ಗಂಗಪಾಣಿ ಕಾದಂಬರಿ: ಗತದ ಮೌಲ್ಯ ಮತ್ತು ಸದ್ಯದ ಅಪಮೌಲ್ಯಗಳ ಮುಖಾಮುಖಿ


‘ಗಂಗಪಾಣಿ’ ಎನ್ನುವುದು ತುಮಕೂರು ಭಾಗದ ಒಂದು ವಿಶಿಷ್ಟ ತೆಂಗಿನ ತಳಿ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ತುಮಕೂರಿಗೆ ಮಹಾತ್ಮ ಗಾಂಧೀಜಿಯವರು ಬಂದಾಗಿನ ಐತಿಹಾಸಿಕ ಘಟನೆಯನ್ನು ಗಂಗಪಾಣಿಯೊಡನೆ ಸಮೀಕರಿಸಲಾಗಿದೆ. ಆ ಭಾಗದ ಜನರಿಗೆ ‘ಗಾಂಧೀಜಿ ಸ್ಪರ್ಶಿಸಿದ ಗಂಗಪಾಣಿ’ ಎಂಬ ನಂಬಿಕೆಯಿದೆ ಎನ್ನುತ್ತಾರೆ ಡಾ.ಮಹಾಂತೇಶ ಪಾಟೀಲ. ಅವರು ಹಿರಿಯ ಲೇಖಕ ಎಸ್.ಗಂಗಾಧರಯ್ಯ ಅವರ ಗಂಗಪಾಣಿ ಕಾದಂಬರಿಗೆ ಬರೆದ ಅರ್ಥಪೂರ್ಣ ವಿಮರ್ಶೆ ನಿಮ್ಮ ಓದಿಗಾಗಿ.

ತಮ್ಮ ಕತೆಗಳ ‘ಎರೆನೆತ್ತಿ’ ಮೂಲಕ ಸ್ಥಳೀಯತೆಯ ಚಾಪು ಮೂಡಿಸಿರುವ ಮತ್ತು ಅನುವಾದ ಮುಖೇನ ವಿಶ್ವಾತ್ಮಕವಾಗಿ ಧ್ಯಾನಿಸುವ ಸೃಜನಶೀಲ ಬರಹಗಾರ ಎಸ್. ಗಂಗಾಧರಯ್ಯನವರು. ಅವರ ಮೊದಲ ಕಾದಂಬರಿ ‘ಗಂಗಪಾಣಿ’(2024)ಯು ಕಾಲವೊಂದರ ಮೌಲ್ಯಗಳನ್ನು, ನೆನಪುಗಳ ನೆಲೆಯಿಂದ ಜೋಡಿಸುವ ಕಾರಣದಿಂದ ಗಮನಾರ್ಹವೆನಿಸುತ್ತದೆ. ಅಪಮೌಲ್ಯವಾದ ವರ್ತಮಾನದ ಹಳವಂಡಗಳ ನಡುವೆ, ಪರಂಪರೆ ಮತ್ತು ಚರಿತ್ರೆಯ ಜೀವಂತ ಮೌಲ್ಯಗಳ ದೆಸೆಯಿಂದ ಕಾದಂಬರಿಯು ‘ಅದಿಮ ಲೋಕದ ಜೀವಂತ ಪಳೆಯುಳಿಕೆ’ಯಂತೆ ಭಾಸವಾಗುತ್ತದೆ.

ಅವರ ಕೆಲವು ಕತೆಗಳಿಗೆ ಕಾದಂಬರಿಯ ಶಕ್ತಿಯಿದ್ದರೂ, ಅವು ಮೈಕೊಡವಿಕೊಂಡಿದ್ದಿಲ್ಲ. ಅಂತಹ ಅಪೂರ್ವ ಕತೆಗಳಲ್ಲಿ ‘ಧೂಳಿಡಿದ ಪಟ’ ಕೂಡ ಒಂದು. ಆ ಧೂಳಿಡಿದ ಪಟದೊಳಗಿನ ಧೂಳನ್ನು ಕೊಡವಿಕೊಂಡು ಹೊರಬಂದು ಕಾದಂಬರಿಯಾಗಿ ತಲೆಯೆತ್ತಿದವಳು ಈ ‘ಗಂಗಪಾಣಿ’. ಹಾಗೆ ನೋಡಿದರೆ ಎಸ್. ಗಂಗಾಧರಯ್ಯನವರ ತುಮಕೂರು ಪರಿಸರದ ಬಾಲ್ಯಕಾಲದ ಜೀವನ ದ್ರವ್ಯಗಳು ಮತ್ತು ಅನುಭವದ ಕಣಿಗಳು- ನೆನಪಿನ ಪ್ರವಾಹವಾಗಿ ಹರಿದಿವೆ. ಈ ಕ್ಷಣದ ‘ಇರುವು’ ಮತ್ತು ಕಳೆದ ಕಾಲದ ‘ಅರಿವಿನ’ ಹರಿವುಗಳನ್ನು ದಾಖಲಿಸುವುದರಲ್ಲಿ ಕಾದಂಬರಿಯ ಚಲನೆಯಿದೆ. ಇಲ್ಲಿ ಪ್ರಜ್ಞಾಪ್ರವಾಹವನ್ನು (ಸ್ಟ್ರೀಮ್ ಆಫ್ ಕಾನ್ಸಿಯಸ್ನೇಸ್ಸ್) ಕಾಣುವುದಕ್ಕಿಂತ, ವಿಸ್ಮೃತಿಯ ಕಾಲದಲ್ಲಿ ನಿಂತುಕೊಂಡು ಸ್ಮೃತಿ ಅಥವಾ ನೆನಪುಗಳ (ಸ್ಟ್ರೀಮ್ ಆಫ್ ಮೆಮೋರಿಸ್) ದರ್ಶನ ಮಾಡಿಸುವುದು ಕಾದಂಬರಿಕಾರರ ಆಶಯವಾಗಿದೆ.

ಕಥಾನಾಯಕ ಗದ್ದಿಗಪ್ಪನ ಮೂಲಕವಾಗಿ ಅನಾವರಣಗೊಳ್ಳುವ ‘ಸ್ಮೃತಿ ಸಂಚಯ’ವು ವ್ಯಕ್ತಿನಿಷ್ಠವಾದರೂ, ಆ ನೆನಪುಗಳು ವೈಯಕ್ತಿಕತೆಯನ್ನು ಮೀರಿ ಕಾಲವೊಂದರ ಸಮಾಜದ ಮುಖವಾಣಿಯಾಗಿರುವುದು ವಿಶೇಷ. ಅಭಿಜಾತ ಮೌಲ್ಯಗಳು ಮತ್ತು ಆಧುನಿಕತೆಯ ವಿಪ್ಲವಗಳು ಕ್ರಮವಾಗಿ ‘ಗತ ಮತ್ತು ಸದ್ಯ’ವನ್ನು ಪ್ರತಿನಿಧಿಸುತ್ತವೆ. ಕಾದಂಬರಿ ನಾಯಕ ಗತವನ್ನು ಸಾಂಕೇತಿಸುತ್ತಾನೆ. ಸದ್ಯದ ಬದಲು ಗತವೇ ಆಪ್ತವೆನಿಸುತ್ತದೆ. ಅವನ ಜೀವಂತಿಕೆಯು ಗತದ ಜೀವಂತಿಕೆಯೊಡನೆ ಸಮೀಕರಣಗೊಂಡಿದೆ. ಹಾಗಾಗಿ ಅವನ ದೃಷ್ಟಿಯಲ್ಲಿ ನೆನಪು ಎಂದರೆ ಭೂತದ ವರ್ತಮಾನ. ಹೀಗಾಗಿ ಅವನ ವರ್ತಮಾನದ ಭವಿಷ್ಯವು ಭೂತವೆನಿಸಿದೆ. ಕಾದಂಬರಿಯ ಬಹಪಾಲು ಸಂದರ್ಭ-ಸನ್ನಿವೇಶಗಳಿಗೆ ‘ಗತ’ದ ಸ್ಪರ್ಶವೇ ತೀವ್ರವಾಗಿದೆ. ಆದರೆ ಅವುಗಳು ತೀವ್ರತೆಯನ್ನು ಪಡೆಯುವುದು ವರ್ತಮಾನದ ಮುಖಾಮುಖಿಯಲ್ಲಿ. ನವೋದಯ ಮತ್ತು ನವ್ಯ ಕಾದಂಬರಿಯ ಸ್ವರೂಪಗಳನನ್ನು ಸಮೀಕರಿಸಿಕೊಂಡು ಗಂಗಪಾಣಿಯು ರಚನೆಯಾಗಿದೆ.

ಜಂಗಮರೂಪಿ ಗದ್ದಿಗಪ್ಪನ ನೆನಪುಗಳಿಗೆ ಹಲವು ಆಯಾಮ, ಮುಖಗಳಿವೆ. ಅವುಗಳು ಬಹುಬಗೆಯ ಸಂವೇದನೆ, ಆಶಯಗಳನ್ನು ಪ್ರತಿನಿಧಿಸುತ್ತವೆ. ಕಾದಂಬರಿಯು ದಟ್ಟವಾದ ಅಗಣಿತ, ಅನಂತ ನೆನಪುಗಳಿಂದ ಮೈದುಂಬಿಕೊಂಡಿದೆ. ಅವು ಕೇವಲ ವ್ಯಕ್ತಿಯ ಮಾನೋಸ್ತರದ ಅಭಿವ್ಯಕ್ತಿಗಳಾಗಿದ್ದರೆ ಕಾದಂಬರಿಯಲ್ಲಿ ಅವುಗಳಿಗೆ ವಿಶೇಷ ಅರ್ಥವಿರುತ್ತಿರಲಿಲ್ಲ. ಆದರೆ ಅವು ಸ್ವಾತಂತ್ರ್ಯ ಹೋರಾಟ, ಭೂದಾನ ಚಳುವಳಿ, ಅವೈದಿಕ ದರ್ಶನಗಳ ಇರುವು-ಹರಿವು, ಪರಿಸರದ ಜೈವಿಕ ವ್ಯವಸ್ಥೆ, ಸ್ಥಳೀಯ ಅಸ್ಮಿತೆ, ಕೃಷಿ ಪದ್ದತಿ, ಕುಲಕಸಬು, ದೇಸೀ ವೈದ್ಯ ಪದ್ದತಿ, ಸಾಂಸ್ಕೃತಿಕ ಮೌಲ್ಯ, ಸಾಮಾಜಿಕ ಆಚರಣೆ ಮತ್ತು ಮನುಷ್ಯ ಸಂಬಂಧಗಳನ್ನು ಚಿತ್ರಿಸುವ ಸದಾಶಯವನ್ನು ಹೊಂದಿವೆ. ಒಬ್ಬನ ಮೂಲಕವಾಗಿ ಲೋಕಾರ್ಪಣೆಗೊಳ್ಳುವ ಹಲವರ ಲೋಕಗಳಂತೆ ನೆನಪುಗಳು ಕಾಣಿಸುತ್ತವೆ. ಕಾದಂಬರಿಯಲ್ಲಿನ ವೈವಿಧ್ಯಮಯ ನೆನಪುಗಳನ್ನು ಮೂರು ರೀತಿಯಾಗಿ ವಿಂಗಡಿಸಬಹುದು.

1).ಕುಟುಂಬಸ್ಥರ ನೆನಪುಗಳು: ಅಜ್ಜಿ(ಸಣ್ತಿಮ್ಮಕ್ಕ), ತಾತ(ಸಣ್ವೀರಪ್ಪ), ತಾಯಿ(ಮಾಳವ್ವ), ತಂದೆ(ವಚ್ಚಾಲಯ್ಯ), ಹೆಂಡತಿ(ಆಜಮ್ಮ), ಮಗ(ಗಾಂಧಿ)- ಅವರ ಕುರಿತ ಗದ್ದಿಗಪ್ಪನ ನೆನಕೆಗಳಲ್ಲಿ ಕೌಟುಂಬಿಕ ಮೌಲ್ಯಗಳ ಶೋಧವಿದೆ. ಸ್ವತಂತ್ರಪೂರ್ವ ಭಾರತದ ಗ್ರಾಮೀಣ ಕುಟುಂಬಗಳ ಸ್ವರೂಪ ಮತ್ತು ರಚನೆಗಳನ್ನು ಅರ್ಥೈಸುತ್ತವೆ. ಮನೆಯ ಸದಸ್ಯರ ನಡುವಿನ ಪಾತ್ರ ನಿರ್ವಹಣೆಯಲ್ಲಿ ಸಾವಯವ ಸಂಬಂಧದ ದಾಖಲೀಕರಣವಿದೆ. ಗತಕಾಲದ ಕೂಡುಕುಟುಂಬದಲ್ಲಿ ಹುಟ್ಟಿ ಬೆಳದಿದ್ದ, ಗದ್ದಿಗಪ್ಪನಿಗೆ ಸದ್ಯದ ವಿಭಕ್ತ(ಏಕವ್ಯಕ್ತಿ) ಕುಟುಂಬ ಪದ್ದತಿಯ ಆತಂಕಕ್ಕೆ ಅಸುರಕ್ಷತೆ, ಅನಾಧಾರವೇ ಕಾರಣ. ಉದಾ- ಹಾಸಿಗೆ ಹಿಡಿದು ಮಲಗಿದ ಜವರಜ್ಜನ ಕೂಗನ್ನು ಮಗ ಉದ್ದೇಶಪೂರ್ವಕವಾಗಿ ಕಡೆಗಣಿಸುವುದು ಕಾದಂಬರಿ ಕೊನೆಯಲ್ಲಿದೆ.

2).ಸಾಮಾಜಿಕರ ನೆನಪುಗಳು: ದೊಡ್ಡಾಲಜ್ಜಿ(ನಾಟೀ ವೈದ್ಯೆ), ಶಂಕ್ರಯ್ಯ(ಕುಂಬಾರಿಕೆ), ಗೂರ್ಲಗಿಬ್ರ(ಮಾಟಮಂತ್ರ), ಚಿತ್ತಯ್ಯ(ಪರಿಸರವಾದಿ), ಸಿದ್ವೀರಪ್ಪ(ಸ್ವಾತಂತ್ರ್ಯಹೋರಾಟ), ರಾಯಣ್ಣ(ಭೂದಾನ ಚಳುವಳಿ), ದೇವಮ್ಮ(ಬಿದಿರು ಹೆಣಿಗೆ) ಜಾವಕಟ್ಟೊ ಸಿದ್ದಪ್ಪ(ಬುಡಬುಡುಕಿ), ಸೀತಕ್ಕ-ಏಕಪರ್ಣಿ(ಮಿಲನ ಜೀವಗಳು)- ಈ ಪಾತ್ರಗಳಿಗೆಲ್ಲ ರೆಕ್ಕೆಪುಕ್ಕ ಬರುವುದು ಗದ್ದಿಗೆಪ್ಪನ ಭವ್ಯರೂಪಿ ಸ್ಮೃತಿಪಟಲದ ಮೂಲಕವಾಗಿಯೇ. ಈ ನೆನಕೆಗಳಲ್ಲಿ ಕಾದಂಬರಿಕಾರರು ಮಾನವೀಯ ಸಂಬಂಧಗಳ ವ್ಯಾಖ್ಯಾನವಿದೆ. ವ್ಯವಹಾರಿಕವಾದ ಮನುಷ್ಯರ ವರ್ತಮಾನದ ಸಾಮಾಜಿಕ ಸಂಬಂಧಗಳ ಎದುರು, ಇಲ್ಲಿ ನಿರೂಪಿಸುವ ಸಾಮಾಜಿಕರ ನೆನಪಗಳು ಮೌಲೀಕವೆನ್ನಿಸುತ್ತವೆ. ಲಾಭೋದ್ದೇಶಿತ ಸಂಬಂಧಗಳಿಗಿಂತ, ಪರಸ್ಪರ ಅವಲಂಬನೆ ಮುಖ್ಯವಾಗಿದ್ದ ‘ಗತ’ ಸಂಬಂಧಗಳಲ್ಲಿ ಆರ್ದ್ರತೆಯು ಹುಲುಸಾಗಿದೆ. ಆದ್ದರಿಂದಲೇ ಅವುಗಳಿಗೆ ಕಾದಂಬರಿಯಲ್ಲಿ ಹೆಚ್ಚಿನ ಜಾಗ ದೊರಕಿದೆ. ಗದ್ದಿಗಪ್ಪನ ಸ್ಮೃತಿಪಟಲದಲ್ಲಿ ಕೂಡ ಸಾಮಾಜಿಕರ ನೆನಕೆಗಳಿಗೆ ಗಣ್ಯ ಮತ್ತು ಸನ್ಮಾನ್ಯ ಸ್ಥಾನವಿದೆ. ಒಟ್ಟು ಕಥೆಗೆ ಗಟ್ಟಿತನವನ್ನು ಒದಗಿಸಿದ್ದು ಸಹ ಅಂತಹ ನೆನಪುಗಳೇ. ಮಾನವತಾವಾದ, ಸುಧಾರಣವಾದ, ಸಮಾನತಾವಾದ, ಸಮಾಜವಾದ, ಪರಿಸರವಾದಿ ಆಶಯಗಳು ಸಾಮಾಜಿಕರ ನೆನಪುಗಳಿಗಿವೆ. ವಿವಾದಗಳು ವಿಜ್ರಂಭಿಸುತ್ತಿರುವ ಹೊತ್ತಿನಲ್ಲಿ, ಅಂತಹ ವಾದ-ಸಂವಾದಗಳನ್ನು ನೆನೆಯುವುದು ಕಾದಂಬರಿಯ ಧೋರಣೆಯಾಗಿದೆ.

3).ಮನುಷ್ಯೇತರ ನೆನಪುಗಳು: ಜೇನುಶಿಕಾರಿ, ಹಳ್ಳಿ ಸಂತೆ, ಮಿಂಚುಳ, ಗಾಂಧಿಗಿಡ(ಗಂಗಪಾಣಿ ತೆಂಗುತೋಟ), ಕೆಂಕೇಸರಿ ಹೂಗಿಡ, ಹಲಸಿನ-ಸೀಬೆಹಣ್ಣು-ಅವರೆ ಕದ್ದ ನೆನಪು, ಮಳೆ-ಬೆಳೆ, ಭಾವಿ-ಕೆರೆಕಟ್ಟೆ, ಗುಡ್ಡ-ಕಣಿವೆ, ಕಲ್ಲು ಮಂಟಪ, ಕಿನ್ನರಿ, ತಂಬೂರಿ, ದಮಡಿ, ಹಾರ್ಮೋನಿಯಂ, ಮಣ್ಣಿನ ಮನೆ, ಸಾಕುಪ್ರಾಣಿ, ಕಾಡುಪ್ರಾಣಿ, ಪಕ್ಷಿ ಸಂಕುಲ, ಗಿಡ-ಮರ-ಹೂ-ಬಳ್ಳಿ; ಈ ಮೊದಲಾದವು ಗತದ ವಿವರಣೆ ಭಾಗವಾಗಿ ಕಾದಂಬರಿಯಲ್ಲಿ ಬರುತ್ತವೆ. ಎಸ್.ಗಂಗಾಧರಯ್ಯನವರು ತುಮಕೂರು ಭಾಗದ ಸ್ಥಳೀಯ ಭೌಗೋಳಿಕ ಪರಿಸರವನ್ನು ಕಾದಂಬರಿಯಲ್ಲಿ ಪುನರ್ ಸೃಷ್ಠಿಸಿದ್ದಾರೆ. ಮನುಷ್ಯೇತರ ನೆನಪುಗಳು- ಪರಿಸರ ಮತ್ತು ಸಾಮಾಜಿಕ ಪರಿಸರದ ನಡುವಿನ ಸಾವಯವ ಸಂಬಂಧವನ್ನು ನಿರ್ವಚಿಸುತ್ತವೆ. ಕಾಡು ಮತ್ತು ಮನುಷ್ಯರ ಸಂಬಂಧವು ಸಂಘರ್ಷದ ವಿರಾಟರೂಪವನ್ನು ತಲುಪಿರುವಾಗ ಕಾದಂಬರಿಯಲ್ಲಿ ಚಿತ್ರಣಗೊಂಡಿರುವ ಮನುಷ್ಯೇತರ ನೆನಪುಗಳಿಗೆ ಹೆಚ್ಚಿನ ಬೆಲೆಯಿದೆ. ಅವು ಮನುಷ್ಯಕೇಂದ್ರಿತ ಆಗಿರುವುದಕ್ಕಿಂತ ಹೆಚ್ಚಾಗಿ ‘ಇಕೋಸೆಂಟ್ರಿಕ್’ ಆಗಿಸುವುದು ಕಾದಂಬರಿಕಾರರ ಧ್ಯೇಯವಾಗಿದೆ. ಅಂತಹ ಕಡೆಗೆಲ್ಲಾ ಪರಿಸರ ವ್ಯವಸ್ಥೆಯ ಅಧೀನ, ಅಪ್ರಧಾನತೆಯ ಭಾಗವಾಗಿ ‘ಮನುಷ್ಯರು’ ಕಾಣಿಸುತ್ತಾರೆ.

ಮೇಲಿನ ಮೂರು ಬಗೆಯ ನೆನಪುಗಳಿಗೆ ಗತ ಮತ್ತು ಸದ್ಯವೆಂಬ ಎರಡು ಮುಖಗಳಿವೆ. ‘ಗತವು- ಹೀಗಿತ್ತು, ಒಳಿತಾಗಿತ್ತು. ಸಹ್ಯವಾಗಿಯು, ಹಸಿರಾಗಿಯೂ ಇತ್ತು. ಸದ್ಯವು- ಹಾಗಲ್ಲ, ಈ ಕಾಲ ಕೇಡಾಗಿಯು, ಅಸಹ್ಯವಾಗಿಯೂ ಮತ್ತು ಬರಡಾಗಿದೆಯೆಂದು’ ಹೇಳುವ ಉದ್ದೇಶವು ಕಾದಂಬರಿಯ ನೆನಪುಗಳಲ್ಲಿದೆ. ಕಥಾನಾಯಕನಿಗೆ ‘ಗತವು ಆದರ್ಶ ಮೌಲ್ಯಗಳ ಸಂಜೀವಿನಿ’ ಅನಿಸುತ್ತದೆ. ಗತಕಾಲದ ಅನಿಷ್ಟ ಸಂಪ್ರದಾಯ, ಜಾತಿಪದ್ದತಿ, ಜಮೀನ್ದಾರಿಕೆ, ಬ್ರಿಟೀಷ್ ವಸಾಹತುಶಾಹಿ ಹಿಂಸೆಗಳು- ಕಾದಂಬರಿಯ ಸ್ಮೃತಿಪಟಲದ ಚೌಕಟ್ಟಿನಿಂದ ಹೊರಗುಳಿದಿವೆ. ಈ ದೃಷ್ಟಿಯಿಂದ ಕಾದಂಬರಿಯು ಗತದ ಒಂದು ಮಗ್ಗುಲನ್ನು ದಾಖಲಿಸಿದೆ ಅಥವಾ ಗತದ ಒಳಿತನ್ನು, ಸದ್ಯದ ಕೇಡನ್ನು ಮಾತ್ರ ಕನ್ನಡಿಸಿದೆ ಎನ್ನಬಹುದು.

(3) ಕಾದಂಬರಿಯು ದಾಖಲಿಸುವ ಸಂವೇದನೆಗಳಲ್ಲಿ ಮುಖ್ಯವಾದುದು ಅನುಭಾವಿಕ ಪರಂಪರೆ. ಸಂಸಾರ, ಸಮಾಜವನ್ನು ತೊರೆದು ಸನ್ಯಾಸತ್ವ ಸ್ವೀಕರಿಸುವ ಆಧ್ಯಾತ್ಮಿಕ ಮಾರ್ಗವು ಗದ್ದಿಗಪ್ಪನದು ಅಲ್ಲ. ಅವೈದಿಕ ದರ್ಶನಗಳಾದ ನಾಥ, ಆರೂಢ, ಲಿಂಗಾಯತ, ಸೂಫಿಯನ್ನು ಪ್ರತಿನಿಧಿಸುವ ನೆಲಮೂಲದ ಅನುಭಾವವದು. ಸಮಾಜ ಮತ್ತು ಸಂಸಾರದ ಜೊತೆಗಿದ್ದು ಸಾಧಿಸಬಹುದಾದ ‘ಸಾಧನಾ ಮಾರ್ಗ’. ವಚನ, ತತ್ವಪದ, ಕೀರ್ತನೆಗಳ ಹಾಡುಗಾರಿಕೆ; ತಾಳ, ತಂಬೂರಿ, ದಮಡಿಗಳ ನಾದಗಾರಿಕೆ; ಹೀಗೆ ಸ್ವರ ಮತ್ತು ನಾದಗಳು ಸೇರಿಸುವ ಸನ್ಮಾರ್ಗ. ಸ್ವಾತಂತ್ರ್ಯ ಹೋರಾಟದ ಗಾಂಧಿಯನ್ನು ಸಂತನಾಗಿ ಕಾಣುವ ಮತ್ತು ಭೂದಾನ ಚಳುವಳಿ ವಿನೋಭಾ ಬಾವೆಯನ್ನು ಜೋಗಿಯಾಗಿ ಭಾವಿಸುವುದು ಸಹ ದೇಸಿ ಅನುಭಾವಿಕತೆಯ ವಿಶಾಲ ದೃಷ್ಟಿಯೇ ಆಗಿದೆ.

ಗ್ರಾಮೀಣ ಸಂಸ್ಕೃತಿಯ ಹಲವು ಸ್ತರಗಳು ಕಾದಂಬರಿಯಲ್ಲಿ ಅನಾವರಣಗೊಂಡಿವೆ. ಕಂಬಾರಿಕೆ, ಕುಂಬಾರಿಕೆ, ನೇಕಾರಿಕೆಯಂತಹ ಕುಲಕಸಬುಗಳ ಚಿತ್ರಣವಿದೆ. ಸಂಪ್ರದಾಯ, ಹಬ್ಬ-ಆಚರಣೆ, ಸಂತೆ-ಸಡಗರ, ಜಾತ್ರೆಗಳ ಪ್ರಸ್ತಾಪವಿದೆ. ಭೂಮಿಯನ್ನೇ ನಂಬಿ ಬದುಕುವ ಕೃಷಿಕರ, ಶ್ರಮಿಕರ ಹಸಿರಾದ ನೆನಪುಗಳಿವೆ. ತಮ್ಮ ಸುತ್ತಲಿನ ಗಿಡಮೂಲಿಕೆಯನ್ನು ಬಳಸಿ ರೋಗರುಜಿಗಳಿಗೆ ಮದ್ದು ನೀಡುವ ದೊಡ್ಡಾಲಜ್ಜಿಯಂತವರಿದ್ದಾರೆ. ಸ್ವಂತ ಆಸ್ತಿಯನ್ನು ಭೂದಾನ ಮಾಡುವ ಗದ್ದಿಗಪ್ಪನಂತವರು ಹಾಗೂ ತುಮಕೂರಿಗೆ ಎತ್ತಿನಬಂಡಿಯಲ್ಲಿ ಗಾಂಧಿ ನೋಡಲು ಹೋದ ದೇಶಭಕ್ತರಿದ್ದಾರೆ. ಕಾದಂಬರಿಯಲ್ಲಿ ಕಾಣಿಸುವ ಹಳ್ಳಿಯು ಒಂದರ್ಥದಲ್ಲಿ ‘ಗ್ರಾಮ ಸ್ವರಾಜ್ಯ’ಕ್ಕೆ ನಿದರ್ಶನದಂತಿದೆ. ಚಂದ್ರಶೇಖರ ಕಂಬಾರರ ‘ಶಿವಾಪುರ’, ಯು.ಆರ್ ಅನಂತಮೂರ್ತಿಯರ ‘ದುರ್ವಾಸಪುರ’, ತೇಜಸ್ವಿಯವರ ‘ಕೆಸರೂರು’ಗಿಂತ ಪ್ರಸ್ತುತ ಎಸ್.ಗಂಗಾಧರಯ್ಯರ ‘ಗಂಗಪಾಣಿ’ಯು ಚಿತ್ರಿಸುವ ‘ಯುಟೋಪಿಯಾ’ ವಿಶಿಷ್ಟವಾದುದು. ಕಾದಂಬರಿಕಾರರು ಅದಕ್ಕೆ ನಿರ್ದಿಷ್ಟ ಹೆಸರನ್ನು ಸೂಚಿಸದಿದ್ದರೂ, ಅದು ಓದುಗರ ಕಣ್ಣಿನೊಳಗೆ ಇಳಿಯುತ್ತದೆ.

(4) ಸ್ಥಳೀಯ ಪರಿಸರ ಭೌಗೋಳಿಕ ರಚನೆಯ ಜಲತಾಣ, ಜೀವವೈವಿಧ್ಯತೆ ಮತ್ತು ಭೂತಾಣ(ಬಯೋಸ್ಪಾಟ್)ಗಳನ್ನು ಗಂಗಪಾಣಿಯು ಗದ್ದಿಗಪ್ಪನ ಸ್ಮೃತಿಯ ಮೂಲಕ ಕಟ್ಟಿಕೊಡುತ್ತದೆ. ಅದನ್ನು ನಿರೂಪಕರು ಪುಟ್ಟಕಾಡು, ಕುರುಚಲ ಕಾಡು ಎಂದು ಹೆಸರಿಸುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ ಅಷ್ಟೊಂದು ಪ್ರಾಕೃತಿಕವಾಗಿ ಸಮೃದ್ದವಾಗಿ ಪರಿಸರವು, ಊರ ಸುತ್ತಲು ನಡೆಯುವ ಗಣಿಗಾರಿಕೆಯಿಂದ ನಾಶವಾಗುತ್ತದೆ. ಅದರ ನಾಶದೊಂದಿಗೆ ಪ್ರಾಣಿ, ಪಕ್ಷಿ, ಜಲಮೂಲಗಳೆಲ್ಲ ಕಣ್ಮರೆಯಾಗುತ್ತವೆ. ಅಭಿವೃದ್ಧಿಯ ಭಾಗವಾಗಿ ಕಾಣಿಸುವ ‘ಅಂಕಾಲೆಗುತ್ತಿ’ ರೈಲು ನಿಲ್ದಾಣವು ಜೀವ ವೈವಿಧ್ಯತೆಯನ್ನು ನಿರ್ನಾಮಗೊಳಿಸುತ್ತದೆ. ಪ್ರಕೃತಿಯ ಸಮೃದ್ಧಿ ಮತ್ತು ಸರ್ವನಾಶದ ಮುಖಗಳನ್ನು ಕಂಡ ಗದ್ದಿಗಪ್ಪನಿಗೆ ವಿಷಾದವೆನಿಸುತ್ತದೆ. ಗಣಿಗಾರಿಕೆಯನ್ನು ವಿರೋಧಿಸಿ ನಡೆಯುವ ಪರಿಸರ ಚಳುವಳಿಯಲ್ಲಿ ಚಿತ್ತಯ್ಯನಂತವರು ನಾಯಕತ್ವ ವಹಿಸುತ್ತಾರೆ. ಪರಿಸರ ಕೇಂದ್ರಿತವಾದ ಚಿತ್ರಣಗಳ ಸಂದರ್ಭದಲ್ಲಿ ಗಂಗಪಾಣಿಯು ‘ಇಕೋಫಿಕ್ಷನ್’ (ಪರಿಸರವಾದಿ ಕಾದಂಬರಿ) ಹಾಗೆ ಬಿಂಬಿತವಾಗುತ್ತದೆ.

ಗದ್ದಿಗಪ್ಪನ ಸುಪ್ತಕಾಮದ ಜಾಗ್ರತಿ, ನೈತಿಕತೆಯನ್ನು ಮೀರಿದ್ದರಿಂದ ಅನುಭವಿಸುವ ಅಪರಾಧಿತನ, ಒಂಟಿತನದ ಒಳಬೇಗುದಿ, ಪ್ರಜ್ಞೆಯ ಹರಿವು, ತಂದೆ-ಹೆಂಡತಿ-ಮಗನ ಸಾವಿನಿಂದಾದ ಖಿನ್ನತೆ, ಸ್ವಗತ ಮನೋಭಾವ, ಪಾಪಪ್ರಜ್ಞೆ, ನಿದ್ರಾಹೀನತೆ- ಕಥಾನಾಯಕನ ವರ್ತನೆಗಳು ‘ಸೈಕಾಲಾಜಿಕಲ್ ಬಿಹೇವಿಯರ್’ ವ್ಯಾಪ್ತಿಯಲ್ಲಿ ಬರುತ್ತವೆ. ಆದರೆ ಆ ಮನೋವರ್ತನೆಗಳಿಗೆ ತೀವ್ರತೆ, ಆಳ-ಅಗಲ ಇಲ್ಲದಿರುವುದು ಮನೋವಿಶ್ಲೇಷಣಾ ಚರ್ಚೆಗೆ ಅವಕಾಶವಾಗಿಲ್ಲ.

‘ಗಂಗಪಾಣಿ’ ಕನ್ನಡದ ಕಾದಂಬರಿಗಳೊಟ್ಟಿಗೆ ತುಲನೆ ಮಾಡಬಹುದು. ಕುವೆಂಪುರವರ ಮಲೆಗಳಲ್ಲಿ ಮದುಮಗಳುದಲ್ಲಿ ನಾಯಿಗುತ್ತಿ ಸಿಬ್ಬಲಗುಡ್ಡದಲ್ಲಿ ಕಾಣುವ ಮಿಂಚುಹುಳಗಳ ದರ್ಶನದಂತೆ ಇಲ್ಲಿನ ಗದ್ದೆಗಪ್ಪನು ಆಗಾಗ ಮಿಂಚುಳ ದರ್ಶನದ ಅನುಭೂತಿಯನ್ನು ಅನುಭವಿಸುತ್ತಾನೆ. ಕಾನೂರು ಹೆಗ್ಗಡತಿಯಲ್ಲಿನ ಹೂವಯ್ಯನಂತೆ ಇಲ್ಲಿನ ಕಥಾನಾಯಕನು ತೋರುತ್ತಾನೆ. ಆದರೆ ಹೂವಯ್ಯನಿಗೆ ಆಧುನಿಕ ಶಿಕ್ಷಣದಿಂದ ಮೂಡಿದ ವೈಚಾರಿಕತೆಗೂ, ದೇಸಿ ದರ್ಶನಗಳಿಂದ ಮೂಡಿದ ಗದ್ದಿಗಪ್ಪನ ವಿವೇಕಕ್ಕೂ ಭಿನ್ನತೆಯಿದೆ. ತೇಜಸ್ವಿಯವರ ಕರ್ವಾಲೋ ಮಂದಣ್ಣನಿಗಿದ್ದ ಜೇನುಜ್ಞಾನವು ಗದ್ದಿಗಪ್ಪನ ಜೇನುಶಿಕಾರಿಯಲ್ಲಿದ್ದರೂ, ಅದಕ್ಕೆ ಬೇಕಾದ ಕಥನಗಾರಿಕೆ ಕಾದಂಬರಿಯಲ್ಲಿಲ್ಲ. ಗಂಗಪಾಣಿಯ ಸ್ವಾತಂತ್ರ್ಯ ಹೋರಾಟಗಾರ ಸಿದ್ವೀರಪ್ಪನ ಪಾತ್ರವು ಎಚ್.ನಾಗವೇಣಿಯವರ ಗಾಂಧಿಬಂದ ಕಾದಂಬರಿಯ ಕಾರ್ನಾಡ ಸದಾಶಿವರಾಯರನ್ನು ನೆನಪಿಸುತ್ತದೆ. ಅಮರೇಶ ನುಗಡೋಣಿಯವರ ಕಥನಗಳಲ್ಲಿ ಕಾಣಿಸುವ ವಚನಕಾರರ ತಾತ್ವಿಕತೆಯು, ಎಸ್.ಗಂಗಾಧರಯ್ಯ ಅವರಲ್ಲಿ ತತ್ವಪದಕಾರರ ಜೀವನ ದರ್ಶನವಾಗಿ ಒಡಮೂಡಿದೆ. ಬುದ್ದನ ಸಮ್ಯಕದೃಷ್ಟಿ, ಬಸವನ ಕಾಯಕ ಮೌಲ್ಯ, ಗಾಂಧೀಜಿ ಸ್ವಾತಂತ್ರ್ಯ ಹೋರಾಟ, ಅಂಬೇಡ್ಕರ್ ಸಮಾನತೆ, ವಿನೋಭಾ ಬಾವೆಯ ಭೂದಾನ- ಈ ದಾರ್ಶನಿಕ ವ್ಯಕ್ತಿತ್ವದ ಮೌಲ್ಯಗಳು ತತ್ವವಾಗಿ ಮತ್ತು ಕ್ರಿಯೆಯಾಗಿಯೂ ಕಾದಂಬರಿಯಲ್ಲಿ ಕಾಣಿಸುವುದು ವಿಶೇಷ.

‘ಗಂಗಪಾಣಿ’ ಎನ್ನುವುದು ತುಮಕೂರು ಭಾಗದ ಒಂದು ವಿಶಿಷ್ಟ ತೆಂಗಿನ ತಳಿ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ತುಮಕೂರಿಗೆ ಮಹಾತ್ಮ ಗಾಂಧೀಜಿಯವರು ಬಂದಾಗಿನ ಐತಿಹಾಸಿಕ ಘಟನೆಯನ್ನು ಗಂಗಪಾಣಿಯೊಡನೆ ಸಮೀಕರಿಸಲಾಗಿದೆ. ಆ ಭಾಗದ ಜನರಿಗೆ ‘ಗಾಂಧೀಜಿ ಸ್ಪರ್ಶಿಸಿದ ಗಂಗಪಾಣಿ’ ಎಂಬ ನಂಬಿಕೆಯಿದೆ. ಸಮಕಾಲೀನ ಕನ್ನಡ ಕಾದಂಬರಿಗಳು ತಮ್ಮ ವಸ್ತು-ವಿಷಯಗಳಿಗಾಗಿ ಈಗಲೂ ಬ್ರಿಟೀಷ್ ವಸಾಹಾತು ಕಾಲದ ಸ್ಮೃತಿಗಳಿಗೆ ಮುಖಾಮುಖಿಯಾಗುತ್ತಿವೆ. (ಹೆಚ್.ನಾಗವೇಣಿಯವರ-ಗಾಂಧಿ ಬಂದ, ಶ್ರೀನಿವಾಸ ವೈದ್ಯರ-ಹಳ್ಳಬಂತು ಹಳ್ಳ, ಅನುಪಮಾ ಪ್ರಸಾದರ-ಹಕ್ಕಿಹಳ್ಳದ ಹಾದಿಗುಂಟ; ಮೊದಲಾದವು). ಗಂಗಪಾಣಿ ಕೂಡ ಅದಕ್ಕೆ ಹೊರತಲ್ಲ. ಕೇಡುಗಳುಳ್ಳ ಮಾನವರ ಅನುಭವಗಳನ್ನು ಬೆನ್ನಟ್ಟಿಹೋಗುವ ಸೃಜನಶೀಲ ಬರಹಗಾರರ ನಡುವೆ, ದೇಸೀ ಜೀವನದ ಹಾಡು-ಪಾಡುಗಳನ್ನು ದರ್ಶಿಸುವ ಕಡೆಗೆ ಎಸ್. ಗಂಗಾಧರಯ್ಯನವರ ಕಾದಂಬರಿಯ ತುಡಿತವಿದೆ.

ಗಂಗಪಾಣಿಯಲ್ಲಿ ಕೆಲವು ಸಮಸ್ಯೆಗಳಿವೆ. ಮೊದಲೆರಡು ಅಧ್ಯಾಯಗಳಲ್ಲಿ ಸ್ಥಳೀಯ ಭಾಷಾ ನಿರೂಪಣೆಯು ಕಾದಂಬರಿ ಹಿಗ್ಗಿದಂತೆ ಕುಗ್ಗಿಹೋಗಿದೆ. ಮತ್ತೆ ಅಲ್ಲಲ್ಲಿ ಕಾಣಿಸುವ ದೇಸಿತನದ ಸೊಗಡು ಕಥನಕ್ರಮದಲ್ಲಿ ಮಿಂಚಿ ಮರೆಯಾಗುತ್ತದೆ. ಗದ್ದಿಗಪ್ಪನ ನೆನಪುಗಳ ಭಾರದಿಂದ ಬಳಲುವ ಕಾದಂಬರಿಯು ‘ಸೀತಾಫಲದಂತೆ- ತಿರುಳಿಗಿಂತ ಬೀಜವೇ ಜಾಸ್ತಿಯಾಗಿದೆ’. ‘ಒಂದೆಡೆಗೆ ನಿಂತು, ಬೇರುಬಿಟ್ಟು ಮರವಾಗಬೇಕೆಂಬ’ ಒಳತುಡಿತವು, ಅವನ ತಿರುಗಾಟದಲ್ಲಿ ಕಳೆದುಹೋಗುತ್ತದೆ. ಮಾನಸಿಕ ಇಲ್ಲವೆ ದೈಹಿಕವಾಗಿ ಕಾದಂಬರಿಯುದ್ದಕ್ಕೂ ಚಲಿಸುವ ಕಥಾನಾಯಕನು, ತಲುಪಿದ ಗುರಿಯಾದರೂ ಏನು?. ತನ್ನ ಬದುಕಿನಲ್ಲಿ ಹಲವು ಆದರ್ಶ ವ್ಯಕ್ತಿಗಳ ಮುಖಾಮುಖಿಯಾಗಿಯೂ, ಕೊನೆಗೆ ಪಾಪಪ್ರಜ್ಞೆ, ಅವಮಾನ, ಖಾಲಿತನದ ಭಾವನೆಗಳಲ್ಲಿ ಸಿಲುಕುತ್ತಾನೆ. ಮಿಂಚುಳ, ಬೆಳಕಿಗೆ ಮತ್ತೆ ಮತ್ತೆ ಎದುರಾಗುವ ಗದ್ದಿಗಪ್ಪನು ಕತ್ತಲಿಲ್ಲಿ ಇರಲು ಬಯಸುತ್ತಾನೆ. ಅವನು ಯೋಚಿಸುವುದುಕ್ಕೂ ಮತ್ತು ಆಗುವುದಕ್ಕೂ ನಡುವೆ ವೈರುಧ್ಯಗಳಿವೆ. ಕಾದಂಬರಿಯ ಕೆಲವು ವಿವರಗಳು ಲೇಖಕರ ಅಂಶಿಕ ಆತ್ಮಕತೆಯಂತೆ ಭಾಸವಾಗುತ್ತದೆ. ನಿರೂಪಕ ಮತ್ತು ಕಥಾನಾಯಕರ ನಡುವಿನ ಅಂತರ್ ಕಡಿಮೆಯಿರುವುದು (ಲಾಸ್ ಆಫ್ ಸೈಚಿಕಲ್ ಡಿಸ್ಟನ್ಸ್) ಅದಕ್ಕೆ ಕಾರಣವಾಗಿರಬಹುದು. ಇವೆಲ್ಲವುಗಳ ನಡುವೆ ಕಾದಂಬರಿಯ ವಸ್ತುವಿನಲ್ಲಿರುವ ಜೀವದ್ರವ್ಯ, ಆಕೃತಿಯಲ್ಲಿರುವ ಸಾವಯವ ಸಂಯೋಜನೆ, ಆಶಯದಲ್ಲಿರುವ ಮನುಷ್ಯಪರತೆ, ಪಾತ್ರಗಳಲ್ಲಿನ ರಚನಾತ್ಮಕ ಹೆಣಿಗೆಯು ‘ಗಂಗಪಾಣಿ’ ಮುಖದ ಮೇಲೆ ಗೆಲುವಿನ ಗೆರೆಗಳನ್ನು ಮೂಡಿಸಿವೆ.

ಡಾ.ಮಹಾಂತೇಶ ಪಾಟೀಲ
ಸಹಾಯಕ ಪ್ರಾಧ್ಯಾಪಕರು
ಕನ್ನಡ ಅಧ್ಯಯನ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ
8722726886.

MORE FEATURES

'ಮಾಂದಳಿರ ತೊಟ್ಟಿಲು' ಎಲ್ಲರ ಓದಿನ ಸಂಗಾತಿಯಾಗಲೆಂದು ಆಶಿಸುತ್ತೇನೆ

03-07-2024 ಬೆಂಗಳೂರು

'ಸಮಕಾಲೀನ ಕವಿಗಳ ಕವಿತೆಯ ಸಾಲುಗಳನ್ನು ಓದುವಾಗ ಅಂಕಣದಲ್ಲಿ ಕಾಣಿಸುವುದು ನಾಲ್ಕು ಸಾಲುಗಳನ್ನಾದರೂ ಅವರ ಹತ್ತು ಕವಿತ...

ಮನುಷ್ಯನ ಬದುಕಿನಲ್ಲಿ ಅರ್ಥಪೂರ್ಣವಾದದ್ದು ಏನಾದರೂ ಘಟಿಸುತ್ತದೆ ಅಂದರೆ ಅದು 'ಪ್ರೀತಿ' ಮಾತ್ರ...

31-12-1899 ಬೆಂಗಳೂರು

"ಇಲ್ಲಿನ ಭಗ್ನ ಪ್ರೇಮದ ಕಥೆ ಬರಿಯ ಕಥೆಯಲ್ಲ ಅದೊಂದು ಜನ್ಮ ಜನ್ಮಾಂತರದ ಪ್ರೀತಿಯ ಕಥೆ, ಇಲ್ಲಿ ಕೋಲಾರದ ಕೆಜಿಎಫ್ ಇದ...

ಈ ಟೂರು ಮುಗಿಯದ ಪಯಣ; ಸಂಜೋತಾ ಪುರೋಹಿತ

02-07-2024 ಬೆಂಗಳೂರು

‘ಪ್ರಯಾಣವೇ ಆಗಲಿ, ಜೀವನದಲ್ಲಿ ಕೈಗೊಳ್ಳಬೇಕಾದ ಯಾವುದೋ ಒಂದು ನಿರ್ಧಾರವೇ ಆಗಲಿ, ಒಂದು ಹೆಜ್ಜೆ ಎತ್ತಿ ಮುಂದಿಡದ ಹ...