ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ

Date: 19-03-2023

Location: ಬೆಂಗಳೂರು


''ಮಣ್ಣಿನ ಮಡಿಕೆಯಲ್ಲಿ ಮಾಡಿದ ಆಹಾರಗಳು ಶರೀರಕ್ಕೆ ಅವಶ್ಯವಾದ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆಯಲ್ಲದೆ ಆರೋಗ್ಯವೂ ಚೆನ್ನಾಗಿರುತ್ತದೆ' ಎನ್ನುತ್ತಾರೆ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿರುವ ಗಜಾನನರವರು,”. ಅಂಕಣಗಾರ್ತಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ “ಮಣ್ಣಿನ ಪಾತ್ರೆಗಳ ತಯಾರಿಕೆ” ಕಲೆಯನ್ನು ಕಟ್ಟಿಕೊಟ್ಟಿದ್ದಾರೆ.

ಪ್ಲಾಸ್ಟಿಕ್, ಅಲ್ಯೂಮಿನಿಯಂ, ಸ್ಟೀಲ್, ನಾನ್ ಸ್ಟಿಕ್ ಮೊದಲಾದ ಪಾತ್ರೆಗಳು ಬಂದಮೇಲೆ ಮಣ್ಣಿನ ಪಾತ್ರೆಗಳು ಮೂಲೆ ಗುಂಪಾದವು. ಅದರ ಪರಿಣಾಮವಾಗಿ ಮನುಷ್ಯನ ಜೀವಿತಾವಧಿಯೂ ಕಡಿಮೆಯಾಗುತ್ತ ಬಂದಿತು. ಆದರೆ ಇತ್ತೀಚೆಗೆ ನಿಧಾನವಾಗಿ ಮತ್ತೆ ಮಣ್ಣಿನ ಪಾತ್ರೆಗಳು ಪ್ರಾಮುಖ್ಯತೆ ಪಡೆಯುತ್ತಿವೆ. ಇವುಗಳ ಮೌಲ್ಯ ತಿಳಿದವರು ಇವುಗಳನ್ನು ಬಳಸುತ್ತಿದ್ದಾರೆ. ಮೊದಲಿಗೆ ಕುಂಬಾರಿಕೆ ಹೆಸರಿನಲ್ಲಿದ್ದ ಮಣ್ಣಿನ ವಸ್ತುಗಳ ತಯಾರಿಕೆ ಈಗ ಸೆರಾಮಿಕ್ ವಸ್ತುಗಳು, ಪಾಟರಿ ಮೇಕಿಂಗ್ ಎಂಬ ರೂಪದಲ್ಲಿ ಪ್ರಚಲಿತಕ್ಕೆ ಬರುತ್ತಿವೆ. ಇವುಗಳು ಅತ್ಯಂತ ಆಕರ್ಷಣೀಯವಾಗಿ ಬಹುವಿನ್ಯಾಸಗಳಲ್ಲಿ ದೊರೆಯುತ್ತಿವೆ. ಇಂತಹ ವಸ್ತುಗಳ ತಯಾರಿಕೆ ಮಾರಾಟದೊಂದಿಗೆ ಸೆರಾಮಿಕ್ ಮತ್ತು ಪಾಟರಿ ಮೇಕಿಂಗ್ ಬಗ್ಗೆ ತರಬೇತಿ ಕೊಡುತ್ತಿರುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಮಮದಾಪುರ ಗ್ರಾಮದ ಗಜಾನನ ಭಾರತ್ ಸದಾಶಿವ ಮರಾಠೆ ಅವರ ಬದುಕಿನ ಚಿತ್ರಿಕೆ ಇಂದಿನ ನಿಮ್ಮ ಓದಿಗೆ...

'ನನ್ನ ತಂದೆ ಸದಾಶಿವ ಭರ್ಮ ಮರಾಠೆ ತಾಯಿ ವಿಜಯಲಕ್ಷ್ಮಿ. ನಾನು ಒಂದರಿಂದ ಹತ್ತನೆಯ ತರಗತಿಯವರೆಗೆ ನಮ್ಮೂರಿನಲ್ಲಿಯೇ ಓದಿದೆ. ಪಿ. ಯು. ಸಿ. ಗೆ ಬೆಳಗಾವಿಗೆ ಬಂದೆ. ಎರಡು ವರ್ಷ ಸೆರಾಮಿಕ್ ನಲ್ಲಿ ಡಿಪ್ಲೋಮ ಮಾಡಿದೆ. ಒಂದು ವರ್ಷದ ಪಾಟರಿ ಮೇಕಿಂಗಲ್ಲಿ ಡಿಪ್ಲೋಮ ಮಾಡಿದೆ. ಓದು ಮುಗಿಸಿದ ನಂತರ ಅನುಭವಕ್ಕಾಗಿ ಓಡಾಟ ಶುರು ಮಾಡಿದೆ. ದೇಶ ಸುತ್ತಬೇಕು ಇಲ್ಲ ಕೋಶ ಓದಬೇಕು ಎನ್ನುವಂತೆ ಕಲ್ಕತ್ತಾ, ಬೆಂಗಳೂರು, ಮುರುಡೇಶ್ವರ, ದೆಹಲಿ, ರಾಜಸ್ತಾನ್, ಹೈದರಾಬಾದ್, ಕೇರಳ ಹೀಗೆ ಎಲ್ಲಾ ಕಡೆ ಭಾರತದಾದ್ಯಂತ ಸುತ್ತಾಡಿದೆ. ಆ ನಂತರ ಕೇರಳದ ಮಾಣಿಕ್ಯಂ ಸೆರಾಮಿಕ್ ನಲ್ಲಿ ಐದು ವರ್ಷ ಕೆಲಸ ಮಾಡಿದೆ. ಅಲ್ಲಿಂದ ಕೆಲಸದ ಅನುಭವ ಪಡೆದು ನಮ್ಮೂರಿಗೆ ಬಂದೆ. ಆಗ ನಾನು ಬ್ಯುಸಿನೆಸ್ ಮಾಡಬೇಕಾ ಫ್ಯಾಕ್ಟರಿ ಮಾಡಬೇಕಾ ಎಂಬ ಗೊಂದಲದೊಂದಿಗೆ ನನ್ನ ಕನಸನ್ನು ಅಪ್ಪ ಅಮ್ಮನೊಂದಿಗೆ ಹಂಚಿಕೊಂಡೆ. ಅಪ್ಪ ಶಾಲೆಯ ಹೆಡ್ ಮಾಸ್ಟರ್ ಆಗಿದ್ದರಿಂದ ಅವರಿಗೆ ಹೆಚ್ಚು ಸಂಬಳ ಬರುವುದಿಲ್ಲ. ಸ್ವ ಉದ್ಯೋಗ, ಫ್ಯಾಕ್ಟರಿ ಅಂತೆಲ್ಲ ಮಾಡಲು ಲಕ್ಷಾಂತರ ಹಣ ತರುವುದು ಅಸಾಧ್ಯ ಅಂದಾಗ ನನ್ನ ಕನಸನ್ನು ಬಿಟ್ಟು ಕಾಶೀನಾಥ್ ಸಾವ್ಯ ಅವರ ಸಹಯೋಗದಲ್ಲಿ ಜೆ. ಜೆ. ಸ್ಕೂಲ್ ಆಫ್ ಆರ್ಟ್ ನಲ್ಲಿ ಸೆರಾಮಿಕ್ ಮತ್ತು ಪಾಟರಿ ಟೀಚರ್ ಆಗಿ ವೃತ್ತಿಯನ್ನು ಮುಂದುವರೆಸಿದೆ. ಹನ್ನೆರಡು ವರ್ಷಗಳ ಕಾಲ ಅಲ್ಲಿ ಪ್ರಾಧ್ಯಾಪಕ ವೃತ್ತಿಯನ್ನು ಮುಂದುವರೆಸಿದೆ. ತದನಂತರ ದೆಹಲಿ ವಿಶ್ವವಿದ್ಯಾನಿಲಯದಲ್ಲಿ, ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಗೆಸ್ಟ್ ಲೆಕ್ಚರರ್ ಆಗಿ ಪ್ರಾಧ್ಯಾಪಕ ವೃತ್ತಿಯನ್ನು ಮುಂದುವರೆಸಿದೆ. ಜೊತೆ ಜೊತೆಗೆ ಎಲ್ಲಾ ಕಡೆ ಫ್ಯಾಕ್ಟರಿಗಳಿಗೆ ಹೋಗಿ ಭೇಟಿ ಕೊಟ್ಟು ಬರುತ್ತಿದ್ದೆ. ನಾನು ಕುಂಬಾರನಲ್ಲ ಆದರೂ ನಾನು ಕಲಿತದ್ದು ಆಯ್ಕೆ ಮಾಡಿಕೊಂಡದ್ದು ಸೆರಾಮಿಕ್ ಮತ್ತು ಪಾಟರಿ ಉದ್ಯೋಗ ಹಾಗೂ ಕುಂಬಾರಿಕೆ. ಇದು ಯಾರೂ ಬೇಕಾದರೂ ಕಲಿಯಬಹುದಾದ ಕಲೆಯಾಗಿದೆ. ಇದು ಕುಂಬಾರರಿಗೆ ಮಾತ್ರ ಸೀಮಿತವಾದ ಕಲೆಯಲ್ಲ. ಆಸಕ್ತಿ ಇರುವ ಯಾರಾದರೂ ಕಲಿಯಬಹುದು. ಮಡಿಕೆಯು ಮಾನವನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿರುವುದು.

ಮಣ್ಣಿನ ಪಾತ್ರೆಗಳು ಅತ್ಯಂತ ಹಳೆಯ ಮಾನವ ಆವಿಷ್ಕಾರಗಳಲ್ಲಿ ಒಂದಾಗಿದೆ. ಮಣ್ಣಿನ ಪಾತ್ರೆಗಳು, ಪಿಂಗಾಣಿ ವಸ್ತುಗಳು, ಹೂಜಿ, ಗಡಿಗೆ, ಹಂಡೆ, ಹೆಂಚು, ಹಣತೆ, ಅಲಂಕಾರಿಕ ವಸ್ತುಗಳು, ಮಣ್ಣಿನ ವಿವಿಧ ವಿನ್ಯಾಸದ ಆಭರಣಗಳು ಇತ್ಯಾದಿಗಳನ್ನು ತಯಾರಿಸಿ ಮಾರಾಟ ಮಾಡುತ್ತೇನೆ. ಅದಕ್ಕೆ ಮುಂಚಿತವಾಗಿ ಕೆಲಸ ಮಾಡುವ ಮೊದಲು ಮಣ್ಣನ್ನು ಪರೀಕ್ಷೆ ಮಾಡಬೇಕು. ಈ ಕೆಲಸಗಳಿಗೆ ಕೆರೆಯ ಮಣ್ಣು ಯೋಗ್ಯವಾಗಿರುತ್ತದೆ. ಒಂದು ವರ್ಷ ಮಳೆಯಲ್ಲಿ ನೀರಿನಲ್ಲಿ ನೆನೆದು ಎಲೆಗಳು, ಕಡ್ಡಿಗಳು ಎಲ್ಲ ಮಣ್ಣಿನೊಂದಿಗೆ ಸೇರಿ ಕೊಳೆತಿರುತ್ತವೆ. ಇಂತಹ ಮಣ್ಣಿನಲ್ಲಿ ಜಿಗುಟುತನ ಹೆಚ್ಚು ಇರುತ್ತದೆ. ನೀರು ಕಡಿಮೆ ಆದ ಮೇಲೆ ಆ ಮಣ್ಣನ್ನು ತೆಗೆದುಕೊಂಡು ಬಂದು ಬಿಸಿಲಿನಲ್ಲಿ ಒಣಗಿಸಿ ನಂತರ ಪುಡಿಮಾಡಿ ಮತ್ತೆ ಬಕೆಟ್ ನಲ್ಲಿ ಹಾಕಿ ನೆನೆಸಿ ಕಾಲಿನಲ್ಲಿ ಚೆನ್ನಾಗಿ ತುಳಿದು ಮಣ್ಣನ್ನು ಹದ ಮಾಡುತ್ತೇವೆ. ನಂತರ ಆ ಮಣ್ಣಿನಿಂದ ಏನು ಬೇಕಾದರೂ ತಯಾರಿಸಬಹುದು. ನೀರಿನ ಮಡಿಕೆ, ಫಿಲ್ಟರ್, ಐಸ್ ಕಪ್, ಟೀ ಕಪ್, ನೀರಿನ ಬಾಟಲಿ, ಅಡುಗೆ ಮನೆಯ ವಸ್ತುಗಳು, ಪಾಟ್ಸ್, ಲ್ಯಾಂಪ್ ಶೇಡ್ಸ್, ಮೂರ್ತಿಗಳು, ಅಲಂಕಾರಿಕ ವಸ್ತುಗಳು, ಮಣ್ಣಿನ ಆಭರಣಗಳು ಎಲ್ಲವನ್ನು ತಯಾರಿಸಬಹುದಾಗಿದೆ. ನನ್ನಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು, ಮಹಿಳೆಯರು ಮನೆಯಲ್ಲಿ ಎಲ್ಲ ಕೆಲಸ ಮುಗಿಸಿ ತಮ್ಮ ಬಿಡುವಿನ ಸಮಯದಲ್ಲಿ ಆಭರಣಗಳನ್ನು ಮಾಡಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಮಣ್ಣಿನ ಆಭರಣಗಳು ಚಿನ್ನಕ್ಕಿಂತಲೂ ಸೊಗಸಾಗಿ ಕಾಣಿಸುತ್ತವೆ. ಸ್ವಾಭಾವಿಕ ಮಣ್ಣಿನಿಂದ ಮಾಡುವುದರಿಂದ ಪಾರ್ಟಿವೇರ್ ವಿವಿಧ ವಿನ್ಯಾಸಗಳಲ್ಲಿ, ಬಣ್ಣಗಳಲ್ಲಿ ತಯಾರಿಸಬಹುದಾಗಿದೆ. ಫೈರಿಂಗ್ ಮಾಡಿರುವುದರಿಂದ ಒಡೆದು ಹೋಗುತ್ತದೆ ಎನ್ನುವ ಭಯವಿಲ್ಲ, ನೀರಿನಲ್ಲಿ ಹಾಕಿದರೂ ಏನೂ ಆಗುವುದಿಲ್ಲ. ನಿರುದ್ಯೋಗದ ಸಮಸ್ಯೆಯನ್ನು ತಡೆಗಟ್ಟುವಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಹಲವಾರು ಜನರಿಗೆ ಇದು ಪ್ರಯೋಜನವಾಗಿದೆ. ಎಂಟು ವರ್ಷದ ಮಕ್ಕಳಿಂದ ಹಿಡಿದು ಅರವತ್ತು ವರ್ಷದ ಎಲ್ಲಾ ವಯೋಮಾನದವರಿಗೂ ನಾನು ಸೆರಾಮಿಕ್ ಮತ್ತು ಪಾಟರಿಯಲ್ಲಿ ತರಬೇತಿಯನ್ನು ಕೊಟ್ಟಿದ್ದೇನೆ. ಸಾಕಷ್ಟು ಜನರು ಇಷ್ಟಪಟ್ಟು ಕಲಿತು ಸ್ಟುಡಿಯೋ ಮಾಡಿದ್ದಾರೆ. ಪ್ರದರ್ಶನಗಳನ್ನು ಮಾಡುತ್ತಾರೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳ, ದೆಹಲಿ, ಆಂಧ್ರಪ್ರದೇಶ, ಉತ್ತರಪ್ರದೇಶದ ನೋಯಿಡಾದಿಂದ ಬೆಸ್ಟ್ ಲೆಕ್ಚರ್ ಎಂದು ನನಗೆ ಅವಾರ್ಡ್ಗಳು ಬಂದಿವೆ. ಸೆರಾಮಿಕ್ ನಲ್ಲಿ ಪಿ. ಹೆಚ್. ಡಿ ಮಾಡುತ್ತಿದ್ದೇನೆ. ಸುಮಾರು ಇಪ್ಪತ್ತೈದು ವರ್ಷದಿಂದ ಇದೇ ಕೆಲಸ ಮಾಡುತ್ತಾ ಬಂದಿದ್ದೇನೆ. ಇದಕ್ಕೆ ನನ್ನ ಶ್ರೀಮತಿ ಡಾ. ಮಂಜುಳ, ಮಗ ಅಥರ್ವ ಎಲ್ಲರ ಸಂಪೂರ್ಣ ಬೆಂಬಲವಿದೆ. ನನ್ನ ಮುಂದಿನ ಕನಸು, ಗುರಿ ಅಂತಾದರೆ ಬೆಂಗಳೂರಿನಲ್ಲಿ ಸೆರಾಮಿಕ್ ಮತ್ತು ಪಾಟರಿಗೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರವೊಂದನ್ನು ತೆರೆಯಬೇಕು ಎಂಬುದು. ಮಣ್ಣಿನಿಂದ ಎಲ್ಲವೂ ಸಾಧ್ಯ. ಆಧುನಿಕ ಕಾಲ ಘಟ್ಟದಲ್ಲಿ ತಂತ್ರಜ್ಞಾನ ಎಷ್ಟೆಲ್ಲ ಮುಂದುವರೆದಿದೆಯಾದರು ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಮನೆಗಳು ಈಗಲೂ ಕಾಣಸಿಗುತ್ತವೆ. ಮಣ್ಣಿನ ಮಡಿಕೆಯಲ್ಲಿ ಮಾಡಿದ ಆಹಾರಗಳು ಶರೀರಕ್ಕೆ ಅವಶ್ಯವಾದ ಹಲವಾರು ಪೋಷಕಾಂಶಗಳನ್ನು ಒದಗಿಸುತ್ತದೆಯಲ್ಲದೆ ಆರೋಗ್ಯವೂ ಚೆನ್ನಾಗಿರುತ್ತದೆ' ಎನ್ನುತ್ತಾರೆ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿರುವ ಗಜಾನನರವರು.

ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಮಣ್ಣಿನ ಉಪಕರಣಗಳು ಹೊಸ ವಿನ್ಯಾಸಗಳಲ್ಲಿ ಮತ್ತೆ ಬಳಕೆಗೆ ಬರುತ್ತಿವೆ. ಟೀ ಕಪ್, ಐಸ್ ಕ್ರೀಮ್ ಕಪ್, ಲಸ್ಸಿ ಕಪ್, ಹೆಂಚು ಹೀಗೆ ತುಂಬ ಕಡೆ ಮಣ್ಣಿನ ವಸ್ತುಗಳು ಬಳಕೆಗೆ ಸಿಗುತ್ತಿವೆ. ಮಣ್ಣಿನ ಆಭರಣಗಳು ಚಿನ್ನದ ಆಭರಣಗಳಂತೆಯೇ ಕಾಣುತ್ತವೆ. ಇವು ಅಗ್ಗ ಹಾಗೂ ಆಕರ್ಷಣೀಯವಾಗಿವೆ. ಹಾಗೇನೇ ಮಣ್ಣಿನ ಪಾತ್ರೆಗಳನ್ನು ಬಳಸುವ ಕಾಲ ಆದಷ್ಟು ಬೇಗ ಬರಲಿ ಅದರಿಂದ ಆರೋಗ್ಯವೂ ಮೊದಲಿನಂತೆ ಸುಧಾರಣೆ ಆಗಲಿ. ಮನೆಯಲ್ಲೂ ಅಲಂಕಾರಿಕ ವಸ್ತುಗಳಾಗಿ ಮಣ್ಣಿನಿಂದ ತಯಾರಿಸಿದ ವಸ್ತುಗಳನ್ನು ಉಪಯೋಗಿಸುವಂತಾಗಲಿ ಆ ಮೂಲಕ ಮಣ್ಣಿನ ವಸ್ತುಗಳ ತಯಾರಿಕರಿಗೂ ಅನುಕೂಲವಾಗಲಿ ಎಂಬ ಆಶಯ ನಮ್ಮದು.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...