"ತಂದೆ ತಾಯಿ ಇಲ್ಲದ, ಬಂಧುಗಳ ಆಶ್ರಯದಲ್ಲಿ ಬೆಳೆದ ಜಯಸಿಂಹ ಮದುವೆಗೆ ನೆಂಟರನ್ನು ವಧುವಿನ ಊರಿಗೆ ಕರೆದೋಯ್ಯಲು ಯಾರಿಗೂ ತಿಳಿಸದೇ ಬಸ್ಸಿನ ವ್ಯವಸ್ಥೆ ಮಾಡಲು ಒಂದು ಕ್ಷಣ ಹೋಗಿ ಬರುವುದರಲ್ಲಿ ಎಲ್ಲರೂ ಅವನನ್ನು ಬಿಟ್ಟು ಬಸ್ಸಲ್ಲಿ ಹೊರಟುಹೋಗುತ್ತಾರೆ," ಎನ್ನುತ್ತಾರೆ ವೀಣಾ ಪೂಣಚ. ಅವರು ವಾಣಿ ಅವರ ‘ಹ್ಯಾಪಿ ಬರ್ತ್ ಡೇ’ ಕೃತಿ ಕುರಿತು ಬರೆದ ಅನಿಸಿಕೆ.
ಪರಿಚಯ
ಇದರಲ್ಲಿ ಒಟ್ಟೂ ಹದಿನೇಳು ಸಣ್ಣ ಕಥೆಗಳಿವೆ. ಇದರಲ್ಲಿ ಇರುವ ಕಥೆಗಳು ಮಾಸ ಪತ್ರಿಕೆಗಳು, ವಿಶೇಷಾಂಕಗಳಲ್ಲಿ, ಹಾಗೂ ಬಾನುಲಿಯಲ್ಲಿ ಪ್ರಸಾರವಾಗಿವೆ. ಎಲ್ಲಾ ಕಥೆಗಳು ಚೆನ್ನಾಗಿವೆ. ಕೆಲವನ್ನು ಪರಿಚಯಿಸುವೆ.
ಕೊನೆಯಕಥೆ,
'ಹಬ್ಬದ ಊಟ' ಐರೋಪ್ಯ ಕಥೆಯೊಂದರ ಆಧಾರ. ತುಸು ಶೈಲಿಯೂ ಆಂಗ್ಲ ಕಥೆಯಂತೆ ಬರೆದಿದ್ದಾರೆ. ಮೊದಲು ಇದನ್ನೇ ಪರಿಚಯಿಸುವೆ. ನೆರೆಯಲ್ಲಿ ವಾಸವಾಗಿರುವ ರಾಮಣ್ಣ, ಸೀತಮ್ಮ ವೃದ್ಧರು. ರಾಮಣ್ಣ ಎಪ್ಪತೈದು ವರ್ಷಗಳಗಿದ್ದರೂ ಚುರುಕಿನ ಮನುಷ್ಯ. ಸೀತಾ ದೈಹಿಕವಾಗಿ ಕುಗ್ಗಿದವಳು. ಲಕ್ಷಮ್ಮ ಅವರ ಮನೆಯ ಕೆಲಸದವಳು. ರಾಮಣ್ಣ ತಮ್ಮ ಮನೆಯ ಆಂತರಿಕ ವಿಚಾರ ಯಾರಿಗೂ ತಿಳಿಯದಂತೆ ಜಾಗ್ರತೆ ವಹಿಸಿದ್ದನು. ಒಂದು ದಿನ ಸೀತಮ್ಮ ಲಕ್ಷಮ್ಮನನ್ನು ನಾಳೆ ಯಜಮಾನರ ಹುಟ್ಟುಹಬ್ಬ ಮತ್ತು ಮದುವೆಯ ಸುವರ್ಣ ಮಹೋತ್ಸವ, ಸಾಯಂಕಾಲದವರೆಗೂ ಇದ್ದು ಅಡುಗೆಗೆ ಸಹಾಯ ಮಾಡಲು ಹೇಳುತ್ತಾಳೆ. ರಾಮಣ್ಣ ಒಂದು ಅಚ್ಚುಕಟ್ಟಾದ ಊಟ, ಕೇಸರೀ ಭಾತು, ಖೀರು, ಬೋಂಡಾ ಮಾಡಲು ಹೇಳುತ್ತಾನೆ. ಸೀತಮ್ಮ ಮಾಡಿದ್ದಾದರೂ ಏನು? ಹಾಗೇ ಮಾಡಲು ಕಾರಣವೇನು? ನಂತರ ಅವರಲ್ಲಿ ಬದಲಾವಣೆಯಾಯಿತೇ? ಓದಿ ತಿಳಿಯಬೇಕು.
ಮೊದಲ ಕಥೆ ಹ್ಯಾಪಿ ಬರ್ತ್ ಡೇ
ತುಂಬು ಸಂಸಾರದ ಮನೆ ರತ್ನಾ ಮತ್ತು ರಾಮಕೃಷ್ಣರದು. ಇಬ್ಬರು ಗಂಡು ಮಕ್ಕಳು, ಒಬ್ಬ ಸೊಸೆ, ಮೊಮ್ಮಗಳು, ಮತ್ತು ರಾಮಕೃಷ್ಣನ ತಂಗಿಯ ಮಕ್ಕಳು ಇಬ್ಬರು. ರತ್ನಾಳ ಹುಟ್ಟುಹಬ್ಬದ ಎರಡು ದಿನ ಮೊದಲು ರಾಮಕೃಷ್ಣ ಆಫೀಸಿನ ಕೆಲಸ ಎಂದು ಟೂರ್ ಹೋಗುತ್ತಾನೆ. ಅವಳ ಹುಟ್ಟುಹಬ್ಬಕ್ಕೆ ಸಂಭ್ರಮಿಸುವುದು ಅವನೊಬ್ಬನೇ. ಎಲ್ಲರ ಹುಟ್ಟುಹಬ್ಬ ಅದ್ದೂರಿಯಾಗಿ ಮಾಡುವ ರತ್ನಾಳ ಹುಟ್ಟುಹಬ್ಬ ಯಾರಿಗೂ ನೆನಪಿಲ್ಲ. ಶಾಲೆಯ,' ಸಿಸ್ಟರ್ ' ಹುಟ್ಟುಹಬ್ಬಕ್ಕೆ ಹೂವು, ಹಣ್ಣು ಖುಷಿಯಿಂದ ಮೊಮ್ಮಗಳು ತೆಗೆದುಕೊಂಡು ಹೋದಾಗ ಮನಸು ಮುದುಡಿ ಅದೇ ಗುಂಗಿನಲ್ಲಿ ಇರುವ ರತ್ನಾಳ ಮನಸು ಒಂದೇ ಒಂದು ಚಿಕ್ಕ ವಸ್ತುವಿನಿಂದ ಅರಳುತ್ತದೆ.
ಅಳಿಯ ದೇವರು
ತಂದೆ ತಾಯಿ ಇಲ್ಲದ, ಬಂಧುಗಳ ಆಶ್ರಯದಲ್ಲಿ ಬೆಳೆದ ಜಯಸಿಂಹ ಮದುವೆಗೆ ನೆಂಟರನ್ನು ವಧುವಿನ ಊರಿಗೆ ಕರೆದೋಯ್ಯಲು ಯಾರಿಗೂ ತಿಳಿಸದೇ ಬಸ್ಸಿನ ವ್ಯವಸ್ಥೆ ಮಾಡಲು ಒಂದು ಕ್ಷಣ ಹೋಗಿ ಬರುವುದರಲ್ಲಿ ಎಲ್ಲರೂ ಅವನನ್ನು ಬಿಟ್ಟು ಬಸ್ಸಲ್ಲಿ ಹೊರಟುಹೋಗುತ್ತಾರೆ. ಮಂಕಾದ ಜಯಸಿಂಹನಿಗೆ ತಾನು ಅನಾಥ ಅನ್ನಿಸುತ್ತೆ. ಕೂಡಲೇ ತನ್ನ ಕೈ ಹಿಡಿವ ಹುಡುಗಿಯ ನೆನಪಾಗಿ ಖುಷಿಯಾಗುತ್ತಾನೆ.
ನಾಗಪಂಚಮಿ
ಅಕ್ಕ ಸೀತಾಳ ಮನೆಗೆ ಹಬ್ಬಕ್ಕೆ ಬಂದಿರುವ ಸುಂದರ ಆಧುನಿಕ ಮನೋಭಾವದವನು. ಮೂಢನಂಬಿಕೆ, ಅರ್ಥವಿಲ್ಲದೇ ಮಾಡುವ ಆಚರಣೆಗಳು ಅವನಿಗೆ ಇಷ್ಟವಿಲ್ಲ. ಅಕ್ಕನ ಮನೆಯಲ್ಲಿ ನಾಗ ಪಂಚಮಿ ಹಬ್ಬದ ವೈಭವ , ಅವರ ಉತ್ಸಾಹ, ಸಡಗರದ ಆಚರಣೆ ಹಾಲು ಎರೆಯುವುದು ಮುಜುಗರ ತರುತ್ತದೆ. ಹಬ್ಬ ಮುಗಿದ ಮೇಲೆ ರಾತ್ರಿ ದೇವರ ಕೋಣೆಯೊಳಗೆ ಹಾವು ಬರುತ್ತದೆ. ಮುಂದೆ ಏನಾಯಿತು? ಮನೆಯವರ ಮನಸ್ಥಿತಿ ಏನು ನೀವು ಓದಿ.
ಅಬ್ಯಾಗತ
ಹೊಸದಾಗಿ ಮದುವೆಯಾದ ಮೈಸೂರಿನಲ್ಲಿ ಪುಟ್ಟ ಮನೆಯಲ್ಲಿ ಬಾಡಿಗೆಗೆ ಇರುವ ರಾಜ ಗೋಪಾಲ ಹಾಗೂ ಸರಸ್ವತಿಯ ಮನೆಗೆ ರಾಜಗೋಪಾಲನ ತಂದೆಯ ಬಾಲ್ಯದ ಗೆಳೆಯ ಮೂರ್ತಿ ಬರುತ್ತಾರೆ. ಪುಟ್ಟ ಮನೆ, ಚಿಕ್ಕ ಸಂಬಳ ಸುಧಾರಿಸುವ ಚಿಂತೆ ಇಬ್ಬರಿಗೂ. ಮೂರ್ತಿಯವರನ್ನು ಸುತ್ತಾಡಿಸಿಕೊಂಡು ಬರಲು ಕರೆದುಕೊಂಡು ಹೋದರು. ಬಂದವರು ಯಾವ ಮೂರ್ತಿ? ಓದಿ ನೋಡಿ.
ಆ ಕಣ್ಣುಗಳು
ಬಹಳ ವರ್ಷಗಳ ನಂತರ ತವರಿನ ಬಂಧುಗಳು ಮರೆತು ಹೋಗುವಂತಾದಾಗ, ಸೋದರ ಮಾವನ ಮನೆಯ ಗ್ರಹಪ್ರವೇಶಕ್ಕೆ ಅಹ್ವಾನ ಬಂದಾಗ ಖುಷಿಯಿಂದ ಹೋದವಳಿಗೆ ಅಲ್ಲಿ ಸಿಕ್ಕ ಸುಂದರಮ್ಮ ಮಾತನಾಡಿಸದೆ, ಗುರುತು ಇಲ್ಲದಂತೆ ಹೋದಾಗ ಬೇಸರವಾಗುತ್ತದೆ. ಒಂದು ಕಾಲದಲ್ಲಿ ನಕ್ಕರೆ ಹೊಳಪು ಚಿಮ್ಮತ್ತಿದ್ದ ಕಣ್ಣುಗಳು ಈಗ ಒಂದು ಗಳಿಗೆ ಸುಮ್ಮನಿರದೆ ಅತ್ತ ಇತ್ತ ತಿರುಗುವ ಸುಂದರಮ್ಮನ ಕಣ್ಣುಗಳು ಹೇಳುವ ಕಥೆ ಏನು? ಅವಳ ಬಾಳಿನಲ್ಲಿ ನಡೆದ ಕಥೆ ಏನು?
ನೆರೆ ಹೊರೆ
ವಠಾರದಲ್ಲಿ ವಾಸವಾಗಿದ್ದ ರಾಗಿಣಿ, ಮನೋಹರ, ಹೊಸ ಬಡಾವಣೆಯಲ್ಲಿ ಸ್ವಂತ ಮನೆ ಖರೀದಿಸಿ ಹೋಗುತ್ತಾರೆ. ವಠಾರದ ಮನೆ, ನೆರೆಯವರು ಯಾವಾಗಲೂ ಕಿರಿಕಿರಿ, ಸಂಸಾರದ ಒಡುಕು, ಆಡುವ ಮಾತು ಬೇರೆಯವರಿಗೆ ತಿಳಿಯುವುದು ಎಂದು ಬೇಸರ ಪಡುತ್ತಿದ್ದ ರಾಗಿಣಿಗೆ ದೂರ ಮನೆ ಮಾಡಿ ಬಂದ ಮೇಲೆ ವಠಾರದ ಮನೆಯೇ ಚೆನ್ನಾಗಿತ್ತು ಅನ್ನಿಸುತ್ತದೆ.
ಗೋವಿಂದೋ ಗೋವಿಂದಾ
ಈ ಕಥೆಯಲ್ಲಿ ಗೋವಿಂದ ಅನ್ನುವ ದಡ್ಡ ಕೆಲಸದ ಹುಡುಗ ಮಾಡುವ ಅವಾಂತರಗಳಿವೆ.
ಅಂತರ
ಪಟ್ಟಣದಲ್ಲಿ ಹುಟ್ಟಿ ಬೆಳೆದ ಪದ್ಮಳನ್ನು, ಡಾಕ್ಟರ್ ಆಗಿರುವ ಮಂಜುನಾಥ ಮೆಚ್ಚಿ ಮದುವೆಯಾಗಿರುತ್ತಾನೆ. ಅವಳನ್ನು ಮೊದಲಬಾರಿ ತನ್ನ ಹಳ್ಳಿಯಲ್ಲಿ ಇರುವ ಅಜ್ಜಿಗೆ ತೋರಿಸಲು ಕರೆದೋಯ್ಯುತ್ತಾನೆ. ಅವನ ಆಸೆ ಏನು? ಹಳ್ಳಿಯನ್ನು ನೋಡಿಯೇ ಇರದ ಪದ್ಮಳ ಪ್ರತಿಕ್ರಿಯೆ ಏನು?
ಸೆಳೆತ
ಶೀಲಾ, ವಿಮಲಾ ಗೆಳತಿಯರು. ವಿಮಲಾಳ ತಾಯಿ ಶೀಲಾಳ ತಾಯಿಯಂತೆ ಮಕ್ಕಳಿಗೆ ತಿಂಡಿ ಮಾಡುತ್ತಿರಲಿಲ್ಲ. ಶೀಲಾ ತಿಂಡಿ ಕದ್ದು ಮುಚ್ಚಿ ವಿಮಲಾಳಿಗೆ ಕೊಡುವುದಿತ್ತು. ವಿಮಲಾಳ ತಂದೆಗೆ ವರ್ಗವಾಗಿ ಬೇರೆ ಊರಿಗೆ ಹೋಗುತ್ತಾರೆ. ಶೀಲಾಳ ಮಾವನ ಮಗ ರಾಘವ ಓದಲು ಇವರ ಮನೆಗೆ ಬರುತ್ತಾನೆ. ಶೀಲಾಳನ್ನು ರಾಘವನಿಗೆ ಕೊಡುವ ಆಸೆ ಶೀಲಾಳ ತಾಯಿಗೆ. ಕಾಲೇಜು ಮುಗಿದು ಊರಿಗೆ ಹೋದ ರಾಘವ ಹಾಗೂ ಅವನ ಹೆತ್ತವರ ಏನೂ ಸುದ್ಧಿ ಇರುವುದಿಲ್ಲ. ನಂತರ ರಾಘವನ ಮದುವೆಯ ಸುದ್ಧಿ ಬರುತ್ತದೆ. ಅವನ ಮದುವೆ ಯಾರ ಜೊತೆ ಆಯಿತು? ಸಂದರ್ಭವಾದರೂ ಯಾವುದು?
"ಕಣ್ಸಣ್ಣೆಗೆ ದಕ್ಕುವ ಎಲ್ಲಾ ಚೆಲುವೆಯರನ್ನು ಆ ವಾಚಿನ ಬಲದಿಂದ ಒಲಿಸಿಕೊಂಡು ಕಾಣದ ಯಾವುದೋ ಲೋಕದಲ್ಲಿ ಸುಖದಿಂದ ವಿ...
"ಅಂತಿಮವಾಗಿ ಜೊತೆಗೆ ಯಾವುದನ್ನೂ ತೆಗೆದುಕೊಂಡು ಹೋಗುವ ಆಯ್ಕೆ ಆತನಿಗಿಲ್ಲ. ಬಹುಶಃ ಇದು ಆಸ್ತಿ ಅಥವಾ ಸಂಪತ್ತಿನ ದೃ...
ಬೆಂಗಳೂರು: ರಾಜ್ಯ ಸರ್ಕಾರವು ಕನ್ನಡ ಸಂಸ್ಕೃತಿ ಇಲಾಖೆಗೆ ಸಾವಿರ ಕೋಟಿ ರೂ. ಅನುದಾನ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ...
©2025 Book Brahma Private Limited.