ಹಂಪಿ ವಿವಿಯಿಂದ ಸಾಹಿತಿ ಕುಂ.ವೀ ಸೇರಿದಂತೆ ಮೂವರಿಗೆ ನಾಡೋಜ ಪ್ರಶಸ್ತಿ ಘೋಷಣೆ

Date: 02-04-2025

Location: ವಿಜಯನಗರ


ವಿಜಯನಗರ: ಹಂಪಿ ಕನ್ನಡ ವಿವಿಯು ಮೂವರು ಸಾಧಕರಿಗೆ ನಾಡೋಜ ಗೌರವ ಪದವಿಯನ್ನು ಘೋಷಿಸಿದೆ.

ಪ್ರಶಸ್ತಿಗೆ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ್, ಸಾಹಿತಿ ಕುಂ ವೀರಭದ್ರಪ್ಪ ಹಾಗೂ ಹಿಂದೂಸ್ತಾನಿ ಗಾಯಕ ಪಂಡಿತ್‌ ಎಂ ವೆಂಕಟೇಶ್‌ ಕುಮಾರ್‌ ಅವರು ಭಾಜನರಾಗಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯವು ತನ್ನ 33ನೇ ನುಡಿಹಬ್ಬವನ್ನು ಏಪ್ರಿಲ್‌ 04ರಂದು ಆಚರಿಸಲಿದ್ದು, ಈ ಸುವರ್ಣ ಘಳಿಗೆಯಲ್ಲಿ ನಾಡೋಜ ಪ್ರಶಸ್ತಿಯನ್ನು ಗೌರವ ಪುರಸ್ಕೃತರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ತಿಳಿಸಿದ್ದಾರೆ.

ನಾಡೋಜ ಗೌರವ ಪುರಸ್ಕೃತ ಕುಂ. ವೀರಭದ್ರಪ್ಪನವರ ಹಿನ್ನೆಲೆ: ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು.

ಶಿವರಾಜ್ ಕುಮಾರ್ ಅಭಿನಯದ ’ಮನ ಮೆಚ್ಚಿದ ಹುಡುಗಿ’ ಅವರ ಕಾದಂಬರಿ ’ಬೇಟೆ’ ಆಧರಿಸಿದ ಚಿತ್ರ. ಅವರ ’ಬೇಲಿಯ ಹೂಗಳು’ ಕಾದಂಬರಿಯನ್ನು ಆಧರಿಸಿ ಬಂದದ್ದು ’ದೊರೆ’ ಸಿನಿಮಾ. ‘ಕೊಟ್ರೇಶಿ ಕನಸು’, ‘ಕೆಂಡದ ಮಳೆ’ ಅವರ ಕತೆಯಾರಿತ ಮತ್ತೆರಡು ಪ್ರಮುಖ ಚಿತ್ರಗಳು. ಅವರ ಮತ್ತೊಂದು ಮಹತ್ವದ ಕೃತಿಯಾದ ‘ಕೂರ್ಮಾವತಾರ’ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ.

ಆಂಧ್ರದ ಹಿರೇಹಳ್ಳದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದ ಅವರು ಸೃಜನಶೀಲ ಸಾಹಿತ್ಯದಿಂದ ಸೃಜನೇತರ ಸಾಹಿತ್ಯದತ್ತಲೂ ಹೊರಳಿಕೊಂಡ ಕುಂ.ವೀ. ಚಾಪ್ಲಿನ್ ಕುರಿತು ಮಹತ್ವದ ಕೃತಿಯೊಂದನ್ನು ಬರೆದರು. ಶಾಮಣ್ಣ, ಯಾಪಿಲ್ಲು ಮತ್ತು ಅರಮನೆ ಕಾದಂಬರಿಗಳನ್ನು ಬರೆದರು. ಅರಮನೆ ಕೃತಿಗೆ 2007ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

‘ಕಪ್ಪು’, ‘ಬೇಲಿ ಮತ್ತು ಹೊಲ’, ‘ಆಸ್ತಿ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’, ‘ಯಾಪಿಲ್ಲು’, ‘ಶ್ಯಾಮಣ್ಣ’, ‘ಕೆಂಡದ ಮಳೆ’, ‘ಬೇಟೆ’, ‘ಪಕ್ಷಿಗಳು’, ‘ಪ್ರತಿಧ್ವನಿ’, ‘ದ್ವಾವಲಾಪುರ’, ‘ಹನುಮ’, ‘ಅರಮನೆ’, ‘ಸೋಲೋ’, ‘ಬೇಲಿಯ ಹೂಗಳು’, ‘ಅರೊಹಣ’ ಕಾದಂಬರಿಗಳು.

‘ಚಾಪ್ಲಿನ್’, ‘ರಾಹುಲ ಸಾಂಕೃತ್ಯಾಯನ’, ‘ಗಾಂದೀ ಕ್ಲಾಸ್’ ವ್ಯಕ್ತಿ ಚಿತ್ರಣಗಳು. ತೆಲುಗು ಕಥೆಗಳು ಅನುವಾದಿತ ಕೃತಿ. ‘ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ’ ಅವರ ವಿಮರ್ಶಾತ್ಮಕ ಕೃತಿ. ‘ಕಥೆಗಳು: 1989’ ಅವರ ಸಂಪಾದನೆಯಲ್ಲಿ ಮೂಡಿ ಬಂತು.

ಕುಂ. ವೀರಭದ್ರಪ್ಪನವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೇ ಅಲ್ಲದೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿದರೆ ಕನ್ನಡ ಸಾಹಿತ್ಯ ಪರಿಷತ್ತು ನೃಪತುಂಗ ಪ್ರಶಸ್ತಿಯೊಂದಿಗೆ ಗೌರವಿಸಿದೆ.

ಕುಂ.ವೀರಭದ್ರಪ್ಪ ಅವರ ಪೂರ್ಣ ಮಾಹಿತಿಯನ್ನು ಓದಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

ನಾಡೋಜ ಗೌರವ ಪುರಸ್ಕೃತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಹಿನ್ನೆಲೆ: ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ನವರಾದ ಶಿವರಾಜ ವಿ. ಪಾಟೀಲ ಅವರು ಜನಿಸಿದ್ದು 1940 ರಲ್ಲಿ. ತಂದೆ ವಿರುಪಣ್ಣ ಪಾಟೀಲರು, ತಾಯಿ ಮಲ್ಲಮ್ಮನವರು. ಪ್ರಾಥಮಿಕ ಶಿಕ್ಷಣ ಹುಟ್ಟೂರಾದ ಮಲದಕಲ್ ನಲ್ಲಿ, ಮಾಧ್ಯಮಿಕ ಶಿಕ್ಷಣ ರಾಯಚೂರಿನ ಹಮ್ ದರ್ದ್ ಪ್ರೌಢಶಾಲೆಯಲ್ಲಿ, ಬಿ.ಎಸ್,ಸಿ ಪದವಿಯನ್ನು ಗುಲಬರ್ಗಾದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಗುಲಬರ್ಗಾದ ಸೇಠ್ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುತ್ತಾರೆ. ಕೃತಿಗಳು: ಮುಂಜಾವಿಗೊಂದು ನುಡಿಕಿರಣ ,

ಶಿವರಾಜ ವಿ. ಪಾಟೀಲ ಅವರ ಲೇಖಕರ ಪರಿಚಯವನ್ನು ಓದಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ

MORE NEWS

ಕನ್ನಡ ಪುಸ್ತಕ ಪ್ರಾಧಿಕಾರದ 2022, 2023 ಹಾಗೂ 2024ನೇ ಸಾಲಿನ ಪ್ರಶಸ್ತಿ ಪ್ರಕಟ

09-04-2025 ಬೆಂಗಳೂರು

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2022, 2023 ಮತ್ತು 2024ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸ...

ಮಕ್ಕಳಿಗಾಗಿ ಕನ್ನಡ ಕಾವ್ಯ ಕಸ್ತೂರಿ ಮತ್ತು ರಂಗ-ಸಂಸ್ಕೃತಿ ಶಿಬಿರ

09-04-2025 ಧಾರವಾಡ

ಧಾರವಾಡ: ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಧಾರವಾಡ ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಧಾರವಾಡ ಕುರ್ತಕೋಟಿ ...

2025 Booker prize; ಕಿರುಪಟ್ಟಿಯಲ್ಲಿ ಬಾನು ಮುಷ್ತಾಕ್‌ ಅವರ ಅನುವಾದಿತ 'ಹಾರ್ಟ್‌ ಲ್ಯಾಂಪ್‌' ಕೃತಿ

08-04-2025 ಬೆಂಗಳೂರು

ಲಂಡನ್: ಪ್ರತಿಷ್ಠಿತ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯ ಕಿರುಪಟ್ಟಿ ಪ್ರಕಟವಾಗಿದ್ದು, ಕನ್ನಡದ ಸಾಹಿತಿ ಬಾನು ಮುಸ್ತಾಕ್...