"ಇವತ್ತಿನ ನಮ್ಮ ಬದುಕಿನ ಅದೆಷ್ಟೋ ಗೊಂದಲಗಳಿಗೆ , ಪ್ರಶ್ನೆಗಳಿಗೆ, ನಿರಂತರವಾಗಿ ಬಾಧಿಸುವ ಸೋಲುಗಳಿಗೆ, ಮಾನಸಿಕ ವೇದನೆಗಳಿಗೆ ಸಂಜೀವಿನಿಯಾಗಬಲ್ಲ ಹತ್ತಾರು ಜೀವಂತ ದಂತಕಥೆಗಳು ನಮಗೆ ಈ ಹೊತ್ತಿಗೆಯಲ್ಲಿ ಸಿಗುತ್ತದೆ," ಎನ್ನುತ್ತಾರೆ ಪೂಜಾ ತೀರ್ಥಹಳ್ಳಿ. ಅವರು ದೀಕ್ಷಿತ್ ನಾಯರ್ ಅವರ ‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಕೃತಿ ಕುರಿತು ಬರೆದ ಅನಿಸಿಕೆ.
‘ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?’ ಬರಹಗಾರನ ಪ್ರಶ್ನೆ ಓದುಗರಿಗೆ ನೇರವಾಗಿ ನಾಟುತ್ತಲೇ ಅವರ್ಯಾರು? ಎನ್ನುವ ಹುಟುಕಾಟದಲ್ಲಿಯೇ ಓದುಗನ ಪಯಣ ದೀಕ್ಷಿತ್ ನಾಯರ್ ಬರೆದ ಪುಸ್ತಕದ ಒಳಗೆ ನಮ್ಮನ್ನ ಸೆಳೆದೊಯ್ಯತ್ತೆ.
ಹೌದು.. ದೀಕ್ಷಿತ್ ನೀವು ಬರೆದ ಕೃತಿಗಳನ್ನೆಲ್ಲಾ ಓದಿ ನಂತರ ತೋಚಿದ್ದನ್ನು ಗೀಚಿ ನಿಮಗೆ ತಲುಪಿಸಿದ್ದು ಈಗಾಗಲೇ ಆಗಿತ್ತು. ಅದಕ್ಕೀಗ ಹೊಸ ಸೇರ್ಪಡೆ ನಿಮ್ಮ ಇತ್ತೀಚೆಗಿನ ಪುಸ್ತಕ ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ? ಕೃತಿಯನ್ನು ಓದಿ ನನ್ನ ಅನಿಸಿಕೆ. (ವಿಮರ್ಶೆಯಲ್ಲ ಅನಿಸಿಕೆ)
ಇವತ್ತಿನ ನಮ್ಮ ಬದುಕಿನ ಅದೆಷ್ಟೋ ಗೊಂದಲಗಳಿಗೆ, ಪ್ರಶ್ನೆಗಳಿಗೆ, ನಿರಂತರವಾಗಿ ಬಾಧಿಸುವ ಸೋಲುಗಳಿಗೆ, ಮಾನಸಿಕ ವೇದನೆಗಳಿಗೆ ಸಂಜೀವಿನಿಯಾಗಬಲ್ಲ ಹತ್ತಾರು ಜೀವಂತ ದಂತಕಥೆಗಳು ನಮಗೆ ಈ ಹೊತ್ತಿಗೆಯಲ್ಲಿ ಸಿಗುತ್ತದೆ.
ಕಾಲ ಬದಲಾದಂತೆ ವೈದ್ಯ ಮತ್ತು ರೋಗಿಯ ಸಂಬಂಧ ಕೇವಲ ವಾಣೀಜ್ಯೀಕೃತಗೊಂಡಿದೆ. ನಾರಾಯಣ ಸ್ವರೂಪಿ ವೈದ್ಯರು ಇಂದು ಮರೆಯಾಗಿ ಥೇಟ್ ಯಮಧೂತರಂತೆ ಕಾಣುತ್ತಿದ್ದಾರೆ. ಆದರೆ ಈ ಹೊತ್ತಲ್ಲಿಯೂ ಹಣಕ್ಕಾಗಿ ಕೆಲಸ ಮಾಡದೆ ಸಮಾಜಮುಖಿಯಾಗಿ ಚಿಂತಿಸಿ ರೋಗಿಗಳನ್ನು ಅಕ್ಕರೆಯಿಂದ ಕಾಳಜಿ ಮಾಡಿ ಭಯ ಮತ್ತು ರೋಗದಿಂದ ನೂರಾರು ರೋಗಿಗಳನ್ನು ಪಾರುಮಾಡುತ್ತಿರುವ ಡಾ. ಶಂಕರೇಗೌಡರ ಕುರಿತ ಲೇಖನದಿಂದ ಪ್ರಾರಂಭವಾಗುವ ಕೃತಿ ಮಾನವೀಯತೆ, ಪ್ರಾಮಾಣಿಕತೆ, ಸೇವಾ ನಿಷ್ಠೆಗಳು ಈ ಇಡೀ ಪುಸ್ತಕದಲ್ಲಿ ನಮಗೆ ಹಲವು ಘಟನೆ ಮತ್ತು ಜೀವಂತ ವ್ಯಕ್ತಿಗಳ ಮೂಲಕ ಪರಿಚಯವಾಗುತ್ತದೆ. ಎಂದಿನಂತೆ ಬರಹಗಾರ ಪ್ರತಿ ಲೇಖನದಲ್ಲಿಯೂ ಕೌತುಕ ಸೃಷ್ಟಿಸಿರುವುದನ್ನ, ಓದುಗನ ಕುತೂಹಲವನ್ನು ಲೇಖನಗಳ ಕೊನೆಯವರೆಗೂ ಜೋಪಾನಿಸಿರುವುದನ್ನ ಕಾಣಬಹುದು.. ನಾವಿವತ್ತು ಎಷ್ಟರ ಮಟ್ಟಿಗೆ ಅನುಮಾನದ ಪಿಶಾಚಿಗಳೆಂದರೆ ನಮ್ಮ ಸ್ವಸಾಮರ್ಥ್ಯದ ಬಗ್ಗೆ ನಮಗೆ ಅರಿವಿಲ್ಲ. ನಮ್ಮಿಂದ ಸಾಧ್ಯವಿಲ್ಲ ಎಂಬ ಪೆಡಂಭೂತ ನಮ್ಮನ್ನು ಹೊಕ್ಕಿದೆ. ಆದರೆ ಇಲ್ಲಿನ ಬರಹ ʼಆ ನಾಲ್ಕು ಜನರ ಮೇಲೆ ಗುಂಡು ಹಾರಿಸಿʼ ಎನ್ನುತ್ತಲೇ ನಮ್ಮನ್ನು ಎಚ್ಚರಿಸುತ್ತೆ.
ರೋಚಕ ತಿರುವುಗಳನ್ನ ಹೊತ್ತ ಅನೇಕರ ಬದುಕಿನ ಕಥೆ ಈ ಹೊತ್ತಿಗೆಯಲ್ಲಿದೆ ಸಾಮಾನ್ಯ ದನ ಕಾಯುವ ಹುಡುಗ ಅಖಾಡಕ್ಕಿಳಿದು ಅಸಾಮಾನ್ಯ ಪೈಲ್ವಾನನಾಗಿ ಸಾಧನೆಗೈದ ಕಥೆ ಓದುತ್ತಿದ್ದರೆ ಮೈಪುಳಕಿತಗೊಳ್ಳದಿರದು. ಕಠಿಣ ಪರಿಶ್ರಮ, ಸಮರ್ಥ ಗುರು ಸಿಕ್ಕರೆ ಯಾವುದು ಅಸಾಧ್ಯವಿಲ್ಲ ಎಂಬುದನ್ನು ಇಲ್ಲಿನ ಲೇಖನ ಸ್ಪಷ್ಟಪಡಿಸುತ್ತದೆ. ಬ್ರೂಟಸ್ ಸೀಜರನನ್ನ ಕೊಂದ ಕಥೆ ಹೇಳುತ್ತಕೇ ಸ್ನೇಹದ ಹೆಸರಿನ್ನಲ್ಲಾಗುವ ದ್ರೋಹವನ್ನ ನೆನಪಿಸಿ ಓದುಗನಿಗೆ ಎಚ್ಚರ ಗೆಳೆಯ! ಎನ್ನುವಂತಿದೆ.. ಮನುಷ್ಯ ಸಂಬಂಧಗಳನ್ನೆಲ್ಲಾ ಮೂಟೆ ಕಟ್ಟಿ ಅಟ್ಟಕ್ಕೇರಿಸಿರುವ ಈ ಸಮಯದಲ್ಲಿ, ಒಂದು ಸಾಮಾನ್ಯ ಸ್ಪರ್ಶದ ಮಹತ್ವವನ್ನ ಇಲ್ಲಿನ ಲೇಖನವೊಂದು ತಿಳಿಸುತ್ತೆ. ಇನ್ನೇನು ಸಾಯುವ ಯೋಚನೆ ಮಾಡಿದ ವ್ಯಕ್ತಿ, ಮಾರಣಾಂತಿಕ ಕಾಯಿಲೆಗೆ ತುತ್ತಾದವರು, ನಿರಂತರ ಸೋಲಿನಿಂದ ಕಂಗೆಟ್ಟವರು, ಎಲ್ಲಾ ಮುಗಿಯಿತೆಂದು ತಲೆ ಮೇಲೆ ಕೈ ಹೊತ್ತವರಿಗೆ ಪ್ರೀತಿ ಕಾಳಜಿ ಹೊತ್ತ ನಮ್ಮ ಒಂದು ಸ್ಪರ್ಶ ಅದೆಷ್ಟೆಲ್ಲಾ ಜಾದು ಮಾಡಿಬಿಡಬಹುದು ಎಂದೆನಿಸದಿರದು. ಸತ್ತರೂ ಇಲ್ಲೇ ಸಾಯ್ತೇನೆ ಎಂದು ರಾಶಿ ರಾಶಿ ಕನ್ನಡ ಪುಸ್ತಕದ ಗುಡಿಯಲ್ಲಿ ಕುಳಿತ ಇಸಾಖರ ಕನ್ನಡ ಪ್ರೇಮ ಕಂಡು ಮನ ಧನ್ಯತಾ ಭಾವದಲ್ಲಿ ತೇಲುತ್ತಿದ್ದರೆ ಇನ್ನೊಂದು ಕಡೆ ಅವರ ಬಾಲ್ಯದ ನೋವುಗಳು, ಬಡತನ,ಜೀತದ ಕೆಲಸ,ಅವರೆ ನೆಟ್ಟ ಗಿಡಗಳಿಗೆ ಒದಗಿದ ಸ್ಥಿತಿ, ದುರ್ಜನರು ಪುಸ್ತಕಗಳಿಗೆ ಹಚ್ಚಿದ ಬೆಂಕಿ ಇದೆಲ್ಲವನ್ನೂ ಮೀರಿ ಉರ್ದು ಮಾತೃಭಾಷೆಯಾಗಿದ್ದರು ಕನ್ನಡಕ್ಕಾಗಿ ಅವರು ಬದುಕುತ್ತಿರುವ ರೀತಿ ನಿಜಕ್ಕೂ ಆದರ್ಶನೀಯ..ಕನ್ನಡಿಗರಾಗಿಯೂ ಕನ್ನಡಕ್ಕಾಗಿ ಏನು ಮಾಡದವರು ಈ ಲೇಖನ ಓದಿದರೆ ತುಸು ಭಾಷಾಭಿಮಾನವಾದರು ಮೂಡಬಹುದೇನೋ!
ಹೆತ್ತವರನ್ನು ಬದುಕಿನ ಸಂಧ್ಯಾಕಾಲದಲ್ಲಿ ಆಶ್ರಮ ಸೇರಿಸುವ ಅಥವಾ ಮನೆಯಲ್ಲೇ ಇರಿಸಿಕೊಂಡು ಅನಾಥಭಾವದಲ್ಲಿ ಮುಳುಗಿಸಿರುವ ಅದೆಷ್ಟೋ ದುರುಳರು ನಮ್ಮ ಮುಂದಿದ್ದಾರೆ ಅಂತಹವರ ಕಣ್ತೆರೆಸುವ ಲೇಖನ ಸಹ ಇಲ್ಲಿದೆ.
ಮಧ್ಯಮ ವರ್ಗದವರಲ್ಲಿ ಸಹಜವಾಗಿ ಕಾಡುವ ನೂರಾರು ಬವಣೆಗಳ ಮೇಲೆ ಬೆಳಕು ಚೆಲ್ಲುತ್ತಾ ಅದರಲ್ಲಿಯೂ ಯಶಸ್ಸಿನ ಹಾದಿಗೆ ಸಾಗಲೂ ಕನಸುಗಳನ್ನೂ ಬೇಟೆಯಾಡಲು ಲೇಖಕರು ಇಲ್ಲಿ ನಮ್ಮನ್ನು ಅಣಿಗೊಳಿಸುತ್ತಾರೆ. ಮನುಷ್ಯ ಎಂದ ಮೇಲೆ ತಪ್ಪುಗಳಾಗುವುದು ಸಹಜ ಆದರೆ ಅದೇ ನೆಪದಲ್ಲಿ ದ್ವೇಷದಲ್ಲೇ ಬದುಕದೆ ಯೋಗ್ಯರಾದವರಿಗೆ ಕ್ಷಮೆ ಎಂಬ ಎರಡಕ್ಷರದ ವರವನ್ನು ನೀಡುವ ಕುರಿತು ಲೇಖನ ಚರ್ಚಿಸಿದಾಗ ಹೌದಲ್ವಾ ? ನಾವು ಯೋಗ್ಯರನ್ನು ಕ್ಷಮಿಸದೆ ಎಷ್ಟೊಂದು ಜೀವಗಳಿಂದ ದೂರಾಗಿಬಿಟ್ಟಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನೆಗೆಳೆದುಕೊಳ್ಳುತ್ತೇವೆ. ಸಾಧನೆಗೆ ವಯಸ್ಸಿನ ಅಂತರವಿಲ್ಲ, ಲಿಂಗದ ತಾರತಮ್ಯವೂ ಇಲ್ಲ ನಾವು ಮೈಕೊಡವಿ ಮೇಲಳೇಬೇಕಷ್ಟೇ ಹೀಗೊಂದು ಛಲ ಹುಟ್ಟೋದು ಲೇಖಕ ಕಟ್ಟಿಕೊಡುವ ಕೇರಳದ ಇಳಿವಯಸ್ಸಿನ ರಾಧಮಣಿಯವರ ಕಥೆಯನ್ನು ಓದಿದಾಗ. ಹೆಣ್ಣು ಮಕ್ಕಳು ಗಾಡಿ ಓಡಿಸೋದನ್ನು ನೋಡಿ ಮೂದಲಿಸುವ, ವ್ಯಂಗ್ಯ ಮಾಡುವ ಹುಡುಗರಿಗೂ ಮಾದರಿಯಾಗ್ತಾರೆ ಹನ್ನೆರಡು ವಾಹನಗಳ ಲೈಸೆನ್ಸ್ ಹೊಂದಿರುವ ಈ ಹೆಣ್ಣುಮಗಳು…
ಇಲ್ಲಿ ದೀಕ್ಷಿತ್ ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತಾರೆ ಅನೇಕರು ಅರಿಯದ ನಮ್ಮದೇ ನಾಡಿನ ಬ್ರಿಟೀಷರ ಪಾಲಿನ ಸಿಂಹ ಸ್ವಪ್ನ ದೇಶಭಕ್ತ ಅಪ್ಪಟ ಕ್ರಾಂತಿಕಾರಿ ಸಿಂಧೂರ ಲಕ್ಷ್ಮಣನನ್ನು ಪರಿಚಯಿಸಿ. ಸಾಮಾನ್ಯ ಹುಡುಗನ ಅಸಾಮಾನ್ಯ ಕಥೆ ಹೇಳುತ್ತಾ ನಮ್ಮಲ್ಲಿ ಮರೆಯಾಗುತ್ತಿರುವ ದೇಶಭಕ್ತಿಯನ್ನು ಜಾಗೃತಗೊಳಿಸುತ್ತಾರೆ. ಇನ್ನೂ ಪುಸ್ತಕದ ಶೀರ್ಷಿಕೆ ಹೊತ್ತ ಲೇಖನ ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ ಎನ್ನುತ್ತಾ ನಿಂದಕ ಒಬ್ಬ ಸಾಧಕನನ್ನು ಸೃಷ್ಟಿಸುತ್ತಾನೆ. ನಾವು ಆ ನಿಂದಕರ ನಡುವೆಯೇ ಸಾಧಕರಾಗಬೇಕೆಂದು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ. ಸಮಸ್ಯೆಗಳಿಗೆ ಹೆದರಿ ಓಡದೆ ಎದುರಿಸಿ ನಿಲ್ಲುವ ತತ್ವ ಸಾರುತ್ತಾ ಈಸಬೇಕು ಇದ್ದು ಜಯಿಸಬೇಕೆಂದು ಬೋಧಿಸುತ್ತದೆ ತಾಳು ಮನವೇ ತಾಳು ಲೇಖನ.
ನಾವಿವತ್ತು ಎಷ್ಟೆ ದೊಡ್ಡ ಹುದ್ದೆಗಳಲ್ಲಿದ್ದರು ನಾವು ಮಾಡುತ್ತಿರುವ ಕೆಲಸದ ಬಗ್ಗೆ ಹಲವರಿಗೆ ತೃಪ್ತಿಯಿಲ್ಲ. ಒಂದು ರೀತಿಯಲ್ಲಿ ನಾವೆಲ್ಲಾ ಅತೃಪ್ತ ಆತ್ಮಗಳು. ಆದರೆ ಅಂತವರ ಯೋಚನೆಯನ್ನೆ ಬದಲಾಯಿಸುತ್ತದೆ ಶವಗಾರ ಸಿದ್ಧಯೋಗಿ ಮತ್ತು ಮಸಣದ ಹೂ ಗಟ್ಟಿಗಿತ್ತಿ ನೀಲಮ್ಮರ ಕಥೆ ಇಬ್ಬರು ತಮ್ಮ ವೃತ್ತಿಯನ್ನು ಪ್ರೀತಿಸುವ ರೀತಿ ಮತ್ತು ಬದುಕನ್ನ ಒಪ್ಪಿ ಅಪ್ಪಿಕೊಂಡ ಬಗೆ ಹೊಸ ಬದುಕಿನ ಆಲೋಚನೆಗೆ ನಮ್ಮನ್ನ ನೂಕುತ್ತದೆ. ಹಾಗೆ ಖಾಲಿ ಕುಳಿತು ಸವೆದು ಹೋಗುತ್ತಿರುವ ನಮಗೆ ಅವಕಾಶ ನಿಮ್ಮನ್ನರಸಿ ಬರುವುದಿಲ್ಲ ನೀವೆ ಅವಕಾಶವನ್ನರಸಿ ಹೊರಡಬೇಕೆಂದು ಸಾಧನೆಯ ಕಡೆಗೆ ಸೆಳೆಯುವ ಬರಹಗಳು ಇಲ್ಲಿವೆ. ಇನ್ಯಾರದ್ದೋ ನೆನಪಿನಲ್ಲಿ ಬಿಟ್ಟು ಹೋದವರ ಚಿಂತೆಯಲ್ಲಿ ಬದುಕು ಬರಿದಾಗಿಸಿಕೊಳ್ಳುತ್ತಿರುವ ಅರೆ ಹುಚ್ಚರಿಗೆ ಮಾನಸಿಕ ಚಿಕಿತ್ಸೆಯನ್ನು ನೀಡಿದ್ದಾರೆ ತೊರೆದು ಜೀವಿಸಬಹುದು ಎಂಬ ಲೇಖನದಲ್ಲಿ. ಬದುಕಿನಲ್ಲಿ ಸಂತೋಷ, ವಿಷಾದದಲ್ಲಿಯೂ ಸಂಗೀತ ನಮ್ಮನ್ನ ಆವರಿಸಿರುವ ಪರಿಯೂ ಈ ಪುಸ್ತಕದಲ್ಲಿದೆ. ಪ್ರಯತ್ನವಿಲ್ಲದೆ ಏನು ಇಲ್ಲ.. ನಿರಂತರ ಪ್ರಯತ್ನಗಳಷ್ಟೆ ಯಶಸ್ಸಿಗೆ ಇರುವ ಮೆಟ್ಟಿಲು ಹೀಗಾಗಿ ಪ್ರಯತ್ನವಿರಲಿ… ಮರಳಿಯತ್ನವ ಮಾಡಿ ಎಂದು ಸುಮ್ಮನೆ ಖಾಲಿ ಕೂತು ಸಕ್ಸಸ್ ಕನಸು ಕಾಣುತ್ತಿರುವ ನಮ್ಗೆ ಪ್ರಯತ್ನವೇ ಮನೆದೇವರೆಂದು ಬಡಿದೆಬ್ಬಿಸುತ್ತಾರೆ.
ಕನ್ನಡದ ಆ ಧ್ವನಿ ಯಾರಿಗೆ ತಾನೇ ಗೊತ್ತಿಲ್ಲ. ಕನ್ನಡಿಗರೆಲ್ಲಾ ಅವರ ಅಭಿಮಾನಿಗಳೇ.. ಹೌದು ನಿರೂಪಕಿ ಅಪರ್ಣಾರ ಕುರಿತ ಲೇಖನ ಅರೆಕ್ಷಣ ಅವರು ಇಂದು ನಮ್ಮೊಂದಿಗಿಲ್ಲ ಎಂಬುದನ್ನೇ ಮರೆಸಿಬಿಡುತ್ತದೆ. ಬದುಕು ಜೀವ ನದಿ ಅದು ಹರಿಯುತ್ತಲೇ ಸಾಗಬೇಕು, ಇಲ್ಲೂ ಅಷ್ಟೇ ಶೈಕ್ಷಣಿಕ ಬದುಕಿನ ಕೊನೆಯ ದಿನಗಳ ಕುರಿತು ಬರೆದ ಲೇಖನ ಓದುವಾಗ ಪ್ರತಿ ಓದುಗರಿಗೂ ಅವರ ಕಾಲೇಜು ದಿನಗಳು, ಲೈಬ್ರರಿ, ಕ್ಯಾಂಟೀನ್, ಗೆಳೆಯರು, ಆಟ, ಪಾಠ, ತಲೆಹರಟೆಗಳನ್ನ ನೆನಪಿಸಿ ಕಣ್ಣಾಲಿಗಳು ತೇವಗೊಳಿಸತ್ತೆ. ಎಸ್.ಪಿ.ಬಿ ಮತ್ತು ಉಸ್ತಾದ ರ ಕುರಿತ ಲೇಖನಗಳು ಅವರ ಬಗೆಗಿದ್ದ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತವೆ. ರತನ್ ಟಾಟಾರ ಬದುಕು ಅವರ ಮಾನವೀಯತೆ ಮತ್ತು ಸರಳತೆಯ ಕುರಿತು ಓದಿದ ಬಳಿಕ ಅವರಲ್ಲಿನ ಒಂದಂಶದ ಒಳ್ಳೆಯ ಗುಣವಾದರು ನಮ್ಮೊಳಗೆ ಸೇರಿಕೊಳ್ಳಲಿ ಎಂದೆನಿಸುತ್ತದೆ. ಮನುಷ್ಯ ಪ್ರೇಮದ ಬಗ್ಗೆ ಮಾತ್ರವಲ್ಲ ಇಲ್ಲಿ ಲೇಖಕ ಶ್ವಾನದ ನಿಷ್ಠೆಯನ್ನು ನಮ್ಮ ಮನದಂಗಳಕ್ಕಿಳಿಸುತ್ತಾರೆ. ಬರಹಗಾರನ ತಪಸ್ವಿ ಲೇಖನ ಪ್ರದೀಪ್ ಕುಮಾರ್ ಹೆಬ್ರಿಯವರ ಅಗಾಧ ಜ್ಞಾನ ಸಾಧನೆಗಳನ್ನು ಪರಿಚಯಿಸುತ್ತಾ ಸ್ಫೂರ್ತಿಯಾಗುತ್ತಾರೆ. ಕೆ ರಾಜಕುಮಾರ ಕುರಿತ ಬರಹವಂತೂ ಅವರು ಬಗೆಗೆ ಹಲವು ವಿಚಾರಗಳನ್ನು ತಿಳಿಸುತ್ತಾ ಆ ಕನ್ನಡಮ್ಮನ ಕಂದನಿಗೆ ನಮ್ಮನ್ನ ಶರಣಾಗಿಸಿಬಿಡುತ್ತದೆ. ಇದೇ ನಾಡಲ್ಲಿ ಹುಟ್ಟಿ ಇದೇ ಭಾಷೆಯ ನಡುವೆ ಬೆಳೆದ ನಮಗೆ ಕನ್ನಡಾಭಿಮಾನ ಇಲ್ಲವಾಗುತ್ತಿರುವ ಈ ಹೊತ್ತಿನಲ್ಲಿ ಲೇಖಕರು ಜಿದ್ದಿಗೆ ಬಿದ್ದು ಕನ್ನಡ ಕಲಿತ ಮಲಯಾಳಿ ಲೇಖನದಲ್ಲಿ ತನ್ನಜ್ಜ ಕನ್ನಡ ಕಲಿತ ಬಗೆ ಪುಸ್ತಕ ಪ್ರೇಮದ ಬಗ್ಗೆ ಹೇಳುವಾಗ ನಮ್ಮಲ್ಲಿ ಕಾಣಸಿಗುವ ಭಾಷಪ್ರೇಮದ ಬಗ್ಗೆ ಅರೆಕ್ಷಣ ನಾಚಿಕೆಯಾಗುತ್ತದೆ. ಮತ್ತವರ ಕನ್ನಡ ಪ್ರೇಮದ ಕುರಿತು ಅಷ್ಟೇ ಹೆಮ್ಮೆಯೂ ಮೂಡುತ್ತದೆ. ಅಯೂಬ್ ಅಹಮ್ಮದ್ದರ ಕುರಿತ ಲೇಖನ ಓದುತ್ತಿದ್ದರೆ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮನ ತಾನಾಗೆ ಸಾವಿರ ಶರಣುಗಳನ್ನು ಸಮರ್ಪಿಸುತ್ತದೆ. ಅಫ್ಜಲ್ ನ ಸಾಧನೆಗಳು ಕಾಲ ದೇಶ ಭಾಷೆ ಎಲ್ಲಾ ಬಗೆಯ ನ್ಯೂನತೆಗಳನ್ನು ಮೀರಿ ಸಾಧಕರಿಗೆ ಸ್ಫೂರ್ತಿಯ ಸೆಲೆಯಾಗುವಲ್ಲಿ ಅನುಮಾನವಿಲ್ಲ. ಈ ಲೇಖನಗಳಲ್ಲಿ ಬರುವ ಎರಡು ಅಪೂರ್ವ ಶುದ್ಧ ಪ್ರೇಮಗಳು ಆ ಪಾತ್ರಗಳು ಹೊತ್ತಿಗೆಯಲ್ಲಿ ಪುಟ ಖಾಲಿಯಾದ ಮೇಲೆಯೂ ಪಾರಿಜಾತದಂತೆ ನಿಷ್ಕಲ್ಮಶ ಪ್ರೀತಿಯ, ಪರಸ್ಪರ ನಂಬಿಕೆ, ಭರವಸೆಯ ಘಮವನ್ನು ಪಸರಿಸುತ್ತಲೇ ಇರುವುದು.
ಇನ್ನು ಕೃತಿಯಲ್ಲಿ ಬಳಕೆಯಾದ ಭಾಷೆ, ಪದ ಲಾಲಿತ್ಯ ಎಂದಿನಂತೆ ಬ್ಯೂಟಿಫುಲ್.. ಪ್ರತಿ ಪಾತ್ರಗಳು ಲೇಖನ ಮುಗಿದ ಬಳಿಕವೂ ಸ್ವಮನನಕ್ಕೆ ನಮ್ಮನ್ನು ಕರೆಯುತ್ತವೆ. ಎಲ್ಲಿಯೂ ಬೇಸರವೆನಿಸದೆ ಓದಿಸಿಕೊಂಡು ಹೋಗುವ ಕೃತಿ, ರೋಚಕತೆ, ರೋಮಾಂಚಕತೆ, ಮಾನವೀಯತೆ, ಮನುಷ್ಯ ಪ್ರೇಮ, ಜಾತಿ ಭಾಷೆ ಧರ್ಮ ಲಿಂಗ ಎಲ್ಲಾ ಮೀರಿ ಸಾಧಕರನ್ನ ಹುಡುಕುವ ವಿಶಾಲ ಮನೋಭಾವ, ಭರವಸೆ, ಶುದ್ಧ ಪ್ರೇಮ, ಕಾಯಕ ತತ್ವ, ಕಾಯಕ ತೃಪ್ತಿ, ಸರಳ ಬದುಕುಗಳ ಸಮ್ಮಿಲನವೇ ಅವರಿಲ್ಲದೆ ಬದುಕಿನಲ್ಲಿ ಗೆಲ್ಲಬಲ್ಲಿರಾ?…..
ಮತ್ತೆ ಮತ್ತೆ ಬರೆಯುತ್ತಲೇ ಇರಿ….
"ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತ...
"ಆಹುತಿ ಕತೆಯಲ್ಲಿ ಹೆಣ್ಣಿನ ಶೋಷಣೆಯ ಚಿತ್ರಣವಿದೆ. ಶೀನಪ್ಪ ಮೇಷ್ಟರ ಮುಖವಾಡದ ಕತೆಯಿದೆ. ಹೊರಗಣ ಸಮಾಜಕ್ಕೆ ಸಂಭಾವಿ...
“ನಮಸ್ಕಾರ, ನಾನು ಚೆನ್ನಗಿರಿ ಕೇಶವ ಮೂರ್ತಿ, ಕ್ರಿಕೆಟ್ ಅಂಕಿಅಂಶ ಬರೆಯುತ್ತೇನೆ,” ಎಂದರು. ವಿನಿಯವ...
©2025 Book Brahma Private Limited.