ತೀವ್ರವಾಗಿ ಓದಿಸಿಕೊಂಡು ಹೋಗುವ ಕಾದಂಬರಿಯಿದು


"ಕಣ್ಸಣ್ಣೆಗೆ ದಕ್ಕುವ ಎಲ್ಲಾ ಚೆಲುವೆಯರನ್ನು ಆ ವಾಚಿನ ಬಲದಿಂದ ಒಲಿಸಿಕೊಂಡು ಕಾಣದ ಯಾವುದೋ ಲೋಕದಲ್ಲಿ ಸುಖದಿಂದ ವಿಹರಿಸುತ್ತಿದ್ದ ದಿನಗಳವು. ಇದೆಲ್ಲಾ ಮತ್ತೆ ನೆನಪಾಗಲು ಕಾರಣ ಇತ್ತೀಚೆಗೆ ಓದಿದ ಬಿ. ಆರ್. ಎಲ್ ಅವರ ಎಂಥಾ ಮೋಜಿನ ಕುದುರಿ ಅನ್ನುವ ಮಿನಿ ಕಾದಂಬರಿ," ಎನ್ನುತ್ತಾರೆ ರವೀಂದ್ರ ನಾಯಕ್ ಸಣ್ಣಕಿಬೆಟ್ಟು. ಅವರು ಬಿ.ಆರ್. ಲಕ್ಷ್ಮಣರಾವ್ ಅವರ ‘ಎಂಥಾ ಮೋಜಿನ ಕುದುರಿ!’ ಕೃತಿ ಕುರಿತು ಬರೆದ ಅನಿಸಿಕೆ.

ಕಾಣದ ಲೋಕದ ಸೊಗಸನ್ನು ಒಮ್ಮೆ ನಿರಾಂತಂಕವಾಗಿ ಸುತ್ತಿ ಬರಬೇಕೆನ್ನುವ ಬಯಕೆ ಒಂದಲ್ಲ ಒಂದು ಹಂತದಲ್ಲಿ ಕನಸು ಕಾಣುವ ಎಲ್ಲರಿಗೂ ಅನ್ನಿಸುವುದು ಸಹಜ. ಆಗಷ್ಟೇ ಯೌವನ ಕಾಲಿಡುತ್ತಿದ್ದ ಕಾಲೇಜು ದಿನಗಳಲ್ಲಿದ್ದಾಗ ಮಿಸ್ಟರ್ ಇಂಡಿಯಾ ಚಿತ್ರ ನೋಡಿದ್ದೆ. ಆ ನಂತರ ಅದೆಷ್ಟು ದಿನಗಳ ತನಕ ಅದರ ಗುಂಗು ಹತ್ತಿಕೊಂಡಿತ್ತು ಅಂದರೆ ಹಗಲುಗನಸುಗಳಲ್ಲೇ ಮುಳುಗಿರುವಷ್ಟು. ಅಂತಹ ಒಂದು ವಾಚು ನನ್ನ ಕೈಗೂ ಬಂದುಬಿಟ್ಟರೆ ಏನೇನೆಲ್ಲಾ ಮಾಡಬಹುದು ಅನ್ನುವ ಪೋಲಿ ಯೋಚನೆಗಳಲ್ಲಿಯೇ ಆ ದಿನಗಳು ಅತ್ಯಂತ ಉತ್ಕಟತೆಯಿಂದ ಕಳೆದುಹೋಗುತ್ತಿತ್ತು. ಕಣ್ಸಣ್ಣೆಗೆ ದಕ್ಕುವ ಎಲ್ಲಾ ಚೆಲುವೆಯರನ್ನು ಆ ವಾಚಿನ ಬಲದಿಂದ ಒಲಿಸಿಕೊಂಡು ಕಾಣದ ಯಾವುದೋ ಲೋಕದಲ್ಲಿ ಸುಖದಿಂದ ವಿಹರಿಸುತ್ತಿದ್ದ ದಿನಗಳವು. ಇದೆಲ್ಲಾ ಮತ್ತೆ ನೆನಪಾಗಲು ಕಾರಣ ಇತ್ತೀಚೆಗೆ ಓದಿದ ಬಿ. ಆರ್. ಎಲ್ ಅವರ ಎಂಥಾ ಮೋಜಿನ ಕುದುರಿ ಅನ್ನುವ ಮಿನಿ ಕಾದಂಬರಿ.

ಪತ್ರಕರ್ತ ಮತ್ತು ಪೋಲಿ ಕವಿ ಅನ್ನುವ ಬಿರುದನ್ನೂ ಹೊಂದಿರುವ ದ್ಯುತಿ ವಿಜ್ಞಾನಿಯೊಬ್ಬರು ಟೈಮ್ ಟ್ರಾವೆಲ್ ಮೆಷಿನ್ ನನ್ನು ಕಂಡುಹಿಡಿದಿದ್ದಾರೆ ಅನ್ನುವ ನ್ಯೂಸ್ ಸಿಕ್ಕಿ ಕುತೂಹಲಕ್ಕೆ ಬಿದ್ದು ಅದರ ಕುರಿತಾಗಿ ವರದಿ ಮಾಡಲು ಅವರ ಮನೆಗೆ ಹೋಗುತ್ತಾರೆ. ಅಲ್ಲಿ ವಿಜ್ಞಾನಿಯ ಮಗಳಾದ ಮಿನಿಯ ಪರಿಚಯವಾಗಿ ಪ್ರೇಮದಲ್ಲಿ ಬೀಳಲು ಮತ್ತು ಬೀಳಿಸಿಕೊಳ್ಳಲು ಹೆಚ್ಚು ಸಮಯವನ್ನು ವ್ಯಯಿಸುವುದಿಲ್ಲ. ವಿಜ್ಞಾನಿಯಿಂದ ಟೈಮ್ ಮೆಷಿನ್ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದರೂ ಪ್ರೇಯಸಿಯಿಂದ ಅದನ್ನು ತಲುಪಿ ಪರೀಕ್ಷಿಸುವ ಕುತೂಹಲಕ್ಕೆ ಅದರ ಒಳಗಡೆಯೇ ಸಿಲುಕಿಕೊಳ್ಳುತ್ತಾರೆ. ನಂತರ ನಡೆಯುವುದೆಲ್ಲವೂ ರೋಚಕ ಕಥಾನಕ. ಟೈಮ್ ಮೆಷಿನ್ ಮೂಲಕ ಬೇರೆ ಬೇರೆ ಕಾಲಮಾನಕ್ಕೆ ಜಿಗಿಯುವ ದ್ಯುತಿಯ ಎದುರು ತೆರೆದುಕೊಂಡದ್ದು ಸುಂದರಿಯರ ಜೊತೆಗೆ ಕೂಡುವ ಅವಕಾಶಗಳೇ.

ಇದು ಹೇಳಿಕೇಳಿ ಟೈಮ್ ಮೆಷಿನ್ ಜೊತೆಗಿನ ಪ್ರಯಾಣವಾದ್ದರಿಂದಲೋ ಏನೋ ಕತೆಯ ಹೆಣಿಗೆ ಬಹಳ ಚುರುಕಾಗಿದೆ. ತುಂಟ ಕವಿ ಬಿ ಆರ್ ಎಲ್ ನಮ್ಮನ್ನು ಶೃಂಗಾರದ ಉತ್ಕಟತೆಯ ಎಲ್ಲಾ ಸಾಧ್ಯತೆಗಳ ದರ್ಶನ ಮಾಡಿಸುತ್ತಾರೆ. ತಮ್ಮ ಅತ್ಯಂತ ಲವಲವಿಕೆಯ ಭಾಷೆಯಲ್ಲಿ ಕಟ್ಟಿಕೊಟ್ಟ ಹಸಿಬಿಸಿ ದೃಶ್ಯಗಳನ್ನು ನಮ್ಮ ಕಣ್ಮುಂದೆ ತಂದು ಮೈಮನಗಳಿಗೆ ಬಿಸಿಯೇರಿಸುತ್ತಾರೆ. ಅದರೆ ಎಲ್ಲಿಯೂ ಆಶ್ಲೀಲತೆಯ ಕಡೆಗೆ ವಾಲದೇ ಶೃಂಗಾರದ ಉತ್ಕಟತೆಯನ್ನು ಅದ್ಭುತವಾಗಿ ಸಾಧಿಸಿದ್ದಾರೆ ಮತ್ತು ತಾನು ತುಂಟ ಪೋಲಿ ಕವಿ ಯಾಕೆ ಅನ್ನುವುದನ್ನು ಪ್ರತೀ ಪುಟಗಳಲ್ಲೂ ಓದುಗರಿಗೆ ಕಾಣಿಸಿದ್ದಾರೆ.

“Virginity is not a dignity; it is just lack of opportunity” ಅನ್ನುವ ಮಾತು ನಮ್ಮ ಬ್ಯಾಚುಲರ್ ವಲಯದಲ್ಲಿ ಮತ್ತೆ ಮತ್ತೆ ಕೇಳಿ ಬರುವ ಘೋಷವಾಕ್ಯ. ಆದರೆ ಇಲ್ಲಿ ದ್ಯುತಿ ಬ್ಯಾಚುಲರ್ ಆದರೂ ಮಿನಿಯ ಪ್ರೀತಿಯಲ್ಲಿ ಕಟ್ಟುಬಿದ್ದು ತನ್ನ ಶೀಲವನ್ನು ಕಾಪಾಡಿಕೊಳ್ಳಬೇಕು ಅನ್ನುವ ಪ್ರತಿಜ್ಞಾಬದ್ದ ಯುವಕ. ಟೈಮ್ ಮೆಷಿನ್ ನ ಪ್ರತೀ ಪ್ರಯಾಣದಲ್ಲಿ ಅವನಿಗೆ ಪುರಾಣದ ಅಹಲ್ಯೆಯಿಂದ ಹಿಡಿದು ಇಪ್ಪತ್ತೊಂದನೇ ಶತಮಾನದ ಅಧುನಿಕ ಯುವತಿಯ ಜೊತೆಗಿನ ಮುಖಾಮುಖಿಯಲ್ಲಿ ಪ್ರಣಯದ ಉತ್ತುಂಗವನ್ನು ತಲುಪುವ ಎಲ್ಲಾ ಅವಕಾಶಗಳು ಇದ್ದಾಗಲೂ ತನ್ನ ನಿಷ್ಟೆಯ ಕಾರಣಕ್ಕಾಗಿ ತನ್ನ ಪ್ರೇಯಸಿ ಮಿನಿಯನ್ನು ನೆನಪಿಸಿಕೊಳ್ಳುವುದು ಜಾಲಿಬಾರಿನ ಗೋಪಿಯ ಪ್ರಸಂಗವನ್ನು ನೆನಪಿಸುತ್ತದೆ. ಕ್ಯಾಬರೆ ನೋಡಲು ಹೋದ ಗೋಪಿಗೆ ಇಂತಹ ಪ್ರಸಂಗ ಎದುರಾದಾಗ ಹೆಂಡತಿ ವೆಂಕಟಸುಬ್ಬಿಯ ನೆನಪು ಉಬ್ಬಿ ಬರುತ್ತದೆ.ಪ್ರೇಮ ಕಾಮ ದ್ವಂದ್ವಗಳಲ್ಲಿ ಬಯಕೆ ಮತ್ತು ಸಂಸಾರ ನಿಷ್ಟೆಯ ನಡುವೆ ಮನಸ್ಸು ತೂಗುಯ್ಯಾಲೆಯಾಡುತ್ತದೆ. ಇಂತಹ ಸನ್ನಿವೇಶದಲ್ಲಿ ಸಿಲುಕಿಕೊಳ್ಳುವ ಎಲ್ಲಾ ಸಂಸಾರಸ್ಥ ಗಂಡಸರ ಪ್ರತಿನಿಧಿಯಾಗಿ ಇಲ್ಲಿ ಗೋಪಿ ಕಾಣಿಸಿಕೊಳ್ಳುತ್ತಾರೆ. ಕವಿತೆಯ ಕೊನೆಯ ಸಾಲುಗಳು ಈ ಭಾವವನ್ನು ಸಶಕ್ತವಾಗಿ ಕಟ್ಟಿಕೊಡುತ್ತವೆ.

“ಕಟ್ಟಕಡೆಯ ತುಟ್ಟತುದಿಯ ಶಿಖರ ನೋಟದಲ್ಲಿ
ನಡುವಿನ ಗಡಿ ಮೀರಿ ಮಾನ ಜಾರುವಷ್ಟರಲ್ಲಿ
ಹಾ ವೆಂಕಟಸುಬ್ಬಿ ಹೆಂಡ್ತಿ ನೆನ್ಪು ದಬ್ಬಿ
ಗಾಂಡಲೀನಳ ಪಾದಪದ್ಮಕಡ್ಡ ಬಿದ್ದನು
ಪರನಾರಿ ಸಹೋದರನು ಕಾಮ ಗೆದ್ದನು”

ಇಕ್ಕಟ್ಟಿನಿಂದ ಪಾರೆದೆ ಅನ್ನುವಷ್ಟರಲ್ಲಿಯೇ ಮತ್ತೊಂದು ಪ್ರಪಂಚಕ್ಕೆ ಕಾಲಿಟ್ಟು ಮತ್ತೆ ಅಂತಹುದೇ ಇನ್ನೊಂದು ಸನ್ನಿವೇಶ!. ತೀವ್ರವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿ ನಿಜಕ್ಕೂ ಒಂದು ಮೋಜಿನ ಕುದುರಿಯೇ ಸೈ. ಬದುಕಿಗೆ ಉಲ್ಲಾಸವನ್ನು ಕೊಡುವ ಒಂದು ಪೆಗ್ ವಿಸ್ಕಿಯ ಹಾಗೆಯೇ ಈ ಮೋಜಿನ ಕುದುರಿಯ ಸವಾರಿ ಕೂಡಾ ಜೀವನೋತ್ಸಾಹವನ್ನು ತುಂಬಬಲ್ಲುದು. ಥೇಟ್ ಬಿ ಆರ್ ಎಲ್ ಅವರ ಸ್ನೇಹದ ಹಾಗೆಯೇ!

 

MORE FEATURES

ನಿರ್ಮಲ ಪ್ರೇಮ ಮತ್ತು ಪ್ರಾಮಾಣಿಕ ಕರ್ತವ್ಯ ನಿಷ್ಠೆ ಅಂತಿಮವಾಗಿ ಗೆಲ್ಲುತ್ತವೆ

03-05-2025 ಬೆಂಗಳೂರು

“ಇಡೀ ಬಾಳೆ ಅದೃಷ್ಟ ರೇಖೆಯ ಕೈಗೊಂಬೆ ಎಂದು ಸ್ಪಷ್ಟಪಡಿಸುವುದು ಲೇಖಕರ ಇರಾದೆ ಇದ್ದಂತಿದೆ. ಇದು ಕೊನೆಯ ಕಥೆಯಲ್ಲಿಯ...

ಏಕತಾನತೆಯೆಂಬ ಸೊಬಗು

03-05-2025 ಬೆಂಗಳೂರು

“ಈ ಕಾದಂಬರಿಯನ್ನು ಬರೆಯಲು ಕನಿಷ್ಠವೆಂದರೂ ಒಂದೂವರೆ ವರ್ಷ ತೆಗೆದುಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ಅಧ್ಯಯನ ಮಾ...

ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ

03-05-2025 ಬೆಂಗಳೂರು

“ಕೊಡಗಿನ ಪ್ರಕೃತಿ ಹಾಗೂ ಸಂಸ್ಕೃತಿಗಳನ್ನು ಬಣ್ಣಿಸಿದ ಈ ಕಥೆ ಎಲ್ಲರ ಮನದಲ್ಲಿ ಕೊಡಗಿನ ಬಗೆಗಿನ ಅಭಿಮಾನವನ್ನು ಇಮ್...