Date: 06-11-2022
Location: ಬೆಂಗಳೂರು
ಅಕ್ಕನ ಮದುವೆಗೆ ಮಾಡಿದ ಸಾಲ ತೀರಿಸಲು ಚಂದ್ರಶೆಟ್ಟಿ ಎಂಬುವವರ ಸಹಾಯದಿಂದ ಹೈದರಾಬಾದಿನ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಎರಡು ವರ್ಷ ಕೆಲಸ ಮಾಡಿದೆ. ಆಗ ತಿಂಗಳಿಗೆ ಎಂಟನೂರು ರೂಪಾಯಿ ಸಂಬಳ ಕೊಡುತ್ತಿದ್ದರು ಎನ್ನುತ್ತಾರೆ ಮಲೆನಾಡಿನ ರಾಘವೇಂದ್ರ ಮೊಘವೀರ. ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ‘ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ’ ಅವರ ಜೀವನ ಪಯಣವನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಯಾವುದಾದರೂ ಕಾರ್ಯಕ್ರಮಗಳಲ್ಲಿ, ಮೇಳಗಳಲ್ಲಿ ತರಕಾರಿ ಮತ್ತು ಹಣ್ಣಿನಲ್ಲಿ ಮಾಡಿದ ಕಲಾಕೃತಿಗಳು ಇದ್ದರೆ ಅವು ಆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಕೊಡುತ್ತವೆ ಬಂದ ಅತಿಥಿಗಳಿಗೆ ತುಂಬ ಖುಷಿ ಕೊಡುತ್ತವೆ. ಇತ್ತೀಚಿನ ಮದುವೆ, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸೇರಿದಂತೆ ಹಲವು ಶುಭ ಸಮಾರಂಭಗಳಲ್ಲಿ ಈ ಕಲಾಕೃತಿಗಳನ್ನು ನೋಡಿರುತ್ತೇವೆ. ಆದರೆ ಅವುಗಳನ್ನು ಮಾಡುವವರ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಅಂತಹ ಒಬ್ಬ ಎಲೆಮರೆಯ ಬಡಕಲಾವಿದರಾದ ಮಲೆನಾಡಿನ ರಾಘವೇಂದ್ರ ಮೊಘವೀರರ ಜೀವನ ಪಯಣವನ್ನು ಇಂದಿನ ನಿಮ್ಮ ಓದಿಗೆ ತಂದಿದ್ದೇವೆ.
'ನಮ್ಮದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾರ್ಡಿ ಗ್ರಾಮ. ತಾಯಿ ಲೀಲಾವತಿ ತಂದೆ ರಾಮ ಮೊಘವೀರ. ಅಕ್ಕಂದಿರು ಮತ್ತು ನಾನು ಸೇರಿದಂತೆ ನಾವು ಐದು ಜನ ಮಕ್ಕಳು. ನಾನು ಏಳನೇ ತರಗತಿಯವರೆಗೆ ಓದಿದ್ದೇನೆ. ಬಾಲ್ಯದಲ್ಲಿ ನಮಗೆ ಶಿಕ್ಷಣಕ್ಕಿಂತ ಜೀವನ ಸಾಗಿಸಲು ದುಡಿಮೆ ಬೇಕಾಗಿತ್ತು. ಏಕೆಂದರೆ ನಮ್ಮದು ತುಂಬ ಕಡುಬಡತನದ ಕುಟುಂಬ. ಅಮ್ಮ ನಮಗಾಗಿ ಬಹಳ ಕಷ್ಟಪಡುತ್ತಿದ್ದಳು. ಗದ್ದೆ, ತೋಟದ ಕೆಲಸಗಳಿಗೆ ಹೋಗುತ್ತಿದ್ದಳು. ನಾವು ದೊಡ್ಡವರಾದಂತೆ ಅಮ್ಮನ ಪಾಡು ಹೇಳತೀರದು. ಇಂತಹ ಸ್ಥಿತಿಯಲ್ಲಿ ಅಪ್ಪ ಮಾಡಿದ ಸಾಲದಿಂದಾಗಿ ಅಮ್ಮ, ಅಕ್ಕಂದಿರು, ನಾನು ಎಲ್ಲರೂ ಒಂದೊಂದು ಕಡೆ ಜೀತಕ್ಕೆ, ಮನೆಗೆಲಸಕ್ಕೆ ಹೋಗಬೇಕಾಯಿತು. ಹೀಗೆ ಒಂದು ವರ್ಷವಾಗುತ್ತಿದ್ದಂತೆ ಅಮ್ಮ ಯಾರದೋ ಕಡೆಯಿಂದ ನಮ್ಮ ಮಾವನಿಗೆ ಕಾಗದ ಬರೆಸಿದರು. ಮಾವ ಬಂದು ಎಲ್ಲ ಸಾಲ ತೀರಿಸಿ ನಮ್ಮನ್ನೆಲ್ಲ ಊರಿಗೆ ಕರೆದುಕೊಂಡು ಹೋದರು. ಅಲ್ಲಿಂದ ನಮ್ಮೂರಿನ ಹಳೆಯ ಮನೆಗೆ ಬಂದೆವು. ಅಲ್ಲಿಂದ ನಾನು ಧಾರವಾಡಕ್ಕೆ ಕೆಲಸಕ್ಕೆ ಹೋದೆ. ಮತ್ತೆ ರಜೆ ಇರುವಾಗ ತೋಟದ ಕೆಲಸಕ್ಕೆ ಯಾವುದೇ ಕೆಲಸಕ್ಕೆ ಕರೆದರೂ ಹೋಗುತ್ತಿದ್ದೆ. ಅಕ್ಕನ ಮದುವೆಗೆ ಮಾಡಿದ ಸಾಲ ತೀರಿಸಲು ಚಂದ್ರಶೆಟ್ಟಿ ಎಂಬುವವರ ಸಹಾಯದಿಂದ ಹೈದರಾಬಾದಿನ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಎರಡು ವರ್ಷ ಕೆಲಸ ಮಾಡಿದೆ. ಆಗ ತಿಂಗಳಿಗೆ ಎಂಟನೂರು ರೂಪಾಯಿ ಸಂಬಳ ಕೊಡುತ್ತಿದ್ದರು. ನಂತರ ಹಾವೇರಿಯಲ್ಲಿ ಎರಡು ವರ್ಷ ತರಕಾರಿ ಕಟ್ ಮಾಡಲು ಹೋಟೆಲ್ಲಿನಲ್ಲಿ ಕೆಲಸಕ್ಕೆ ಸೇರಿಕೊಂಡೆ.'
'ಅಲ್ಲಿಂದ ಊರಿಗೆ ಬಂದು ಪೇಂಟಿಂಗ್ ಕೆಲಸ ಶುರು ಮಾಡಿದೆ. ವಾಲ್ ಪೇಂಟಿಂಗ್, ಡಿಸೈನ್ ಆರ್ಟ್, ಥರ್ಮಾಕೋಲ್ ಆರ್ಟ್, ಮದುವೆ ಕಾರ್ಯಕ್ರಮಗಳಿಗೆ, ಭಜನೆ ಮಂಟಪಗಳಿಗೆ, ಬಾಳೆ ಮಂಟಪ, ಕೃಷಿ ಮೇಳಗಳಲ್ಲಿ ತರಕಾರಿ ಕಲಾಕೃತಿಗಳನ್ನು ಹೀಗೆ ಎಲ್ಲಾ ರೀತಿಯ ಕೆಲಸ ಮಾಡುವುದನ್ನು ಕಲಿತೆ. ಈ ಎಲ್ಲಾ ಕೆಲಸಗಳಿಗೆ ಮಾರ್ಗದರ್ಶಿ ಅಂತ ಯಾರೂ ಇಲ್ಲ. ನನ್ನ ಮನಸ್ಸಿಗೆ ಬಂದ ಕಲ್ಪನೆಗೆ ಮೂರ್ತರೂಪ ಕೊಡುವ ಪ್ರಯತ್ನ ಮಾಡುತ್ತ ಹೋದೆ. ನನ್ನ ಇಪ್ಪತ್ತನೇ ವಯಸ್ಸಿನಲ್ಲಿ ತರಕಾರಿಯಿಂದ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿದೆ. ಒಮ್ಮೆ ಫಲಪುಷ್ಪ ಪ್ರದರ್ಶನವನ್ನು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಸಂಜಯ್ ಗಾಂಧಿ ಪ್ರೌಢಶಾಲೆ ಅಂಪಾರು ಎಂಬಲ್ಲಿ ಏರ್ಪಡಿಸಿದ್ದರು. ಇದನ್ನು ನನ್ನ ತಂಗಿ ದೀಪಿಕಾ ಬಂದು ಹೇಳಿದಳು. ಮೊದಲ ಬಾರಿಗೆ ಬೀಟ್ರೂಟ್, ಕ್ಯಾರಟ್, ಟೊಮೇಟೊ, ಈರುಳ್ಳಿಯನ್ನು ಉಪಯೋಗಿಸಿ ಸಂಪಿಗೆ, ಕಮಲ, ರೋಸ್ ಇತ್ಯಾದಿ ಫಲಪುಷ್ಪ ಮಾಡಿದ್ದೆ. ಅದರಲ್ಲಿ ನನಗೆ ಮೂರನೇ ಬಹುಮಾನ ಬಂದಿತ್ತು. ಕೆಲವು ದಿನಗಳ ನಂತರ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಂತಹ ಕುಚೇಲಯ್ಯ ಎಂಬುವವರ ಭೇಟಿಯಾಯಿತು. ಕೋಟೇಶ್ವರದಲ್ಲಿ ಕೃಷಿಮೇಳ ಇತ್ತು. ಕುಚೇಲಯ್ಯನವರು ನಿನಗೆ ಬೇಕಾದ ಎಲ್ಲ ಹಣ್ಣು ತರಕಾರಿ ತಂದುಕೊಡುತ್ತೇನೆ ನೀನು ಚೆನ್ನಾಗಿ ಡಿಸೈನ್ ಮಾಡುತ್ತೀಯ ಈ ಮೇಳದಲ್ಲೂ ಒಮ್ಮೆ ಪ್ರಯತ್ನ ಮಾಡು ಅಂದಿದ್ದರು. ಒಟ್ಟು ನಲವತ್ತಕ್ಕೂ ಹೆಚ್ಚು ಡಿಸೈನ್ ಮಾಡಿದ್ದೆ. ಅಲ್ಲಿ ಮೊದಲನೇ ಬಹುಮಾನ ಬಂದಿತ್ತು. ಇದಕ್ಕೆಲ್ಲ ಸ್ಫೂರ್ತಿ ಏನೆಂದರೆ ಚಿಕ್ಕವಯಸ್ಸಿನಲ್ಲಿ ಹೋಟೆಲಿನಲ್ಲಿ ತರಕಾರಿ ಕತ್ತರಿಸುವಾಗ ಮಾಡಿದ ಪ್ರಯೋಗದ ಅನುಭವಗಳೇ ಬದುಕಿಗೆ ಹೀಗೆ ಹೆಸರು, ಸನ್ಮಾನ, ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ಸಹಾಯವಾದವು.'
'ಮಂಗಳೂರು, ಚಿಕ್ಕಮಗಳೂರು, ಮಡಿಕೇರಿ, ಉಡುಪಿ, ಬ್ರಹ್ಮಾವರ, ಕುಂದಾಪುರ, ರಾಣಿಬೆನ್ನೂರು, ಹಾವೇರಿ, ಯಾದಗಿರಿ ಇಲ್ಲೆಲ್ಲಾ ನಡೆಯುವ ಕೃಷಿ ಮೇಳಗಳಲ್ಲಿ ಭಾಗವಹಿಸಿದ್ದೇನೆ. ಸಂಪಿಗೆ, ಗುಲಾಬಿ ಸೇರಿದಂತೆ ಹಲವಾರು ಹೂವುಗಳು, ಪ್ರಾಣಿ - ಪಕ್ಷಿಗಳು, ರಂಗೋಲಿ, ಮುಖವಾಡ ಹೀಗೆ ತುಂಬ ಕೆತ್ತನೆಯನ್ನು ಮಾಡುತ್ತೇನೆ. ಇತ್ತೀಚೆಗೆ ಕಲ್ಲಂಗಡಿ ಹಣ್ಣಿನಲ್ಲಿ ಪುನೀತ್ ರಾಜಕುಮಾರ್, ತುಳುನಾಡ ದೈವ ಕೊರಗಜ್ಜ, ಕಾಂತಾರ ಸಿನೆಮಾದಲ್ಲಿ ಬರುವ ಪಂಜುರ್ಲಿ ದೈವದ ಪೋರ್ಟ್ರೇಟ್ ಚಿತ್ರ ಮಾಡಿದ್ದೇನೆ. ಈಗ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವರನ್ನು ಮಾಡಲು ಬೇಡಿಕೆ ಬಂದಿದೆ. ಇಲ್ಲಿಯವರೆಗೆ ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಫಲಪುಷ್ಪ ಪ್ರದರ್ಶನ ಮಾಡಿದ್ದೇನೆ. ಅಲ್ಲದೆ ಶಾಲಾ ಕಾಲೇಜುಗಳಿಗೆ ಹೋಗಿ ಮಕ್ಕಳಿಗೆ ಉಚಿತವಾಗಿ ತರಬೇತಿಯನ್ನು ಕೊಟ್ಟು ಬರುತ್ತೇನೆ. ಕೆತ್ತನೆ ಮಾಡಲು ನಾನು ಚಾಕು, ಬ್ಲೇಡ್ ಬಳಸುತ್ತೇನೆ. ಕಲಿಯುವಾಗ ಮಕ್ಕಳು ಕೈ ಪೆಟ್ಟು ಮಾಡಿಕೊಂಡರೆ ಅಂತ ಈರುಳ್ಳಿ, ಬೀಟ್ರೂಟ್, ಟೊಮೇಟೊದಂತಹ ತರಕಾರಿಗಳಿಂದ ಚಿಕ್ಕ ಚಿಕ್ಕ ಆಕೃತಿಗಳನ್ನು ಹೇಳಿಕೊಡುತ್ತೇನೆ. ಮಕ್ಕಳು ತುಂಬ ಆಸಕ್ತಿಯಿಂದ ಪ್ರೀತಿಯಿಂದ ಕಲಿಯುತ್ತಾರೆ. ಇವತ್ತಿಗೂ ನಾನು ಯಾವುದೇ ಕೆಲಸವನ್ನಾದರೂ ಖುಷಿಯಿಂದ ಮಾಡುತ್ತೇನೆ. ಬಾಲ್ಯದ ಕಷ್ಟದ ಸಂದರ್ಭಗಳಲ್ಲಿ ಹೊಟ್ಟೆಪಾಡಿಗೆ ನಾನು ಮಾಡುತ್ತಿದ್ದ ಕೆಲಸಗಳು ಇಂದು ಹೊಟ್ಟೆ ಹಸಿವು ನೀಗಿಸುತ್ತಿವೆ.'
ಇದಲ್ಲದೆ ಇವರು ತಮಗೆ ಬರುವ ಅಲ್ಪ ಆದಾಯದಲ್ಲೂ ಸಮಾಜ ಸೇವೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶೌರ್ಯ ವಿಪತ್ತು ಘಟಕ (ಅಂಪಾರು, ಧರ್ಮಸ್ಥಳ)ದ ವತಿಯಿಂದ ಕುಡಿಯುವ ನೀರಿನ ತೊಂದರೆಯಿರುವಲ್ಲಿ ನೀರೊದಗಿಸುವುದು, ಬಡವರನ್ನು ಗುರುತಿಸಿ ಅವರಿಗೆ ಕೈಲಾದ ಸಹಾಯ ಮಾಡುವುದು, ಯಾರಾದರೂ ತೀರಿಕೊಂಡರೆ ಸೌದೆ ಒದಗಿಸುವುದು ಮಾಡುತ್ತಾರೆ. ಯಾರಾದರೂ ಕಷ್ಟ ಅಂತ ಬಂದರೆ ಹೊತ್ತುಗೊತ್ತು ನೋಡದೆ ಅವರಿಗೆ ಸಹಾಯ ಮಾಡಲು ಸದಾ ಸಿದ್ಧ ಹಸ್ತರಾಗಿರುತ್ತಾರೆ. ಇವರು ದಿನನಿತ್ಯ ಮಾಡುವುದು ಸಿಕ್ಕ ಯಾವುದೋ ಒಂದು ಕೆಲಸವನ್ನು. ಇರುವುದು ಬಾಡಿಗೆ ಮನೆಯಲ್ಲಿ. ಹೆಂಡತಿ ಶಿಲ್ಪ ಮಗಳು ರೋಶಿಣಿಯ ಜವಾಬ್ದಾರಿ ಇವರ ಮೇಲಿದೆ. ಹೀಗಿದ್ದರೂ ಯಾರಿಗಾದರೂ ನೋವು, ಸಂಕಟ ಎಂದರೆ ಹಗಲು ರಾತ್ರಿ ಎನ್ನದೇ ತಮ್ಮ ಜೀವವನ್ನು ಲೆಕ್ಕಿಸದೆ ಸಹಾಯ ಮಾಡುತ್ತಾರೆ. ಕಷ್ಟ ಎಂದರೆ ಸಂಬಂಧಿಕರೇ ಜೊತೆ ನಿಲ್ಲದ ಈ ಕಾಲದಲ್ಲಿ ಇವರು ಯಾವುದೇ ಫಲಾಪೇಕ್ಷೆಯಿಲ್ಲದೆ ಸಾಧ್ಯವಾದ ಸಹಾಯ ಮಾಡುತ್ತಾರೆ. ಸ್ವಾರ್ಥ ಮನಸ್ಸುಗಳು ತುಂಬಿರುವ ಸಮಾಜದಲ್ಲಿ ರಾಘವೇಂದ್ರರಂತಹ ವ್ಯಕ್ತಿಗಳು ಇರುವುದು ಆಶಾದಾಯಕ. ಇಂತಹವರ ಸಂತತಿ ಹೆಚ್ಚಾಗಲಿ.
ಧನ್ಯವಾದಗಳೊಂದಿಗೆ
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.