ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ


“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿರೂಪಣೆಯನ್ನು ಮಾಲಿನಿ ಗೋಯಲ್ ಮತ್ತು ಪ್ರಶಾಂತ್ ಪ್ರಕಾಶ್ ಅವರು ಹೆಣೆದಿದ್ದಾರೆ,” ಎನ್ನುತ್ತಾರೆ ಕಿರಣ್ ಮಜುಂದಾರ್ ಷಾ ಅವರು ಪ್ರತಿಭಾ ನಂದಕುಮಾರ್‌ ಅನುವಾದಿಸಿರುವ “ಅನ್‌ಬಾಕ್ಸಿಂಗ್‌ ಬೆಂಗಳೂರು” ಕೃತಿಗೆ ಬರೆದ ಮುನ್ನುಡಿ.

ನಿರಂತರ ವಿಕಸನಗೊಳ್ಳುತ್ತಿರುವ ನಗರದ ಭೂದೃಶ್ಯಗಳ ಹಾಸುಹೊಕ್ಕುಗಳಲ್ಲಿ, ಕೆಲವು ನಗರಗಳು ಮಾನವನ ಆವಿಷ್ಕಾರ ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳುವ ಅಪರಿಮಿತ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಒಂದು ಕಾಲದಲ್ಲಿ ಶಾಂತ, ವಿನೀತ ಸ್ವಭಾವದ ನಗರವಾಗಿದ್ದ ಬೆಂಗಳೂರು ಇಂದು ಅಂತಹ ಒಂದು ಅಸಾಧಾರಣ ನಗರವಾಗಿ ರೂಪುಗೊಂಡಿದೆ. ಯಾವುದೇ ಸಾಂಪ್ರದಾಯಿಕ ಆಖ್ಯಾನವನ್ನು ಧಿಕ್ಕರಿಸುವ ಅಸಾಮಾನ್ಯ ಪರಿವರ್ತನೆಯ ಸಾಹಸಗಾಥೆಯಂತಿದೆ. ನಿವೃತ್ತರ ಸ್ವರ್ಗ ಎನ್ನಿಸಿಕೊಂಡಿದ್ದ ಬೆಂಗಳೂರು, ಭಾರತದ ಸಾಟಿಯಿಲ್ಲದ ತಾಂತ್ರಿಕ ರಾಜಧಾನಿಯಾಗಿ ಉನ್ನತಿಗೇರಿದ ಕಥೆ, ಮಾನವನ ಪ್ರಯತ್ನಗಳ ಪರಿಧಿಯೊಳಗಿರುವ ಅದ್ವಿತೀಯ ಸಾಧ್ಯತೆಗಳು, ಪ್ರತಿಭೆಯ ಚೈತನ್ಯ, ಆವಿಷ್ಕಾರಗಳ ಶಕ್ತಿಯ ಕುರಿತ ಮನಸೆಳೆಯುವ ಸಾಕ್ಷಿಯಾಗಿದೆ.

ಮಾಲಿನಿ ಗೋಯಲ್ ಮತ್ತು ಪ್ರಶಾಂತ್ ಪ್ರಕಾಶ್ ಅವರು ರಚಿಸಿರುವ ಅನ್‌ಬಾಕ್ಸಿಂಗ್ ಬೆಂಗಳೂರು: ಹೊಸ ಆರಂಭಗಳ ನಗರ, ಈ ರೋಮಾಂಚಕಾರಿ ಮೆಟ್ರೊ ಪೊಲಿಸ್ ನಗರದ ಹೃದಯ ಮತ್ತು ಆತ್ಮದೊಳಗೆ ಒಂದು ಉಲ್ಲಾಸಕಾರೀ ಪಯಣವಾಗಿದೆ. ಇದು, ಬೆಂಗಳೂರು ಭಾರತದ ರ್ಸ್ಟಾ ಅಪ್ ಕ್ರಾಂತಿಯ ಅಧಿಕೇಂದ್ರವಾಗಿ ಪರಿವರ್ತನೆ ಯಾದ ಬಗ್ಗೆ ಮಾತ್ರವಲ್ಲ, ಅದು ಹೇಗೆ ಜನಹಿತ, ಆಕ್ಟಿವಿಸಂ ಮತ್ತು ಸಾಮಾಜಿಕ ಬದಲಾವಣೆಯ ದಾರಿದೀಪವಾಯಿತು ಎನ್ನುವುದರ ಕುರಿತಾದ ಆಳವಾದ ಪರಿಶೋಧನೆ ಯಾಗಿದೆ. ಚರಿತ್ರೆ, ಸಂಸ್ಕೃತಿ ಮತ್ತು ಆವಿಷ್ಕಾರಗಳ ಸೂಕ್ಷ್ಮ ಎಳೆಗಳು ಹೇಗೆ ಹೆಣೆದು ಕೊಂಡು ಬೆಂಗಳೂರಿನ ವಿಶಿಷ್ಟ ಅಸ್ಮಿತೆಯನ್ನು ರೂಪುಗೊಳಿಸಿವೆ ಎನ್ನುವುದನ್ನು ಅನಾವರಣಗೊಳಿಸುತ್ತದೆ.

ಭಾರತದ ವಿಜ್ಞಾನ ಚರಿತ್ರೆಯಲ್ಲಿ ಬೆಂಗಳೂರು ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲೂ ಇಪ್ಪತ್ತನೇ ಶತಮಾನದಲ್ಲಿ ಬೆಂಗಳೂರು ಕಂಡ ಅಭಿವೃದ್ಧಿ ಇದಕ್ಕೆ ಕಾರಣವಾಗಿದೆ. ಜೆ ಎನ್ ಟಾಟಾ ಅವರು ಕಂಡ ಭಾರತದಲ್ಲಿ ಆಧುನಿಕ ಸಂಶೋಧನಾ ಸಂಸ್ಥೆಯ ಕನಸು ನನಸಾಗಿದ್ದು 1909ರಲ್ಲಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ (IISc) ಸ್ಥಾಪನೆಯಾದಾಗ. ಇದು ಸಾಧ್ಯವಾಗಿದ್ದು ಅಂದಿನ ಆಳುವ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇದಕ್ಕಾಗಿ ಬೃಹತ್ ಕ್ಯಾಂಪಸ್ ಅನ್ನು ಉದಾರಮನಸ್ಸಿನಿಂದ ಕೊಡುಗೆ ಕೊಟ್ಟಿದ್ದರಿಂದ. ಮುಂದಿನ ನೂರು ವರ್ಷಗಳಲ್ಲಿ ಬೆಂಗಳೂರು ಭಾರತದ ಅಕೆಡೆಮಿಕ್ ವಿಜ್ಞಾನದ ಪ್ರಧಾನ ಕೇಂದ್ರವಾಗಿ ಬೆಳೆಯಿತು. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಸಂಬಂಧಪಟ್ಟಂತೆ ಹೆಚ್ಚಿನ ಚಟುವಟಿಕೆಗಳಿಗೆ ಬೆಂಗಳೂರು ಭದ್ರ ಬುನಾದಿ ಹಾಕಿದೆ.

ಬೆಂಗಳೂರಿನ ಕಥೆ, ಭಾರತವು ಜಾಗತಿಕ ನೆಲೆಯಲ್ಲಿ ಕಂಡ ಉತ್ಕರ್ಷದ ಸಂಕೇತವಾಗಿದೆ. ಒಂದು ಕಾಲದಲ್ಲಿ ಸಾರ್ವಜನಿಕ ಉದ್ಯಮಗಳಾಗಿದ್ದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಎಚ್ ಎಂ ಟಿ ಮೆಷಿನ್ ಟೂಲ್ಸ್ ಲಿಮಿಟೆಡ್ ಮತ್ತು ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ಗಳಿಂದ ಪ್ರಸಿದ್ದಿ ಯಾಗಿದ್ದ ಈ ನಗರ, ದೇಶದ ಎಲ್ಲಾ ಮೂಲೆಗಳಿಂದ ಬಂದ ಪ್ರತಿಭೆ ಕೌಶಲ್ಯಗಳಿಗೆ ಸಾರ್ಥಕ ಸ್ವರ್ಗವಾಗಿ ಪರಿವರ್ತನೆಯಾಗಿದೆ. ಭಾರತದ ಟೆಕ್‌ ಕ್ರಾಂತಿಗೆ ಕೇಂದ್ರಬಿಂದು ವಾಗಿದ್ದು, ದೇಶದ ಜಾಗತಿಕ ಅಸ್ತಿತ್ವಕ್ಕೆ ಹೊಸ ಭಾಷ್ಯ ಬರೆದಿದೆ. ಇಂದು ಬೆಂಗಳೂರು ಜಿಜ್ಞಾಸೆಯ ಒಳಹರಿವಿನ ಸ್ಥಾನದಲ್ಲಿ ನಿಂತಿದೆ. ಆವಿಷ್ಕಾರಗಳು, ಸಂಸ್ಕೃತಿ ಮತ್ತು ಪರಿವರ್ತನೆಯ ಕೂಡುರಸ್ತೆಯಲ್ಲಿ ನಿಂತಿದೆ. ಭಾರತದ ಭವಿಷ್ಯವನ್ನು ರೂಪಿಸುತ್ತಿರುವ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಪಲ್ಲಟಗಳನ್ನು ಕೋಶಗೊಳಿಸುವ ನಗರವಾಗಿದೆ. ಇದು ಹೊಂದಿಕೊಳ್ಳುವಿಕೆಯ ಸಂಕೇತವಾಗಿದ್ದು, ಬೆಂಗಳೂರು ತನ್ನನ್ನು ತಾನು ಮರುಶೋಧಿಸಿಕೊಳ್ಳಲು ಮತ್ತು ನಿರಂತರ ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರಸ್ತುತ ವಾಗಿರಲು ಅವಕಾಶ ಮಾಡಿಕೊಟ್ಟಿದೆ.

ಈ ಅನ್‌ಬಾಕ್ಸಿಂಗ್‌ ಬೆಂಗಳೂರು: ಹೊಸ ಆರಂಭಗಳ ನಗರ ಬೆಂಗಳೂರಿನ ಪರಿವರ್ತನೆಯ ಅಸಾಧಾರಣ ವೃತ್ತಾಂತವಾಗಿದೆ. ಬೆಂಗಳೂರಿನ ಹಣೆಬರಹವನ್ನು ರೂಪಿಸಿದ ಕನಸುಗಾರರು, ಕ್ರಿಯಾಶಾಲಿಗಳು ಮತ್ತು ದಾರ್ಶನಿಕರುಗಳಿಗೆ ಸಲ್ಲಿಸಿದ ಪುರಸ್ಕಾರವಾಗಿದೆ. ಸಾಧ್ಯತೆಯ ಪರಿಕಲ್ಪನೆಯನ್ನು ಸತತವಾಗಿ ಮರುವ್ಯಾಖ್ಯಾನ ಗೊಳಿಸುತ್ತಿರುವ ನಗರದ ಹೃದಯವನ್ನು ಶೋಧಿಸುವ ಆಹ್ವಾನವಾಗಿದೆ.

ಬೆಂಗಳೂರನ್ನು ತಮ್ಮ ಮನೆ ಎಂದು ಕರೆಯುವ ಅನೇಕ ಮೊದಲ ತಲೆಮಾರಿನ ಉದ್ಯಮಿಗಳು ತಮ್ಮ ಭವಿಷ್ಯವನ್ನು ಮಾತ್ರವಲ್ಲದೇ ನಗರದ ಅದೃಷ್ಟವನ್ನೂ ಮರುರೂಪಿಸಿದ ಅಭಿವೃದ್ಧಿ ಪಥದಲ್ಲಿರುವ ಪರಿಸರ ವ್ಯವಸ್ಥೆಯಾಗಿಸಿದ್ದಾರೆ. ಅಝೀಮ್ ಪ್ರೇಮ್‌ಜಿ, ಎನ್ ಆರ್ ನಾರಾಯಣ ಮೂರ್ತಿ, ನಂದನ್ ನಿಲೇಕಣಿ ಮತ್ತಿತರರು ಹಾಗೂ ನಾನು ಸಂಪತ್ತಿನ ಗಳಿಕೆ ಮಾತ್ರವಲ್ಲದೇ ಸಮಾಜಕ್ಕೆ ಮರಳಿ ಕೊಡುವಲ್ಲಿಯೂ ಯಶಸ್ವಿಯಾಗಿ ದ್ದೇವೆ. ಭಾರತದ ಪರೋಪಕಾರ ಮತ್ತು ಕ್ರಿಯಾಶೀಲತೆಯ ರಾಜಧಾನಿ ಎಂದು ಸಾಮಾನ್ಯವಾಗಿ ಪ್ರಶಂಸಿಸಲ್ಪಡುವ ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ.

ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿರೂಪಣೆಯನ್ನು ಮಾಲಿನಿ ಗೋಯಲ್ ಮತ್ತು ಪ್ರಶಾಂತ್ ಪ್ರಕಾಶ್ ಅವರು ಹೆಣೆದಿದ್ದಾರೆ. ಅವರ ಮಾತುಗಳ ಮೂಲಕ ನಮ್ಮನ್ನು ಬೆಂಗಳೂರನ್ನು 'ಅನ್‌ಬಾಕ್ಸ್' ಮಾಡಲು, ಹೊಸ ಆರಂಭಗಳ ಸ್ಫೂರ್ತಿಯೇ ಮೈವೆತ್ತಂತಿರುವ ನಗರದ ನಿರಂತರ ಯಶಸ್ಸಿನ ಗೌಪ್ಯತೆಯನ್ನು ಅನಾವರಣಗೊಳಿಸಲು ಆಹ್ವಾನಿಸಿದ್ದಾರೆ.

ಈ ಕೃತಿಯ ಪುಟಗಳ ಆಕರ್ಷಕ ಯಾನದಲ್ಲಿ ತೊಡಗಿಕೊಂಡಂತೆ ಸ್ಫೂರ್ತಿಗೊಳ್ಳಲು, ಅರಿವು ಪಡೆಯಲು, ಮಾನವನ ಜಾಣೆಯ ಅಪರಿಮಿತ ಸಾಧ್ಯತೆಗಳ ನಿಜ ದೃಷ್ಟಾಂತ ವಾಗಿರುವ ಬೆಂಗಳೂರು ಅರ್ಥಾತ್ ಹೊಸ ಆರಂಭಗಳ ನಗರ ಕುರಿತು ಹೊಸ ಬೆರಗು ಅನುಭವಿಸಲು ಸಿದ್ಧರಾಗಿ.

- ಕಿರಣ್ ಮಜುಂದಾರ್ ಷಾ

MORE FEATURES

ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು

06-01-2025 ಬೆಂಗಳೂರು

“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...

ಸಾಗರ ಸೀಮೆಯ ನಿಷ್ಕಲ್ಮಶ ಹೃದಯ, ನೆಹರು ನಗರದ ಅಚ್ಚಳಿಯದ ನಗು

06-01-2025 ಬೆಂಗಳೂರು

"“ಬನ್ನಿ, ಬನ್ನಿ” ಎಂದು ನನ್ನನ್ನು ಕೂರಿಸಿದ ಅವರು ಒಳಗಿದ್ದ ನಾ.ಡಿ. ಅವರಿಗೆ ಕೊಂಕಣಿಯಲ್ಲಿ ನನ್ನ ಬ...

ಅಂಕಣ ಬರವಣಿಗೆ ನನಗೆ ಸ್ವಲ್ಪ ಶಿಸ್ತನ್ನು ಕಲಿಸಿತೆಂಬುದನ್ನು ಒಪ್ಪಿಕೊಳ್ಳಬೇಕು

06-01-2025 ಬೆಂಗಳೂರು

“ಈಗ ಪುಸ್ತಕ ಆಗುತ್ತಿರುವ ಗಳಿಗೆಯಲ್ಲಿ ಒಂದೆರಡು ಲೇಖನಗಳ ಶೀರ್ಷಿಕೆಗಳನ್ನು ಸ್ವಲ್ಪ ಬದಲಿಸಿದ್ದೇನೆ. ಈ ಅಂಕಣಕ್ಕೆ...