"ಅಂತಿಮವಾಗಿ ಜೊತೆಗೆ ಯಾವುದನ್ನೂ ತೆಗೆದುಕೊಂಡು ಹೋಗುವ ಆಯ್ಕೆ ಆತನಿಗಿಲ್ಲ. ಬಹುಶಃ ಇದು ಆಸ್ತಿ ಅಥವಾ ಸಂಪತ್ತಿನ ದೃಷ್ಟಿಕೋನದಿಂದ ಹೇಳುವ ಮಾತು. ಗಳಿಸಿದ ಜ್ಞಾನ ಮತ್ತು ಪಡೆದ ಅನುಭವಗಳನ್ನು ಬದುಕಿರುವಾಗಲೇ ಸಮಾಜದೊಡನೆ ಹಂಚಿಕೊಳ್ಳಬೇಕು," ಎನ್ನುತ್ತಾರೆ ಶಿವರಾಜ ವಿ. ಪಾಟೀಲ. ಅವರು ತಮ್ಮ ‘ಸಂಜೆಗೊಂದು ನುಡಿಚಿಂತನ-365' ಕೃತಿಗರ ಬರೆದ ಲೇಖಕನ ನುಡಿ.
ನನ್ನ ಆತ್ಮಕಥನ ‘ಕಳೆದಕಾಲ ನಡೆದ ದೂರ’ ಮತ್ತು ಅದರ ಇಂಗ್ಲಿಷ್ ಅವತರಣಿಕೆ ‘‘Time Spent Distance Travelled’ 2024ರ ಜನವರಿ 21ರಂದು ಲೋಕಾರ್ಪಣೆಗೊಂಡವು. ಈ ಕೃತಿಯ ಆರಂಭದಲ್ಲಿ ಈ ಆತ್ಮಕಥನ ಏಕೆ? ಎಂಬ ಪ್ರಶ್ನೆಗೆ ಉತ್ತರವಾಗಿ “ಜ್ಞಾನ ಮತ್ತು ಅನುಭವ ಮನಸ್ಸಿನಲ್ಲಿಯೇ ಉಳಿದರೆ ಅವು ಕೇವಲ ಸಂಗ್ರಹದ ಕೋಣೆಯಾಗುತ್ತದೆ. ಹಂಚಿಕೊಂಡಾಗ ಅವು ಇತರರಿಗೆ ದಾರಿದೀಪವಾಗುತ್ತವೆ” ಎಂಬ ನುಡಿಗಟ್ಟು ಬರೆದಿದ್ದೇನೆ. ಅದು ಈ ಕೃತಿಗೂ ಅನ್ವಯವಾಗುತ್ತದೆ. ಜ್ಞಾನವನ್ನು ಹಂಚಿಕೊಂಡಾಗ ಅದು ಜ್ಞಾನ ದಾಸೋಹವಾಗುತ್ತದೆ. ದಾಸೋಹಗಳಲ್ಲಿ ಅತ್ಯಂತ ಶ್ರೇಷ್ಠ ದಾಸೋಹವೆಂದರೆ ಜ್ಞಾನ ದಾಸೋಹ. ಸಾಮಾನ್ಯವಾಗಿ ಮನುಷ್ಯ ಸಮಾಜಕ್ಕೆ ಏನಾದರೂ ಕೊಟ್ಟು ಹೋಗಬೇಕು ಇಲ್ಲವೇ, ಬಿಟ್ಟು ಹೋಗಬೇಕು. ಅಂತಿಮವಾಗಿ ಜೊತೆಗೆ ಯಾವುದನ್ನೂ ತೆಗೆದುಕೊಂಡು ಹೋಗುವ ಆಯ್ಕೆ ಆತನಿಗಿಲ್ಲ. ಬಹುಶಃ ಇದು ಆಸ್ತಿ ಅಥವಾ ಸಂಪತ್ತಿನ ದೃಷ್ಟಿಕೋನದಿಂದ ಹೇಳುವ ಮಾತು. ಗಳಿಸಿದ ಜ್ಞಾನ ಮತ್ತು ಪಡೆದ ಅನುಭವಗಳನ್ನು ಬದುಕಿರುವಾಗಲೇ ಸಮಾಜದೊಡನೆ ಹಂಚಿಕೊಳ್ಳಬೇಕು. ಇಲ್ಲದಿದ್ದರೆ ಒಬ್ಬ ವ್ಯಕ್ತಿಯ ಮರಣಾನಂತರ ಅವು ಸುಟ್ಟು ಬೂದಿಯಾಗುತ್ತವೆ, ಇಲ್ಲವೇ ಮಣ್ಣಿನಲ್ಲಿ ಮಣ್ಣಾಗುತ್ತವೆ.
ಈ ‘ಸಂಜೆಗೊಂದು ನುಡಿಚಿಂತನ-365' ಕೃತಿಯಲ್ಲಿರುವ ನುಡಿಚಿಂತನೆಗಳು ಕೇವಲ ನುಡಿಗಳಲ್ಲ. ನನ್ನ 84 ವರ್ಷಗಳಲ್ಲಿ ಗಳಿಸಿದ ಜ್ಞಾನ, ಪಡೆದ ಅನುಭವ ಹಾಗೂ ಸಮಾಜದ ಆಗುಹೋಗುಗಳು, ಸಂಪರ್ಕದಲ್ಲಿ ಬಂದಿರುವ ಜನರ ನಡೆನುಡಿ, ವರ್ತನೆಗಳು, ಕಾಲಕಾಲಕ್ಕೆ ಕಂಡ ಘಟನೆಗಳು, ಸಭೆ-ಸಮಾರಂಭಗಳಲ್ಲಿ ಮೂಡಿಬಂದ ಸಂಗತಿಗಳು ಮತ್ತು ನಿಸರ್ಗವನ್ನು ತೀಕ್ಷ್ಣವಾಗಿ ಅವಲೋಕಿಸಿದಾಗ ದೊರೆತ ವೈವಿಧ್ಯಮಯ ಅನುಭವಗಳು ನನ್ನ ಈ ನುಡಿಚಿಂತನೆಗಳಿಗೆ ಮೂಲ ಪ್ರೇರಣೆವಾಗಿವೆ. ಇಲ್ಲಿಯ ಕೆಲವು ಚಿಂತನೆಗಳ ನುಡಿಗಟ್ಟುಗಳ ಸಾರಾಂಶವನ್ನು ಬೇರೆ ಬೇರೆ ಭಾಷೆಗಳಲ್ಲಿ, ಪ್ರದೇಶಗಳಲ್ಲಿ ಮತ್ತು ಮಹಾತ್ಮರ ಸಂದೇಶಗಳಲ್ಲಿಯೂ ಕಾಣಲು ಸಾಧ್ಯ.
ನನ್ನ ಕೃತಿ ‘ಮುಂಜಾವಿಗೊಂದು ನುಡಿಕಿರಣ-365'ನ್ನು 2013ರಲ್ಲಿ ಲೋಕಾರ್ಪಣೆ ಮಾಡಲಾಯಿತು. ಅದರಲ್ಲಿಯ ಕೆಲವು ನುಡಿಗಳನ್ನು ಸಾಂದರ್ಭಿಕವಾಗಿ ಇಲ್ಲಿ ಪುನರುಚ್ಚರಿಸಬಹುದಾದರೆ, “ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತಲೂ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವುದು ಉತ್ತಮ”, “ಸ್ಥಾನಮಾನಗಳು ಹಾಗೂ ಆಸ್ತಿ-ಪಾಸ್ತಿಗಳು ಬದಲಾಗಬಹುದು ಆದರೆ ಮಾನವೀಯ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳು ಎಂದೆಂದಿಗೂ ಬದಲಾಗದಂತಿರಬೇಕು“, “ಮನುಷ್ಯ ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ, ಸಹೃದಯತೆ ಮತ್ತು ಕರುಣೆಯ ಸೇತುವೆ ಕಟ್ಟಬೇಕೇ ಹೊರತು, ಅವಿಶ್ವಾಸ ಮತ್ತು ದ್ವೇಷದ ಅಡ್ಡಗೋಡೆಗಳನ್ನಲ್ಲ“, “ತಂದೆ-ತಾಯಿಗಳನ್ನು ಗೌರವಿಸುವುದು, ಪ್ರೀತಿಸುವುದು ಮತ್ತು ಅವರ ಸೇವೆಯನ್ನು ಮಾಡುವುದು ಉಪಕಾರವಲ್ಲ, ಅದೊಂದು ಮಕ್ಕಳಿಗೆ ಸಿಕ್ಕ ಅಮೂಲ್ಯ ಅವಕಾಶ ಮತ್ತು ಸೌಭಾಗ್ಯ” ಮತ್ತು “ನಾವೇ ನಮ್ಮ ಜೀವನದ ಶಿಲ್ಪಿಗಳು, ಏನನ್ನೂ ಸಾಧಿಸದೆ ಕಲ್ಲಾಗಿ ಉಳಿಯಬೇಕೆ ಅಥವಾ ಗುರುಗಳ ಮಾರ್ಗದರ್ಶನ ಪಡೆದು ಸಾರ್ಥಕ ಜೀವನ ನಡೆಸಿ ಸಾಕಾರಮೂರ್ತಿಗಳಾಗಬೇಕೆ? ಆಯ್ಕೆ ನಮ್ಮದು”. ಇಂತಹ ಬದುಕಿಗೆ ಮಾರ್ಗದರ್ಶನವಾಗುವ ವಿಚಾರಗಳನ್ನು ಸಹೃದಯಿ ಓದುಗರು ಈ ಪುಸ್ತಕವನ್ನು ಓದುವುದರ ಮೂಲಕ ತುಂಬುಹೃದಯದಿಂದ ಸ್ವಾಗತಿಸಿದ್ದಾರೆ. ಅದೀಗ 7ನೇ ಮುದ್ರಣವನ್ನು ಕಂಡಿರುವುದು ಸಂತೋಷದ ಸಂಗತಿ.
‘ಮುಂಜಾವಿಗೊಂದು ನುಡಿಕಿರಣ-365'ಕ್ಕೆ ಓದುಗರು ನೀಡಿದ ಉತ್ತಮ ಅಭಿಪ್ರಾಯ ಮತ್ತು ಪ್ರೋತ್ಸಾಹದಿಂದ ಹಾಗೂ ನನ್ನ ಶ್ರಮವೂ ಸಾರ್ಥಕವಾಯಿತು ಎಂಬ ಭಾವನೆಯಿಂದ ಪ್ರೇರಣೆಗೊಂಡು ‘ಸಂಜೆಗೊಂದು ನುಡಿಚಿಂತನ-365' ಕೃತಿಯನ್ನು ರಚಿಸಿದೆನು. ಸಾಮಾನ್ಯವಾಗಿ ಇಂದು ದೊಡ್ಡ ಗಾತ್ರದ ಮತ್ತು ಹೆಚ್ಚಿನ ಪುಟಗಳನ್ನೊಳಗೊಂಡ ಪುಸ್ತಕಗಳನ್ನು ಓದುವುದಕ್ಕೆ ಬಹಳ ಜನರಿಗೆ ಸಮಯವೂ ಇಲ್ಲ ಮತ್ತು ಆಸಕ್ತಿಯೂ ಇಲ್ಲ. ಚಿಕ್ಕ ಚಿಕ್ಕ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಪುಸ್ತಕದಲ್ಲಿಯ 365ಚಿಂತನೆಗಳಲ್ಲಿರುವ ಅಂಶಗಳು ವಿವಿಧ ಮನೋಭಾವದ, ವಯಸ್ಸಿನ, ವೃತ್ತಿಯ ಓದುಗರಿಗೆ ಪ್ರಸ್ತುತವಾಗಬಹುದೆಂಬುದು ನನ್ನ ಬಲವಾದ ನಂಬಿಕೆ. ಇವುಗಳು ಕೇವಲ ಪ್ರಾಸಕ್ಕಾಗಲಿ ಅಥವಾ ಮನರಂಜನೆಗಾಗಲಿ ಬರೆದವುಗಳಲ್ಲ. ಇವುಗಳು ಮನೋವಿಕಾಸಕ್ಕಾಗಿ ಮತ್ತು ಆಳವಾಗಿ ವಿಚಾರ ಮಾಡುವುದಕ್ಕಾಗಿ ಮೂಡಿಬಂದ ಚಿಂತನೆಗಳು. ಈ ನುಡಿಗಳನ್ನು ನಿಧಾನವಾಗಿ ಮತ್ತು ಅವಧಾನ ಕೇಂದ್ರಿತ ಮನಸ್ಸಿನಿಂದ ಓದಿದಾಗ, ಇವುಗಳು ಉತ್ತಮ ಪರಿಣಾಮವನ್ನು ನೀಡುತ್ತವೆ. ಜೊತೆಗೆ ಉತ್ತಮ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಬಲ್ಲವೆಂಬುದು ನನ್ನ ಅನಿಸಿಕೆ.
ಈ ಪುಸ್ತಕದಿಂದ ಹೆಚ್ಚೆಚ್ಚು ಜನರಿಗೆ ಪ್ರಯೋಜನವಾದರೆ, ನನ್ನ ಪರಿಶ್ರಮ ಮತ್ತು ಚಿಂತನೆಗೆ ಸಾರ್ಥಕತೆ ಬರುತ್ತದೆ. ನನಗೂ ಸಂತೋಷವಾಗುತ್ತದೆ.
"ತಂದೆ ಮಾಡಿದ ಸಾಲದ ಹೊರೆಯನ್ನು ಹೊತ್ತು ಸಂಸಾರ ನಡೆಸುವ ಉದ್ದೇಶದಿಂದ ತನಗಿಷ್ಟವಿಲ್ಲದ ವ್ಯಾಪಾರೀ ವೃತ್ತಿ ಹಿಡಿದವನ...
"ಜಾಗತಿಕವಾಗಿ ನಾವು ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ಮಾನಸಿಕವಾಗಿ ನಾವು ಮಹಿಳಾ ದೌರ್ಜನ್ಯ ಅದರಲ್ಲೂ ಮುಖ್ಯವಾಗಿ ಕ...
"ಬದುಕಿನ ಅಸಂಗತತೆ, ಅನೂಹ್ಯ ತಿರುವುಗಳು, ರಹಸ್ಯಮಯತೆ, ಅರ್ಥದ ಹಂಗಿನಲ್ಲಿ ಅಡಗದೇ ಸದಾ ಹೊರಚಿಮ್ಮಲು ಬಯಸುವ ಭಾವೋತ್...
©2025 Book Brahma Private Limited.