Date: 23-07-2023
Location: ಬೆಂಗಳೂರು
''ಅಪ್ಪ ರಿಕ್ಷಾ ಚಾಲಕ ವೃತ್ತಿಯನ್ನು ಮಾಡುತ್ತಿದ್ದರೆ, ಅಮ್ಮ ಅವರಿವರ ಮನೆಕೆಲಸಕ್ಕೆ ಹೋಗಿ ಸಂಸಾರದ ನೊಗವನ್ನು ಸಾಗಿಸುತ್ತಿದ್ದರು. ಮನೆಯಲ್ಲಿ ಯಾರೂ ಓದದೇ ಇದ್ದರೂ ನಾನು ಚಿಕ್ಕವಯಸ್ಸಿನಿಂದಲೂ ಚೆನ್ನಾಗಿ ಓದಬೇಕು ಎಂದು ತುಂಬ ಕನಸು ಕಂಡವಳು. ಅದಕ್ಕಾಗಿ ಸತತ ಪ್ರಯತ್ನದಿಂದ ಪ್ರೀತಿಯಿಂದ ಓದುತ್ತಿದ್ದೆ. ನಮ್ಮದು ಮುಸ್ಲಿಂ ಕುಟುಂಬ ಆದರೂ ನಾನು ಕನ್ನಡದ ಶಾಲೆಯಲ್ಲೇ ಓದಬೇಕು ಅಂದುಕೊಂಡು ಕನ್ನಡ ಶಾಲೆಗೆ ಹೋಗುತ್ತಿದ್ದೆ,'' ಎನ್ನುತ್ತಾರೆ ರಜಿಯಾ ಬೇಗಂ. ಜ್ಯೋತಿ ಎಸ್. ಅವರು ತಮ್ಮ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ “ರಜಿಯಾ ಬೇಗಂ ಅವರ ಜೀವನದ ಕುರಿತು” ಕಟ್ಟಿಕೊಟ್ಟಿದ್ದಾರೆ.
ಏನನ್ನಾದರೂ ಮಾಡುವ ತುಡಿತವಿದ್ದರೆ ಅದರೆಡೆಗೆ ಪ್ರಾಮಾಣಿಕ ಪ್ರಯತ್ನವಿದ್ದರೆ ನಮ್ಮಲ್ಲಿ ಅಗತ್ಯ ಸಂಪನ್ಮೂಲಗಳಿಲ್ಲದಿದ್ದರೂ ನಮ್ಮನ್ನರಿತವರು ಯಾರಾದರೂ ಸಹಾಯ ಮಾಡುತ್ತಾರೆ ನಮ್ಮ ಜೊತೆ ನಿಲ್ಲುತ್ತಾರೆ. ಅದನ್ನು ಬಳಸಿಕೊಂಡು ಗುರಿಯೆಡೆಗೆ ಸಾಗಬೇಕು. ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ. ಹೀಗೆ ಅವರಿವರ ಸಹಕಾರದಿಂದ ತಾವು ಅಂದುಕೊಂಡಿದ್ದನ್ನ ಮಾಡುತ್ತ ಸಾಗುತ್ತಿರುವವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮೆಹಬೂಬ್ ನಗರದ ರಜಿಯಾ ಬೇಗಂ. ಇವರು ಖಾಜಾಸಾಬ ಭಾವಿಕಟ್ಟಿ ರಸೂಲಬಿ ದಂಪತಿಗಳ ಮೂರು ಮಕ್ಕಳಲ್ಲಿ ಒಬ್ಬರು. ಬಡತನದ ಬೇಗೆಯಲ್ಲಿ ಬೆಳೆದ ಇವರು ಬಾಲ್ಯದಿಂದಲೂ ತುಂಬಾ ಕಷ್ಟದ ದಿನಗಳನ್ನು ಎದರಿಸುತ್ತಲೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಬೇಕಾಯಿತು. ಬನ್ನಿ ಅವರು ಸಾಗಿಬಂದ ಹಾದಿಯ ಬಗ್ಗೆ ಅವರ ಮಾತುಗಳನ್ನು ಕೇಳೋಣ.
'ಅಪ್ಪ ರಿಕ್ಷಾ ಚಾಲಕ ವೃತ್ತಿಯನ್ನು ಮಾಡುತ್ತಿದ್ದರೆ, ಅಮ್ಮ ಅವರಿವರ ಮನೆಕೆಲಸಕ್ಕೆ ಹೋಗಿ ಸಂಸಾರದ ನೊಗವನ್ನು ಸಾಗಿಸುತ್ತಿದ್ದರು. ಮನೆಯಲ್ಲಿ ಯಾರೂ ಓದದೇ ಇದ್ದರೂ ನಾನು ಚಿಕ್ಕವಯಸ್ಸಿನಿಂದಲೂ ಚೆನ್ನಾಗಿ ಓದಬೇಕು ಎಂದು ತುಂಬ ಕನಸು ಕಂಡವಳು. ಅದಕ್ಕಾಗಿ ಸತತ ಪ್ರಯತ್ನದಿಂದ ಪ್ರೀತಿಯಿಂದ ಓದುತ್ತಿದ್ದೆ. ನಮ್ಮದು ಮುಸ್ಲಿಂ ಕುಟುಂಬ ಆದರೂ ನಾನು ಕನ್ನಡದ ಶಾಲೆಯಲ್ಲೇ ಓದಬೇಕು ಅಂದುಕೊಂಡು ಕನ್ನಡ ಶಾಲೆಗೆ ಹೋಗುತ್ತಿದ್ದೆ. ನನಗೆ ಕನ್ನಡ ಎಂದರೆ ಬಹಳ ಇಷ್ಟ. ಅಂಗನವಾಡಿಯಿಂದ ನನ್ನ ವಿದ್ಯಾಭ್ಯಾಸ ಪ್ರಾರಂಭವಾಯಿತು. ಎಸ್.ಎಸ್.ಎಲ್.ಸಿ. ವರೆಗೂ ಓದಿದೆ. ಅದಾದ ನಂತರ ಶಾಲೆಗೆ ಫೀಸ್ ಕಟ್ಟಲು ಹಣದ ತೊಂದರೆ ಇದ್ದುದರಿಂದ ವಿದ್ಯಾಭ್ಯಾಸ ನಿಲ್ಲಿಸಬೇಕಾಗಿ ಬಂತು. ಓದಲೇಬೇಕು ಎನ್ನುವ ಹಂಬಲವಿತ್ತು. ಹೇಗೋ ಪಿ.ಯು.ಸಿ. ಮುಗಿಸಿದೆ. ಆಗಲೂ ಮುಂದೆ ಓದಲು ಅಡಚಣೆಯಾಗಿ ಒಂದು ವರ್ಷ ಓದನ್ನು ನಿಲ್ಲಿಸಬೇಕಾಗಿ ಬಂತು. ನಂತರ ಗಜೇಂದ್ರಗಡದಲ್ಲಿ ಡಿ.ಎಡ್ ಗೆ ಗವರ್ನಮೆಂಟ್ ಸೀಟ್ ಆಯ್ತು. ಎರಡು ವರ್ಷ ಡಿ. ಎಡ್ ಮಾಡಿಕೊಂಡೆ. ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಾ ಡಿಗ್ರಿ ಮುಗಿಸಿಕೊಂಡೆ. ಬಿ. ಎಡ್ ಮುಗಿಸಿದೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಗಿನಿಂದಲೇ ನನಗೆ ಸಾಹಿತ್ಯದೆಡೆಗೆ ಆಸಕ್ತಿ ಇತ್ತು. ಕಥೆ, ಕವನಗಳು, ನೃತ್ಯ, ವಚನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಿಶನ್ ರಾವ್ ಕುಲಕರ್ಣಿ ಗುರುಗಳ ಪ್ರೋತ್ಸಾಹ ಸಾಹಿತ್ಯ ಕ್ಷೇತ್ರದಲ್ಲಿ ನನಗೆ ಗಟ್ಟಿಯಾದ ಬೇರು ಬಿಡಲು ಪ್ರೇರಣೆಯಾಯಿತು. ಹಾಡುಗಾರಿಕೆ, ವಚನ ಸಾಹಿತ್ಯ, ಕಥೆ, ಕವನ ವಾಚನ ಹೀಗೆ ಎಲ್ಲದರಲ್ಲೂ ಭಾಗವಹಿಸುತ್ತಿದ್ದೆ. ಕುವೆಂಪು ಅಂದ್ರೆ ನನಗೆ ಬಹಳ ಇಷ್ಟ. ಅವರ ಬರವಣಿಗೆ ಎಂದರೆ ಏನೋ ಒಂದು ತರಹದ ಸೆಳೆತ. ನನ್ನ ನೋವುಗಳನ್ನು, ಕಷ್ಟಗಳನ್ನು, ಸಂತೋಷವನ್ನು, ಭಾವಗಳನ್ನು ಅಕ್ಷರಗಳಲ್ಲಿ ಇಳಿಸಲು ಸಾಧ್ಯವಾಗಿದ್ದು ಈ ಬಡತನದಿಂದ. ಹೇಗೆ ಬರೆಯೋದು ಗೊತ್ತಿಲ್ಲದಿದ್ದರೂ ಆಗಿನಿಂದಲೇ ಬರವಣಿಗೆಯನ್ನು ರೂಢಿಸಿಕೊಂಡೆ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮ ಮನೆಯಲ್ಲಿ ಕರೆಂಟ್ ಇರಲಿಲ್ಲ. ರೇಡಿಯೋಗೆ ಶಲ್ ಹಾಕಿಕೊಂಡು ಅದರಲ್ಲಿ ಬರುವ ಕಾರ್ಯಕ್ರಮಗಳನ್ನು ಹಾಡುಗಳನ್ನು ಕೇಳುತ್ತಿದ್ದೆ. ಅದು ಪದೇ ಪದೇ ರಿಪೇರಿಗೆ ಬರುತ್ತಿತ್ತು. ಪಿ. ಯು. ಸಿ.ಯಲ್ಲಿ ಇದ್ದಾಗಲೇ ಅದರ ಮೇಲೆಯೂ ಒಂದು ಅಂಕಣ ಬರೆದಿದ್ದೆ'.
'ಕನ್ನಡ ಸಾಹಿತ್ಯ ಚರಿತ್ರೆಗಳನ್ನು, ಲೇಖನಗಳನ್ನು ಓದುತ್ತಾ ಇದ್ದೆ. ಅಷ್ಟು ಹೊತ್ತಿಗೆ ಕವಿಗೋಷ್ಠಿ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆಲ್ಲಾ ವೇದಿಕೆಗಳು ಇವೆ ಅಂತ ಗೊತ್ತಾಯ್ತು. ಪಠ್ಯ ಪುಸ್ತಕದಲ್ಲಿ ಲೇಖಕಿಯರು ಅಂತ ಇರುತ್ತಿತ್ತಲ್ಲ ಅದನ್ನು ನೋಡಿದಾಗ ನಾನೂ ಬರೆಯಬಹುದು ಅಂತ ಅನಿಸುತ್ತಿತ್ತು. ಒಮ್ಮೆ ಜಾನಪದ ನೃತ್ಯ ಮಾಡಬೇಕಿತ್ತು ಆ ನೃತ್ಯಕ್ಕೆ ಹಾಡನ್ನು ನಾನು ಬರೆದಿದ್ದೆ ನೃತ್ಯ ಮಾಡಿದ್ವಿ. ಆ ನೃತ್ಯ ರಾಜ್ಯ ಮಟ್ಟಕ್ಕೆ ಆಯ್ಕೆ ಆಯ್ತು. ಇದು ನನಗೆ ಅವಿಸ್ಮರಣೀಯ. ಡಿ. ಎಸ್. ರಾಯ್ ಗುರುಗಳು ಪ್ರಾಂಶುಪಾಲರಾಗಿದ್ದರು. ಅವರು ಚೆನ್ನಾಗಿ ಬರೀತಿಯಮ್ಮ ಬರವಣಿಗೆ ನಿಲ್ಲಿಸಬೇಡ ಬರೀತಾ ಹೋಗು ಅಂದಿದ್ರು. ಆಮೇಲೆ ಚಿಕ್ಕದಾಗಿ ಬರೆಯೋದು, ಕೆಲವೊಂದು ನುಡಿಗಳನ್ನು ಬರೆಯೋದು, ಕವಿತೆಗಳನ್ನು ಬರೆಯೋದು ಮಾಡುತ್ತಿದ್ದೆ. ಹೀಗೆ ಬರೀತಾ ಬರೀತಾ ಅದನ್ನೆಲ್ಲ ಒಟ್ಟುಗೂಡಿಸಿ 67 ಕವನಗಳ ಪುಸ್ತಕ ಮಾಡಿ "ಅಂಕುರ" ಭರವಸೆಯ ಹಾದಿಯಲ್ಲಿ ಎಂಬ ಕವನ ಸಂಕಲನವನ್ನು ಹೊರತರುವ ಯೋಜನೆಯನ್ನು ಹಮ್ಮಿಕೊಂಡೆ. ಆದರೆ ಅದು ಸುಲಭವಿರಲಿಲ್ಲ. ಅದು ಮೊದಲ ಪುಸ್ತಕವಾದ್ದರಿಂದ ನನಗಿನ್ನೂ ಹೆಚ್ಚಿನ ಮಾಹಿತಿಯಿರಲಿಲ್ಲ. ಹಣಕಾಸಿನ ತೊಂದರೆಯುತ್ತು. ಆಗ ಕೂಡ ತುಂಬ ಕಷ್ಟಪಟ್ಟೆ. ಕೆಲವು ಸಲ ರಾತ್ರಿ 2-3 ಗಂಟೆಗೆಲ್ಲ ಎದ್ದು ಬರೆಯುತ್ತಿದ್ದೆ. ಕವನ ಸಂಕಲನ ಹೊರ ತರಬೇಕಾದರೆ ಜಹನಾ ಮೇಡಂ ಪರಿಚಯವಾಯ್ತು. ಪುಸ್ತಕ ಪ್ರಧಿಕಾರಕ್ಕೆ ಅರ್ಜಿ ಹಾಕೋಣ ಅಂತ ಹೇಳಿ ಡಿಟಿಪಿ ಮಾಡಿಸಿ ನಯನ ರಂಗಮಂದಿರ, ಕನ್ನಡ ಭವನ, ಜೆ. ಸಿ. ರಸ್ತೆ, ಬೆಂಗಳೂರು ಇಲ್ಲಿಗೆ ಅರ್ಜಿ ಹಾಕಿಸಿದರು. ಅದಾದ ಆರು ತಿಂಗಳಿಗೆ ಅಲ್ಲಿಂದ ಸೆಲೆಕ್ಷನ್ ಲೆಟರ್ ಬಂತು ಖುಷಿಯಾಯ್ತು. ಕನ್ನಡ ಪುಸ್ತಕ ಪ್ರಾಧಿಕಾರದಿಂದ 2020ರಲ್ಲಿ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆಯಲ್ಲಿ ನನ್ನ ಮೊದಲ ಕವನ ಸಂಕಲನ ಆಯ್ಕೆಯಾಗಿ ಬಂತು. 15000/- ಪ್ರೋತ್ಸಾಹಧನ ಬಂತು. ಆಗ ಸದ್ಧಾಂ, ವೈ. ಜೆ. ಮಹಿಬೂಬ್ ಇನ್ನೂ ಹಲವರು ಬೆನ್ನೆಲುಬಾಗಿ ನಿಂತು ಪುಸ್ತಕ ಬಿಡುಗಡೆಗೆ ಸಹಕರಿಸಿದರು. ಅದಾದ ನಂತರ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೆ. ಇದರಿಂದ ಅನೇಕ ವೇದಿಕೆಗಳಲ್ಲಿ ಅವಕಾಶ ಒದಗಿ ಬಂದವು. ನನ್ನ ಕವನ ಸಂಕಲನಕ್ಕೆ 'ರಾಜ್ಯಮಟ್ಟದ ವೀರರಾಣಿ ಕಿತ್ತೂರು ಚನ್ನಮ್ಮ' ಪ್ರಶಸ್ತಿ ಕೂಡ ಬಂತು. ಒಳ್ಳೆಯ ಬರಹಗಳನ್ನು ಬರೆಯುತ್ತಿರಬೇಕು ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕು' ಎಂದು ಸಂತಸ ಹಂಚಿಕೊಂಡರು.
ಈಗ ಪ್ರಸ್ತುತ ಕುಷ್ಟಗಿಯ ಬಾಲಕಿಯರ ಪ್ರೌಢಶಾಲೆ, ನಳಂದಾ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕನ್ನಡವೆಂದರೆ ಅತೀವ ಪ್ರೀತಿ. ಮುಂದೆ ಇವರಿಗೆ ಎಂ. ಎ. ಕನ್ನಡ ಸಾಹಿತ್ಯ ಓದಬೇಕು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ಕೊಡಬೇಕು ಎಂಬ ಹಂಬಲವಿದೆ. ತನಗೆ ಬರುವ ಸಂಬಳದಲ್ಲಿ 25% ಬಡ ಮಕ್ಕಳ ಓದಿಗೆ ಸಹಾಯ ಮಾಡಬೇಕು ಎಂಬ ಮಹದಾಸೆಯನ್ನು ವ್ಯಕ್ತಪಡಿಸುತ್ತಾರೆ. ಇವರ ಆಶಯ ನೆರವೇರಲಿ. ಇನ್ನು ಹೆಚ್ಚು ಬರವಣಿಗೆಯಲ್ಲಿ ತೊಡಗಿಕೊಳ್ಳಲಿ ಅವರು ಅಂದುಕೊಂಡಿರುವ ಸಾಮಾಜಿಕ ಕೆಲಸಗಳಿಗೆ ಅಗತ್ಯವಾದ ಸಂಪನ್ಮೂಲ, ಬೆಂಬಲ ಸಿಗುವಂತಾಗಲಿ ಎಂಬುದು ನಮ್ಮ ಹಾರೈಕೆ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.