Date: 23-08-2020
Location: ಬೆಂಗಳೂರು
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿರುವ ಡಾ. ನಿತ್ಯಾನಂದ ಬಿ. ಶೆಟ್ಟಿ ಅವರು ಬರೆಯುವ ಅಂಕಣ ’ಲೋಕೋಕ್ತಿ’. ಈ ಅಂಕಣದಲ್ಲಿ ಅವರು ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಗುಲ್ವಾಡಿ ವೆಂಕಟರಾವ್ ಅವರ ’ಇಂದಿರಾಬಾಯಿ’ ಕುರಿತ ವಿಭಿನ್ನ ಒಳನೋಟ ಇರುವ ರಾಜಕೀಯ ಓದು ನೀಡಿದ್ದಾರೆ.
ಗುಲ್ವಾಡಿ ವೆಂಕಟರಾಯರು (1844-1913) ಬರೆದ ಕನ್ನಡದ ಮೊದಲ ಸಾಮಾಜಿಕ/ ಆಧುನಿಕ ಕಾದಂಬರಿ ಇಂದಿರಾಬಾಯಿ ಪ್ರಕಟಗೊಂಡದ್ದು 1899ರಲ್ಲಿ. ಇಂದಿರಾಬಾಯಿ ಈಗ ನೂರ ಇಪ್ಪತ್ತೊಂದು ವರ್ಷದ ಅಜ್ಜಿ. ಶಿವರಾಮ ಕಾರಂತರು (1902-1997) ಬರೆದ ಕನ್ನಡದ ಮೊದಲ ದಲಿತ ಕಾದಂಬರಿ ಚೋಮನ ದುಡಿ ಪ್ರಕಟಗೊಂಡದ್ದು 1931ರಲ್ಲಿ. ಚೋಮ ಈಗ 89 ವರ್ಷಗಳ ತಾತ. ಕಾದಂಬರಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಇಂದಿರಾಬಾಯಿ ಆಗಷ್ಟೇ ಮದುವೆಯಾದ ತರುಣಿ. ಚೋಮ ಕಾದಂಬರಿ ಆರಂಭವಾಗುವಾಗಲೇ ಅರ್ಧ ಶತಮಾನ ದಾಟಿದ ಮುದುಕ. ಇಂದಿರೆ ಮತ್ತು ಚೋಮ ತಮ್ಮತಮ್ಮ ಕಥನಗಳಲ್ಲಿ ಕಾಣಿಸಿಕೊಂಡ ಕಾಲದ ನಡುವೆ ಸುಮಾರು ಮೂವತ್ತು ವರ್ಷಗಳ ವ್ಯತ್ಯಾಸ ಇದ್ದರೂ ವಿಚಾರಿಸಿ ನೋಡಿದರೆ ಇಬ್ಬರಿಗೂ ಈಗ ಹೆಚ್ಚೂ ಕಡಿಮೆ ಶತಮಾನ ತುಂಬಿದೆ.
ನಾವೆಲ್ಲರೂ ಒಂದರ್ಥದಲ್ಲಿ ಇಂದಿರಾಬಾಯಿಯಿಂದ ತೊಡಗಿ ಚೋಮನವರೆಗೆ ಹರಡಿರುವ ಬೇರೆಬೇರೆ ಕುಟುಂಬ-ಸಂಸಾರದಲ್ಲಿ ಹುಟ್ಟಿಬಂದ ಮಕ್ಕಳು. ನಮ್ಮ ಎಲ್ಲರ ಅಜ್ಜಿಯಾಗಿರುವ ಇಂದಿರಾಬಾಯಿಯನ್ನು ಆಕೆಯ ಮಕ್ಕಳು-ಮೊಮ್ಮಕ್ಕಳಾದ ನಮ್ಮ ಕಾಲದಲ್ಲಿ ಇಟ್ಟು; ನಮ್ಮ ಈ ಅಜ್ಜಿ ಯಾವ ಮಾದರಿಯ ಹೆಣ್ಣುಮಗಳು, ಆಕೆಯನ್ನು ರೂಪಿಸಿದ ನಮ್ಮ ಪ್ರ-ಪಿತಾಮಹರ ಚಿಂತನೆಗಳ ರಾಜಕೀಯ ಸ್ವರೂಪ ಏನು ಎಂಬುದನ್ನು ಹುಡುಕುವ ಪ್ರಯತ್ನ ಮಾಡುವುದು ಈ ಬರೆಹದ ಉದ್ದೇಶ.
ಇಂದಿರಾಬಾಯಿ ಇಂಗ್ಲಿಷ್ ಕಲಿತದ್ದು ಇತಿಹಾಸ. ಈಗ ಆಕೆ ಇಂಗ್ಲಿಷಿಗೂ ಅನುವಾದಗೊಂಡು ಇನ್ನೊಂದು ಇತಿಹಾಸವನ್ನು ನಿರ್ಮಿಸಿದ್ದಾಳೆ. ( Indira Bai: The Triumph of Truth and Virtue, 2019, Vanamala Vishwanatha, Shivarama Padikkal, Oxford University Press) ಬಾಲ್ಯ ವಿವಾಹ, ವಿಧವಾ ವಿವಾಹ ಮತ್ತು ಮಹಿಳೆಗೆ ಆಧುನಿಕ ಶಿಕ್ಷಣ ಎಂಬ ಮೂರು ಪ್ರಮುಖ ನೆಲೆಯಲ್ಲಿ ರೂಪುಗೊಂಡಿರುವ ಇಂದಿರಾಬಾಯಿ ಕಾದಂಬರಿಯ ಪೊಲಿಟಿಕಲ್ ರೀಡಿಂಗ್ ಮಾಡುವ ಈ ಸಂದರ್ಭದಲ್ಲಿ ನನಗೆ ಮುಖ್ಯ ಎಂದು ಕಂಡ ಮೂರು ಅಂಶಗಳನ್ನು ಮೊದಲು ಪ್ರಸ್ತಾವಿಸಿ ಬಳಿಕ ಅವುಗಳ ಪರಿಶೀಲನೆ ಮಾಡುತ್ತೇನೆ.
1. ಇಂದಿರಾಬಾಯಿ ಆಧುನಿಕತೆಗೆ ವಿಶೇಷ ಒತ್ತು ಕೊಡುತ್ತಿದ್ದರೂ ಅದು ಪರಂಪರೆಯನ್ನು ಸಂಪೂರ್ಣ ತಿರಸ್ಕರಿಸುವ ಹುಸಿಪ್ರಗತಿಪರತೆಯನ್ನು ಹೊಂದಿಲ್ಲ.
2. ಭಾರತೀಯ ಕುಟುಂಬ ಎಂಬ ಪಾರಂಪರಿಕ ಸಂಸ್ಥೆಯನ್ನು ಆಧುನಿಕಗೊಳಿಸಿ ಪ್ರಜಾಸತ್ತಾತ್ಮಕವಾಗಿಸುವ ಕೆಲಸವನ್ನು , ಈ ಕಾದಂಬರಿ ನವಿರಾಗಿ ಮಾಡುತ್ತದೆ.
3. ಇಂದಿರಾಬಾಯಿಯಲ್ಲಿ ಹೆಣ್ಣಿನ ಪುನರ್ ನವೀಕರಣ ಆಗುತ್ತದೆ, ಆದರೆ ಆಕೆಯ ಪುನರ್ ರೂಪೀಕರಣವಂತೂ ಅಲ್ಲ ಎಂಬ ಸ್ತ್ರೀವಾದದ ಮೊನಚು ಪ್ರಶ್ನೆಗಳಿಗೆ ಗುಲ್ವಾಡಿಯವರ ಚಿಂತನೆಯ ಕಕ್ಷೆಯಲ್ಲಿ ಅವಕಾಶ ಇಲ್ಲ .
ಮೊದಲನೆಯ ಅಂಶ.
ಇಂದಿರಾಬಾಯಿಯಲ್ಲಿ ನಿರ್ಣಾಯಕವಾಗಿರುವ ವಿದ್ಯಮಾನ ಇಂಗ್ಲಿಷ್ ಶಿಕ್ಷಣಕ್ಕೆ ಸಂಬಂಧಿಸಿದ್ದು. ಈ ಶಿಕ್ಷಣಕ್ಕೆ ಕೊಡಲಾದ ಮಹತ್ತ್ವ ನಮ್ಮನ್ನು ನೇರವಾಗಿ ಆಧುನಿಕತೆಯ ಡಿಸ್ಕೋರ್ಸ್ ಬಳಿಗೆ ಕರೆದೊಯ್ಯುವುದನ್ನು ಕನ್ನಡದ ಅನೇಕ ವಿಮರ್ಶಕರು ಮಾಡಿದ್ದಾರೆ. ಇಂದಿರಾಬಾಯಿಯಲ್ಲಿ ಬಾಲ್ಯ ವಿವಾಹದ ವಿರೋಧ, ವಿಧವಾ ವಿವಾಹದ ಪ್ರೋತ್ಸಾಹ ಮತ್ತು ಇಂಗ್ಲಿಷ್ ಶಿಕ್ಷಣದ ಪ್ರತಿಪಾದನೆಯನ್ನು ಗುಲ್ವಾಡಿಯವರು ಬಲವಾಗಿ ಮಾಡಿರುವುದು, ಅವರು ಆಧುನಿಕತೆಯನ್ನು ಒಂದು ವಿಮೋಚನೆಯಾಗಿ ನೋಡಿರುವುದರಿಂದ. ಇಂಗ್ಲಿಷ್ ಶಿಕ್ಷಣ ಮತ್ತು ಅದರ ಜೊತೆಗೆ ಹೆಣೆದುಕೊಂಡಿರುವ ಆಧುನಿಕತೆ ಗುಲ್ವಾಡಿಯವರ ದೃಷ್ಟಿಯಲ್ಲಿ ಬಿಡುಗಡೆಯ ದಾರಿ. ಆಧುನಿಕತೆಯನ್ನು ವಿಮುಕ್ತಿಯ ದಾರಿಯನ್ನಾಗಿ ನೋಡಿದ ಅನೇಕರು ನಮ್ಮಲ್ಲಿದಾರೆ. ಅವರು ಯಾರೂ ಇಲ್ಲಿಯ ಪರಂಪರೆಗೆ ವಿಮುಖರಾದವರಲ್ಲ. ರಾಜಾರಾಮ ಮೋಹನ್ ರಾಯ್ ರಿಂದ ನೆಹರೂ-ಅಂಬೇಡ್ಕರ್ ವರೆಗೆ, ಗುಲ್ವಾಡಿ ವೆಂಕಟರಾಯರಿಂದ ಕುದ್ಮುಲ್ ರಂಗರಾಯರು, ರಘುನಾಥ ರಾಯರು, ಕಮಲಾದೇವಿ ಚಟ್ಟೋಪಾಧ್ಯಾಯವರೆಗೆ ಅನೇಕರು ಈ ಪರಂಪರೆಯಲ್ಲಿದ್ದಾರೆ.
ಗಾಂಧೀಜಿ ಮತ್ತು ಲೋಹಿಯಾ ಮಾತ್ರ ಆಧುನಿಕತೆಯನ್ನು ಅದರಲ್ಲೂ ವಸಾಹತುಶಾಹಿ ಆಧುನಿಕತೆಯನ್ನು ಕಠಿಣವಾದ ವಿಮರ್ಶೆಗೊಳಪಡಿಸಿದವರು. ಸಾಮಾನ್ಯವಾಗಿ ನಾವು ಆಧುನಿಕತೆಯ ಕುರಿತು ಮಾತಾಡುವಾಗ ಆಧುನಿಕತೆಯ ಯುರೋಪಿಯನ್ ಆಯಾಮವನ್ನು ಮಾತ್ರ ನೋಡುತ್ತೇವೆ. ಹಾಗೆಯೇ ಅದು ಕೊಲೋನಿಯಲಿಸಮ್ ಆಗಿ ಪರಿವರ್ತಿತಗೊಂಡು ನಮ್ಮನ್ನು ಹಣಿದಿರುವುದನ್ನು ಮಾತ್ರ ನೋಡುತ್ತೇವೆ. ಆಧುನಿಕತೆಯ ಈ ಪಥವನ್ನು (ಟ್ರೆಜೆಕ್ಟರಿ) ಗಾಂಧಿ ವಿರೋಧಿಸಿದರೇ ಹೊರತು ಅವರು ಆಧುನಿಕತೆ ಎಂಬ ಸಮಗ್ರ ವಿದ್ಯಮಾನವನ್ನೇ ವಿರೋಧಿಸಿದ್ದಿಲ್ಲ. ಹಾಗಾಗಿ ಇದನ್ನು ಮಾಡರ್ನಿಟಿ ಎಂದು ಹೇಳಬೇಕೇ ಅಥವಾ ಮಾಡರ್ನಿಟೀಸ್ ಎಂದು ಹೇಳಬೇಕೇ ಎಂಬ ಪ್ರಶ್ನೆಯೂ ಇದೆ.
ಗುಲ್ವಾಡಿಯವರು ಆಧುನಿಕತೆಯ ಪರವಾಗಿದ್ದುಕೊಂಡೇ ಪರಂಪರೆಯ ಬಗ್ಗೆ ಪ್ರೀತಿ ಮತ್ತು ಎಚ್ಚರವನ್ನೂ ಇಟ್ಟುಕೊಂಡವರು. ಕಾದಂಬರಿಯ ಕೊನೆಯಲ್ಲಿ ಬರುವ ಬಾಲಾಜಿರಾವು ಮತ್ತು ಗಣೇಶ್ ರಾವು ಮಾತಾಡುವ ಸಂಭಾಷಣೆ ರೂಪದ ಪ್ರಬಂಧ ಪ್ರಕಟಗೊಳ್ಳುವುದು ಹಿತಬೋಧಿನಿ ಪತ್ರಿಕೆಯಲ್ಲಿ. ಪತ್ರಿಕೆಯ ಈ ಹೆಸರೇ ಬಹಳ ರೂಪಕಾತ್ಮಕವಾಗಿದೆ. ಇಲ್ಲಿ ಬಾಲಾಜಿ ಹೇಳುವ ಈ ಮಾತುಗಳು ಬಹಳ ಮುಖ್ಯ.
“ನಡತೆಯ ಸಕಲಶಾಸ್ತ್ರಗಳೂ ಕ್ರಮಗಳೂ ಆಯಾ ಕಾಲಸ್ಥಿತಿ, ಮನುಷ್ಯರ ಸ್ಥಿತಿ ಇವುಗಳನ್ನನುಸರಿಸಿ ಮಾಡಲ್ಪಟ್ಟವುಗಳಾಗಿವೆ ಎಂದು ಆ ಶಾಸ್ತ್ರಗಳಿಂದಲೇ ಆ ಕ್ರಮಗಳಿಂದಲೇ ತೋರುತ್ತೆ. ಎಲ್ಲ ಕಾರ್ಯಗಳಲ್ಲಿಯೂ ತಾರತಮ್ಯ ವಿಚಾರಿಸಬೇಕು. ಹಿಟ್ಟೂ ಬೂದಿಯೂ ಒಂದೇ ಎಂದು ಹೇಳಬಾರದು”.
ಗುಲ್ವಾಡಿಯವರು ಪರಂಪರೆಗಳ ಬಗ್ಗೆ ಸಂವೇದನಾಶೀಲರಾದವರು. ಆಧುನಿಕತೆಯನ್ನೂ ಪರಂಪರೆಯನ್ನೂ ಕಸಿ ಮಾಡುವ ಉತ್ಸಾಹ ತೋರಿಸುತ್ತಿರುವವರು. ಪರಂಪರೆಯನ್ನು ಸಂಪೂರ್ಣ ಧಿಕ್ಕರಿಸಿ ಆಧುನಿಕತೆಗೆ ಸಾಷ್ಟಾಂಗ ಪ್ರಣಾಮ ಗುಲ್ವಾಡಿಯವರಲ್ಲಿ ಇಲ್ಲ.
ಎರಡನೆಯ ಅಂಶ.
ವಸಾಹತೀಕರಣಗೊಂಡ ಭಾರತದ ಐತಿಹಾಸಿಕ ಬೆಳವಣಿಗೆಗಳಲ್ಲಿ ವಸಾಹತುಪೂರ್ವದ ಅನೇಕ ಸಾಮಾಜಿಕ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕಗೊಳಿಸಿರುವುದು ಕೂಡ ಬಹಳ ಮುಖ್ಯವಾದುದು. ವಸಾಹತುಪೂರ್ವದ ಸಂಸ್ಥೆಗಳು ಎಂದು ನಾವು ಸಾಮಾನ್ಯವಾಗಿ ಹೆಸರಿಸುವುದು ಮಠ-ಮಾನ್ಯಗಳನ್ನು, ಜಮೀನ್ದಾರೀ ಭೂಮಾಲೀಕ ವ್ಯವಸ್ಥೆಗಳನ್ನು. ಆದರೆ ಇಲ್ಲಿ ಕುಟುಂಬ ಎಂಬ ಸಂಸ್ಥೆಯೂ ಬರುತ್ತದೆ ಎನ್ನುವುದನ್ನು ನಾವು ಬಹಳ ಬಾರಿ ಮರೆತು ಬಿಡುತ್ತೇವೆ.
ಅಸಮಾನತೆಯ ಪ್ರಶ್ನೆ ಮನೆಯ ಹೊರಗಿನ ಸಾಮಾಜಿಕ ಕೂಡು-ಕಟ್ಟುಗಳಲ್ಲಿ ಮಾತ್ರ ಇರುವುದಲ್ಲ; ಅದು ಮನೆಯ ಒಳಗಿನ ಕಟ್ಟು-ಕಟ್ಟಳೆಗಳಲ್ಲೂ ಇರುತ್ತದೆ. 19ನೆಯ ಶತಮಾನದ ಕೊನೆಯಲ್ಲಿ ಮತ್ತು 20ನೆಯ ಶತಮಾನದ ಆರಂಭದಲ್ಲಿ ನಡೆದ ಬಗೆ-ಬಗೆಯ ಹೋರಾಟಗಳು, ಚಳವಳಿಗಳು ಈ ದೇಶದ ಹೊಸ್ತಿಲುಗಳ ಹೊರಗೆ ಮಾತ್ರ ನಡೆಯಲಿಲ್ಲ, ಅವು ಮನೆಯ ಒಳಗೂ ತೀವ್ರವಾಗಿ ನಡೆದವು. ಇದರಿಂದ ಆಧುನಿಕತೆಯ ಪ್ರಶ್ನೆ, ಪ್ರಜಾತಂತ್ರದ ಪ್ರಶ್ನೆ ಮತ್ತು ಸಮಾನತೆಯ ಪ್ರಶ್ನೆಗಳು ಆಳವಾಗಿ ಬೇರುಬಿಡುವುದಕ್ಕೆ ಬೇಕಾಗುವ ಅನೇಕ ಬಗೆಯ ಸಾಹಿತ್ಯಗಳು ಆ ಕಾಲದಲ್ಲಿ ಬಹುತೇಕ ಎಲ್ಲ ದೇಶ-ಭಾಷೆಗಳಲ್ಲಿ ಕಾಣಿಸಿಕೊಂಡವು. ಕೌಟುಂಬಿಕ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ರಚನೆಯಾದ ಕೃತಿಗಳನ್ನು ನಾವು ಈ ಹಿನ್ನೆಲೆಯಲ್ಲೂ ನೋಡಬಹುದಾಗಿದೆ.
ಕುಟುಂಬವೂ ಸೇರಿದಂತೆ ಭಾರತದುದ್ದಕ್ಕೂ ಹರಡಿರುವ ಅನೇಕ ಬಗೆಯ ಸಂಸ್ಥೆಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಚಳವಳಿ ದೇಶದಾದ್ಯಂತ ಒಂದೇ ಬಗೆಯ ಪರಿಣಾಮಗಳನ್ನು ಉಂಟು ಮಾಡಿತು ಎಂದು ವಾದಿಸುವುದು ನನ್ನ ಉದ್ದೇಶವಲ್ಲ. ಯಾಕೆಂದರೆ ಆಗ ಎರಡು ಬಗೆಯ ’ರಾಜಕೀಯ ಭಾರತ’ಗಳು ನಮ್ಮಲ್ಲಿ ಊರ್ಜಿತದಲ್ಲಿ ಇದ್ದುವು.
ಒಂದು ಪ್ರಿನ್ಸ್ ಲೀ ಇಂಡಿಯಾ ( ಬ್ರಿಟಿಷ್ ಭಾರತ)
ಇನ್ನೊಂದು ಇಂಡಿಯನ್ ಇಂಡಿಯಾ ( ಸಾಂಸ್ಥಾನಿಕ ಭಾರತ).
ಒಂದೇ ಭೂವಲಯ ಎರಡು ಭಿನ್ನ ಬಗೆಯ ರಾಜಕೀಯ ಹವಾಮಾನದಲ್ಲಿ ಬದುಕಬೇಕಾಗಿ ಬಂದುದರಿಂದ ಸಹಜವಾಗಿಯೇ ಇವುಗಳಲ್ಲಿನ ಸಾಹಿತ್ಯಕ ಅಭಿವ್ಯಕ್ತಿಯೂ ಭಿನ್ನವಾಗಿಯೇ ಇದ್ದವು.
ಎರಡು ಭಾರತಗಳಲ್ಲಿ ಆ ಕಾಲದಲ್ಲಿ ಅಭಿವ್ಯಕ್ತಗೊಂಡ ಸಾಹಿತ್ಯ ಮತ್ತು ಅಭಿನೀತಗೊಂಡ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಧ್ಯಯನಕ್ಕೆ ಒಳಪಡಿಸಿದರೆ ನಮ್ಮಲ್ಲಿ ನಡೆದ ಅನೇಕ ಬಗೆಯ ಚಿಂತನೆಗಳ–ಹೋರಾಟಗಳ ಇತಿಹಾಸವನ್ನು ಚಾರಿತ್ರಿಕ ನಿರ್ದಿಷ್ಟತೆಯಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ನಮ್ಮ ದೇಶದಲ್ಲಿ ಕಾಣಿಸಿಕೊಂಡ ಜಾತೀಯ ಮತ್ತು ಲಿಂಗೀಯ ಸಮಾನತೆಯ ಪ್ರಜಾಸತ್ತಾತ್ಮಕ ಅಭಿಲಾಷೆಗಳು ಸಾಹಿತ್ಯದಲ್ಲಿ ಹೇಗೆ ಒಡಮೂಡಿದವು ಎಂಬುದರ ಮೂಲಕವೇ ಭಾರತೀಯ ಸಾಹಿತ್ಯದ ಹೊಸ ಇತಿಹಾಸವನ್ನು, ಅಥವಾ ಭಾರತೀಯ ಇತಿಹಾಸದ ಹೊಸ ಸಾಹಿತ್ಯವನ್ನು ನಾವು ಬರೆಯಬಹುದಾಗಿದೆ.
ಇಂದಿರಾಬಾಯಿ ಪ್ರಿನ್ಸ್ ಲೀ ಇಂಡಿಯಾದ ಪ್ರತಿಷ್ಠಿತ ಮೇಲ್ ಮಧ್ಯಮವರ್ಗದ ಕುಟುಂಬವೊಂದರಲ್ಲಿ ನಡೆಯುವ ಘರ್ಷಣೆಗೆ ಸಂಬಂಧಿಸಿದ್ದು. ಈ ಘರ್ಷಣೆ ಮನೆತನಕ್ಕೆ ಸಂಬಂಧಿಸಿದ ವಿವಾದವಾದರೂ ಇದು ಪರಂಪರೆ ಮತ್ತು ಆಧುನಿಕತೆಯ ನೆಂಟಸ್ತನವನ್ನು ಕುದುರಿಸುವ ಸಂದರ್ಭದಲ್ಲಿ ನಡೆಯುವ ಘರ್ಷಣೆಯೂ ಹೌದು. ಹಾಗಾಗಿ ವಿಶ್ವಾತ್ಮಕ ಘರ್ಷಣೆಯ ಸ್ಥಾನಿಕ ಅಭಿವ್ಯಕ್ತಿಯಾಗಿಯೂ ಈ ಸಾಂಸಾರಿಕ ಕದನವನ್ನು ನೋಡಬಹುದು.
ಬಹಳ ಸಾಂಪ್ರದಾಯಿಕವಾಗಿದ್ದ, ಕೆಲವು ಸಂದರ್ಭಗಳಲ್ಲಿ ಕೇಡಿಗತನವನ್ನೂ ಹೊಂದಿದ್ದ ಮಹತ್ವಾಕಾಂಕ್ಷಿ ಕುಟುಂಬವೊಂದು ವಸಾಹತೀಕರಣದ ಗಾಢವಾದ ಮತ್ತು ರಭಸವಾದ ಪ್ರಭಾವದಿಂದ ಕೊನೆಗೂ ಏಕಾಂಗಿಯಾಗಿ ಮತ್ತು ಬೇರೆ ವಿಧಿ ಇಲ್ಲದೆ ಅನಿವಾರ್ಯವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ತನ್ನೊಳಗೆ ಕಷ್ಟದಿಂದ ನಿಹಿತಗೊಳಿಸಲು ಪ್ರಯತ್ನಿಸುವುದನ್ನು ಕಾದಂಬರಿಯ ಕೊನೆಯಲ್ಲಿ ಬರುವ ಅಂಬಾಬಾಯಿಯ ಈ ಮಾತು ಪುಷ್ಟೀಕರಿಸುತ್ತದೆ.
“ ಇಡೀ ಊರೇ ಒಂದಾದ ಮೇಲೆ ನಾವು ಮಾಡುವುದೇನು?. ಇನ್ನು ನಾವು ಸಹಾ ಅವರ ಸಂಗಡ ಸೇರುವುದೇ ಉತ್ತಮ”.
ಈ ಮಾತು ಆಧುನಿಕ ರಾಷ್ಟ್ರವಾಗುವತ್ತ ದಾಪುಗಾಲು ಹಾಕುತ್ತಿರುವ ಮಾಡರ್ನ್ ಇಂಡಿಯಾದ ಜೊತೆ ಕೈ ಜೋಡಿಸುವ ಮಾತು.
ಮೂರನೆಯ ಅಂಶ.
ಕಲೆ-ಸಾಹಿತ್ಯವೂ ಸೇರಿದಂತೆ ಯಾವುದೇ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳ ಶರೀರದಲ್ಲಿ ಇತಿಹಾಸದ ರಕ್ತನಾಳಗಳು ಇದ್ದೇ ಇರುತ್ತವೆ. ಇಂದಿರಾಬಾಯಿ ಗುಲ್ವಾಡಿಯವರ ರಚನೆಗಿಂತಲೂ ಮುಖ್ಯವಾಗಿ ಅದು ಆ ಕಾಲ ತನ್ನ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಹೇಳಿ ಬರೆಯಿಸಿದಂಥ ಕೃತಿ. ರಾಮಾಯಣ, ಮಹಾಭಾರತದಂತೆ ಹೇಳಿ ಬರೆಯಿಸಿದ ಕೃತಿ.
ಗಂಡನನ್ನು ದುರ್ಮಾರ್ಗಕ್ಕೆಳೆಯುವ ಮಾಯಾಪೂತನಿಯಂಥ ಅಂಬಾಬಾಯಿಯನ್ನು ಒಂದೆಡೆ, ಗಂಡನಿಗೆ ಅನುಕೂಲೆಯಾಗಿ ಆತನ ಹೆಜ್ಜೆಯಲ್ಲಿ ಹೆಜ್ಜೆ ಹಾಕುವ ಸತೀಸಾವಿತ್ರಿಯಂಥ ಜಲಜಾಕ್ಷಿಯನ್ನು ಇನ್ನೊಂದೆಡೆ ಚಿತ್ರಿಸುವ ಈ ಕಾದಂಬರಿ ಪುರುಷಲೋಕ ನಿರ್ಮಿಸಿದ ಎರಡು ಬಗೆಯ ಜನಪ್ರಿಯ ಸಿದ್ಧ ಮಾದರಿಗಳನ್ನು ಕಟೆದು ನಿಲ್ಲಿಸಿದೆ, ಇಂದಿರಾಬಾಯಿ ಎಂಬ ಹೆಣ್ಣುಮಗಳ ಹೆಸರನ್ನು ಹೊಂದಿದ್ದರೂ ಈ ಕಾದಂಬರಿ ಆಧುನಿಕಗೊಳ್ಳುತ್ತಿರುವ ಭಾರತೀಯ ಸನ್ನಿವೇಶದಲ್ಲಿ ಹೊಸ ಸ್ತ್ರೀ ಪ್ರತೀಕವೊಂದರ ಶೋಧವನ್ನು ಮಾಡುತ್ತಿಲ್ಲ ಎಂದು ನಮ್ಮ ಸ್ತ್ರೀವಾದಿ ವಿಮರ್ಶಕರು ತಮ್ಮ ಸಿದ್ಧಾಂತದ ಹಿನ್ನೆಲೆಯಲ್ಲಿ ಈ ಕಾದಂಬರಿಯ ಬಗ್ಗೆ ವಿಮರ್ಶೆಯ ಕೆಲವು ಮಾತುಗಳನ್ನು ಹೇಳಬಹುದು.
ಆದರೆ ಆಧುನಿಕತೆಯ ಮೊದಲ ಮಜಲಿನಲ್ಲಿ ಯಾವುದೇ ದೇಶ-ಸಮಾಜವೊಂದು ಹಾದುಹೋಗಲೇ ಬೇಕಾಗಿರುವ ಅನೇಕಾನೇಕ ಕಷ್ಟ-ಕಾರ್ಪಣ್ಯಗಳ ನಡುವೆ ಮತ್ತು ಘರ್ಷಣಾತ್ಮಕ ಸಾಂಸಾರಿಕ ಸಂಕೀರ್ಣತೆಗಳ ನಡುವೆ ಹೆಣ್ಣಿನ ಕಡೆಗೆ ಹೊಸಬೆಳಕನ್ನು ಹಾಯಿಸುವುದು ಗುಲ್ವಾಡಿಯವರಿಗೆ ಇಲ್ಲಿ ಮುಖ್ಯವಾಗಿದೆ ಎಂಬುದನ್ನು ನಾವು ಗಮನಿಸಬೇಕು. ಹಾಗಾಗಿ ಆಧುನಿಕ ಸ್ತ್ರೀವಾದದ ಚೂಪಾದ ಪ್ರಶ್ನೆಗಳನ್ನು ಗುಲ್ವಾಡಿಯವರಿಗೆ ಎಸೆಯುವುದು ಇಲ್ಲಿ ನ್ಯಾಯಸಮ್ಮತವಲ್ಲ.
ಆಧುನಿಕ ಭಾರತದ ಸಿದ್ಧಿಗೆ ಇಂದಿರಾಬಾಯಿ ಎಂಬ ಸರ್ವಸಮರ್ಪಿತ ಹೆಣ್ಣುಮಗಳೊಬ್ಬಳು ಸಾಧನವೂ ಹೌದು ಅಂತೆಯೇ ಅವಳು ಸಾಧನೆ ನಡೆಸುವವಳೂ ಹೌದು. ಅವಳ ಸಾಧನೆಯಿಂದಲೇ ನವಭಾರತದ ಸಿದ್ಧಿ. ಅದಕ್ಕಾಗಿ ಅವಳಿಗೆ ಅಮೃತರಾಯ ಮತ್ತು ಭಾಸ್ಕರರಾಯರೆಂಬ ಗಂಡಸರ ಸಂರಕ್ಷಣಾತ್ಮಕ ಪಹರೆ. ಇದನ್ನು ರೂಪಕಾತ್ಮಕವಾಗಿ ಹೇಳುವುದಾದರೆ ಹೊಸನಾಡನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕಾಗಿ ಆಧುನಿಕತೆ ಎಂಬ ಮಹಾಯಜ್ಞವನ್ನು ಇಂಗ್ಲಿಷ್ ಶಿಕ್ಷಣದ ದೀಕ್ಷೆ ತೊಟ್ಟು ಇಂದಿರೆ ಎಂಬ ಹೆಣ್ಣುಮಗಳು ನಡೆಸುತ್ತಿದ್ದಾಳೆ. ಅಮೃತ ಮತ್ತು ಭಾಸ್ಕರ ಎಂಬ ಗಂಡಸರು ಈ ಯಜ್ಞಸಂರಕ್ಷಣೆಯನ್ನು ಮಾಡುತ್ತಿದ್ದಾರೆ.
ಕುಟುಂಬ ಎಂಬ ಕಿರುಸಂಸ್ಥೆಯ ಮೂಲಕ ರಾಷ್ಟ್ರ ಎಂಬ ಹಿರಿಸಂಸ್ಥೆಯನ್ನು ಗಟ್ಟಿಗೊಳಿಸುವ ಸಂದರ್ಭದಲ್ಲಿ ಇದಿರಾಗಬಹುದಾದ ಸವಾಲು ಮತ್ತು ಅವಕಾಶಗಳನ್ನು ಗುಲ್ವಾಡಿಯವರು ಇಲ್ಲಿ ಕಟ್ಟಿಕೊಡುತ್ತಿದ್ದಾರೆ. ತನ್ನ ತಂದೆ-ತಾಯಿ ಪ್ರತಿಪಾದಿಸುವ ಸ್ಥಾವರಗೊಂಡ ಮೌಲ್ಯಗಳನ್ನು ಧಿಕ್ಕರಿಸುವ, ಹೊಸಬದುಕಿಗಾಗಿ ಹುಟ್ಟಿದ ಮನೆಯನ್ನು ದಾಟಿ ಹೊರಬರುವ ಇಂದಿರಾಬಾಯಿಯ ಈ ದಾಟುವಿಕೆ ಭಾಸ್ಕರ ಸಮುದ್ರ ದಾಟಿ ವಿದೇಶಕ್ಕೆ ಹೋದಷ್ಟೇ ಮಹತ್ವದ್ದು. ವ್ಯಕ್ತ ಸಮುದ್ರಕ್ಕಿಂತಲೂ ಅವ್ಯಕ್ತ ಸಮುದ್ರವನ್ನು ದಾಟುವ ಈ ಪ್ರಕ್ರಿಯೆಯೇ ಸಂಕೀರ್ಣವಾದುದು ಮತ್ತು ಸಾಹಸಶೀಲವಾದುದು. ಉಲ್ಲಂಘನೆಯಾಗದೆ ಬಯಸಿದ್ದು ಸಿಗದು ಎಂಬುದನ್ನು ಈ ಕಾದಂಬರಿ ಎಷ್ಟು ಸೂಕ್ಷ್ಮವಾಗಿ ಚಿತ್ರಿಸಿದೆ.
ಇಂದಿರಾಬಾಯಿ ಒಂದು ಗಂಡಿನ ಆಶ್ರಯದಿಂದ ಇನ್ನೊಂದು ಗಂಡಿನ ಆಶ್ರಯಕ್ಕೆ ಹೋಗುವ ಹೆಣ್ಣನ್ನು ಚಿತ್ರಿಸುವುದರಲ್ಲಿ ವಿರಮಿಸುತ್ತದೆ. ವಿದ್ಯೆಯಿಂದ ಸ್ವತಂತ್ರವಾಗುವ ಮತ್ತು ತನ್ನ ಅನನ್ಯತೆಯನ್ನು ಹುಡುಕುವ ಆತ್ಮಶೋಧನೆಯ ಹಂತದ ಮಾದರಿಯನ್ನು ಅದು ತಲುಪದಿರುವುದರಿಂದ ಇಲ್ಲಿ ಇಂದಿರಾಬಾಯಿಯ ಪುನರ್ ನವೀಕರಣ ಆಗುತ್ತದೆಯೇ ಹೊರತು ಆಕೆಯ ಪುನರ್ ರೂಪೀಕರಣ ಆಗುವುದಿಲ್ಲ ಎಂದು ನಾವು ಈಗ ಹೇಳಬಹುದು. ಆದರೆ ಹೊಸ ವಾಸ್ತವಿಕತೆಯನ್ನು ಸೃಷ್ಟಿಸುವುದು ಗುಲ್ವಾಡಿಯವರ ಉದ್ದೇಶವಲ್ಲ. ಗುಲ್ವಾಡಿಯವರು ಇಂದಿರಾಬಾಯಿಯಲ್ಲಿ ನಡೆಸುವ ರಾಜಕೀಯ; ಹೆಣ್ಣಿನ ಬಿಡುಗಡೆಯ ರಾಜಕೀಯ ಅಲ್ಲ. ಅದು ಪ್ರಿನ್ಸ್ ಲೀ ಇಂಡಿಯಾ ಎಂಬ ಮಹಾಮನೆಯಲ್ಲಿ ಆಧುನಿಕತೆಯ ಸ್ಥಾನ ವಿವೇಚನೆಯ ರಾಜಕೀಯ.
ಕಾಲದ ಶಿಶುಗಳೂ ಆಗಿರುವ ನಮ್ಮ ಎಲ್ಲ ಸಾಹಿತ್ಯ ಕೃತಿಗಳು ತಮಗೆ ಬೇಕಾದ ವಾಸ್ತವಿಕತೆಯನ್ನು ತಾವೇ ಸಂಯೋಜಿಸುವ ಕೃತಿಶರೀರದಲ್ಲಿ ನಿಹಿತಗೊಳಿಸುವುದರಿಂದ ಅವು ಕೂಡ ಸಂಸ್ಕೃತಿಯೊಂದರ ಡಿಸ್ಕೋರ್ಸ್‌ನ ಭಾಗವಾಗುತ್ತವೆ. ಆಧುನಿಕ ಭಾರತ ಎಂಬ ದೊಡ್ಡ ಸಂಸ್ಥೆಯನ್ನು ಕಟ್ಟುವ ಜವಾಬ್ದಾರಿ ವಿದ್ಯಾವಂತ ಭಾರತೀಯ ಪುರುಷರಿಗೆ ಇದೆ. ಅಂತಹ ಪುರುಷರಿಗೆ ಮನೆಯಲ್ಲಿ ಸುಶಿಕ್ಷಿತ ಮಹಿಳೆಯರ ಸಾಂಗತ್ಯದ ಅಗತ್ಯವೂ ಇದೆ. ಹಾಗಾಗಿ ರಾಷ್ಟ್ರ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟಹೊರಟವರಿಗೆ ಕುಟುಂಬ ಎಂಬ ಸಣ್ಣ ಸಂಸ್ಥೆಯೂ ಅನುಕೂಲವಾಗಿರಬೇಕು, ಪೂರಕವಾಗಿರಬೇಕು. ಇಂದಿರಾಬಾಯಿ ಆಧುನಿಕ ಶಿಕ್ಷಣವನ್ನು ಪಡೆದರೂ ಆಕೆಯ ಅಸ್ಮಿತೆ ಏನೆಂದರೆ ಅಸಿಸ್ಟೆಂಟ್ ಕಲೆಕ್ಟರ್ ಭಾಸ್ಕರರಾಯರ ಧರ್ಮಪತ್ನಿ. ಆಕೆಯ ವಿಳಾಸ ಬದಲಾಗಿದೆ. ಆದರೆ ಆಕೆಯ ಅಸ್ಮಿತೆ ಬದಲಾಗಿದೆಯೇ ಎಂಬ ಪ್ರಶ್ನೆ ಗುಲ್ವಾಡಿಯವರಿಗೆ ಮುಖ್ಯವಾದ ಪ್ರಶ್ನೆ ಅಲ್ಲ. ಯಾಕೆಂದರೆ ಮೇಧಾವಿ ಗಂಡನಿಗೆ ಸರಿಸಾಟಿಯಾಗುವ ಬೌದ್ಧಿಕ ಸಂಗಾತಿಯಾಗಿರುವುದೆಂದರೆ ಆಧುನಿಕ ರಾಷ್ಟ್ರರಥದ ಎರಡು ಚಕ್ರಗಳಾಗುವುದೇ ಆಗಿದೆ.
ನಿಜ. ಬ್ರಿಟಿಷ್ ಆಡಳಿತಾಂಗಕ್ಕೆ ಪುರುಷ ಗುಮಾಸ್ತರನ್ನು ತಯಾರು ಮಾಡುತ್ತಿದ್ದ ಇಂಗ್ಲಿಷ್ ಶಿಕ್ಷಣ ಭಾರತೀಯ ಹೆಣ್ಣುಮಕ್ಕಳಿಗೆ ಹಲವು ಸಾಧ್ಯತೆಗಳ ಬಾಗಿಲನ್ನು ತೆರೆಯಲಿಲ್ಲ. (ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿ) ಯಾಕೆಂದರೆ ವಸಾಹತುಶಾಹಿ ಯೋಜನೆ ಭಾರತದಲ್ಲಿ ಜಾರಿಗೊಂಡ ಕ್ರಮದಿಂದಲಾಗಿ ಇಲ್ಲಿ ಸಾವಯವ ಸಹಜ ಸ್ವರೂಪದಲ್ಲಿ ಆಧುನಿಕತೆ ಮೊಳಕೆಯೊಡೆಯಲಿಲ್ಲ. ಆಧುನಿಕತೆ ಹೊರಗಿನಿಂದ ಹೇರಲ್ಪಟ್ಟ ಬೆನ್ನಭಾರವಾಗಿ ಬಂತು. ಹಾಗಾಗಿ ವಸಾಹತುಶಾಹಿ ಮತ್ತು ಆಧುನಿಕತೆಯ ಪ್ರವೇಶ ಭಾರತದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಲಿಲ್ಲ. ವಸಾಹತುಪೂರ್ವ ಭಾರತದ ಹಳೆಯ ಶ್ರೇಣೀಕರಣಗಳು ಹಾಗೆಹಾಗೆಯೇ ಮುಂದುವರಿಯಿತು. ವಸಾಹತುಗಳ ಆಧುನಿಕತೆಗೂ, ಪಶ್ಚಿಮದ ಆಧುನಿಕತೆಗೂ ಶತಮಾನಗಳ ವ್ಯತ್ಯಾಸ ಇದೆ. ಹಾಗಾಗಿ ನಮ್ಮಲ್ಲಿ ರೂಪುಗೊಂಡ ಎಲ್ಲ ಆಧುನಿಕ ಸಂಸ್ಥೆಗಳಲ್ಲಿ ಮತ್ತೆಮತ್ತೆ ಬಿಕ್ಕಟ್ಟುಗಳು ಮತ್ತು ಹಳೆಯ ಪ್ರಾಣಸಂಕಟದ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.
*
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.