Date: 20-01-2024
Location: ಬೆಂಗಳೂರು
"ಒಕ್ಕಲುತನದ ಅಳತೆಯ, ತೆರಿಗೆಯ ಮೊದಲಾದ ಪದಗಳು ಕಾಲಾಂತರದಲ್ಲಿ ಬದಲಾಗಿವೆ. ಈ ಪದಗಳ ಬದಲಾವಣೆಯನ್ನು ಅದ್ಯಯನ ಮಾಡಿದರೆ ಆ ವಲಯಕ್ಕೆ ಸಂಬಂದಿಸಿದ ರಾಜಕೀಯ, ಸಾಮಾಜಿಕ ಮೊದಲಾದ ಬೆಳವಣಿಗೆಗಳು ಅರಿವಿಗೆ ಬರುತ್ತವೆ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು’ ಕುರಿತು ವಿಶ್ಲೇಷಿಸಿದ್ದಾರೆ.
ಹೊಲ, ಒಕ್ಕಲುತನ ಮನುಶ್ಯರ ಬದುಕನ್ನ ಬೂಮಿಯ ಮೇಲಿನ ಇತರೆಲ್ಲ ಜೀವಿಗಳಿಗಿಂತ ಬಿನ್ನವಾಗಿಸಿದ್ದು. ಬಾಶೆಯು ತನ್ನೆಲ್ಲ ಆಯಾಮಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ದೊಡ್ಡ ಅವಕಾಶ ಒದಗಿದ್ದು ಬಹುಶಾ ಒಕ್ಕಲುತನದ ಮೂಲಕ. ಸಹಜವಾಗಿ ಕನ್ನಡ ಬಾಶೆಯೂ ಕೂಡ ಒಕ್ಕಲುತನದ ಮೂಲಕ ತನ್ನ ಬಳಕೆಯ ವಿಸ್ತರಣವನ್ನು ಕಂಡಿತು. ಅಲ್ಲಿಯೆ ವಿಚಿತ್ರವಾದ ವಿವಿದತೆಯನ್ನೂ ವಿವಿದ ಆಯಾಮಗಳನ್ನೂ ಪಡೆದುಕೊಂಡು ಬೆಳೆಯಿತು. ಕನ್ನಡ ಬಾಶೆಯು ಒಕ್ಕಲುತನದ ವಲಯದಲ್ಲಿ ಶ್ರೀಮಂತವೂ, ವಯಿವಿದ್ಯಯವೂ ಆಗಿರುವುದನ್ನು ಕಾಣಬಹುದು.
ಹೊಲದಲ್ಲಿ ಕಾಣಿಸುವ ಕಳೆ ಇಲ್ಲವೆ ಕಸವನ್ನೆ ಗಮನಿಸಿದರೂ ಅವುಗಳಿಗೆ ಇಟ್ಟ ಹೆಸರುಗಳನ್ನು ಗಮನಿಸಿದಾಗ ಕನ್ನಡ ಮಾತುಗರು ಹೊಲದಲ್ಲಿ ಹೇಗೆ, ಎಶ್ಟು ತಲ್ಲೀನವಾಗಿ ಬದುಕಿದ್ದರು ಎನ್ನುವುದನ್ನು ಅರಿತುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಸುಮಾರು ಎರಡು ನೂರು ಬಗೆಯ ಕಳೆಗಳನ್ನು ಕನ್ನಡ ಮಾತುಗರು ಗುರುತಿಸಿದ್ದರು ಮತ್ತು ಅವುಗಳಿಗೆ ಹೆಸರುಗಳನ್ನು ಇಟ್ಟಿದ್ದಾರೆ. ಈ ಹೆಸರುಗಳನ್ನು ಅದ್ಯಯನ ಮಾಡಿದರೆ ಅದರ ಹಿಂದಿರುವ ಗ್ನಾನವನ್ನೂ ವಿಗ್ನಾನವನ್ನೂ ತಿಳಿದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಈ ಕಳೆಗಳು ಯಾವಾಗ ಬೆಳೆಯುತ್ತವೆ, ಯಾವ ಬೆಳೆಯ ಜೊತೆ, ಯಾವ ಕಾಲದಲ್ಲಿ, ಯಾವ ಮಳೆಯಲ್ಲಿ ಯಾವ ಬಗೆಯ ಕಳೆಗಳು ಬೆಳೆಯುತ್ತವೆ, ಅವುಗಳಿಂದ ಆಗುವ ಸಮಸ್ಯೆಗಳು ಏನು ಈ ಎಲ್ಲ ತಿಳುವಳಿಕೆ ನಮ್ಮ ಜನಪದಕ್ಕೆ ಇದೆ. ಇದು ಬರಿಯ ಬಾಶೆಯ ಮಾತಲ್ಲ, ಇದು ವಿಗ್ನಾನದ ವಿಚಾರ. ಒಕ್ಕಲುತನವನ್ನು ವಿಗ್ನಾನವಾಗಿ ಬೆಳೆಸಿಕೊಂಡ ನಮ್ಮ ಕನ್ನಡ ಮಾತುಗರು ಅದಕ್ಕೆ ತಕ್ಕಂತೆ ಕನ್ನಡ ಪದಕೋಶವನ್ನು ಬೆಳೆಸಿದ್ದಾರೆ.
ಹೊಲದಲ್ಲಿ ಬಳಸುವ ವಿವಿದ ಬಗೆಯ ಸಾದನಗಳನ್ನು ಗಮನಿಸಿದಾಗಲೂ ಈ ಅನುಬವ ನಮಗೆ ಗಮನಕ್ಕೆ ಬರುತ್ತದೆ. ವಿವಿದ ಬಗೆಯ ಸಾದನಗಳು, ಆ ಸಾದನಗಳ ಬಿಡಿಬಾಗಗಳು, ಅವುಗಳನ್ನು ತಯಾರಿಸುವ ಮತ್ತು ಅವುಗಳನ್ನು ಬಳಸುವ ರೀತಿಗಳು, ಆ ಸಾದನಗಳನ್ನು ತಯಾರಿಸಲು ಬಳಸುವ ವಸ್ತುಗಳು ಹೀಗೆ ಒಕ್ಕಲುತನದ ಕನ್ನಡ ಜಗತ್ತು ವಿಚಿತ್ರ ವ್ಯಾಪಕ. ‘ಕೂರಿಗಿ’, ‘ಕುರಚಗಿ’ ‘ಕುಡಗೋಲು’ ಮೊ. ಇಲ್ಲಿ ಈ ಬಗೆಯ ಹಲವಾರು ಸಾದನಗಳ ಹೆಸರುಗಳು /ಕ್/ ದ್ವನಿಯಿಂದ ಇಲ್ಲವೆ ‘ಕು’ ಅಕ್ಶರದಿಂದ ಶುರುವಾಗುತ್ತವೆ. ಇದು ಆ ಸಾದನಗಳ, ಅವುಗಳ ಬೆಳೆದ ಹಿನ್ನೆಲೆ, ಅದರ ಹಿಂದಿನ ಒಕ್ಕಲುತನದ ರಚನೆ, ಬೆಳವಣಿಗೆ, ಅದಕ್ಕೆ ಸಂಬಂದಿಸಿ ಬೆಳೆದ ವಿಗ್ನಾನ ಇವೆಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಅವಕಾಶ ಒದಗಿಸುತ್ತದೆ. ಹೊಲದಲ್ಲಿ ಮುಕ್ಯವಾಗಿ ಬಳಕೆಯಾಗುವ ‘ಸಲಿಕೆ’ ಶಬ್ದದ ಬಗೆಗೆ ಒಂದು ಸಾಲು ಹೇಳಬೇಕು. ಈ ಶಬ್ದ ಬಾರತದ ಮಹತ್ವದ ರಾಜಮನೆತನವಾಗಿರುವ ‘ಚಾಲುಕ್ಯ’ ಪದವೆ ಆಗಿದೆ ಎಂಬುದು ಕೆಲ ವಿದ್ವಾಂಸರ ಅಬಿಮತ. ಒಕ್ಕಲುತನದ ಕನ್ನಡದ ಅದ್ಯಯನ ಬರಿಯ
ಇಲ್ಲಿ ಇನ್ನೊಂದು ಮುಕ್ಯವಾದ ಪ್ರಶ್ನೆಯನ್ನು ಎತ್ತಿಕೊಳ್ಳುವುದಾದರೆ ಹೊಲದಲ್ಲಿ ಕೆಲಸ ಮಾಡುವ ಸಾದನಗಳ ಬೆಳವಣಿಗೆಗೂ ಲೋಹದ ಬೆಳವಣಿಗೆಗೂ ಪರಸ್ಪರ ಸಂಬಂದವಿದೆ. ಇದು ಮುಂದೆ ಯುದ್ದದ ಆಯುದಗಳ ತಯಾರಿಕೆಯ ಕಡೆಗೆ ಚಾಚಿಕೊಳ್ಳುತ್ತದೆ. ಒಕ್ಕಲುತನದಲ್ಲಿಯೂ ದಿನಜೀವನದಲ್ಲಿಯೂ ಯುದ್ದದಲ್ಲಿಯೂ ಬಳಸುವ ಕೆಲವು ಸಾದನಗಳ-ಆಯುದಗಳ ರೂಪರಚನೆಯಲ್ಲಿ ಇರುವ ಸಮಾನತೆಯನ್ನು ಗಮನಿಸಬಹುದು.
ಹೊಲದಲ್ಲಿ ಹಲವಾರು ಬಗೆಯ ಬೆಳೆಗಳು ಇವೆ. ಪ್ರತಿಯೊಂದು ಬೆಳೆಗೂ ಒಂದೊಂದು ಹೆಸರು. ಬೆಳೆಗಳ ವಿಬಿನ್ನ ಬಾಗಗಳಿಗೂ ಒಂದೊಂದು ಹೆಸರು. ಬೆಳೆಯ ಬೇರಿನಿಂದ ಹೂವಿನವರೆಗೆ ಬಾಗಗಳಿಗೆ ಹೆಸರುಗಳಿವೆ. ‘ಜೋಳ’ದ ಬೆಳೆಗೆ ‘ಬೇರು’ ಇದೆ, ‘ದಂಟು’ ಇದೆ, ‘ಎಲೆ’ ಇದೆ, ‘ತೆನೆ’ ಇದೆ. ಇಶ್ಟು ಸಾಲದೆ, ದಂಟಿನ ಮೇಲೆ ಬೆಳೆಯುವ ‘ಸುಂಕ’ ಇದೆ. ತೆನೆ ಬಲಿಯುವ ಮುನ್ನ ‘ಬೆಳಸು’ ಎನ್ನುವ ಹಂತ ಇರುತ್ತದೆ. ಇದು ಒಕ್ಕಲುತನವನ್ನು ನಮ್ಮ ಹಿರೀಕರು ಹೇಗೆ ಅನುಬವಿಸಿದ್ದಾರೆ ಎಂದು ತಿಳಿದುಕೊಳ್ಳುವುದಕ್ಕೆ ಸಾಕ್ಶಿ.
ಇನ್ನು ‘ಹೊಲ’ ಇದೆ, ‘ಬದು’ ಇದೆ, ‘ಸಾಲು’ ಇದೆ. ಹೀಗೆ ಹೊಲದ ರಚನೆಯಲ್ಲಿ ಇಂತ ಹಲವಾರು ಪದಗಳು ಇವೆ. ಹೊಲದ ಮಣ್ಣು, ವಿವಿದ ಬಗೆಯ ಮಣ್ಣುಗಳು, ಅವುಗಳ ಗುಣ ಮೊದಲಾದವುಗಳನ್ನು ಆದರಿಸಿ ಬಿನ್ನ ಹೆಸರುಗಳಿವೆ. ಹೊಲದ ರಚನೆ ಮತ್ತು ಅಳತೆಯಲ್ಲಿ ಹಲವು ಪದಗಳು ಹುಟ್ಟಿವೆ. ಕಾಲಾಂತರದಲ್ಲಿ ಆದ ಅಳತೆಮಾಪನದ ಬದಲಾವಣೆಗಳೂ ಈ ವಲಯದಲ್ಲಿ ಬಿನ್ನ ಪದಗಳು ಹುಟ್ಟುವುದಕ್ಕೆ ಕಾರಣವಾಗಿವೆ. ಹೊಲದ ಒಡೆತನ, ಕೆಲಸ ಮೊದಲಾದವುಗಳಿಗೆ ತಕ್ಕಂತೆ ಕೂಡ ಪದಗಳು ಬೆಳೆದಿವೆ. ತೆರಿಗೆಯಲ್ಲಿಯೂ ಕಾಲಾಂತರ ಹಲವು ಪದಗಳು ಹುಟ್ಟಿ ಬೆಳೆದು ಬದುಕಿ, ಅದರಲ್ಲಿ ಹಲವು ಅಳಿದುಹೋಗಿವೆ.
ಇನ್ನು ಹೊಲ, ಬೆಳೆ, ಕಣ ಇವೆಲ್ಲವು ಮನಶ್ಯ ಬದುಕಿನ ಸಂತೋಶದ ಸಮಯಗಳು. ಹೊಲದಲ್ಲೆ ಬೆಳೆ ಚೆನ್ನಾಗಿ ಬಂದರೆ ಅದುವೆ ಬದುಕು. ಹೀಗಾಗಿ ಈ ಸಂಬರಮವನ್ನು ಮನುಶ್ಯ ಆಚರಣೆಯಾಗಿಸಿ, ನಂಬಿಕೆಯಾಗಿಸಿ, ಸಂಪ್ರದಾಯವಾಗಿಸಿ, ಸಂಸ್ಕ್ರುತಿಯಾಗಿಸಿ ಬೆಳೆಸಿಕೊಂಡರು. ಅದಕ್ಕೆ ತಕ್ಕಂತೆ ಸಾಕಶ್ಟು ಪದಗಳು ಬೆಳೆದಿವೆ. ಇದಕ್ಕೆ ಸಂಬಂದಿಸಿದ ಸಾಹಿತ್ಯವೂ ದೊಡ್ಡಪ್ರಮಾಣದಲ್ಲಿದೆ.
ಹೀಗೆ ಒಕ್ಕಲುತನ ಹೇಗೆ ಮನುಶ್ಯ ಸಮಾಜದ ವಿಕಸನಕ್ಕೆ ಮುಕ್ಯವಾದ ಹಾದಿಯಾಯಿತೊ ಹಾಗೆಯೆ ಮನುಶ್ಯ ಬಾಶೆಯ ವಿಕಸನಕ್ಕೂ ಇದು ಬಹುಮುಕ್ಯವಾದ ದಾರಿಯಾಯಿತು. ಇಲ್ಲಿ ಉಲ್ಲೇಕಿಸಿದ ಒಕ್ಕಲುತನಕ್ಕೆ ಸಂಬಂದಿಸಿದ ಸಣ್ಣ ಸಣ್ಣ ವಲಯಗಳನ್ನು ಒಳಗೊಂಡು ವಿವಿದ ವಲಯಗಳನ್ನು, ಆಯಾಮಗಳನ್ನು ಒಂದೊಂದಾಗಿ ಮತ್ತು ಒಟ್ಟಾಗಿ ಅದ್ಯಯನ ಮಾಡಿದಾಗ ಮನುಶ್ಯ ಸಮಾಜದ ಬೆಳವಣಿಗೆಯ ಹಲವು ಮಗ್ಗುಲುಗಳು ನಮ್ಮ ಅರಿವಿಗೆ ಬರಬಲ್ಲವು.
ಒಕ್ಕಲುತನದ ಅಳತೆಯ, ತೆರಿಗೆಯ ಮೊದಲಾದ ಪದಗಳು ಕಾಲಾಂತರದಲ್ಲಿ ಬದಲಾಗಿವೆ. ಈ ಪದಗಳ ಬದಲಾವಣೆಯನ್ನು ಅದ್ಯಯನ ಮಾಡಿದರೆ ಆ ವಲಯಕ್ಕೆ ಸಂಬಂದಿಸಿದ ರಾಜಕೀಯ, ಸಾಮಾಜಿಕ ಮೊದಲಾದ ಬೆಳವಣಿಗೆಗಳು ಅರಿವಿಗೆ ಬರುತ್ತವೆ. ಮಳೆಗೆ ಸಂಬಂದಿಸಿದ ಪದಗಳನ್ನು ಅದ್ಯಯನ ಮಾಡಿದಾಗ ಒಕ್ಕಲುತನ ಆದರಿಸಿ ಬೆಳೆದ ಕಗೋಳ, ವಿಗ್ನಾನ ವಲಯಗಳ ಅರಿವಿನ ಬೆಳವಣಿಗೆಯ ಬಗೆಗೆ ಬೆಳೆಕು ಚೆಲ್ಲಬಹುದು.
ಹೀಗೆ, ಯಾವುದೆ ವಲಯದಲ್ಲಿನ ಪದಗಳ ಇತಿಹಾಸವನ್ನು ತಿಳಿದುಕೊಳ್ಳುವುದು ಎಂದರೆ ಆ ವಲಯದ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಹೆಚ್ಚಿನ ಸಹಾಯ ಒದಗಿದಂತೆ. ಪದಗಳ ಅದ್ಯಯನ ಮನುಶ್ಯ ಇತಿಹಾಸದ ಅದ್ಯಯನಕ್ಕೆ ಹೆಚ್ಚು ಸಹಾಯಕ. ಒಕ್ಕಲುತನದ ಪದಗಳ ಅದ್ಯಯನ ಬರಿಯ ಒಕ್ಕಲುತನದ ಇತಿಹಾಸವನ್ನು ಅರಿತುಕೊಳ್ಳುವುದಕ್ಕೆ ಮಾತ್ರವಲ್ಲದೆ ಮನುಶ್ಯ ಇತಿಹಾಸದ ಅರಿವಿಗೂ ಸಹಾಯಕ.
ಕೊನೆಯಲ್ಲಿ ಇನ್ನೂ ಒಂದು ಮಾತು, ಬಾಶೆಗೆ ಸಂಬಂದಿಸಿ. ಹೊಲದಲ್ಲಿ ಕನ್ನಡ ಇಡಿಯಾಗಿ ತುಂಬಿಕೊಂಡಿದೆ. ಪರ‍್ಶಿಯನ್ ಆಡಳಿತದ ಕಾಲದಲ್ಲಿ ತಂದ ಮಹತ್ವದ ಹೊಲಸಂಬಂದಿ ಸುದಾರಣೆಗಳು ಕಾರಣವಾಗಿ ದೊಡ್ಡ ಪ್ರಮಾಣದ ಸಾಮಾಜಿಕ ಬೆಳವಣಿಗೆ ಆಗುತ್ತವೆ. ಅದಕ್ಕೆ ಸಂಬಂದಿಸಿ ‘ಜಮೀನು’, ‘ಜಮೀನುದಾರ’, ‘ಪಹಣಿ’ ಮೊದಲಾಗಿ ಹಲವಾರು ಪದಗಳು ಪರ‍್ಶಿಯನ್ ಬಾಶೆಯಿಂದಲೆ ಬರುತ್ತವೆ. ಆನಂತರ ಈಗ, ಆದುನಿಕ ಕಾಲದಲ್ಲಿ ತಾಂತ್ರಿಕ ಕ್ಶೇತ್ರದಲ್ಲಿ ಆಗುತ್ತಿರುವ ಬಹುದೊಡ್ಡ ಬೆಳವಣಿಗೆಗಳಿಂದಾಗಿ ಮನುಶ್ಯ ಶ್ರಮ ಹೊಲದಿಂದ ಹೊರಗೆ ಬರುತ್ತಿದೆ ಮತ್ತು ಮಿಶಿನ್ನುಗಳು ಹೊಲವನ್ನು ತುಂಬಿಕೊಳ್ಳುತ್ತಿವೆ. ಈಗ ಸದ್ಯ ಕನ್ನಡದ ಹೊಲದಲ್ಲಿ ತೀವ್ರ ಬಾಶಿಕ ಸಂಚಲನ ಉಂಟಾಗಿದೆ. ತಂತ್ರಗ್ನಾನ ಹರಿದುಬರುತ್ತಿರುವ ಇಂಗ್ಲೀಶು ಬಾಶೆಯಿಂದ ಇಂಗ್ಲೀಶಿನ ಶಬ್ದಗಳೂ ಕೂಡ ಕನ್ನಡ ಹೊಲವನ್ನು ಹೊಗುತ್ತಿವೆ. ಇನ್ನು ಮುಂದೆ ಅಲ್ಲಿನ ಕನ್ನಡ ಪಡೆದುಕೊಳ್ಳುವ ಪಲ್ಲಟವನ್ನೂ, ಹೊಂದಿಕೆಯನ್ನೂ ಮುಕ್ಯವಾಗಿ ಕ್ರಿಯಾಪದಗಳ ಹೊಂದಿಕೆಯನ್ನು ಕಾದು ನೋಡಬೇಕು.
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.