ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’

Date: 19-07-2021

Location: ಬೆಂಗಳೂರು


‘ನಾವು ಪ್ರಜಾಪ್ರಭುತ್ವ ಎಂದು ಯಾವುದನ್ನು ಕರೆದುಕೊಂಡೆವೋ ಅದನ್ನೇ ಗಾಂಧಿಯವರು ‘ಸ್ವ-ರಾಜ್ಯ’ ಎಂದು ಕರೆದಿದ್ದಾರೆ’ ಎನ್ನುತ್ತಾರೆ ಲೇಖಕ, ವಿಮರ್ಶಕ ಡಾ. ರಾಮಲಿಂಗಪ್ಪ ಟಿ.ಬೇಗೂರು. ತಮ್ಮ 'ನೀರು ನೆರಳು' ಅಂಕಣದಲ್ಲಿ ಗಾಂಧೀಜಿ ಮತ್ತು ಅವರ ಹಿಂದ್ ಸ್ವರಾಜ್ ಪರಿಕಲ್ಪನೆಯ ಬಗ್ಗೆ ವಿಶ್ಲೇಷಿಸಿದ್ದಾರೆ.

ಸಾವಿರಾರು ವರ್ಶಗಳಿಂದ ಹಲವಾರು ಪಠ್ಯಗಳು ಭಾರತದ ಬುದ್ಧಿ ಮತ್ತು ಮನಸ್ಸುಗಳನ್ನು ಆಳುತ್ತ ಬಂದಿವೆ. ನಂಬಿಕೆ, ಬಾಳ್ವೆಗಳನ್ನು ರೂಪಿಸುತ್ತ ಬಂದಿವೆ. ಅವು ಭಾರತದಲ್ಲಿ ಬದಲಾವಣೆಗೆ ಕಾರಣ ಆಗುವ ಬದಲು ಯಥಾಸ್ಥಿತಿಗೆ ಹೆಚ್ಚು ದುಡಿದಿವೆ. ನೇರವಾಗಿ ಮತ್ತು ಪರೋಕ್ಶವಾಗಿ ಅಸಮಾನತೆ, ಜಾತಿಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ಪೋಷಿಸಿದ ಅಂಥ ಪಠ್ಯಗಳು ಸಮಾಜಕ್ಕೆ ಇಲ್ಲಿ ಹಾನಿ ಮಾಡಿರುವುದೇ ಹೆಚ್ಚು. ಅಕ್ಷರವನ್ನು ಗಾಂಧಿ ಆಯುಧ ಎನ್ನುತ್ತಾರೆ. ಈ ಅಕ್ಷರವೆಂಬ ಆಯುಧವನ್ನು ನಮ್ಮಲ್ಲಿ ದುರುಪಯೋಗ ಮಾಡಿರುವುದೇ ಹೆಚ್ಚು. ಹಾಗೆ ನೋಡಿದರೆ, 1909ರ ನಂತರದಲ್ಲಿ ಭಾರತದ ಬುದ್ಧಿ ಮತ್ತು ಮನಸ್ಸುಗಳನ್ನು ಸರಿದಾರಿಗೆ ತರುವಲ್ಲಿ ದುಡಿದ ಕೆಲವೇ ಪಠ್ಯಗಳಲ್ಲಿ ‘ಹಿಂದ್ ಸ್ವರಾಜ್’ ಪ್ರಮುಖವಾದುದು. ತಮ್ಮ ಕಾಲದ ಆಧುನಿಕ ನಾಗರಿಕತೆಯ ಕೇಡುಗಳನ್ನು ಕಾಣಲಾಗದೆ ಜನತೆಯು 19-20ನೇ ಶತಮಾನಗಳ ಯುಗವನ್ನು ಜ್ಞಾನೋದಯದ ಯುಗವೆಂದು ಕರೆಯುತ್ತಿದ್ದ ಕಾಲದಲ್ಲಿ ಗಾಂಧಿ ಅದರ ಕರಾಳ ಮುಖವನ್ನು ಚೆನ್ನಾಗಿ ಇಲ್ಲಿ ವಿಮರ್ಶಿಸಿ ತೋರಿದ್ದಾರೆ. ಆಧುನಿಕ ಮತ್ತು ಪ್ರಾಚೀನ ಎಂಬ ಹಾಗೂ ಪೂರ್ವ ಮತ್ತು ಪಶ್ಚಿಮ ಎಂಬ ಬೈನರಿ ನೆಲೆಯಲ್ಲಿ ನಾಗರಿಕತೆಗಳನ್ನು ಗಾಂಧಿ ಇಲ್ಲಿ ನೋಡುತ್ತಾರಾದರೂ ಅಂತಿಮವಾಗಿ ಗಾಂಧಿ ಸಭ್ಯತೆಯನ್ನೇ ‘ನಿಜನಾಗರಿಕತೆ’ ಎನ್ನುವುದು ಎಂದಿಗೂ ಸ್ವೀಕಾರಾರ್ಹ ಸಂಗತಿಯೇ ಸರಿ.

ನಾವು ಪ್ರಜಾಪ್ರಭುತ್ವ ಎಂದು ಯಾವುದನ್ನು ಕರೆದುಕೊಂಡೆವೋ ಅದನ್ನೆ ಗಾಂಧಿಯವರು ‘ಸ್ವ-ರಾಜ್ಯ’ ಎಂದು ಕರೆದಿದ್ದಾರೆ. ನಮ್ಮನ್ನು ನಾವು ಹೇಗೆ ಆಳಿಕೊಳ್ಳಬೇಕು ಎಂಬುದರ ಜೊತೆಗೆ ನಮ್ಮ ದೇಶ ಮತ್ತು ನಡೆಯನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬ ನೀತಿ ಸಂಹಿತೆಯನ್ನೆ ಗಾಂಧಿ ಹಿಂದ್ ಸ್ವರಾಜ್‍ನಲ್ಲಿ ಮಂಡಿಸಿದ್ದಾರೆ. ಹಾಗೆ ನೋಡಿದರೆ, ಹಿಂದ್ ಸ್ವರಾಜ್ ಪುಸ್ತಕ ಸ್ವಯಂ ಆಡಳಿತದ ಸಾಧ್ಯತೆಗಳನ್ನು ಶೋಧಿಸುವ ಕೃತಿ ಮಾತ್ರ ಅಲ್ಲ. ದೇಶ ಕಟ್ಟುವ ನೀಲನಕ್ಷೆ. ಅದು ಭಾರತ ರಾಶ್ಟ್ರದ ಸ್ವಾತಂತ್ರ್ಯದ ಕಲ್ಪನೆ, ಸ್ವಾತಂತ್ರ್ಯ ಹೋರಾಟ, ಸತ್ಯಾಗ್ರಹ, ನಡತೆ-ನಾಗರಿಕತೆಗಳ ಕಲ್ಪನೆ, ಸಹಬಾಳ್ವೆ, ಅಹಿಂಸೆ, ರಾಷ್ಟ್ರೀಯತೆಗಳ ಕಲ್ಪನೆ, ಬಡತನ ವ್ರತದ ಕಲ್ಪನೆ, ಆತ್ಮಬಲ ಪ್ರೇಮಬಲಗಳ ಕಲ್ಪನೆ, ಶಿಕ್ಷಣದ ಕಲ್ಪನೆ, ಕಾಮ-ಹಣಗಳ ನಿರಾಕರಣೆಯ ಮೂಲಕ ಅಪರಿಗ್ರಹದ ಕಲ್ಪನೆ ಹೀಗೆ ಗಾಂಧಿಯವರ ಆಚಾರ ವಿಚಾರಗಳು ಬೆಸೆದ ಹತ್ತಾರು ಜಾರಿಸಾಧ್ಯ ಕಲ್ಪನೆಗಳ ಮಂಡನೆ ಇರುವ ಕೃತಿ. ಭಾರತ, ಭಾರತೀಯರು ಮಾತ್ರವಲ್ಲ ಜಗತ್ತಿನ ಎಲ್ಲರ ವ್ಯಕ್ತಿತ್ವ ಮತ್ತು ಸ್ವಾತಂತ್ರ್ಯ ಹೋರಾಟಗಳನ್ನು ರೂಪಿಸಿಕೊಳ್ಳಬಹುದಾದ ನೀಲನಕ್ಷೆ. ಹಾಗಾಗಿ ಇದೊಂದು ಮಾನವೀಯ ಆಚಾರ ಸಂಹಿತೆಯ ಪುಸ್ತಕ. ಇದೊಂದು ಮುಂಗಾಣ್ಕೆ ಇದ್ದ ಸ್ವಾತಂತ್ರ್ಯಪೂರ್ವ ಭಾರತದ ಸಂವಿಧಾನ. ಇದರ ಎಶ್ಟೋ ವಿಚಾರಗಳು ನಮ್ಮ ಸಂವಿಧಾನದಲ್ಲಿ ಅಳವಟ್ಟಿವೆ. ಆದರೆ ಇದರ ಆಂತರ್ಯವನ್ನು ನಾವು ತಿರಸ್ಕರಿಸಿ ಬಹಳ ದೂರ ಬಂದಿದ್ದೇವೆ. ಗಾಂಧಿ ಅಂದು ಏನೇನು ನಮಗೆ ಬೇಡ ಎಂದರೋ ಅವೆಲ್ಲವನ್ನೂ ನಾವಿಂದು ಬಲವಾಗಿ ತಬ್ಬಿಕೊಂಡಿದ್ದೇವೆ.

ಗಾಂಧಿಯ ಸಮಕಾಲೀನರಾದ ರಶ್ಯಾದ ಟಾಲ್‍ಸ್ಟಾಯ್ ಮತ್ತು ಅಮೆರಿಕದ ಥೋರೋ ಇಬ್ಬರೂ ನಾಗರಿಕ ಅವಿಧೇಯತೆ, ಕಾನೂನು ಭಂಗ ಮಾರ್ಗವನ್ನು ಅದಾಗಲೆ ಪ್ರಯೋಗ ಮಾಡಿದ್ದವರು. ದಕ್ಶಿಣ ಆಫ್ರಿಕಾದ ಟ್ರಾನ್ಸ್ ವಾಲ್ ಪ್ರಾಂತ್ಯದಲ್ಲಿ ವಲಸೆ ಬಂದವರಿಗೆ ಪೌರತ್ವ ನಿರಾಕರಿಸುವ ಕಾನೂನಿನ ವಿರುದ್ಧ ಮತ್ತು ಜನಾಂಗೀಯ ಬೇಧ ನೀತಿಯ ವಿರುದ್ಧ ಗಾಂಧಿ ಸ್ಥಳೀಯವಾಗಿ ಹೋರಾಟ ಕಟ್ಟುವಾಗ ಇದೆ ಮಾರ್ಗವನ್ನು ಶೋಧಿಸಿಕೊಂಡರು. ಇವರ ಸತ್ಯಾಗ್ರಹದ ಕಲ್ಪನೆ ಸತ್-ಅಹಿಂಸಾ-ತಪಸ್ ಈ ಮೂರನ್ನೂ ಮುಪ್ಪುರಿಗೊಳಿಸಿದ ಕಲ್ಪನೆ.

ಟ್ರಾನ್ಸ್‍ವಾಲ್ ಪ್ರಾಂತದಲ್ಲಿ ಫೀನಿಕ್ಸ್ ಎಂಬ ಆಶ್ರಮವನ್ನು ಕಟ್ಟಿಕೊಂಡ ಗಾಂಧಿ ಅಲ್ಲಿ ಸಿಖ್, ಇಸಾಯಿ, ಮುಸ್ಲಿಮ್, ಹಿಂದು, ಪಾರಸಿ ಹೀಗೆ ಹಲವು ಧರ್ಮ, ಜಾತಿ, ಭಾಶೆಗಳಿಗೆ ಸೇರಿದ ಭಾರತೀಯರನ್ನು ಒಳಗೊಂಡ ಸಮುದಾಯ ಸಹಬಾಳ್ವೆಯ ಬದುಕನ್ನು ಪ್ರಯೋಗ ಮಾಡುತ್ತಿದ್ದರು. ಹಾಗೇ ಜನರೊಂದಿಗೆ ಸಂಹವನ ನಡೆಸಲು ಇಂಡಿಯನ್ ಒಪೀನಿಯನ್ ಎಂಬ ಪತ್ರಿಕೆಯನ್ನು ನಡೆಸುತ್ತ ಅವರ ಹಕ್ಕುಗಳಿಗಾಗಿ ಹೋರಾಟವನ್ನೂ ರೂಪಿಸುತ್ತಿದ್ದರು. ವಲಸೆ ಬಂದ ಜನರಿಗೆ ನಾಗರೀಕ ಪೌರತ್ವ ಮತ್ತು ಹಕ್ಕುಗಳನ್ನು ನಿರಾಕರಿಸುವ ಕಾನೂನು ಟ್ರಾನ್ಸ್‍ವಾಲ್ ಪ್ರಾಂತದಲ್ಲಿ ಜಾರಿಯಾದ ಸಂದರ್ಭದಲ್ಲಿ ಗಾಂಧಿ ಅಹಿಂಸಾವಾದಿಯಾಗಿ ಹೋರಾಡುವ ಸವಿನಯ ಕಾನೂನು ಭಂಗ ದಳವನ್ನೆ ಕಟ್ಟಿದರು. ಈಗಿನ ಸಿಎಎ, ಎನ್‍ಆರ್‍ಸಿಗೆ ಸಮಾನವಾದ ಕರಾಳ ಕಾನೂನದು. ಆಗ ಜನ ಅದನ್ನು ಉಲ್ಲಂಘಿಸಿ ತಮ್ಮ ಕೈ ಬೆರಳ ಗುರುತು ನೀಡದೆ ಜೈಲು ಸೇರಲು ತೊಡಗಿದರು. ಸುಮಾರು ಹದಿಮೂರು ಸಾವಿರ ವಲಸೆ ಬಂದ ಭಾರತೀಯರಲ್ಲಿ ಅಲ್ಲಿನ ಸರ್ಕಾರಕ್ಕೆ ನೊಂದಣಿ ಮಾಡಿಸಿಕೊಂಡವರು ಕೇವಲ 511 ಮಂದಿ ಮಾತ್ರ. ಇದರಿಂದ ಹೆದರಿದ ಅಲ್ಲಿನ ಜನರಲ್ ಸ್ಮಟ್ಸ್ ಸಂಚು ಮಾಡಿ ಗಾಂಧಿಯನ್ನು ನಂಬಿಸಿ ರಾಜಿ ಒಪ್ಪಂದ ಮಾಡಿಕೊಂಡ. ನಂತರ ವಂಚಿಸಿ ಮತ್ತಶ್ಟು ಕರಾಳ ಕಾನೂನು ಜಾರಿ ಮಾಡಿದ. ಆಗ ಗಾಂಧಿ ಜನರಲ್ ಸ್ಮಟ್ಸ್‍ನಿಂದ ಆದ ನಂಬಿಕೆದ್ರೋಹದ ಬಗ್ಗೆ ಜನರಿಗೆ ತಿಳಿಸಲು ಮತ್ತು ತೀವ್ರ ಹೋರಾಟ ರೂಪಿಸಲು ಇಂಡಿಯನ್ ಒಪೀನಿಯನ್ ಪತ್ರಿಕೆಯ ಮೂಲಕ ಸಂಪಾದಕ ಓದುಗ ಸಂವಾದದ ಧಾಟಿಯಲ್ಲಿ ಬರಹ ಪ್ರಕಟಿಸಿದರು. ಇದೇ ಧಾಟಿಯ ಬರವಣಿಗೆಯನ್ನೆ ಗಾಂಧಿ ಹಿಂದ್ ಸ್ವರಾಜ್‍ನಲ್ಲು ಪ್ರಯೋಗಿಸಿದ್ದಾರೆ.

ಬಿಳಿಯ ಬ್ರಿಟಿಶರ ಆಡಳಿತದ ಮಾದರಿ ಮತ್ತವರ ಬದುಕಿನ ಆಧುನೀಕೃತ ಮಾದರಿ ಎರಡರಿಂದಲೂ ಭಾರತೀಯರು ಬಿಡುಗಡೆ ಪಡೆಯಬೇಕು ಎಂಬ ಚಿಂತನೆ ಗಾಂಧಿಗೆ 1907 ಹೊತ್ತಿಗಾಗಲೆ ಮೂಡಿತ್ತು. ಹೋರಾಟದ ಮಾದರಿ ರೂಪಿಸುವುದು, ವ್ಯಕ್ತಿತ್ವ ರೂಪಿಸಿಕೊಳ್ಳುವುದು ಮತ್ತು ಬದುಕಿನ ಮಾದರಿ ರೂಪಿಸುವುದು ಮೂರೂ ಗಾಂಧಿಗೆ ಅಭಿನ್ನ ಆಗಿತ್ತು. ರಾಜಕೀಯ ನಿರ್ವಸಾಹತೀಕರಣ, ಆಲೋಚನಾ ವಿಧಾನ ಮತ್ತು ಜೀವನವಿಧಾನ ಈ ಮೂರರ ನಿರ್ವಸಾಹತೀಕರಣ ಕುರಿತು ಅದಾಗಲೆ ಗಾಂಧಿ ಲಾರ್ಡ್ ಆಂಪ್ಟ್‍ಹಿಲ್‍ಗೆ ಮತ್ತು ಗೆಳೆಯ ಹೆನ್ರಿ ಪೋಲಾಕ್‍ಗೆ ಬರೆದ ಪತ್ರಗಳಲ್ಲಿ ಪ್ರತಿಪಾದಿಸಿದ್ದರು. ಯಂತ್ರನಾಗರೀಕತೆಯ ನಿರಾಕರಣೆ, ಗಿರಣಿ ಬಟ್ಟೆಯ ನಿರಾಕರಣೆ, ವಿದೇಶೀ ಭಾಶೆಯ ನಿರಾಕರಣೆ, ವಿದೇಶೀ ಅನುಕರಣೆಯ ನಿರಾಕರಣೆಗಳನ್ನೆಲ್ಲ ಗಾಂಧಿ ಅದಾಗಲೆ ಪ್ರತಿಪಾದಿಸಿದ್ದರು. ಇವೆಲ್ಲವೂ ಹರಳುಗಟ್ಟಿ ಹಿಂದ್ ಸ್ವರಾಜ್‍ನಲ್ಲಿ ಪ್ರತಿಪಾದಿತವಾಗಿವೆ. 1909ರ ನವೆಂಬರ್ ಹದಿಮೂರರಿಂದ ಇಪ್ಪತ್ತೆರಡರವರೆಗೆ ಗಾಂಧಿ ಲಂಡನ್‍ನಿಂದ ಕೇಪ್‍ಟೌನ್‍ನತ್ತ ಹೊರಟ ಹಡಗಿನಲ್ಲಿ ಪ್ರಯಾಣಿಸುವಾಗ 09 ದಿನಗಳಲ್ಲಿ ಹಿಂದ್ ಸ್ವರಾಜ್ ಬರೆದರು. 271 ಪುಟಗಳ ಹಸ್ತಪ್ರತಿಯಲ್ಲಿ ಗಾಂಧಿ ಸುಮಾರು 50 ಪುಟಗಳನ್ನು ಎಡಗೈಯಲ್ಲೆ ಬರೆದಿದ್ದರು.

‘ಇತಿಹಾಸದಲ್ಲಿ ಎಂದೂ ಘಟಿಸದೇ ಇರುವುದು ಮುಂದೆಯೂ ಎಂದೂ ಘಟಿಸಲಾರದು ಎಂಬ ನಂಬಿಕೆಯೇ ಮನುಶ್ಯನ ಘನತೆಯನ್ನು ಅವಮಾನಿಸುವಂಥದ್ದು’ (ಹಿಂದ್ ಸ್ವರಾಜ್, ಪು: 61) ಎನ್ನುವ ಗಾಂಧಿ ಇತಿಹಾಸ ಪುನಃ ಪುನಃ ಪುನರಾವರ್ತನೆ ಆಗುತ್ತದೆ ಎಂಬ ನಂಬಿಕೆ ನಮಗೆ ನಾವೆ ಮಾಡಿಕೊಳ್ಳುವ ಅವಮಾನ ಎನ್ನುತ್ತಾರೆ. ಇತಿಹಾಸವನ್ನು ಬದಲಿಸುವ ಶಕ್ತಿ ಸಾಧ್ಯತೆ ನಮ್ಮ ನಮ್ಮ ಕೈಯಲ್ಲೆ ಇರುತ್ತದೆ. ಆಗಿನ ಬ್ರಿಟೀಶರ ಪ್ರಕಾರ ಇತಿಹಾಸ ಎಂದರೆ ಯುದ್ಧಗಳ ಇತಿಹಾಸ. ಹಾಗಾಗಿಯೆ ಅವರಲ್ಲಿ ‘ದಿ ನೇಶನ್ ವಿದ್ ನೋ ಹಿಸ್ಟರಿ ಈಸ್ ಅ ಹ್ಯಾಪಿ ನೇಶನ್’ ಎಂಬ ಗಾದೆ ಪ್ರಚಲಿತವಾಗಿತ್ತು. ಆದರೆ ನಮ್ಮಲ್ಲಿ ಆತ್ಮಬಲದ ಇತಿಹಾಸ ದಾಖಲಾಗಿಲ್ಲ. ‘ತಗಡಿನ ಗಣಿಯಲ್ಲಿ ಬೆಳ್ಳಿಸಿಕ್ಕೀತೇ?’ (ಅದೆ: ಪು72) ಅಂದರೆ ಆತ್ಮಬಲದಿಂದ ಹೋರಾಡಿ ಇತಿಹಾಸವನ್ನೆ ಬದಲಿಸಿದ ಇತಿಹಾಸ ನಮ್ಮಲ್ಲಿತ್ತು. ಆದರೆ ಅದನ್ನು ನಾವು ಕಟ್ಟಿಕೊಂಡಿಲ್ಲ ಎನ್ನುವ ಗಾಂಧಿ ಈಗಲೂ ನಾವು ವರ್ತಮಾನವನ್ನು ಬದಲಿಸಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಪ್ರಕಟಿಸುತ್ತಾರೆ.

‘ಈಜುಗಾರರಿಗೆ ನೀರಿನಲ್ಲೆ ಮರಣ’ ಎಂಬ ಹಾಗೆ ಕತ್ತಿ ಹಿಡಿದವನು ಕತ್ತಿಯಿಂದಲೆ ಮರಣ ಹೊಂದುತ್ತಾನೆ. ಹಾಗಾಗಿ ಸಶಸ್ತ್ರ ಹೋರಾಟ ಯಾವತ್ತೂ ಹಿತಕಾರಿಯಲ್ಲ. ಅಹಿಂಸಾ ಹೋರಾಟವೇ ಎಲ್ಲರಿಗೂ ಅಗತ್ಯ ಎನ್ನುವ ಗಾಂಧಿ ಅದರ ಸಮರ್ಥನೆಗೆ ಇಟಲಿ ಮತ್ತು ಆಸ್ಟ್ರೇಲಿಯಗಳ ಹೋರಾಟದ ಚರಿತ್ರೆಗಳನ್ನು ಉಲ್ಲೇಖಿಸುತ್ತಾರೆ. ಹಾಗೆ ಉಲ್ಲೇಖಿಸುತ್ತ ನಮ್ಮ ವರ್ತಮಾನದ ನಡೆಯನ್ನು ರೂಪಿಸಿಕೊಳ್ಳಲು ನಾವು ಚರಿತ್ರೆಯಿಂದ ಪಾಠ ಕಲಿಯಬೇಕು ಎನ್ನುತ್ತಾರೆ. ಅಹಿಂಸಾವಾದಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಮಂಡಿಸುತ್ತ ನಮ್ಮ ಹೋರಾಟ ಸತ್ಯಾಗ್ರಹ ಮಾರ್ಗದ್ದೆ ಆಗಿರಬೇಕು ಎನ್ನುತ್ತಾರೆ. ಜಗತ್ತಿನ ಬಹುಪಾಲು ಧರ್ಮಗ್ರಂಥಗಳನ್ನು ಓದಿಕೊಂಡಿದ್ದಂತೆಯೆ ಗಾಂಧಿ ದಾಸ್ಯ ಮತ್ತು ದಬ್ಬಾಳಿಕೆಗಳಿಂದ ಬಿಡುಗಡೆ ಪಡೆಯಲು, ಜಗತ್ತಿನೆಲ್ಲೆಡೆ ನಡೆದಿರುವ ಹೋರಾಟಗಳನ್ನೂ ಸಾಕಶ್ಟು ತಿಳಿದುಕೊಂಡಿದ್ದರು. ಅವಿಧೇಯತೆ, ಸತ್ಯಾಗ್ರಹ, ಅಪರಿಗ್ರಹ, ಅಹಿಂಸೆ ಇತ್ಯಾದಿ ಆಚಾರವಿಚಾರಗಳನ್ನು ಮೈಗೂಡಿಸಿಕೊಂಡ ಹೋರಾಟವು ಬರಿ ಹೋರಾಟವಲ್ಲ; ಅದು ನಮ್ಮ ಸಭ್ಯತೆ ಸನ್ನಡತೆಯನ್ನು ಕಟ್ಟಿಕೊಳ್ಳುವ ಹೋರಾಟವೂ ಹೌದು. ಅನ್ಯ ಮತ್ತು ಸ್ಥಳೀಯ ಎರಡೂ ಕೇಡುಗಳಿಂದ ಬಿಡುಗಡೆ ಪಡೆಯುವುದು ಎಂದರೆ ಅವುಗಳು ಎಂದಿಗು ತಳವೂರಲು ಅವಕಾಶ ಕೊಡದೆ ಇರುವ ಹಾಗೆ ನಮ್ಮ ವ್ಯಕ್ತಿತ್ವ ಮತ್ತು ಮನೆ, ದೇಶಗಳನ್ನು ಕಟ್ಟಿಕೊಳ್ಳುವುದು ಎಂದೇ ಗಾಂಧಿ ಹೇಳಿದರು.

‘ನಮಗೆ ಕೆಲವು ಶಾಸನ ಅಸಮ್ಮತವಾದರೆ ಅವನ್ನು ಪಾಲಿಸದೆ ಅದರಿಂದ ಬರುವ ಕಶ್ಟಗಳನ್ನು ಅನುಭವಿಸಬೇಕು. ಬೆತ್ತಲೆ ಕುಣಿಯಿರಿ ಎಂದು ಸರ್ಕಾರ ಶಾಸನ ಮಾಡಿದರೆ ಆ ನೀಚ ಶಾಸನವನ್ನು ನಾವು ಪಾಲಿಸಬೇಕಿಲ್ಲ; ಅದಕ್ಕಾಗಿ ಶಿಕ್ಶೆ ನೀಡಿದರೂ ಅನುಭವಿಸಬೇಕು; ಇದೇ ಸತ್ಯಾಗ್ರಹ, ಇದೇ ಸ್ವರಾಜ್ಯಕ್ಕೆ ದಾರಿ’ (ಪು78) ಎನ್ನುವ ಗಾಂಧಿ ಅಸಮ್ಮತಿ, ಅಸಹಕಾರ, ಆತ್ಮಬಲಿದಾನಗಳೇ ಸತ್ಯಾಗ್ರಹ ಎನ್ನುತ್ತಾರೆ. ಸತ್ಯಾಗ್ರಹ ಎಂದರೆ ಬಾಯ್‍ಕಾಟ್ ಅಲ್ಲ; ಅದು ಅಹಿಂಸಾವಾದಿ ಪ್ರತಿರೋಧ. ಭಾರತೀಯ ಸ್ವಾತಂತ್ರ್ಯ ಹೋರಾಟದ ತೀವ್ರಗಾಮಿ ಮತ್ತು ಮಂದಗಾಮಿ ಎರಡೂ ದಾರಿಗಳನ್ನು ವಿರೋಧಿಸುತ್ತಿದ್ದ ಗಾಂಧಿ ಗುರಿಯಂತೆಯೆ ದಾರಿ ಕೂಡ ಮುಖ್ಯ ಎಂದು ಪ್ರತಿಪಾದಿಸಿದವರು. ನಮ್ಮ ಗುರಿ ಸಾಧಿಸಲು ಏನಾದರೂ ಮಾಡುವುದಲ್ಲ. ಅಹಿಂಸಾ ಮಾರ್ಗವೇ ಎಲ್ಲಕ್ಕು ಉತ್ತಮವಾದುದು. ದಾರಿ, ಗುರಿ ಮತ್ತು ಗುರಿ ತಲುಪಿದ ನಂತರದ ಬದುಕಿನ ದಾರಿ ಮೂರೂ ಒಂದೆ ತೆರನಾಗಿರಬೇಕು, ಸತ್ಯಶುದ್ಧವಾಗಿರಬೇಕು ಎಂಬದು ಅವರ ನಿಲುವು.

‘ಭಾರತದಲ್ಲಿ ಇಂಗ್ಲಿಶರಿಗಿಂತ ಸ್ಥಳೀಯ ರಾಜರುಗಳ ದಬ್ಬಾಳಿಕೆ ಹೆಚ್ಚಾಗಿದೆ. ಅವರಿಂದ ಇವರಿಗೆ ಅಧಿಕಾರ ಬಂದರೆ ಜನರಿಗೆ ಏನು ಸುಖ?’ (ಪು65) ‘ಅಮೆರಿಕದ ರಾಕ್ ಫೆಲರ್‍ಗಿಂತ ಭಾರತದ ರಾಕ್‍ಫೆಲರ್ ಉತ್ತಮ ಎನ್ನುವುದು ಬರಿ ಭ್ರಾಂತಿ’ (ಪು95) ಎಂದು ಗಾಂಧಿ ಹೇಳಿದ್ದಾರೆ. ಶೋಶಣೆ ಸ್ಥಳೀಯ ಆಗಿರಲಿ ಪರಕೀಯ ಆಗಿರಲಿ ಶೋಶಣೆ ಶೋಶಣೆಯೆ. ಯಾರೂ ಯಾರನ್ನೂ ಶೋಶಣೆ ಮಾಡಕೂಡದು ಎನ್ನುವ ಇವರು ಸಮಾನತೆ ಮತ್ತು ಸ್ವಾತಂತ್ರ್ಯ ಎರಡೂ ಒಟ್ಟಿಗೇ ಇರುತ್ತವೆ ಎನ್ನುತ್ತಾರೆ.

ವ್ಯಾಪಾರೀಕರಣ, ನಗರೀಕರಣ ಮತ್ತು ಕೈಗಾರಿಕೀಕರಣ ಮೂರನ್ನೂ ಗಾಂಧಿ ವಿರೋಧಿಸುತ್ತಿದ್ದರು. ಈ ಮೂರನ್ನೂ ಒಳಗೊಂಡಿರುವ ಯಂತ್ರನಾಗರೀಕತೆಯನ್ನು ನಾವು ತ್ಯಜಿಸಿದರೆ ಮಾತ್ರ ಸ್ವರಾಜ್ಯ ಗಳಿಸಿಕೊಳ್ಳಲು ಸಾಧ್ಯ ಎನ್ನುವುದು ಗಾಂಧಿಯವರ ಪ್ರತಿಪಾದನೆ. ಇವರು ಕಾರ್ಖಾನೆಗಳಿಂದಲೆ, ಯಂತ್ರಗಳಿಂದಲೆ ಹಿಂದೂಸ್ಥಾನ ಬಡತನದಲ್ಲಿ ಮುಳುಗಿದೆ ಎನ್ನುತ್ತಾರೆ. ಕಾರ್ಮಿಕ-ಕಾರ್ಖಾನೆ ವ್ಯವಸ್ಥೆಯನ್ನು ಆಧುನಿಕ ಜೀತಪದ್ಧತಿ ಎನ್ನುವ ಇವರು ಈ ಕೈಗಾರಿಕೀಕರಣದಿಂದಲೆ ಕಾರ್ಮಿಕರು ಸ್ವಾತಂತ್ರ್ಯವಿಲ್ಲದ ಗುಲಾಮರಾಗಿದ್ದಾರೆ ಎಂದೂ ಹೇಳುತ್ತಾರೆ. ಇವರ ಪ್ರಕಾರ ಯಂತ್ರನಾಗರೀಕತೆ ಎನ್ನುವುದು ಹಾವಿನ ಹುತ್ತದಂತೆ. ಅಲ್ಲಿ ಯಾವಾಗಾದರು ಯಾವ ಹಾವು ಬೇಕಾದರೂ ಬಂದು ಸೇರಿಕೊಳ್ಳಬಹುದು. (ಪು97).

ನಿಮ್ಮ ರೈಲ್ವೆ, ಸೈನ್ಯ ನಮಗೆ ಅಗತ್ಯವಿಲ್ಲ; ನಿಮ್ಮ ವಿಲಾಯಿತಿ ಬಟ್ಟೆ ನಮಗೆ ಬೇಡ. (ಪು103). ನಿಮ್ಮ ಶಾಲೆ, ಕೋರ್ಟು, ವೈದ್ಯಪದ್ಧತಿ ಯಾವುವೂ ನಮಗೆ ಬೇಡ. ಬ್ರಿಟಿಶರೇ ನಿಮ್ಮದು ನೀರಗುಳ್ಳೆಯ ನಾಗರೀಕತೆ. (ಪು104) ನಿಮ್ಮ ಬದುಕಿನ ರೀತಿಯೇ ತಿರಸ್ಕಾರಾರ್ಹ ಎನ್ನುವ ಗಾಂಧಿ ನಮ್ಮ ನಿಮ್ಮ ಹಿತ ಒಂದೇ ಆದರೆ ಇಬ್ಬರೂ ಒಟ್ಟಿಗೇ ಇರಬಹುದು; ನಮ್ಮ ನಿಮ್ಮ ಸಂಬಂಧ ಧರ್ಮದ ಮೇಲೆ ನಿಂತಾಗ ಮಾತ್ರ ಇದು ಸಾಧ್ಯ ಎನ್ನುತ್ತಾರೆ. ಧರ್ಮ ಎಂದರೆ ಗಾಂಧಿ ಅವರ ಪ್ರಕಾರ ಅಸಮಾನತೆ, ದಾಸ್ಯಗಳಿಲ್ಲದ ಮಾನವ ಧರ್ಮ. ಗಾಂಧಿ ಇಂಗ್ಲಿಶರು ನಮ್ಮ ಹಗೆ ಅಲ್ಲ; ಅವರ ನಾಗರೀಕತೆ ನಮ್ಮ ಹಗೆ ಎನ್ನುತ್ತಾರೆ. (ಪು108). ಸ್ವರಾಜ್ಯವು ನಾವು ಇತರರಿಂದ ಪಡೆಯುವುದಲ್ಲ; ನಾವೇ ಕಟ್ಟಿಕೊಳ್ಳಬೇಕಾದುದು, ನಿರ್ಮಿಸಿಕೊಳ್ಳಬೇಕಾದುದು. ಪ್ರಜೆಗಳ ವ್ಯಕ್ತಿತ್ವವನ್ನು ಸಭ್ಯವಾಗಿ ಕಟ್ಟಿಕೊಳ್ಳುವುದೂ ಕೂಡ ಸ್ವರಾಜ್ಯ ಕಟ್ಟಿಕೊಳ್ಳುವುದೇ ಹೌದು ಎಂಬುದು ಅವರ ಬಲವಾದ ನಂಬುಗೆ. ಮಾನವಧರ್ಮದ ಕಲ್ಪನೆ ಇಲ್ಲದ ರಾಜಕಾರಣ ಸ್ವರಾಜ್ಯ ಕಟ್ಟಲಾರದು ಎಂಬುದು ಗಾಂಧಿಯ ಬಲವಾದ ನಂಬುಗೆ.

ಗಾಂಧಿ ಪ್ರಕಾರ ಸ್ವಾಂತಂತ್ರ್ಯಎಂದರೆ ಹಣ ಮತ್ತು ಕಾಮಗಳಿಂದ ಬಿಡುಗಡೆ. ಈ ಬಿಡುಗಡೆ ಮತ್ತು ಬಡತನದ ವ್ರತವನ್ನು ಪಾಲಿಸುವುದು ಗಾಂಧಿಯವರಿಗೆ ಸಮಾನತೆ, ಸ್ವಾಂತಂತ್ರ್ಯ ಮತ್ತು ಅಪರಿಗ್ರಹ ಮೂರೂ ತತ್ವಗಳನ್ನು ಮೇಳೈಸಿಕೊಂಡ ಚಿಂತನೆ. ತಮ್ಮ 37ನೆ ವಯಸ್ಸಿಗೆ ಬ್ರಹ್ಮಚರ್ಯ ವ್ರತ ಪಾಲಿಸಲು ತೊಡಗಿದ ಗಾಂಧಿ ಬ್ರಹ್ಮಚರ್ಯ ಮತ್ತು ಬಡತನಗಳನ್ನು ಎಲ್ಲರೂ ಪಾಲಿಸಬೇಕಾದ ಮೌಲ್ಯಗಳು ಎಂದೇ ಹೇಳುತ್ತಾರೆ. ನಮ್ಮ ಆಧುನಿಕತೆ ತಂದು ಒಡ್ಡಿರುವ ಎಲ್ಲ ಬಗೆಯ ರೋಗಗಳಿಗೆ ನಮ್ಮ ನಮ್ಮ ದೇಹಸುಖ ಮತ್ತು ಹಣದ ದಾಹಗಳೇ ಕಾರಣಗಳು ಎನ್ನುತ್ತ ಅವುಗಳನ್ನು ತ್ಯಜಿಸಿದಾಗ ಮಾತ್ರ ಎಲ್ಲರಿಗೂ ಸ್ವಾಂತಂತ್ರ್ಯ, ಸಮಾನತೆಗಳು ಲಭ್ಯ ಆಗುತ್ತವೆ ಎನ್ನುತ್ತಾರೆ. ಬ್ರಹ್ಮಚರ್ಯ, ಬಡತನ, ಸತ್ಯೋಪಾಸನೆ, ನಿರ್ಭೀತತೆ ಈ ನಾಲ್ಕೂ ಸತ್ಯಾಗ್ರಹಿಯ ಅರ್ಹತೆಗಳು ಎನ್ನುತ್ತಾರೆ. (ಪು83). ಇವರ ರಾಶ್ಟ್ರೀಯತೆಯ ಕಲ್ಪನೆ ವಿಶ್ವಕುಟುಂಬಿ ಕಲ್ಪನೆಗೆ ಸಮನಾದುದು. ‘ನಾವು ನಮ್ಮ ಮನೆಯನ್ನು ಚೊಕ್ಕಟವಾಗಿ ಇಟ್ಟುಕೊಂಡರೆ ಅದರಲ್ಲಿ ಇರಬಹುದಾದವರು ಇರುತ್ತಾರೆ. ಆಗದವರು ಹೋಗುತ್ತಾರೆ’ (ಪು61) ಎನ್ನುವ ಇವರು ದೇಶವನ್ನು ಒಂದು ಕುಟುಂಬವಾಗಿಯೂ ನೋಡುತ್ತಾರೆ. ಹಾಗೆಯೆ ‘ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಇಂಗ್ಲಿಶನೂ ಭಾರತೀಯನೇ’ (ಪು65) ಎನ್ನುತ್ತಾರೆ. ಆ ಮೂಲಕ ಸಭ್ಯತೆ ಉಳ್ಳವರೆಲ್ಲ ಒಂದೆ ದೇಶವಾಗಿ ಒಂದೆ ಕುಟುಂಬದಂತೆ ಇರಬಹುದು ಎನ್ನುವುದು ಇವರ ಪ್ರತಿಪಾದನೆಯಾಗಿದೆ. ‘ಬ್ರಿಟಿಶರು ಭಾರತಕ್ಕೆ ಬರುವ ಮುಂಚೆಯೂ ನಮ್ಮಲ್ಲಿ ರಾಶ್ಟ್ರೀಯತೆ ಇತ್ತು. ದಕ್ಶಿಣದಲ್ಲಿ ರಾಮೇಶ್ವರ, ಪೂರ್ವದಲ್ಲಿ ಜಗನ್ನಾಥಪುರಿ, ಉತ್ತರದಲ್ಲಿ ಹರಿದ್ವಾರ ಹೀಗೆ ದೇಶದ ನಾನಾ ಕಡೆ ಧಾರ್ಮಿಕ ತೀರ್ಥಕ್ಶೇತ್ರಗಳನ್ನು ಮಾಡಿರುವುದರ ಹಿಂದೆ ಒಂದು ರಾಶ್ಟ್ರದ ಕಲ್ಪನೆ ಇದೆ’ (ಪು39) ಎನ್ನುವ ಇವರು ದೇಶ ಎಂದರೆ ಒಂದು ನಂಬಿಕೆ, ಒಂದು ಆಚಾರ ಇರುವ ಜನಸಮೂಹ ಎನ್ನುತ್ತಾರೆ. ಆದರೆ ಇದು ದೇಶ ಮತ್ತು ಧರ್ಮಗಳನ್ನು ಸಮೀಕರಿಸಿದ ರಾಶ್ಟ್ರೀಯತೆಯ ಕಲ್ಪನೆ ಅಲ್ಲ. ಒಂದು ದೇಶ ಒಂದು ಧರ್ಮದ ಕಲ್ಪನೆ ಅಲ್ಲ. ಇವರ ಪ್ರಕಾರ ದೇಶ ಎಂದರೆ ಕೇವಲ ಒಂದು ತುಂಡು ನೆಲವಲ್ಲ. ಒಂದು ನಿರ್ದಿಶ್ಟ ಧರ್ಮವಲ್ಲ, ಭಾಶೆಯಲ್ಲ, ಹಲವು ಬಗೆಯ ಜನಸಮೂಹ. (ಪು81) ಆದಾಗ್ಯೂ; ‘ಬ್ರಿಟಿಶರು ಭಾರತಕ್ಕೆ ಬರುವ ಮುಂಚೆಯೂ ನಮ್ಮಲ್ಲಿ ರಾಶ್ಟ್ರೀಯತೆ ಇತ್ತು’ ಎಂಬ ಇವರ ಮಾತನ್ನು ಒಪ್ಪಿದರೂ ಅದು ಅವರು ಹೇಳುವ ಬಗೆಯ ರಾಶ್ಟ್ರೀಯತೆ ಮಾತ್ರ ಅಲ್ಲ. ಹಲವು ಬಗೆಯ ರಾಶ್ಟ್ರೀಯತೆಗಳು ಹಲವು ಕಾಲದೇಶಗಳಲ್ಲಿ ಮೂಡಿ ಮುಳುಗುತ್ತಿದ್ದವು ಎಂಬುದೇ ವಾಸ್ತವ.

ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತ ಮುಸ್ಲಿಮರು ಸ್ನೇಹದಿಂದ ಇರಬೇಕು. ‘ಎರಡು ಹಸಿ ಗಡಿಗೆಗಳನ್ನು ಒಂದಕ್ಕೊಂದು ತಾಕಿದರೆ ಒಡೆದುಹೋಗುತ್ತವೆ ಎಂದು ದೂರ ದೂರ ಇಡುವುದಲ್ಲ; ಎರಡೂ ಗಡಿಗೆಗಳನ್ನು ಒಡೆಯದಂತೆ ಸುಟ್ಟು ಒಟ್ಟಿಗೇ ಇಡಬೇಕು. ನಮ್ಮ ನಮ್ಮ ಹೃದಯಗಳನ್ನು ಸಹಬಾಳ್ವೆಗೆ ಪಕ್ವಗೊಳಿಸಬೇಕು’ ಎಂದು ಗಾಂಧಿ ಹೇಳುತ್ತಾರೆ. (ಪು45). ಇಂದು ನಮ್ಮಲ್ಲಿ ಗೋರಕ್ಶಣೆ ಹೆಸರಲ್ಲಿ ಗುಂಪು ಹಲ್ಲೆಗಳು ಸಾಧಾರಣ ಆಗುತ್ತಿವೆ. ಧಾರ್ಮಿಕ ಅಸಹಿಶ್ಣುತೆ ಅತಿಯಾಗುತ್ತಿದೆ. ಆಹಾರ ರಾಜಕಾರಣವೆ ನಮ್ಮ ರಾಶ್ಟ್ರೀಯತೆಯ ಕಲ್ಪನೆಯನ್ನು ನಾಶ ಮಾಡುತ್ತಿದೆ. ಹೀಗಿರುವಾಗ ಈ ಬಗೆಗಿನ ಗಾಂಧಿಯ ಮಾತುಗಳು ಬಹಳ ಪ್ರಸ್ತುತ ಆಗಿ ಕಾಣುತ್ತವೆ. ‘ಗೋರಕ್ಶಣಾ ಸಂಘಗಳೇ ಗೋಹತ್ಯಾ ಸಂಘಗಳು. ನಾವು ಗೋರಕ್ಶಣೆ ಮಾಡುವುದನ್ನು ಮರೆತಾಗ ಇಂತಹ ಸಂಘಗಳು ಹುಟ್ಟುತ್ತವೆ. ಮಾಂಸಾಹಾರಿಗಳು ಸಸ್ಯಾಹಾರಿಗಳು ಒಟ್ಟಿಗೆ ಇರಲಾರರು ಎಂಬುದೆಲ್ಲ ಸುಳ್ಳು. ಗೋಪೂಜೆ ಮಾಡುವಂತೆ ನಾವು ಮನುಶ್ಯರನ್ನೂ ಗೌರವಿಸಬೇಕು. ಗೋವನ್ನು ರಕ್ಶಿಸುವುದು ನಮ್ಮ ಕೆಲಸ. ಆದರೆ ಅದಕ್ಕಾಗಿ ಮುಸಲ್ಮಾನರ ಪ್ರಾಣ ತೆಗೆಯುವುದು ನಮ್ಮ ಕೆಲಸ ಆಗಬಾರದು. ನಮ್ಮ ಮತಭೇದ, ಆಹಾರಭೇದ, ಆಚಾರಭೇದ ಯಾವುದೂ ನಾವು ಒಂದು ರಾಶ್ಟ್ರವಾಗಿರಲು ಅಡ್ಡಿ ಅಲ್ಲ.’ (ಪು 42-43). ಹೀಗೆ ಹೇಳುವ ಗಾಂಧಿ ಧರ್ಮ, ಪಂಥ, ನಂಬಿಕೆಗಳ ಆಧಾರದಲ್ಲಿ ಪ್ರಾಣ ತೆಗೆಯುತ್ತ, ದೇಶ ಕಟ್ಟಲು ಸಾಧ್ಯವಿಲ್ಲ ಎಂದೇ ಹೇಳುತ್ತಾರೆ. ಧಾರ್ಮಿಕ ಐಕಮತ್ಯ ಮತ್ತು ಸಹಿಶ್ಣು ಸಹಬಾಳ್ವೆ ಇವರ ರಾಶ್ಟ್ರೀಯತೆಯ ತಳಾದಿ.

‘ಹಿಂದು ಮುಸಲ್ಮಾನ ಇಬ್ಬರೂ ಒಂದೇ ವಂಶದವರು. ಇಬ್ಬರಲ್ಲು ಒಂದೆ ರಕ್ತ ಹರಿಯುತ್ತಿದೆ. ಎಲ್ಲರೂ ಐಕಮತ್ಯದಿಂದ ಸಹಬಾಳ್ವೆ ನಡೆಸಬೇಕು. ಇಂಗ್ಲಿಶರು ಬಂದ ಮೇಲೆ ಇಲ್ಲಿ ಧಾರ್ಮಿಕ ಗಲಭೆ, ಒಡಕುಗಳು ಹೆಚ್ಚಾಗಿವೆ’ ಎನ್ನುವ ಗಾಂಧಿಯವರ ಮಾತುಗಳು ಇಂದಿಗೂ ಪ್ರಸ್ತುತ. (ಪು41) ಶೈವರೂ ವೈಶ್ಣವರೂ ಇಲ್ಲಿ ಸಾಕಶ್ಟು ಸಂಘರ್ಶ ನಡೆಸಿದ್ದಾರೆ. ಜೈನರೂ ಸನಾತನಿಗಳೂ ಹಾಗೆಯೆ. ಹಾಗಾದರೆ ಒಂದೊಂದು ಧರ್ಮದವರಿಗೂ ಒಂದೊಂದು ದೇಶ ಮಾಡಲು ಆದೀತೇ? ಇಲ್ಲಿರುವ ಮುಸಲ್ಮಾನರು, ಇಸಾಯಿಗಳು ಎಲ್ಲರೂ ನಮ್ಮ ದೇಶಬಾಂಧವರೇ. ‘ಒಂದು ಧರ್ಮ ಒಂದು ರಾಶ್ಟ್ರ ಎಂಬುದು ಲೋಕದಲ್ಲಿ ಎಲ್ಲಿಯೂ ಇಲ್ಲ. ಹಿಂದೂಸ್ಥಾನದಲ್ಲಂತು ಎಂದೂ ಹಾಗೆ ತಿಳಿದಿಲ್ಲ’ ಎಂದೇ ಗಾಂಧಿ ಹೇಳುತ್ತಾರೆ. (ಪು40) ಹಾಗೆ ಹೇಳುವ ಮೂಲಕ ಹಿಂದೂಸ್ಥಾನವೆಂದರೆ ಇದು ಹಿಂದೂ ಎಂಬ ಒಂದು ಸಮುದಾಯದ ದೇಶ ಅಲ್ಲ; ಸಹಬಾಳ್ವೆಯ, ಶಾಂತಿಯ, ವೈವಿದ್ಯತೆಯ ಭಾರತವಿದು ಎಂದು ತಮ್ಮ ಉದಾರ ರಾಶ್ಟ್ರೀಯತೆಯ ಕಲ್ಪನೆಯನ್ನು ಮಂಡಿಸುತ್ತಾರೆ.

ಗಾಂಧಿ ಅವರ ಪ್ರಕಾರ ಯಾವುದೇ ದೇಶ ಇಡಿ ಇಡಿಯಾಗಿ ದ್ವೇಶಕ್ಕೆ ಅರ್ಹವಲ್ಲ. ಯಾವುದೇ ದೇಶದ ಎಲ್ಲರೂ ಕೇಡುಗರಲ್ಲ. ಹಲಕೆಲವರು ಹಾಗೆ ಇರಬಹುದು; ಹಾಗೆಂದ ಮಾತ್ರಕ್ಕೆ ದೇಶವನ್ನೆ ರಾಕ್ಶಸೀಕರಣ ಮಾಡುವುದು ತರವಲ್ಲ. ‘ಎಲ್ಲ ಇಂಗ್ಲಿಶರೂ ದುಶ್ಟರಲ್ಲ, ಪ್ರತಿಯೊಬ್ಬ ಇಂಗ್ಲಿಶನೂ ನಮ್ಮ ವೈರಿಯಲ್ಲ’ (ಪು06) ಎನ್ನುವ ಗಾಂಧಿ ಎ.ಒ. ಹ್ಯೂಂ, ವಿಲಿಯಮ್ ವೆಡರ್‍ಬರ್ನ್, ಅನಿಬೆಸಂಟ್ ಮುಂತಾದ ಇಂಗ್ಲಿಶರು ಭಾರತೀಯ ರಾಶ್ಟ್ರೀಯತೆಯ ಹಿತಚಿಂತಕರು ಎನ್ನುತ್ತಾರೆ. ಇಡಿಯಾಗಿ ಪಾಕಿಸ್ತಾನವನ್ನು, ಇಡಿಯಾಗಿ ಇಸ್ಲಾಮನ್ನು ದ್ವೇಶಿಸುವ ಹಾಗೆ ನಮ್ಮಲ್ಲಿ ಇಂದು ಹಲವರು ನಡೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ಗಾಂಧಿಯ ಈ ಮಾತು ಮಾರ್ಗದರ್ಶಕ. ಗಾಂಧಿ ಹಿಂದ್ ಸ್ವರಾಜ್‍ನಲ್ಲಿ ಧರ್ಮ, ಜಾತಿ, ಪಂಥ ಅಥವಾ ಇನ್ನಾವುದೇ ಕಾರಣದಿಂದ ಜನರನ್ನು ಸಂಘಟಿಸಿ ಬಹುಜನರ ಅಭಿಪ್ರಾಯವನ್ನು ಸತ್ಯವೆಂದು ಕರೆದು ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡುವುದನ್ನು ಒಪ್ಪುವುದಿಲ್ಲ. ಅದನ್ನು ಅವರು ‘ಬಹುಜನ ಹೇಳಿದುದನ್ನು ಅಲ್ಪಸಂಖ್ಯೆಯವರು ಒಪ್ಪಲೇಬೇಕು ಎಂಬುದು ಭ್ರಾಂತಿ. ಅದು ದೈವವಿರೋಧಿ ಆದದ್ದು’ ಎನ್ನುತ್ತಾರೆ. (ಪು79) ಬಹುಸಂಖ್ಯಾತವಾದ ಎಂದಿಗೂ ಸ್ವಾತಂತ್ರ್ಯವನ್ನು ಸರ್ವರಿಗು ಒದಗಿಸಲಾರದು ಎಂಬುದು ಗಾಂಧಿ ಅವರ ನಂಬಿಕೆ.

ಗಾಂಧಿಯವರ ಸ್ವ ರಾಜ್ಯದ ಕಲ್ಪನೆಗೂ ಸ್ವಾಂತಂತ್ರ್ಯದ ಕಲ್ಪನೆಗೂ, ಸಭ್ಯತೆಯ ಕಲ್ಪನೆಗೂ ಮತ್ತು ರಾಶ್ಟ್ರೀಯತೆಯ ಕಲ್ಪನೆಗೂ ಒಂದು ಅನ್ಯೋನ್ಯ ಸಂಬಂಧವಿದೆ. ಗಾಂಧಿಯವರ ಸ್ವರಾಜ್ಯದ ಕಲ್ಪನೆ ಸ್ವಂತಿಕೆಯಿಂದ ಬದುಕುವ ಕಲ್ಪನೆ ಮಾತ್ರವಲ್ಲ; ನಮ್ಮ ನಮ್ಮ ಬದುಕನ್ನು ನೈತಿಕತೆಯ, ಅಹಿಂಸೆಯ, ಆಧ್ಯಾತ್ಮಿಕತೆಯ, ಧಾರ್ಮಿಕತೆಯ ನೆಲೆಗಟ್ಟಿನ ಮೇಲೆ ಕಟ್ಟಿಕೊಳ್ಳುವ ಕಲ್ಪನೆ ಕೂಡ. ಸ್ವಾತಂತ್ರ್ಯಾನಂತರದಲ್ಲಿ ನಮ್ಮ ಬದುಕನ್ನು ನಾವು ಹೇಗೆ ಕಟ್ಟಿಕೊಳ್ಳಬೇಕು ಎಂಬ ಚಿಂತನೆ, ಯೋಜನೆ, ತಯಾರಿ ಮತ್ತು ಕಾರ್ಯಶೀಲತೆ ಇಲ್ಲದಿದ್ದರೆ ಸ್ವರಾಜ್ಯದ ಬೇಡಿಕೆ ವ್ಯರ್ಥ ಎಂಬುದು ಗಾಂಧಿಯವರ ಅಭಿಪ್ರಾಯ. ನಮಗೆ ಇಂಗ್ಲಿಶ್ ರಾಜ್ಯ ಬೇಕು, ಇಂಗ್ಲಿಶರು ಬೇಡ ಎಂದರೆ; ಹುಲಿಯ ಗುಣ ಬೇಕು ಹುಲಿ ಮಾತ್ರ ಬೇಡ ಎಂದರೆ ಸಾಧ್ಯವೇ? ‘ನಾವು ಹಿಂದೂಸ್ಥಾನವನ್ನು ಇಂಗ್ಲಿಶ್‍ಸ್ಥಾನ ಮಾಡಿಕೊಳ್ಳಬೇಕೆ? ಹಿಂದೂಸ್ಥಾನವು ಇಂಗ್ಲಿಶ್‍ಸ್ಥಾನ ಆಗುವುದಾದರೆ ನಮಗೆ ಆ ಸ್ವರಾಜ್ಯ ಬೇಡ. ಇಂಗ್ಲಿಶರು ಇಂಗ್ಲೆಂಡನ್ನು ಆಳಿಕೊಳ್ಳುತ್ತಿರುವ ಹಾಗೆಯೆ ನಾವೂ ಅದೇ ಮಾದರಿಯಲ್ಲಿ ನಮ್ಮನ್ನು ಆಳಿಕೊಳ್ಳುವ ಸ್ವರಾಜ್ಯ ನಮಗೆ ಬೇಕಿಲ್ಲ ಎನ್ನುವುದು ಗಾಂಧಿಯವರ ಸ್ಪಶ್ಟ ಅಭಿಪ್ರಾಯ. (ಪು15-16)

ಗಾಂಧಿಯವರ ಸ್ವರಾಜ್ಯ ಮತ್ತು ರಾಮರಾಜ್ಯ ಕಲ್ಪನೆಗಳು ಹತ್ತಿರದ ಕಲ್ಪನೆಗಳು. ದಾಸ್ಯ, ದಬ್ಬಾಳಿಕೆ, ಶೋಶಣೆ, ಹಿಂಸೆಗಳಿಲ್ಲದ ರಾಜ್ಯವೇ ಸ್ವರಾಜ್ಯ. ಸ್ವಾಂತಂತ್ರ್ಯವೆಂದರೆ ಸ್ವರಾಜ್ಯ. ಸ್ವರಾಜ್ಯವೆಂದರೆ ಘನತೆ ಗೌರವಗಳಿಂದ ತುಳಿತವಿಲ್ಲದೆ, ತುಳಿಯದೆ ಬಾಳುವುದು. ಬಲಪ್ರಯೋಗ ಯಾವತ್ತೂ ಸರ್ವನಾಶಕ್ಕೆ ದಾರಿ. ಬಲಶಾಲಿ ಬಲಹೀನನನ್ನು ಕೊಲ್ಲಬಹುದು; ಆದರೆ ಬಲಹೀನನೇ ಮುಂದೊಮ್ಮೆ ಬಲಶಾಲಿ ಆದಾಗ? ಹಿಂಸೆಯ ಸರಣಿಗೆ ಕೊನೆಯುಂಟೆ? ಸ್ವಾತಂತ್ರ್ಯ ಎಂದರೆ ಹಿಂಸೆಗೆ ಕೊನೆ ಕಾಣಿಸುವುದು. ಹಾಗೆಯೆ ಯುದ್ಧದಲ್ಲಿ ಗೆಲ್ಲುವುದು ಮತ್ತು ಕೊಲ್ಲುವುದು ಶೌರ್ಯ ಅಲ್ಲ. ಆತ್ಮಬಲಿದಾನಕ್ಕೆ ಸದಾ ಸಿದ್ಧ ಇರುವುದೇ ಶೌರ್ಯ. ಹೇಡಿಯಾದವನು ಸತ್ಯಾಗ್ರಹಿ ಆಗಲಾರ. ಹೀಗೆ ಗಾಂಧಿ ಪರಾಕ್ರಮ, ಶೌರ್ಯಗಳಿಗೆ ಹೊಸ ವ್ಯಾಖ್ಯಾನ ನೀಡುತ್ತಾರೆ. ಆದರೆ ನಾವು ಶರಣಸೇನೆ, ಶಿವಸೇನೆ, ಕನ್ನಡ ಸೇನೆ, ಯುವ ಬ್ರಿಗೇಡ್, ರಾಯಣ್ಣ ಬ್ರಿಗೇಡ್, ಹಿಂದೂ ಸೇನೆ, ಶ್ರೀರಾಮ ಸೇನೆ ಹೀಗೆ ಸೈನ್ಯಗಳನ್ನು ಕಟ್ಟುತ್ತಿದ್ದೇವೆ! ‘ಪರಾಕ್ರಮ’ಕ್ಕೆ ನಾವೂ ಹೊಸ ವ್ಯಾಖ್ಯಾನಗಳನ್ನು ಸೇರಿಸುತ್ತಿದ್ದೇವೆ!

ಗಾಂಧಿ ಹಿಂದ್ ಸ್ವರಾಜ್ ಬರೆದದ್ದೆ ಗುಜರಾತಿ ಭಾಶೆಯಲ್ಲಿ. ಗುಜರಾತಿಯಲ್ಲಿ ನಾಗರೀಕತೆ ಶಬ್ದಕ್ಕೆ ಸುಧಾರೋ ಎಂಬುದು ಸಂವಾದಿ ಪದ. ಅದಕ್ಕೆ ಕನ್ನಡದಲ್ಲಿ ಸಭ್ಯತೆ, ಸನ್ನಡತೆ, ಒಳ್ಳೆಯ ಬದುಕಿನ ಮಾರ್ಗ ಎಂಬೆಲ್ಲ ಅರ್ಥಗಳಿವೆ. ಗಾಂಧಿ ಪಶ್ಚಿಮದ ನಾಗರೀಕತೆಗೆ ಸಂವಾದಿಯಾಗಿ ನಾಗರೀಕತೆ ಎಂಬ ಶಬ್ದವನ್ನು ಬಳಸುವಾಗ ರುಣಾತ್ಮಕವಾಗಿಯೆ ಅದನ್ನು ಬಳಸುತ್ತಾರೆ. ಪೂರ್ವದ ನಾಗರೀಕತೆ ಎಂಬುದು ಟ್ರು ಸಿವಿಲಿಜೇಶನ್ ಎಂಬಂತೆ ಹೇಳಿದರೂ ಫಾಲ್ಸ್ ಸಿವಿಲಿಜೇಶನ್ ಎಂಬ ಶಬ್ದ ಬಳಸದೆ ಪಶ್ಚಿಮದ ನಾಗರೀಕತೆಯನ್ನು ಯಂತ್ರನಾಗರೀಕತೆ, ಅನಾಗರೀಕತೆ, ಅನೈತಿಕತೆ, ಬರ್ಬರತೆ, ದರಿದ್ರತೆ, ನೀರಗುಳ್ಳೆ, ರೋಗ, ರಾಕ್ಶಸಭಾರ ಎಂದೆಲ್ಲ ಬೈಯ್ದಿದ್ದಾರೆ. ಗಾಂಧಿ ಅವರ ಪ್ರಕಾರ ಭಾರತದ ನಾಗರೀಕತೆ ಅಂದರೆ ಟ್ರೂ ಸಿವಿಲಿಜೇಶನ್. ಪಶ್ಚಿಮದವರ (ದರಿದ್ರ ಆಧುನಿಕ) ನಾಗರೀಕತೆ ನಾಸ್ತಿಕ ಮತ್ತು ಅನೈತಿಕವಾದುದು. ಭಾರತದ ನಾಗರೀಕತೆ (ಸಭ್ಯತೆ) ದೈವಿಕ ಮತ್ತು ನೈತಿಕ ಆದುದು. (ಪು58) ಆದರೆ ಹೀಗೆ ನಾಗರೀಕತೆಯನ್ನು ಬೈನರಿಯಾಗಿ ಇಲ್ಲವೆ ಪ್ರಾದೇಶಿಕ ಆಗಿ ನಿರ್ವಚಿಸಿಕೊಳ್ಳುವುದನ್ನು ಇಂದು ಒಪ್ಪಲಾಗದು. ಇಡಿಇಡಿಯಾಗಿ ಹೇಗೆ ಒಂದು ದೇಶ ದ್ವೇಷಕ್ಕೆ ಅರ್ಹ ಅಲ್ಲವೋ ಹಾಗೆಯೆ ಇಡಿಡಿಯಾಗಿ ಒಂದು ಪ್ರದೇಶ ಅನಾಗರೀಕ ಅಲ್ಲ.

ಮೆಕಾಲೆಯ ಶಿಕ್ಶಣ ಪದ್ಧತಿಯನ್ನು ಅನುಸರಿಸಿ ನಾವೆಲ್ಲ ಗುಲಾಮರಾಗಿದ್ದೇವೆ; ಧಾರ್ಮಿಕ ಶಿಕ್ಶಣ ಅತ್ಯಗತ್ಯವಾಗಿ ಎಲ್ಲರಿಗು ಬೇಕು; ನಾಸ್ತಿಕತೆಯೆ ಕೇಡಿನ ಮೂಲ; ಆಸ್ತಿಕತೆ ಎಲ್ಲರಲ್ಲೂ ಶಿಕ್ಶಣದ ಮೂಲಕ ಮೂಡಬೇಕು; ನೈತಿಕ ಶಿಕ್ಶಣ ಅತ್ಯಗತ್ಯ ಎಂದು ಹೇಳುವ ಗಾಂಧಿ ಹಕ್ಸ್‍ಲೆ ಮಾತನ್ನು ಉಲ್ಲೇಖಿಸುತ್ತ ಅಕ್ಶರ ಕಲಿಕೆ ಮಾತ್ರ ಶಿಕ್ಶಣವಲ್ಲ; ಸದಾಚಾರವೆ ನಿಜವಾದ ಶಿಕ್ಶಣ ಎನ್ನುತ್ತಾರೆ. ಸ್ವರಾಜ್ಯ ನಿರ್ಮಾಣಕ್ಕೆ ಮಾತ್ರವಲ್ಲ ಸತ್ಯಾಗ್ರಹಕ್ಕು ಶಿಕ್ಶಣದ ಅಗತ್ಯವಿದೆ ಎಂದೂ ಹೇಳುತ್ತಾರೆ. ನೈತಿಕ ಶಿಕ್ಶಣ ಅಗತ್ಯ ಹೌದು; ಆದರೆ ಅದಶ್ಟೆ ಶಿಕ್ಶಣವಲ್ಲ. ಮೆಕಾಲೆ ಪದ್ಧತಿಯನ್ನು ಅನುಸರಿಸಿ ನಾವೆಲ್ಲ ನಮ್ಮತನ ಕಳೆದುಕೊಂಡೆವು ಅನ್ನುವುದೂ ನಿಜವೇ. ಆದರೆ ಕೇಡಿನ ಮೂಲ ನಾಸ್ತಿಕತೆ ಎಂಬುದನ್ನು ನಾವಿಂದು ಒಪ್ಪಲು ಸಾಧ್ಯವಿಲ್ಲ.

ಇದೇ ಸಂದರ್ಭದಲ್ಲಿ ಗಾಂಧಿ ‘ನಮ್ಮ ಧರ್ಮೋಪದೇಶಿಗರು ಕಪಟಿಗಳು, ಸ್ವಾರ್ಥಿಗಳು; ಮುಲ್ಲಾಗಳು, ದಸ್ತೂರರು, ಬ್ರಾಹ್ಮಣರ ಕೈಯಲ್ಲಿ ನಮ್ಮ ಸಮಾಜದ ಕೀಲಿಕೈಗಳಿವೆ’ ಎಂದು ಹೇಳುವುದನ್ನೂ ‘ಹಿಂದೂಸ್ಥಾನ ತನ್ನ ಪೂರ್ವಸ್ಥಿತಿಗೆ ಬರಬೇಕು’ ಎಂಬ ಹೇಳುವುದನ್ನೂ (ಪು92-93) ಒಟ್ಟಿಗೇ ಗಮನಿಸುವುದು ಸೂಕ್ತ. ಗಾಂಧಿಯವರ ಭಾರತದ ಭೂತಕಾಲದ ನೋಟ ಅದರ ರಮ್ಯತೆಯನ್ನು ಮಾತ್ರ ಕಂಡದ್ದಾಗಿದೆ! ಭಾರತದ ಪೂರ್ವಸ್ಥಿತಿ ಜಾತಿ, ಲಿಂಗ, ಧರ್ಮ, ವರ್ಗ ಅಸಮಾನತೆಗಳ ಕೂಪ ಕೂಡ ಆಗಿತ್ತು; ಇಲ್ಲಿ ವಿಧಿಲೀಲೆ, ಕರ್ಮಫಲ, ಸ್ವರ್ಗ-ನರಕ, ಗುಡಿ-ಭಕ್ತಿ, ದಾಂಪತ್ಯ, ಕುಟುಂಬ, ಅಸ್ಪøಶ್ಯತೆ, ಜೀತಪದ್ಧತಿ, ಗೇಣಿ ಪದ್ಧತಿ, ವಿಧವಾ ಪದ್ಧತಿ, ಮಡಿ-ಪಾವಿತ್ರ್ಯ, ಧರ್ಮ-ಅಧರ್ಮ, ಪೌರುಶ, ಬಂಜೆ, ವೇಶ್ಯೆ ಇಂತಹ ನೂರಾರು ಕಲ್ಪನೆಗಳು ಮತ್ತು ಪರಿಭಾಶೆಗಳು ಯಥಾಸ್ಥಿತಿವಾದಿ ಸಾಧನಗಳೆ ಆಗಿ ಬಂಡೆಗಲ್ಲುಗಳ ಹಾಗೆ ನಮ್ಮ ಮನೆ, ಮನಗಳಲ್ಲಿ ಜಡ್ಡುಗೊಂಡಿದ್ದವು ಎಂಬುದು ‘ಬಹುಪಾಲು’ ತನಗೆ ಗಮನದಲ್ಲಿ ಇಲ್ಲ ಎಂಬಂತೆ ಗಾಂಧಿ ಬರೆಯುತ್ತಾರೆ! ಭಾರತದ ಭೂತಕಾಲ ರಮ್ಯವಾಗಿತ್ತು. ನಮ್ಮ ಇತಿಹಾಸವನ್ನು ಕಟ್ಟಿಕೊಳ್ಳುವಾಗ ನಾವು ಬ್ರಿಟಿಶರ ಇತಿಹಾಸ ಕಲ್ಪನೆಯನ್ನು ದಾಸರಂತೆ ಅನುಸರಿಸಿ ನಮ್ಮ ರಮ್ಯ ಇತಿಹಾಸವನ್ನು ಕಟ್ಟಿಕೊಳ್ಳಲಿಲ್ಲ ಎಂಬುದು ಗಾಂಧಿ ಅವರ ಇಂಗಿತ. ಆದರೆ ಇಂಗ್ಲಿಶರ ಇತಿಹಾಸ ರಚನಾಶಾಸ್ತ್ರವನ್ನು ನಾವು ಅನುಕರಿಸಿದ್ದು ನಿಜವಾದರು ಭಾರತದ ಭೂತಕಾಲ ರಮ್ಯ ಮಾತ್ರವಾಗಿರಲಿಲ್ಲ ಎಂಬುದು ಕೂಡ ನಿಜವೇ.

ಭಾರತದ ಭೂತಕಾಲದ ಅನಿಶ್ಟಗಳ ಬಗ್ಗೆ ಗಾಂಧಿ ಸಂಪೂರ್ಣ ಕುರುಡಾಗೇನೂ ಇರಲಿಲ್ಲ; ಬಾಲ್ಯವಿವಾಹ, ಬಾಲ್ಯಮಾತೃತ್ವ, ಬಾಲ್ಯವೈಧವ್ಯ, ದೇವದಾಸಿತ್ವ, ನಿಯೋಗ ಇತ್ಯಾದಿಗಳನ್ನು ಉಲ್ಲೇಖಿಸುತ್ತಾರೆ. ಆದರೆ ಜಾತಿಪದ್ಧತಿ, ಅಸ್ಪøಶ್ಯತೆ ಇಂಥವನ್ನು ಉಲ್ಲೇಖಿಸದೆ ಹೋಗುತ್ತಾರೆ. (ಪು57) ಅಶ್ಟೆ ಅಲ್ಲ; ‘ನಾಗರೀಕತೆ ಅನ್ನುವುದು ಶುದ್ಧ ಅಧರ್ಮ. ಯೂರೋಪಿನಲ್ಲಿ (ಗೃಹಲಕ್ಶ್ಮಿಯರಾಗಿ,) ಮನೆಯ ಅರಸಿಯರಾಗಿ ಇರಬೇಕಾದ ಹೆಂಗಸರು ಬೀದಿ ಬೀದಿ ಅಲೆಯುತ್ತಿರುತ್ತಾರೆ.’ (ಪು26) ಎನ್ನುತ್ತ ಹೆಂಗಸರಿಗು ಮತಾಧಿಕಾರ ಬೇಕು ಎಂಬ ಚಳವಳಿ ಬೆಳೆಯಲು ಇದು ಒಂದು ಕಾರಣವಾಗಿದೆ ಎನ್ನುತ್ತಾರೆ. ಆಗ್ಗೆ 1903ರ ಹೊತ್ತಿಗೆ ಇಂಗ್ಲೆಂಡಿನಲ್ಲಿ ಆರಂಭವಾದ ಮಹಿಳೆಯರ ಮತ ಚಲಾವಣೆಯ ಸಮಾನ ಹಕ್ಕಿನ ಹೋರಾಟ ‘ಸಫ್ರಜೆಟ್ ಚಳವಳಿ’ಯನ್ನು ಗಾಂಧಿ ಹಿಂದ್ ಸ್ವರಾಜ್‍ನಲ್ಲಿ ಹೀಗಳೆಯುತ್ತಾರೆ! ಲಿಂಗನ್ಯಾಯ ಮತ್ತು ಸಾಮಾಜಿಕ ನ್ಯಾಯಗಳ ಬಗ್ಗೆ ಆನಂತರದಲ್ಲಿ ಗಾಂಧಿ ಬದಲಾದರು ಎನ್ನುವುದು ನಮಗೆಲ್ಲ ತಿಳಿದಿದೆ. 1941ರಲ್ಲಿ ಬರೆದ ‘ನಿರ್ಮಾಣ ಕಾರ್ಯಕ್ರಮ’ ಎಂಬ ಕಿರುಪುಸ್ತಿಕೆಯಲ್ಲಿ ಅದನ್ನೆಲ್ಲ ತಿಳಿಸಿದ್ದಾರೆ. 1915ರಲ್ಲೆ ಅಹಮದಾಬಾದ್‍ನಲ್ಲಿ ನಿರ್ಮಿಸಿದ ಸತ್ಯಾಗ್ರಹ ಆಶ್ರಮಕ್ಕೆ ಅಸ್ಪøಶ್ಯ ಕುಟುಂಬ ಒಂದನ್ನು ಗಾಂಧಿ ಸೇರಿಸಿಕೊಳ್ಳುತ್ತಾರೆ. ಆದರೆ ಹಿಂದ್ ಸ್ವರಾಜ್ ಬರೆದ ಕಾಲಕ್ಕೆ ಈ ಬಗ್ಗೆ ಗಾಂಧಿಗೆ ಅಂತಹ ಸಮತೆಯ ನಿಲುವು ಇರಲಿಲ್ಲ ಎಂಬುದು ಮಾತ್ರ ನಿಜ.

ಇಂಗ್ಲಿಶ್ ಮೂಲಕ ಕಲಿಯುವುದನ್ನು ತೀವ್ರವಾಗಿ ವಿರೋಧಿಸುವ ಗಾಂಧಿ ಭಾರತದಲ್ಲಿ ಹಿಂದಿ ಸಾರ್ವರ್ತ್ರಿಕ ಭಾಶೆ ಆಗಬೇಕು ಎನ್ನುತ್ತಾರೆ. ಇಡಿ ಭಾರತದ ಜನರೆಲ್ಲ ಪರಸ್ಪರ ಸಂವಹನ ನಡೆಸಲು ಒಂದು ಸಮಾನ ಭಾರತೀಯ ಭಾಶೆ ಯಾವುದಾದರು ಇರಬೇಕು ಎನ್ನುವ ಹಿನ್ನೆಲೆಯಲ್ಲಿ ಹಿಂದಿ ಅಂತಹ ಸಂವಹನ ಸಾಧನ ಆಗಬೇಕು ಎಂಬುದು ಗಾಂಧಿ ನಿಲುವು. ‘ನಿರ್ಮಾಣ ಕಾರ್ಯಕ್ರಮ’ದಲ್ಲಂತು ಹಿಂದಿಯನ್ನು ಸ್ಪಶ್ಟವಾಗಿ ರಾಶ್ಟ್ರಭಾಶೆ ಆಗಬೇಕು ಎಂದೇ ಹೇಳುತ್ತಾರೆ. ಈ ಬಗ್ಗೆ ನಾವೆಲ್ಲ ಭಾಶೆಯ ಅಂಧಾಭಿಮಾನವಿಲ್ಲದೆ ಸಾವಧಾನದಿಂದ ಸ್ವಾತಂತ್ರ್ಯ ಬಂದ ಹೊಸತರಲ್ಲೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಆದರೆ ಈಗ ಕಾಲ ಮಿಂಚಿ ಹೋಗಿದೆ. ಭಾರತದ ಏಕೈಕ ಸಂವಹನ ಭಾಶೆಯಾಗಿ ಇಂಗ್ಲಿಶನ್ನು ಕಲಿತವರು ಆಯ್ಕೆ ಮಾಡಿಕೊಂಡಿದ್ದಾರೆ; ಬಡ ಭಾರತೀಯರ ಆಯ್ಕೆಯಾಗಿ ಹಿಂದಿ ಉಳಿದುಕೊಂಡಿದೆ. ಅಕ್ಶರ ಅಸಮಾನತೆಯನ್ನು ಒಡೆಯುವ ಸಾಧನ ಆಗಬೇಕು; ಆದರೆ ಇಂಗ್ಲಿಶ್ ಭಾಶೆ ಇಂದು ನಮ್ಮಲ್ಲಿ ಉನ್ನತ ಮತ್ತು ಅಧೀನ ಎಂಬಂತೆ ವರ್ಗಗಳನ್ನು ನಿರ್ಮಿಸುವ ಸಾಧನ ಆಗುತ್ತಿದೆ! ಹಲವು ಬಗೆಯ ಇಂಗ್ಲಿಶ್ ಜ್ಞಾನ ಎಂದರೆ ಹಲವು ಬಗೆಯ ಅಂತಸ್ತುಗಳ ನಿರ್ಮಾಣ ಎಂಬಂತೆ ಆಗುತ್ತಿದೆ.

ವೈದ್ಯಕಾರ್ಯ ಮತ್ತು ವಕೀಲಿಕೆ ಎರಡನ್ನೂ ವಿರೋಧಿಸುವ ಗಾಂಧಿ ಹಣಕ್ಕಾಗಿ, ಕೀರ್ತಿಗಾಗಿ, ಅಂತಸ್ತಿಗಾಗಿ ಮಾಡುವ ಯಾವ ಉದ್ಯೋಗವೂ ಘನತೆಯುಳ್ಳ ಉದ್ಯೋಗ ಅಲ್ಲ ಎನ್ನುತ್ತಾರೆ. ‘ಇಂಗ್ಲಿಶ್ ವೈದ್ಯವನ್ನು ಕಲಿಯುವುದೆಂದರೆ ನಮ್ಮ ಗುಲಾಮಗಿರಿಯನ್ನು ಧೃಡಪಡಿಸಿದ ಹಾಗೆ’ (ಪು53) ಎನ್ನುವ ಗಾಂಧಿ ‘ವಕೀಲರು ಹಿಂದೂಸ್ಥಾನವನ್ನು ಗುಲಾಮಗಿರಿಗೆ ನೂಕಿದ್ದಾರೆ; ಇಂಗ್ಲಿಶರ ರಾಜ್ಯವನ್ನು ಗಟ್ಟಿ ಮಾಡಿದ್ದಾರೆ’ (ಪು47) ಎನ್ನುತ್ತಾರೆ. ಆಸ್ಪತ್ರೆ ಮತ್ತು ಕೋರ್ಟು ವ್ಯವಸ್ಥೆಗಳೆರಡನ್ನೂ ಗಾಂಧಿ ಅಸಮತೆಯ ಕೂಪಗಳೆಂದು, ನಾಗರೀಕತೆಯ ಶಾಪಗಳೆಂದು ನಿರಾಕರಿಸಬೇಕು ಎನ್ನುತ್ತಾರೆ. ವಕೀಲ ಮತ್ತು ವೈದ್ಯ ಇಬ್ಬರೂ ತಮ್ಮ ವೃತ್ತಿ ಬಿಟ್ಟು ಕೈಮಗ್ಗ ಹಿಡಿಯಬೇಕು ಎನ್ನುತ್ತಾರೆ. ಜ್ಞಾನದ ದುಡಿಮೆ ಶ್ರೇಶ್ಠವಲ್ಲ; ದೈಹಿಕ ದುಡಿಮೆ ಕನಿಶ್ಟವಲ್ಲ ಎಂಬುದು ಗಾಂಧಿಯ ಪ್ರತಿಪಾದನೆ. ಗಾಂಧಿಗೆ ಯಾವುದೇ ಜ್ಞಾನ ಮೇಲೂ ಅಲ್ಲ ಕೀಳೂ ಅಲ್ಲ. ವೃತ್ತಿ, ಕಸುಬು, ಜ್ಞಾನಗಳನ್ನು ತರತಮವಾಗಿ ನಿರ್ವಚಿಸುವುದು ಮತ್ತು ನಡೆಸಿಕೊಳ್ಳುವುದನ್ನು ಗಾಂಧಿ ತೀವ್ರವಾಗಿ ವಿರೋಧಿಸುತ್ತಾರೆ. ಹಾಗೆಯೆ ಯಾವುದೇ ಜ್ಞಾನಗಳು ಜನತೆಯನ್ನು ತುಳಿಯಲು, ಶೋಶಿಸಲು ಬಳಕೆ ಆಗುವುದನ್ನು ಗಾಂಧಿ ವಿರೋಧಿಸುತ್ತಾರೆ. ಆದರೆ ನಾವಿಂದು ಬೆವರನ್ನು ಅವಮಾನಿಸುವ ಕಾಲದಲ್ಲಿದ್ದೇವೆ!

ಒಂದು ಸಂದರ್ಭದಲ್ಲಿ ಗಾಂಧಿ ‘ಸೋಗು ಹಾಕುವ ವೈದ್ಯರಿಗಿಂತ ನಮಗೆ ಚೆನ್ನಾಗಿ ಪರಿಚಯ ಇರುವ ಅಳಲೆಕಾಯಿ ಪಂಡಿತರೆ ಲೇಸಲ್ಲವೆ?’ ಎಂದೂ ಕೇಳುತ್ತಾರೆ. (ಪು53) ಗಾಂಧಿಯೇನೋ ತಮ್ಮ ಕಾಲಕ್ಕೆ ಒಳಿತು ಎಂದು ಕಂಡದ್ದನ್ನು ಹೇಳಿದರು. ಆದರೆ ಅವರು ಹೇಳಿದ ಪ್ರತಿಯೊಂದನ್ನು ನಾವು ಕಣ್ಣುಪಟ್ಟಿ ಕಟ್ಟಿಕೊಂಡು ಅನುಸರಿಸಬೇಕಿಲ್ಲ. ಉನ್ನತ ಅಂತಸ್ತನ್ನು ಕೆಲವೇ ಜ್ಞಾನಗಳಿಗೆ ನೀಡುವುದು ಅಸಮಾನತೆಯನ್ನು ಸ್ಥಿರಗೊಳಿಸಿದ ಹಾಗೆ ಹೌದು ನಿಜ. ಅದಕ್ಕೆ ಇಂದು ಏನು ಮಾಡಬೇಕು? ಜ್ಞಾನವನ್ನು ಹಣದಿಂದ ಪಡೆಯುವ ವ್ಯವಸ್ಥೆಯನ್ನೆ ನಾವು ಬದಲಿಸಬೇಕು. ಯಾವುದೇ ಜ್ಞಾನವನ್ನು ಖಾಸಗಿ ಆಸ್ತಿಯನ್ನಾಗಿ ಮಾಡುವುದನ್ನು; ಅತಿಬೆಲೆಯ ಸರಕು/ಸೇವೆಯನ್ನಾಗಿ ಮಾಡುವುದನ್ನು ತಿರಸ್ಕರಿಸಬೇಕು. ಯಾವೊಂದು ಜ್ಞಾನವನ್ನೂ ಕೆಲವೊಂದು ಜನರ ಸ್ವತ್ತು ಎಂದು ಮಾಡಬಾರದು. ಕನಿಶ್ಠಪಕ್ಶ ವಕೀಲಿಕೆ (ನ್ಯಾಯಜ್ಞಾನ), ವೈದ್ಯವೃತ್ತಿ (ಔಶಧಜ್ಞಾನ) ಇಂಥವನ್ನು ಸಾರ್ವಜನಿಕ ಜ್ಞಾನಗಳನ್ನಾಗಿ ಎಲ್ಲರಿಗೂ ಲಭ್ಯ ಆಗುವಂತೆ ಮಾಡಬೇಕು. ಜ್ಞಾನಗಳ ಸರಕೀಕರಣ, ಸ್ವತ್ತೀಕರಣ, ಶಿಸ್ತೀಕರಣ, ಖಾಸಗೀಕರಣಗಳನ್ನು ನಿಲ್ಲಿಸಬೇಕು. ಮೊದಲಿಗೆ ಬೌದ್ಧಿಕ ಆಸ್ತಿ ಕಲ್ಪನೆಯನ್ನೆ ನಿಶೇಧಿಸಬೇಕು. ಇದನ್ನೆಲ್ಲ ನಾವು ಮಾಡಲು ಬಯಸಿದರೂ ನಮ್ಮ ಕ್ರೋನಿಕ್ಯಾಪಿಟಾಲಿಸಂ ಅಡಿಯಾಳಾದ ‘ಪ್ರಜಾ?ಪ್ರಭುತ್ವ’ ಬಿಡುತ್ತದೆಯೆ? ಇಲ್ಲಿ ಕಾನೂನು ಪ್ರಕಾರ ಎಲ್ಲವೂ ಎಲ್ಲರಿಗೂ ಸಮಾನವಾಗಿ ಲಭ್ಯವಿದೆ. ಆದರೆ ವಾಸ್ತವವಾಗಿ ಎಲ್ಲವೂ ಎಲ್ಲರಿಗೂ ಸಮಾನವಾಗಿ ಲಭ್ಯವಿಲ್ಲ.

ಬ್ರಿಟನ್ನಿನ 800 ವರ್ಶದ ಹಸುಗೂಸು ಪಾರ್ಲಿಮೆಂಟನ್ನು ಗಾಂಧಿ ಬಂಜೆ, ವೇಶ್ಯೆ ಎಂದೆಲ್ಲ ನಿಂದಿಸುತ್ತಾರೆ. ಬಂಜೆ ಮತ್ತು ವೇಶ್ಯೆ ಎಂಬ ಪದಗಳೇ ಹೆಂಗಸರನ್ನು ಬೈಯ್ಯುವ ಪದಗಳಾಗಿರುವುದರಿಂದ ನಾವು ಇಂಥ ಪದಗಳನ್ನೆಲ್ಲ ನಿಶೇಧಿಸಬೇಕಿದೆ. ತಾಯ್ತನವನ್ನು ವೈಭವಿಸುವ, ಲೈಂಗಿಕತೆಯನ್ನು ಕೀಳೆಂದು ಭಾವಿಸುವ ಕಾಲಘಟ್ಟವನ್ನು ನಾವು ದಾಟಿದ್ದೇವೆ. ಗಾಂಧಿ ಬ್ರಿಟಿಶ್ ಪಾರ್ಲಿಮೆಂಟನ್ನು ಹೀಗೆ ನಿಂದಿಸುವಾಗ ಅವರಿಗೆ ಅವರ ಸತ್ವಹೀನ ಆಡಳಿತ ವ್ಯವಸ್ಥೆಯನ್ನು ನಿರಾಕರಿಸುವ ಉಮೇದು ಇದೆಯೆ ವಿನಾ ಹೆಂಗಸರನ್ನು ಅವಮಾನಿಸುವ ಇಚ್ಛೆ ಇಲ್ಲ ಎಂಬುದು ನಮಗೆ ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಆದರೂ ಲಿಂಗನ್ಯಾಯವನ್ನು ಒಪ್ಪತಕ್ಕವರು ಇಂದು ಇಂತಹ ಶಬ್ದಗಳನ್ನು ಬಳಸಕೂಡದು.

ಬ್ರಿಟಿಶ್ ಪಾರ್ಲಿಮೆಂಟನ್ನು ನಿಂದಿಸಿ ನಿರಾಕರಿಸುವಾಗ ಗಾಂಧಿ ಅಲ್ಲಿನ ಆಯ್ಕೆಯಾದ ಸದಸ್ಯರು ಮತ್ತು ಮೀಡಿಯಾಗಳು ತಮ್ಮ ತಮ್ಮ ಪಕ್ಶಗಳಿಗೆ ತಮ್ಮನ್ನು ಮಾರಿಕೊಂಡಿರುವುದನ್ನೂ ಗೇಲಿ ಮಾಡುತ್ತಾರೆ. ಆ ಕಾಲಕ್ಕೆ 700 ವರ್ಶ ವಯಸ್ಸಾದರೂ ರಿಪೇರಿ ಆಗದೆ ಏನೆಲ್ಲ ರೋಗಕ್ಕೆ ಅಲ್ಲಿನ ಪ್ರಜಾಪ್ರಭುತ್ವ ತಗುಲಿಕೊಂಡಿತ್ತೋ ಅಂಥವೇ ರೋಗಗಳಿಗೆ ಇಂದು 75 ವರ್ಶ ವಯಸ್ಸಾಗಿರುವ ನಮ್ಮ ಪ್ರಜಾಪ್ರಭುತ್ವ ಕೂಡ ತಗುಲಿಕೊಂಡಿದೆ! ಇದನ್ನು ನೋಡಿದರೆ ಅಧಿಕಾರ ರಾಜಕಾರಣ ಮನುಶ್ಯರ ಘನತೆಯನ್ನು ನಾಶ ಮಾಡಿ ಎಂಥ ವ್ಯವಸ್ಥೆಯನ್ನೂ ಭ್ರಶ್ಟಗೊಳಿಸಬಲ್ಲುದು ಎನ್ನಿಸುತ್ತದೆ. ನಾವೀಗ ಪ್ರಜಾಪ್ರಭುತ್ವವನ್ನೆ ಅನೀತಿಗಿಳಿಸಿದ್ದೇವೆ! ರಾಜಕಾರಣಿಗಳು ಪಕ್ಷಗಳ ಮುಖವಾಣಿಗಳಾಗಿದ್ದಾರೆ ಮಾತ್ರವಲ್ಲ ಇಂದಿನ ನಮ್ಮ ಜನತೆಯೆ ಪಕ್ಶಕುರುಡಿಗೆ ಬಿದ್ದುಹೋಗಿದೆ. ಇನ್ನು ನಮ್ಮ ಮಾದ್ಯಮಗಳನ್ನಂತೂ ಕೇಳುವಂತೆಯೆ ಇಲ್ಲ! ಅವೆಲ್ಲವೂ ತಮ್ಮನ್ನು ಅಧಿಕಾರಕ್ಕೆ ಮಾರಿಕೊಂಡಿವೆ! ಇದನ್ನು ಗಾಂಧಿ ಅಂದೇ ಮುಂಗಂಡಿದ್ದರು. ಗಾಂಧಿ ಹಿಂದ್ ಸ್ವರಾಜ್‍ನಲ್ಲಿ ಮಾತ್ರವಲ್ಲ ನಿರ್ಮಾಣ ಕಾರ್ಯಕ್ರಮದಲ್ಲು ನಾವೆಲ್ಲ ಹಳ್ಳಿಗೆ ಮರಳಿ ಹೋಗಬೇಕು ಎನ್ನುತಾರೆ. ಆದರೆ ನಾವೆಲ್ಲ ಹಳ್ಳಿಗಳನ್ನು ಭ್ರಷ್ಟಗೊಳಿಸಿದ್ದೇವೆ. ಅನೀತಿಗೊಳಿಸಿದ್ದೇವೆ. ನಗರ ಹಳ್ಳಿಗಳ ನಡುವಿನ ವ್ಯತ್ಯಾಸವನ್ನೆಲ್ಲ ಅಳಿಸುತ್ತಿದ್ದೇವೆ. ಸೌಕರ್ಯಗಳಿಗಿಂತ ಕೇಡುಗಳನ್ನು ಹಳ್ಳಿಗಳಿಗೆ ರವಾನಿಸುತ್ತಿದ್ದೇವೆ!

ಗಾಂಧಿ ತಮ್ಮ ವಾರಸುದಾರ ಆಗಿ ನೆಹರೂರನ್ನು ಆರಿಸಿಕೊಂಡರು. ಭಾರತದ ತುಂಬೆಲ್ಲ ಆಗ ನೆಹರೂ ಮನಸ್ಸಿನವರೆ ಹೆಚ್ಚು ತುಂಬಿದ್ದರು ಕೂಡ. ಅದರಿಂದ ನಾವಿಂದು ಗಾಂಧಿ ಮಾರ್ಗದಿಂದ ಬಹಳ ದೂರ ಬಂದಿದ್ದೇವೆ. ‘ದೇಶಭಕ್ತಿ ಎಂದರೆ ಆಧುನಿಕ ನಾಗರೀಕತೆಯಿಂದ ದೂರ ಇರುವುದು.’ (ಪು57) ಆದರೆ ನಮ್ಮ ಇಂದಿನ ದೇಶಭಕ್ತಿಯ ರೂಪವೇ ಬೇರೆ. ದೇಶದ್ರೋಹದ ಹೆಸರಿನಲ್ಲಿ ಒಳ್ಳೆಯವರನ್ನೆಲ್ಲ ಜೈಲಿಗೆ ಅಟ್ಟುವುದೆ ದೇಶಭಕ್ತಿ ಆಗಿರುವ ಕಾಲಜಾಲದಲ್ಲಿ ನಾವಿದ್ದೇವೆ. ‘ದೇಹದ ರೋಗಕ್ಕಿಂತ ಆತ್ಮದ ರೋಗ ವಾಸಿ ಮಾಡುವುದು ಉತ್ತಮ’ (ಪು105) ಎಂದು ಗಾಂಧಿ ಹೇಳಿದ ಮಾತು ನಿಜ. ನಾವು ಬರಿ ದೇಹದ ರೋಗಕ್ಕೆ ಮಾತ್ರ ಮದ್ದು ಅರೆಯುತ್ತಿದ್ದೇವೆ. ನಮ್ಮ ಮನಸ್ಸುಗಳು ಎಲ್ಲಿಯವರೆಗೆ ಕೊಳೆತೇ ಇರುತ್ತವೋ ಅಲ್ಲಿಯವರೆಗೆ ದೇಹಕ್ಕೆ ಇಕ್ಕುವ ಮದ್ದು ವ್ಯರ್ಥ. ಅದರಿಂದ ದೇಹವು ಆರೋಗ್ಯ ಹೊಂದಲಾರದು. ಯಾವುದೇ ಔಶಧಗಳಿಂದಲೂ ಗುಣವಾಗದ ಕಾಯಿಲೆ ಆತ್ಮದ ರೋಗ. ಅದಕ್ಕೆ ಸ್ವರಾಜ್ಯದ ಚಿಂತನೆಗಳೇ ಔಶಧ. ಆದರೆ ನಾವಿಂದು ಗಾಂಧಿಯ ಸ್ವರಾಜ್ಯದ ಕಲ್ಪನೆಗಳನ್ನು ಜಾರಿ ಮಾಡಿಕೊಳ್ಳಲಾರದಶ್ಟು ದೂರ ಬಂದುಬಿಟ್ಟಿದ್ದೇವೆ. ಅದನ್ನೆ ನೇರಾನೇರ ಅನುಕರಿಸಲು ನಮ್ಮಿಂದ ಖಂಡಿತಾ ಆಗದು. ಆದರೆ ಅದರ ರೂಪಾಂತರಿತ ಔಶಧವನ್ನಾದರೂ ನಾವು ಕಂಡುಕೊಂಡು ಬಳಸಲೇಬೇಕು. ಇಲ್ಲವಾದರೆ ನಾವು ಕೊಳೆತು ನಾರುವುದು ಗ್ಯಾರಂಟಿ.

ಈ ಅಂಕಣದ ಹಿಂದಿನ ಬರೆಹಗಳು:
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...