ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು

Date: 15-10-2022

Location: ಬೆಂಗಳೂರು


ಅಪರಿಮಿತ ಜೀವನೋತ್ಸಾಹ, ಜೀವನಾನುಭವ ಇರುವ ಇವರು ಪ್ರಕೃತಿ ಪ್ರೇಮಿಗಳು. ಯಾವುದೇ ಲೋಭಕ್ಕೆ ಒಳಗಾಗದೆ ನಿಸರ್ಗದೊಂದಿಗೆ ಅದರಲ್ಲೂ ಕಾಡಿನೊಟ್ಟಿಗೆ ಬದುಕು ಕಟ್ಟಿಕೊಂಡಿರುವ ಇವರು ಅದರಿಂದ ಕಲಿತ ಜೀವನಪಾಠ ಅಪಾರ ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಜೇನುಕುರುಬರ ಲೋಕವನ್ನು ತೆರೆದಿಟ್ಟಿದ್ದಾರೆ.

ಹೆಸರೇ ಹೇಳುವಂತೆ ಜೇನನ್ನು ಹುಡುಕುವವರು ಜೇನುಕುರುಬರು. ಇವರು ಕರ್ನಾಟಕದ ಆದಿವಾಸಿಗಳು. ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಸಮುದಾಯ ಇವತ್ತಿಗೂ ಆಧುನಿಕತೆಯ ಆಕರ್ಷಣೆಯಿಲ್ಲದೆ ಕಾಡನ್ನೇ ಎಲ್ಲವೂ ಎಂದುಕೊಂಡು ಬದುಕುತ್ತಿದೆ. ಎಚ್. ಡಿ. ಕೋಟೆ ತಾಲೂಕಿನ ಬಳ್ಳೆ ಗ್ರಾಮದ ಗೋಳೂರು ಹಾಡಿಯ ಜೇನುಕುರುಬ ಸಮುದಾಯದ ಲೋಕಿಯವರು ನನ್ನೊಂದಿಗೆ ಮಾತಿಗಿಳಿದಾಗ ಅವರು ಹಂಚಿಕೊಂಡ ಅವರ ಸಂಗತಿಗಳು ಇಂದಿನ ನಿಮ್ಮ ಓದಿಗೆ.

'ಹುಟ್ಟಿದಾಗಿನಿಂದ ಕಾಡಿನಲ್ಲಿಯೇ ಬದುಕಿ ಕಾಡಿಗೆ ಒಗ್ಗಿಬಿಟ್ಟಿದ್ದೇವೆ. ನಮ್ಮ ತಾತ ಮುತ್ತಾತನ ಕಾಲದಿಂದಲೂ ಗೋಳೂರು ಹಾಡಿಯಲ್ಲಿದ್ದೇವೆ. ನನ್ನ ತಂದೆ ಮಣಿ ತಾಯಿ ಪುಟ್ಟಮ್ಮ ಅವರಿಗೆ ನಾಲ್ಕು ಜನರು ಮಕ್ಕಳು. ನಾನು ಐದನೇ ತರಗತಿಯವರೆಗೆ ಓದಿದ್ದೇನೆ. ಕಡು ಬಡತನದಿಂದಾಗಿ ಅನುಕೂಲವಾಗದೆ ಮುಂದೆ ಓದಲು ಸಾಧ್ಯವಾಗಲಿಲ್ಲ. ತುಡಬೆ ಜೇನು, ಹೆಜ್ಜೇನು, ಕಡ್ಡಿ ಜೇನು, ನಸರ್ ಜೇನುಗಳನ್ನು ಯುಗಾದಿ ಹಬ್ಬ ಕಳೆದು ಒಂದು ತಿಂಗಳ ನಂತರ ಎರಡು ತಿಂಗಳುಗಳ ಕಾಲ ಜೇನು ಕೊಯ್ಯುವುದು ನಮ್ಮ ಕುಲ ಕಸುಬು. ತುಡಬೆಜೇನು ಹುತ್ತ, ದಿಬ್ಬಗಳಲ್ಲಿ ಕಟ್ಟತ್ತೆ. ಬಿಸಿಲಿಗೆ ಜೇನು ನೊಣಗಳು ಹುತ್ತದಮೇಲೆ ಹಾರಾಡುತ್ತಿರುತ್ತವೆ. ಆಗ ನಾವು ಅಲ್ಲಿಗೆ ಹೋಗಿ ಜೇನು ಕಟ್ಟಿರುವುದನ್ನು ಖಾತರಿಪಡಿಸಿಕೊಳ್ಳುತ್ತೇವೆ. ಜೇನು ಕೊಯ್ಯುವುದಕ್ಕೆ ಬೆಳಗ್ಗೆ ಮತ್ತು ಸಂಜೆ ಎರಡೂ ಸಮಯದಲ್ಲಿ ಹೋಗುತ್ತೇವೆ. ಹುತ್ತದ ಜೇನನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಯಾವ ಹೊತ್ತಿನಲ್ಲಾದರೂ ಕೊಯ್ಯಬಹುದು. ಆದರೆ ಮರದಮೇಲೆ ಕಟ್ಟುವಂತಹ ಹೆಜ್ಜೇನು ಕೊಯ್ಯಲು ಸಂಜೆ ಹೊತ್ತು ಸೂಕ್ತ ಸಮಯವಾಗಿರುತ್ತದೆ. ಮೊದಲು ಹಗ್ಗದ ಸಹಾಯದಿಂದ ಮರ ಏರಿ, ದೊಡ್ಡ ಪಾತ್ರೆಯೊಂದಕ್ಕೆ ಹಗ್ಗ ಕಟ್ಟಿ ಮೇಲೆ ಎಳೆದುಕೊಳ್ಳುತ್ತೇವೆ. ಕೆಳಗೆ ಮೂರ್ನಾಲ್ಕು ಜನರು ಇರುತ್ತಾರೆ. ಜೇನುಕೊಯ್ದು ಪಾತ್ರೆಗೆ ತುಂಬಿದರೆ ಕೆಳಗಿನವರು ಹಗ್ಗ ಹಿಡಿದು ನಿಧಾನವಾಗಿ ಇಳಿಸಿಕೊಳ್ಳುತ್ತಾರೆ. ಕಡಾವ್, ಬೀಟೆ, ತೇಗ, ತಾರಿ, ಆಲ, ಬೂರ ಇತ್ಯಾದಿ ಮರಗಳಲ್ಲಿ ಹೆಚ್ಚು ಹೆಜ್ಜೇನು ಕಟ್ಟುತ್ತದೆ. ಹುಳು ಕಚ್ಚದಂತೆ ಸಣ್ಣ ಬಾಣಲೆಗೆ ಒಣಗಿದ ಕಡ್ಡಿಗಳನ್ನು ಹಾಕಿ ಕೆಂಡ ಮಾಡಿ ಅದರಮೇಲೆ ಸೊಪ್ಪು ಹಾಕಿ ಜೇನುಗೂಡಿಗೆ ಹೊಗೆ ಕೊಟ್ಟರೆ ಹುಳುಗಳು ಹಾರಿಹೋಗುತ್ತವೆ. ಮರಿಗಳನ್ನು, ಮೊಟ್ಟೆಗಳನ್ನು ಬಿಟ್ಟು ಜೇನುತುಪ್ಪವನ್ನು ಮಾತ್ರ ಕೊಯ್ದುಕೊಳ್ಳುತ್ತೇವೆ. ಮರಿ, ಮೊಟ್ಟೆಗಳನ್ನು ಅಲ್ಲೇ ಬಿಡುವುದರಿಂದ ಪುನಃ ತುಪ್ಪ ಆಗುತ್ತದೆ. ಮುಂದಿನ ವರ್ಷದ ಹೊತ್ತಿಗೆ ಅಲ್ಲಿ ಮತ್ತೆ ಜೇನು ಕಟ್ಟಿರುತ್ತದೆ. ಮೊಟ್ಟೆ ಸಮೇತ ಕೊಯ್ದರೆ ಮತ್ತೆ ಅಲ್ಲಿ ಜೇನು ಸಂಗ್ರಹ ಆಗುವುದಿಲ್ಲ. ವರ್ಷ ಪೂರ್ತಿ ನಮಗೆ ಜೇನು ಸಿಗುವುದಿಲ್ಲ. ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ಸಮಯದಲ್ಲಿ ಎರಡು ತಿಂಗಳು ಜೇನು ಕೊಯ್ಯಬಹುದು. ನಾವು ಕೊಯ್ದು ಸಂಗ್ರಹ ಮಾಡಿದ ಜೇನನ್ನು ಕ್ಯಾನುಗಳಿಗೆ ತುಂಬಿಸಿ ಸೊಸೈಟಿಗಳಿಗೆ ಕೊಟ್ಟು ಬರುತ್ತೇವೆ'.

'ಜೇನು ಕೊಯ್ಯುವುದು ಮುಗಿದಮೇಲೆ ಮರದಲ್ಲಿ ಪಾಜೆ ಬೆಳೆಯುತ್ತದೆ. ಅದನ್ನು ಮರದಿಂದ ಬಿಡಿಸಿ ಸೊಸೈಟಿಗೆ ಕೊಡುತ್ತೇವೆ. ಪಾಜೆ ಪೇಂಟ್ ತಯಾರಿಗೆ ಹೋಗುತ್ತದೆ. ಮರದ ಪಾಜೆ ಟೀಕ್, ಬೀಟೆ, ಮತ್ತಿ ಮರದಲ್ಲಿ ಹೆಚ್ಚಾಗಿ ಕಾಣಬಹುದು. ನಮ್ಮ ಸಮುದಾಯದವರು ಬಳ್ಳೆ, ಮಾನಿ ಮೂಲೆ, ಆನೆಮಾಳ, ಹೊಸಹಳ್ಳಿ, ಮತ್ತಿಗೂಡು, ಜಕ್ಕಳ್ಳಿ, ನಾಗರಹೊಳೆ, ಕೊಡಗು, ಬಂಡೀಪುರದಲ್ಲಿ ಹೆಚ್ಚು ಕಾಣಸಿಗುತ್ತಾರೆ. ಜೇನು ತುಪ್ಪ ಬಿಡಿಸುವ ಸೀಸನ್ ಮುಗಿದಮೇಲೆ ತೋಟದ ಕೆಲಸ, ಕಾಫಿ ಬೀಜ ಬಿಡಿಸುವುದು, ಉಂಡೆ ಮೆಣಸು ಕೊಯ್ಯುವುದು ನಮ್ಮ ಉದ್ಯೋಗವಾಗಿದೆ. ಕೆಲವರು ಉದ್ಯೋಗಕ್ಕಾಗಿ ಕೇರಳಕ್ಕೆ ಹೋದರೆ, ಉಳಿದವರು ಕೊಡಗಿಗೆ ಹೋಗುತ್ತಾರೆ. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಬಾಡಿಗೆ ವಾಹನ ಮಾಡಿಕೊಂಡು ಬೇರೆ ಊರುಗಳಿಗೆ ಕೆಲಸಕ್ಕೆ ಹೋಗಬೇಕು. ಒಂದು ಕೆಜಿ ಕಾಫಿ ಬೀಜ ಬಿಡಿಸಿದರೆ ಮೂರು ರೂಪಾಯಿ ಸಿಗುತ್ತದೆ. ನಾವು ಸಹ ಅಲ್ಪ ಪ್ರಮಾಣದಲ್ಲಿ ತರಕಾರಿ, ಉಂಡೆ ಮೆಣಸು, ಬಾಳೆ, ಶುಂಠಿ ಇತ್ಯಾದಿ ಬೆಳೆಯುತ್ತೇವೆ. ಬೇಲಿ ಕಟ್ಟಿ ಬಂದೋ ಬಸ್ತ್ ಮಾಡಿದರೆ ಅಷ್ಟೋ ಇಷ್ಟೋ ಉಳಿಯುತ್ತದೆ. ಜೇನು ಕೊಯ್ಯಲು ಹೋದಾಗ ಜೇನು ಸಿಗಲಿಲ್ಲವಾದರೆ ನೇರಳೆಹಣ್ಣು, ಸಾಗಡೆ ಹಣ್ಣು ತರಸು ಹಣ್ಣುಗಳನ್ನು ಕಿತ್ತು ತಿನ್ನುತ್ತೇವೆ. ಕಾಡು ಗೆಣಸನ್ನು ಅಗೆದು ತರುತ್ತೇವೆ. ಬೆಂಕಿಯಲ್ಲಿ ಸುಟ್ಟು ತಿಂದರೆ ಹೆಚ್ಚು ರುಚಿ. ಈ ಹಣ್ಣುಗಳು ಬೇಸಿಗೆ ಕಾಲದಲ್ಲಿ ಹೆಚ್ಚು ಸಿಗುತ್ತವೆ. ನಾವು ಕಾಡಿನಲ್ಲಿ ಇರುವ ಜನರು. ಕಾಡಾನೆ, ಜಿಂಕೆ, ಹುಲಿ, ಕರಡಿ, ಚಿರತೆ ಎಲ್ಲಾ ನಮ್ಮ ಹತ್ತಿರದಲ್ಲೇ ಓಡಾಡುತ್ತವೆ. ನಾವು ಪ್ರಾಣಿಗಳಿಗೆ ತೊಂದರೆ ಮಾಡಬಾರದು. ನಾವು ತೊಂದ್ರೆ ಮಾಡಿದ್ರೆ ಅವು ತೊಂದರೆ ಕೊಡುತ್ತವೆ. ಬೇರೆ ಪ್ರಾಣಿಗಳು ಬಂದರೆ ನಮ್ಮ ಪಾಡಿಗೆ ನಾವು ಮರೆಯಿಂದ ಹೋಗಿಬಿಡುತ್ತೇವೆ. ಆದರೆ ಆನೆಗಳು ಎಂದರೆ ತುಂಬ ಭಯ ಪಡುತ್ತೇವೆ. ಕಾಡಾನೆಗಳಿಗೆ ರೋಷ ಹೆಚ್ಚು ಇರುತ್ತದೆ. ಹಾಗಾಗಿ ಆನೆಗಳು ಬಂದರೆ ನಾವು ಓಡಿ ಹೋಗಿ ಮರ ಹತ್ತಿ ಕುಳಿತು ಬಿಡುತ್ತೇವೆ. ಹಾಗೇನೇ ವರ್ಷವಿಡೀ ನಾವು ಬೆಳೆದುದನ್ನು ಒಂದೇ ಸಲ ಧ್ವಂಸ ಮಾಡಿ ಹೋಗಿಬಿಡುತ್ತವೆ. ನಮ್ಮ ಆಡಿಯಲ್ಲಿ ಸುಮಾರು ನೂರೈವತ್ತು ಮನೆಗಳಿವೆ. ಒಂದು ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸವಾಗಿವೆ. ಕುಡಿಯುವ ನೀರು ವಾರಕ್ಕೊಮ್ಮೆ ಬಿಡುತ್ತಾರೆ, ಕೆಲವೊಮ್ಮೆ ಸಿಕ್ಕಿದ್ರೆ ಸಿಕ್ತು ಇಲ್ಲವಾದರೆ ಇಲ್ಲ. ನಮಗೆ ಸರಿಯಾದ ಮನೆಗಳಿಲ್ಲ. ಮರದ ಕೊಂಬೆಗಳನ್ನು ನಿಲ್ಲಿಸಿ ಅದರ ಮೇಲೆ ಟಾರ್ಪಲ್ ಹೊದ್ದಿಸಿದ್ದೇವೆ. ವರ್ಷಕ್ಕೊಮ್ಮೆ ಟಾರ್ಪಲ್ ಬದಲಿಸಬೇಕು ಇಲ್ಲವಾದರೆ ಮಳೆ ನೀರು ಒಳಗೆ ಸುರಿಯುತ್ತದೆ. ನಮ್ಮ ಸಮುದಾಯದ ಜನರು ಹೆಚ್ಚು ನಗರ ಪ್ರದೇಶಗಳಿಗೆ ಹೋದವರಲ್ಲ. ನಗರ ಪ್ರದೇಶದ ಜನರೊಂದಿಗೆ ಸಂಪರ್ಕ ಇರುವುದಿಲ್ಲ. ಹಾಗಾಗಿ ಅವರನ್ನು ಕಂಡರೆ ಮುಖಾಮುಖಿ ಮಾತನಾಡುವಲ್ಲಿ ಹಿಂಜರಿಕೆ ಇದೆ. ನಮ್ಮ ಹಾಡಿಯಲ್ಲಿ ಏಳನೇ ತರಗತಿಯವರೆಗೂ ಶಾಲೆ ಇದೆ. ಅದರ ನಂತರದ ವಿದ್ಯಾಭ್ಯಾಸಕ್ಕಾಗಿ ಸುಮಾರು ಮೂವತ್ತು ಕಿ.ಮೀ ದೂರದಲ್ಲಿರುವ ಅಂತರಸಂತೆಗೆ ಹೋಗಬೇಕು. ನಮ್ಮವರ ಮನೆಗಳಲ್ಲಿ ಬಡತನದ ಸಮಸ್ಯೆಯು ಮುಖ್ಯವಾಗಿರುತ್ತದೆ. ಹಾಗಾಗಿ ನಮ್ಮಲ್ಲಿ ಹೆಚ್ಚಿನವರು ಓದುವುದಕ್ಕೆ ಮುಂದೆ ಹೋಗುವುದಿಲ್ಲ. ತುಂಬ ಜನ ಕೂಲಿ ಕೆಲಸಕ್ಕೆ ಹೋಗುತ್ತಾರೆ' ಎಂದು ತಮ್ಮ ಪಾಡು ಹೇಳಿದರು.

ಅಪರಿಮಿತ ಜೀವನೋತ್ಸಾಹ, ಜೀವನಾನುಭವ ಇರುವ ಇವರು ಪ್ರಕೃತಿ ಪ್ರೇಮಿಗಳು. ಏಕೆಂದರೆ ಕಾಡಿನ ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ತಮ್ಮ ಜೀವನೋಪಾಯದ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇದು ಇವರು ಪ್ರಕೃತಿಯನ್ನು ಗೌರವಿಸುವ ಕಾಪಾಡಿಕೊಳ್ಳುವ ರೀತಿ. ಯಾವುದೇ ಲೋಭಕ್ಕೆ ಒಳಗಾಗದೆ ನಿಸರ್ಗದೊಂದಿಗೆ ಅದರಲ್ಲೂ ಕಾಡಿನೊಟ್ಟಿಗೆ ಬದುಕು ಕಟ್ಟಿಕೊಂಡಿರುವ ಇವರು ಅದರಿಂದ ಕಲಿತ ಜೀವನಪಾಠ ಅಪಾರ. ಕಾಡಿನ ಸುತ್ತ ಸೂಕ್ಷ್ಮ ಪ್ರದೇಶಗಳಲ್ಲಿ, ಕಾಡು ಪ್ರಾಣಿಗಳಿರುವಲ್ಲಿ ಮನುಷ್ಯರು ವಾಸಿಸುವಂತಿಲ್ಲ ಎಂದು ಆಗಾಗ ಈ ಜನರನ್ನು ಅಧಿಕಾರಿಗಳು ಒಕ್ಕಲೆಬ್ಬಿಸುತ್ತಾರೆ. ಪುನರ್ವಸತಿ ಮಾಡಿಕೊಡುವಾಗ ಕೆಲವೊಂದು ಕಡೆ ಸರಿಯಾಗಿ ಸೌಲಭ್ಯಗಳನ್ನು ಕಲ್ಪಿಸುವುದಿಲ್ಲ. ಮೊದಲೇ ಹಿಂದುಳಿದ ಸಮುದಾಯಗಳು ಪ್ರಕೃತಿಯೊಂದಿಗೆ ಹೇಗೋ ಬದುಕು ಕಟ್ಟಿಕೊಂಡಿರುತ್ತಾರೆ. ಅವರನ್ನು ಹೀಗೆ ಕಾಡಿನಿಂದ ದೂರ ಮಾಡಿದಾಗ ಅವರ ಭಾಷೆ, ಸಂಸ್ಕೃತಿ, ಸಂಪ್ರದಾಯಗಳು ಅಳಿವಿಗೆ ಬರುತ್ತವೆ. ಇದರ ಮೂಲಕ ನಾವು ಒಂದು ವಿಶಿಷ್ಟವಾದ ಜನಸಮುದಾಯದ ಪರಂಪರೆಯನ್ನು ಕಳೆದುಕೊಳ್ಳುತ್ತೇವೆ.

ಇವರ ಹಾಡಿಗಳಲ್ಲಾಗಲಿ ಪುನರ್ವಸತಿ ಪ್ರದೇಶಗಳಲ್ಲಾಗಲಿ ಸರ್ಕಾರ ಇವರಿಗೆ ಮೂಲಸೌಕರ್ಯಗಳಾದ ಸರಿಯಾದ ಮನೆ, ಶೌಚಾಲಯ, ವಿದ್ಯುತ್, ರಸ್ತೆ, ಸಾರಿಗೆ, ಶಾಲೆ, ಆಸ್ಪತ್ರೆಗಳನ್ನು ಕಲ್ಪಿಸುವುದರೊಂದಿಗೆ ಬಹುಮುಖ್ಯವಾಗಿ ಇವರ ಭಾಷೆ, ಸಂಪ್ರದಾಯ, ಆಚರಣೆಗಳಿಗೆ ಧಕ್ಕೆಯುಂಟಾಗದಂತೆ ನೋಡಿಕೊಳ್ಳಬೇಕು.

-ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...