Date: 07-08-2022
Location: ಬೆಂಗಳೂರು
“ಮನುಶ್ಯರು ದ್ವನಿಗಳನ್ನು ಉಚ್ಚರಿಸಲು ಉಸಿರಾಟ ವ್ಯವಸ್ತೆಯು ಅತ್ಯವಶ್ಯ. ಗಾಳಿಯನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಡುವ ನಿಯತ ಪ್ರಕ್ರಿಯೆಯಲ್ಲಿ ಮುಕದ ವಿವಿದ ಅಂಗಗಳು ಮೆದುಳಿನ ನಿರ‍್ದಿಶ್ಟ ಸೂಚನೆಯ ಪ್ರಕಾರ ಕೆಲಸ ಮಾಡಿ ವಿವಿದ ದ್ವನಿಗಳನ್ನು ಉಚ್ಚರಿಸಲು ಕಾರಣವಾಗುತ್ತವೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಸ್ವರ-ವ್ಯಂಜನ ಉಚ್ಚರಣೆಯಾಗುವ ಬಗೆಯನ್ನು ವಿವರಿಸಿದ್ದಾರೆ.
ಮನುಶ್ಯರ ಮುಕಕುಹರದಲ್ಲಿ ಇರುವ ಕೆಲವು ಅಂಗಗಳು ದ್ವನಿಯ ಉಚ್ಚರಣೆಗೆ ಸಹಾಯಕವಾಗುತ್ತವೆ. ಮನುಶ್ಯರು ದ್ವನಿಯನ್ನು ಉಚ್ಚರಿಸುವುದಕ್ಕೆ ಮುಕದಲ್ಲಿ ಇರುವ ನಾಲಿಗೆ, ತುಟಿ, ಹಲ್ಲು, ಅಂಗುಳ, ಕಿರುನಾಲಿಗೆ ಹಾಗೆಯೆ ಗಂಟಲಿನಲ್ಲಿ ಇರುವ ದ್ವನಿಪೆಟ್ಟಿಗೆ ಮೊದಲಾದವೆಲ್ಲವು ಸಹಾಯಕವಾಗುತ್ತವೆ. ಬೂಮಿಯ ಮೇಲೆ ಇರುವ ಹೆಚ್ಚಾನುಹೆಚ್ಚು ಪ್ರಾಣಿ-ಪಕ್ಶಿಗಳು ಹೀಗೆ ದನಿಯನ್ನು ಉಚ್ಚರಿಸುತ್ತವೆ. ಪ್ರತಿಯೊಂದು ಪ್ರಾಣಿ-ಪಕ್ಶಿಯೂ ವಿಬಿನ್ನವಾಗಿ ಉಚ್ಚರಣೆಯನ್ನು ಮಾಡುತ್ತವೆ. ಆಯಾ ಪ್ರಾಣಿ-ಪಕ್ಶಿಗಳ ದೇಹರಚನೆಯ ಮುಕಕುಹರದಲ್ಲಿನ ಕೆಲವು ಅಂಗಗಳು ದ್ವನಿ ಉಚ್ಚರಣೆಗೆ ಸಹಾಯ ಮಾಡುತ್ತವೆ, ಮನುಶ್ಯರ ಉಚ್ಚರಣೆಯಂತೆಯೆ. ಹಾಗಾದರೆ ಮನುಶ್ಯ ಇತರೆಲ್ಲ ಜೀವಿಗಳಂತೆಯೆ ದನಿಯನ್ನು ಉಚ್ಚರಿಸುತ್ತದೆಯಾದರೆ ಮನಶ್ಯರಿಗೆ ಮಾತ್ರ 'ಬಾಶೆ' ಹೇಗೆ ಸಾದ್ಯವಾಯಿತು ಎಂಬುದು ಪ್ರಶ್ನೆಯಾಗುತ್ತದೆ. ಮನಶ್ಯರಿಗೆ ಯಾವುದೊ ಕಾಲಗಟ್ಟದಲ್ಲಿ ಬಾಶೆ ಎಂಬ ಕಸುವು ದಕ್ಕಿದೆ. ಮನುಶ್ಯರು ಮುಕದ ಕೆಲವು ಅಂಗಗಳಿಂದ ಉಚ್ಚರಿಸುವ ದ್ವನಿಗಳನ್ನು ಪದವಾಗಿ ಹೊಂದಿಸಿ ಅದಕ್ಕೆ ಅರ‍್ತವನ್ನು ಆರೋಪಿಸುವ ಸಾದ್ಯತೆ ಇದೆ. ಇದರಿಂದಾಗಿ ಮನುಶ್ಯ ಬಾಶೆಯನ್ನು ಬಳಸಲು ಸಾದ್ಯವಾಯಿತು.
ಸರಿ, ಈಗ ಪ್ರಾಕ್ರುತಿಕವಾದ ದೇಹರಚನೆಯಲ್ಲಿನ ಅಂಗಗಳ ಸಹಾಯದಿಂದ ಉಚ್ಚರಿಸಿದ ದ್ವನಿಗಳಲ್ಲಿ ಸ್ವರ-ವ್ಯಂಜನ ಎಂಬ ಗುಂಪಿಕೆ ಹೇಗೆ ಸಾದ್ಯ ಎಂದು ಯೋಚಿಸಬೇಕು. ಎರಡೂ ಬಗೆಯ ದ್ವನಿಗಳನ್ನು ಉಚ್ಚರಿಸಲು ಮುಕದಲ್ಲಿನ ವಿವಿದ ಅಂಗಗಳು ಸಹಾಯ ಮಾಡುತ್ತವೆ ಎನ್ನುವುದು ನಿಜವಾದರೂ ಅವು ಹೇಗೆ ವರ‍್ತಿಸುತ್ತವೆ ಎನ್ನುವುದರ ಮೇಲೆ ಉಚ್ಚರಿತ ದ್ವನಿಯು ಸ್ವರವೊ-ವ್ಯಂಜನವೊ ಎಂಬುದು ನಿರ‍್ದಾರವಾಗುತ್ತದೆ.
ಮನುಶ್ಯರು ದ್ವನಿಗಳನ್ನು ಉಚ್ಚರಿಸಲು ಉಸಿರಾಟ ವ್ಯವಸ್ತೆಯು ಅತ್ಯವಶ್ಯ. ಗಾಳಿಯನ್ನು ಒಳಗೆ ತೆಗೆದುಕೊಂಡು ಹೊರಗೆ ಬಿಡುವ ನಿಯತ ಪ್ರಕ್ರಿಯೆಯಲ್ಲಿ ಮುಕದ ವಿವಿದ ಅಂಗಗಳು ಮೆದುಳಿನ ನಿರ‍್ದಿಶ್ಟ ಸೂಚನೆಯ ಪ್ರಕಾರ ಕೆಲಸ ಮಾಡಿ ವಿವಿದ ದ್ವನಿಗಳನ್ನು ಉಚ್ಚರಿಸಲು ಕಾರಣವಾಗುತ್ತವೆ. ಹಾಗಾದರೆ ಗಾಳಿಯನ್ನು ಒಳಗೆ ತೆಗೆದುಕೊಳ್ಳುವಾಗ ದ್ವನಿಗಳನ್ನು
ಉಚ್ಚರಿಸಲಾಗುವುದೊ, ಇಲ್ಲ ಗಾಳಿಯನ್ನು ಹೊರಬಿಡುವಾಗಲೊ? ಜಗತ್ತಿನ ಹೆಚ್ಚಿನ ಬಾಶೆಗಳಲ್ಲಿ ಗಾಳಿಯನ್ನು ಹೊರಬಿಡುವಾಗ ಉಚ್ಚರಿಸುವ ದ್ವನಿಗಳೆ ಇವೆ. ಆಪ್ರಿಕಾದ ಕೆಲವು ಬಾಶೆಗಳಲ್ಲಿ ಗಾಳಿಯನ್ನು ಒಳಗೆ ತೆಗೆದುಕೊಳ್ಳುವಾಗ ಉಚ್ಚರಿಸುವ ದ್ವನಿಗಳು ಇವೆ. ಕನ್ನಡದ ಯಾರಾದರೂ ಆಸಕ್ತರು ಒಂದೊಂದು ದ್ವನಿಯನ್ನು ಉಚ್ಚರಿಸಿ ಬಾಯಿಗೆ ಹತ್ತಿರದಲ್ಲಿ ಒಂದು ತೆಳುಹಾಳೆಯನ್ನು ಇರಿಸಿದರೆ ದ್ವನಿಯನ್ನು ಉಚ್ಚರಿಸುವಾಗ ಹೊರಬರುವ ಗಾಳಿಗೆ ಆ ಹಾಳೆ ಅಲುಗುವುದನ್ನು ಅವಲೋಕಿಸಬಹುದು. ಅಂದರೆ ಗಾಳಿಯ ಹೊರಬಿಡುವಿಕೆ ಜೊತೆಗೆ ದ್ವನಿಯ ಉಚ್ಚರಣೆಯೂ ಆಗುತ್ತದೆ.
ಹೀಗೆ ಗಾಳಿಯನ್ನು ಹೊರಗೆ ಬಿಟ್ಟು ದ್ವನಿಗಳನ್ನು ಉಚ್ಚರಿಸುವಾಗ ವಿವಿದ ಅಂಗಗಳು ಆ ಗಾಳಿಗೆ ಅಡೆತಡೆಯನ್ನುಂಟು ಮಾಡುತ್ತವೆ, ಇಲ್ಲವೆ ಅದರ ಹರಿವಿಗೆ ಬಿನ್ನ ರೀತಿಯ ದಾರಿಗಳನ್ನು ಮಾಡಿಕೊಡುತ್ತವೆ. ಹೀಗೆ ಹೊರಹೋಗುವ ಗಾಳಿಗೆ ಅಡೆತಡೆ ಉಂಟು ಮಾಡಿ ದ್ವನಿಗಳನ್ನು ಉಚ್ಚರಿಸಿದರೆ ಅವು ವ್ಯಂಜನ ದ್ವನಿಗಳು. ಅಂದರೆ ಗಾಳಿಯನ್ನು ಒಂದು ಕ್ಶಣಹೊತ್ತು ತಡೆದು ಬಿಡುವುದು ಇಲ್ಲವೆ ಗಾಳಿಯ ಸಹಜ ಹರಿವಿಕೆಗೆ ಬಿನ್ನ ರೀತಿಯ ತಡೆಯನ್ನು ಉಂಟುಮಾಡುವುದು. ಹೀಗೆ ಉಚ್ಚರಿಸಿದ ದ್ವನಿ ವ್ಯಂಜನ ದ್ವನಿಯಾಗಿರುತ್ತದೆ. ಯಾವುದೆ ಅಡೆತಡೆ ಇಲ್ಲದೆ ಸಹಜವಾಗಿ
ಗಾಳಿ ಹರಿದುಹೋಗುವುದಕ್ಕೆ ಬಿಟ್ಟರೆ ಅವು ಸ್ವರ ದ್ವನಿಗಳು. ಹೀಗೆ ಗಾಳಿ ಹೊರಹೋಗುವಾಗ ಮುಕದ ವಿವಿದ ಅಂಗಗಳನ್ನು ಬಿನ್ನ ರೀತಿಯಲ್ಲಿ ಹೊಂದಿಸಲಾಗುವುದು. ಹೀಗೆ ಉಚ್ಚರಿಸಿದ ದ್ವನಿಗಳು ಸ್ವರದ್ವನಿಗಳು. ಇದನ್ನು ಒಂದೆರಡು ದ್ವನಿಗಳ ಉದಾಹರಣೆಯನ್ನು ತೆಗೆದುಕೊಂಡು ಚರ‍್ಚಿಸಿದರೆ ಸುಲಬವಾಗಿ ಅರಿತುಕೊಳ್ಳಬಹುದು. ಅಲ್ಲದೆ ಪ್ರತಿಯೊಂದು ದ್ವನಿಯನ್ನು ನಿದಾನವಾಗಿ ಉಚ್ಚರಿಸಿ ಆ ಉಚ್ಚರಣೆಯ ಸಂದರ‍್ಬದಲ್ಲಿ ಮುಕದಲ್ಲಿನ ಯಾವ ಅಂಗ ಹೇಗೆ ಚಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
’ಅ’ ದ್ವನಿಯನ್ನೂ ’ಪ್’ ದ್ವನಿಯನ್ನೂ ಇಲ್ಲಿ ಮಾತಿಗೆ ತೆಗೆದುಕೊಳ್ಳಬಹುದು. ’ಅ’ ದ್ವನಿಯ ಉಚ್ಚರಣೆಯಾಗುವಾಗ ಹೊರಬರುವ ಗಾಳಿಯನ್ನು ಯಾವುದೆ ಅಂಗವೂ ತಡೆಯುತ್ತಿಲ್ಲ. ಹೊರಹೋಗುವ ಗಾಳಿಗೆ ಸುಮ್ಮನೆ ಹರಿದುಹೋಗಲು ಅನುವು ಮಾಡಿಕೊಡಲಾಗುತ್ತಿದೆ. ಇದರೊಂದಿಗೆ ಇತರ ಸ್ವರ ದ್ವನಿಗಳ ಉಚ್ಚರಣೆಯಲ್ಲಿಯೂ ಹೀಗೆಯೆ ಗಾಳಿಯನ್ನು ಹರಿಯಬಿಡಲಾಗುತ್ತದೆ. ಗಾಳಿಯನ್ನು ತಡೆಯದೆ ಉಚ್ಚರಿಸಿದರೆ ಹುಟ್ಟುವ ಸ್ವರ ದ್ವನಿಗಳಲ್ಲಿ ಮತ್ತೆ ಹೇಗೆ ಬಿನ್ನತೆ ಬರಲು ಸಾದ್ಯ, ಇಲ್ಲವೆ ವಿವಿದ ಸ್ವರ ದ್ವನಿಗಳನ್ನು ಉಚ್ಚರಿಸಲು ಹೇಗೆ ಸಾದ್ಯ ಎಂಬ ಪ್ರಶ್ನೆ ಬರುತ್ತದೆ .’ಅ’, ’ಇ’, ’ಉ’, ’ಎ’, ’ಒ’, ದ್ವನಿಗಳನ್ನು ಒಂದರ ನಂತರ ಇನ್ನೊಂದು ನಿದಾನವಾಗಿ ಉಚ್ಚರಿಸಿದಾಗ ನಾಲಿಗೆ ಮೇಲೆ-ಕೆಳಗೆ ಮತ್ತು ಹಿಂದೆ-ಮುಂದೆ ಚಲಿಸುವುದು ಗೊತ್ತಾಗುತ್ತದೆ. ಹಾಗೆಯೆ ತುಟಿಗಳು ತಮ್ಮ ಆಕಾರವನ್ನು ಬದಲಿಸುವುದನ್ನೂ ಗಮನಿಸಬಹುದು. ಅಂದರೆ ಹೊರಹೋಗುವ ಗಾಳಿಗೆ ಅಡೆತಡೆ ಮಾಡದೆ ಹರಿಬಿಡುತ್ತಿದ್ದರೂ ಗಾಳಿಯ ಹರಿವಿನ ಜೊತೆಜೊತೆಗೆ ಈ ಅಂಗಗಳು ಬಿನ್ನವಾಗಿ ನಿಂದು ವಿಬಿನ್ನ ಸ್ವರಗಳು ಹುಟ್ಟಲು ಕಾರಣವಾಗುತ್ತವೆ.
ಇನ್ನು ’ಪ್’ ದ್ವನಿಯ ಉಚ್ಚರಣೆಯನ್ನು ಅವಲೋಕಿಸಬಹುದು. ’ಪ್’ ದ್ವನಿಯ ಉಚ್ಚರಣೆಯ ಸಂದರ‍್ಬದಲ್ಲಿ ಎರಡು ತುಟಿಗಳು ಸಂಪೂರ‍್ಣವಾಗಿ ಮುಚ್ಚಿಕೊಂಡು ಒಂದು ಚೂರು ಕಾಲ ಗಾಳಿಯನ್ನು ಹಿಡಿದು ಆಸ್ಪೋಟದ ರೀತಿಯಲ್ಲಿ ಒಮ್ಮೆಲೆ ಬಿಟ್ಟುಬಿಡುತ್ತವೆ. ’ಪ್’ ’ತ್’ ’ಟ್’ ’ಚ್’ ಮತ್ತು ’ಕ್’ ದ್ವನಿಗಳನ್ನು ನಿದಾನವಾಗಿ ಒಂದರ ನಂತರ ಇನ್ನೊಂದು ಉಚ್ಚರಣೆ ಮಾಡಬೇಕು. ಆಗ, ಹೊರಹೋಗುವ ಗಾಳಿಯನ್ನು ಯಾವ ಯಾವ ಜಾಗದಲ್ಲಿ ಯಾವ ಯಾವ ಅಂಗಗಳು
ತಡೆಯುತ್ತಿವೆ ಎಂಬುದು ಗೊತ್ತಾಗುತ್ತದೆ. ಹೀಗೆ ಬಿನ್ನ ಜಾಗದಲ್ಲಿ ಗಾಳಿಯನ್ನು ತಡೆದಾಗ ವಿಬಿನ್ನ ವ್ಯಂಜನಗಳು ಹುಟ್ಟುತ್ತವೆ. ಅದರಂತೆಯೆ ಇನ್ನು ಕೆಲ ದ್ವನಿಗಳ ಉಚ್ಚರಣೆಯಲ್ಲಿ ಹೊರ ಹೋಗುವ ಗಾಳಿಯನ್ನು ಸಂಪೂರ‍್ಣವಾಗಿ ತಡೆಹಿಡಿಯದೆ ವಿವಿದ ಅಂಗಗಳನ್ನು ಚಲಿಸಿ ಗಾಳಿಗೆ ಅಡೆತಡೆ ಉಂಟು ಮಾಡಿ ಹೊರಬಿಡಲಾಗುತ್ತದೆ. ’ಸ್’ ದ್ವನಿಯ ಉಚ್ಚರಣೆಯನ್ನು ಗಮನಿಸಬಹುದು. ನಾಲಿಗೆಯನ್ನು ವಿವಿದ ನಿರಿಗೆಗಳಲ್ಲಿ ನಿಲಿಸಿ ನಡುವೆ ಎರಡುಮೂರು ತೊರೆಯಂತೆ ನುಸುಳಿ ಗಾಳಿಯು ಹೋಗಲು ಬಿಡಲಾಗುತ್ತದೆ. ಹೀಗೆ ಮನುಶ್ಯ ಬಾಶೆಯಲ್ಲಿ ವಿವಿದ ದ್ವನಿಗಳು ಹುಟ್ಟುತ್ತವೆ.
ಮನುಶ್ಯ ಬಾಶೆಯಲ್ಲಿ, ಅಂದರೆ ಜಗತ್ತಿನ ಎಲ್ಲೆಡೆ ಬಳಕೆಯಲ್ಲಿರುವ ಬಿನ್ನ ಬಾಶೆಗಳಲ್ಲಿ, ಇದೆ ರೀತಿಯಲ್ಲಿ ಮುಕದ ನಿರ‍್ದಿಶ್ಟ ಅಂಗಗಳ ಸಹಾಯದಿಂದ ದ್ವನಿಗಳನ್ನು ಹುಟ್ಟಿಸಲಾಗುತ್ತದೆ. ಹಾಗಾಗಿ ಹೆಚ್ಚಿನ ಬಾಶೆಗಳಲ್ಲಿ ಹಲವು ದ್ವನಿಗಳು ಸಮಾನವಾಗಿರುತ್ತವೆ. ಆದರೆ, ಬಾಶೆ ವಿಚಿತ್ರವಾದ ವಿವಿದತೆಯನ್ನು ಹೊಂದಿರುತ್ತದೆ. ಉಚ್ಚರಣೆಯಲ್ಲಿ ಹಲವು ಅಂಶಗಳು ಅಂದರೆ ಗಾಳಿಯನ್ನು ತಡೆಯುವ ಜಾಗ, ಅಂಗ, ತಡೆಯುವ ರೀತಿ ಮೊದಲಾದ ಹಲವಾರು ಅಂಶಗಳು ಸೇರಿ ಈ ಕೆಲವು ಅಂಗಗಳಿಂದ ಹುಟ್ಟಿದರೂ ಹಲವು ಬಿನ್ನ ದ್ವನಿಗಳಾಗಲು ಸಾದ್ಯವಾಗಿದೆ.ಪ್ರತಿಯೊಂದು ದ್ವನಿ ಹುಟ್ಟುವುದಕ್ಕೆ ನಿರ‍್ದಿಶ್ಟವಾದ ವಲಯವನ್ನು ಹೊಂದಿರುತ್ತವೆ. ಒಂದು ವಲಯವನ್ನು ದಾಟಿ ಇನ್ನೊಂದು ವಲಯಕ್ಕೆ ಬರುತ್ತಿದ್ದಂತೆ ಅದು ಇನ್ನೊಂದು ದ್ವನಿಯಾಗಿಬಿಡುತ್ತದೆ. ಅಂದರೆ ನಾಲಗೆಯನ್ನು ಮೇಲು ಹಲ್ಲಿನ ಹಿಂಬಾಗಕ್ಕೆ ತಾಕಿಸಿ ಉಚ್ಚರಿಸಿದಾಗ ಒಂದು ದ್ವನಿ ಹುಟ್ಟುತ್ತದೆ. ನಾಲಗೆಯನ್ನು ಇನ್ನೂ ತುಸು ಮೇಲಕ್ಕೆ ಅಂಗುಳಿನ ಕಡೆಗೆ
ಚಾಚುತ್ತಿದ್ದಂತೆ ಬೇರೊಂದು ದ್ವನಿ ಹುಟ್ಟುತ್ತದೆ. ಅದೆ ರೀತಿ ನಾಲಗೆಯ ತುದಿಯನ್ನು ಮೇಲು ಹಲ್ಲಿನ ತುಸು ಮೇಲಕ್ಕೆ ತಾಕಿಸಿ ದ್ವನಿ ಹುಟ್ಟಿಸುವ ಪ್ರಯತ್ನ ಮಾಡಿದರೆ ಒಂದು ದ್ವನಿ ಹುಟ್ಟುತ್ತದೆ, ಆದರೆ ನಾಲಗೆಯ ತುದಿಗಿಂತ ತುಸು ಮೇಲಿನ ಬಾಗವನ್ನು ಅಂಗುಳಿನ ಅದೆ ಜಾಗಕ್ಕೆ ತಾಕಿಸಿ ದ್ವನಿಯನ್ನು ಹುಟ್ಟಿಸಿದರೆ ಆ ದ್ವನಿ ಬಿನ್ನವಾಗುತ್ತದೆ. ಹೀಗೆ ಪ್ರತಿಯೊಂದು ದ್ವನಿಗೆ ಅದರದೆ ಆದ ಒಂದು ಪರಿಸರ ಇರುತ್ತದೆ ಎಂದು ಹೇಳಬಹುದು. ಇವೆಲ್ಲವನ್ನು ಗಮನಿಸಿದಾಗ ಮನುಶ್ಯ ಉಚ್ಚರಿಸುವ ದ್ವನಿಯು ಒಂದು ಸಾತತ್ಯವಾಗಿದೆ ಎಂಬುದು ಗೊತ್ತಾಗುತ್ತದೆ. ಅಂದರೆ, ಮುಕದಲ್ಲಿ ಹುಟ್ಟುವ ದ್ವನಿಗಳು
ತಮ್ಮ ಜಾಗವನ್ನು, ಕ್ರಮವನ್ನು ತುಸು ಬದಲಿಸಿದರೆ ಅದು ಇನ್ನೊಂದು ದ್ವನಿಯಾಗಿಬಿಡುತ್ತದೆ. ಮನುಶ್ಯ ಉರಚ್ಚರಣೆಯ ಎಲ್ಲ ದ್ವನಿಗಳೂ ಒಂದು ಸೂತ್ರದಂತೆ ಈ ಅಂಗಗಳ ನಡುವೆ ಪೋಣಿಸಿಕೊಂಡಿರುತ್ತವೆ. ನಡುವಿನ ಬಿಂದುಗಳಂತೆ ಅವುಗಳನ್ನು ಬಿಡಿಯಾಗಿ ನೋಡಲನುವಾಗುತ್ತದೆ. ಹೀಗೆ ಮನುಶ್ಯ ದ್ವನಿಯು ಒಂದು ಸಾತತ್ಯ, ಅದರ ಉಚ್ಚರಣೆಯ ನಿಲುಗಡೆ ಒಂದು ಸ್ವತಂತ್ರ ದ್ವನಿಯಂತೆ ನಾವು ಪರಿಗಣಿಸುತ್ತೇವೆ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.