ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...

Date: 29-01-2023

Location: ಬೆಂಗಳೂರು


''ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು. ಎಲ್ಲರಿಗೂ ಗೌರವದಿಂದ ಬದುಕುವ ಹಕ್ಕಿದೆ. ಹಾಗೇನೇ ಗಂಡಿನ ದೇಹ ಹೊಂದಿದ್ದು ಹೆಣ್ಣಿನ ಭಾವ, ಹೆಣ್ಣಿನ ದೇಹ ಹೊಂದಿದ್ದು ಗಂಡಿನ ಭಾವ ಹೊಂದಿರುವಂತವರು ಇರುತ್ತಾರೆ. ಗಂಡಾಗಿದ್ದು ಹೆಣ್ಣಾದದ್ದು ಗೊತ್ತು ಇದೇನು ಹೆಣ್ಣಾಗಿದ್ದು ಗಂಡಾಗೋದು ಅಂದ್ರಾ... ಹೌದು ಅಂತಹ ವಿರಳ ವಿಶೇಷ ವ್ಯಕ್ತಿಯೊಬ್ಬರ ಜೀವನ ಪಯಣ ಇಂದಿನ ನಿಮ್ಮ ಓದಿಗೆ ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ರೇಣುಕಾ ಧರಣಪ್ಪ ಅವರ ಮಗ ಪೃಥ್ವಿಯವರ ಪಯಣವನ್ನು ಕುರಿತು ಬರೆದಿದ್ದಾರೆ...

ಎಲ್ಲರಿಗೂ ಅವರದೇ ಆದ ಭಾವನೆಗಳಿರುತ್ತವೆ. ಅದಕ್ಕೆ ತಕ್ಕಂತೆ ದೇಹ ಸ್ಪಂದಿಸುತ್ತದೆ. ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು. ಎಲ್ಲರಿಗೂ ಗೌರವದಿಂದ ಬದುಕುವ ಹಕ್ಕಿದೆ. ಹಾಗೇನೇ ಗಂಡಿನ ದೇಹ ಹೊಂದಿದ್ದು ಹೆಣ್ಣಿನ ಭಾವ, ಹೆಣ್ಣಿನ ದೇಹ ಹೊಂದಿದ್ದು ಗಂಡಿನ ಭಾವ ಹೊಂದಿರುವಂತವರು ಇರುತ್ತಾರೆ. ಗಂಡಾಗಿದ್ದು ಹೆಣ್ಣಾದದ್ದು ಗೊತ್ತು ಇದೇನು ಹೆಣ್ಣಾಗಿದ್ದು ಗಂಡಾಗೋದು ಅಂದ್ರಾ... ಹೌದು ಅಂತಹ ವಿರಳ ವಿಶೇಷ ವ್ಯಕ್ತಿಯೊಬ್ಬರ ಜೀವನ ಪಯಣ ಇಂದಿನ ನಿಮ್ಮ ಓದಿಗೆ ತಂದಿದ್ದೇವೆ. ಇದು ಪ್ರಕೃತಿ ಸಹಜವಾಗಿ ಆಗುವಂಥದ್ದು. ಅದೇನು ಅಸಂಬದ್ಧವಲ್ಲ ಅಸಹ್ಯವಲ್ಲ. ಅವರೂ ಎಲ್ಲರಂತೆಯೇ ಮನುಷ್ಯರು. ದೇಹ ಮತ್ತು ಮನಸ್ಸಿನ ಹೊಂದಾಣಿಕೆಯ ವ್ಯತ್ಯಾಸದಿಂದಾಗಿ ಹಾಗಾಗುತ್ತದೆ. ಇಪ್ಪತ್ತೆಂಟು ವರ್ಷ ಹೆಣ್ಣಾಗಿದ್ದು ಗಂಡಿನ ನಡವಳಿಕೆ ಹೊಂದಿ ನಂತರ ಗಂಡಾಗಿ ಅವರಂತೆಯೇ ಇರುವ ವ್ಯಕ್ತಿಗಳ ಪರವಾಗಿ ನಿಲ್ಲಬೇಕು ತಮ್ಮ ಸಮುದಾಯಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಪೃಥ್ವಿಯವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ರೇಣುಕಾ ಧರಣಪ್ಪ ಅವರ ಮಗ ಪೃಥ್ವಿಯವರ ಪಯಣವನ್ನು ಅವರ ಮಾತುಗಳಲ್ಲಿ ಓದಿಕೊಳ್ಳಿ.

'ಇದೆಲ್ಲ ನನ್ನ ಅನುಭವಕ್ಕೆ ಬಂದದ್ದು ಒಂದನೇ ತರಗತಿ ಓದುವಾಗಲೇ ಹುಡುಗರ ಬಟ್ಟೆ ನನಗೆ ತುಂಬ ಇಷ್ಟವಾಗುತ್ತಿತ್ತು. ಹುಡುಗಿಯರು ಅಂದರೆ ತುಂಬ ಆಕರ್ಷಣೆಯಾಗುತ್ತಿತ್ತು. ಹುಡುಗರಿಗೆ ಏನೆಲ್ಲಾ ಅನ್ನಿಸುತ್ತಿತ್ತೋ ನನಗೂ ಕೂಡ ಅದೇ ಭಾವನೆಗಳು ಕಾಡಲಾರಂಭಿಸಿದವು. ಏಳನೇ ತರಗತಿಯಲ್ಲಿ ನಾನು ಋತುಮಾತಿಯಾದೆ. ಅದು ನನಗೆ ಸಹಿಸಲಸಾಧ್ಯವಾದ ದುಃಖ. ತುಂಬ ಹಿಂಸೆ ಅನ್ನಿಸುತ್ತಿತ್ತು. ಸಾಲದೆಂಬಂತೆ ದೇಹದಲ್ಲಾಗುವ ಬದಲಾವಣೆಗಳು ಎದೆ ಬೆಳೆಯುತ್ತಿರುವುದು ನನಗೆ ತೀವ್ರ ಸ್ವರೂಪದಲ್ಲಿ ಕಷ್ಟ ಅನ್ನಿಸುತ್ತಿತ್ತು. ನನ್ನದಲ್ಲದ ದೇಹದಲ್ಲಿ ನಾನು ಇದ್ದೇನೆ. ಬೇರೆ ದೇಹದೊಳಗೆ ಸಿಕ್ಕಿ ಹಾಕಿಕೊಂಡ ಹಾಗೆ ಅನ್ನಿಸಲು ಪ್ರಾರಂಭವಾಯ್ತು. ನಾನು ಹುಡುಗ ಹುಡುಗಿ ಅಲ್ಲ ಅಂತ ಹೇಗೆ ಅರ್ಥ ಮಾಡಿಸೋದು ತಿಳಿಯುತ್ತಿರಲಿಲ್ಲ. ಆಗ ಇದರ ಬಗ್ಗೆ ಓದಿ ತಿಳಿದುಕೊಳ್ಳುವ ಯಾವ ಆಧಾರಗಳು, ಸೌಲಭ್ಯಗಳು ಲಭ್ಯವಿರಲಿಲ್ಲ. ಅದಾದ ಮೇಲೆ ಎಂಟನೇ ತರಗತಿಗೆ ಬಂದಾಗ ಒಬ್ಬಳು ಸ್ನೇಹಿತೆ ನನ್ನ ನಡವಳಿಕೆಯನ್ನೆಲ್ಲ ಗಮನಿಸಿ ನನಗೆ ಆಪ್ತವಾಗುತ್ತ ಬಂದಳು. ನಾನು ಅವಳ ಬಳಿ ಎಲ್ಲ ಹೇಳಿಕೊಂಡು ಆರಾಮಾಗಿ ಖುಷಿಯಿಂದ ಇರುತ್ತಿದ್ದೆ. ಅವಳು ನನಗೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡ್ತಾ ಬಂದಳು. ಭದ್ರಾವತಿ ತಾಲ್ಲೂಕು ಶಿವಮೊಗ್ಗದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿದೆ. ಇಂಜಿನಿಯರಿಂಗಲ್ಲೂ ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದೆವು. ಆಗ ನನ್ನ ಸ್ನೇಹಿತೆ ನನ್ನ ನನ್ನಲ್ಲಿನ ಬದಲಾವಣೆ ಬಗ್ಗೆ ಎಲ್ಲ ರೀತಿಯ ಹುಡುಕಾಟ ಮಾಡಿ ಪೂರ್ತಿ ವಿಚಾರ ತಿಳಿದುಕೊಂಡರು. ಇದರಲ್ಲಿ ನಿನ್ನ ತಪ್ಪೇನು ಇಲ್ಲ. ಇದು ಸ್ವಭಾವಿಕವಾಗಿ ಆಗುವಂತದ್ದೇ. ಇದಕ್ಕೆ ಟ್ರಾನ್ಸ್ ಜೆಂಡರ್ ಅಂತಾರೆ. ಅದರಲ್ಲಿ ನೀನು ಟ್ರಾನ್ಸ್ ಮ್ಯಾನ್ ಅಂದರೆ ಹೆಣ್ಣಿನಿಂದ ಗಂಡಾಗೋದು ಅಂತ ವಿವರಿಸಿದರು. ತುಂಬಾ ಜನರಿಗೆ ಗಂಡಾಗಿ ಹುಟ್ಟಿ ನಂತರ ಹೆಣ್ಣಾಗೋದು ಗೊತ್ತು. ಅದರ ಬಗ್ಗೆ ಕೆಲವು ಸಿನಿಮಾಗಳನ್ನು ಕೂಡ ಮಾಡಿದ್ದಾರೆ. ಹಾಗಾಗಿ ಜನರಿಗೆ ಟ್ರಾನ್ಸ್ ಜೆಂಡರ್ ಅಂದರೆ ಗಂಡಿನಿಂದ ಹೆಣ್ಣಾಗೋದು ಅಂತ ಮಾತ್ರ ಅಂದುಕೊಂಡಿರುತ್ತಾರೆ. ನನ್ನಂತವರು ಕೂಡ ಇದ್ದಾರೆ ಅಂತ ಗೊತ್ತಿರುವುದು ಬಹಳ ಕಡಿಮೆ. ಇದಕ್ಕೆ ಪರಿಹಾರ ಕೂಡ ಇದೆ. WHO ಇದು ಯಾವ ಮಾನಸಿಕ ರೋಗವಲ್ಲ. ಮೆಡಿಕಲ್ ಫ್ಯಾಕ್ಟ್ ನಿಂದಾಗಿ ದೇಹ ಮತ್ತು ಮನಸು ಒಂದಕ್ಕೊಂದು ಹೊಂದಾಣಿಕೆ ಆಗೋದಿಲ್ಲ. ಇದಕ್ಕಾಗಿ ಸರ್ಜರಿ, ಹಾರ್ಮೋನ್ ಟ್ರೀಟ್ಮೆಂಟ್ ಕಂಡುಹಿಡಿದಿದ್ದಾರೆ. ನೀನು ಚೆನ್ನಾಗಿ ಓದು. ಒಳ್ಳೆ ಕೆಲಸಕ್ಕೆ ಸೇರಿ ಸ್ವಾವಲಂಬಿಯಾದರೆ ಎಲ್ಲಾ ಟ್ರೀಟ್ಮೆಂಟ್ ತೆಗೆದುಕೊಳ್ಳಬಹುದು ಎಂದಿದ್ದರು'

'ನಾನು ಚೆನ್ನಾಗಿ ಓದಿ, ಇಂಜಿನಿಯರಿಂಗ್ ಮುಗಿಸಿ, ಎಂ. ಟೆಕ್ ಕೂಡ ಮಾಡಿಕೊಂಡೆ. ನಂತರ ಐ ಟಿ ಇಂಡಸ್ಟ್ರಿಯಲ್ಲಿ ನನಗೆ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಕೂಡ ಸಿಕ್ತು. ನಂತರ ಆಫೀಸ್ ಗೆ ಹೋಗಿ ಬರುತ್ತಾ ಇದ್ದೆ. ಮೊದಲಿಗೆ ಹೆಣ್ಣು ಅಂತಲೇ ಎಲ್ಲಾ ಕಡೆ ಸೇರಿಸಿದ್ದೆ. ಆಗ ಭಯ ಬೇರೆ ಇತ್ತು. ಎಲ್ಲಿ ಕೆಲಸದಿಂದ ತೆಗೆದುಬಿಡುತ್ತಾರೋ ಎಂದು ಹೇಳಿಕೊಂಡಿರಲಿಲ್ಲ. ಅಲ್ಲಿಯವರೆಗೆ ಮನೆಯಲ್ಲೂ ಯಾರಿಗೂ ಗೊತ್ತಿರಲಿಲ್ಲ. ನನಗೆ ಜೊತೆಯಾಗಿದ್ದದ್ದು ನನ್ನ ಸ್ನೇಹಿತೆ ಮಾತ್ರ. ಅವರು ನನಗೆ ತುಂಬ ಸಹಾಯ ಮಾಡಿದ್ದಾರೆ. ಅವರ ಋಣ ಬಹಳ ದೊಡ್ಡದು. ಕೆಲಸಕ್ಕೆ ಸೇರಿ ಮೂರು ವರ್ಷಗಳ ನಂತರ ನನ್ನ ಸ್ನೇಹಿತೆ ಹೇಗೂ ಇಂಡಿಪೆಂಡೆಂಟ್ ಆಗಿದ್ದೀಯಾ ಮನೆಯಲ್ಲಿ ಹೇಳಿಬಿಡು ಅವರೂಡ್ಡ ಅರ್ಥ ಮಾಡಿಕೊಳ್ಳುತ್ತಾರೆ ಅಂದರು. ನನಗೂ ಸರಿ ಅನ್ನಿಸಿ ನಾನು ಹೇಳಬೇಕೆಂದಿದ್ದ ಎಲ್ಲವನ್ನು ಒಂದು ಕಾಗದದಲ್ಲಿ ಬರೆದು ಒಂದು ದಿನ ಅಣ್ಣನ ಕೈಗಿತ್ತೆ. ಆಗ ನನ್ನೊಳಗೆ ಭಯ, ಆತಂಕ ಮನೆ ಮಾಡಿತ್ತು. ಅಣ್ಣ ಪೂರ್ತಿ ಓದಿ ತುಂಬ ನೊಂದುಕೊಂಡು ಆ ಕ್ಷಣದಲ್ಲೇ ನನ್ನನ್ನು ತಮ್ಮನಾಗಿ ಒಪ್ಪಿಕೊಂಡ. ನೀನು ತಂಗಿಯಾದರೇನು? ತಮ್ಮನಾದರೇನು? ಇಷ್ಟು ದಿನ ಒಬ್ಬನೇ ಇಷ್ಟು ನೋವು ಯಾಕೋ ತಿಂದೆ. ಮೊದಲೇ ಹೇಳಿದ್ರೆ ಇದಕ್ಕೂ ಮೊದಲೇ ಏನಾದರೂ ಮಾಡಬಹುದಿತ್ತು ಎಂದು ಸಮಾಧಾನ ಹೇಳಿದ. ಅಲ್ಲಿಂದ ಮನೆಗೆ ಬಂದು ಅಪ್ಪ ಅಮ್ಮನಿಗೆ ಎಲ್ಲ ಹೇಳಿ ಅವರನ್ನು ಒಪ್ಪಿಸಿದ. ನಾನು ತುಂಬ ವಿವರಿಸಿದೆ. ನನ್ನಂತೆ ಇರುವ ಎಷ್ಟೊಂದು ಜನರು ಐ.ಎ.ಎಸ್. ಆಫೀಸರ್, ಡಾಕ್ಟರ್, ಲಾಯರ್, ಇಂಜಿನಿಯರ್ ಆಗಿದ್ದಾರೆ. ನೀವು ನನಗೆ ಸಪೋರ್ಟ್ ಮಾಡಿದ್ರೆ ಪ್ರಾಣ ಹಾನಿ ಏನೂ ಆಗಲ್ಲ ಸಣ್ಣ ಸರ್ಜರಿ ಇರತ್ತೆ, ಕೆಲವೊಂದು ಹಾರ್ಮೋನ್ ಟ್ರೀಟ್ಮೆಂಟ್ ಇರತ್ತೆ ಅಷ್ಟೆ. ಒಂದು ಸಲ ಇದೆಲ್ಲ ಆಗಿ ಬಿಟ್ಟರೆ ಸಮಾಜ ಕೂಡ ನನ್ನನ್ನು ಒಪ್ಪಿಕೊಳ್ಳುತ್ತದೆ. ಅದಕ್ಕೆ ಮೊದಲು ನೀವು ನನ್ನ ಒಪ್ಪಿಕೊಳ್ಳಬೇಕು' ಎಂದೆವು‌.

'ನಾನು ಹುಡುಗಿಯಾಗಿದ್ದಾಗ ಪಿರಿಯಡ್ಸ್ ಆಗ್ತಾ ಇತ್ತು. ಅದಕ್ಕಾಗಿ ಗಂಡಸಿನ ಹಾರ್ಮೋನ್ ಇಂಜೆಕ್ಷನ್ ಇರತ್ತೆ. ಅದನ್ನು ನಾವು ತೆಗೆದುಕೊಂಡರೆ ಪಿರಿಯಡ್ಸ್ ನಿಲ್ಲುತ್ತದೆ. ಮುಖದಲ್ಲಿ ಗಡ್ಡ, ಮೀಸೆ ಮೂಡಲು ಪ್ರಾರಂಭವಾಗುತ್ತದೆ. ಧ್ವನಿ ಕೂಡ ಬದಲಾಗುತ್ತದೆ. ಅದಾದ ಆರು ತಿಂಗಳ ನಂತರ ಸರ್ಜರಿ ಮಾಡುತ್ತಾರೆ. ಹುಡುಗ, ಹುಡುಗಿಯರ ದೇಹದಲ್ಲಿ ವ್ಯತ್ಯಾಸ ಇರತ್ತೆ. ಮೊದಲು ಟಾಪ್ ಸರ್ಜರಿ (ಎದೆಗಳನ್ನು ತೆಗೆಯುವುದು) ಇರುತ್ತದೆ. ಅದಾದ ನಂತರ ಹುಡುಗರ ಎದೆಯ ಹಾಗೆ ಕಾಣುತ್ತದೆ. ನಂತರ ಲಿಂಗದ ಸರ್ಜರಿ ಮಾಡ್ತಾರೆ ಅದೂ ಕೂಡ ಹುಡಗರ ಲಿಂಗದ ಹಾಗೇನೇ ಆಗುತ್ತೆ. ಅಪ್ಪ ಅಮ್ಮನೂ ತಮ್ಮ ಆತಂಕ ಮರೆತು ಧೈರ್ಯ ತಂದುಕೊಳ್ಳುತ್ತಾರೆ. ನನ್ನ ಕೆಲಸದ ಆಫೀಸಿನಲ್ಲೂ ನನ್ನನ್ನು ಯಾರೂ ಬೇರೆ ತರ ನೋಡಲಿಲ್ಲ. ಟ್ರೀಟ್ಮೆಂಟ್ ಮಾಡಿಸಲು ಕೆಲಸ ಬಿಡಬೇಕು ಎಂದುಕೊಂಡಿದ್ದೆ, ಕಂಪನಿ ಸಪೋರ್ಟ್ ಮಾಡಲ್ಲ ಅಂದುಕೊಂಡು ಎಂದು ಬ್ರೌಸ್ ಮಾಡುವಾಗ LGBTQ, ERG (Employment Resource Group) ಅಂತ ಇತ್ತು ತಕ್ಷಣವೇ ಪಿಂಗ್ ಮಾಡಿದೆ. ಕೆಲಸ ಬಿಡುವಂತದ್ದು ಏನೂ ಇಲ್ಲ. ನೀವು ಟ್ರೀಟ್ಮೆಂಟ್ ಶುರು ಮಾಡಿ ನಮ್ಮ ಕಂಪನಿ ಕಡೆಯಿಂದ ಏನೆಲ್ಲಾ ಸಾಧ್ಯವೋ ಅಷ್ಟೂ ಸಹಾಯ ಮಾಡುತ್ತೇವೆ ಎಂದು ಹೇಳಿ ನನ್ನ ಶಸ್ತ್ರಚಿಕಿತ್ಸೆಯ ಒಟ್ಟು ನಾಲ್ಕು ಲಕ್ಷ ಮೊತ್ತವನ್ನು ಕಂಪನಿಯ ಮೆಡಿಕಲ್ ಇನ್ಶೂರೆನ್ಸ್ ಕಡೆಯಿಂದ ಭರಿಸಿತ್ತು. ಅದಕ್ಕಾಗಿ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಂತರ ನನ್ನ ಎಲ್ಲ ಡಾಕ್ಯುಮೆಂಟ್ಸ್ ಬದಲಾವಣೆ ಮಾಡಿಸಿದೆ. 2019 ರಲ್ಲಿ ನಾನು ಪೃಥ್ವಿಯಾದೆ. ಅಪ್ಪ ಅಮ್ಮ ಕುಟುಂಬದ ಎಲ್ಲರೂ ನನ್ನನ್ನು ಆರತಿ ಮಾಡಿ ಒಳಗೆ ಕರೆದುಕೊಂಡರು. ನಾನು ಹೊಸದಾಗಿ ಹುಟ್ಟಿ ಬಂದೆನೇನೋ ಎಂಬ ಖುಷಿ. ಈಗ ಯಾರೂ ನನ್ನ ಹಳೆಯ ಹೆಸರಿನಿಂದ ಕರೆಯುವುದಾಗಲಿ, ನೋಯಿಸುವ ಹಾಗೆ ಮಾತಾಡುವುದಾಗಲಿ ಯಾವುದು ಇಲ್ಲ. ಕಂಪನಿಯ ಎಲ್ಲರೂ ನನ್ನ ತುಂಬ ಗೌರವದಿಂದ ಘನತೆಯಿಂದ ನನ್ನನ್ನು ಕಾಣುತ್ತಾರೆ. ಆದರೆ ಈ ಸರ್ಜರಿಯಿಂದಾಗಿ ನಮಗೆ ಮಕ್ಕಳನ್ನು ಹುಟ್ಟಿಸಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ಸ್ವಾಭಾವಿಕವಾಗಿ ನಮಗೆ ವೀರ್ಯಾಣು ಉತ್ಪತ್ತಿಯಾಗುವುದಿಲ್ಲ. ಮುಂದೊಂದು ದಿನ ಇದೂ ಕೂಡ ಆಗಬಹುದು. ಸರ್ಜರಿಗಿಂತ ಮೊದಲು ನನ್ನನ್ನು ಗಂಡಸಿಗೆ ಕೊಟ್ಟು ಮದುವೆ ಮಾಡಿಸಿದ್ದರೆ ನನಗೆ ಮಕ್ಕಳು ಆಗುತ್ತಿತ್ತು.

ಹೀಗೆ ನನ್ನ ತರಹದ ಒಬ್ಬ ವ್ಯಕ್ತಿಗೆ ಹುಡುಗನ ಜೊತೆಗೆ ಬಲವಂತದಿಂದ ಮದುವೆ ಮಾಡಿಸಿದರು. ಅವರು ಮೂರು ತಿಂಗಳು ಕೂಡ ಜೊತೆಗೆ ಇರಲಿಲ್ಲ ವಿಚ್ಚೇದನ ತಗೊಂಡ್ರು. ಇದರಿಂದ ಏನಾಯ್ತು..? ಇನ್ನೊಬ್ಬ ವ್ಯಕ್ತಿಯ ಭವಿಷ್ಯ ಕೂಡ ಹಾಳಾಯ್ತು. ನನ್ನ ಹದಿನೈದು ವರ್ಷದ ಗೆಳತಿಯ ಸ್ನೇಹ ಪ್ರೇಮವಾಗಿದ್ದರಿಂದ ನಾವಿಬ್ಬರು ಮಾತಾಡಿ ಮದುವೆಯಾಗೋಣ ಅಂತ ತೀರ್ಮಾನಿಸಿದೆವು. ಮನೆಗಳಲ್ಲಿ ವಿಚಾರ ಪ್ರಸ್ತಾಪ ಮಾಡಿದಾಗ ನನ್ನ ಗೆಳತಿಯ ಮನೆಯವರು ಸಮಾಜಕ್ಕೆ ಹೆದರಿ ನನ್ನೊಂದಿಗೆ ಮದುವೆಗೆ ನಿರಾಕರಿಸಿದರು. ನನ್ನ ಗೆಳತಿ ಒಲ್ಲದ ಮನಸ್ಸಿನಿಂದ ತಂದೆ ತಾಯಿಯನ್ನು ನೋಯಿಸಬಾರದು ಎನ್ನುವ ಕಾರಣದಿಂದ ಬೇರೆ ಮದುವೆ ಮಾಡಿಕೊಳ್ಳುತ್ತಾರೆ. ಹದಿನೈದು ವರ್ಷದಿಂದ ಎಲ್ಲಾ ಏಳು ಬೀಳುಗಳಲ್ಲೂ ಜೊತೆಗಿದ್ದ ಸ್ನೇಹಿತೆ ಇನ್ನು ನನ್ನೊಂದಿಗಿರುವುದಿಲ್ಲ ಎಂದು ತಿಳಿದು ಒಂದು ಕ್ಷಣ ಭೂಮಿಯೇ ಕುಸಿದು ಬಿದ್ದಂತಾಯಿತು. ಖಿನ್ನತೆಗೆ ಜಾರಿದರೂ ಎಲ್ಲಿಯೂ ತೋರಿಸಿಕೊಳ್ಳದಂತೆ ಮತ್ತೆ ಮೊದಲಿನಂತಾದೆ. ಅದಕ್ಕೂ ಮುಂಚೆ ನನ್ನ ಆಫೀಸಿನ ದೀಪಿಕಾ ಎನ್ನುವ ಸಹೋದ್ಯೋಗಿಯೊಬ್ಬರು ಅವರ ಪ್ರೇಮ ನಿವೇದನೆಯನ್ನು ನನ್ನ ಮುಂದೆ ಹೇಳಿಕೊಂಡಿದ್ದರು. ಅಮ್ಮ ಅವರನ್ನು ಮನೆಗೆ ಕರೆದುಕೊಂಡು ಬರಲು ಹೇಳಿದ್ರು. ನಮ್ಮ ಮನೆಯ ಎಲ್ಲಾ ಸದಸ್ಯರು ಅವರನ್ನು ಒಪ್ಪಿಕೊಂಡರು. ದೀಪಿಕಾಗೆ ನನ್ನನ್ನು ಒಪ್ಪಿಕೊಳ್ಳುವ ಮೊದಲೇ ನನಗೆ ಮಕ್ಕಳು ಆಗೋದಿಲ್ಲ ಈಗ ಇರುವ ವಯಸ್ಸು ನಿನಗೆ ಮುಂದೆ ಇರೋದಿಲ್ಲ. ಆಮೇಲೆ ನಿನಗೆ ಮಕ್ಕಳು ಬೇಕು ಅಂದ್ರೆ ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ ಅಂತ ವಿವರವಾಗಿ ಎಲ್ಲವನ್ನು ಹೇಳಿದ್ದೆ. ಅವರು ಸಂಪೂರ್ಣ ಮನಸ್ಸಿನಿಂದ ನನ್ನ ಒಪ್ಪಿಕೊಂಡಿದ್ದರು. ಮದುವೆ ಎಂದರೆ ಬರೀ ಮಕ್ಕಳನ್ನು ಮಾಡೋದೇ ಅಲ್ಲ.

ನಮ್ಮ ಜೀವನದಲ್ಲಿ ಬಾಳ ಸಂಗಾತಿ ಬೇಕು. ತಂದೆ ತಾಯಿ ಕೊನೆ ತನಕ ಇರೋದಿಲ್ಲ. ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಒಂದು ಜೀವ ಬೇಕು ಅನ್ನೋದನ್ನು ಖಾತರಿಪಡಿಸಿದ್ರು. ನನಗೆ ಮಕ್ಕಳು ಬೇಡ. ಎಲ್ಲರನ್ನು ಪ್ರೀತಿಸೋಣ ಎಂದು ನನ್ನನ್ನು ತುಂಬ ಪ್ರೀತಿಸುತ್ತಾರೆ. ನಮ್ಮ ಸಮುದಾಯದವರ ಬಗ್ಗೆ ತುಂಬ ಕಾಳಜಿ ಇದೆ ದೀಪಿಕಾ ಅವರಿಗೆ. ಅವರು ಸಿಕ್ಕಿದ್ದು ನನ್ನ ಪಾಲಿಗೆ ಸೌಭಾಗ್ಯ. ಇದ್ದಕ್ಕಿದ್ದಂತೆ ಅಮ್ಮನಿಗೆ ಗರ್ಭಕೋಶದ ಕ್ಯಾನ್ಸರ್ ಫೈನಲ್ ಸ್ಟೇಜಿನಲ್ಲಿರುವುದು ಪತ್ತೆಯಾಗುತ್ತದೆ. ಬಹಳ ಸಮಯ ಉಳಿಯುವುದಿಲ್ಲ ಇರುವಷ್ಟು ದಿನ ಚೆನ್ನಾಗಿ ಪ್ರೀತಿಯಿಂದ ನೋಡಿಕೊಳ್ಳಿ ಎಂದರು ಡಾಕ್ಟರ್. ನಮ್ಮಿಂದಾದ ಎಲ್ಲಾ ಪ್ರಯತ್ನವನ್ನು ಮಾಡಿದ್ವಿ. ಕಿಮೊ, ಇಂಜೆಕ್ಷನ್, ನೋವಿನ ಮಾತ್ರೆ ಯಾವುದೂ ಅಮ್ಮನನ್ನು ಉಳಿಸಲಿಲ್ಲ. ದಿನೇ ದಿನೇ ಅಮ್ಮ ಸೊರಗುತ್ತಾ ಹೋದಳು. ತಿಂದ ಊಟ ಸೇರುತ್ತಿರಲಿಲ್ಲ ವಾಂತಿ ಮಾಡಿಕೊಳ್ಳುತ್ತಿದ್ದಳು. ಅಮ್ಮನ ಕೂದಲು ಎಲ್ಲ ಉದುರಿಹೋಗಿತ್ತು. ದಂತದ ಗೊಂಬೆಯಂತಿದ್ದ ಅಮ್ಮ ಪುಟ್ಟ ಮಗುವಂತಾಗಿದ್ಲು. ಹುಡುಗಿಯ ಉಡುಗೆ ತೊಡಲು ನಿರಾಕರಿಸುತ್ತಿದ್ದ ನನ್ನನ್ನು ನಿನ್ನಂತ ಮಗಳು ಯಾರಿಗೂ ಹುಟ್ಟಬಾರದಿತ್ತು ಎಂದು ಬೈದಿದ್ದ ಅಮ್ಮ ಕೊನೆಗಾಲದಲ್ಲಿ ಹುಟ್ಟಿದರೆ ಎಲ್ಲರಿಗೂ ನಿನ್ನಂತ ಮಗನೇ ಹುಟ್ಟಬೇಕು ಅಂದಿದ್ಲು. ಅವಳ ಸೇವೆ ಮಾಡಿದ್ದು ನನ್ನ ಮತ್ತು ದೀಪಿಕಾಳ ಬದುಕಿನ ಪುಣ್ಯವೆಂದೇ ಭಾವಿಸುತ್ತೇವೆ. ದೀಪಿಕಾ ನಾನು ಮುಂದಿನ ವರ್ಷ ಮದುವೆಯಾಗುತ್ತಿದ್ದೇವೆ. ಹಾಗೇನೇ 2015 ರಲ್ಲಿ NALSA ತೀರ್ಪು ಬಂದಿದೆ ಅದರ ಪ್ರಕಾರ ನಮ್ಮ ಐಡೆಂಟಿಟಿಯನ್ನು ನಾವೇ ಆಯ್ಕೆ ಮಾಡಬಹುದು ಎಂದು ಕಾನೂನು ತೀರ್ಪು ಕೊಟ್ಟಿದೆ. ನಮ್ಮ ಐಡೆಂಟಿಟಿ ಭಾರತದಲ್ಲಿ ಈಗ ಕಾನೂನಾತ್ಮಕವಾಗಿದೆ. 2019ರಲ್ಲಿ ತೃತೀಯ ಲಿಂಗಿ ರಕ್ಷಣಾ ಮಸೂದೆ ಬಂದಿದೆ ಅದರಂತೆ ಯಾರೂ ಇವರಿಗೆ ತಾರತಮ್ಯ ಮಾಡುವ ಹಾಗಿಲ್ಲ ಮಾಡಿದರೆ ಶಿಕ್ಷೆಯೂ ಇದೆ'.

'ಈಗ ನನಗಿರುವ ಗುರಿ ಎಂದರೆ ನಮ್ಮ ಸಮುದಾಯಕ್ಕೆ ಏನಾದರೂ ಕೊಡುಗೆಯನ್ನು ಕೊಡಬೇಕು. ನನ್ನಿಂದಾದ ಸಹಾಯ ಮಾಡಬೇಕು. ನನ್ನಂತೆ ಇರುವ ನಮ್ಮ ಸಮುದಾಯದ ಎಲ್ಲರೂ ಗೌರವ, ಘನತೆಯಿಂದ ಬಾಳುವಂತಾಗಬೇಕು. ಯಾರೂ ಮನೆಬಿಟ್ಟು ಬರಬಾರದು. ಚೆನ್ನಾಗಿ ವಿದ್ಯಾಭ್ಯಾಸ ಮುಗಿಸಿ ಸ್ವಾವಲಂಬಿಯಾಗಿ ಜೀವನ ಮಾಡುವಂತಾಗಬೇಕು. ಮಾಡದೇ ಇರುವ ತಪ್ಪಿಗೆ ಮನೆ ಬಿಟ್ಟು ಹೋಗಿ ಭಿಕ್ಷೆ ಬೇಡುವುದು ಸೆಕ್ಸ್ ವರ್ಕ್ ಮಾಡುವುದು ಇಷ್ಟ ಪಟ್ಟು ಆಯ್ದುಕೊಂಡ ವೃತ್ತಿಯಲ್ಲ. ಬದುಕಲು ಆಯ್ಕೆ ಇಲ್ಲದೆ ಮಾಡಬೇಕಾದ ಉದ್ಯೋಗ ಅದು. ಎಲ್ಲಿಯೂ ಓಡಿಹೋಗದೆ ಮನೆಯಲ್ಲೇ ಇದ್ದು ಚಂದದ ಬದುಕನ್ನು ಕಟ್ಟಿಕೊಳ್ಳಬೇಕು. ಅಂತಿಮವಾಗಿ ಮದುವೆಯೇ ಬದುಕಲ್ಲ. ಯಾರೇ ಪ್ರೀತಿಸಿ ಬಿಟ್ಟು ಹೋದರೂ ಖಿನ್ನತೆಗೆ ಜಾರದೇ, ಆತ್ಮಹತ್ಯೆ ಮಾಡಿಕೊಳ್ಳದೆ ಬದುಕನ್ನು ರೂಪಿಸಿಕೊಳ್ಳಬೇಕು. ನಮ್ಮನ್ನು ನಾವು ಪ್ರೀತಿಸಬೇಕು. ಇದಕ್ಕಾಗಿ ಸಮಾಜ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕು. ಕುಟುಂಬಸ್ಥರು ನಮ್ಮನ್ನು ಒಪ್ಪಿಕೊಳ್ಳುವ ಕಾನೂನನ್ನು ಜಾರಿಗೆ ತರಬೇಕು' ಎಂಬುದು ಪೃಥ್ವಿಯವರ ಮಾತು.

ಇಪ್ಪತ್ತೆಂಟು ವರ್ಷಗಳ ನಂತರ ತಮ್ಮೊಳಗಿನ ಭಾವನೆಯನ್ನು ವ್ಯಕ್ತಪಡಿಸುವ ಧೈರ್ಯ ಮಾಡಿದ್ದಕ್ಕೆ ಮತ್ತು ಇವರ ಸಮಾಜಮುಖಿ ಕೆಲಸಗಳನ್ನು ಮೆಚ್ಚಿ ಇವರಿಗೆ ಹಲವಾರು ಸನ್ಮಾನಗಳು ಸಹ ಆಗಿವೆ. ಇವರು ಎಲ್ಲರಂತೆ ಮನುಷ್ಯರು. ನಾವುಗಳು ಇವರನ್ನು ಗೌರವಿಸಬೇಕು ಮಕ್ಕಳಿಗೂ ತಿಳಿಹೇಳಬೇಕು. ಮಾಡದ ತಪ್ಪಿಗೆ ಜೀವನ ಪರ್ಯಂತ ಶಿಕ್ಷೆ ಅನುಭವಿಸುವಂತಾಗಬಾರದು. ಶಿಕ್ಷಣದಲ್ಲಿ ಉದ್ಯೋಗದಲ್ಲಿ ಅವರಿಗೆ ಅವಕಾಶ ಕೊಡುವುದರ ಮೂಲಕ ಸಮಾಜಮುಖಿಯಾಗಿ ಸ್ವಾವಲಂಬಿಯಾಗಿ ಖುಷಿಯಿಂದ ಜೀವಿಸುವ ವಾತಾವರಣ ನಿರ್ಮಾಣವಾಗಬೇಕು. ಎಲ್ಲರೂ ಇದ್ದಾಗಲೇ ಅದು ಸಮಾಜ. ಒಳ್ಳೆಯ ಸಮಾಜ ಕಟ್ಟುವಲ್ಲಿ ಅವರೂ ಭಾಗೀದಾರರಾಗಬೇಕು. ಅವರೆಡೆಗೆ ಅನ್ಯಥಾ ದೃಷ್ಟಿಯನ್ನು ಬಿಟ್ಟು ನಮ್ಮನ್ನು ಕೂಡಿಕೊಳ್ಳಬೇಕು

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...