Date: 20-12-2024
Location: ಮಂಡ್ಯ
ಆಡಳಿತ ನಡೆಸುವ ಅಧಿಕಾರಿಗಳಲ್ಲಿ ಬಹುಪಾಲು ಮಂದಿ ಇನ್ನೂ 'ಅಂತರಜಾಲವೆಂದರೆ ಆಂಗ್ಲಭಾಷೆ' ಎಂಬ ನಂಬಿಕೆಯಲ್ಲೇ ಕೆಲಸ ಮಾಡುತ್ತಾರೆ. ಅವರು ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸಿ ಸಶಕ್ತಗೊಳಿಸುವ ಕಾರ್ಯದಲ್ಲಿ ಆಸಕ್ತರಾಗುವುದು ಅವರ ಆಡಳಿತಕರ್ತವ್ಯವೂ ಆಗಿದೆ ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಡ್ಯ: ಜಗತ್ತಿನಲ್ಲಿ ಗೂಗಲ್ ಎನ್ನುವ ಜಗದ್ಗುರು ೧೯೯೮ ರ ಸುಮಾರಿಗೆ ಅವತರಿಸಿದ ಬಳಿಕ, ಅದರಂಥ ಇನ್ನೂ ಕೆಲವು ಕಿರಿಯ ಗುರುಗಳು ಹುಟ್ಟಿದ ಬಳಿಕ, ಮನುಷ್ಯರು ಲೋಕವನ್ನು ಅರಿಯುವ ಮಾರ್ಗ, ಲೋಕದ ಯಾವುದೇ ವಿಷಯದ ಬಗ್ಗೆ ಮಾಹಿತಿ ಪಡೆಯುವ ಮಾರ್ಗ ಬಹಳ ಸುಲಭವಾಯಿತು. ಜ್ಞಾನವನ್ನು ರೂಢಿಯ ಗುರುವಿನ ಮೂಲಕವೇ ಅಥವಾ ಗ್ರಂಥಗಳ ಮೂಲಕವೇ ಪಡೆಯಬೇಕೆನ್ನುವ ನಂಬಿಕೆ ಹೆಚ್ಚುಕಡಿಮೆ ಅಳಿದುಹೋಯಿತು. ಆದರೆ ಈ ಆಧುನಿಕ ಗುರುಗಳು ಜ್ಞಾನದ ಪ್ರಸಾರ ಮಾಡುವುದು, ಪಾಠಗಳನ್ನು ಹೇಳಿಕೊಡುವುದು ಇಂಗ್ಲಿಷ್ ಭಾಷೆಯಲ್ಲೇ. ಕನ್ನಡ ಭಾಷೆಯ ಮೂಲಕವೂ ಲೋಕವನ್ನು ಅರಿಯಲು ಸಾಧ್ಯ, ಜ್ಞಾನವನ್ನು ಪಡೆಯಲು ಸಾಧ್ಯ ಎನ್ನುವುದನ್ನು ನಾವೀಗ ತೋರಿಸಿ ತಿಳಿಸದಿದ್ದರೆ, ಮುಂದಿನ ಪೀಳಿಗೆಯ ಮಕ್ಕಳು 'ಜ್ಞಾನ ಎಂದರೆ ಇಂಗ್ಲಿಷ್' ಎಂದು ನಂಬುವ ಅಪಾಯವಿದೆ. ಜ್ಞಾನ ಪಡೆಯುವ ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸಿದರೆ, ಕನ್ನಡ ಜ್ಞಾನದ ಭಾಷೆಯೂ ಆಗುತ್ತದೆ. ನಮಗೆ ಗೊತ್ತಿರುವಂತೆ, ತಮ್ಮ ತಲೆಗೆ ತಜ್ಞರು ತುಂಬಿರುವ ದತ್ತಾಂಶ ಏನಿದೆಯೋ ಅದನ್ನೇ ಈ 'ಯಾಂತ್ರಿಕ ಗುರುಗಳು' ಕೇಳಿದವರಿಗೆ ಮಾಹಿತಿಯಾಗಿ ನೀಡುತ್ತಾರೆ. ಕನ್ನಡದಲ್ಲಿ ದತ್ತಾಂಶ (ಅಂದರೆ ಡೇಟಾ) ತುಂಬದಿದ್ದರೆ ಅಥವಾ ಸರಿಯಾಗಿ ತುಂಬದಿದ್ದರೆ, ಅಂತರಜಾಲದಲ್ಲಿ ಸಿಗುವ ಮಾಹಿತಿ ಸರಿಯಾಗಿ ಇರುವುದಾದರೂ ಹೇಗೆ? ಕರ್ನಾಟಕದ ರಾಜಧಾನಿ ಬೆಂಗಳೂರನ್ನು 'ಐಟಿ ಸಿಟಿ- 'ಇನ್‌ಫರ್‌ಮೇಷನ್ ಟೆಕ್ನಾಲಜಿ ಸಿಟಿ' - ಮಾಹಿತಿ ತಂತ್ರಜ್ಞಾನ ನಗರ ಎಂದು ಕರೆಯಲಾಗುತ್ತದೆ. ಇದು ಕನ್ನಡ ಭಾಷೆಯ ಮಟ್ಟಿಗೂ ಅನ್ವರ್ಥವಾಗಬೇಕಾದರೆ, ಇದುವರೆಗಿನ ಕನ್ನಡದಲ್ಲೇ ದತ್ತಾಂಶ ತುಂಬುವ ಅಷ್ಟಿಷ್ಟು ಪ್ರಯತ್ನಗಳ ಮುಂದುವರಿಕೆಯಾಗಿ ಮತ್ತೊಂದು ಸದೃಢ ಪ್ರಯತ್ನ ನಡೆಯಲೇಬೇಕು. ಇದಕ್ಕೆ ಸರ್ಕಾರ ನೇತೃತ್ವ ವಹಿಸುವುದು, ಅಗತ್ಯ ವ್ಯವಸ್ಥೆ ರೂಪಿಸುವುದು, ಅದು ನಿರ್ವಹಿಸಬೇಕಾದ ಸಾಮಾಜಿಕ ಕರ್ತವ್ಯ.
ಆದರೆ, ಸರ್ಕಾರವನ್ನು ನಡೆಸುವ ಜನಪ್ರತಿನಿಧಿಗಳಲ್ಲಿ, ಆಡಳಿತದ ಕೀಲಿಕೈಗಳನ್ನು ಹೊಂದಿರುವ ಉನ್ನತ ಅಧಿಕಾರಿಗಳಲ್ಲಿ ಕನ್ನಡ ಭಾಷಾಪ್ರೇಮದ ಕೊರತೆ ಇರುವಂತೆ ಕಾಣುತ್ತದೆ. ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕದಿದ್ದರೆ, ಆಸಕ್ತಿ ವಹಿಸಿ ಅದರ ಅಗತ್ಯಗಳನ್ನು ಪೂರೈಸದಿದ್ದರೆ ಕನ್ನಡ ಭಾಷೆ ಬೆಳೆಯುವುದಿಲ್ಲ. ಆಡಳಿತ ನಡೆಸುವ ಅಧಿಕಾರಿಗಳಲ್ಲಿ ಬಹುಪಾಲು ಮಂದಿ ಇನ್ನೂ 'ಅಂತರಜಾಲವೆಂದರೆ ಆಂಗ್ಲಭಾಷೆ' ಎಂಬ ನಂಬಿಕೆಯಲ್ಲೇ ಕೆಲಸ ಮಾಡುತ್ತಾರೆ. ಅವರು ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸಿ ಸಶಕ್ತಗೊಳಿಸುವ ಕಾರ್ಯದಲ್ಲಿ ಆಸಕ್ತರಾಗುವುದು ಅವರ ಆಡಳಿತಕರ್ತವ್ಯವೂ ಆಗಿದೆ. ಇವೆಲ್ಲಕ್ಕೆ ಮೊದಲ ಅಗತ್ಯ ಎಂದರೆ ಕನ್ನಡ ಮತ್ತು ತಂತ್ರಾಂಶದ ಪ್ರೀತಿಯ ಅನುಬಂಧವನ್ನು ಸರ್ಕಾರವೇ ಅಧಿಕೃತಗೊಳಿಸುವುದು. ಕನ್ನಡದ ಹಲವಾರು ಸಾಹಿತಿಗಳು ಇದರ ಅಗತ್ಯವನ್ನು ಮನವರಿಕೆ ಮಾಡಿಕೊಡಲು ಈಗಾಗಲೇ ಪ್ರಯತ್ನಿಸಿದ್ದಾರೆ. ಸರ್ಕಾರದ ಹಿಂದಿನ ಆಡಳಿತ ಸಲಹೆಗಾರರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಮತ್ತು ಪ್ರಸಕ್ತ ಅಧ್ಯಕ್ಷರು ಎಲ್ಲರೂ ಅಧಿಕೃತ ಕನ್ನಡ ತಂತ್ರಾಂಶ ಮತ್ತು ಇ-ಕನ್ನಡ ಯೋಜನೆಯ ಮಹತ್ವವನ್ನು ಕುರಿತು ಹೇಳಿದ್ದಾರೆ. 'ಕನ್ನಡ ಕಸ್ತೂರಿ' ಹೊಸತಂತ್ರಾಂಶ ಅಧಿಕೃತವಾಗಿ ಬಿಡುಗಡೆಯಾದರೆ, ಗೂಗಲ್, ಯಾಂತ್ರಿಕ ಬುದ್ಧಿಮತ್ತೆಯಲ್ಲೂ ಕನ್ನಡದ ಕಂಪು ಪಸರಿಸಬಹುದು. ಆ ತಂತ್ರಾಂಶದ ಮೂಲಕ ದತ್ತಾಂಶವೂ ಸರಿಗನ್ನಡದಲ್ಲೇ ಸರಿಯಾಗಿ ತಲುಪಬಹುದು.
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಾಹಿತ್ಯ ಉತ್ಸವದ ಅಂಗವಾಗಿ ವಿವ...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೆಯ ಅಖಿಲ...
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಡ್ಯದಲ್ಲಿ ಡಿ. 20, 21, 22 ರಂದು ನಡೆಯುತ್ತಿರುವ ಮೂರನೇ ವರ್ಷದ 87ನ...
©2024 Book Brahma Private Limited.