ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ

Date: 24-06-2024

Location: ಬೆಂಗಳೂರು


"ಇಂಗ್ಲೀಶು ವ್ಯಾಪಾರದ ಮೂಲಕ ಮೊದಲಿಗೆ ಕನ್ನಡ ಸಮಾಜದೊಳಗೆ ಸೇರಿಕೊಳ್ಳುತ್ತದೆ. ಆನಂತರ ಇದು ಆಡಳಿತದ ದಾರಿಯನ್ನು ಬಳಸಿಕೊಳ್ಳುತ್ತದೆ. ಮುಂದುವರೆದು ಪಂತದ ದಾರಿಯನ್ನೂ ಕ್ರಮೇಣ ಬಳಸಿಕೊಳ್ಳುತ್ತದೆ. ಇಲ್ಲೆಲ್ಲಿಯೂ ಸಶಕ್ತವಾಗಿ ಬೆಳೆಯುವ ಇಂಗ್ಲೀಶು ಇನ್ನಿಲ್ಲದಂತೆ ಹಲವು ದಾರಿಗಳನ್ನು ಹುಟ್ಟಿಸುತ್ತದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ’ ಕುರಿತು ಬರೆದಿರುವ ಲೇಖನ.

ಆದುನಿಕಪರ‍್ವ ಕಾಲದಲ್ಲಿ, ಇನ್ನೂ ಸೂಕ್ತವಾಗಿ ನಡುಗಾಲದ ಕೊನೆಕೊನೆಯಲ್ಲಿ ಇಂಗ್ಲೀಶು ಕನ್ನಡದೊಂದಿಗೆ ಹೊಸದಾರಿಯ ಮೂಲಕ ಸಂಪರ‍್ಕವನ್ನು ಪಡೆದುಕೊಳ್ಳುತ್ತದೆ. ಶಿಲಾಯುಗದ ಕಾಲದಲ್ಲಿ ನೀರಿನ ಮೂಲಕ ನೇರ ಸಂಪರ‍್ಕದಲ್ಲಿ ಇದ್ದ ಯುರೋಪಿನ ಬಾಶೆಗಳು ನಡುಗಾಲದಲ್ಲಿ ನೆಲದ ದಾರಿಯ ಮೂಲಕ, ಅರಬ್ ದೇಶಗಳ ಮೂಲಕ ಬಾರತದ ದಾರಿಯನ್ನು ಮೆಣಸು ಮೊದಲಾದ ಬೆಲೆಬಾಳುವ ವಸ್ತುಗಳ ವ್ಯಾಪಾರಕ್ಕೆ ಅವಲಂಬಿಸಿದ್ದಿತು. ಆದರೆ, ಅರಬ್ ದೇಶಗಳಲ್ಲಿ ನಡುಗಾಲದಲ್ಲಿ ಆಗುವ ರಾಜಕೀಯ ಬೆಳವಣಿಗೆಗಳಲ್ಲಿ ಆ ದಾರಿಯನ್ನು ಬಳಸುವ ಅವಕಾಶವನ್ನು ಯುರೋಪು ಕಳೆದುಕೋಳ್ಳುತ್ತದೆ. ಆಗ, ಬಾರತವನ್ನು ತಲುಪುವುದಕ್ಕೆ ಯುರೋಪು ನೀರದಾರಿಯನ್ನು ಕಂಡುಕೊಳ್ಳುತ್ತದೆ ಇಲ್ಲವೆ ಅವಲಂಬಿಸುತ್ತದೆ. ಹೀಗೆ ಇಂಗ್ಲೀಶು ಹದಿನಯ್ದನೆ ಶತಮಾನದ ವೇಳೆಗೆ ಕನ್ನಡದ ಸಂಪರ‍್ಕವನ್ನು ಪಡೆದುಕೊಳ್ಳುತ್ತದೆ. ಆದರೆ, ಸಾಮಾನ್ಯವಾಗಿ ನಂಬಿರುವುದಕ್ಕಿಂತ ತುಸು ಹಿಂದೆಯೆ ಕ್ರಿಶ್ಚಿಯನ್ ಪಂತವು ಕರ‍್ನಾಟಕದಲ್ಲಿ ಇದ್ದಿತು ಎಂಬುದಕ್ಕೆ ಆದಾರಗಳು ಇವೆ. ರಾಯಚೂರು ಜಿಲ್ಲೆಯ ಮುದಗಲ್ಲಿನಲ್ಲಿ ಆದಿಲ್ ಶಾಹಿಗಳ ಕಾಲದಲ್ಲಿಯೆ ಒಂದು ಚರ‍್ಚು ಇದ್ದಿತು ಎಂಬ ವಿಚಾರ ಇದೆ. ಕೇರಳದಲ್ಲಿ ಕ್ರಿಶ್ಚಿಯಾನಿಟಿ ಕ್ರಿಸ್ತನಶ್ಟೆ ಹಳೆಯದು, ಅಂದರೆ ಕ್ರಿಸ್ತನ ಕಾಲದಲ್ಲಿಯೆ ಇಲ್ಲಿಗೆ ಕ್ರಿಶ್ಚಿಯನ್ ಪಂತ ಬಂದಿದ್ದಿತು ಎಂದು ಹೇಳಲಾಗುತ್ತದೆ. ಈ ಸಂಬಂದ ಕನ್ನಡ ಪರಿಸರದೊಂದಿಗೆ ಇದ್ದಿತೆ ಎಂದು ಅನುಮಾನಿಸುವುದಕ್ಕೂ ಸದ್ಯ ಅವಕಾಶಗಳಿಲ್ಲ.

ಇದನ್ನು ತುಸು ವಿವರವಾಗಿ ಹೇಳುವುದಕ್ಕೆ ಕಾರಣವೆಂದರೆ ಈಗಿನ ಯುರೋಪಿನ ಸಂಬಂದಗಳ ತಿಳುವಳಿಕೆ ಪ್ರಕಾರ ಇಂಗ್ಲೀಶು ಬಾರತಕ್ಕೆ, ಹಾಗೆಯೆ ಕನ್ನಡಕ್ಕೆ ವ್ಯಾಪಾರದ ಮೂಲಕ ಹದಿನಾರು-ಹದಿನೇಳನೆ ಶತಮಾನದಲ್ಲಿ ಬಂದಿತು ಮತ್ತು ಸ್ತಳೀಯ ಸಂಬಂದಗಳನ್ನು ಹದಿನೇಳು-ಹದಿನೆಂಟನೆ ಶತಮಾನಗಳಲ್ಲಿ ಬೆಳೆಸಿಕೊಂಡಿತು ಎಂಬುದಾಗಿದೆ. ಆದರೆ, ಅದಕಿಂತ ಮೊದಲೆ ಕ್ರಿಶ್ಚಿಯನ್ ಪಂತ ಇಲ್ಲಿದ್ದಿತು ಎನ್ನುವುದಾದರೆ ಅದರ ಜೊತೆಗೆ ಇಂಗ್ಲೀಶು ಇಲ್ಲಿಗೆ ಬಂದಿದ್ದಿತೆ ಎಂಬ ಅನುಮಾನಕ್ಕೆ ಅವಕಾಶ ಇದೆ.

ಇಂಗ್ಲೀಶು ವ್ಯಾಪಾರದ ಮೂಲಕ ಮೊದಲಿಗೆ ಕನ್ನಡ ಸಮಾಜದೊಳಗೆ ಸೇರಿಕೊಳ್ಳುತ್ತದೆ. ಆನಂತರ ಇದು ಆಡಳಿತದ ದಾರಿಯನ್ನು ಬಳಸಿಕೊಳ್ಳುತ್ತದೆ. ಮುಂದುವರೆದು ಪಂತದ ದಾರಿಯನ್ನೂ ಕ್ರಮೇಣ ಬಳಸಿಕೊಳ್ಳುತ್ತದೆ. ಇಲ್ಲೆಲ್ಲಿಯೂ ಸಶಕ್ತವಾಗಿ ಬೆಳೆಯುವ ಇಂಗ್ಲೀಶು ಇನ್ನಿಲ್ಲದಂತೆ ಹಲವು ದಾರಿಗಳನ್ನು ಹುಟ್ಟಿಸುತ್ತದೆ. ಇದುವರೆಗೆ ಕನ್ನಡದ ಸಂಪರ‍್ಕಕ್ಕೆ ಬಂದ ಯಾವುದೆ ಬಾಶೆಗಳಿಗಿಂತ ಹೆಚ್ಚು ವ್ಯಾಪಕವಾಗಿ ಆವರಿಸಿಕೊಳ್ಳುತ್ತದೆ. ಆದುನಿಕತೆ, ವಿದ್ವತ್ತು, ಹೊಸಗಾಲದ ಶಿಕ್ಶಣ ಹೀಗೆ ಎಲ್ಲ ದಾರಿಗಳಲ್ಲಿಯೂ ಇಂಗ್ಲೀಶು ತನ್ನ ಅವಶ್ಯಕತೆ, ಅನಿವರ‍್ಯತೆಯನ್ನು ಕನ್ನಡದೊಳಗೆ ಹುಟ್ಟಿಸುತ್ತದೆ. ಇದೆಲ್ಲದಕಿಂತ ಮುಕ್ಯವಾಗಿ ಇಂಗ್ಲೀಶು ಸಾಮಾಜಿಕ ಪ್ರತಿಶ್ಟೆಯನ್ನು ಪಡೆದುಕೊಳ್ಳುತ್ತದೆ. ವ್ಯಾಪಾರದ ಮೂಲಕ ಶ್ರೀಮಂತರೊಂದಿಗೆ, ಆಡಳಿತದ ಮೂಲಕ ರಾಜರೊಂದಿಗೆ ಸಂಬಂದ ಬೆಳೆಸಿಕೊಂಡು ಆ ಹಂತದಲ್ಲಿ ಇದ್ದ ಬಾಶೆ ಸಹಜವಾಗಿ ಸಾಮಾಜಿಕ ಪ್ರತಿಶ್ಟೆಯನ್ನು ಪಡೆದುಕೊಳ್ಳುತ್ತದೆ. ಇದರಿಂದಾಗಿ ಇಂಗ್ಲೀಶು ಕನ್ನಡ ಸಮಾಜದಲ್ಲಿ ವ್ಯಾಪಕವಾಗಿ ಆವರಿಸಿಕೊಳ್ಳುತ್ತದೆ.

ಅದುವರೆಗೆ ಕನ್ನಡ ಮತ್ತು ಉರ‍್ದು ಆಡಳಿತ ಬಾಶೆಗಳಾಗಿದ್ದ ಕನ್ನಡ ಪರಿಸರದಲ್ಲಿ ಇಂಗ್ಲೀಶು ಆಡಳಿತದ ಹತ್ತಿರಕ್ಕೆ ಬರುತ್ತದೆ. ನೇರವಾಗಿ ಮದ್ರಾಸ್ ಕರ‍್ನಾಟಕದ ಪರಿಸರದಲ್ಲಿ, ಮುಂಬಯ್ ಕರ‍್ನಾಟಕ ಪರಿಸರದಲ್ಲಿ, ಮಯ್ಸೂರಿನ ರಾಜ್ಯದಲ್ಲಿ ಮತ್ತು ಅನೇರವಾಗಿ ಹಯ್ದರಾಬಾದ ರ‍್ನಾಟಕ ಪರಿಸರದಲ್ಲಿ ಇಂಗ್ಲೀಶು ಕನ್ನಡದ ಹತ್ತಿರಕ್ಕೆ ಬರುತ್ತದೆ. ಆದುನಿಕ ಯುರೋಪಿನ ಶಾಲಾಶಿಕ್ಶಣವನ್ನು ಯುರೋಪು ಕರ‍್ನಾಟಕ ಪರಿಸರಕ್ಕೆ ಪರಿಚಯಿಸುತ್ತದೆ. ಇಲ್ಲೆಲ್ಲ ಕನ್ನಡದೊಂದಿಗೆ ಇಂಗ್ಲೀಶು ಇನ್ನೂ ಹತ್ತಿರ ಬರುವುದಕ್ಕೆ ದಾರಿ ಬೆಳೆಯುತ್ತದೆ. ಬ್ರಿಟೀಶರು ಮಾಡುವ ವಿವಿದ ಬಗೆಯ ವಿದ್ವತ್ತಿನ ಕೆಲಸಗಳ ಮೂಲಕವೂ ಇಂಗ್ಲೀಶು ಇನ್ನಶ್ಟು ಪ್ರಬಾವವನ್ನು ಬೀರುತ್ತದೆ.

ಈ ಹಿಂದೆ ಪ್ರಾಕ್ರುತ-ಸಂಸ್ಕೃತದ ಬಗೆಗೆ ಆಡಿದಂತೆ ವಿದ್ವತ್ತು ಮತ್ತು ಸಾಮಾನ್ಯ ಸಮಾಜ ಈ ಎರಡೂ ನೆಲೆಯಲ್ಲಿ ಇಂಗ್ಲೀಶು ಬಹುದೊಡ್ಡ ಪ್ರಬಾವವನ್ನು ಬೀರಿತು. ಇದರಿಂದ ದಿನಜೀವನದಲ್ಲಿ ಸಹಜವಾಗಿ ಬಳಕೆಯಲ್ಲಿದ್ದ ಸಾಕಶ್ಟು ಕನ್ನಡ ಪದಗಳು ಹಿನ್ನೆಲೆಗೆ ಸರಿದು ಇಂಗ್ಲೀಶಿನ ಪದಗಳಿಗೆ ಜಾಗವನ್ನು ಮಾಡಿಕೊಡುತ್ತವೆ. ಎಡ-ಬಲ ಎಂಬ ಪದಗಳು ಲೆಪ್ಟ್-ರಯ್ಟ್ ಎಂಬ ಪದಗಳಿಗೆ ಅವಕಾಶ ಮಾಡಿಕೊಟ್ಟದ್ದನ್ನು ಉದಾಹರಣೆಯಾಗಿ ನೋಡಬಹುದು. ಹೀಗೆ ಬದುಕಿನ, ಸಮಾಜದ ಹಲವು ವಲಯಗಳಲ್ಲಿ ಇಂಗ್ಲೀಶು ಕನ್ನಡವನ್ನು ಆವರಿಸಿಕೊಳ್ಳುತ್ತದೆ.

ಸ್ವತಂತ್ರ ನಂತರದಲ್ಲಿ ಇಂಗ್ಲೀಶು ಆಡಳಿತ ಬಾಶೆಯಾಗಿ ವಿಬಿನ್ನವಾಗಿ ಬೆಳೆಯುತ್ತದೆ. ಈಗ ಇಂಗ್ಲೀಶು ಇಂಗ್ಲೀಶರ ಬಾಶೆಯಾಗಿ ಉಳಿಯದೆ ಬಾರತೀಯರ ಇಲ್ಲವೆ ಕನ್ನಡಿಗರ ಬಾಶೆಯಾಗಿ ಬೆಳೆಯುತ್ತದೆ. ಬಾರತದ ಇತರೇತರರ ಜೊತೆಗೆ ಸಂಬಂದಕ್ಕೆ ಇಂಗ್ಲೀಶು ಅನಿವರ‍್ಯ ಬಾಶೆಯಾಗಿ ಮತ್ತು ಸಹಜ ಆಯ್ಕೆಯಾಗಿ ಉಳಿದುಕೊಳ್ಳುತ್ತದೆ. ಅದರೊಟ್ಟಿಗೆ ಇಂಗ್ಲೀಶು ಜಾಗತಿಕ ವಿದ್ವತ್ತಿಗೆ ಕ್ನನಡಕ್ಕೆ ಒಂದು ರಹದಾರಿಯಾಗಿ ಬೆಳೆಯುತ್ತದೆ. ಹೀಗೆ ಸಮಾಜದಲ್ಲಿ ಇಂಗ್ಲೀಶು ತನ್ನ ಜಾಗವನ್ನು ವಿಸ್ತರಿಸಿಕೊಳ್ಳುತ್ತಲೆ ಇದೆ.

ಇದರ ಜೊತೆಗೆ ಇಂಗ್ಲೀಶು ಉನ್ನತ ಶಿಕ್ಶಣದ, ವಿದ್ವತ್ತಿನ ಬಾಶೆಯಾಗಿ ಉಳಿದುಕೊಳ್ಳುತ್ತದೆ. ದೊಡ್ಡಪ್ರಮಾಣದ ಕನ್ನಡ-ಕರ‍್ನಾಟಕ ಸಂಬಂದಿತ ಸಂಶೋದನೆ ಇಂಗ್ಲೀಶಿನಲ್ಲಿ ನಡೆಯುತ್ತಿರುವುದನ್ನೂ ಗಮನಿಸಬಹುದು. ಇಂಗ್ಲೀಶು ಕ್ರಮೇಣ ಆದುನಿಕತೆಯ, ತಂತ್ರಗ್ನಾನದ ಬಾಶೆಯಾಗಿ ಬೆಳೆದ ಮೇಲೆ ಇನ್ನೂ ವ್ಯಾಪಕವಾಗಿ ಕನ್ನಡವನ್ನು ಆವರಿಸಿಕೊಳ್ಳುತ್ತದೆ. ಹೊಲ, ಅಡುಗೆಮನೆ ಒಳಗೊಂಡು ಬದುಕಿನ ಅತ್ಯಂತ ಸಾಮಾನ್ಯ ವಲಯಗಳಲ್ಲಿಯೂ ಇಂಗ್ಲೀಶು ಅನಿವರ‍್ಯವಾದ ಆದರೆ ಗಟ್ಟಿಯಾದ ಸ್ತಾನವನ್ನು ಪಡೆದುಕೊಳ್ಳುತ್ತದೆ. ಸಂಸ್ಕೃತದ ವಿರುದ್ದ ಇದ್ದ ಆಲೋಚನೆಗಳ ಹಾಗೆ ಇಂಗ್ಲೀಶಿನ ವಿರುದ್ದವೂ ಇಂತದೆ ಆಲೋಚನೆ ಅದು ಕನ್ನಡದ ಸಂರ‍್ಕಕ್ಕೆ ಬಂದ ಕಾಲದಿಂದಲೂ ಇದ್ದೆ ಇವೆ. ಆದರೆ, ಸಂಸ್ಕೃತದ ಹಾಗೆಯೆ ಇಂಗ್ಲೀಶು ಅವ್ಯಾಹತವಾಗಿ ಕನ್ನಡದ ಸಂಬಂದವನ್ನು ಅಗ್ಗಲಿಸಿಕೊಳ್ಳುತ್ತಲೆ ಇದೆ.

ಇಂದಿನ ಕನ್ನಡ ವಾಕ್ಯರಚನೆಯನ್ನು ಗಮನಿಸಿದಾಗ ಹೆಚ್ಚು ಇಂಗ್ಲೀಶಿನಿಂದ ಬಂದ ಪದಗಳು ಬಳಕೆಯಾಗುವುದು ಕಾಣಿಸುತ್ತದೆ. ಇದು ಸಾಮಾಜಿಕ ಪ್ರತಿಶ್ಟೆಯನ್ನು ಮತ್ತು ಶ್ರೀಮಂತಿಕೆಯನ್ನು ಪ್ರತಿನಿದಿಸುತ್ತದೆ. ಅದಲ್ಲದೆ ಕನ್ನಡ ವಾಕ್ಯರಚನೆಯಲ್ಲಿಯೂ ಇಂಗ್ಲೀಶು ತನ್ನದೆ ಪ್ರಬಾವವನ್ನು ಬೀರಿದೆ. ಕನ್ನಡ ಬಹರದಲ್ಲಿ ಬಳಸುವ ವಿವಿದ ಬಗೆಯ ಚಿನ್ನೆಗಳು ಇಂಗ್ಲೀಶಿನ ಪ್ರಬಾವವೆ ಆಗಿವೆ. ಹೀಗೆ ಇಂಗ್ಲೀಶಿನ ಪ್ರಬಾವ ವ್ಯಾಪಕವಾಗಿದೆ.

ಯುರೋಪಿನ ಕಾಲ ಎಂದಾಗ ಆದುನಿಕಪರ‍್ವ ಕಾಲದಲ್ಲಿ ಬಂದ ಇತರ ಯುರೋಪಿನ ಬಾಶೆಗಳನ್ನೂ ಹೆಸರಿಬಹುದು. ಪ್ರೆಂಚು, ಪರ‍್ಚುಗೀಸು ಮೊದಲಾದ ಬಾಶೆಗಳ ಪ್ರಬಾವ ಅಶ್ಟಾಗಿ ಇಲ್ಲದಿದ್ದರೂ ಕೆಲವು ಶಬ್ದಗಳು ಈ ಬಾಶೆಯಿಂದ ಬಂದವು ಇವೆ.

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...