ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ

Date: 09-01-2023

Location: ಬೆಂಗಳೂರು


“ಉಡಿ ಎಂಬುದು ಸದ್ಯ ನಮಗೆ ತಿಳಿದಂತೆ ಹಳೆಯ ರೂಪ. ಇದಕ್ಕೆ ಅಲ್ ಎಂಬ ಪ್ರತ್ಯಯ ಸೇರಿ ಉಡಲ್ ಎಂದಾಗಿರಬಹುದು. ಆನಂತರ ಉ>ಒ ಬದಲಾವಣೆಯಲ್ಲಿ ಒಡಲ್ ಎಂದು ಬೆಳೆದಿದೆ. ಮುಂದೆ ಸ್ವರಕೊನೆ ಪದಗಳು ವ್ಯಂಜನಕೊನೆ ಪದಗಳಾಗಿ ಬೆಳೆಯುವಾಗ ಒಡಲು ಎಂದು ಬದಲಾಗಿದೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ದ್ವನಿಬದಲಾವಣೆ ಮತ್ತು ಪದಕೋಶದ ಬೆಳವಣಿಗೆ’ ವಿಚಾರದ ಕುರಿತು ಬರೆದಿದ್ದಾರೆ.

ದ್ವನಿ ಬದಲಾವಣೆ ಬಾಶೆಯ ಬದಲಾವಣೆಯ ಪ್ರಮುಕ ಬಾಗ. ಜಗತ್ತಿನ ಯಾವುದೆ ಬಾಶೆಗಳಲ್ಲಿ ಕಾಲಾಂತರದಲ್ಲಿ ದ್ವನಿಗಳು ಬದಲಾಗುತ್ತಲೆ ಇರುತ್ತವೆ. ಸಾಮಾನ್ಯವಾಗಿ ಈ ದ್ವನಿ ಬದಲಾವಣೆ ಬಾಶೆಯಲ್ಲಿ ಎಲ್ಲೊ ಒಂದು ಕಡೆ ಶುರುವಾಗಿರುತ್ತದೆ. ಆನಂತರ ಅದು ಕ್ರಮೇಣ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತದೆ. ಕೆಲವೊಮ್ಮೆ ಎಲ್ಲೆಡೆ ಒಟ್ಟೊಟ್ಟಿಗೆ ಈ ಬದಲಾವಣೆ ಕಾಣಬರಬಹುದು. ಈ ದ್ವನಿ ಬದಲಾವಣೆ ಬಾಶೆಯಲ್ಲಿ ಇನ್ನಿತರ ಹಂತಗಳಲ್ಲಿ ಸಾಕಶ್ಟು ಬದಲಾವಣೆಗಳಿಗೆ ಕಾರಣವಾಗುತ್ತದೆ. ಹೊಸ ಪದಗಳನ್ನು ಹುಟ್ಟಿಸುವಲ್ಲಿ ಈ ದ್ವನಿ ಬದಲಾವಣೆ ನೇರವಾಗಿ ಕಾರಣವಾಗುವುದಿಲ್ಲ ಎನಿಸಿದರೂ ದ್ವನಿ ಬದಲಾವಣೆಯಿಂದಾಗಿ ಪದಗಳಲ್ಲಿ ಸಾಕಶ್ಟು ಬದಲಾವಣೆ ಆಗುತ್ತದೆ. ಕೆಲವೊಮ್ಮೆ ಇದು ಪದಕೋಶದ ಬೆಳವಣಿಗೆಗೆ ಕಾರಣವಾಗುತ್ತದೆ. ಇದನ್ನು ತುಸು ವಿವರವಾಗಿ ನೋಡೋಣ. ಒಂದು ದ್ವನಿ ಬದಲಾವಣೆ ಆಗಿರುವ ಉದಾಹರಣೆ ತೆಗೆದುಕೊಳ್ಳೋಣ. ಆ ದ್ವನಿ ಬದಲಾವಣೆ ಕಾರಣವಾಗಿ ಒಂದಿದ್ದ ಪದ ಎರಡಾಗಿ ಬೇರೆಯಾಗಿರುವುದನ್ನು ಇದರಲ್ಲಿ ಗಮನಿಸಬಹುದು.

ಕನ್ನಡದಾಗ ಉ>ಒ ಇದು ಹಿಂದೆ ನಡೆದ ಒಂದು ಸಾಮಾನ್ಯ ಬೆಳವಣಿಗೆ. ಇದು ಹಳಗನ್ನಡ ಕಾಲದಲ್ಲಿ ವ್ಯಾಪಕವಾಗಿ ನಡೆದು, ಹಲವು ಪದಗಳ ರೂಪವು ಬದಲಾಗಿವೆ. ಈ ಉದಾಹರಣೆಯನ್ನು ಗಮನಿಸಿ, ಕುಡು>ಕೊಡು. ಕನ್ನಡದಲ್ಲಿ ಉ ದ್ವನಿಯು ನಿರ‍್ದಿಶ್ಟ ಪರಿಸರದಲ್ಲಿ ಒ ಆಗಿ ಬೆಳೆದಿರುವುದರಿಂದ ಕುಡು ಇದರಲ್ಲಿ ಮೂಲದಲ್ಲಿ ಪದದ ಮೊದಲ ಅಕ್ಶರದಲ್ಲಿ ಇದ್ದ ಸ್ವರವು ಬದಲಾಗಿ ಕೊಡು ಎಂದು ಬೆಳೆದಿದೆ. ಆನಂತರ, ಕುಡು ಎಂಬ ಪದ ಸಾಮಾನ್ಯವಾಗಿ ಬಿದ್ದುಹೋಗಿದೆ. ಆದರೆ, ಈ ಪದ ಕಲಬುರಗಿ ಕನ್ನಡದಲ್ಲಿ ಇಂದಿಗೂ ಬಳಕೆಯಲ್ಲಿ ಉಳಿದುಕೊಂಡು ಬಂದಿದೆ. ಹೀಗೆ ಕೆಲವೆಡೆ ಅಪವಾದದಂತೆ ಉಳಿಯುವುದು ಸಾದ್ಯ. ಇಲ್ಲಿ ಮೂಲದ ಪದರೂಪ ಬಳಕೆಯಿಂದ ಬಿದ್ದುಹೋಗಿರುವುದರಿಂದ ಇದು ಪದಕೋಶಕ್ಕೆ ಯಾವುದೆ ರೀತಿಯಲ್ಲಿ ಪರಿಣಾಮವನ್ನು ಬೀರುವುದಿಲ್ಲ.

ಒಂದು ಗಮನ ಸೆಳೆಯುವ ಉದಾಹರಣೆಯನ್ನು ಮಾತಾಡೋಣ. ಕನ್ನಡದಲ್ಲಿ ಪ ದ್ವನಿಯು ಹ್ ದ್ವನಿಯಾಗಿ ಬೆಳೆದಾಗ ಹಂಪೆಯ ಪಂಪಾ ಹೆಸರು ಪ ದ್ವನಿಯೊಂದಿಗೆ ಹಾಗೆ ಉಳಿದುಕೊಂಡಿದೆ. ಹಾಗಾಗಿ, ಪಂಪಮ್ಮ ನಮ್ಮೊಂದಿಗೆ ಇದ್ದಾರೆ. ಪ್>ಹ್ ದ್ವನಿಬದಲಾವಣೆಯ ವ್ಯಾಪಕತೆ ಕಾರಣವಾಗಿ ಇಂದು ನಮ್ಮೊಂದಿಗೆ ಹಂಪಮ್ಮ ಕೂಡ ಇದ್ದಾರೆ. ಮುಂದುವರೆದು ಕರ‍್ನಾಟಕದ ಹಲವು ಒಳನುಡಿಗಳಲ್ಲಿ ಹ್ ದ್ವನಿಯು ಬಿದ್ದುಹೋಗಿರುವುದರಿಂದ ಈಗ ನಮ್ಮೊಂದಿಗೆ ಅಂಪಮ್ಮ ಕೂಡ ಇದ್ದಾರೆ. ಇಲ್ಲಿ ದ್ವನಿಬದಲಾವಣೆ ಬಿನ್ನ ಪದಗಳು ಹುಟ್ಟುವುದಕ್ಕೆ ಕಾರಣವಾಗಿವೆ.

ಮುಂದಿನ ಎತ್ತುಗೆಯನ್ನು ಮಾತಿಗೆ ತೆಗೆದುಕೊಳ್ಳುವುದಕ್ಕಿಂತ ಮೊದಲು ದ್ವನಿ ಬದಲಾವಣೆಯ ಒಂದು ವಿಶಿಶ್ಟ ಗುಣವನ್ನು ಗಮನಿಸಬಹುದು. ಇದು ದ್ವನಿ ಬದಲಾವಣೆಗೆ ಸಂಬಂದಿಸಿದ ಬಾಶೆಯ ವಿಶಿಶ್ಟ ಗುಣ ಆಗಿದ್ದಿರಬಹುದು. ಒಂದು ಪದವು ವ್ಯಕ್ತಿ ಮೊದಲಾದವುಗಳಿಗೆ ಇಟ್ಟ ಹೆಸರಾಗಿದ್ದರೆ, ಸಮಾಸಪದದಲ್ಲಿ ಸೇರಿದ್ದರೆ, ಸಾಂಸ್ಕ್ರುತಿಕ ಪದವಾಗಿದ್ದರೆ ಅದು ದ್ವನಿ ಬದಲಾವಣೆ ಜೊತೆಗೆ ಸಹಜವಾಗಿ ಬದಲಾಗದೆ ಉಳಿಯುವ ಸಾದ್ಯತೆ ಇದೆ. ಈ ವಿಚಾರವನ್ನು ಇಟ್ಟುಕೊಂಡು ಒಂದು ಉದಾಹರಣೆಯನ್ನು ತೆಗೆದುಕೊಂಡು ಮಾತುಕತೆ ಮುಂದುವರೆಸೋಣ. ಇದು ಕನ್ನಡ ಪದಕೋಶದ ಬೆಳವಣಿಗೆಗೆ ಹೇಗೆ ದ್ವನಿ ಬದಲಾವಣೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.

ಒಡಲು ಎಂಬ ಪದ ಇಂದು ಬಳಕೆಯಲ್ಲಿದೆ. ದೇಹ, ಹೊಟ್ಟೆ, ಬಸಿರು ಮೊದಲಾದ ಅರ‍್ತಗಳು ಇದಕ್ಕೆ ಇವೆ. ಈ ಪದದ ಹಿಂದಿನ ರೂಪವನ್ನು ಗಮನಿಸಿದಾಗ ಅದರ ಚರಿತ್ರೆ ಹೀಗೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಕೆಳಗೆ ಈ ಪದದ ಬೆಳವಣಿಗೆಯ ಚರಿತ್ರೆಯನ್ನು ತೋರಿಸಿದೆ, ಗಮನಿಸಿ

ಉಡಿ>ಉಡಲ್>ಒಡಲ್<ಒಡಲು

ಉಡಿ ಎಂಬುದು ಸದ್ಯ ನಮಗೆ ತಿಳಿದಂತೆ ಹಳೆಯ ರೂಪ. ಇದಕ್ಕೆ ಅಲ್ ಎಂಬ ಪ್ರತ್ಯಯ ಸೇರಿ ಉಡಲ್ ಎಂದಾಗಿರಬಹುದು. ಆನಂತರ ಉ>ಒ ಬದಲಾವಣೆಯಲ್ಲಿ ಒಡಲ್ ಎಂದು ಬೆಳೆದಿದೆ. ಮುಂದೆ ಸ್ವರಕೊನೆ ಪದಗಳು ವ್ಯಂಜನಕೊನೆ ಪದಗಳಾಗಿ ಬೆಳೆಯುವಾಗ ಒಡಲು ಎಂದು ಬದಲಾಗಿದೆ. ಈ ಪದದ ಮೂಲರೂಪವಾದ ಉಡಿ ಉ>ಒ ದ್ವನಿ ಬದಲಾವಣೆ ನಡೆಯುವುದಕ್ಕಿಂತ ಮೊದಲು ಸಾಂಸ್ಕ್ರುತಿಕ ಪದವಾಗಿ ಬಳಕೆಯಲ್ಲಿದ್ದಿತು ಮತ್ತು ವಿವಿದ ಸಮಾಸ ಪದಗಳಲ್ಲಿ ಬಳಕೆಯಲ್ಲಿ ಇದ್ದಿತು. ಇದರಿಂದಾಗಿ ಹಳೆಯ ರೂಪ ಕೆಲವು ಕಡೆ ಹಾಗೆಯೆ ಉಳಿದುಕೊಂಡು ಬಂದಿದೆ. ಉಡಿ ತುಂಬುವುದು ಇದು ಒಂದು ಸಾಂಪ್ರದಾಯಿಕ ಆಚರಣೆ. ಇಂದಿಗೂ ಈ ಆಚರಣೆ ಅತ್ಯಂತ ಮಹತ್ವದೊಂದಿಗೆ ಸಮಾಜದಲ್ಲಿ ಬಳಕೆಯಲ್ಲಿದೆ. ಈ ಉಡಿ ತುಂಬುವ ಆಚರಣೆ ಕನಿಶ್ಟ ಒಂದೂವರೆ ಸಾವಿರ ವರುಶಗಳ ಹಿಂದೆಯೆ ಪ್ರಚಲಿತದಲ್ಲಿ ಇದ್ದಿತು ಎಂದೆನಿಸುತ್ತದೆ. ಹೇಗೆಂದರೆ, ಉಡಿ ಎಂಬ ರೂಪ ಸಾಂಸ್ಕ್ರುತಿಕ ಆಚರಣೆಯ ಸಂದರ‍್ಬದಲ್ಲಿ ಮಾತ್ರ ಉಳಿದುಕೊಂಡು ಬಂದಿದೆ. ಇನ್ನುಳಿದಂತೆ ಎಲ್ಲ ಕಡೆ ಒ ದ್ವನಿ ಇರುವ ರೂಪವಾಗಿ ಬೆಳೆದಿದೆ. ಉ>ಒ ಬದಲಾವಣೆ ಸಾವಿರ ಅಯ್ದುನೂರು ವರುಶಗಳ ಹಿಂದೆಯೆ ನಡೆದಿದೆ. ಇಲ್ಲಿ ಉಡಿ ಎಂಬ ರೂಪ ಹಾಗೆ ಉಳಿದುಕೊಂಡಿರುವುದರಿಂದ ಅದು ಕನ್ನಡ ಪದಕೋಶದಲ್ಲಿ ಒಂದು ಪದವಾಗಿ ಇಂದಿಗೂ ಉಳಿದಿದೆ. ಇನ್ನು ಸಮಾಸಗಳಲ್ಲಿ ಉಳಿದುಕೊಂಡಿರುವ ಪದರೂಪವನ್ನು ಗಮನಿಸಬಹುದು. ಉಡಿ ತುಂಬುವುದು ಎಂಬ ಬಳಕೆಯಲ್ಲಿ ಉಡಿ ಇದು ‘ಹೊಟ್ಟೆ’ ಎಂಬರ‍್ತದಲ್ಲಿ ಬಳಕೆಯಲ್ಲಿದೆ. ಇದರೊಟ್ಟಿಗೆ ಒಡಲು ಎಂಬುದೂ ‘ಹೊಟ್ಟೆ’ ಮತ್ತು ‘ದೇಹ’ ಎಂಬ ಅರ‍್ತದಲ್ಲಿ ಬಳಕೆಯಲ್ಲಿದೆ. ಉಡಿ ಎಂಬ ರೂಪವು ಬಳಕೆಯಲ್ಲಿದ್ದಾಗ ಉಡು ಎಂಬ ಕ್ರಿಯಾಪದ ಒಡಲಿಗೆ ಸುತ್ತಿಕೊಳ್ಳುವುದು ಎಂಬರ್ತದಲ್ಲಿ ಬೆಳೆದಿದ್ದಿತು. ಅದು ಈಗಲೂ ಹಾಗೆಯೆ ಉಳಿದಿದೆ. ಈ ಪದದಿಂದ ‘ಉಟ್ಟುಕೊಳ್ಳುವ ಕೊರೆ ‘ಬಟ್ಟೆ’’ ಅರ‍್ತದ ಉಡುಗೊರೆ, ಒಡಲಿಗೆ ಸುತ್ತಿಕೊಳ್ಳುವ ದಾರ ಎಂಬರ‍್ತದಲ್ಲಿ ಉಡುದಾರ ಮೊದಲಾದ ಪದಗಳು ಬೆಳೆದಿವೆ. ಆನಂತರ ಇವು ಒ ಮೊದಲ ಪದಗಳಾಗಿ ಬೆಳೆದಿಲ್ಲ. ಒಡಲು ರೂಪ ಬೆಳೆಯುವುದಕ್ಕಿಂತ ಮೊದಲು ಇದ್ದ ಸಾಮಾಜಿಕ ಸನ್ನಿವೇಶಕ್ಕೆ ತಕ್ಕಂತೆ ಈ ಪದಗಳು ಬೆಳೆದಿದ್ದವು ಎಂದು ಹೇಳಬಹುದು.

ಇದರಂತೆ ಇನ್ನೊಂದು ಉದಾಹರಣೆಯನ್ನು ನೋಡುವುದಾದರೆ, ಕನ್ನಡದಲ್ಲಿ ಮೂಲದಲ್ಲಿ ಟ್ ದ್ವನಿ ಇದ್ದು ಆನಂತರ ಇದು ಡ್ ಆಗಿ ಬೆಳೆದಿದೆ. ಇದರಿಂದ ಟ್ ದ್ವನಿ ಇರುವ ಹಲವು ಪದಗಳು ಆನಂತರ ಡ್ ದ್ವನಿಯೊಂದಿಗೆ ಬೆಳೆದಿವೆ. ಕಾಟು ಎಂಬುದು ಕನ್ನಡದ ಹಳೆಯ ಪದರೂಪ. ಟ್>ಡ್ ಬೆಳವಣಿಗೆಯಲ್ಲಿ ಇದು ಕಾಡು ಎಂದು ಬೆಳೆದಿದೆ. ಮೂಲದಲ್ಲಿ ಇದ್ದ ಕಾಟು ಪದವು ಕಾಳ್ಗಿಚ್ಚು, ಕಾಟಗಲ್ಲು, ಕಾಟಯ್ಯ, ಕಾಟ ಮೊದಲಾದ ಪದಗಳಲ್ಲಿ ಉಳಿದುಕೊಂಡಿದೆ. ಆದರೆ, ಆನಂತರ ಕಾಡು ‘ಅಡವಿ’, ಕಾಡು ‘ಪೀಡಿಸು’, ಕಾಡಯ್ಯ, ಕಾಡಾಟ ಮೊದಲಾದ ಪದಗಳು ಬೆಳೆದಿದೆ.

ಹೀಗೆ ದ್ವನಿಯೊಂದರ ಬದಲಾವಣೆ ಪದಕೋಶದ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹೊಸಪದಗಳನ್ನು ಹುಟ್ಟಿಸುವಾಗ ಸಾಮಾನ್ಯವಾಗಿ ಇಂದಿನ ರೂಪಗಳನ್ನು ಬಳಸಿಕೊಂಡು ಹೊಸ ಪದಗಳನ್ನು ಬೆಳೆಸಲಾಗುವುದು. ಆದರೆ, ಹಳೆಯ ರೂಪಗಳನ್ನು ಬಳಸಿಕೊಂಡು ಕೂಡ ಹೊಸಪದಗಳನ್ನು ಹುಟ್ಟಿಸಲು ಯಾವಾಗಲೂ ಸಾದ್ಯವಿರುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...