ಹಲವು ಜಾತಿಯ ಹೂಗಳಿಂದಾದ ಮಾಲೆ

Date: 22-09-2022

Location: ಬೆಂಗಳೂರು


ಎಲ್ಲ ಮಿತಿ, ದೋಷಗಳನ್ನು ಜೊತೆಗಿಟ್ಟು ನೋಡಿದರೂ ಈ ಕವಿತೆಗಳು ತಮ್ಮ ಧ್ವನಿಪೂರ್ಣತೆಯಿಂದಾಗಿ ಗೆಲ್ಲುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ರಮೇಶ್ ಗಬ್ಬೂರ್ ಅವರ ’ಜನಮನದಂತೆ ಹಾಡುವೆ’ ಕವನಸಂಕಲನದ ಬಗ್ಗೆ ಬರೆದಿದ್ದಾರೆ.

ಜನಮನದಂತೆ ಹಾಡುವೆ
ಲೇ ರಮೇಶ ಗಬ್ಬೂರ್
ಪ್ರಕಾಶನ- ಶರಣ ಕಲಾ ಬಳಗ, ಗಂಗಾವತಿ
ಬೆಲೆ-100

ರಮೇಶ ಗಬ್ಬೂರ್ ಎಂದರೆ ನನಗೆ ನೆನಪಾಗುವುದು ಅವರ ಗಡಿಬಿಡಿ ಮತ್ತು ಅವರ ಹೋರಾಟದ ಹಾಡುಗಳು. ಹಾಡು ಅಂದರೆ ತುಂಬು ಕಂಠದ, ಭಾವಪೂರ್ಣ ಧ್ವನಿ. ಅದೆಷ್ಟೋ ಸಲ ಅವರ ಹಾಡು ಕೇಳುತ್ತ ಹನಿಗಣ್ಣಾಗಿದ್ದಿದೆ. ಸತ್ವಪೂರ್ಣ ಹೋರಾಟದ ಬಹುತೇಕ ಹಾಡುಗಳನ್ನು ಬರೆದವರು ಇವರೆ ಎಂಬುದು ಗಮನಾರ್ಹ. ಅವರ ಬಹಳಷ್ಟು ಹೋರಾಟದ ಹಾಡುಗಳು ಅವರ ಬಳಗದ ಹುಡುಗರ ಬಾಯಲ್ಲಿ, ಅವರ ಶಿಷ್ಯಂದಿರ ಬಾಯಲ್ಲಿ ಧ್ವನಿಸುತ್ತಲೆ ಇರುತ್ತದೆ.

ಒಂದು ಕಾಲದಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದು ಈಗ ತಟಸ್ಥವಾಗಿರುವ ನನಗೆ ಈ ಹೋರಾಟದ ಹಾಡುಗಳು ಸುಮ್ಮನೆ ಕಾಲು ಕುಣಿಸುವಂತೆ ಮಾಡುತ್ತದೆ. ಅಂತಹ ಹೋರಾಟದ ಹಾಡುಗಳು ಒಟ್ಟಾಗಿ ಓದಲು ಸಿಕ್ಕರೆ ಅದರ ಖುಷಿಯೇ ಬೇರೆ. ಅಂತಹುದ್ದೊಂದು ಹೋರಾಟದ ಹಾಡುಗಳಾದ ಜನಮನದಂತೆ ಹಾಡುವೆ ಸಂಕಲನದ ಮೂಲಕ ರಮೇಶ ಗಬ್ಬೂರ್ ಮತ್ತೊಮ್ಮೆ ನಮ್ಮ ಮುಂದಿದ್ದಾರೆ.

ಬದುಕು ನಮಗೆ ಎಲ್ಲವನ್ನೂ ಕಲಿಸುತ್ತದೆ. ಆದರೆ ಕಲಿತುಕೊಳ್ಳುವ ಮನಸ್ಸಿರಬೇಕು. ತೀರಾ ಬಡತನದ ಬಾಲ್ಯವಾದರೂ ಕಲಿಯುವ ಹಠಕ್ಕೆ ಬಿದ್ದು ಮೇಲೆ ಬಂದ ರಮೇಶ ಗಬ್ಬೂರ್‌ರ ಕವಿತೆಗಳು ಅವರ ಜೀವನದ ನೋವಿನ ಸಾಲುಗಳನ್ನು ತೆರೆದಿಡುತ್ತ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎನ್ನುವುದನ್ನು ಸಾದೋಹರಣವಾಗಿ ಬಿಚ್ಚಿಡುತ್ತವೆ.

ಸ್ವಾಭಿಮಾನ ಸ್ವಾವಲಂಭಿ ಬದುಕು ತೋರದಿದ್ದರೆ
ಜಾತಿ ಮತದ ಒಳಮರ್ಮವ ನೀನು ತಿಳಿಸದಿದ್ದರೆ
ಬುದ್ಧ ಮಾರ್ಗದಲ್ಲಿ ನೀನು ನಡೆಯದಿದ್ದರೆ
ಸಮತೆ ಮಮತೆಯ ಮಾರ್ಗ ತೋರದಿದ್ದರೆ
ಹೇಗಿರುತ್ತಿತ್ತು ಬದುಕು ಹೇಗಿರುತ್ತಿತ್ತು ಏನಾಗುತ್ತಿತ್ತು ಬದುಕು ಏನಾಗುತ್ತಿತ್ತು
ಎನ್ನುವ ಸಾಲುಗಳನ್ನು ಗಮನಿಸಿದರೆ ಸಾಕು ಬದುಕಿನಲ್ಲಿ ಉಂಡ ನೋವುಗಳಷ್ಟನ್ನೂ ಒಂದೇ ಗುಕ್ಕಿನಲ್ಲಿ ಹೇಳಿದ್ದಾರೆ ಎನ್ನಿಸಿಬಿಡುತ್ತದೆ.

ಕೆರೆಯ ನೀರು ಮುಟ್ಟಿದರೆಂದು ಕೈ ಕಡಿದರವರು
ಬಾಯಾರಲು ನೀರು ಸಿಗದೆ ಸತ್ತು ಹೋದರವರು
ಚೌಡರ ಕೆರೆಯಲಿ ದಾಹತಣಿಸಿದ ನಮ್ಮ ಲೀಡರೂ
ಶತಮಾನಗಳ ಔಷಧಿಯಾದರು ನಮ್ಮ ಡಾಕ್ಟರು

ಬಡವರ, ದಲಿತರ ಬದುಕು ಅತ್ಯಂತ ನಿಕೃಷ್ಟವಾಗಿದ್ದ ಕಾಲದಲ್ಲಿ ಬಾಬಾ ಸಾಹೇಬರು ನೀಡಿ ಶಕ್ತಿ ಅಪಾರವಾದದ್ದು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಬದುಕನ್ನು ಕಟ್ಟಿಕೊಂಡಿರುವ ಎಲ್ಲರಿಗೂ ಬಾಬಾ ಸಾಹೇಬರು ಪೂಜನೀಯರು. ಹೀಗಾಗಿಯೇ

ನೀನೇ ಇರದಿದ್ದರೆ ನಾವೇನಾಗುತ್ತಿದ್ದೆವು
ನೀನೇ ಬರದಿದ್ದರೆ ನಾವೇನಾಗುತ್ತಿದ್ದೆವು
ಎಂದು ಹನಿಗಣ್ಣಾಗುತ್ತಾರೆ ಕವಿ. ಅಂಬೇಡ್ಕರರ ಚಿತ್ರವೆಂದರೆ ಅದು ಕೇವಲ ಚಿತ್ರವಲ್ಲ. ಆಕಾಶದೆತ್ತರದ ಸ್ವಾಭಿಮಾನ. ಅವರ ಸಿದ್ಧಾಂತವನ್ನು ಮುಂದಿನ ಮಾರ್ಗವನ್ನಾಗಿ ಆರಿಸಿಕೊಂಡ ಧಮನಿತರ ಕೆಚ್ಚು ಇದು ಎನ್ನುತ್ತಾರೆ.

ಸಂವಿಧಾನದ ಆಶಯಗಳಲ್ಲಿ ಬಾಬಾ ಸಾಹೇಬರು ಹೇಳಿದ ತತ್ವಗಳನ್ನು ಪಾಲಿಸುವುದರಿಂದ ಮಾತ್ರ ಈ ದೇಶದಲ್ಲಿ ಜಾತಿ ವಿದ್ರೋಹಗಳು ಕಡಿಮೆಯಾಗಲು ಸಾಧ್ಯ.ಜಾತ್ಯಾತೀತ, ಸಮಾಜವಾದ, ಸಾಮಾಜಿಕ ನ್ಯಾಯಗಳನ್ನು ಪರಿಪಾಲಿಸದೆ ನಮ್ಮ ದೇಶ ಅಭಿವೃದ್ಧಿ ಹೊಂದುವುದು ಅಸಾಧ್ಯ. ಆ ಕಾರಣಕ್ಕಾಗಿ ನಾವು ನಮ್ಮ ಮತವನ್ನು ಕೇವಲ ಒಂದು ಬಿಳಿಯ ಕಾಗದದ ಚೂರು ಎಂದು ಪರಿಗಣಿಸಬಾರದು.

ಓಟೆಂದರೆ ಬಿಳಿಕಾಗದ ಪೇಪರಲ್ಲವೋ
ಓಟೆಂದರೆ ಕಂಪ್ಯೂಟರ್ ಬಟನ್ ಅಲ್ಲವೋ
ಓಟೆಂದರೆ ನೂರು ರೂಪಾಯಿ ನೋಟಲ್ಲವೋ
ಓಟೆಂದರೆ ಚೀಪು ಲಿಕ್ಕರ್ ಹೆಂಡವಲ್ಲವೋ
ನಿನ್ನ ಓಟೆ ರಾಜ್ಯವಾಳೋ ಸೀಟಾಯಿತೋ
ಅದ ಮಾರಿಕೊಂಡ ನಿನ್ನ ಬದುಕು ಬೀದಿಯಾಯಿತೋ

ಎಂದು ತೀಕ್ಷ್ಣವಾಗಿ ಎಚ್ಚರಿಸುತ್ತಾರೆ. ಅನಕ್ಷರಸ್ತರೇ ಹೆಚ್ಚಿರುವ ನಮ್ಮ ದೇಶದಲ್ಲಿ ಹತ್ತು ರೂಪಾಯಿಗೂ ಓಟು ಬಿಕರಿಯಾಗಿದ್ದಿದೆ. ಒಂದು ಬಾಟಲಿ ಸರಾಯಿಗೆ, ಹಳೆಯ ವಸ್ತ್ರಕ್ಕೆ ಮತವನ್ನು ಮಾರಿಕೊಂಡು ಓಟೆಂದರೆ ಬರೀ ಕಾಗದದ ಚೂರು ಎಂದುಕೊಳ್ಳುವವರು ಈ ದೇಶದಲ್ಲಿ ಬದಲಾವಣೆ ತರುವರೆಂದು ನಿರೀಕ್ಷಿಸುವುದು ಹೇಗೆ? ತನ್ನ ಒಂದು ಮತದಿಂದ ದೇಶದ ಭವಿಷ್ಯವೇ ನಿರ್ಧಾರವಾಗುತ್ತದೆ ಎಂದು ಅರಿವಿಲ್ಲದ ಮೂಢತೆಯಿಂದಾಗಿ ಶೋಷಿತರ ಬದುಕು ಇನ್ನೂ ತಳದಲ್ಲೇ ಉಳಿದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ದೇಂದ್ರೆ ಮಣ್ಣಲ್ಲ ಮನಷ್ಯಾರಣ್ಣ
ಈ ದೇಶ ಯಾರ ಮನೆಯ ಆಸ್ತಿ ಅಲ್ಲಣ್ಣ
ಇಲ್ಲೆ ಹುಟ್ಟಿ ಇಲ್ಲೇ ಬೆಳೆದೀಚಿ ಈ ದೇಶ ನಮ್ಮದಣ್ಣ
ಬೆವರು ಬಸಿದು ನಾಡು ಕಟ್ಟೀವಿ ಈ ದೇಶ ನಮ್ಮದಣ್ಣ
ಎಂದು ದಿಟ್ಟವಾಗಿ ಹೇಳುತ್ತಾರೆ. ಹಾಗೆ ಹೇಳಲು ಬೇಕಾದ ಧೈರ್‍ಯ ತುಂಬಿದ ಬಾಬಾ ಸಾಹೇಬರನ್ನು ಪ್ರತಿ ಅಕ್ಷರದಲ್ಲೂ ಕೃತಜ್ಞತೆಯಿಂದ ನೆನೆಯುತ್ತಾರೆ.

ಇಲ್ಲಿ ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟವರು ಮಾತ್ರ ಅನ್ಯಾಯಕ್ಕೆ ಒಳಗಾಗಿಲ್ಲ. ಈ ದೇಶದ ಪ್ರತಿ ಹೆಣ್ಣು ಮಗಳೂ ಶೋಷಿತಳೇ. ಹೆಣ್ಣಿಗೆ ಜಾತಿಬೇಧವಿಲ್ಲ. ಪ್ರತಿ ಮನೆಯಲ್ಲೂ ಹೆಣ್ಣು ನುಕೃಷ್ಟಳು. ಹೀಗಾಗಿ ಹೆಣ್ಣು ಮಕ್ಕಳು ಓದಿ ತಮ್ಮ ಕಾಲ ಮೇಲೆ ನಿಂತುಕೊಳ್ಳುವುದಕ್ಕಾಗಿ ಉದ್ಯೋಗವಂತರಾಗಬೇಕು ಎಂದು ಕವಿ ಬಯಸುತ್ತಾರೆ.

ಹೊಟ್ಟೆಯೊಳಗೆ ಇರುವಾಗಲೆ ತಿಳಿಯುತಿರುವರು
ಕರುಣೆ ಇಲ್ಲದೆ ಹೆಣ್ಣನ್ನು ಕೊಲ್ಲುತಿರುವರು
ಹಸು ಕಂದಮ್ಮಗಳೆನ್ನದೆ ಕಾಮಾಂಧರಾದರು
ಹಾಲುಗೆನ್ನೆ ಚಿವುಟಿ ನಾಲಿಗೆಯ ಕಡಿದರು

ಎನ್ನುವ ನಾಲ್ಕು ಸಾಲುಗಳಲ್ಲಿ ಭಾರತದ ಹೆಣ್ಣಿನ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ಬ್ರೂಣ ಹೆಣ್ಣು ಎಂದು ಗೊತ್ತಾದರೆ ಸಾಕು, ಹೊಟ್ಟೆಯೊಳಗೇ ಅವಳನ್ನು ಸಾಯಿಸಿಬಿಡುತ್ತಾರೆ. ಪುಟ್ಟ ಹಸುಗೂಸು ಎಂಬುದನ್ನೇ ನೋಡದೆ ಅತ್ಯಾಚಾರಗೈಯ್ದು ಕೊಲೆ ಮಾಡುತ್ತಾರೆ. ನ್ಯಾಯ ನೀಡಬೇಕಾದ ಪೋಲೀಸರೂ ಒಚಿಟಿ ಹೆಣ್ಣು ಸಿಕ್ಕರೆ ಮೃಗದಂತೆ ಎರಗುವ ಈ ಸಮಾಜದಲ್ಲಿ ಹೆಣ್ಣು ಸದಾ ಅತಂತ್ರಳು. ಹೆಣ್ಣಿಗೆ ಜಾತಿ ಎಂಬುದಿಲ್ಲ. ಆಕೆ ಸಮಾಜ ಅಂದುಕೊಂಡ ಉಚ್ಛ ಜಾತಿಯಿರಲಿ ಅಥವಾ ಸಮಾಜ ತಿರಸ್ಕರಿಸುವ ಕೆಳವರ್ಗವಿರಲಿ ಯಾವುದಾದರೇನು ಕಾಮುಕನ ಕಣ್ಣಿಎ? ಹೆಣ್ಣು ಎಂಬ ಹೆಸರು ಸಾಕು ಆಕೆಯನ್ನು ಮೃಗದಂತೆ ಬೇಟೆಯಾಡಿ ಭಕ್ಷಿಸಲು. ಹೀಗಾಗಿ ಹೆಣ್ಣು ಈ ಸಮಾಜದಲ್ಲಿ ಎಂದೆಂದಿಗೂ ಸಂತ್ರಸ್ತಳು ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೆ.

ಅದೆಷ್ಟು ಅತ್ಯಾಚಾರಗಳನ್ನು ನಾವೀಗ ಕಂಡಿಲ್ಲ? ನಿರ್ಭಯಾ ಪ್ರಕರಣದ ನಂತರ ಆದ ಅತ್ಯಾಚಾರಗಳಿಗೆ ಕೊನೆಯಿದೆಯೇ? ಇಂತಹ ವಿಷಮ ಸ್ಥಿತಿಯಲ್ಲೂ ಅತ್ಯಾಚಾರಗೈದ ಅಪರಾಧಿಗಳನ್ನು ಸನ್ನಡತೆಯ ಕಾರಣ ಕೊಟ್ಟು ಬಿಡುಗಡೆ ಮಾಡುವ ಭೀಕರ ಸ್ಥಿತಿಯಲ್ಲಿ ನಾವಿದ್ದೇವೆ. ಯಾವುದೋ ಕೋಮು, ಜಾತಿಯವರನ್ನು ಅತ್ಯಾಚಾರ ಮಾಡಿದರೆ ಅದು ತಪ್ಪಲ್ಲ ಎನ್ನುವಾಗ ಆ ಅಪರಾಧಿ ಮುಂದೊಂದು ದಿನ ತನ್ನ ಮನೆಯ ಹೆಂಗಸರನ್ನು, ಹೆಣ್ಣು ಮಕ್ಕಳನ್ನು, ಹಸುಳೆಗಳನ್ನು ಗುರಿಯಾಗಿಟ್ಟುಕೊಳ್ಳಬಹುದು ಎಂದು ಯೋಚಿಸಲಾರದಷ್ಟು ಈ ವ್ಯವಸ್ಥೆ ಜಡ್ಡುಗಟ್ಟಿ ಹೋಗಿದೆ. ಇದಕ್ಕೂ ಮಿಗಿಲಾಗಿ ಇನ್ನೂ ಕಿಶೋರಾವಸ್ಥೆಯಲ್ಲಿರುವ ಹುಡುಗಿಯಿಂದಲೇ ಬೇರೆ ಕೋಮಿನ ಅಥವಾ ಧರ್ಮದ ಹೆಣ್ಣು ಮಕ್ಕಳನ್ನು ಬಲಾತ್ಕಾರಿಸುವ ಮಾತು ಹೇಳಿಸಿ ವಿಜೃಂಭಿಸುವ ಭೀಷಣ ಮನಸ್ಥಿತಿ ತಾರಕಕ್ಕೇರಿದೆ. ಕವಿ ಈ ಎಲ್ಲ ಅಂಶಗಳನ್ನು ಕಳವಳದಿಂದ ನೋಡುತ್ತ ತಮ್ಮ ಕವಿತೆಗಳಲ್ಲಿ ದಾಖಲಿಸಿದ್ದಾರೆ.

ಒಬ್ಬ ವ್ಯಕ್ತಿ ಪರಿಪೂರ್ಣತೆಯನ್ನು ಪಡೆಯುವ ಹಾದಿಯಲ್ಲಿ ಹಲವಾರು ವ್ಯಕ್ತಿತ್ವಗಳಿಂದ ಪ್ರಭಾವಿತನಾಗಿರುತ್ತಾನೆ. ಕವಿ ತನ್ನನ್ನು ಪ್ರಭಾವಿಸಿದ ಹಲವಾರು ವ್ಯಕ್ತಿತ್ವಗಳನ್ನು ಇಲ್ಲಿ ಅಕ್ಷರಗಳಲ್ಲಿ ಚಿತ್ರಿಸಿದ್ದಾರೆ. ಅದರಲ್ಲಿ ಅಪ್ಪ.ಸೈನಿಗರು,ಕಾರ್ಮಿಕರು, ರೈತರು, ಪೌರ ಕಾರ್ಮಿಕರು, ನೇಕಾರರು, ಹತ್ಯೆಯಾದ ಮಧು ಪತ್ತಾರ, ಸಾವಿಗೀಡಾದ ನ್ಯಾಯವಾದಿ ಧರಣಿ, ಹೀಗೆ ಹಲವರನ್ನು ಚಿತ್ರಿಸಿದ್ದಾರೆ. ಈ ನುಡಿನಮನಗಳ ಮಾಲಿಕೆ ಗಮನ ಸೆಳೆಯುತ್ತದೆ.

ನಾವು ಮೇಲು, ನೀವು ಕೀಳು ಬಡಕೊಂಡು ಸಾಯ್ತೀವ್ರಿ
ಸತ್ತ ಮ್ಯಾಲೆ ತೋಡೋಕುಣಿ ಎಲ್ಲರಿಗೊಂದೇರಿ
ಹರಿಯೋ ನದಿ, ಬೀಸೋ ಗಾಳಿ ಜಾತಿ ನೋಡಲ್ರಿ
ಮನಸು ಬಿಚ್ಚಿ ನೋಡ್ರಿ ಮಣ್ಣು ಎಲ್ಲರಿಗೊಂದೇರಿ

ಎನ್ನುತ್ತ ನಮ್ಮಲ್ಲಿರುವ ಅಹಂಭಾವವನ್ನು ಕಿತ್ತು ಹಾಕಿ ಸಮಾನತೆಯ ಬೀಜ ಬಿತ್ತುತ್ತಾರೆ. ಬದುಕು ನಮಗೆ ಒಂದೇ ಅವಕಾಶ ನೀಡುತ್ತದೆ. ಒಂದು ಸಲ ಈ ಬದುಕು ಮುಗಿದು ಹೋದರೆ ಮತ್ತೆ ಮರುಜನ್ಮದ ಬಗ್ಗೆ ಯಾವುದೇ ಖಾತರಿಯಿಲ್ಲ. ಹೀಗಾಗಿ ಇರುವಷ್ಟು ದಿನ ಎಲ್ಲರೊಳಗೊಂದಾಗಿ ಸಹಬಾಳ್ವೆ ನಡೆಸಬೇಕು.

ಇಲ್ಲಿ ಯಾವುದೂ ಸ್ಥಿರವಲ್ಲ. ಯಾವುದನ್ನೂ ನಾವು ತೆಗೆದುಕೊಂಡು ಹೋಗುವುದೂ ಇಲ್ಲ. ನಾವೊಬ್ಬರು ಇಲ್ಲಿ ಇಲ್ಲವೆಂದಾದಾಗ ಈ ಭೂಮಿಯ ಮೇಲೆ ಯಾವ ದೊಡ್ಡ ಪರಿಣಾಮವೂ ಬೀರುವುದಿಲ್ಲ. ಆದರೆ ನಾವು ನಂಬಿದವರಿಗಾಗಿ ಹಾಗೂ ನಮ್ಮನ್ನು ನಂಬಿದವರಿಗಾಗಿ ಬದುಕನ್ನು ಚಂದಗಾಣಿಸಿಕೊಳ್ಳಬೇಕಾದುದು ಅತ್ಯಗತ್ಯ.

ಗೂಟ ಹೊಡ್ಕಂಡು ಕುಂದ್ರಾಕ
ಯಾರು ಹುಟ್ಟಿ ಬಂದಿಲ್ಲ
ಮೀಸೆ ಹೊತ್ತು ಮೆರೆದೋರೆಲ್ಲ
ಮಣ್ಣಲ್ಲಿ ಮಣ್ಣಾದರೆಲ್ಲ

ಎನ್ನುತ್ತಾರೆ ಕವಿ. ಯಾವ ರಾಜನಾದರೂ ಸರಿ. ತನ್ನ ಅವಧಿ ಮುಗಿದ ನಂತರ ಬರಿಗೈಯ್ಯಲ್ಲಿ ಹೊರಡಲೇ ಬೇಕು. ಅದೆಷ್ಟು ಸಿರಿವಂತನಾದರೇನು? ಸಾವು ಕರೆದಾಗ ಹಿಡಿದು ನಿಲ್ಲಿಸುವ ತಾಕತ್ತು ಸಿದ್ಧಿಸಿಲ್ಲ. ಗುಟ ಹೊಡಕೊಂಡು ಕುಂದ್ರಕ ಎನ್ನುವ ಕವಿತೆ ಸಂಕಲನದಲ್ಲಿ ನನಗೆ ತುಂಬ ಇಷ್ಟವಾಯಿತು.

ಈ ಶತಮಾನದ ಬಹುದೊಡ್ಡ ರೋಗವಾದ ಕೊರೋನಾ ಇಡಿ ಜಗತ್ತನ್ನು ಎರಡು ವರ್ಷಗಳ ಕಾಲ ಬಾಧಿಸಿತು. ಒಬ್ಬರಿಗೊಬ್ಬರು ಮಾತನಾಡಲಾಗದ, ಸನಿಹ ನಿಲ್ಲಲಾಗದ, ಮೈ ಮುಟ್ಟಿ, ಅಪ್ಪಿ ಸಂತೈಸಲಾಗದ ಧಾರುಣ ಸ್ಥಿತಿಯನ್ನು ಮನುಕುಲದ ಮೇಲೆ ತಂದೆರಗಿತು. ಅಪ್ಪ ಸತ್ತರೆ ಮಕ್ಕೂ ಸನಿಹ ಬರದಂತಹ, ಮಗ ಸತ್ತರೆ ಹೆತ್ತ ತಾಯೂಯೂ ದೂರ ಉಳಿಯುವಂತಹ ಸನ್ನಿವೇಶ ನಿರ್ಮಾಣವಾಗಿ ಅರಾಜಕತೆ ತುಳುಕಿತ್ತು. ಆ ಕಾಲದ ಭೀಕರತೆಯನ್ನು ಕವಿ ರಮೇಶ ಗಬ್ಬೂರ್ ಹಿಡಿದಿಟ್ಟಿದ್ದಾರೆ.

ಸಂಕಲನವು ಭೀಮ ಚಿಂತನೆ ಎನ್ನುವ ತಲೆಬರಹದಡಿಯಲ್ಲಿ ಹತ್ತೊಂಬತ್ತು ಕವನಗಳನ್ನು, ಮಹಿಳಾ ಚಿಂತನೆ ಎಂಬ ಆಶಯದಡಿಯಲ್ಲಿ ಹನ್ನೆರಡು ಕವಿತೆಗಳನ್ನು, ಮಣ್ಣಿನ ಮಕ್ಕಳು ಎನ್ನುವ ವಿಭಾಗದಲ್ಲಿ ಇಪ್ಪತ್ತು ಕವನಗಳನ್ನು, ವೈಚಾರಿಕತೆಯ ಅಡಿಯಲ್ಲಿ ಇಪ್ಪತ್ತೈದು ಕವಿತೆಗಳನ್ನು ಹಾಗೂ ಕೊರೋನಾದ ಹೆಸರಿನಲ್ಲಿನಾಲ್ಕು ಕವಿತೆಗಳನ್ನು ಒಳಗೊಂಡು ಬಣ್ಣ ಬಣ್ಣದ ಹೂಗಳನ್ನು ಒಟ್ಟಿಗೆ ಸೇರಿಸಿ ಹೆಣೆದ ದಂಡೆಯಂತಿದೆ. ಇಲ್ಲಿನ ಎಲ್ಲಾ ವಿಭಾಗಗಳಡಿಯಲ್ಲಿ ಬರುವ ಕವಿತೆಗಳು ಕೇವಲ ಆಯಾ ವಿಭಾಗದಡಿ ಮಾತ್ರ ಹೊಂದಿಕೊಂಡಿವೆ ಎಂದು ಭಾವಿಸಬೇಕಾಗಿಲ್ಲ. ಭೀಮ ಚೀಂತನೆಯಲ್ಲಿ ಬಾಬಾ ಸಾಹೇಬರು ಮಹಿಳೆಯರಿಗಾಗಿ ಮಾಡಿದ ಹೋರಾಟದ ನಿರೂಪಣೆಗಳಿವೆ. ಹೀಗಾಗಿ ಅದು ಮಹಿಳಾ ಚಿಂತನೆಯ ಅಡಿಯಲ್ಲೂ ಸೇರಿಸಬಹುದು. ಭೀಮರಾವ್ ಅಂಬೇಡ್ಕರ್ ಎಂದರೆ ವೈಚಾರಿಕತೆಗೆ ಮತ್ತೊಂದು ಹೆಸರು. ಹೀಗಿರುವಾಗ ಅವರ ತತ್ವಗಳನ್ನು ಹೇಳುವಾಗ ಅದು ವೈಚಾರಿತೆ ವಿಭಾಗದಡಿಯಲ್ಲಿ ಸೇರಿಸಬೇಡ ಎಂದರೆ ಆದೀತೆ. ಹೀಗಾಗಿ ಇಲ್ಲಿನ ಕವಿತೆಗಳನ್ನು ಕೇವಲ ಹೊಂದಾಣಿಕೆಯ ದೃಷ್ಟಿಯಿಂದ ವಿಭಾಗಿಸಲಾಗಿದೆ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಸಂಕಲನವು ವಿಭಾಗಗಳ ಗೊಜಲಿಲ್ಲದೆ ಒಂದೇ ಹೇಣಿಗೆಯಂತೆ ಗೋಚರಿಸಬಲ್ಲದು.

ಹೋರಾಟದ ಹಾಡುಗಳ ದೃಷ್ಟಿಯಿಂದ ಇಲ್ಲಿಯ ಎಲ್ಲ ಕವಿತೆಗಳಿಗೆ ಒಂದು ಘನತೆ ದಕ್ಕಿದೆ. ಪ್ರತಿ ಕವಿತೆಯನ್ನೂ ಹಾಡಾಗಿಸುವ ಒಂದು ಚಂದದ ಬಳಗ ರಮೇಶ್ ಗಬ್ಬೂರ್‌ರವರ ಜೊತೆಗಿದೆ. ಆದರೆ ಹಾಡಿದಾಗ ಅತ್ಯದ್ಭುತ ಎನ್ನಿಸುವ ಸಾಲುಗಳು ನಾವಷ್ಟೇ ಓದಿಕೊಳ್ಳುವಾಗ ಹಲವಾರು ತೊಡಕುಗಳನ್ನು ಎದುರಿಗಿಡುತ್ತದೆ. ಸಾಹಿತ್ಯಿಕವಾಗಿ ತುಸು ಹಿನ್ನಡೆಗೆ ನೂಕುತ್ತದೆ. ಇದು ಹೋರಾಟದ ಹಾಡುಗಳ ಅತಿದೊಡ್ಡ ಮಿತಿ. ಆದರೆ ಕವಿ ಅತ್ಯುತ್ತಮ ಗಜಲ್‌ಕಾರರೂ ಆಗಿರುವುದರಿಂದ ಇಂತಹ ತೊಡಕುಗಳನ್ನು ಸುಲಭವಾಗಿ ಮೀರಿದ್ದಾರಾದರೂ ಅಲ್ಲಲ್ಲಿ ಅದು ತನ್ನಛಾಪನ್ನು ಒತ್ತಿದ್ದನ್ನು ಅಲ್ಲಗಳೆಯುವಂತಿಲ್ಲ. ಆದರೂ ಎಲ್ಲ ಮಿತಿ, ದೋಷಗಳನ್ನು ಜೊತೆಗಿಟ್ಟು ನೋಡಿದರೂ ಈ ಕವಿತೆಗಳು ತಮ್ಮ ಧ್ವನಿಪೂರ್ಣತೆಯಿಂದಾಗಿ ಗೆಲ್ಲುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.


-ಶ್ರೀದೇವಿ ಕೆರೆಮನೆ

ಈ ಅಂಕಣದ ಹಿಂದಿನ ಬರಹಗಳು:
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

MORE NEWS

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...

ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...

25-12-2024 ಬೆಂಗಳೂರು

"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...