Date: 01-12-2024
Location: ಬೆಂಗಳೂರು
ಬೆಂಗಳೂರು: ಹಾಡ್ಲಹಳ್ಳಿ ನಾಗರಾಜ್ ಅವರ ಆಪ್ತ ಬಳಗ ಮತ್ತು ಸಾಹಿತ್ಯಾಸಕ್ತರ ವತಿಯಿಂದ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರ ಅಭಿನಂದನಾ ಸಮಾರಂಭ ಹಾಗೂ ಹಾಡ್ಲಹಳ್ಳಿ ನಾಗರಾಜ್ ಅವರ ‘ನಿಲುವಂಗಿಯ ಕನಸು’ ಹಾಗೂ ‘ಮಲೆಯಾದ್ರಿಯ ಮಳೆಹಕ್ಕಿ’ ಮತ್ತು ದಯಾ ಗಂಗನಘಟ್ಟ ಸಂಪಾದಕತ್ವದ ‘ಕಾರೆಕಾಯ್ ಹಡ್ಲು’ ಕೃತಿಗಳ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು 2024 ಡಿ.01 ಭಾನುವಾರದಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು, "ಹಾಡ್ಲಹಳ್ಳಿ ಅವರು ಭಾಷೆ ಅಭಿವ್ಯಕ್ತಗೊಳ್ಳುವ ಅನೇಕ ಬಗೆಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದ ಅಪರೂಪದ ಲೇಖಕ. ಇವರ ವ್ಯಕ್ತಿತ್ವ ಕೂಡ ಬಹಳ ಸಜ್ಜನಿಕೆಯಿಂದ ಕೂಡಿದೆ. ಈ ಸಜ್ಜನಿಕೆಯೇ ಅವರನ್ನು ಮುಖ್ಯವಾಹಿನಿಗೆ ಕರೆತರಲು ತೊಡಕಾಗಿರಲೂ ಬಹುದು. ಹಾಡ್ಲಹಳ್ಳಿ ಅವರು ಭಿನ್ನವಾಗಿ ಕಾಣುವುದೇ ಅವರ ಸಾಹಿತ್ಯದ ಬಗೆಯಲ್ಲಿ. ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ ಆ ಎರಡು ಸಂಸ್ಕೃತಿಗಳು ಕೂಡ ಸಮ್ಮಿಶ್ರಗೊಂಡು, ಎರಡು ಸಂಸ್ಕೃತಿಗಳಿಂದ ಮೂರನೇ ಸಂಸ್ಕೃತಿಯೊಂದು ಸೃಷ್ಟಿಯಾಗುತ್ತದೆ. ಅಂತಹ ಮೂರನೇ ಸಂಸ್ಕೃತಿಯ ನೆಲೆಗಟ್ಟನ್ನು ನಾಗರಾಜ್ ತನ್ನ ಕತೆ, ಕಾದಂಬರಿಗಳಲ್ಲಿ ಹಿಡಿಯುವ ನಿರಂತರವಾದ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಇದೇ ಅವರ ವೈಶಿಷ್ಟ್ಯತೆ," ಎಂದು ಹೇಳಿದರು.
ಕೃತಿಗಳ ಕುರಿತು ಬೇಲೂರು ರಘುನಂದನ್ ಮಾತನಾಡಿ, "ಹಾಡ್ಲಹಳ್ಳಿ ಅವರ ಕೃತಿಗಳು ಮನುಷ್ಯನೊಂದಿಗೆ ಶುರುವಾಗಿ, ಮನುಷ್ಯನ ಮೂಲಕವೇ ಮುಗಿಯದೇ ಅದು ಪ್ರಕೃತಿಯೊಂದಿಗೆ ಲೀನವಾಗುತ್ತದೆ. ಅದೇ ಅವರ ಎಲ್ಲಾ ಬರಹಗಳ ಬಹಳ ದೊಡ್ಡ ತಾಕತ್ತು. ಇನ್ನು ತನ್ನೊಳಗೆ ಇರುವ ಲೇಖಕ ಅಥವಾ ಕಲಾವಿದ, ಸಾಂಸ್ಕೃತಿಕ ವ್ಯಕ್ತಿತ್ವಗಳನ್ನು ಪಾತ್ರಗಳ ಮೂಲಕ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಒಂದೊಂದು ಪಾತ್ರಗಳನ್ನು ಕಂಡಾಗಲೂ ದಲಿತ ಬಂಡಾಯ ಚಳುವಳಿ, ಪ್ರಕೃತಿಯ ಅಂಶವನನ್ನಿಟ್ಟುಕೊಂಡು ನವೋದಯವನ್ನು ಬಹಳ ಸುಂದರವಾಗಿ ಕಟ್ಟಿಕೊಡಲಾಗಿದೆ. ರೈತ ಚಳುವಳಿ, ಪ್ರಗತಿಶೀಲ, ಮೌಢ್ಯ ವಿರೋಧಿ ಚಿಂತನೆಗಳು ಸೇರಿದಂತೆ ಸ್ತ್ರೀವಾದವು ಕೂಡ ಇಲ್ಲಿ ಭಿನ್ನವಾದ ಆಲೋಚನೆಯ ಲಹರಿಯನ್ನು ಪಡೆದುಕೊಂಡಿದೆ. ಓದುಗರು ಗುಂಪಿನ ಒತ್ತಡಕ್ಕೆ ಕಟ್ಟುಬೀಳದೆ, ಒಟ್ಟಾರೆಯಾಗಿ ಸಿದ್ಧಾಂತಕ್ಕೆ ಅಂಟುಕೊಳ್ಳದೇ, ಆ ಸಿದ್ಧಾಂತಗಳನ್ನು ಕಟ್ಟಿಕೊಳ್ಳುವ ಮಹತ್ವದ ವ್ಯಾಖ್ಯಾನವನ್ನು ಮಾಡುವಂತಹ ಚಿಂತನಾ ಕ್ರಮಗಳು ಇವರ ಕೃತಿಗಳಲ್ಲಿವೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ, ಹೋರಾಟಗಾರ, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರು ಅಭಿನಂದನಾ ನುಡಿಗಳನ್ನಾಡಿದರು.
ಸಮಾರಂಭದಲ್ಲಿ ಹಲವಾರು ಗಣ್ಯರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರದಲ್ಲಿ ವೇದಿಕೆಯಲ್ಲಿ ಡಾ. ಬೇಲೂರು ರಘುನಂದನ್ ಅವರ ನಿರ್ದೇಶನದಲ್ಲಿ "ಬೆಂಕಿ ರೂಟು" ನಾಟಕವು ಮೂಡಿ ಬಂದಿತು.
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ ಪ್ರಕಟವಾಗಿದ್ದು, ಒಟ್ಟು ನಾಲ್ಕುವರ್ಷಗಳ ಪ್ರ...
ಬೆಂಗಳೂರು: ಲೇಖಕ, ಅನುವಾದಕ ಪ್ರಮೋದ ಮುತಾಲಿಕ್ ಅವರು ಇಂದು(2024, ಡಿ.02) ಇಹಲೋಕವನ್ನು ತ್ಯಜಿಸಿದ್ದಾರೆ. ಪ್ರಮೋದ ಮ...
ದಾವಣಗೆರೆ: `ವಿಶ್ವಕನ್ನಡ ಸಮ್ಮೇಳನವು ಮಧ್ಯ ಕರ್ನಾಟಕದಲ್ಲಿ ದಶಕದ ಹಿಂದೆಯೇ ನಡೆಯಬೇಕಿತ್ತು. ಆದರೆ ಹಿಂದಿನ ಸರ್ಕಾರಗಳು ಈ...
©2024 Book Brahma Private Limited.