"ಇಡೀ ಸಂಕಲನದಲ್ಲಿ ಮತ್ತೆ ಮತ್ತೆ ಓದಿಸಿಕೊಳ್ಳುವ ಪ್ರಬಂಧ, ಅಹಂ ಬ್ರಹ್ಮಾಸ್ಮಿ. ಗಹನವಾದದ್ದನ್ನು ಸರಳವಾಗಿ ಹೇಳಿ, ಮತ್ತೆ ಮತ್ತೆ ಮೆಲುಕು ಹಾಕಲು ನಮ್ಮನ್ನು ಪ್ರೇರೇಪಿಸುವ ಈ ಪ್ರಬಂಧವು ಬಳಸುವ ಭಾಷೆ ಅನನ್ಯ. ರಾಜಕಾರಣಿಗಳ ಬಗ್ಗೆ ಹೇಳುತ್ತ, ’ಒಬ್ಬ ಎಂಥದೇ ರಾಜಕಾರಣೆಯಿರಲಿ, ಅವನಿಗೆ ಏನಾದರೂ ಒಂದು ಪೂರ್ವ ಪದ ಬೇಕೇ ಬೇಕು," ಎನ್ನುತ್ತಾರೆ ಶಶಿಧರ ಡೋಂಗ್ರೆ. ಅವರು ವಿಜಯೇಂದ್ರ ಪಾಟೀಲ್ ಅವರ 'ಆತ್ಮಸಾಕ್ಷಿಯ ಹಾವಳಿಗಳು' ಪ್ರಬಂಧ ಸಂಕಲನದ ಬಗ್ಗೆ ಬರೆದ ಟಿಪ್ಪಣಿ.
ಇಂಗ್ಲಿಷಿನ Serendipity ಶಬ್ದಕ್ಕೆ ನಲ್ಬೆರಗು ಎನ್ನುವ ಅನುವಾದ ಇದೆಯಾದರೂ ಹೆಚ್ಚು ಬಳಕೆಯಲ್ಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಸಂತೋಷ ಎನ್ನುವ ಭಾವದ ಈ ಶಬ್ದ, ನನ್ನ ಮನಸ್ಸಿಗೆ ಬಂದದ್ದು ವಿಜಯೇಂದ್ರ ಪಾಟೀಲ್ ಅವರ ’ಆತ್ಮಸಾಕ್ಷಿಯ ಹಾವಳಿಗಳು’ ಪುಸ್ತಕವನ್ನು ಓದಿದಾಗ. ಎರಡು ವಾರದ ಹಿಂದೆ ವಿಜಯೇಂದ್ರ ಪಾಟೀಲ್ ಅವರು ಮೈಸೂರಿಗೆ ಬಂದಾಗ ಅವರು ಕೊಟ್ಟ ಪುಸ್ತಕ ಒಂದೇ ಗುಕ್ಕಿಗೆ ಓದಿಸಿಕೊಂಡಿತು. ಕೆಲವು ಪ್ರಬಂಧಗಳು ಎರಡನೇ ಬಾರಿಗೂ ಓದಿಸಿಕೊಂಡಿತು. ಲಲಿತ ಪ್ರಬಂಧಗಳ ಕಟ್ಟಾ ಅಭಿಮಾನಿ ಎಂದು ಯಾವುದೇ ಅಳುಕಿಲ್ಲದೆ ಭಾವಿಸುವ ನನಗೆ ಈ ಪುಸ್ತಕದ ಓದು ಕೊಟ್ಟಿದ್ದು ಒಂದು ನಿಷ್ಕಲ್ಮಷ ಸಂತೋಷ. ನವೋದಯದ ಭಾಷೆಯನ್ನು ನಮ್ಮ ಮುಂದೆ ಇಡುವ ಶೈಲಿ; ನಾವು ದಿನನಿತ್ಯ ಕಾಣುವುದನ್ನೇ ಹೊಸ ರೂಪಕಗಳ ಮೂಲಕ ತೋರುವ ವಾಕ್ಯಗಳು; ಈ ಪದವನ್ನು ಹೀಗೂ ಬಳಸಬಹುದೇ ಎನ್ನುವ ಆಶ್ಚರ್ಯವನ್ನು ತರುವ ತಾಣಗಳು – ಹೀಗೆಯೇ ಹತ್ತು ಹಲವು ವಿಧದಿಂದ ಓದಿಸಿಕೊಂಡು ಹೋಗುವ ಪಾಟೀಲ್ ಅವರ ಈ ಸಂಕಲನದಲ್ಲಿ ಇರುವ ಪ್ರಬಂಧಗಳೆಲ್ಲನ್ನೂ ಸರಿ ಸುಮಾರು 1999 ರಿಂದ 2000 ಯ ಕಾಲಮಾನದಲ್ಲಿ ಬರೆದಿದ್ದಾರೆ. ಕೆಲವೊಮ್ಮೆ ಕಿರು ನಗೆ, ಇನ್ನೊಂದು ಕಡೆ ಗಟ್ಟಿಯಾಗಿ ನಗಲೇ ಬೇಕೆನ್ನುವ ಭಾಗಗಳಿಂದ, ವ್ಯಂಗ್ಯದ ಮೊನಚಿದ್ದರೂ, ಅದು ಈರ್ಷ್ಯೆಯತ್ತ ತಿರುಗದಂತೆ ಮಾಡುವ ಸಾಲುಗಳು ಇಲ್ಲಿವೆ. ಎರಡನೇ ಮುದ್ರಣಕ್ಕೆ ಬರೆದ ಮುನ್ನುಡಿಯಲ್ಲೇ ಅವರು ಜೀವನವನ್ನು ನೋಡುವ ದೃಷ್ಟಿ ತಿಳಿಯುತ್ತದೆ. ’ನಾನು ತೇಲು ತೆಪ್ಪದ ಸಿದ್ಧಾಂತದ ಮನುಷ್ಯ’ಎಂದು ಹೇಳಿಕೊಳ್ಳುವ ಪಾಟೀಲರ ಈ ಗುಣ ಬಹುತೇಕ ಎಲ್ಲ ಪ್ರಬಂಧಗಳಲ್ಲೂ ಅಲ್ಲಲ್ಲಿ ಕಾಣುತ್ತದೆ.
ಒಳ್ಳೆಯ ಲಲಿತ ಪ್ರಬಂಧಗಳ ಒಂದು ಗುಣವೆಂದರೆ, ಕೆಲವು ಸಾಲುಗಳನ್ನು ಓದಿದ ಮೇಲೆ, ಇದು ನನ್ನನ್ನೇ ವರ್ಣಿಸಿದ ಹಾಗಿದೆಯಲ್ಲ? ಎಂಬ ಭಾವ ಮೂಡಿಸುವುದು. ಇಂತಹ ಭಾವವನ್ನು ಮೂಡಿಸುವ ಹಲವು ಉದಾಹರಣೆಗಳು ಇಲ್ಲಿವೆ. ’ಆತ್ಮ ಸಾಕ್ಷಿಯ ಹಾವಳಿಗಳು’ ಪ್ರಬಂಧದ ಕೇಂದ್ರ ಬಿಂದುವಿನಂತಿರುವ ಈ ವಾಕ್ಯಗಳನ್ನು ಗಮನಿಸಿ : ’ ಈ ಆತ್ಮ ಸಾಕ್ಷಿಯಂತೆ, ಅಂತರಂಗದ ಪ್ರೇರಣೆಯಂತೆ ನಡೆದುಕೊಳ್ಳುವುದೆಂದರೆ ನಂಬಿಕೆ ಇರುವುದನ್ನು ಮಾಡುವುದು, ನಂಬಿಕೆಯಿಲ್ಲದ್ದನ್ನು ತ್ಯಜಿಸುವುದು ಎಂದು ಯಾರೋ ಸುಲಭರೂಪದಲ್ಲಿ ವಿವರಿಸಿದರು. ನನಗೇನೋ ಹಲವಾರು ವಿಷಯಗಳಲ್ಲಿ, ಅಂದರೆ ನಾನೇ ಮಾಡುವ ಅನೇಕ ಕಾರ್ಯಗಳಲ್ಲಿ ನಂಬಿಕೆಯಿಲ್ಲ. ಅಂತರಂಗದ ಪ್ರೇರಣೆಯಂತೆ ತ್ಯಜಿಸಬೇಕಾದವುಗಳಲ್ಲಿ, ನೌಕರಿ, ಹೆಂಡತಿ, ಗೆಳೆಯರು ಎಲ್ಲ ಬಂದರೂ ಬಂದರೇ ! ಆಮೇಲೆ ಊಟದ ಗತಿ? ಸಾಮಾಜಿಕ ಸ್ಥಾನಮಾನ? ಅಂದಿನಿಂದ ಆತ್ಮ ಸಾಕ್ಷಿಯ ಬಗೆಗೆ ಗಂಭೀರ ಭಯ ಶುರುವಾಯಿತು’.
ಇಡೀ ಸಂಕಲನದಲ್ಲಿ ಮತ್ತೆ ಮತ್ತೆ ಓದಿಸಿಕೊಳ್ಳುವ ಪ್ರಬಂಧ, ಅಹಂ ಬ್ರಹ್ಮಾಸ್ಮಿ. ಗಹನವಾದದ್ದನ್ನು ಸರಳವಾಗಿ ಹೇಳಿ, ಮತ್ತೆ ಮತ್ತೆ ಮೆಲುಕು ಹಾಕಲು ನಮ್ಮನ್ನು ಪ್ರೇರೇಪಿಸುವ ಈ ಪ್ರಬಂಧವು ಬಳಸುವ ಭಾಷೆ ಅನನ್ಯ. ರಾಜಕಾರಣಿಗಳ ಬಗ್ಗೆ ಹೇಳುತ್ತ, ’ಒಬ್ಬ ಎಂಥದೇ ರಾಜಕಾರಣೆಯಿರಲಿ, ಅವನಿಗೆ ಏನಾದರೂ ಒಂದು ಪೂರ್ವ ಪದ ಬೇಕೇ ಬೇಕು. ’ಮೌಲ್ಯಾಧಾರಿತ ರಾಜಕಾರಣಿ’, ’ಬಡವರ ಬಂಧು’, ’ಹುಟ್ಟು ಹೋರಾಟಗಾರ’ ಹೀಗೆ ಏನೇನೋ. ಇವು ಎಷ್ಟೆಂದರೂ ರಾಜಕಾರಣಿಗಳು ಬಳಸುವ ಶಬ್ದಗಳು. ಅವರ ಸೂಕ್ಷ್ಮವೂ ಸ್ಥೂಲವೇ. ಈ ಕೊನೆಯ ವಾಕ್ಯ ಇಡೀ ಪ್ಯಾರಾಗೆ ಒಂದು ಘನತೆಯನ್ನು ತಂದುಕೊಡುತ್ತದೆ. ಅದುವರೆಗೆ ತಣ್ಣಗೆ ಓದಿಸಿಕೊಂಡು ಹೋಗುತ್ತಿದ್ದ ಸಾಲುಗಳು, ಕೊನೆಯ ವಾಕ್ಯ ಓದಿದ ಮೇಲೆ, ನಿಲ್ಲುವಂತೆ, ಮೆಲುಕು ಹಾಕುವಂತೆ ಮಾಡುತ್ತದೆ.
ಪಾಟೀಲರು ಬ್ಯಾಂಕ್ ಅಧಿಕಾರಿಯಾಗಿದ್ದುದರಿಂದ, ಬ್ಯಾಂಕಿನ ಹಲವಾರು ವ್ಯವಹಾರಗಳ ವಿವರ ಇದೆ. ಬ್ಯಾಂಕಿನ ವ್ಯವಹಾರವನ್ನೇ ಕೇಂದ್ರವಾಗಿಟ್ಟುಕೊಂಡ ಪ್ರಬಂಧಗಳೂ ಇವೆ. ’ಸಾಲದ ಸಾಲ’ ಎಂಬ ಪ್ರಬಂಧದಲ್ಲಿ, ಮಠಾಧಿಪತಿಯೊಬ್ಬರು ತೆಗೆದುಕೊಂಡ ಸಾಲವನ್ನು ಹಿಂದಿರುಗಿಸಿರುವುದಿಲ್ಲ. ಆ ವಿವರವನ್ನು ಪಾಟೀಲರು ಹೀಗೆ ವರ್ಣಿಸಿದ್ದಾರೆ. ’ಚಾತುರ್ಮಾಸ್ಯದ ಉಪನ್ಯಾಸದಂತೆ, ಬಿಟ್ಟೂಬಿಡದೆ ಕಾಡಿ ಕೊನೆಗೂ ಸಾಲ ಪಡೆದ ಮಠದ ಸ್ವಾಮೀಜಿಯೊಬ್ಬರು, ಮರುಪಾವತಿಯ ಸಂದರ್ಭದಲ್ಲಿ ಮಾತ್ರ ’ಮೌನಾಚರಣೆ’ ಮಾಡಿ ಕುಳಿತುಬಿಟ್ಟರು. ನೋಟೀಸು ಬಂದಾಗಲೆಲ್ಲ ಮಠದಿಂದ ಬ್ಯಾಂಕಿಗೆ ಪ್ರಸಾದ ಮಂತ್ರಾಕ್ಷತೆಗಳ ಲಕೋಟೆಯೊಂದು ಬರುತ್ತಿತ್ತು. ಅದರೊಂದಿಗೆ ಮಠದ ಮುದ್ರಿತ ಸೇ ಚ ವಾದರದ ಪಟ್ಟಿಯೂ ಇರುತ್ತಿತ್ತು. ಅಡ್ಡ ಪಲ್ಲಕ್ಕಿಗೆ ಇಷ್ಟು, ಪಾದಪೂಜೆಗೆ ಇಷ್ಟು, ಇತ್ಯಾದಿ ಇತ್ಯಾದಿ. ’ಬ್ಯಾಂಕಿನವರು ಈ ಸೇವೆಗಳ ಪ್ರಾಯೋಜಕತ್ವ ಪಡೆದು ತಮ್ಮ ಸಾಲ ಮುಟ್ಟಿಸಿಕೊಳ್ಳಲಿ’ ಎಂಬ ಸಂದೇಶ ಅದರಲ್ಲಿ ಅಡಗಿರುತ್ತಿತ್ತೋ ಏನೋ !.
ಪಾಟೀಲರು ಭಾಷೆಯ ಬಳಕೆಯಲ್ಲಿ ಅಪರೂಪವಾದ ಅನನ್ಯತೆಯನ್ನು ತೋರುತ್ತಾರೆ. ಅವರ ವಿಸ್ತೃತ ಓದು ಇಡೀ ಸಂಕಲನದಲ್ಲಿ ನಮಗೆ ಸಹಜವಾಗಿ ಕಾಣುತ್ತದೆ. ಭಾಷೆಯನ್ನು ಅದರ ಎಲ್ಲ ಸಾರದೊಂದಿಗೆ ಬಳಸಿರುವುದನ್ನು ’ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ...’ ಪ್ರಬಂಧದಲ್ಲಿ ಕಾಣಬಹುದು. ನೆರೆ ಎನ್ನುವ ಕನ್ನಡ ಶಬ್ದಕ್ಕೆ ಅನೇಕ ಅರ್ಥಗಳಿವೆ. ಅವನ್ನೆಲ್ಲ ಬಳಸಿಕೊಂಡು, ಸೊಗಸಾಗಿ ಕಟ್ಟಿ ಸಂದರ್ಭಕ್ಕೆ ತಕ್ಕ ಹಾಗೆ ಬಳಸಿರುವ ಜಾಣ್ಮೆ ಇಲ್ಲಿ ಕಾಣುತ್ತದೆ. ಈ ಪ್ರಬಂಧದ ಕೊನೆಯಲ್ಲಿ ಬರುವ ಸಾಲುಗಳು ಇವು. ’ನೆರೆಯವೆಲ್ಲ ಕೆಟ್ಟವರಲ್ಲ. ಬೇಕೆಂತಲೇ ಕಾಡುವವರಲ್ಲ. ನಮ್ಮ ಕಪ್ಪಮ್ಮನಿಗೂ ಆ ಉದ್ದೇಶವಿದ್ದಂತಿಲ್ಲ. ಅವರು ಬೆಳಿಗ್ಗೆ ಐದಕ್ಕೇ ಎಡಗೈಯಲ್ಲಿ ಫಿನಾಯಿಲ್, ಬಲಗೈಯಲ್ಲಿ ಪೊರಕೆ ಹಿಡಿದೇ ಏಳುತ್ತಾರೆ. ಆಕೆಗೆ ಸ್ವಚ್ಛತೆಯ ಹುಚ್ಚು. ಬ್ಯಾಕ್ಟೀರಿಯಾದಿಂದ ಬೆಕ್ಕಿನವರೆಗೆ ಯಾವ ಜೀವಿಗಳನ್ನು ಹುಡುಕಿ ಹೊಡೆಯುವುದೇ ಅವರ ಕೆಲಸ. ಏಕಾಣುಜೀವಿಗಳನ್ನು ಧ್ಯಾನಿಸುತ್ತಾ, ತನಗರಿವಿಲ್ಲದಂತೆಯೇ ನಮ್ಮ ಮನೆ ಹಿತ್ತಲುಗಳನ್ನು ಪ್ರವೇಶಿಸುತ್ತಾರೆ. ಹೀಗಾಗಿ ನಮ್ಮ ಇಡೀ ವಠಾರದಲ್ಲಿ ಬ್ಯಾಕ್ಟೀರಿಯಾಗಳ ಅಭಾವ ಎಷ್ಟಾಗಿ ಬಿಟ್ಟಿದೆಯೆಂದರೆ ಹಾಲು ಮೊಸರಾಗುವ ಕ್ರಿಯೆಗೂ ಸಂಚಕಾರ ಬಂದಿದೆ’. ಈ ಕೊನೆಯ ಸಾಲನ್ನು ಓದುತ್ತಾ ಒಂದು ವೈಜ್ಞಾನಿಕ ಸಿದ್ಧಾಂತವನ್ನು ಎಷ್ಟು ಸೊಗಸಾಗಿ ಬಳಸಿದ್ದಾರೆ ಎನ್ನಿಸಿತು.
1999 ಕಳೆದು 2000 ಬರುವ ಸಂದರ್ಭದಲ್ಲಿ ಬರೆದಿರಬಹುದಾದ ’ಹೊಸ ಸಹಸ್ರಮಾನಕ್ಕೆ ಕನಸುಗಳ ಮೂಲಕ’ ಪ್ರಬಂಧ, ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆಯಾದರೂ ಅದರ ಕೊನೆಯಲ್ಲಿ ಬರುವ ಈ ಸಾಲುಗಳು ಧ್ವನಿಪೂರ್ಣವಾಗಿವೆ. ’ಡಿಸೆಂಬರ್ 31 ಬಂದೇ ಬಂತು. ...ಹೆಂಡತಿ, ಮಕ್ಕಳು ಚೆನ್ನಾಗಿ ಮಾತನಾಡಿಸಿದರು. ಯುವಕನು ಪದ್ಯ ಬರೆಯುವುದನ್ನು ನಿಲ್ಲಿಸಿದುದಾಗಿ ಘೋಷಿಸಿದ. ಕವಯತ್ರಿ ರಾಜಕುಮಾರನಿಗೆ ಡೈವೋರ್ಸ್ ಪ್ರಕಟಿಸಿದಳು. ’ಖಾಲಿ ಜಾಗಕ್ಕೆ ಅರ್ಜಿ ಹಾಕಬಹುದೇ?’ ಎಂಬಂತೆ ನೋಡಿದೆ. ಕನಸು ಧಾರಾವಾಹಿಯಂತೆ ಕಂಡು ಎರಡನೆಯ ಭಾಗಕ್ಕೆ ಮುಂದುವರೆಸಿದೆ. ಸಾಮ್ಯವಾದಿ ಸ್ನೇಹಿತ ಬಂದ. ಆದರೆ ಲೆನಿನ್ ಮಾರ್ಕ್ಸ್ ಕುಡುಗೋಲು ಜೊತೆಗಿರಲಿಲ್ಲ. ಬದಲಿಗೆ ಭಯಂಕರ ಕಾವಿ ಧರಿಸಿಬಿಟ್ಟಿದ್ದ, ಕೈಯಲ್ಲಿ ಪಿಕಾಸಿ, ಸಲಿಕೆ ಹಿಡಿದು ಕಣ್ಣಲ್ಲೇ ಬಿಲ್ಡಿಂಗುಗಳನ್ನು ಕೆಡವುವಂತಿದ್ದ. ಹಳೆಯ ಯುಗವೇ ಹೊಸ ಅಂಕಿಗಳಲ್ಲಿ ಮುಂದುವರಿಸಿದಂತೆ ಕಂಡು ಕಣ್ಣುಬಿಟ್ಟೆ.’
ಹೀಗೆ ಪ್ರತಿಯೊಂದು ಓದಿನಲ್ಲೂ ಹೊಸ ಅರಿವು ಮೂಡಿಸುವ, ನಗುವಿನ ಸೆಲೆಯೊಂದು ನಿಮ್ಮ ಮುಖದಲ್ಲಿ ಯಾವಾಗಲೂ ಇರುವಂತೆ ಬರೆದಿರುವ ವಿಜಯೇಂದ್ರ ಪಾಟೀಲರು ಇನ್ನಷ್ಟು ಪ್ರಬಂಧಗಳನ್ನು ಬರೆಯಲಿ ಎಂದು ಹಾರೈಸೋಣ.
“ಇಲ್ಲಿ ಜೀವ ಮತ್ತು ದೇವ ಭಿನ್ನವಲ್ಲ. ಇಲ್ಲಿ ಜೀವ ಮತ್ತು ದೇವ ಇಬ್ಬರೂ ಸೇರಿ ಆದ ಬಯಲಿನ ಚಿತ್ರಣವನ್ನು ನೀಡುತ್ತದೆ...
"ಮೂವತ್ತು ಕವಿತೆಗಳ ಗುಚ್ಛವಿರುವ ಮೊದಲ ಭಾಗದಲ್ಲಿ ಹಿಂದೆ ಬಿದ್ದ ನೆರಳು, ಮುತ್ತುಗದೆಲೆಯ ಮೇಲಿನ ಬೆಲ್ಲ, ಪಂಜರದ ಗಿ...
"ಒಂಟಿ ಹೆಣ್ಣು ತನ್ನ ಜೀವನವನ್ನು ಯಾವ ರೀತಿ ನಡೆಸಬೇಕು ಎಂಬುದನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ತಿಳಿಸಿಕೊಟ್ಟಿದ...
©2025 Book Brahma Private Limited.