ಹಿಂದೂಸ್ತಾನಿ ಸಂಗೀತದ ಮಾರ್ತಾಂಡ ಪಂ.ಜಸರಾಜ್

Date: 18-08-2020

Location: ಬೆಂಗಳೂರು


ತಮ್ಮ ಸುಮಧುರ ಗಾಯನ ಹಾಗೂ ವಿಭಿನ್ನ ಪ್ರಸ್ತುತಿಯ ಮೂಲಕ ಹಿಂದೂಸ್ತಾನಿ ಸಂಗೀತ ರಸಿಕರಿಗೆ ಪ್ರಿಯರಾಗಿದ್ದವರು ಪಂಡಿತ್‌ ಜಸರಾಜ್‌. ವರ್ಣರಂಜಿತ ವ್ಯಕ್ತಿತ್ವದ ಜಸರಾಜ್‌ ಅವರ ಗಾಯನ ಮತ್ತು ವ್ಯಕ್ತಿತ್ವ ಪತ್ರಕರ್ತ ವಸಂತ ಕಟ್ಟಿಕೊಟ್ಟಿದ್ದಾರೆ. ಮೇರುಗಾಯಕನಿಗೆ ಸಲ್ಲಿಸಿದ ’ಪದಾಂಜಲಿ’ ಇಲ್ಲಿದೆ.

ಸಂಗೀತ ಮಾರ್ತಾಂಡ ಪಂ.ಜಸರಾಜ್, ಭಾರತೀಯ ಸಂಗೀತ ಕ್ಷೇತ್ರದ ದಂತಕತೆ! ರಸರಾಜನಂತೆ ಬಾಳಿ ಸಾರ್ಥಕ 90 ವರ್ಷಗಳನ್ನು ಕಳೆದು ಮಾಗಿಹಣ್ಣಾಗಿ ತಮ್ಮ ರಸಯಾತ್ರೆ ಮುಗಿಸಿದರು. ಪ್ರಾಯಶಃ ಇನ್ನು ಮುಂಬರುವ ಕಾಲಗಳಲ್ಲಿ ಈ ರೀತಿಯ ವ್ಯಕ್ತಿತ್ವವನ್ನು ಕಾಣುವುದು ಸಾಧ್ಯವಿಲ್ಲವೇನೋ!
ಇವತ್ತು ಜಸರಾಜರು ದೈಹಿಕವಾಗಿ ಇಲ್ಲವಾಗಿರಬಹುದು. ಆದರೆ ಅವರ ಸಂಗೀತಕ್ಕೆ ಯಾವತ್ತೂ ಸಾವಿಲ್ಲ. 2006ನೇ ಇಸ್ವಿಯಲ್ಲಿ ಮಂಗಳ ಮತ್ತು ಗುರುಗ್ರಹಗಳ ಕಕ್ಷೆಯಲ್ಲಿ ಕಂಡುಹಿಡಿಯಲಾದ ಪ್ಲ್ಯಾನೆಟ್-2006 (VP32 (number 300128) ಎಂಬ ಉಪಗ್ರಹವೊಂದಕ್ಕೆ ಇಂಟರ್ ನ್ಯಾಷನಲ್ ಆಸ್ಟ್ರೊನೊಮಿಕಲ್ ಸೊಸೈಟಿ (ಐಎಯು) ಪಂಡಿತ್‌ಜಸರಾಜ್ ಎಂದು ನಾಮಕರಣ ಮಾಡುವ ಮೂಲಕ ಅವರ ಮೇರು ಸಾಧನೆಯನ್ನು ಗುರುತಿಸಿ ಅಜರಾಮರವಾಗಿಸಿದೆ. ಪಾಶ್ಚಾತ್ಯ ಸಂಗೀತಗಾರರಾದ ಮೊಝಾರ್ಟ್, ಬಿಥೊವೆನ್, ಟೆನರ್ ಲುಸಿಯಾನೊ ಪವರಟಿ ಮುಂತಾದವರ ಸಾಲಿಗೆ ಸೇರಿದ ಪ್ರಥಮ ಭಾರತೀಯ ಸಂಗೀತಗಾರ ಎಂದು ಈ ಸಂಸ್ಥೆ ಪಂ.ಜಸರಾಜರನ್ನು ಗೌರವಿಸಿದ್ದು ಅವರ ಸಂಗೀತ ಸಾಧನೆಯ ಎತ್ತರವನ್ನೂ, ವಿಸ್ತಾರವನ್ನೂ ತೆರೆದು ತೋರುತ್ತದೆ.
ಹುಟ್ಟಿನಿಂದಲೂ ಇವರದು ಬಂಡುಕೋರ ವ್ಯಕ್ತಿತ್ವ. ಹರಿಯಾಣಾದ ಚಿಕ್ಕಹಳ್ಳಿ ಪಿಲಿಮಂಡೋರಿಯಲ್ಲಿ ಸಂಗೀತ ಮನೆತನದಲ್ಲಿ ಜನಿಸಿದ ಜಸರಾಜರು ಐದನೇ ವಯಸ್ಸಿನಲ್ಲಿಯೇ ಬೇಗಂ ಅಖ್ತರ್ ಎಂದು ಖ್ಯಾತರಾದ ಅಸ್ಗರಬಾಯಿ ಫೈಜಾಬಾದ್ ಅವರ ಗಾಯನಕ್ಕೆ ಮನಸೋತು ಮೈಮರೆಯುತ್ತಿದ್ದರಂತೆ. ಶಾಲೆಗೆ ಹೋಗಬೇಕಾದ ಬಾಲಕ ಹತ್ತಿರದ ಹೋಟೆಲ್ ಒಂದರಲ್ಲಿ ಹಚ್ಚಿಡಲಾಗುತ್ತಿದ್ದ ಗ್ರಾಮೊಫೋನ್ ರಿಕಾರ್ಡ್ ಆಕರ್ಷಣೆಗೆ ಒಳಗಾಗಿ ಅಲ್ಲಿಯೇ ಸಂಜೆಯವರೆಗೂ ಕೇಳುತ್ತ ಕುಳಿತಿದ್ದು ಶಾಲೆಬಿಡುವ ವೇಳೆಗೆ ಮನೆಗೆ ಹೋಗುತ್ತಿದ್ದರಂತೆ! ಹೀಗೆ ತಮ್ಮ ಸಂಗೀತ ಯಾತ್ರೆ ಆರಂಭವಾಯಿತೆಂದು ಸ್ವತಃ ಜಸರಾಜರೇ ಹೇಳುತ್ತಿದ್ದರು.
ಅವರ ತಂದೆ ಮೋತಿರಾಮರು ಮೇವಾತಿ ಘರಾಣೆಯ ಮಹಾನ್ ಪಂಡಿತರಾಗಿದ್ದವರು. ಕೆಲಕಾಲ ಹೈದರಾಬಾದಿನ ನಿಜಾಮರ ಆಸ್ಥಾನ ವಿದ್ವಾಂಸರಾಗಿದ್ದರು. ಮಕ್ಕಳು ಚಿಕ್ಕವಯಸ್ಸಿನಲ್ಲಿರುವಾಗಲೇ ತೀರಿಹೋದರು ಮೋತಿರಾಮರು. ಇಡೀ ಸಂಸಾರದ ಜವಾಬ್ದಾರಿ ಅವರ ಹಿರಿಮಗ ಮಣಿರಾಂ ಅವರ ಹೆಗಲೇರಿತು. ಚಿಕ್ಕವಯಸ್ಸಿನಲ್ಲಿಯೇ ತಮ್ಮ ಇನ್ನೋರ್ವ ಸಹೋದರ ಪ್ರತಾಪ ನಾರಾಯಣ ಅವರಲ್ಲಿ ತಬಲಾ ಅಭ್ಯಾಸ ಆರಂಭಿಸಿದ ಜಸರಾಜ್ ಬಲುಬೇಗನೇ ತಬಲೆಯ ಪಟ್ಟುಗಳನ್ನು ಕರಗತ ಮಾಡಿಕೊಂಡು ಕಲಾವಿದರಾಗಿ ರೂಪುಗೊಂಡವರು. ತಮ್ಮ ಅಣ್ಣನ ಕಛೇರಿಗಳಿಗೆ ಸಾಥ್ ನೀಡುವುದಲ್ಲದೇ ಸ್ವತಂತ್ರವಾಗಿ ಸೋಲೋ ನುಡಿಸಬಲ್ಲ ಬಾಲಕಲಾವಿದರೆಂದೂ ಬೆಳಕಿಗೆ ಬಂದರು. ಹೈದರಾಬಾದಿನ ನವಾಬನ ರಾಜ್ಯದಲ್ಲಿ ಕೋಮುಗಲಭೆಗಳು ಆರಂಭವಾದ ಮೇಲೆ ಇವರ ಕುಟುಂಬ ಅಹಮದಾಬಾದಿಗೆ ಬಂದು ನೆಲೆಸಿತು. ಸಾನಂದ್‌ನ ಮಹಾರಾಜ ಹದಿನಾಲ್ಕರ ಹರೆಯದ ಜಸರಾಜರನ್ನು ಮತ್ತವರ ಅಣ್ಣ ಮಣಿರಾಂರನ್ನು ಆಸ್ಥಾನ ವಿದ್ವಾಂಸರಾಗಿ ನೇಮಿಸಿಕೊಂಡು ನೆಲೆ ಕಲ್ಪಿಸಿದರು. ಹಿರಿಯಣ್ಣ ಮತ್ತು ಗುರುವಾಗಿ ಒದಗಿಬಂದ ಮಣಿರಾಮರೊಂದಿಗೆ ಅಲ್ಲಿ ನೆಲೆಸತೊಡಗಿದರು. ಹೀಗಿರಲು ಒಮ್ಮೆ ಇದ್ದಕ್ಕಿದ್ದಂತೆಯೇ ಮಣಿರಾಮ್ ಅವರ ಅವಾಜ್ ಕೈಕೊಡತೊಡಗಿತ್ತು. ಮುಂಚಿನಂತೆ ಹಾಡಲೂ ಆಗದಂತಹ ಪರಿಸ್ಥಿತಿ. ಆಗ ಗುರುವಾಗಿ ಒದಗಿ ಬಂದವರು ಸ್ವತಃ ಸಂಗೀತ ವಿದ್ವಾಂಸರೂ, ಕಲಾವಿದರೂ, ವಾಗ್ಗೇಯಕಾರರೂ ಆಗಿದ್ದ ಮಹಾರಾಜಾ ಜಯವಂತ್ ಸಿಂಘ್ ವಘೇಲಾ. ತಾವು ಉಪಾಸನೆ ಮಾಡುತ್ತಿದ್ದ ಕಾಲಿಕಾ ದೇವಿಯ ಮಂದಿರದಲ್ಲಿ ಅವರಿಗೆ ಭಕ್ತಿಯಿಂದ ಗಾಯನಸೇವೆ ಮಾಡುವಂತೆ ಹೇಳಿದ್ದರು. ಅತ್ಯಾಶ್ಚರ್ಯವೋ ಎಂಬಂತೆ ಹೂತುಹೋಗಿದ್ದ ಮಣಿರಾಮರ ಧ್ವನಿ ಆ ಮಂದಿರದ ಆವಾರದಲ್ಲಿ ಮೊದಲಿನಂತೆಯೇ ಆಗಿ ಮಾರ್ಪಟ್ಟಿತ್ತು. ಜಸರಾಜರು ಆಗ ಅಣ್ಣನ ಗಾಯನಕ್ಕೆ ಒತ್ತಾಸೆಯಾಗಿ ತಬಲಾ ಸಾಥ್ ನೀಡುತ್ತಿದ್ದರು. ಹೀಗೆ ಅಲೌಕಿಕವಾದ ಆಧ್ಯಾತ್ಮದೆಡೆಗೆ ಜಸರಾಜರ ತುಡಿತ ಆರಂಭವಾದದ್ದು. ಮುಂದೆ ಕೊನೆಯವರೆಗೂ ಸಂಗೀತವನ್ನು ಒಂದು ಉಪಾಸನಾ ಮಾರ್ಗವಾಗಿಯೇ ಸ್ವೀಕರಿಸಿ, ಹಠಮಾರಿಯಾಗಿ ಸಾಧನೆಮಾಡಿ ಅದನ್ನು ಒಲಿಸಿಕೊಂಡು ಮಾರ್ತಾಂಡ ಎನಿಸಿಕೊಂಡವರು ಪಂ.ಜಸರಾಜ್. ಅವರ ಬಾಯಲ್ಲಿ ಅಡಾಣಾ ರಾಗದಲ್ಲಿ ತೀನ್ ತಾಲದಲ್ಲಿ ನಿಬದ್ಧಗೊಂಡು ಮಹಾರಾಜಾ ಜಯಂತ ಸಿಂಗ್ ವಘೇಲಾರಿಂದ ರಚಿತವಾದ ’ಮಾತಾಕಾಲಿಕಾ, ಜಗತ ಜನನೀ ಭವಾನೀ....’ ಎಂಬ ಬಂದಿಶ್ ಕೇಳುವುದೇ ಒಂದು ಮಹದಾನಂದ. ಭಕ್ತಿರಸದ ಮಜಲುಮಜಲುಗಳನ್ನು ಹಿಂಜಿಹಿಂಜಿ ತೆರೆದು ತೋರುತ್ತ ದಿವ್ಯವಾದ ಸ್ಥಿತಿಗೆ ಕೊಂಡೊಯ್ಯುವ ಈ ಸಂಗೀತವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ.


ಹದಿನಾಲ್ಕಕ್ಕೆ ಲಯಬದಲಿಸಿದ ಛಲಗಾರ
ಹದಿನಾಲ್ಕನೇ ವಯಸ್ಸಿಗೇ ಪ್ರಬುದ್ಧ ತಬಲಾವಾದಕರಾಗಿ ರೂಪುಗೊಂಡಿದ್ದ ಬಾಲಕ ಜಸರಾಜರಿಗೆ ಸಾಥಿ ಕಲಾವಿದರನ್ನು ಜನ ನಡೆಸಿಕೊಳ್ಳುತ್ತಿದ್ದ ರೀತಿ ಯಾಕೊ ಸರಿಕಾಣಲಿಲ್ಲ. ಒಂದು ದಿನ ಅಣ್ಣ ಮಣಿರಾಮನಲ್ಲಿಗೆ ಬಂದು ಇನ್ನು ತಾನು ತಬಲಾ ನುಡಿಸಲಾರೆ. ಏನಾದರಾಗಲಿ ಆಗುವುದಿದ್ದರೆ ಗಾಯಕನೇ ಆಗುವೆ ಎಂದು ಹಠಮಾಡಿದರು. ಮುಖ್ಯ ಕಲಾವಿದನಾಗಿ ಸ್ವತಂತ್ರವಾಗಿ ಹಾಡುವವರೆಗೂ ತಲೆಕ್ಷೌರವನ್ನೇ ಮಾಡುವುದಿಲ್ಲ ಎಂದು ಪಣತೊಟ್ಟರು. ತಬಲಾ ಮುಟ್ಟುವುದಿಲ್ಲ ಎಂದು ಶಪಥ ಮಾಡಿಬಿಟ್ಟರು. ಮುಂದೆ ಕೆಲವೇ ವರ್ಷಗಳಲ್ಲಿ ಛಲದಿಂದಲೇ ಗಾಯನಾಭ್ಯಾಸ ಮಾಡಿ ಆಕಾಶವಾಣಿಯ ಕಲಾವಿದರಾಗಿ ಮಾನ್ಯತೆ ಪಡೆದು ಪ್ರಪ್ರಥಮವಾಗಿ ರಾಗ ಕೌಶಿಕಾನಡಾ ಪ್ರಸ್ತುತಪಡಿಸಿ ಶಹಭಾಸಗಿರಿ ಪಡೆದ ಮೇಲೆಯೇ ಇಷ್ಟೂದ್ದ ಬೆಳೆದಿದ್ದ ತಮ್ಮ ತಲೆಗೂದಲನ್ನು ಕತ್ತರಿಸಲು ಒಪ್ಪಿಕೊಂಡರು. ಮುಂದೆ ಒಂದೊಂದೇ ಹಂತಹಂತವಾಗಿ ಅವರ ಸಾಧನೆಯ ಹರವು ಎತ್ತರವನ್ನೂ ಕಾಣುತ್ತ ಹೋಯಿತು. ಮೂರೂವರೆ ಸಪ್ತಕದಲ್ಲಿ ಲೀಲಾಜಾಲವಾಗಿ ಜಾಲಾಡಬಲ್ಲ ಅವರ ಶಾರೀರಕ್ಕೆ ಒಂದು ಥಟ್ಟನೆ ಹಿಡಿದೆಳೆದು ನಿಲ್ಲಿಸುವ ವಿಚಿತ್ರವಾದ ಆಯಸ್ಕಾಂತೀಯಗುಣವಿದೆ. ರಾಗಭಾವಕ್ಕೆ ತಕ್ಕುನಾಗಿ ಜಸರಾಜರ ಕಂಠದಿಂದ ವಿವಿಧ ವಿನ್ಯಾಸಗಳಲ್ಲಿ ಹೊರಳುವ ನಾದಕ್ಕೆ ಮಾಯಕ ಗುಣವಿದೆ. ರಾಗರಾಗಿಣಿಗಳ ವ್ಯಕ್ತಿತ್ವವನ್ನು ಇವರಷ್ಟು ಅದ್ಭುತವಾಗಿ ಎತ್ತಿತೋರುವ, ಬಣ್ಣಕಟ್ಟಿ ಇಂದ್ರಜಾಲದ ಹಾಗೆ ಮೋಡಿಮಾಡುವ ಬೇರೊಬ್ಬ ಕಲಾವಿದರನ್ನು ಕಾಣಲಾಗದು.
ದರಬಾರಿ ಕಾನಡಾ, ಮಿಯಾಮಲ್ಹಾರ, ಜೋಗ್ ಮುಂತಾದ ಘನಗಂಭೀರ ರಾಗಗಳು ಜಸರಾಜರ ಕೊರಳಲ್ಲಿ ರೂಪವಾಗಿ, ರೂಪಕಗಳಾಗಿ ಜೀವತಳೆಯುವುದಕ್ಕೆ ಕಿವಿಯಾಗುವುದೇ ಒಂದು ರೋಮಾಂಚನದ ಅನುಭವ! ಭೈರವರಾಗದ ಪ್ರಕಾರಗಳಲ್ಲಂತೂ ಸಿದ್ಧಹಸ್ತರಾಗಿರುವ ಜಸರಾಜರು ಆ ರಾಗಗಳ ಕಾರುಣ್ಯ, ಶೃಂಗಾರ ಮತ್ತು ವೈರಾಗ್ಯ ಭಾವಗಳನ್ನು ಮೇಳೈಸಿ ಬೆಳೆಸಿ ಪ್ರಸ್ತುತ ಪಡಿಸುವ ರೀತಿಯೇ ಅನೂಹ್ಯವಾದದ್ದು. ಇದಲ್ಲದೇ ಅಪ್ರಚಲಿತ ರಾಗಗಳಾದ ಗ್ಯಾನಕಲಿ, ಅಬೀರಿ ತೋಡಿ, ಧನಾಶ್ರೀ, ಪಟದೀಪಿಕಿ, ಪೂರ್ಬಾ, ಭಾವಸಖ, ದೇವಸಖ, ಗುಂಜೀಕಾನಡಾ ಮತ್ತು ಚರಜು ಕಿ ಮಲ್ಹಾರ್ ಮುಂತಾದವುಗಳನ್ನು ಕೇಳಿದರೆ ಜಸರಾಜರ ಬಾಯಿಂದ ಮಾತ್ರ ಎಂಬುವಷ್ಟು ಛಾಪನ್ನು ಮೂಡಿಸಿವೆ. ತಮ್ಮ ಸ್ವಭಾವಕ್ಕೆ ತಕ್ಕಂತೆಯೇ ಉತ್ಕಟವಾದ ಅಭಿವ್ಯಕ್ತಿಯನ್ನು ಮೂಡಿಸಿ ಸ್ವತಃ ತಾವೂ ಮೈಮರೆಯುವುದೇ ಅಲ್ಲದೇ ಕೇಳುಗರನ್ನೂ ಬೇರೊಂದು, ಕಾಣದ ಲೋಕಕ್ಕೇ ಒಯ್ದುಬಿಡುವ ಅಲೌಕಿಕ ಸಂಗೀತ ಪಂಡಿತ ಜಸರಾಜರ ವಿಶೇಷತೆ.
ರಾಗರಸಕ್ಕೆ ಜೀವತುಂಬುವ ಜಸರಂಗೀ
ಜಸರಂಗೀ ಎಂಬುದು ಜಸರಾಜರ ಕಲ್ಪನೆಯಲ್ಲರಳಿದ ಒಂದು ವಿನೂತನ ಜುಗಲ್ಬಂದಿ. ಪುರಾತನವಾದ ಶಾಸ್ತ್ರಾಧಾರಿತ ಮೂರ್ಛನಾ ಪದ್ಧತಿಯ ಮೂಸೆಯಲ್ಲಿ ರೂಪುಗೊಂಡಿರುವ ಈ ಜುಗಲ್ಬಂದಿಯಲ್ಲಿ ಗಾಯಕ-ಗಾಯಕಿಯರಿಬ್ಬರೂ ಪರಸ್ಪರ ಸಂವಾದಿಯಾಗಿ ಗಾಯನವನ್ನು ನಿರೂಪಿಸುತ್ತಾರೆ. ಹೆಣ್ಣು ಮತ್ತು ಗಂಡಿನ ಅನ್ಯೋನ್ಯತೆಯ ಪ್ರತೀಕವಾಗಿ ಕಂಡುಬರುವ ಈ ಜುಗಲ್ಬಂದಿ ಗಾಯನ ಒಂದು ವಿನೂತನ ಪ್ರಯೋಗವಾಗಿ ಯಶಸ್ಸನ್ನು ಪಡೆಯಿತು. ಪುಣೆಯ ಸಂಗೀತ ರಸಿಕರು ಈ ಶೈಲಿಯ ಗಾಯನವನ್ನು ’ಜಸರಂಗೀ’ ಎಂದು ಕರೆದು ಸಂಗೀತ ಮಾರ್ತಾಂಡನಿಗೆ ಗೌರವ ಸಲ್ಲಿಸಿದ್ದಾರೆ. ಈಗ ಮಹಾರಾಷ್ಟ್ರದಲ್ಲಿ ಸಮಕಾಲೀನ ಮೇರು ಕಲಾವಿದರಲ್ಲಿ ಇಬ್ಬರಾಗಿರುವ ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ ಮತ್ತು ಜಸರಾಜರ ಪಟ್ಟ ಶಿಷ್ಯರೆಂದೇ ಪರಿಗಣಿಸಲ್ಪಡುವ ಪಂ. ಸಂಜೀವ ಅಭ್ಯಂಕರ ಈ ಗಾಯನವನ್ನು ಪ್ರಸ್ತುತಪಡಿಸುತ್ತ ಪ್ರಚುರಗೊಳಿಸುತ್ತಿದ್ದಾರೆ.
ಮೇರುಗಾಯಕರ ಮೇರು ವ್ಯಕ್ತಿತ್ವ
ತರುಣ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಪರಂಪರೆ ನಮ್ಮ ಹಿಂದಿನ ತಲೆಮಾರಿನ ಸುಪ್ರಸಿದ್ಧ ಕಲಾವಿದರೆನಿಸಿಕೊಂಡ ಎಲ್ಲ ದಿಗ್ಗಜರ ಅಪರೂಪದ ಲಕ್ಷಣ. ಅದಕ್ಕೆ ಜಸರಾಜರೂ ಹೊರತಾಗಿರಲಿಲ್ಲ. ನನ್ನ ತಂದೆ ಈಗ ಎಪ್ಪತ್ತನೇ ವಯಸ್ಸಿಗೆ ಕಾಲಿಡುತ್ತಿರುವ ಪಂ.ಗಣಪತಿ ಭಟ್, ಹಾಸಣಗಿ ಅವರು ’ಈ ಎಲ್ಲ ದಿಗ್ಗಜ ಕಲಾವಿದರು ಎಳವೆಯಲ್ಲೇ ನನ್ನನ್ನು ಗುರುತಿಸಿದ್ದೂ ನನ್ನ ಬೆಳವಣಿಗೆಗೆ ಪೂರಕವಾದ ಒಂದು ಕಾರಣ ಎಂದು ಹಳೆತಲೆಮಾರಿನ ದಿಗ್ಗಜರನ್ನು ನೆನಪಿಸಿಕೊಳ್ಳುತ್ತಾರೆ. ನಿನ್ನೆ ನಾವು ಪಂ.ಜಸರಾಜರ ಕುರಿತು ಮಾತನಾಡುತ್ತಿರುವಾಗ ಅವರು ತಾವು ಬೆಳೆಯಲು ಅವರೆಲ್ಲ ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಿದ್ದರು. "ಇವತ್ತು ನಾನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದನಾಗಿ ಬೆಳೆಯಲು ಬೆಳಕಿಗೆ ಬರಲು ಬೀಜರೂಪದ ಮೂಲ ಪುಣೆಯಲ್ಲಿ 1984ರಲ್ಲಿ ನಡೆದ ’ಕಲ್-ಕೆ-ಕಲಾಕಾರ್’ ಎಂಬ ಯುವ ಸಂಗೀತೋತ್ಸವ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಅಲ್ಲಿ ಪಂ.ಜಸರಾಜ, ಪಂ.ಕುಮಾರ ಗಂಧರ್ವ, ಪಂ.ವಸಂತ್‌ರಾವ್ ದೇಶಪಾಂಡೆ, ಮುಂತಾದ ದಿಗ್ಗಜ ಸಂಗೀತಗಾರರೆದುರು ಹಾಡುವ ಅವಕಾಶ ಒದಗಿಬಂತು. ಕಾರ್ಯಕ್ರಮ ಮುಗಿದ ಮೇಲೆ ವೇದಿಕೆಗೆ ಬಂದು ಬರಸೆಳೆದು ಅಪ್ಪಿಕೊಂಡು ಮೆಚ್ಚುಗೆ ಸೂಸಿದ್ದಲ್ಲದೇ ಸಭೆಯನ್ನುದ್ದೇಶಿಸಿ ’ಗಣಪತಿಯಂಥ ಯುವ ಕಲಾವಿದರು ನಾಳಿನ ಮಂಚೂಣಿ ಕಲಾವಿದರಾಗಿ ನಮ್ಮ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಮೂಡಿಸಿದ್ದಾರೆಂದು ಹೇಳಿ ಕಲ್-ಕೆ-ಕಲಾಕಾರ್ ಎಂಬ ಪ್ರಶಸ್ತಿಯನ್ನು ನೀಡಿದ್ದರು. ಮುಂದೆ ೧೯೮೫ರಲ್ಲಿ ಇದೇ ಆಧಾರದ ಮೇಲೆ ನನಗೆ ಪಂ.ಭೀಮಸೇನ ಜೋಷಿ ಅವರು ಸಂಘಟಿಸುತ್ತಿದ್ದ ಜಗದ್ವಿಖ್ಯಾತ ಪುಣೆ ಸವಾಯಿಗಂಧರ್ವ ಸಂಗೀತ ಮಹೋತ್ಸವದಲ್ಲಿ ಹಾಡುವ ಅವಕಾಶವೊದಗಿ ಗುರುಕೃಪೆಯಿಂದ ಅದ್ಭುತವೆಂಬಷ್ಟು ಪರಿಣಾಮಕಾರಿಯಾದದ್ದೂ, ಒಂದೇ ದಿನದಲ್ಲಿ ಮಹಾರಾಷ್ಟ್ರವಲ್ಲದೇ ಇಡೀ ದೇಶಾದ್ಯಂತ ಓರ್ವ ಕಲಾವಿದನಾಗಿ ಮನ್ನಣೆ ದೊರೆತದ್ದು ಎಲ್ಲವೂ ನೆನೆಸಿಕೊಂಡರೇ ರೋಮಾಂಚನವಾಗುತ್ತದೆ. ನನ್ನ ಬೆಳವಣಿಗೆಯನ್ನು ಗಮನಿಸುತ್ತ ಪ್ರತಿ ಹಂತದಲ್ಲಿಯೂ ಬೆನ್ನುತಟ್ಟುತ್ತ ಬಂದ ಪಂ.ಜಸರಾಜ ಮತ್ತು ಭೀಮಸೇನ ಜೋಷಿಯವರ ವ್ಯಕ್ತಿತ್ವ ನನ್ನನ್ನು ವಿಶೇಷವಾಗಿ ಪ್ರಭಾವಿಸಿದೆ" ಎಂದವರು ತಮ್ಮ ಹಳೆಯ ನೆನಪುಗಳನ್ನು ಹೇಳಿಕೊಂಡರು.
ಪಂ.ಜಸರಾಜರು ಯಾವತ್ತೂ ಕಾಲದ ಲಯವನ್ನು ಬಲುಬೇಗ ಗ್ರಹಿಸಿ ಸುಲಭಗತಿಯ ನಡೆಯನ್ನು ರೂಪಿಸಿಕೊಂಡವರು. ತೊಂಭತ್ತರ ಇಳಿವಯಸ್ಸಿನಲ್ಲಿಯೂ ಅವರು ಈ ಕಾಲದ ಟೆಕ್ನಾಲಜಿಯನ್ನು ಬಳಸುತ್ತ ಅಪ್ಡೇಟ್ ಆಗಿದ್ದವರು. ಸ್ಕೈಪ್ ಮೂಲಕ ಶಿಷ್ಯಂದಿರಿಗೆ ತೀರ ಇತ್ತೀಚಿನವರೆಗೂ ಪಾಠಮಾಡುತ್ತಿದ್ದರು.

“I teach through Skype. I suggest everyone to do it. I am walking with time and that’s what one should do. I don’t like when people say ‘Woh zamaana achha tha’ (Those were the good times). I believe the current phase is good. One should not compare it with the past -- good or bad. One has to walk with time and only then you will like the current time,” ಎಂದು ಅವರು ಜನವರಿ 20, 2020ರಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದನ್ನು ದ ಹಿಂದೂ ಪತ್ರಿಕೆ ಪ್ರಕಟಿಸಿದೆ.

“I am critical of myself. I never think I have done something great. I don’t think too much about myself or my achievements. Whatever I have received is as per God’s will. I am grateful to God for that.” ಎಂದು ವಿನಯಪೂರ್ವಕವಾಗಿ ಹೇಳುತ್ತಲೇ ಅಂಟಾರ್ಕ್ಟಿಕಾವೂ ಒಳಗೊಂಡಂತೆ ಪ್ರಪಂಚದ ಎಲ್ಲ ಖಂಡಗಳಲ್ಲೂ ಕಾರ್ಯಕ್ರಮವನ್ನು ನೀಡಿದ ಪ್ರಪಂಚದ ಏಕೈಕ ಕಲಾವಿದ ಪಂ.ಜಸರಾಜ್ ನಮ್ಮ ಕಾಲವು ಕಂಡ ಮಹಾನ್ ಸಾಧಕ. ಅವರಿಗೆ ಸಂಗೀತ ಮಾರ್ತಂಡ ಎಂದು ಜನ ನೀಡಿದ ಬಿರುದು ಸಾರ್ಥಕವಾಗುವಂತೆ ಬದುಕಿದ ರಸಪುರುಷ.

***


ವಸಂತ

ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ಹಾಸಣಗಿಯವರಾದ ವಸಂತ ಒಂದುವರೆ ದಶಕಗಳಿಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಕಾರ್ಪೋರೇಟ್ ಟ್ರೇನಿಂಗ್, ಲರ್ನಿಂಗ್ ಆಂಡ್ ಡೆವಲಪ್ಮೆಂಟ್, ಸಾರ್ವಜನಿಕ ಸಂಪರ್ಕ ಮತ್ತು ಕಾರ್ಪೋರೇಟ್ ಕಮ್ಯೂನಿಕೇಷನ್ಸ್ ಮುಂತಾಗಿಯಲ್ಲದೇ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಭಾಷೆ, ಸಾಹಿತ್ಯಗಳ ಉಪನ್ಯಾಸಕರಾಗಿ ಕೂಡ ಸಂವಹನದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವವಿರುವವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಇಂಗ್ಲಿಷ್ ಸಾಹಿತ್ಯಗಳಲ್ಲಿ ಎಂ.ಎ.ಪದವಿ ಪಡೆದಿರುವ ಇವರು ಪ್ರಸ್ತುತ ಕೌಟುಂಬಿಕ ಹಿನ್ನೆಲೆಯಿಂದ ಬಂದ ಕೃಷಿಕಾರ್ಯಗಳನ್ನು ಸಂಭಾಳಿಸುತ್ತ ಸಂವಹನ ಮತ್ತು ಭಾಷಾ ಸಮಾಲೋಚಕರಾಗಿ (Communications and Language consultant) ಕೆಲಸ ಮಾಡುತ್ತಿದ್ದಾರೆ.
(vbhats13@gmail.com)


 

MORE NEWS

ಐವತ್ತು ವರ್ಷಗಳ ಕಥನ ಚರಿತ್ರೆಯನ್ನು ಕಟ್ಟಿಕೊಡುವ ‘ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು’

15-04-2025 ಬೆಂಗಳೂರು

"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...

ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ

10-04-2025 ಬೆಂಗಳೂರು

"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು

06-04-2025 ಬೆಂಗಳೂರು

"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...