ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

Date: 02-09-2020

Location: ಬೆಂಗಳೂರು


’ಆಕಾಶಕ್ಕೇ ರೆಕ್ಕೆ ಮೂಡಿದಂತೆ ಹಾರುವ ಹಕ್ಕಿಗೆ ಇರುವ ತಾದಾತ್ಮ್ಯದಂತೆ, ಹರಿವ ನದಿಯ ಸಹಜ ಉನ್ಮಾದದಂತೆ ಅವಳ್ಲೊಂದು ಚೈತನ್ಯ ಸದಾ ಉಲಿಯುತ್ತಿರುತ್ತದೆ. ಅದಕ್ಕೆ ಭಾಷೆಯಿಲ್ಲ, ಅದು ಅನುಭೂತಿ’ ಎನ್ನುವ ವಿಮರ್ಶಕಿ-ಲೇಖಕಿ ಡಾ. ಗೀತಾ ವಸಂತ ಅವರು ಪಿ. ಚಂದ್ರಿಕಾರ ’ಚಿಟ್ಟಿ’ ಕಾದಂಬರಿಯ ’ಚಿಟ್ಟಿಯೆಂಬ ಹೆಣ್ಣಿನ ಅನುಭವ ಕಥನ ಮಾತ್ರವಾಗಿ ಉಳಿಯದೇ ಹೊಸ ಲೋಕದರ್ಶನವಾಗಿ ತೆರೆದುಕೊಳ್ಳುತ್ತ ಹೋಗುತ್ತದೆ’ ಎಂದು ವಿವರಿಸಿದ್ದಾರೆ.

ಹೆಣ್ಣಿಗೊಂದು ಪ್ರತ್ಯೇಕ ಲೋಕಮೀಮಾಂಸೆ ಇದೆಯಾ ಎಂಬ ಪ್ರಶ್ನೆಯನ್ನು ಇತ್ತೀಚಿನ ದಿನಗಳಲ್ಲಿ ಪದೇಪದೇ ಕೇಳಿಕೊಳ್ಳುತ್ತಿದ್ದೇವೆ. ಲೋಕನಿರ್ಧರಿತ ಮಾನದಂಡಗಳು, ನಿರೀಕ್ಷೆಗಳು ಹಾಗೂ ತೀರ್ಮಾನಗಳ ಆಚೆ ಇರುವವಳೇ ಹೆಣ್ಣು. ನಿಶ್ಚಿತ ತರ್ಕಗಳಾಚೆ ವಿಸ್ತರಿಸಿಕೊಳ್ಳುತ್ತಲೇ ಇರುವ ಅವಳ ಅರಿವೇ ಬೇರೆ. ಅದು ಆಗಿ ಇರುವುದಲ್ಲ, ಆಗುತ್ತಲೇ ಇರುವಂಥದು. ವಿಕಾಸದ ರೀತಿಯೇ ಹಾಗೆ. ಇದೆಲ್ಲ ತೀವ್ರವಾಗಿ ಅನಿಸಿದ್ದು ಪಿ.ಚಂದ್ರಿಕಾ ಅವರ ಚಿಟ್ಟಿ ಎಂಬ ವಿಶಿಷ್ಟ ಕಾದಂಬರಿಯ ಓದಿನಲ್ಲಿ. ಹೆಣ್ಣು ದೇಹವೊಂದು ವಿಕಸಿಸುತ್ತ ಹೋದಂತೆ ಹೆಣ್ಣು ಮನಸ್ಸಿನಲ್ಲಿ ಮೂಡುವ ತಲ್ಲಣಗಳನ್ನು ಕಾದಂಬರಿ ಸೂಕ್ಮವಾಗಿ ಚಿಟ್ಟಿ ಎಂಬ ಪುಟ್ಟ ಹುಡುಗಿಯ ಮೂಲಕ ಕಾಣಿಸುತ್ತ ಹೋಗುತ್ತದೆ. ಬಾಲ್ಯದಿಂದ ಕೌಮಾರ್ಯಕ್ಕೆ ಹೊರಳುವ ಸ್ಥಿತಿ ಕಂಬಳಿಹುಳುವೊಂದು ಚಿಟ್ಟೆಯಾಗುವಂಥ ಸಂಕಟಕರ ಸ್ಥಿತಿಯೂ ಹೌದು. ಆ ಸಮಯದಲ್ಲಿ ಅನೇಕ ಅನುಮಾನ, ಗೊಂದಲಗಳ ಸುಳಿಯಲಿ ಮನಸ್ಸು ಗಿರಿಗಿಟ್ಲೆಯಾಡುತ್ತಿರುತ್ತದೆ. ಹೆಣ್ಣುದೇಹದ ಜೊತೆ ಹೆಣೆದುಕೊಂಡ ಎಷ್ಟೊಂದು ಮಿಥ್ಯೆಗಳು ಅವಳನ್ನು ಇನ್ನಿಲ್ಲದಂತೆ ಕಾಡುತ್ತ ಅವಳಿಗೆ ತನ್ನ ದೇಹವೇ ತನ್ನ ವಿಧಿ ಎಂಬ ಹೇವರಿಕೆಯನ್ನು ಉಂಟುಮಾಡುತ್ತವೆ. ಆದರೆ ನಿಜದಲ್ಲಿ ಹೀಗಿರುವುದಿಲ್ಲ. ಅವಳ ದೇಹಕ್ಕೆ ವಿಶಿಷ್ಟ ವಾಂಛೆಗಳಿವೆ, ಪರಿಮಳವಿದೆ, ಉನ್ಮಾದವಿದೆ. ಅದು ಎಲ್ಲ ಹಂಗುಗಳನ್ನು ಹರಿದುಕೊಂಡದ್ದು. ಆಕಾಶಕ್ಕೇ ರೆಕ್ಕೆ ಮೂಡಿದಂತೆ ಹಾರುವ ಹಕ್ಕಿಗೆ ಇರುವ ತಾದಾತ್ಮ್ಯದಂತೆ, ಹರಿವ ನದಿಯ ಸಹಜ ಉನ್ಮಾದದಂತೆ ಅವಳ್ಲೊಂದು ಚೈತನ್ಯ ಸದಾ ಉಲಿಯುತ್ತಿರುತ್ತದೆ. ಅದಕ್ಕೆ ಭಾಷೆಯಿಲ್ಲ, ಅದು ಅನುಭೂತಿ. ಅದು ಕಾಲ ದೇಶಗಳನ್ನು ಮೀರಿ ಇರುವ ಸಾಧ್ಯತೆ. ಅದನ್ನು ಗಮನಿಸದೇ ಹೋದರೆ ಒಳಗಿನ ಹೆಣ್ಣು ಎಚ್ಚರಗೊಳ್ಳುವುದೇ ಇಲ್ಲ. ಬರೀ ರೂಪಿತ ಹೆಣ್ಣು ಮಾತ್ರ ಉಳಿದುಹೋಗುತ್ತಾಳೆ. ಈ ಕಾದಂಬರಿಯ ಹೆಣ್ಣು ತನ್ನನ್ನೇ ಆಲಿಸಬಲ್ಲವಳು. ತನ್ನದೇ ನೆಲೆಯಿಂದ ಲೋಕವನ್ನು ಹೊಚ್ಚ ಹೊಸದಾಗಿ ಪರಿಭಾವಿಸಬಲ್ಲವಳು. ಆದ್ದರಿಂದ ಇದು ಚಿಟ್ಟಿಯೆಂಬ ಹೆಣ್ಣಿನ ಅನುಭವ ಕಥನ ಮಾತ್ರವಾಗಿ ಉಳಿಯದೇ ಹೊಸ ಲೋಕದರ್ಶನವಾಗಿ ತೆರೆದುಕೊಳ್ಳುತ್ತ ಹೋಗುತ್ತದೆ.

ಚಂದ್ರಿಕಾ ಅವರ ಈ ಕಾದಂಬರಿ ಕನ್ನಡ ಕಥನಲೋಕಕ್ಕೆ ಹೊಚ್ಚಹೊಸ ಸಂವೇದನೆಯನ್ನು ಸೇರ್ಪಡೆಗೊಳಿಸಿದೆ. ಯಾವ ಸಿದ್ಧಾಂತಗಳ ಭಾರವಿಲ್ಲದೇ ಚಿಟ್ಟಿಯ ಮನೋಲೋಕದ ವಿಕಾಸವನ್ನು ಸಾವಧಾನದ ಲಯದಲ್ಲಿ ಏಕಕಾಲಕ್ಕೆ ಅರಿಯುತ್ತ, ಕಟ್ಟತ್ತ ಹೋಗುವ ಬೆರಗು ಇಲ್ಲಿ ಸಂಭವಿಸಿದೆ. ಕಾದಂಬರಿಯಲ್ಲಿ ಮಕ್ಕಳ ಲೋಕವೊಂದು ಅನಾವರಣಗೊಳ್ಳುತ್ತ ಆ ಬೆರಗನ್ನು ಕಾಪಿಟ್ಟುಕೊಂಡಿದೆ. ಆದರೆ ಇದು ನಾವಂದುಕೊಳ್ಳುವ ಮುಗ್ಧಲೋಕವಲ್ಲ. ಇಲ್ಲಿನ ಗ್ರಹಿಕೆಗಳನ್ನು ನಮ್ಮ ಸಿದ್ದಸೂತ್ರಗಳಿಂದ ಅರಿಯಲಾರೆವು. ಆದ್ದರಿಂದಲೇ ಇದು ಸಂಕೀರ್ಣ ಹಾಗೂ ತರ್ಕಾತೀತ. ಲೋಕಾಕಾರವು ನಮ್ಮ ಕಾಣುವಿಕೆಯಲ್ಲಿರುತ್ತದೆಯೇ ವಿನಃ ಅದಕ್ಕೊಂದು ಸ್ಥಿರರೂಪವಿರುವುದಿಲ್ಲ. ಉದಾಹರಣೆಗೆ ಮನುಷ್ಯ ಲೋಕವನ್ನು ನಾವು ಸಂಬಂಧಗಳ ಮೂಲಕ ಗ್ರಹಿಸುತ್ತೇವೆ. ಸಂಬಂಧಗಳನ್ನು ನೈತಿಕ ಅನೈತಿಕವೆಂಬ ದ್ವಂದ್ವ ವೈರುಧ್ಯಗಳ ಮೂಲಕ ಮಾನ್ಯಮಾಡುತ್ತೇವೆ. ಹಾಗೆಯೆ ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಬಂಧ. ಅವೆರಡೂ ಬೇರೆ ಎಂದು ತಿಳಿದಾಗ ದ್ವಂದ್ವಕ್ಕೆ ಬೀಳುತ್ತೇವೆ. ನಾವು ಪ್ರಕೃತಿಯದೇ ಒಂದು ಭಾಗವೆಂದು ತಿಳಿದಾಗ ಏಕೋಭಾವದ ಸ್ಥಿತಿ ತಲುಪುತ್ತೇವೆ. ಆಗ ಸಹಜವಾಗಿ ಗೋಚರವಾಗುವ ಸತ್ಯವೇ ಬೇರೆ. ಬೇಂದ್ರೆ ಗಿಡಗಂಟಿಗಳಾ ಕೊರಳೊಳಗಿಂದ ಹಕ್ಕೀಗಳ ಹಾಡು ಎನ್ನುತ್ತಾರಲ್ಲ ಹಾಗೆ. ಭಿನ್ನಭಾವವಿಲ್ಲದ ಅಭೇದ ಸ್ಥಿತಿಯದು. ಬಾಲ್ಯವು ಈ ದ್ವಂದ್ವಗಳನ್ನು ಅರಿಯಲಾರದ್ದರಿಂದಲೇ ಅಲ್ಲೊಂದು ಮೂಲ ಸ್ಥಿತಿಯಿದೆ. ಅದು ಒಳಗಿನ ಆನಂದವನ್ನು ಕಾಪಿಟ್ಟುಕೊಂಡ ಸ್ಥಿತಿ. ಆದರೆ, ಯಾವಾಗ ನಾವು ದೊಡ್ಡವರಾಗುತ್ತೇವೋ ಆಗ ಅರಿವಿನ ಹಿಂಸೆ ಶುರುವಾಗುತ್ತದೆ. ಯಾವುದು ಸರಿ? ಯಾವುದು ತಪ್ಪು? ಅದಕ್ಕೆ ಒಂದೇ ಉತ್ತರವಿಲ್ಲ. ಆದರೆ ಕೌಟುಂಬಿಕ ಸರಿತನ, ಸಾಮಾಜಿಕ ಸರಿತನ, ರಾಜಕೀಯ ಸರಿತನಗಳ ಜಿಜ್ಞಾಸೆ ಶುರುವಾಗುತ್ತದೆ. ಅದು ಎಳೆಯ ಮನಸ್ಸುಗಳನ್ನು ವಿಹ್ವಲಗೊಳಿಸುತ್ತದೆ. ತಮ್ಮ ವಿರುದ್ದ ತಾವೇ ಸೆಣಸಬೇಕಾದ ಈ ಸೂಕ್ಷ್ಮ ಕಾಲದಲ್ಲಿ ಅವರು ಜಗಮೊಂಡರಾಗಿ ಅರ್ಥವಾಗದ ಒಗಟಾಗಿ ಕಾಣತೊಡಗುತ್ತಾರೆ. ದೊಡ್ಡವರಾಗುವುದೆಂದರೆ ನಮ್ಮದಲ್ಲದ ಹೊರೆಗಳನ್ನು ಹೊತ್ತು ಸಹಿಸುವ ತರಬೇತಿಯಂತಾಗಿ ಕೊನೆಗೊಮ್ಮೆ ಅದು ನಮ್ಮ ಜಾಯಮಾನವೇ ಆಗಿಬಿಡುತ್ತದೆ. ಅದರಲ್ಲೂ ಹೆಣ್ಣೊಬ್ಬಳು ದೊಡ್ಡವಳಾಗುವುದು ಇನ್ನೂ ಸಂಕೀರ್ಣ ಸಂಗತಿ.

ಕಾದಂಬರಿಯ ಆರಂಭದಲಿ ಮುಕ್ತವಾಗಿ ಹರಡಿಕೊಂಡಿದ್ದ ಎಳೆಯ ಹುಡುಗಿಯರ ಕಲರವ ನಿಧಾನಕ್ಕೆ ಕಳವಳಗಳ ಗೂಡಿನಲ್ಲಿ ಅಡಗುತ್ತಹೋಗುತ್ತದೆ. ಅವರ ಕುತೂಹಲಗಳು, ಒಳಗುಟ್ಟುಗಳು, ನಿಧಾನವಾಗಿ ಅವರೊಳಗೆ ಖಾಸಗಿಯಾದ ಭಾವಲೋಕಗಳನ್ನು ಸೃಜಿಸುತ್ತ ಹೋಗುತ್ತವೆ. ಹಬ್ಬ, ಜಾತ್ರೆ, ಶಾಲೆ ಮೊದಲಾದ ಸಂದರ್ಭಗಳು ಅವರನ್ನು ಸಮಾಜದ ಚೌಕಟ್ಟಿಗೊಳಪಡಿಸುತ್ತ ಹೋಗುತ್ತವೆ. ಸುತ್ತಲ ಲೋಕದ ವೈರುಧ್ಯಗಳು ಅವರನ್ನು ದಂಗು ಬಡಿಸುತ್ತ ಅವರ ಒಳಲೋಕದಲ್ಲೊಂದು ಕಂಪನವನ್ನು ಹುಟ್ಟುಹಾಕುತ್ತವೆ. ಬೇರೆಬೇರೆ ಸಾಮಾಜಿಕ ಹಿನ್ನೆಲೆಗಳಿಂದ ಬಂದ ಈ ಗೆಳತಿಯರು ತಮ್ಮ ಭಿನ್ನ ಅನುಭವಲೋಕಗಳ ಮಧ್ಯೆಯೇ ಒಂದಾಗಿದ್ದಾರೆ. ಯಾಕೆಂದರೆ ಈ ದೊಢ್ಡವರಾಗುವ ಸಂಕಟ ಅವರಿಗೆಲ್ಲ ಸಮಾನವಾದುದು. ಅರಳುತ್ತಿರುವ ತಮ್ಮ ದೇಹದ ಬಗೆಗಿನ ಮೋಹ ಮತ್ತು ಭಯ ಕೂಡ ಅವರಿಗೆ ಸಮಾನವಾದುದು. ಪುರುಷನೊಬ್ಬ ಮುಟ್ಟಿದರೆ ಮಕ್ಕಳಾಗಿ ಬಿಡುತ್ತವೆಂಬ ಆತಂಕದಿಂದ ಹಿಡಿದು, ತಾವು ಕಂಡ ಕಾಮ ಪ್ರೇಮಗಳ ಲೋಕವನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂಬ ಸಂದಿಗ್ಧಗಳಲ್ಲೂ ಅವರು ಪಾಲುದಾರರು. ದೊಡ್ಡವರ ಮಡಿಮೈಲಿಗೆಗಳ ಚೌಕಟ್ಟಿಗೆ ಒಗ್ಗದ ಬಂಡಾಯಗಾರ್ತಿಯರು. ಸರೋಜ, ಭಾರತಿ, ತಾರಾ, ನಕ್ಕತ್ತು, ಆರೋಗ್ಯ ಇವರೆಲ್ಲರ ಲೋಕ ಚಿಟ್ಟಿಯ ಮೂಲಕ ಓದುಗರಿಗೆ ತೆರೆದುಕೊಳ್ಳುತ್ತಹೋಗುತ್ತದೆ. ಗ್ರಾಮೀಣ ಸಮಾಜದ ಬದುಕಿನ ಬಹುತ್ವದ ಹಿನ್ನೆಲೆಯಲ್ಲೇ ವಿಕಸಿಸುವ ಹೆಣ್ಣು ಪ್ರಪಂಚವಿದು.

ಲೈಂಗಿಕತೆಗೆ ತೆರೆದುಕೊಳ್ಳುತ್ತ ಹೋದಂತೆ ಹೆಣ್ಣು ಗಂಡು ಎಂಬ ಲಿಂಗೀಯ ವ್ಯಕ್ತಿತ್ವಗಳು ರೂಪುಗೊಳ್ಳುತ್ತ ಹೋಗುತ್ತವೆ. ಮುಟ್ಟಾಗುವುದು ಹೆಣ್ಣಿಗಾಗುವ ಮೊದಲ ಆಘಾತ. ತನ್ನ ದೇಹವೇ ತನಗೆ ಅಪರಿಚಿತವಾದಂತೆ, ಅದೊಂದು ವಿಸ್ಮಯಗಳ ಗೂಡಾಗಿರುವಂತೆ ತೋರತೊಡಗುತ್ತದೆ. ದೇಹದ ಮಾರ್ಪಾಟುಗಳಿಂದ ವಿಚಿತ್ರ ಮುಜುಗರ ಎದುರಿಸುತ್ತಾ, ತಮ್ಮ ದೇಹವನ್ನೇ ಗಮನಿಸುವ ಲೋಕವನ್ನು ಕಂಡು ಕಂಗಾಲಾಗುತ್ತ ಅವರು ದೊಡ್ಡವರಾಗುತ್ತಾರೆ. ಚಿಟ್ಟಿಯ ಈ ಮನೋಲೈಂಗಿಕ ವಿಕಾಸದ ಸೂಕ್ಷ್ಮವಿವರಗಳು ಇಲ್ಲಿವೆ. ಮೊಗ್ಗು ಹೂವಾಗಿ ಅರಳುವಾಗಿನ ಹಿಂಸೆ ಅರಳಿದ ಹೂವಿಗಷ್ಟೇ ಗೊತ್ತಲ್ಲವಾ? ಅದುವರೆಗೂ ಸ್ನೇಹಿತರು, ತುಂಟಾಟ, ಕಾಡುಮೇಡು ಸುತ್ತಾಟಗಳಲ್ಲಿ ಹಾಯಾಗಿದ್ದ ಚಿಟ್ಟಿಗೆ ಈ ಮುಟ್ಟು ಅವಳ ಅಸ್ತಿತ್ವವನ್ನೇ ಕಸಿದುಕೊಂಡ ಅನುಭವವಾಗಿ ಕಾಡುತ್ತದೆ. ಅಂದು ಬೆಳಗಿನಿಂದ ಹೊಟ್ಟೆಯಲ್ಲಾಗುತ್ತಿದ ವಿಚಿತ್ರ ಸಂಕಟವನ್ನು, ಮನಸಿಗಾಗುತ್ತಿದ್ದ ಕಸಿವಿಸಿಯನ್ನು ಅರ್ಥಮಾಡಿಕೊಳ್ಳಲಾಗದೆ ಒದ್ದಾಡುತ್ತಿದ್ದ ಚಿಟ್ಟಿಗೆ ಕೊನೆಗೂ ಅದು ಸಂಭವಿಸಿಯೇ ಬಿಡುತ್ತದೆ. ಶಾಲೆಯಲ್ಲಿ ಎಲ್ಲರೆದುರು ಬಯಲಾದ ಅವಮಾನ ದೈಹಿಕ ನೋವಿನೊಂದಿಗೆ ಮೇಳೈಸಿ ಅವಳನ್ನು ಕಂಗಾಲಾಗಿಸುತ್ತದೆ. ತಾನು ದೊಡ್ಡವಳಾಗಿದ್ದು ಇವಳಿಗೆ ಹೇಗೆ ಗೊತ್ತಾಯಿತು? ತಾನೆಲ್ಲಿ ದೊಡ್ಡವಳಾದೆ? ಅಷ್ಟು ಹೊತ್ತಿಗೆ ಮರದ ಬೊಡ್ಡೆಗೆ ಆತುಕೊಂಡು ಮಾಂಸದ ಮುದ್ದೆಯಂತಿದ್ದ ಚಿಟ್ಟೆಯ ಲಾರ್ವಾ ಕಂಬಳಿಹುಳುವಾಗಿ, ಕಂಬಳಿಹುಳು ಹೆಗಲಿಗೆ ರೆಕ್ಕೆಗಳನ್ನು ಹಾಕಿಕೊಂಡು ಹಾರಿಹೋಗಿತ್ತು. ಈ ರೆಕ್ಕೆಗಳು ಬಂದದ್ದು ಎಲ್ಲಿಂದ? ಇಂಥ ವಿವರಗಳಲ್ಲಿ ದೇಹದ ವಿಸ್ಮಯಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಏಕಾಏಕಿ ತಾನು ಮುಟ್ಟಿಸಿಕೊಳ್ಳದವಳಾಗಿ ಬಿಟ್ಟ ನೋವು, ಅವಮಾನಗಳು ಅವಳನ್ನು ಕಾಡುತ್ತಲೇ ಇರುತ್ತವೆ. ಈ ಪ್ರತ್ಯೇಕಗೊಂಡ ಪ್ರಜ್ಞೆ ಅವಳಲ್ಲಿ ಹಲವು ಪ್ರಶ್ನೆಗಳಾಗಿ ಬೆಳೆಯುತ್ತ ಹೋಗುತ್ತದೆ. ನೀನೂ ತೂಬು ಒಡಕೊಂಡ್ಯಾ ಎಂದು ತುಂಟತನದಿಂದ ಪ್ರಶ್ನಿಸಬಲ್ಲ ಗೆಳತಿ ನಕ್ಕತ್ತುವಿನ ಸಹಜತೆ ಚಿಟ್ಟಿಗೆ ಸಾಧ್ಯವಾಗುವುದಿಲ್ಲ. ದೇಹವನ್ನು ಸ್ವೀಕರಿಸುವುದರಲ್ಲಿ ಬಹುಶಃ ಪ್ರತಿ ಹೆಣ್ಣೂ ಭಿನ್ನವೇ. ಅದರಲ್ಲೂ ಬ್ರಾಹ್ಮಣ ಪರಿಸರದಲ್ಲಿ ಬೆಳೆಯುತ್ತಿದ್ದ ಚಿಟ್ಟಿಗೆ ಮಡಿಮೈಲಿಗೆಗಳ ಲೋಕ ಬಾಧಿಸುವುದು ಇನ್ನೂ ಕ್ರೂರವಾಗಿ. ಹೇಗೆಂದರೆ ಹಾಗೆ ಓಡಾಡಬೇಡ, ಯಾರ ಮನೆಗೂ ಹೋಗಬೇಡ ಯಾರ ಜೊತೆಗೂ ಮಾತಾಡಬೇಡವೆಂಬ ನಿರ್ಬಂಧಗಳು ಒಂದೆಡೆಯಾದರೆ, ಚಾಪೆ, ತಟ್ಟೆ ಲೋಟಗಳೊಂದಿಗೆ ಮನೆಯಲ್ಲೇ ಅಸ್ಪ್ರಶ್ಯಳಾಗಿ ಮೂಲೆ ಸೇರುವ ಅವಮಾನ ಇನ್ನೊ ಒಂದು ಕಡೆ. ಇದಕ್ಕೆಲ್ಲ ತನ್ನ ಅರಳುತ್ತಿರುವ ದೇಹವೇ ಕಾರಣವೆಂಬ ಕಸಿವಿಸಿ. ಅಮ್ಮ ಅವಳ ಫ್ರಾಕುಗಳನ್ನೆಲ್ಲ ಎತ್ತಿಟ್ಟರೆ, ಅಜ್ಜಿ ಲಂಗ ದಾವಣಿ ಧರಿಸಲು ಶಿಫಾರಸು ಮಾಡುತ್ತಾಳೆ. ತನ್ನ ಎದೆಯಕಡೆ ಕಣ್ಣುಹಾಯಿಸುವ ಗಂಡಸರ ನೋಟಕ್ಕೆ ಕುಗ್ಗುವ ಚಿಟ್ಟಿಯಲ್ಲಿ ದೇಹದ ಕುರಿತು ಸಾವಿರ ಪ್ರಶ್ನೆಗಳು. ಕಳೆದುಕೊಂಡ ಬಾಲ್ಯದ ಸ್ವಚ್ಛಂದತೆಯನ್ನು ನೆನೆದು ದಿಗಿಲು. ಹೆಣ್ಣಾಗಿ ರೂಪಿಸುವ ಸಮಾಜದ ಎಲ್ಲ ಸಂಸ್ಥೆಗಳು ಕೈಜೋಡಿಸಿದಾಗ ಬಿಡುಗಡೆಗಾಗಿ ಎತ್ತಿದ ಧ್ವನಿ ಹಾಗೇ ಬತ್ತಿಹೋಗದೇ ಇನ್ನೇನು?

ಹಾಗಂತ ಈ ಕಾದಂಬರಿ ಗೋಳುಗಳ ನಿರೂಪಣೆಯಲ್ಲ. ಇದು ಹೆಣ್ತನದ ಸಂಭ್ರಮಗಳನ್ನು ನಿರಾಕರಿಸುವುದಿಲ್ಲ. ಇಲ್ಲಿ ಪ್ರೇಮದ ನವಿರಾದ ಪುಳಕಗಳಿವೆ.ಆ ಪುಳಕಗಳನ್ನೆಬ್ಬಿಸುವುದೂ ಈ ಹೆಣ್ಣು ದೇಹವೇ ಅಲ್ಲವೇ? ಚಿಟ್ಟಿಯೂ ಇಂಥ ಪ್ರಥಮ ಪ್ರೇಮದ ಪುಳಕಕ್ಕೆ ತುತ್ತಾದವಳೇ. ಗಂಡೆಂಬ ಭಿನ್ನ ಜೀವದ ಕನ್ನಡಿಯಲ್ಲಿ ತನ್ನನ್ನು ಕಂಡಾಗಲೇ ಹೆಣ್ಣಿಗೆ ತನ್ನ ಚೆಲುವಿನ ಕುರಿತು ಹೆಮ್ಮೆ. ಅವನ ನೋಟ, ಸ್ಪರ್ಷಗಳ ಮೂಲಕವೇ ಅವಳು ಹೆಣ್ಣಾಗುವುದು. ಇದು ಶುದ್ಧ ಪ್ರಾಕೃತಿಕ ಸಂಬಂಧ. ಇಲ್ಲಿ ಚಿಟ್ಟಿಯೂ ಅಂಥ ಪ್ರಕೃತಿಯೇ. ಆದರೆ ಗಂಡು ಹೆಣ್ಣಿನ ಸಂಬಂಧ ಸಮಸ್ಯಾತ್ಮಕವಾಗುವುದಕ್ಕೂ, ಸಂಘರ್ಷಮಯವಾಗುವುದಕ್ಕೆ ಹೊರಗಿನ ಕಾರಣಗಳಿವೆ. ಪ್ರಾಕೃತಿಕ ಸಂಬಂಧವು ಅಧಿಕಾರ ಸಂಬಂಧವಾಗಿ ಬದಲಾದಾಗಲೇ ಹೆಣ್ತನದ ಸ್ವಚ್ಛಂದ ಝರಿ ಬತ್ತಿ ಅವಳು ಮರಳುಗಾಡಾಗುವುದು. ಈ ಎಲ್ಲ ಹುಡುಗಿಯರೂ ತಾವು ಮದುವೆಯಾಗಲೆಂದೇ ರೂಪುಗೊಂಡವರಂತೆ ಒಬ್ಬೊಬ್ಬರೇ ಮದುವೆಯಾಗಿಹೋಗುತ್ತಾರೆ. ಎಂದಾದರೂ ಆಗಲೇಬೇಕಲ್ಲವೇ? ಎಂಬ ನಿರ್ಬಂಧಕ್ಕೆ ಒಗ್ಗಿಹೋದ ಅವರ ಮನಸ್ಸು ಅದರಾಚೆ ಯೋಚಿಸಲು ಶಕ್ತವಲ್ಲ. ಆದರೆ, ಗಂಡಿನವರು ನೋಡಲು ಬಂದಾಗ ತನಗೆ ಈಗಲೇ ಮದುವೆ ಬೇಡ ತಾನು ಓದಬೇಕೆಂದು ದನಿಯೆತ್ತುವ ಮೂಲಕ ಚಿಟ್ಟಿ ತನ್ನ ಸ್ವರವನ್ನು ಉಳಿಸಿಕೊಳ್ಳುತ್ತಾಳೆ. ಅವಳ ಭಾವವಿಕಾಸದ ಜಾಡು ಬೇರೆಯೇ ದಿಕ್ಕು ಪಡೆದುಕೊಳ್ಳುತ್ತ ತಾನು ಬೇರೇಯೇ ಎಂಬ ಎಚ್ಚರ ಅವಳ ಆತ್ಮ ಘನತೆಯ ಹಂಬಲವನ್ನು ಕಾಪಿಟ್ಟುಕೊಳ್ಳುವಂತೆ ಮಾಡುತ್ತದೆ. ತಲೆಯ ಮೇಲೆ ಕಿರೀಟವಿರಿಸಿಕೊಂಡ ಸಾಲಂಕೃತ ಲಕ್ಷ್ಮಿಯೂ ಗಂಡನ ಪಾದ ಒತ್ತುವುದರಲ್ಲೇ ಸಾರ್ಥಕ್ಯ ಪಡೆಯಬೇಕಲ್ಲವೇ? ಇಂಥ ಕೆಲಸಕ್ಕಾಗಿ ತಾನು ಮದುವೆಯಾಗಲಾರೆ ಎಂದುಕೊಳ್ಳುತ್ತಾಳೆ ಚಿಟ್ಟಿ. ಅವಳು ಬದುಕುತ್ತಿರುವ ಸಾಂಪ್ರದಾಯಿಕ ಪರಿಸರದಲ್ಲಿ ಮದುವೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ. ಹಾಗೆ ತಪ್ಪಿಸಿಕೊಂಡು ಹೋಗುವುದೆಲ್ಲಿಗೆ ಅಂತಲೂ ಅವಳಿಗೆ ಗೊತ್ತಿಲ್ಲ. ಇಂಥ ವಿಪ್ಲವಗಳಲ್ಲಿ ಮುಳುಗಿದ ಅವಳ ಮನಸ್ಸು ಕನಸಿನಲ್ಲೂ ನದಿ ದಾಟಲಾಗದೇ ಒದ್ದಾಡುವ ತನ್ನ ಅಸಹಾಯಕತೆಗೆ ಬೆದರುತ್ತದೆ. ಹೇಗೆ ಈ ನದಿಯನ್ನು ದಾಟುವುದು? ಇದು ಸಾರ್ವಕಾಲಿಕ ಪ್ರಶ್ನೆ.

ಮದುವೆಯ ವಿಸಂಗತಿಗಳನ್ನೂ, ದಾಂಪತ್ಯದೊಳಗಿನ ಹಿಂಸೆಯ ನೆಲೆಗಳನ್ನೂ, ಸಭ್ಯತೆಯ ಸೋಗಿನಲ್ಲಿ ಮೋಸವನ್ನೂ ತನ್ನ ಸೂಕ್ಷ್ಮ ಕಣ್ಣುಗಳಲ್ಲಿ ಕಾಣುತ್ತ ಹೋಗುವ ಚಿಟ್ಟಿ ತೀರ್ಮಾನಗಳನ್ನು ಹೇಳದೆ ಸುಮ್ಮನೆ ತನ್ನ ಭಾವಕೋಶದಲ್ಲಿ ಎಲ್ಲವನ್ನೂ ತುಂಬಿಕೊಳ್ಳತ್ತಾಳೆ. ಹೀಗೆ ಚಿಟ್ಟಿ ಬೇಗ ದೊಡ್ಡವಳಾಗುವಲ್ಲಿ ಸೊ ಕಾಲ್ಡ್ ದೊಡ್ಡವರ ಪಾತ್ರವೂ ಇದೆ. ಹೆಣ್ಣು ದೇಹದ ಜೊತೆಗೆ ಪಾವಿತ್ರ್ಯ, ಪಾತಿವ್ರತ್ಯ ಗಳನ್ನು ತಳಕು ಹಾಕುವ ಲೋಕ, ತೆರೆಮರೆಯಲ್ಲಿ ಅದನ್ನು ಉಲ್ಲಂಘಿಸುತ್ತಲೇ ಬರುತ್ತದೆ. ಅಂಥ ಉಪಕಥನಗಳು ಕಾದಂಬರಿಗೆ ಬಹುಸ್ವರಗಳನ್ನು ನೀಡಿವೆ. ಸದಾ ನೈತಿಕತೆಯನ್ನು ಉಪದೇಶಿಸುವ ಪದ್ದಕ್ಕ ಎಂಬ ಮಧ್ಯವಯಸ್ಕ ಬ್ರಾಹ್ಮಣ ಮುತ್ತೈದೆ ಗೌಡರ ಹುಡುಗ ಶಿವೂನ ಜೊತೆ ಪುಟ್ಟ ಚಿಟ್ಟಿಗೆ ಅರ್ಥವಾಗದ ಭಂಗಿಯಲ್ಲಿ ಪೊದೆಯ ಮರೆಯಲ್ಲಿ ಕಂಡಿರುತ್ತಾಳೆ. ಸ್ವತಃ ಚಿಟ್ಟಿಯ ತಂದೆಗೇ ಎರಡು ಸಂಸಾರವಿರುವುದು ಅವಳಮ್ಮನ ನಿತ್ಯ ಕೊರಗಿಗೆ ಕಾರಣವಾಗಿರುತ್ತದೆ. ಗೆಳತಿ ಭಾರತಿಯ ಅತ್ತಿಗೆ ಸುಮ ತನ್ನ ಮೈದುನನೊಂದಿಗೆ ಇರಿಸಿಕೊಂಡ ಸಂಬಂಧ ಜಗಜ್ಜಾಹೀರಾದಾಗಲೂ ಸಾಕ್ಷಿಪ್ರಜ್ಞೆಯಂತೆ ಚಿಟ್ಟಿ ಅಲ್ಲಿರುತ್ತಾಳೆ. ಚಿಟ್ಟಿಯ ಗೆಳತಿ ತಾರಾಳ ಪ್ರೇಮ ಪ್ರಸಂಗವಂತೂ ದುರಂತದಲ್ಲಿ ಕೊನೆಯಾಗಿ ಬೆಚ್ಚಿ ಬೀಳಿಸುತ್ತದೆ. ದೇಹಾನುಭೂತಿಗೆಳೆಸುವ ಹರೆಯದ ಮಾಂತ್ರಿಕತೆ ತಾರಾ ಹಾಗೂ ಹುಂಜಾನರ ಜೀವವನ್ನೇ ಬಲಿಪಡೆಯುತ್ತದೆ. ಮುಸ್ಲಿಂ ಹುಡುಗನ ಸಂಗದಿಂದ ಮಲಿನಗೊಂಡದ್ದಕ್ಕಾಗಿ ಕೇಶವ ತನ್ನ ಮಗಳನ್ನೇ ಕೊಚ್ಚಿಹಾಕುತ್ತಾನೆ. ಹುಂಜಾನನ ದೇಹ ಮರದಲ್ಲಿ ನೇತಾಡುತ್ತದೆ. ಹೆಣ್ಣಿನ ದೇಹ ಮೈಲಿಗೆಯಾಗುವುದೆಂದರೇನು? ಎಂಬ ಪ್ರಶ್ನೆ ಚಿಟ್ಟಿಯನ್ನು ಕಾಡುತ್ತದೆ. ಗಂಡಸರಿಗೆ ಯಾವ ನಿಯಮವೂ ಇಲ್ಲ, ಯಾವ ಮೈಲಿಗೆಯೂ ಇಲ್ಲ. ಇರೋದೆಲ್ಲ ಹೆಂಗಸಿಗೆ ಮಾತ್ರ ಎಂಬ ಅವಳಮ್ಮನ ಉತ್ತರದಲ್ಲಿ ತನ್ನ ಖಾಸಗಿ ಬದುಕಿನಲ್ಲಾದ ಮೋಸದ ಕುರಿತು ಪ್ರತಿರೋಧದ ಕಾವಿದೆ. ಕಾಮನಬಿಲ್ಲುಗಳು ಕಳಚಿಬಿದ್ದ ಸದ್ದುಗಳು ಕಣ್ಣನ್ನು ಒದ್ದೆಮಾಡುತ್ತವೆ. ಧುಮ್ಮಿಕ್ಕುವ ದೇಹದ ರಾಗಗಳನ್ನು ತಡೆವ ವ್ಯವಸ್ಥೆಯನ್ನು ಮಾಡಿದವರ್‍ಯಾರು? ಅವರಿಗೇಕಿಲ್ಲ ಈ ಬೇಲಿ? ಪ್ರಶ್ನೆಗಳು ಸಿಕ್ಕುಸಿಕ್ಕಾಗುತ್ತವೆ.

ಇದನ್ನೆಲ್ಲ ಮೀರುವ ದಿಟ್ಟ ಉದಾಹರಣೆಯೊಂದು ಚಿಟ್ಟಿಯನ್ನು ಬೆರಗುಗೊಳಿಸುತ್ತದೆ. ವ್ಯವಸ್ಥೆಯೊಳಗಿದ್ದುಕೊಂಡೇ ವ್ಯವಸ್ಥೆಯನ್ನು ಮೀರುವ ಶಾರದಮ್ಮ ಈ ಬೆರಗು ಹಾಗು ಮೆಚ್ಚುಗೆಗೆ ಕಾರಣ. ಬದುಕಿಡೀ ಜವಾಬ್ದಾರಿ ನಿರ್ವಹಿಸದೇ ಓಡಿಹೋದ ಅವಳ ಗಂಡ ವೃದ್ಧಾಪ್ಯದಲ್ಲಿ ವಾಪಸಾಗುತ್ತಾನೆ. ವಾರದಲ್ಲೇ ಅವನ ಸಾವೂ ಸಂಭವಿಸುತ್ತದೆ. ಆದರೆ ಬಳೆ, ತಾಳಿಗಳನ್ನು ತೆಗೆದು ಕೊಡಲು, ಕುಂಕುಮವಳಿಸಲು ಅವಳು ಖಡಾಖಂಡಿತವಾಗಿ ನಿರಾಕರಿಸುತ್ತಾಳೆ. ತನ್ನ ಬದುಕಲ್ಲಿ ತನ್ನ ನೆನಪುಗಳಲ್ಲಿ ಗಂಡನ ಪಾತ್ರವೇ ಇಲ್ಲದಿರುವಾಗ ಈ ಕ್ರಿಯೆಗಳೆಲ್ಲ ಅರ್ಥಹೀನವಾಗಿ ಅವಳಿಗೆ ಕಾಣುತ್ತವೆ. ನಾಕು ಮಕ್ಕಳನ್ನುಕೊಟ್ಟಿರುವುದಕ್ಕಾದರೂ ಗೌರವ ಕೊಡು ಎಂದಾಗ ಮಕ್ಕಳಿಗೇನು? ಕೂಡಿದ್ರೆ ನಾಯಿಗೂ ಆಗುತ್ತೆ ಎನ್ನುವ ಅವಳು ಗಂಡನ ಅಸ್ತಿತ್ವವನ್ನೇ ನಿರಾಕರಿಸುತ್ತಳೆ. ಶಾರದಮ್ಮನ ಈ ನಡೆ ಚಿಟ್ಟಿಯ ತಾಯಿಗೂ ಮೆಚ್ಚುಗೆಯಾದರೂ ಅವಳು ಹಾಗೆ ಹೇಳಲಾರಳು. ಸಮಾಜ ಎಂಬ ಗೋಡೆ ಅಂಥ ಮಾತುಗಳನ್ನು ಹೊರಬರದಂತೆ ಮಾಡುತ್ತದೆ. ಚಿಟ್ಟಿಯ ಮನದಲ್ಲೂ ಇಂಥದೇ ಮಾತುಗಳಿದ್ದವು. ಆದರೆ ಅದನ್ನು ಅಭಿವ್ಯಕ್ತಿಸಲು ಭಾಷೆಯೇ ಇಲ್ಲ!. ಚಿಕ್ಕವರ ಬಾಯಲ್ಲಿ ದೊಡ್ಢ ಮಾತುಗಳ್ನು ಯಾರೂ ಮಾನ್ಯ ಮಾಡುವುದಿಲ್ಲ. ಆದರೆ ತಾಯಿ ಹಾಗೂ ಮಗಳ ನಡುವೆ ಮಾತುಗಳ ನಡುವಿನ ಮೌನದಲ್ಲಿ ಎಲ್ಲವೂ ವಿನಿಮಯವಾಗುತ್ತವೆ. ಇದೇ ಸ್ತ್ರೀ ಸಮಯ. ಮೌನದ ಇಂಥ ಅನೇಕ ತಾಣಗಳು ಕಾದಂಬರಿಯನ್ನು ಗಹನವಾಗಿಸಿವೆ.

ಇದೆಲ್ಲದರ ನಡುವೆಯೂ ತನ್ನದೇ ಖಾಸಗಿ ಸ್ಥಳವೊಂದನ್ನು ಪ್ರಜ್ಞೆಯ ತಳದಲ್ಲಿ ಚಿಟ್ಟಿ ಉಳಿಸಿಕೊಳ್ಳತ್ತಾಳೆ. ತನ್ನ ಒಳಗಿನ ಖುಷಿಯನ್ನು ಅರಳಲು ಬಿಡುತ್ತಾಳೆ. ಮನುಷ್ಯನೊಳಗೊಂದು ಮಾಂತ್ರಿಕ ಶಕ್ತಿಯಿದೆ. ಲೌಕಕದ ನಡುವೆಯೇ ಅಲೌಕಿಕ ಕ್ಷಣಗಳನ್ನು ಸೃಜಿಸಿಕೊಳ್ಳುವ ಶಕ್ತಿಯದು. ಅದು ಚಿಟ್ಟಿಯ ಕತೆ ಹೇಳುವ ಕಲ್ಪನಾ ವಿಲಾಸದಲ್ಲಿದೆ. ಪ್ರಕೃತಿಯೊಂದಿಗೆ ತಾದಾತ್ಮ್ಯಗೊಳ್ಳುವ ಭಾವತೀವ್ರತೆಯಲ್ಲಿದೆ. ಸೈಕಲ್ ಹೊಡೆಯುವಾಗ ಗಾಳಿಯಲ್ಲಿ ತೇಲಿಕೊಂಡು ಹೋಗುವ ಸುಖ ಅನುಭವಿಸುವ ಅವಳ ಉನ್ಮಾದಕ್ಕೆ ಬ್ರೇಕ್ ಇಲ್ಲ!. ಚಿಟ್ಟಿ ಹರಿಯುವ ನದಿಯಂಥವಳು. ಈ ಎಲ್ಲ ವ್ಯವಸ್ಥೆಯ ಚೌಕಟ್ಟುಗಳಾಚೆ ತನ್ನ ಅಸ್ಮಿತೆಯ ದರ್ಶನ ಅವಳಿಗಾಗುತ್ತದೆ. ಹೆಣ್ಣು ನದಿಯ ಹಾಗೇ ಚಿಟ್ಟಿ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಇನ್ನೆಲ್ಲೋ ಹೋಗಿ ಸೇರಬೇಕು. ಎಲ್ಲ ಚಿತ್ರಗಳನ್ನು ಎದೆಯಲ್ಲಿ ತುಂಬಿ ಕೊಳ್ಳೋದಷ್ಟೇ ನಮಗಿರೋದು ಎಳವೆಯಲ್ಲಿ ಕೇಳಿದ ಅಮ್ಮನ ಮಾತುಗಳು ಇನ್ನೆಂದೋ ಚಿಟ್ಟಿಯ ಆಳಕ್ಕಿ ಇಳಿಯುತ್ತವೆ. ಇಂಥ ಚಿಟ್ಟಿಯೂ ಮದುವೆಯಾಗಿ ಅಚ್ಚುಕಟ್ಟಾಗಿ ಸಂಸಾರ ಮಾಡುತ್ತಾಳೆ. ಚಿಟ್ಟಿಯೆಂಬ ತನ್ನ ಸಹಜ ಅಸ್ಮಿತೆಯನ್ನು ಅಡಗಿಸಿಟ್ಟು!. ಕಾದಂಬರಿಯ ಕೊನೆಯಲ್ಲಿ ದಿಟ್ಟ ಚಿಟ್ಟಿಯನ್ನು ಹೀಗೆ ಒಪ್ಪಿಕೊಳ್ಳಲು ಯಾಕೋ ಮನಸ್ಸು ಕೊಸರಾಡುತ್ತದೆ. ಆದರೆ ಸತ್ಯ ಇದೇ ಅಲ್ಲವೆ? ತನ್ನದಲ್ಲದ ಗುರುತುಗಳಲ್ಲಿ ಬದುಕುತ್ತಿರುವ ಚಿಟ್ಟಿ ಅಲಿಯಾಸ್ ಸಿರೀಷಳನ್ನು ಅರ್ಥ ಮಾಡಿಕೊಳ್ಳಲು ಕಾದಂಬರಿಯನ್ನೊಮ್ಮೆ ಓದಬೇಕು. ಅರ್ಥದ ಹಂಗು ಬೇಡವೆನಿಸಿದರೆ ಸುಮ್ಮನೇ ಹರಿವ ಅವಳ ಅರಿವಿನ ಜೊತೆ ನಾವೂ ಹರಿಯಬೇಕು.

*

ಅಂಕಣದದ ಮೊದಲ ಬರೆಹ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

MORE NEWS

ಐವತ್ತು ವರ್ಷಗಳ ಕಥನ ಚರಿತ್ರೆಯನ್ನು ಕಟ್ಟಿಕೊಡುವ ‘ಸ್ವಾತಂತ್ರ್ಯೋತ್ತರ ಸಣ್ಣ ಕಥೆಗಳು’

15-04-2025 ಬೆಂಗಳೂರು

"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...

ಮತ್ತೆ ಮತ್ತೆ ಕಾಡುವ ಹಳೇ ಬಜಾರಿನ ಯಡ್ರಾಮಿ ಸಂತೆ

10-04-2025 ಬೆಂಗಳೂರು

"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು-ಮುಂದುವರೆದುದು

06-04-2025 ಬೆಂಗಳೂರು

"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...