಿಕ್ಸೂಚಿಯಂತಿದೆ. ದಾವಣಗೆರೆ ರಂಗಾಯಣ ಹುಟ್ಟಿಕೊಂಡು ಆರು ವರ್ಷಗಳೇ ಕಳೆದರೂ ಮಾದರಿ ಸ್ವರೂಪದ ಮಾತಿರಲಿ, ಅದಿನ್ನೂ ಶೈಶವದಲ್ಲೇ ನರಳುತ್ತಲಿದೆ. ವೃತ್ತಿರಂಗಭೂಮಿ ಅಧ್ಯಯನ ಮತ್ತು ಸಂಶೋಧನೆ ಕೇಂದ್ರವೆಂದು ೨೦೧೮ ರ ಆಯವ್ಯಯದಲ್ಲಿ ಮಂಜೂರಾದ "ವೃತ್ತಿ ರಂಗಭೂಮಿ ಕೇಂದ್ರ"ವು ತದನಂತರ ಶಾಲೆಯಾಗಿ ನಂತರದ ವರ್ಷಗಳಲ್ಲಿ ವೃತ್ತಿರಂಗಭೂಮಿ ರಂಗಾಯಣ ಆಗಿ ಸ್ಥಿತ್ಯಂತರಗೊಂಡಿದೆ. ಮೊಟ್ಟ ಮೊದಲು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಮೊದಲ ಸವಾಲಿನ ಹೆಜ್ಜೆಗಳು. ಉಳಿದೆಲ್ಲ ರಂಗಾಯಣಗಳು ಮಾದರಿ ಸ್ವರೂಪ ಕಂಡು ಕೊಂಡಿವೆ. ಅವಕ್ಕೆಲ್ಲ ಬಿ.ವಿ. ಕಾರಂತರು ಕಟ್ಟಿಕೊಟ್ಟ ಗಟ್ಟಿ ಮಾದರಿ ಇದೆ. ಅದು ಅಕ್ಷರಶಃ "ಕಾರಂತ " ಮಾದರಿಯೇ ಹೌದು. ದಾವಣಗೆರೆಯ ವೃತ್ತಿ ರಂಗಾಯಣ ಕಟ್ಟುವ ಸ್ವರೂಪದ ಮಾದರಿ ಎಂತಹದ್ದೆಂಬ ಬೃಹತ್ ಸವಾಲು ಎದುರಿಗಿದೆ.
ನಾಲ್ಕು ದಶಕಗಳ ಕಾಲದ ಅಧ್ಯಯನ, ಅನುಭವಗಳು ಮನೋಸ್ಥೈರ್ಯದ ನೆರವಿಗಿವೆ. ಅಷ್ಟು ಸಾಲದೆಂಬ ವಿನಮ್ರ ನಂಬಿಕೆ. ಕಟ್ಟುವ ಕೆಲಸಕ್ಕೆ ಹುಲ್ಲುಕಡ್ಡಿಯ ಬೆಂಬಲವೂ ಬೇಕಿದೆ. ಇವೆಲ್ಲಕ್ಕೂ ಮುಖ್ಯವಾಗಿ ಕನಸುಗಳು ಬೇಕಿದೆ. ಹಾಗೆ ನೋಡಿದರೆ ಒಂದು ಕಾಲಕ್ಕೆ ಒಂದೊಂದು ನಾಟಕ ಕಂಪನಿಯೂ ಒಂದೊಂದು ರೆಪರ್ಟರಿಯಂತೆ ಕೆಲಸ ಮಾಡಿವೆ. ಅಂತಹ ಅಭಿಜಾತ ಪರಂಪರೆಯ ಸಾಹಿತ್ಯ, ಸಂಗೀತ, ನಾಟ್ಯಮಂಡಳಿ ಕಂಪನಿಗಳು ಈಗ ನೋಡಲು ಸಿಗದಿರಬಹುದು. ನಾಟ್ಯ ಸಂಗೀತದ ಕ್ಲಾಸಿಕ್ ನಾಟಕಗಳು ಕೂಡಾ ಕಣ್ಮರೆಯಾಗಿವೆ. ಗೋಳೀಕರಣದ ರಭಸದಲ್ಲಿ ಅದರಲ್ಲೂ ಕಾರ್ಪೊರೇಟಿಕರಣದ ಒಳಹೇತುಗಳ ನಡುವೆ ಸಿಲುಕಿಕೊಂಡ ವೃತ್ತಿರಂಗದ ಒಳ ಹೊಳಹುಗಳನ್ನು ಎಚ್ಚರದಿಂದ ಹೆಕ್ಕಿ ತೆಗೆಯಬೇಕಿದೆ. ಅಂತಹ ಹೊಳಹುಗಳು ಮಾತ್ರ ಮಾದರಿಯಾದ ಸ್ವಸ್ವರೂಪ ದಕ್ಕಿಸಿಕೊಡುವ ಖಂಡುಗ ಖಂಡುಗ ಕನಸುಗಳಿಗೆ ಕೊರತೆ ಇಲ್ಲ. ಅಂತೆಯೇ ಅಂತಹ ಪರಂಪರೆಯ ಸತ್ವ ಹೀರಿಕೊಂಡು ಪ್ರಯೋಗಶೀಲ ಹೊಂಗನಸಿನ ಹಾದಿಗುಂಟ ರಂಗಪಯಣ. ಆ ನಿಟ್ಟಿನಲ್ಲಿ ೧೫.೦೯.೨೦೨೪ ರ ದಾವಣಗೆರೆ ರಂಗಾಯಣದ *ನಾಂದಿ* - ಆರಂಭ ಸಮಾರಂಭ. *
- ಮಲ್ಲಿಕಾರ್ಜುನ ಕಡಕೋಳ
9341010712
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
"ಇವರನ್ನು ಸು.ರಂ ಎಕ್ಕುಂಡಿಯವರು ಸಂಕೀರ್ಣ ಕವಿ, ಮತ್ತು ಕೆಂಪು ಕವಿ ಎಂದು ಕರೆದರೆ, ವಿಮರ್ಶಕರು ಇವರನ್ನು ಸ...
"ಮಕ್ಕಳು ಹುಟ್ಟಿನಿಂದ ಎಲ್ಲವನ್ನೂ ಗ್ರಹಿಸುವ, ಕಲಿಯುವ, ಪಡೆಯುವ ಸಾಮರ್‍ತ್ಯವನ್ನು ಹೊಂದಿರುತ್ತವೆ ಮತ್ತು ನಿರ...
©2024 Book Brahma Private Limited.