“ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್ತವೆ. ಆ ನಿಟ್ಟಿನಲ್ಲಿ ಈ ಸಂಕಲನ ಬಹು ಚರ್ಚೆಯಾಗಬೇಕಾದ್ದು ಅನ್ನುವುದರಲ್ಲಿ ಎರಡು ಮಾತಿಲ್ಲ,” ಎನ್ನುತ್ತಾರೆ ದಯಾ ಗಂಗನಘಟ್ಟ ಅವರು ದೀಪದ ಮಲ್ಲಿ ಅವರ “ಹುಣಸೇ ಚಿಗುರು” ಪುಸ್ತಕಕ್ಕೆ ಬರೆದ ಮುನ್ನುಡಿ.
ಪರಂಪರೆ ಮತ್ತು ಆಧುನಿಕತೆ ಎರಡರ ಕಡೆಗೂ ಒಲವಿರುವ ದೀಪದಮಲ್ಲಿ ಅವರಿಗೆ ಹೊಸ ಹೊಸ ತಿಳುವಳಿಕೆಗಳ ಅಂದಂದಿನ ಪರಿಣಾಮಗಳ ಬಗ್ಗೆಯೂ ಪ್ರಜ್ಞೆ ಇದೆ. ಇವರ "ಹುಣಸೇ ಚಿಗುರು" ಕಥಾಸಂಕಲನದ ಕಥೆಗಳಲ್ಲಿ ಲೌಕಿಕದ ಹಲವು ಸಮಸ್ಯೆಗಳ ನಡುವೆಯೂ ಚಿಮ್ಮುವ ಜೀವನ ಪ್ರೀತಿ, ಇಲ್ಲಿಯ ಸ್ತ್ರೀ ಪ್ರಪಂಚ, ಕತೆಯನ್ನ ವ್ಯಕ್ತಪಡಿಸುವ ರೀತಿ ಭಿನ್ನವಾದದ್ದು. ಕಥೆಗಾರ್ತಿ ದೀಪದಮಲ್ಲಿ ಈ ಸಂಕಲನವನ್ನು ಸಾಮಾಜಿಕ ಆಗುಹೋಗುಗಳೊಂದಿಗೆ ಕಾಲ್ಪನಿಕತೆಯನ್ನು ಸಂಯೋಜಿಸುವ ವಿಧಾನದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ವಿಧಾನದ ಚಂದವೇನೆಂದರೆ ಕಥೆಯೊಂದನ್ನ ನೀವು ಓದುತ್ತಾ ಹೋದಂತೆ ಕಥೆ ಪಾತ್ರಧಾರಿಗಳ ಹೋರಾಟಗಳು ನಾವೇ ಕಂಡುಂಡಂತೆ ನೈಜವೆಂದು ಭಾಸವಾಗುತ್ತಾ ಹೋಗುತ್ತವೆ. ಇಲ್ಲಿನ ಕೌಶಲ್ಯಪೂರ್ಣ ಕಥಾ ನಿರೂಪಣೆಯು ಓದುಗರನ್ನು ಮೊದಲಿನಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿನ ಕಥೆಗಳ ಮೂಲ ಸೆಲೆ ಮಾನವೀಯ ಕಳಕಳಿ.
'ಕಥೆ' ಎಂಬ ಸೃಜನಶೀಲ ಅಭಿವ್ಯಕ್ತಿಯನ್ನು ಸಿದ್ಧಿಸಿಕೊಂಡಿರುವ ದೀಪದಮಲ್ಲಿ ಅವರ ಬಹುತೇಕ ಕಥೆಗಳು ಸಮಾಜ ಮತ್ತು ಕುಟುಂಬದ ಸಂಬಂಧದ ನಡುವಿನ ಅಧಿಕಾರ ರಾಜಕಾರಣವನ್ನು ಮುಖ್ಯವಾಗಿ ಒಳಗೊಂಡಿವೆ. 'ಹುಣಸೇ ಚಿಗುರು' 'ವೆಲ್ವೆಟ್ ಪರ್ಸು' 'ಮೌನಂ ಸಮ್ಮತಿ ಲಕ್ಷಣಂ' ಈ ಮಾದರಿಯಲ್ಲಿ ನನ್ನನ್ನು ಬಹುವಾಗಿ ಕಾಡಿದ ಕತೆಗಳು.
'ಓಡಿಹೋದವಳು' 'ಡಿಯರ್ ಸರ್' ಮತ್ತು 'ಮುಳ್ಳಟ್ಟಮ್ಮನ ಆಶೀರ್ವಾದ' ಕಥೆಗಳು ಸಂಘರ್ಷದ ಬದುಕಿನಲ್ಲಿಯೂ ಬದುಕನ್ನು ಸಹನೀಯಗೊಳಿಸುವ ಅಂಶಗಳು ಇದ್ದೇ ಇವೆ ಎಂಬ ಭರವಸೆಯನ್ನೂ ನೀಡುತ್ತವೆ. ಇದು ಗಮನಾರ್ಹ ಅಂಶ. ಇಲ್ಲಿನ ಕೆಲವು ಕಥೆಗಳ ಗಂಡು ಮತ್ತು ಹೆಣ್ಣುಗಳೆರಡೂ ಮನೆಯ ಒಳ ಹೊರಗಿನ ಅನುಭವಕ್ಕೆ ರೂಪಕವಾಗುತ್ತವೆ, ಆದ್ದರಿಂದಲೇ ತಾಗುತ್ತವೆ. ಉಷಾ, ಅಕ್ಕ, ಶ್ರೀಧರ ಮತ್ತು ಅವನ ಅಮ್ಮ ಮತ್ತು ಮುಖ್ಯವಾಗಿ ಗಂಡಲ್ಲದ ಹೆಣ್ಣಾಗ ಬಯಸುವ ಲೋಕೇಶನ ಪಾತ್ರ ಯಾವತ್ತಿನ ನಮ್ಮ ಸೋಕಾಲ್ಡ್ ಬದುಕು ಹೀಗಿದ್ದರೆ ಮಾತ್ರ ಚಂದ ಎನ್ನುವ ಯೋಚನೆಗಳನ್ನು ಅಳ್ಳಾಡಿಸಿ ಮರು ಚಿಂತನೆಗೆ ಹಚ್ಚುತ್ತವೆ.
ಪಿತೃ ಹಿತಾಸಕ್ತ ನಿಲುವುಗಳ ಅರಿವಿರುವ ಕತೆಗಾರ್ತಿ ಪ್ರಜ್ಞಾಪೂರ್ವಕವಾಗಿಯೇ ಅದನ್ನ ತಮ್ಮ ಕತೆಯಲ್ಲಿ ಕಟ್ಟುತ್ತಾರೆ. ಹಾಗಾಗಿಯೇ ಹೆಣ್ಣಿನ ಸಹಜ ಸತ್ವದ ಹುಡುಕಾಟವನ್ನ ಇವರ ಸ್ತ್ರೀ ಪಾತ್ರಗಳಲ್ಲಿ ಬೆದಕಬಹುದು. ಸ್ತ್ರೀತ್ವದ ನಿಲುವಿನ ಬಗ್ಗೆ ಇವರಿಗೊಂದು ಸ್ಪಷ್ಟ ನಿಲುವಿದೆ. ಅದರೊಳಗೊಂದು ಅವರದ್ದೇ ಆದ ಏಸ್ತೆಟಿಕ್ ಇದೆ. ಹೆಣ್ಣಿನ ಅಗತ್ಯ ಮತ್ತು ಆದ್ಯತೆಗಳನ್ನು ಮರು ಪ್ರಶ್ನಿಸಿಕೊಳ್ಳಬೇಕಾದ ಒತ್ತಡ ಕನ್ನಡದ ನವ್ಯ ಸಾಹಿತ್ಯದ ಕೊಡುಗೆಯಾಗಿತ್ತು. ಅದರ ಪರಿಧಿಯನ್ನು ದಾಟಿದ ಈ ಕಾಲಘಟ್ಟದಲ್ಲಿ ಇವರ ಕಥೆಗಳು ಹೆಣ್ಣಿಗೆ ಗಂಡಿನಿಂದ ಏನು ಬೇಕಾಗಿದೆ ಎಂಬ ಪ್ರಶ್ನೆಯನ್ನೂ ಸೂಕ್ಷ್ಮವಾಗಿ ಎತ್ತಿ ಉತ್ತರವನ್ನೂ ಮಿಂಚುವಂತೆ ಮಾಡುತ್ತವೆ.
ಒಪ್ಪಿ ಒಪ್ಪದಿರಿ, ಅನಾದಿ ಕಾಲದಿಂದ ಗಂಡಿನ ವ್ಯಕ್ತಿತ್ವದ ಪ್ರಭಾವದೊಂದಿಗೇ ಬೆಳೆದ ಹೆಣ್ಣು, ತನ್ನನ್ನು ತಾನು ಅವನ ನೆರಳಿನಿಂದ ಆಚೆ ತಂದುಕೊಂಡು ಸಮಾಜದಲ್ಲಿ ಇಂಡಿವಿಜಯಲ್ ಭಾಗವಾಗಿಸಿಕೊಂಡರೂ ಪ್ರೀತಿ, ಪ್ರೇಮ, ಕರುಣೆ, ಕರ್ತವ್ಯ ಇತ್ಯಾದಿ ಆದರ್ಶಗಳ ಪ್ರಭಾವಳಿಯಿಂದ ದೂರ ನಿಲ್ಲುವುದು ಅಷ್ಟು ಸಲೀಸಲ್ಲ. ಇದನ್ನ ಸೂಕ್ಷ್ಮವಾಗಿ ನಿರೂಪಿಸುವುದರ ಜೊತೆಜೊತೆಗೇ ಇದೇನೂ ಅಸಾಧ್ಯವಾದ ಸೀಮೋಲ್ಲಂಘನ ಅಲ್ಲವೇ ಅಲ್ಲ ಎಂಬ ಭರವಸೆಯ ಸ್ಪಾಟ್ ಲೈಟ್ ಒಂದರ ಕೇಂದ್ರದಲ್ಲೇ ಕತೆಯ ಆಶಯವು ನಿಲ್ಲುವುದು ಇಷ್ಟವಾಗುತ್ತದೆ. ಕೆಲವು ನಿರ್ದಿಷ್ಟ ಘಟನೆಗಳ ನಿರ್ದಿಷ್ಟ ಕಥೆಗಳು ಇದಕ್ಕೆ ಪೂರಕವಾಗಿ ಸಾಂದರ್ಭಿಕವಾಗಿ ಒದಗಿಬರುವುದನ್ನ ಕಾಣಬಹುದು.
ಇಲ್ಲಿ ಬಹುಮುಖ್ಯವಾಗಿ ನನ್ನ ಮನಸನ್ನ ಸೆಳೆದದ್ದು ಕಥೆಗಾರ್ತಿಗಿರುವ ಭಾಷೆಯ ಮೇಲಿನ ಹಿಡಿತ ಮತ್ತು ಅದನ್ನ ಬಳಸುವ ಜಾಣೆ. ಸಂಕಲನದ ಶೀರ್ಷಿಕೆಯೂ ಆದ ಕತೆ 'ಹುಣಸೆ ಚಿಗುರು' ಇದಕ್ಕೆ ನಿದರ್ಶನ. 'ಮೌನಂ ನ ಸಮ್ಮತಿ ಲಕ್ಷಣಂ' ಕಥೆಯಂತೂ ಸಾವಿತ್ರಿಯ ಅಮ್ಮ ಮತ್ತವಳ ಹಿಪೋಕ್ರಸಿಗಳು, ಹಲವು ಹೆಣ್ಣುಮಕ್ಕಳ ನೆರಳಾದ ಅಕ್ಕನ ಮೌನ ಇತ್ಯಾದಿ ಸತ್ಯಗಳ ಮೂಲಕ ನಮ್ಮನ್ನ ಬೆಚ್ಚಿಬೀಳಿಸಿಬಿಡುತ್ತದೆ. ಸಂಕಲನದಲ್ಲಿ ಒಟ್ಟು ಹತ್ತೇ ಕಥೆಗಳು ಇದ್ದರೂ, ಅವು ನಮ್ಮ ನೆನಪುಗಳೊಡನೆ ಬೆರೆಸುವ ಭಾವನೆಗಳು ಜೀವಿಸುತ್ತಲೇ ಇರುತ್ತವೆ. ಆ ನಿಟ್ಟಿನಲ್ಲಿ ಈ ಸಂಕಲನ ಬಹು ಚರ್ಚೆಯಾಗಬೇಕಾದ್ದು ಅನ್ನುವುದರಲ್ಲಿ ಎರಡು ಮಾತಿಲ್ಲ.
- ದಯಾ ಗಂಗನಘಟ್ಟ
“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದ...
“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...
"“ಬನ್ನಿ, ಬನ್ನಿ” ಎಂದು ನನ್ನನ್ನು ಕೂರಿಸಿದ ಅವರು ಒಳಗಿದ್ದ ನಾ.ಡಿ. ಅವರಿಗೆ ಕೊಂಕಣಿಯಲ್ಲಿ ನನ್ನ ಬ...
©2025 Book Brahma Private Limited.