Date: 22-03-2023
Location: ಬೆಂಗಳೂರು
“ಕಾವ್ಯ ಬರೆಯುವುದಕ್ಕಾಗಿ ಕಾವ್ಯ ಬರೆಯುವುದಕ್ಕಿಂತ ಹೇಳಲಿರುವುದನ್ನು ಹೇಳಲಿಕ್ಕಾಗಿ ಕಾವ್ಯ ಬರೆಯುವುದು ಯುಕ್ತವಲ್ಲವೇ? ಕಾವ್ಯ ಒಂದು ಫಾರಮ್ಮು ಅಷ್ಟೆ. ಅಂದರೆ ಕವಿಯ ವಿಚಾರಗಳನ್ನು-ಅನುಭವಗಳನ್ನು ಅಭಿವ್ಯಕ್ತಿಸಲು ಇರುವ ಮಾದ್ಯಮವೆ ಕಾವ್ಯ,” ಎನ್ನುತ್ತಾರೆ ಅಂಕಣಕಾರ ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ಹೊಸಕಾವ್ಯದ ಭಾಷೆ, ಗಾತ್ರ, ಹೂರಣ' ವಿಚಾರದ ಕುರಿತು ಬರೆದಿದ್ದಾರೆ.
1
ನನಗಂತು ಬಾಲ್ಯಕಾಲದಲ್ಲಿ ಒಳಗುದಿಗಳನ್ನು ಹೇಳಲು ನನ್ನದೇ ಆದ ಭಾಷೆಯೊಂದು ಇತ್ತು. ಆದರೆ ಆ ಭಾಷೆ ನನ್ನ ವಿದ್ಯಾಭ್ಯಾಸ ಮತ್ತು ಸಾಹಿತ್ಯದ ಓದುಗಳಿಂದ ಒಡೆದು ಹೋಯಿತು. ಆದರೂ ನನ್ನ ಕವಿತೆಯಲ್ಲಿ ನನ್ನ ಬಾಲ್ಯ ಕಾಲದ ಹಳ್ಳಿಯ ಭಾಷೆ ಮತ್ತು ನಾನು ವಿದ್ಯೆಯ ಮೂಲಕ ರೂಡಿಸಿಕೊಂಡ ಭಾಷೆಗಳ ನಡುವೆ ಸದಾ ಒಂದು ಜಗಳ ಏರ್ಪಡುತ್ತಲೇ ಇರುತ್ತಿದೆ. ಹಾಗಾಗಿ ನಾನು ಈ ವಿದ್ಯೆಯಿಂದ ಒದಗಿದ ಸ್ಟಾಂಡರ್ಡ್ (ಮಾನಕ) ಭಾಷೆ ಮತ್ತು ನನ್ನೂರಿನ ಆಡುಭಾಷೆಗಳ ನಡುವಿನ ಎಂಥದೋ ಒಂದು ರೂಪವನ್ನು ರೂಡಿಸಿಕೊಳ್ಳಲು ಯತ್ನಿಸುತ್ತಿದ್ದೇನೆ. ಇಂತಹ ರೂಡಿಸಿಕೊಳ್ಳುವ ಮಾರ್ಗಮದ್ಯದ ಯತ್ನಗಳಂತೆ ನನ್ನ ಕವಿತೆಗಳಿವೆ. ಅವುಗಳಲ್ಲಿ ಬಳಕೆ ಮಾಡಿರುವ ಭಾಷೆಗಳು ನನ್ನ ನೆಲಮೂಲದ ಭಾಷೆ ಮತ್ತು ವಿದ್ಯಾಮೂಲದ ಭಾಷೆಗಳ ಜಗಳದ ದಾಖಲೆಗಳಾಗಿವೆ. ಪ್ರತಿಷ್ಠಿತ ಸಾಹಿತ್ಯವು ನಾನು ಬಾಲ್ಯದಲ್ಲಿ ಬಳಸುತ್ತಿದ್ದ ಭಾಷೆಯನ್ನು ಮಾಸಲುಗೊಳಿಸಿ ತಾನೇ ಯಜಮಾನವಾಗಿ ಇಂದು ಕೂತುಬಿಟ್ಟಿದೆ. ವಿದ್ಯಾವ್ಯವಸ್ಥೆಯ ಗ್ರಹಿಕೆಯ ಕ್ರಮಗಳಿಗಿಂತ ಭಿನ್ನವಾದ ಗ್ರಹಿಕೆಯ ಕ್ರಮಗಳನ್ನು ನಮ್ಮ ಬಾಲ್ಯ ನಮಗೆ ನೀಡಿತ್ತು. ಆದರೆ ನಾವು ತೊಡಗಿಕೊಂಡ ವಿದ್ಯೆಯಿಂದ ಅದೂ ಒಡೆದುಹೋಗಿದೆ. ಸಂಕರವಾಗಿದೆ. ಹಾಗಾಗಿ ನಮ್ಮ ಅನುಭವದ ವಿನ್ಯಾಸ ಮತ್ತು ಅದನ್ನು ಅಭಿವ್ಯಕ್ತಿಸುವ ಕ್ರಮಗಳಲ್ಲಿ ಏನೋ ಒಡಕು ಒದಗಿದಂತೆ ಕಾಣುತ್ತಿದೆ. ಅದು ಎಲ್ಲೂ ಸಲ್ಲದಾಗುತ್ತಿದೆ.
ವಿದ್ಯಾಮೂಲದ ಭಾಷೆ-ಪರಿಭಾಷೆಗಳಿಗಿಂತ ಭಿನ್ನವಾದ ನಮ್ಮದೇ ಭಾಷೆ-ಪರಿಭಾಷೆಗಳ ಪರಂಪರೆಗಳನ್ನು ನಾವು ಹೊಂದಿದ್ದೆವು. (ಹೊಂದಿದ್ದೇವೆ) ಆದರೆ ಈಗ ನಮ್ಮ ಪರಂಪರೆಯನ್ನು ಮರೆತು ಶೈಕ್ಷಣಿಕ-ಲಿಖಿತ ಜಗತ್ತನ್ನೆ ನಮ್ಮ ಪರಂಪರೆಯಾಗಿ ಹೇರಿಕೊಂಡಿದ್ದೇವೆ. ಆರ್.ನರಸಿಂಹಾಚಾರ್, ಮುಗಳಿ ಪ್ರಣೀತ ಸಾಹಿತ್ಯ ಪರಂಪರೆಯನ್ನು ನಾವಿಂದು ಏನು ನಮ್ಮ ಪರಂಪರೆ ಎಂದುಕೊಂಡಿದ್ದೇವೊ ಅದು ನಮ್ಮದಾಗಿರದೆ ನಮ್ಮ ಮೇಲೆ ನಮ್ಮ ಶಿಕ್ಷಣ ವ್ಯವಸ್ಥೆಯು ಹೇರಿದ ಪರಂಪರೆಯಾಗಿದೆ. ನಾವು ಆಡುತ್ತ ಕಲಿತ ಭಾಷೆ ಮತ್ತು ಓದುತ್ತ ಕಲಿತ ಭಾಷೆಗಳು ಬೇರೆ ಬೇರೆಯೆ ಆಗಿವೆ. ಎರಡೂ ಲೋಕಗಳ ಗ್ರಹಿಕೆ ಮತ್ತು ಅಭಿವ್ಯಕ್ತಿ ಕ್ರಮಗಳೂ ಬೇರೆ ಬೇರೆಯೆ ಆಗಿವೆ. ಹೀಗಾಗಿ ನಮ್ಮ ಕವಿತೆಗಳು ಗ್ರಾಮ್ಯ ಮತ್ತು ಶಿಕ್ಶಿತ ಜಗತ್ತುಗಳ ಸಂಕರವಾಗಿಯೇ ಒಡಮೂಡುತ್ತಿವೆ. ಕಾವ್ಯ ಭಾಷೆಯ ವಿಚಾರದಲ್ಲಿ ಗ್ರಾಮೀಣರಲ್ಲಿ ಸಲ್ಲಲಾಗದ ಅಸಹಾಯಕತೆ ಮತ್ತು ಶಿಕ್ಷಿತ ಲೋಕದಲ್ಲಿ ಸಲ್ಲಲೇಬೇಕಾದ ಅನಿವಾರ್ಯತೆಯು ನಮಗೆ ಏರ್ಪಟ್ಟಿದೆ. ಇಂತಹ ಸ್ಥಿತಿಯನ್ನು ಗದ್ಯದಲ್ಲಿ ದೇವನೂರು ಅಂಥವರು ದಾಟಿದ್ದಾರೆ. ಆದರೆ ಕಾವ್ಯಕ್ಕೆ ಅದಿನ್ನೂ ಸಾಧ್ಯವಾಗಿಲ್ಲ.
2
ಕಾವ್ಯ ಬರೆಯುವುದಕ್ಕಾಗಿ ಕಾವ್ಯ ಬರೆಯುವುದಕ್ಕಿಂತ ಹೇಳಲಿರುವುದನ್ನು ಹೇಳಲಿಕ್ಕಾಗಿ ಕಾವ್ಯ ಬರೆಯುವುದು ಯುಕ್ತವಲ್ಲವೇ? ಕಾವ್ಯ ಒಂದು ಫಾರಮ್ಮು ಅಷ್ಟೆ. ಅಂದರೆ ಕವಿಯ ವಿಚಾರಗಳನ್ನು-ಅನುಭವಗಳನ್ನು ಅಭಿವ್ಯಕ್ತಿಸಲು ಇರುವ ಮಾಧ್ಯಮವೇ ಕಾವ್ಯ. ಕಾವ್ಯವು ಸುಂದರವಾಗಿರಬೇಕು ಅದರ ಭಾಷೆ, ಅಭಿವ್ಯಕ್ತಿ ಕ್ರಮಗಳು ಆಕರ್ಷಕವಾಗಿರಬೇಕು ಎಂಬುದು ಅಷ್ಟು ಮುಖ್ಯವಲ್ಲ. ಕಾವ್ಯದ ಮೂಲಕ ಕವಿಗೆ ಹೇಳಬೇಕಾಗಿರುವ ಸಂಗತಿಗಳನ್ನು ಹೇಳಲು ಆಗಿದೆಯೇ ಅಥವಾ ಇಲ್ಲವೇ ಎಂಬುದೇ ಹೆಚ್ಚು ಮುಖ್ಯವೆಂದು ತೋರುತ್ತದೆ ಅಲ್ಲವೇ? ಆದರೆ ಕಾವ್ಯದ ರೂಪ ಮತ್ತು ವಸ್ತುಗಳು ಹಾಗೆ ವಿಂಗಡಿಸಲು ಬರುವಷ್ಟು ಸರಳವಾದುವಲ್ಲ.
ವಿಚಾರ; ತಳಮಳಗಳನ್ನು ಅಭಿವ್ಯಕ್ತಿಸುವುದು ಹೆಚ್ಚು ಮುಖ್ಯವೆ ಹೊರತು ಸುಂದರವಾಗಿ ಅಭಿವ್ಯಕ್ತಿಸುವುದು ಹೆಚ್ಚು ಮುಖ್ಯ ಅಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.
ಆದರೆ ಕಾವ್ಯ ಸಂಗತಿ ಅಷ್ಟು ಸರಳವಾಗಿಲ್ಲ. ಕಾವ್ಯಸೌಂರ‍್ಯವೆಂಬುದು ಕಾವ್ಯದ ಭಾಷೆ, ಲಯಗಾರಿಕೆ, ರೂಪಕ, ಉಪಮೆಗಳೆಲ್ಲವಕ್ಕೂ ಸಂಬಂಧಿಸಿದ ವಿಚಾರ ಕೂಡ. ಕಾವ್ಯಸೌಂದರ‍್ಯ ಮತ್ತು ಕಾವ್ಯದ ಸಾಮಗ್ರಿಗಳು ಪರಸ್ಪರ ಸಂಬಂಧಿಸಿದವೇ ಆದರೂ ಕಾವ್ಯವು ಚೆನ್ನಾಗಿ ಕಟ್ಟಲ್ಪಟ್ಟಿದೆಯೋ? ಶಿಲ್ಪ-ಲಯಗಾರಿಕೆ-ಬಂಧ-ಭಾಷಾಪ್ರಯೋಗಗಳಲ್ಲಿ ಅದು ಯಶಸ್ವಿಯಾಗಿದೆಯೋ? ಅಂದರೆ ಕಾವ್ಯವು ಸುಂದರವಾಗಿದೆಯೋ ಇಲ್ಲವೋ? ಎಂಬುದಕ್ಕಿಂತ ಕಾವ್ಯ ಪ್ರಕಟಿಸುವ ಕಾಳಜಿ ಹೆಚ್ಚು ಮುಖ್ಯವಾದದ್ದು ಎಂದ ಕೂಡಲೇ ಕಾವ್ಯದ ರೂಪ ಮತ್ತು ಹೂರಣಗಳಲ್ಲಿ ಒಂದನ್ನು ಏರಿಸಿ ಇನ್ನೊಂದನ್ನು ತಗ್ಗಿಸಿದಂತೆ ಆಗುತ್ತದೆ. ಕಾವ್ಯದಲ್ಲಿ ಇವಲ್ಲದೆ ಇನ್ನೂ ಅಸಂಖ್ಯ ಸಂಗತಿಗಳಿವೆ. ಅವೆಲ್ಲವನ್ನೂ ಹೀಗೆ ತರತಮ ಶ್ರೇಣೀಕರಣದಲ್ಲಿ ವಿಂಗಡಿಸಿ ಹಾಕಲಾಗುವುದಿಲ್ಲ. ಹಾಗೆ ನೋಡಿದರೆ ಕಂಟೆಂಟು ಮತ್ತು ಫಾರಮ್ಮುಗಳು ಬೇರೆ ಬೇರೆ ಅಲ್ಲ. ಓದುಗನಿಗೆ ಕಾವ್ಯದ ಛಂದಸ್ಸಿಗಿಂತ ಇಂದು ಅದರ ಹೂರಣ ಹೆಚ್ಚು ಮನನಯೋಗ್ಯ ಅನ್ನಿಸುತ್ತಿದೆ-ಛಂದಸ್ಸು, ಶಿಲ್ಪ, ಬಂಧ, ಭಾಷೆಗಳೆಲ್ಲ ಬಿಚ್ಚಲೆಂದೇ ಇರುವ ಆವರಣಗಳು; ಅವನ್ನು ತೆರವುಗೊಳಿಸಿಯೇ ಹೂರಣವನ್ನು ಪಡೆಯಬೇಕು ಎಂಬ ಕಾಲ ಇದಲ್ಲ. ವಸ್ತು ಕೂಡ ಇರುವುದು ನಿರಚನೆಗಾಗಿಯೇ. ಹಾಗಾಗಿ ಫಾರಮ್ಮು ಮತ್ತು ಕಂಟೆಂಟುಗಳೆರಡೂ ಇಂದು ನಿರಚನೆಗೊಳ್ಳಬೇಕಾದ ಪಠ್ಯಸಂಗತಿಗಳೇ ಆಗಿವೆ. ಅಲ್ಲದೆ ಕವಿತೆಯ ಹೊಸತನವೆಂಬುದು ಕೇವಲ ವಸ್ತುವಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ರೂಪಕ್ಕೆ ಸಂಬಂಧಿಸಿದ್ದು ಕೂಡ. ರೂಪವೆಂದರೆ ಭಾಷೆ-ಗಾತ್ರ-ಛಂದಸ್ಸು ಹೀಗೆ ಹಲವು ಸಂಗತಿಗಳಿಗೆ ಸಂಬಂಧಿಸಿದ್ದು ಅಲ್ಲವೇ?
ಆಧುನಿಕ ಕನ್ನಡ ಕಾವ್ಯದಲ್ಲಿ ಬಹು ಸ್ಥೂಲವಾಗಿ ನಾಲ್ಕು ಕಾವ್ಯ ಗಾತ್ರಗಳಿವೆ. ಇವುಗಳನ್ನು ಕಾವ್ಯ ರೂಪಗಳೆಂದೂ ಕರೆಯಬಹುದು. 1. ಹನಿಗವನ 2. ಕವನ 3. ಖಂಡಕಾವ್ಯ 4. ಮಹಾಕಾವ್ಯ. ಈ ಇವುಗಳಲ್ಲಿ ಒಂದೊಂದಕ್ಕು ಗಾತ್ರ ಮತ್ತು ಚೌಕಟ್ಟಿಗೆ ಸಂಬಂಧಿಸಿದಂತೆ ಸ್ಟಾಂಡರ್ಡಾದ ಆಕೃತಿಗಳು ಸಿದ್ಧಗೊಂಡಿವೆ. ಬಹುತೇಕ ಪಂಜೆಯಿಂದ ಸಿದ್ಧಲಿಂಗಯ್ಯನವರವರೆಗೆ ಎಲ್ಲರೂ ತಮ್ಮತಮ್ಮಲ್ಲೆ ಒಂದು ಒಳ ಒಪ್ಪಂದ ಮಾಡಿಕೊಂಡಂತೆ ಒಂದು ನಿರ್ಧಿಷ್ಟ ಬಂಧ, ಗಾತ್ರ, ಆಕಾರಗಳಿಗೆ ತಮ್ಮೆಲ್ಲ ಕವನಗಳನ್ನು ರೂಡಿಸಿಕೊಂಡಿದ್ದಾರೆ. ಮತ್ತು ಆ ಮೂಲಕ ಕವನವೆಂದರೆ ಹೀಗಿರಬೇಕು ಎಂಬ ಮಾನಕ ಪ್ರಮಾಣ (ಕ್ಯಾನನ್) ಒಂದನ್ನು ಸೃಷ್ಟಿಸಿಬಿಟ್ಟಿದ್ದಾರೆ. ಈ ಪ್ರಮಾಣಬದ್ಧತೆ ಅಥವಾ ‘ಪ್ರಮಾಣು’ ಏನಿದೆಯಲ್ಲ ಇದಕ್ಕೆ ಎಲ್ಲರೂ ಬಹಳಷ್ಟು ಜೋತು ಬೀಳುತ್ತ ಬಂದಿದ್ದಾರೆ.
ಕವಿತೆಯ ಗಾತ್ರವು ಅದರ ಛಂದಸ್ಸಿಗೂ ಸಂಬಂಧಿಸಿದ ವಿಚಾರ ಹೌದು. ಕೆಲವು ವಿಚಾರಗಳನ್ನು ಹೇಳಲು ಕೆಲವೊಮ್ಮೆ ನಾಲ್ಕೈದು ಸಾಲುಗಳೆ ಸಾಕಾಗುತ್ತವೆ. ಆದರೂ ಕೆಲವರು ಬಲವಂತವಾಗಿ 15-20 ಸಾಲುಗಳಲ್ಲಿ ಅದನ್ನು ಲಂಬಿಸಿ ಹೇಳುತ್ತಾರೆ. ಕೆಲವು ಅನುಭವಗಳನ್ನು ನಿರೂಪಿಸಲು ಗದ್ಯಾತ್ಮಕ ಲಯ ಉಚಿತವೆನಿಸುತ್ತದೆ. ಆದರೂ ಕೆಲವರು ಅಲ್ಲಿ ಬಲವಂತಕ್ಕಾಗಿ (ಚೆನ್ನಾಗಿ) ಪ್ರಾಸ, ಒಳಪ್ರಾಸಗಳನ್ನು ತರುತ್ತಾರೆ. ಆಕೃತಿ ಮತ್ತು ಸಾಮಗ್ರಿಗಳ ನಡುವಿನ ತಾಳಮೇಳದ ಕೊರತೆಯ ಜೊತೆ ಗಾತ್ರ ಪ್ರಜ್ಞೆಯ ಕೊರತೆ ಕೂಡ ಬಹುತೇಕ ಕಡೆ ಇರುತ್ತದೆ. ಕವಿತೆಯ ಗಾತ್ರ ಮತ್ತು ವಸ್ತುವಿನ ನಡುವೆ ತಾಳಮೇಳ ಇರಬೇಕಲ್ಲವೆ? ಇಂದು ಕವಿತೆಯ ಸ್ಟಾಂಡರ್ಡ್ ಆಕೃತಿ, ಕ್ರಮ, ಬಂಧಗಳ ದೃಷ್ಟಿಯಿಂದ ಆಧುನಿಕ ಕವಿಗಳಲ್ಲಿ ವ್ಯತ್ಯಾಸಗಳು ಬಹಳ ಕಡಿಮೆ. ಹಾಗಾಗಿ ಆಧುನಿಕ ಕವಿತೆಗಳಿಗೆ ಇಂದು ಏಕರೂಪತೆಯೊಂದು ಪ್ರಾಪ್ತವಾಗಿದೆ.
ಆಧುನಿಕ ಕವಿತೆಯೆಂದರೆ ಹೀಗೇ ಇರಬೇಕೆಂಬ ರಾಚನಿಕ ಚೌಕಟ್ಟೊಂದರ ಮನಾಟನಿಗೆ ನಮ್ಮ ಆಧುನಿಕ ಕಾವ್ಯ ಬಿದ್ದುಹೋಗಿದೆ. ಈ ಮನಾಟನಿಯನ್ನು ಮೀರುವ ಪ್ರಯೋಗಗಳು ಬಹಳ ಕಡಿಮೆ. ಕವನವೆಂದರೆ ಒಂದು ಪುಟದಿಂದ ಎರಡು ಪುಟಗಳ ನಡುವಿನ ಗಾತ್ರದ್ದು; ಅಜಮಾಸು 15 ರಿಂದ 40 ಸಾಲುಗಳ ನಡುವೆಯೇ ಅದು ಅಭಿವ್ಯಕ್ತಗೊಳ್ಳಬೇಕು ಎಂಬಂತಹ ಅಲಿಖಿತ ನಿಯಮವೊಂದು ರೂಡಿಯಿಂದಲೆ ರೂಪಗೊಂಡುಬಿಟ್ಟಿದೆ. ರೂಡಿಯು ಜಡ್ಡುಗೊಂಡಾಗ; ಮಾರ್ಗವು ಜಡ್ಡುಗೊಂಡಾಗ ಹುಟ್ಟುವ ಪ್ರಮಾಣುಗಳಿವು. ಅಂದರೆ ಆಕೃತಿಯು ಸಾಮಗ್ರಿಗೆ ಹೊಂದುವಂತಿರಬೇಕು. ಆಕೃತಿಯೆಂಬುದು ಸಾಮಗ್ರಿಯ ಗುಲಾಮ. ಸಾಮಗ್ರಿಯನ್ನು ಆಕೃತಿಗೆ ಎರಕ ಹೊಯ್ಯಬಾರದು. ಸಾಮಗ್ರಿಯೇ ತನ್ನ ಆಕಾರವನ್ನು ಕಂಡುಕೊಳ್ಳಬೇಕು. ಆಧುನಿಕ ಕವಿತೆಗಳಲ್ಲಿ ಸಾಮಗ್ರಿಯನ್ನು ಆಕೃತಿಗೆ ಎರಕ ಹೊಯ್ಯುವುದೇ ನಡೆಯುತ್ತಿದೆ. ಅನುಭವವೆಂಬುದು ಅಥವಾ ವಿಚಾರವೆಂಬುದು ಅಚ್ಚಿಗೆ ಹೊಯ್ಯಲು ಸಿದ್ಧಗೊಳಿಸಿದ ಬೆಲ್ಲದ ಪಾಕವಲ್ಲ. ಯಾವ ಅಚ್ಚಿಗೆ ಬೇಕೋ ಆ ಅಚ್ಚಿಗೆ ಹೊಯ್ದು ಬೇಕಾದ ಆಕೃತಿಯನ್ನು ಕಾವ್ಯದಲ್ಲಿ ಪಡೆಯಲಾಗದು. ಆಕೃತಿಯೆಂಬುದನ್ನು ಸಾಮಗ್ರಿಯೂ ನಿರ್ಧರಿಸಬೇಕು. ಹಾಗೇ ಅನುಭವಕ್ಕು ಭಾಷೆ-ಪರಿಭಾಷೆಗಳಿಗು ತಾಳ ಮೇಳ ಇರಬೇಕು ಕೂಡ. ಅಲ್ಲದೆ ಆಕೃತಿ ಎನ್ನುವುದು ಕೇವಲ ರೂಪ ಮಾತ್ರವಲ್ಲ. ಅದು ಗಾತ್ರ ಕೂಡ. ಅದು ಭಾಷೆ ಕೂಡ. ಅಂದರೆ ಅದು ಭಾಷೆ, ಬಂಧ, ಗಾತ್ರ ಮತ್ತು ಅನುಭವ ಇವೆಲ್ಲವುಗಳ ಮೊತ್ತ.
ಮತ್ತೆ ಅನುಭವವೆಂದರೆ ಅದು ಓದುಗನ ಅನುಭವವೂ ಹೌದು. ಆಕೃತಿಯೆಂಬುದು ಓದುಗನೂ ಕೂಡ ಕಳಚಬಹುದಾದ ಮತ್ತು ಮುರಿದು ಕಟ್ಟಿಕೊಳ್ಳಬಲ್ಲ ಒಂದು ರಚನೆ. ಅದು ಬರಹಗಾರನ ಅಂತಿಮ ಶಾಸನವೇನೂ ಅಲ್ಲ. ಓದುಗನು ತನ್ನ ಅನುಸಂಧಾನದ ಆಟದಲ್ಲಿ ಆಕೃತಿಯನ್ನು ಹೇಗೆ ಬೇಕೋ ಹಾಗೆ ದಾಟಲು ಸಾಧ್ಯವಾಗಬೇಕು. ಪ್ರಾಸ, ಭಾಷೆಯ ಭಿನ್ನ ಮುರಿವು-ಲಯ, ಗಾತ್ರಗಳೆಲ್ಲವೂ ಓದುಗನಿಗೆ ಅನುಭವಗಳೇ ಆಗಿ ರೂಪಾಂತರಗೊಳ್ಳಬೇಕು. ಇವೆಲ್ಲ ಭಿನ್ನ ಅನುಭವಗಳ ವಾಹಕಗಳೂ ಆಗಿ ವರ್ತಿಸಬೇಕು. ಯಾವ ಕಾವ್ಯವು ತನ್ನ ಛಂದಸ್ಸನ್ನು ಕಳಚಿಕೊಂಡಾಗ ಅದರೊಳಗಿನ ವಿಚಾರವು ಬಣ್ಣ ಕಳಚಿದ ನಟಿಯಂತೆ ವಿರೂಪವಾಗುತ್ತದೋ, ಅಂದಗೆಡುತ್ತದೋ ಅದು ನಿಜವಾದ ಕಾವ್ಯವಲ್ಲ. ಅದು ಛಂದಸ್ಸಿನ ಆಟ ಮಾತ್ರ. ಈ ಬಗ್ಗೆ ಸ್ವಲ್ಪ ಧೀರ್ಘವಾಗಿಯೆ ಪರಿಶೀಲಿಸಿ ಆನಂತರ ವಿಚಾರಕ್ಕೆ ಬರೋಣ.
ಛಂದಸ್ಸಿನ ಆಕೃತಿಗಳು ನಮ್ಮ ಪರಂಪರೆಯ ಉದ್ದಕ್ಕೂ ವಿಭಿನ್ನ ಕಾಲಘಟ್ಟಗಳಲ್ಲಿ ಬದಲಾಗುತ್ತ ಬಂದಿವೆ. ಹಾಗೆ ಬದಲಾಗುತ್ತಲೆ ವಿಭಿನ್ನ ಜನಸಮುದಾಯಗಳನ್ನು ನಮ್ಮ ಸಾಹಿತ್ಯ ತಲುಪುತ್ತ ಬಂದಿದೆ. ಆದಿಕವಿ ಪಂಪ ಮತ್ತವನ ಸಮಕಾಲೀನರು ಚಂಪೂ ಮಾರ್ಗ ಬಳಸುವಾಗ ಸಾಹಿತ್ಯಕನ್ನಡಕ್ಕೆ ಅದರದೇ ಆದ ಆತಂಕಗಳಿದ್ದವು. ಸಂಸ್ಕೃತದ ಛಂದೋರೂಪಗಳನ್ನು ಅಂದು ಕನ್ನಡಕ್ಕೆ ತಿರುಗಿಸಿಕೊಳ್ಳಲೇಬೇಕಾಗಿತ್ತು. ಆದರೆ ಆನಂತರ ಬಂದ ವಚನಕಾರರಿಗೆ ಈ ಸಮಸ್ಯೆ ಇರಲಿಲ್ಲ. ಅವರ ಟಾರ್ಗೆಟ್ ಆಡಿಯನ್ಸೇ ಬೇರೆ ಆಗಿದ್ದರು. ಹಾಗಾಗಿ ಅವರು ತಮ್ಮದೇ ಆದ ಜನಮುಖಿ ಛಂದೋರೂಪವೊಂದನ್ನು ಆವಿಷ್ಕರಿಸಿದರು. ವಚನ ಛಂದಸ್ಸಿನ ಮೂಲವು ಯಾವುದೆಂದು ನಮ್ಮಲ್ಲಿ ಸುದೀರ್ಘವಾದ ಹುಡುಕಾಟ ನಡೆದಿದೆ. ಈಗ ಆ ಮೂಲವ್ಯಾಧಿಯ ಅಗತ್ಯವಿಲ್ಲ. ವಚನ ರೂಪವು ನಮ್ಮವರ ನವೀನ ಆವಿಷ್ಕಾರವೆಂದೇ ಭಾವಿಸಿದರೆ ಸಾಕು. ಕಾಲಾನಂತರದಲ್ಲಿ ವಚನಗಳೂ ಜಡ್ಡು ಜಾಡಿಗೆ ಬಿದ್ದಾಗ ಹರಿಹರ ರಗಳೆ ರೂಪವನ್ನು ಆವಿಷ್ಕರಿಸಿದ. ನಂತರದಲ್ಲಿ ರಾಘವಾಂಕ ಮಾತ್ರಾಷಟ್ಪದಿಗಳನ್ನು ಪ್ರಯೋಗಿಸಿದ. ಆ ಮೂಲಕ ಇವರಿಬ್ಬರೂ ವಚನರೂಪದಿಂದ ಮಾರ್ಗಾಂತರಗೊಂಡಂತೆ ಕನ್ನಡ ಸಾಹಿತ್ಯಕ್ಕೆ ಹೊಸ ರಕ್ತವನ್ನು ತುಂಬಿದರು.
ಆನಂತರ ಬಂದ ದಾಸರು ತಮ್ಮ ನವೀನ ಛಂದೋರೂಪ ಬಳಸಿ (ಕೀರ್ತನಾಕೃತಿಯ ಮೂಲಕವೆ) ಜನಮನದಲ್ಲಿ ನೆಲೆಸಿದರು. ದಾಸರ ಪದಗಳನ್ನು ಹಾಡುವವರು ಶಾಸ್ತ್ರೀಯವಾಗಿ ಕೆಲವನ್ನು ಪ್ರಸ್ತುತಪಡಿಸುತ್ತಾರಾದರೂ ಅವು ಮೂಲತಹ ಜಾನಪದ ಮಟ್ಟುಗಳೇ ಆಗಿವೆ. ದಾಸರ ತಾಳಪ್ರಧಾನ ಸುಳಾದಿ ಉಗಾಭೋಗಗಳ ಆಚೆಗೂ ಕೀರ್ತನೆಗಳು ನಿತ್ಯ ಜನಮಾನಸದಲ್ಲಿ ಹರಿಯುತ್ತ ಬಂದಿವೆ. ಆನಂತರದಲ್ಲಿ ಇಡೀ ಸಾಹಿತ್ಯ ಪರಂಪರೆಯಲ್ಲಿ ಮುನ್ನಲೆಗೆ ಬಂದ ಆಕೃತಿಗಳೆಂದರೆ ತತ್ವಪದಗಳು. ವಚನಕಾರರ ಸ್ವರವಚನಗಳಿಗಿಂತ ಭಿನ್ನವಾದ ಜಾನಪದ ಹಾಡುಗಬ್ಬಗಳಾದ ತತ್ವಪದಗಳು ಮತ್ತು ಭಜನಾಪದಗಳು ಅಕ್ಷರಿ ನಿರಕ್ಷರಿ ಎಂಬ ಭಿನ್ನ ಭೇದವಿಲ್ಲದೆ ಜನಮಾನಸದಲ್ಲಿ ಹರಡಿಕೊಂಡವು. 19ನೇ ಶತಮಾನದ ಮುಸ್ಸಂಜೆಯಲ್ಲಿ ಇಂಗ್ಲಿಶ್ ಬ್ಲಾಂಕ್ ರ‍್ಸ್, ಕನ್ನಡ ಪರಂಪರೆಗಳೆರಡರ ಮಿಶ್ರತಳಿಯಾಗಿ ಆಧುನಿಕ ಕವಿತೆ ಮೈತಾಳಿತು. ಚೌಪದಿ, ಷಟ್ಪದಿ, ಅಷ್ಟಷಟ್ಪದಿ, ಪ್ರಗಾಥ, ಭಾವಗೀತ, ಹೀಗೆ ಹತ್ತು ಹಲವು ಆಕಾರಗಳಲ್ಲಿ ಮೈತಾಳಿದ ಹೊಸಕವಿತೆ ನವೋದಯವೆಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂತು. ಈ ನವೋದಯ ಕವಿತೆಗಳ ಹಿಂದೆ ನಮ್ಮ ವಚನ, ಸ್ವರವಚನ, ತತ್ವಪದ, ಭಜನಾಪದ ಇತ್ಯಾದಿಗಳ ಪರಂಪರೆಗಳು ಸಾಕಷ್ಟು ಪ್ರಭಾವ, ಪ್ರೇರಣೆ ನೀಡಿವೆ.
ವಚನ, ಸ್ವರವಚನ, ಕೀರ್ತನ, ಸುಳಾದಿ, ತತ್ವಪದ, ಲಾವಣಿ, ಮುಕ್ತಕ ಹೀಗೆ ಹಲವು ಪ್ರಾಚೀನ ಛಂದೋ ರೂಪಗಳನ್ನು ಹೋಲುವ ಆದರೆ ಇವ್ಯಾವೂ ಅಲ್ಲದ ಆಧುನಿಕ ಕವಿತೆ ಮೇಲ್ನೋಟಕ್ಕೆ ಛಂದಸ್ಸಿನಲ್ಲಿ ವೈವಿಧ್ಯವನ್ನು ಹೊಂದಿರುವಂತೆ ತೋರಿದರೂ ತನ್ನ ರಾಚನಿಕತೆ ಮತ್ತು ಗಾತ್ರದ ದೃಷ್ಟಿಯಿಂದ ಏಕತಾನವಾಯಿತು. (ಇದನ್ನು ಈಗಾಗಲೇ ಹೇಳಲಾಗಿದೆ) ನವೋದಯ, ನವ್ಯ, ಪ್ರಗತಿಶೀಲ, ಬಂಡಾಯಗಳೆಲ್ಲ ಕಾಲಘಟ್ಟದ, ಚಳುವಳಿಗಳ, ಮನೋಧರ್ಮದ, ಸಂವೇದನೆಯ ನೆಲೆಯ ವಿಂಗಡಣೆಗಳಾಗಿ ನಮ್ಮಲ್ಲಿ ಚಾಲ್ತಿಯಲ್ಲಿವೆ. ಹಾಗೆ ನೋಡಿದರೆ ಗೆರೆಕೊರೆದಂತೆ ಆಧುನಿಕ ಕಾಲಘಟ್ಟಗಳಲ್ಲಿ ವ್ಯತ್ಯಾಸಗಳಿಲ್ಲ. ನವೋದಯ ಕವಿತೆ, ನವ್ಯ ಕವಿತೆಗಳ ಆಕೃತಿ-ಗಾತ್ರ-ಹೂರಣಗಳಲ್ಲಿ ಅಂಥಾ ವ್ಯತ್ಯಾಸಗಳಿಲ್ಲ. ವ್ಯತ್ಯಾಸವೇನಿದ್ದರೂ ಭಾಷಾ ಬಳಕೆಗೆ ಸಂಬಂಧಿಸಿದ್ದು ಮಾತ್ರ. ಅಲ್ಲದೆ ಸಂವೇದನೆ ದೃಷ್ಟಿಯಿಂದಲೂ ನವೋದಯದಲ್ಲಿ ನವ್ಯ ಧಾಟಿಯೂ, ನವ್ಯದಲ್ಲಿ ನವೋದಯ ಧಾಟಿಯೂ ಈ ಎರಡರಲ್ಲೂ ಬಂಡಾಯದ ಧಾಟಿ-ಮನೋಧರ್ಮಗಳೂ ಇವೆ ಕೂಡ. ಎಲ್ಲ ಕಾಲಘಟ್ಟಗಳಲ್ಲಿ ಎಲ್ಲ ಮನೋಧರ್ಮಗಳೂ ಇವೆ. ಹಾಗಾಗಿ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಎಂಬುವೆಲ್ಲ ಸಾಹಿತ್ಯ ಚರಿತ್ರೆ ಕಟ್ಟಾಣಿಕೆಯ; ಶೈಕ್ಷಣಿಕ ಅಧ್ಯಯನದ ಕೃತಕ ವಿಭಜನೆಗಳಷ್ಟೆ.
ನಮ್ಮ ಸಾಹಿತ್ಯ ಪರಂಪರೆಯನ್ನು ನೋಡಿದರೆ ಉದ್ದಕ್ಕು ಮತ್ತೆ ಮತ್ತೆ ಕಾವ್ಯದ ಛಂದಸ್ಸು ಮತ್ತು ಗಾತ್ರಗಳಲ್ಲಿ ಮಾರ್ಗಾಂತರಗಳು ಸಂಭವಿಸುತ್ತಲೆ ಬಂದಿವೆ. ಆ ಮೂಲಕ ಹೊಸತನವು ಸಿದ್ಧಿಸುತ್ತಲೇ ಬಂದಿದೆ. ಆದರೆ ಕವಿತೆಯ ಛಂದೋರೂಪ ಅಥವಾ ಆಕೃತಿಯ ದೃಷ್ಟಿಯಿಂದ ಇಂದು ಆಧುನಿಕ ಕವಿತೆ ಜಡ್ಡುಗಟ್ಟಿ ಹೋಗಿದೆ. ಹೊಸ ಮಾರ್ಗಾಂತರಕ್ಕೀಗ ಕಾಲ ಪಕ್ವವಾಗಿದೆ. ಹೊಸ ರೂಪ-ಆಕೃತಿಗಳನ್ನು ಆವಿಷ್ಕರಿಸದೆ ಕವಿತೆ ಹೊಸದಾಗಲು ಸಾಧ್ಯವಿಲ್ಲ. ಇದು ಇಂದಿನ ಕವಿಗಳಿಗೆ ಇರುವ ಬಿಕ್ಕಟ್ಟೂ ಹೌದು, ಸವಾಲೂ ಹೌದು. ಇದನ್ನು ಸಮರ್ಥವಾಗಿ ಎದುರಿಸುವುದೆಂದರೆ ಹೊಸ ರೂಪವನ್ನು ಆವಿಷ್ಕರಿಸುವುದೇ ಆಗಿದೆ. ಕಂಟೆಟಿನ ದೃಷ್ಟಿಯಿಂದ ಇಂದಿನ ಕವಿತೆಗೆ ಯಾವ ಕೊರತೆಯೂ ಇಲ್ಲ. ಮನೆಯಾದ ಮನೆಯೆಲ್ಲ ಹೊತ್ತಿ ಉರಿಯುತ್ತಿರುವಾಗ ಕವಿತೆಗೆ ಸಾಕಷ್ಟು ವ್ಯಾಪ್ತಿಯೂ, ಸಾಮಗ್ರಿಯೂ ಇದೆ. ಅಧಿಕ ಜವಾಬ್ದಾರಿಯೂ ಹೆಗಲೇರಿಕೊಂಡಿದೆ. ಆದರೆ ಕವಿತೆ ಜಡ್ಡುಗಟ್ಟಿಹೋದ ದಾರಿಗಳಿಂದ ಹೊರಳಿಕೊಳ್ಳಬೇಕಾಗಿದೆ.
ಏನೇ ಹೊಸ ಪ್ರಯೋಗಗಳಿಗೆ ಹೊರಟರೂ ಇಂದಿನ ಪೀಳಿಗೆ ಯಾವುದಾದರೂ ಹಳೆ ಚೀಲಗಳಿಗೇ ಹೋಗಿ ಬೀಳುವ ಅಪಾಯ ಕಾಣುತ್ತಿದೆ. ವಚನ, ಸ್ವರವಚನ, ತತ್ವಪದ, ಅನುಭಾವೀ ರಚನೆಗಳು ಹೀಗೆ ಭಿನ್ನ ಹಳೆರೂಪಗಳ ಆಧುನಿಕ ಬಳಕೆಯಲ್ಲೆ ಗಿರಕಿ ಹೊಡೆಯುವಂತೆ ಆಗುತ್ತಿದೆ. ಸ್ವಂತಿಕೆಯ ಪ್ರಶ್ನೆಯು ಹೊಸತನದ ಪ್ರಶ್ನೆಯೂ ಅಲ್ಲವೆ? ಹಳೆ ಮಾದರಿಗಳನ್ನು ಮೀರಿದ ಹೊಸ ಮಾದರಿಗಳನ್ನು ನಾವಿಂದು ಖಂಡಿತಾ ಶೋಧಿಸಬೇಕಾಗಿದೆ. ಕವಿತೆ ಹೊಸದಾಗಲು ಅದರ ಛಂದಸ್ಸಿಕ ಆಕೃತಿಯ ಹೊಸತನ ಕೂಡ ಬಹು ಮುಖ್ಯವಾದುದು. ನೆಲವೇನೋ ಹದವಾಗಿದೆ. ಹೊಸ ಕವಿತೆಗೆ ಇನ್ನೆಷ್ಟು ಪ್ರಯೋಗಗಳು ಆಗಬೇಕು? ಆಧುನಿಕ ಪದ್ಯಗಳು ಹೊಸತಾಗುವ ಬಗೆ ಯಾವುವು?
ಇಂದಿನ ಸಂದರ್ಭದಲ್ಲಿ ವಿದ್ಯುನ್ಮಾನ ಮಾದ್ಯಮಗಳು, ಸೆಲ್ಯುಲಾರ್ ಲೋಕಗಳು ಸುಖವಾಗಿ ಇರುವವರಿಗೆ ಇನ್ನಷ್ಟು ಸುಖ ನೀಡುವ ಸಾಧನವಾಗಿ ಕಾವ್ಯವನ್ನು ಬಳಸುತ್ತಿರುವುದು ದುಃಖದ ಸಂಗತಿ. ರಂಜನೆಯ ಮಾರ್ಗವಿಲ್ಲದೆ ಕಾವ್ಯವು ಜನಕ್ಕೆ ತಲುಪಲಾರದ ಸ್ಥಿತಿಯನ್ನು ಸಿನಿಮಾ ಲೋಕ ಉಂಟು ಮಾಡುತ್ತಿದೆ. ಸಿನಿಮಾ ಹಾಡು, ಸಿನಿಮಾ ಸಂಗೀತವೇ ಇಂದು ಸಾಮಾಜಿಕ ಬೇಡಿಕೆಯಾಗುವಂತೆ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಿ ಆಳಲಾಗುತ್ತಿದೆ. ಆ ವ್ಯವಸ್ಥೆಯು ಬೇಡುವ ಫಾರಮ್ಮಿನಲ್ಲಿ ನಮ್ಮ ಸರಕು ತುಂಬಿದರೆ ಮಾತ್ರ ನಮಗೆ ಅಲ್ಲಿ ಪ್ರವೇಶವುಂಟು. ಇಲ್ಲದಿದ್ದರೆ ನಮಗೆ ಅಲ್ಲಿ ಸ್ಪೇಸೇ ಇಲ್ಲ ಎನ್ನುವಂತೆ ಕವಿಗಳಿಗೆ ಇವತ್ತಿನ ಸ್ಥಿತಿ ಇದೆ. ಸಿನೆಮಾ, ಧಾರವಾಹಿಗಳು ಬೇಡುವ ಫಾರಮ್ಮನ್ನು ಹೊಸೆಯುವ ಆಮಿಷ-ಅವಕಾಶಗಳನ್ನು ಹಿಡಿದು ನಮ್ಮ ಬರಹಗಾರ ಮಂದಿ ಹೊರಡುತ್ತಿರುವ ವೇಗವನ್ನು ನೋಡಿದರೆ ಆತಂಕವಾಗುತ್ತದೆ. ಸಿನಿಮಾ, ಧಾರವಾಹಿ ಸಾಹಿತಿಗಳು ಮಾತ್ರ ದೊಡ್ಡವರು ಮಿಕ್ಕವರೆಲ್ಲ ಚಿಕ್ಕಪುಟ್ಟವರು ಎಂಬ ಕಾಲ ಬರುವ ಎಲ್ಲ ಸೂಚನೆಗಳೂ ಕಾಣುತ್ತಿವೆ.
ಗಂಭೀರ ಸಾಹಿತ್ಯ ಜನಪ್ರಿಯ ಸಾಹಿತ್ಯ ಎಂಬ ಒಡಕು ಒಂದು ಕಾಲಕ್ಕೆ (ಪ್ರಗತಿಶೀಲ ಸಂದರ್ಭದಲ್ಲಿ) ಓದುಗರಲ್ಲಿ ಒಂದು ಕಂದಕವನ್ನೇ ನಿರ್ಮಿಸಿತ್ತು. ಇವೆರಡೂ ಎರಡು ಭಿನ್ನ ಲೋಕಗಳು ಎಂಬಂತೆಯೇ ಸಾಹಿತ್ಯ ಲೋಕ ಒಡೆದು ಹೋಗಿತ್ತು. ಆದರೆ ಇಂದು ಪ್ರತಿಷ್ಠಿತ ಸಾಹಿತ್ಯ, ಸುಗಮ ಸಾಹಿತ್ಯ ಮತ್ತು ಸಿನೆಮಾ ಸಾಹಿತ್ಯ ಎಂದಾಗಿ ಸಾಹಿತ್ಯವು ಮೂರು ಲೋಕಗಳಾಗಿ ಒಡೆದುಹೋಗಿದೆ. ಚಿತ್ರಸಾಹಿತಿಗಳಿಗು ಪ್ರತಿಷ್ಠಿತ ಸಾಹಿತಿಗಳಿಗು ಒಂದು ತೆರನ ಕಂದರ ನಿರ್ಮಾಣವಾಗಿ ಎರಡೂ ಪ್ರತ್ಯೇಕ ಲೋಕಗಳೇ ಆಗಿವೆ. ಸುಗಮ ಸಾಹಿತ್ಯ ಮತ್ತು ಪ್ರತಿಷ್ಠಿತ ಸಾಹಿತ್ಯಗಳ ನಡುವೆ ಒಂದು ತರತಮ ಸ್ತರವೇ ನಿರ್ಮಾಣವಾಗಿ ಹೋಗಿದೆ. ಕೆಲವೊಮ್ಮೆಯಂತು ವಿಚಿತ್ರವೆಂದರೆ ಈ ಮೂರು ಲೋಕಗಳನ್ನೂ ಇಂದಿನ ಕೆಲ ಹೊಸ ತಲೆಮಾರಿನ ಕವಿಗಳು ಹೊತ್ತು ತಿರುಗುತ್ತಿದ್ದಾರೆ. ಈ ಮೂರೂ ಲೋಕಗಳು ಒಬ್ಬನೊಳಗೇ ಇದ್ದರೆ ಏನಾಗಬಹುದು? ಅದರ ಪರಿಣಾಮಗಳನ್ನು ನಾವು ಇಂದಿನ ಕೆಲವರ ಹೊಸ ಕವಿತೆಗಳಲ್ಲಿ ಕಾಣುತ್ತಿದ್ದೇವೆ. ಹಾಯ್ಕು, ಗಜಲ್, ಕವ್ವಾಲಿ, ದೋಹೆ, ಗಾದೆ ಇತ್ಯಾದಿಗಳ ಪ್ರಭಾವ, ಪ್ರಯೋಗಗಳೂ ನಡೆದಿವೆ.
ಏನೇ ಇರಲಿ; ಎಷ್ಟೇ ಆತಂಕಗಳಿರಲಿ ಇಂದು ಸಾಹಿತ್ಯದ ಭಿನ್ನ ಲೋಕಗಳಲ್ಲಿ ಮತ್ತು ಕಾಲಗಳಲ್ಲಿ ಅಖಂಡವಾಗಿ ಈಜುವ ತುರ್ತಂತೂ ನಿರ್ಮಾಣವಾಗಿದೆ. ಪ್ರತಿಷ್ಠಿತ ಆಧುನಿಕ ಕವಿತೆ ತನ್ನ ರೂಪವಿನ್ಯಾಸದ ದೃಷ್ಟಿಯಿಂದಂತೂ ಜಡ್ಡಾಗಿದೆ. ಹಳತಾಗಿದೆ. ಇಂದಿನ ಕಾಲ ಹೊಸ ಕವಿತೆಗಾಗಿ ಕಾಯುತ್ತಿದೆ. ಕವಿತೆಗೆ ಸಾಮಗ್ರಿಯಂತು ಎಂದಿಗಿಂತ ಇಂದು ಹೇರಳವಾಗಿದೆ. ಓದುಗರೂ ಇದ್ದಾರೆ. ಬರೆಯುವವರಂತೂ ಮೊದಲಿಗಿಂತ ಇಂದು ಹೆಚ್ಚಾಗಿದ್ದಾರೆ. ಛಂದಸ್ಸು-ಆಕೃತಿ-ಭಾಷೆ-ಪರಿಭಾಷೆ-ಗಾತ್ರಗಳ ದೃಷ್ಟಿಯಿಂದ ಹೊಸ ಕವಿತೆಗಳನ್ನು ಹಡೆಯಬೇಕಾಗಿದೆ. ತಾಯಾಗಿ ಹಡೆಯುವುದೇ ದೊಡ್ಡ ಸವಾಲು. ಹಡೆದ ಮೇಲೆ ಪಾಲನೆ ಪೋಷಣೆಯಂತೂ ಅಂಗೈ ಮೇಲಣ ರಂಗ ಮೊಬೈಲು ಇರುವಾಗ ಇನ್ನೂ ದೊಡ್ಡ ಸವಾಲು.
-ಡಾ. ರಾಮಲಿಂಗಪ್ಪ ಟಿ. ಬೇಗೂರು
ಈ ಅಂಕಣದ ಹಿಂದಿನ ಬರೆಹಗಳು:
ಗೌರಿಯರು: ಕುಟುಂಬ - ದಾಂಪತ್ಯ ಸಂಕಥನ
ರಾಷ್ಟ್ರೀಯತೆಯ ಆಚರಣೆಯ ಸುತ್ತ
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ
ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.