Date: 31-12-2021
Location: ಬೆಂಗಳೂರು
‘ದಾವಣಗೆರೆಯ ವೃತ್ತಿರಂಗಭೂಮಿ ಚರಿತ್ರೆ ಮಾತ್ರವಲ್ಲ ಸಮಗ್ರ ಕರ್ನಾಟಕದ ರಂಗೇತಿಹಾಸವನ್ನೇ ಮಸ್ತಕದ ತುಂಬಾ ತುಂಬಿಕೊಂಡಿದ್ದ ನೂರಾರು ರಂಗಪೋಷಕರ ಊರು ದಾವಣಗೆರೆ’ ಎನ್ನುತ್ತಾರೆ ಲೇಖಕ, ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ದಾವಣಗೆರೆಯ ರಂಗಸಂಸ್ಕೃತಿಯ ಕುರಿತು ವಿಶ್ಲೇಷಿಸಿದ್ದಾರೆ.
ದಾವಣಗೆರೆ ಭೌಗೋಳಿಕವಾಗಿ ಕರ್ನಾಟಕದ ನಟ್ಟನಡುವಿನ ಪ್ರದೇಶ. ದಾವಣಗೆರೆಗೆ ಕನ್ನಡನಾಡಿನ ಎಲ್ಲ ಜಿಲ್ಲೆಗಳು ಸಮಾನಾಂತರದಲ್ಲಿದ್ದು ಇದು ಕನ್ನಡನಾಡಿನ ಕೇಂದ್ರಬಿಂದುವಿನಂತಿದೆ. ಅಂತೆಯೇ ಇದನ್ನು " ಕರ್ನಾಟಕದ ನಡುಸೀಮೆ ನಾಡು" ಎಂದು ಕರೆಯಬಹುದು. ನೀವು ಥಟ್ಟಂತ ಪುಟ್ಟ ಕರ್ನಾಟಕ ಕಾಣಬೇಕೆಂದರೆ ದಾವಣಗೆರೆ ನೋಡಿದರೆ ಸಾಕು. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಹಳೇ ಮೈಸೂರು ಪ್ರದೇಶಗಳ ಜನವಸತಿಯ ಪ್ರಾಂತ್ಯವಿದು. ಸಹಜವಾಗಿ ಸಮಸ್ತ ಕನ್ನಡನಾಡಿನ ಪ್ರಾದೇಶಿಕ ಭಾಷೆ, ಸಾಂಸ್ಕೃತಿಕ ಬನಿ, ಊಟ, ಉಡುಗೆ, ತೊಡುಗೆ, ನಡವಳಿಕೆಗಳನ್ನು ಇಲ್ಲಿ ಕಾಣಬಹುದು. ಹೀಗೆ ಸಮಗ್ರ ಕರ್ನಾಟಕದ ಜನಸಂಸ್ಕೃತಿಯ ಪ್ರಾತಿನಿಧಿಕ ಬೀಡು, ದಾವಣಗೆರೆ ಎಂಬ ನಡುಸೀಮೆ ನಾಡು.
ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ
ಸಂಸ್ಕೃತದೊಳಿನ್ನೇನು.?
ಮೂರೂವರೆ ಶತಮಾನಗಳ ಹಿಂದೆಯೇ (ಕ್ರಿ.ಶ. 1675) ಕನ್ನಡವನ್ನು ಸುಲಿದ ಬಾಳೆಹಣ್ಣು, ಸಿಗುರು ತೆಗೆದ ಕಬ್ಬು, ಉಷ್ಣವಳಿದ ಉಗುರು ಬೆಚ್ಚನೆಯ ಕೆನೆಹಾಲು ಎಂದು ಸರಳ್ಗನ್ನಡದ ಸುಮಧುರತೆ ಕುರಿತು ಹೇಳಿದ್ದು ವಿಮಲ ಭಾವದ ಅನುಭಾವಿ ಕವಿ ಮಹಾಲಿಂಗರಂಗ. ಇಂತಹ ತಿಳಿಗನ್ನಡದ ನುಡಿಯಲಿ ತನ್ನ ತಾನು ತಿಳಿದು ಮೋಕ್ಷ ಕಾಣುವುದು ಲೇಸು. ನಮಗೆ ಸರಳ ಕನ್ನಡವೇ ಸಾಕು ಸಂಸ್ಕೃತ ಯಾತಕೆ ಬೇಕು.? ಎಂದು ಕನ್ನಡದ ಸುಶೀಲ ಸಂಸ್ಕೃತಿಯ ಕುರಿತು ಹೆಮ್ಮೆ ತಾಳಿದ ಕವಿ ಮಹಾಲಿಂಗರಂಗ ಇದೇ ನಮ್ಮ ದಾವಣಗೆರೆ ಎಂಬ ನಡುಸೀಮೆ ನಾಡಿನವರು.
ಹೀಗೆ ಇಲ್ಲಿನ ಅನೇಕ ಮಂದಿ ಕವಿಗಳು, ಸಂಶೋಧಕರು, ವಿದ್ವಾಂಸರು ಕನ್ನಡ ಭಾಷೆ, ನಾಡನ್ನು ಕೊಂಡಾಡಿದ ಹತ್ತು ಹಲವು ಸಾಂಸ್ಕೃತಿಕ ಸಂಗತಿಗಳಿವೆ. ಏಕೀಕರಣದ ಪೂರ್ವದಲ್ಲಿ ಅಖಂಡ ಕರ್ನಾಟಕ ರಾಷ್ಟ್ರೀಯ ನಿರ್ಮಾಣ ಪರಿಷತ್ತು (ಅ.ಕ.ರಾ.ನಿ.ಪ.) ಸಾಂಸ್ಕೃತಿಕ ಮತ್ತು ಭೌಗೋಳಿಕ ಕನ್ನಡ ನಾಡಿನ ಏಕೀಕರಣದ ತನ್ನ ಚಟುವಟಿಕೆಗಳನ್ನು ಮೆರೆದಿದೆ. ನಡುಸೀಮೆ ನಾಡು ದಾವಣಗೆರೆ ಶಹರದಲ್ಲಿ ಅದು ತನ್ನ ಮಹತ್ವದ ಸಮಾವೇಶಗಳನ್ನು ಜರುಗಿಸಿ ಚೆಲುವ ಕನ್ನಡನಾಡಿನ ಉದಯ ಕುರಿತು, ಕನ್ನಡದ ರಾಷ್ಟ್ರೀಯತೆ ಕುರಿತು ಅಷ್ಟೇ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿರುವುದು ಉಲ್ಲೇಖನೀಯ.
ಬದಲಾದ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳಿಂದಾಗಿ ದಾವಣಗೆರೆ ಸ್ವತಂತ್ರ ಜಿಲ್ಲೆಯಾಗಿ (15-08-1997) ಇದೀಗ ಅದಕ್ಕೆ ಇಪ್ಪತ್ತೈದರ ಉಕ್ಕುವ ಹರೆಯದ ಸಡಗರ. ಸಹಜವಾಗಿ ರಜತ ಮಹೋತ್ಸವದ ಸಂಭ್ರಮ. ವರ್ತಮಾನದಲ್ಲಿ ನಿಂತು ನಡುಸೀಮೆ ನಾಡಿನ ಸಾಂಸ್ಕೃತಿಕ ಹಿರಿಮೆ, ಗರಿಮೆಗಳನ್ನು ನೋಡುವುದಾದರೆ ಅವು ಗತ ವೈಭವಗಳಂತೆ ಗೋಚರಿಸಬಲ್ಲವು. ಅದರಲ್ಲೂ ವಿಶೇಷವಾಗಿ ಈ ನಡುನಾಡಿನ ರಂಗಭೂಮಿ ಚರಿತ್ರೆಯು ಅಧ್ಯಯನಕಾರರಿಗೆ, ಸಂಶೋಧಕರಿಗೆ ಅಪಾರ ಶ್ರೀಮಂತಿಕೆಯ ವಿಫುಲವಾದ ರಂಗಸಂಸ್ಕೃತಿಯ ಆಕರ ಸಂಕಥನಗಳ ರಂಗಕಣಜವೇ ಆಗಿರುವುದು ಅತಿಶಯೋಕ್ತಿಯೇನಲ್ಲ.
ಕನ್ನಡದ ಪ್ರಥಮ ಸಾಮಾಜಿಕ ನಾಟಕಕಾರ ಟಿ. ಎ. ಕೋಲಶಾಂತಪ್ಪ (1860-1940) ಡಾವಣಗೇರಿಯವರು. ಹಾಗೆ ನೋಡಿದರೆ ಅವರು ಮೂಲತಃ ಪಕ್ಕದ ರಾಣೇಬೆನ್ನೂರು ತಾಲೂಕು ತುಮ್ಮಿನಕಟ್ಟೆಯ ಐರಣಿ ಮನೆತನದವರು. ಅಡತಿ ಅಂಗಡಿಯ ದಲ್ಲಾಳಿ ಮಂಡಿ ವ್ಯಾಪಾರಕ್ಕೆ ಬಂದು ಡಾವಣಗೇರಿಯ ಖಾಯಂ ನಿವಾಸಿಗಳಾದವರು ಕೋಲ ಶಾಂತಪ್ಪನವರು. ಅವರ ರಂಗಬದುಕಿನ ಭೂಮತ್ವ ಅರಳಿದ್ದು ಡಾವಣಗೇರಿಯೆಂಬ ವಾಣಿಜ್ಯ ನಗರಿಯಲ್ಲಿ. ಅವರ ವೃತ್ತಿ ವ್ಯಾಪಾರ, ಪ್ರವೃತ್ತಿಯಿಂದ ವೃತ್ತಿರಂಗಭೂಮಿಯ ನಾಟಕಕಾರ.
ಸ್ತ್ರೀ, ಬಿ. ಎ., ಭಾಪುರೇ ಕರ್ಣ, ಉತ್ತರ ಭೂಪ, MLA, ಮಿಠಾಯಿ ಬುಟ್ಟಿ, ಚಲ್ತಿದುನಿಯಾ, ಅಸ್ಪೃಶ್ಯತೋದ್ಧಾರ... ಹೀಗೆ ಹತ್ತಾರು ಉತ್ತಮ ನಾಟಕಗಳನ್ನು ಬರೆದಿದ್ದಾರೆ. ಹಲಗೇರಿಯ ಕುಡುಗೋಲು ಜೆಟ್ಟೆಪ್ಪನವರ ಶ್ರೀ ಹಾಲಸಿದ್ಧೇಶ್ವರ ಪ್ರಾಸಾದಿಕ ಲೋಕಸೇವಕ ಸಾಗ್ರ ಸಂಗೀತ ನಾಟಕ ಮಂಡಳಿಯು ಇವರ ಎಲ್ಲ ನಾಟಕಗಳನ್ನು ವರುಷಗಟ್ಟಲೇ ಪ್ರದರ್ಶನ ಮಾಡಿದೆ. ಮೈಸೂರು ಮಹಾರಾಜರ ಆಮಂತ್ರಣದ ಮೇರೆಗೆ ಅರಮನೆಯಲ್ಲೂ ಅವು ಪ್ರದರ್ಶನ ಕಂಡಿವೆ. ಶ್ರೀಕೃಷ್ಣರಾಜೇಂದ್ರ ಒಡೆಯರ್ ಅವರಿಂದ ಮೆಚ್ಚುಗೆ ಗಳಿಸಿವೆ. ಮಹಾರಾಜರು ಹಲಗೇರಿ ನಾಟಕ ಕಂಪನಿ ಕಲಾವಿದರು ಮತ್ತು ಕೋಲ ಶಾಂತಪ್ಪನವರ ರಂಗಕವಿತ್ವ ಮೆಚ್ಚಿ ಸನ್ಮಾನಿಸಿ ಸನ್ಮಾನಪತ್ರ ನೀಡಿದ್ದಾರೆ.
ಶ್ರೀಜಯಲಕ್ಷ್ಮಿ ನಾಟಕ ಸಂಘವು ಈ ಊರಿನ ಮೊಟ್ಟ ಮೊದಲ ನಾಟಕ ಕಂಪನಿ. 1918ರಲ್ಲಿ ಶ್ರೀ ಕಂಚಿಕೇರಿ ಕೊಟ್ರಬಸಪ್ಪನವರು ಹುಟ್ಟು ಹಾಕಿದ ಇದು ದಾವಣಗೆರೆಯ ಪ್ರಥಮ ನಾಟಕ ಕಂಪನಿ. ಈ ನಾಟಕ ಕಂಪನಿಯ ಸಂಸ್ಥಾಪಕ ಕೊಟ್ರಬಸಪ್ಪನವರ ಮೊಮ್ಮಗ ಶ್ರೀಕಂಚಿಕೇರಿ ಶಿವಣ್ಣನವರ ಮಾಲೀಕತ್ವದಲ್ಲಿ ವಜ್ರಮಹೋತ್ಸವ (26.07.1995) ಆಚರಿಸಿಕೊಂಡಿತು.
ಕರ್ನಾಟಕ ಸರ್ಕಾರದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಶ್ರೀಮತಿ ಬಿ. ಟಿ. ಲಲಿತಾನಾಯಕ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ " ಏಷಿಯಾ ಖಂಡದಲ್ಲಿ ಗುಬ್ಬಿವೀರಣ್ಣ ನಾಟಕ ಕಂಪನಿ ಹಿರಿಮೆಯಲ್ಲಿ ಪ್ರಥಮ ಎನಿಸಿದರೆ, ಹಿರಿಮೆಯ ದ್ವಿತೀಯ ಸ್ಥಾನ ಜಯಲಕ್ಷ್ಮಿ ನಾಟಕ ಕಂಪನಿಗೆ ಸಲ್ಲುತ್ತದೆಂದು " ಕೊಂಡಾಡಿದರು. ವಜ್ರಮಹೋತ್ಸವದ ಸವಿನೆನಪಿಗಾಗಿ ಮಲ್ಲಿಕಾರ್ಜುನ ಕಡಕೋಳ ಅವರ ಸಂಪಾದಕತ್ವದ "ರಂಗಕಂಕಣ" ಎಂಬ ಸ್ಮರಣಸಂಚಿಕೆಯು ಪ್ರಕಟಗೊಂಡಿದೆ.
ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಜಯಲಕ್ಷ್ಮಿ ನಾಟಕ ಕಂಪನಿಯ ವಜ್ರಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಹೆಸರಾಂತ ನಾಟಕಕಾರ ಬಸವಲಿಂಗ ಶಾಸ್ತ್ರೀ, ಜಿ. ವಿ. ಅಯ್ಯರ್, ಏಣಗಿ ಬಾಳಪ್ಪ, ಸುಭದ್ರಮ್ಮ ಮನ್ಸೂರ, ಡಾ. ರಾಮಕೃಷ್ಣ ಮರಾಠೆ, ಚಿಂದೋಡಿ ಲೀಲಾ ಹೀಗೆ ಅನೇಕ ಮಂದಿ ರಂಗದಿಗ್ಗಜರು ವಜ್ರಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಅಂದು ಸಂಜೆ "ಅಮೋಘವರ್ಷ ನೃಪತುಂಗ" ನಾಟಕ ಯಶಸ್ವಿಯಾಗಿ ಪ್ರದರ್ಶನ ಕಂಡಿತು.
ಇಂತಹದ್ದೇ ರಂಗೇತಿಹಾಸವುಳ್ಳ ಇದೇ ಊರಿನ ಕೆ. ಬಿ. ಆರ್. ಡ್ರಾಮಾ ಕಂಪನಿಯನ್ನು 1928ರಲ್ಲಿ ಶ್ರೀಚಿಂದೋಡಿ ವೀರಪ್ಪನವರು ಸ್ಥಾಪಿಸಿದರು. ವೀರಪ್ಪನವರ ತರುವಾಯ ಅವರ ಕುಟುಂಬದ ಕಲಾವಿದೆ ಚಿಂದೋಡಿ ಲೀಲಾ ಅವರು ಕೂಡಾ ಕೆ. ಬಿ. ಆರ್. ಡ್ರಾಮಾ ಕಂಪನಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಾಹಸ ಮಾಡಿದರು. ಚಿಂದೋಡಿಯವರ ನಾಟಕ ಕಂಪನಿಗೆ ವೃತ್ತಿರಂಗಭೂಮಿಯ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನಮಾನ. ವೃತ್ತಿರಂಗ ಪರಂಪರೆಯನ್ನು ಇವತ್ತಿಗೂ ಕೆ.ಬಿ.ಆರ್. ಡ್ರಾಮಾ ಕಂಪನಿ ಉಳಿಸಿಕೊಂಡು ಬಂದಿರುವುದು ರಂಗಸಂಸ್ಕೃತಿಯ ಹೆಗ್ಗಳಿಕೆ.
ರಂಗಭೂಮಿ ಸೇವೆಗಾಗಿ ಅಂದು ಮೈಸೂರು ಮಹಾರಾಜರು ವೀರಪ್ಪನವರಿಗೆ ಚಿನ್ನದ ತೋಡೇವು ನೀಡಿ ಗೌರವಿಸಿದ್ದಾರೆ. ಚಿನ್ನದ ತೋಡೇವು ಪಡೆದ ಕಾರಣಕ್ಕಾಗಿ ಅವರು ಮನೆತನದ ಹೆಸರು "ಚಿನ್ನದ ತೋಡೇವು" ಎಂದಾಗಿಸಿಕೊಂಡರು. ಅದು ಜನಬಳಕೆಯ ಆಡುನುಡಿಯಲ್ಲಿ ಸಂಸ್ಕೃತೀಕರಣಗೊಂಡು ಚಿಂದೋಡಿ ಎಂದಾಗಿದೆ. ವೀರಪ್ಪನವರ ಮನೆತನದ ಮೂಲಹೆಸರು ಅಣ್ಣಿಗೇರಿ ಅಂತಿತ್ತು. ಬೆಂಗಳೂರಲ್ಲಿ ಜರುಗಿದ ಕೆ.ಬಿ.ಆರ್. ಡ್ರಾಮಾ ಕಂಪನಿಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಆಗಮಿಸಿದ್ದು ಉಲ್ಲೇಖನೀಯ. ಇವತ್ತಿಗೂ ಸದರಿ ಕಂಪನಿಯ ಎರಡು ಶಾಖೆಗಳು ಅಸ್ತಿತ್ವದಲ್ಲಿವೆ.
ಹೀಗೆ ವೃತ್ತಿರಂಗಭೂಮಿಯ ಆಡುಂಬೊಲವೇ ಆಗಿರುವ ದಾವಣಗೆರೆ ನಗರದಲ್ಲಿ ನೂರಕ್ಕೂ ಹೆಚ್ಚು ನಾಟಕ ಕಂಪನಿಗಳು ತಿಂಗಳು, ವರುಷಗಟ್ಟಲೇ ಮೊಕ್ಕಾಂ ಮಾಡಿ ಅವು ತಮ್ಮ ರೊಕ್ಕದ ಅಡಚಣೆಗಳನ್ನು ಬಗೆಹರಿಸಿಕೊಂಡಿವೆ. ಅಷ್ಟುಮಾತ್ರವಲ್ಲದೇ ಜನಮಾನಸದ ಸಾಂಸ್ಕೃತಿಕ ಸದಭಿರುಚಿ ವೃದ್ಧಿಸಿವೆ. ವರನಟ ಡಾ. ರಾಜಕುಮಾರ ಮತ್ತು ಅವರ ಅಂದಿನ ಸಹನಟರಾದ ಜಿ. ವಿ. ಅಯ್ಯರ್, ನರಸಿಂಹರಾಜು ಇನ್ನೂ ಅನೇಕರು ತಿಂಗಳುಗಟ್ಟಲೇ ದಾವಣಗೆರೆಯಲ್ಲಿ ಕ್ಯಾಂಪ್ ಮಾಡಿದ್ದಾರೆ.
ಕಾಕನೂರು ಯಲ್ಲಪ್ಪನವರ "ಮಹಾಕೂಟೇಶ್ವರ ನಾಟಕ ಕಂಪನಿ" ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ನಿರಂತರ ಆರು ವರ್ಷಗಳ ಕಾಲ ಕ್ಯಾಂಪ್ ಮಾಡಿ ಸದಭಿರುಚಿ ನಾಟಕಗಳ ಹುಗ್ಗಿಯ ಹೊಳೆ ಹರಿಸಿದೆ. ಅಂದಿನ ಮುಖ್ಯಮಂತ್ರಿ ದೇವರಾಜ ಅರಸರು ಇವರ ನಾಟಕಗಳನ್ನು ನೋಡಿ ಮೆಚ್ಚುಗೆ ತೋರಿದ್ದಾರೆ. ಅಂತಹದ್ದೇ ಮತ್ತೊಂದು ಸವಿನೆನಪಿನ ಸಂಗತಿಯೆಂದರೆ ಕೋಲ ಶಾಂತಪ್ಪನವರ "ಚಲ್ತಿದುನಿಯಾ" ನಾಟಕವನ್ನು ನೋಡಿ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸಿನೆಮಾಲೋಕದ ಸಂಗೀತಬ್ರಹ್ಮ ಹಂಸಲೇಖ (ಅಂದಿನ ಅವರ ಹೆಸರು ಗಂಗರಾಜು) ದಾವಣಗೆರೆಯ ಇವತ್ತಿನ ತ್ರಿಶೂಲ್ ಟಾಕೀಸ್ ಜಾಗದಲ್ಲಿ ಅವತ್ತು (1972) ಎಂಟು ತಿಂಗಳ ಕಾಲ ಅವರು ತಮ್ಮ ಕಂಪನಿ ಕ್ಯಾಂಪ್ ಮಾಡಿ ರೈತಜೀವಿ ಹಾಗೂ ಇತರೆ ರಂಗನಾಟಕಗಳ ಸುಗ್ರಾಸ ಭೋಜನ ಉಣಬಡಿಸಿದ್ದಾರೆ. ಹೆಸರಾಂತ ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಸೇರಿದಂತೆ ಇತ್ತೀಚೆಗೆ ದೊಡ್ಡದಾಗಿ ಹೆಸರು ಮಾಡಿದ ಜೇವರ್ಗಿ ರಾಜಣ್ಣನವರ ನಾಟಕ ಕಂಪನಿವರೆಗೆ ನೂರಾ ಮುವತ್ತಕ್ಕೂ ಹೆಚ್ಚು ನಾಟಕ ಕಂಪನಿಗಳು ಈ ಊರಲ್ಲಿ ಕ್ಯಾಂಪ್ ಮಾಡಿ ಹಣ ಮತ್ತು ಹೆಸರು ಎರಡನ್ನೂ ಪಡಕೊಂಡಿವೆ. ಏಕಕಾಲಕ್ಕೆ ಮುರ್ನಾಲ್ಕು ಕಂಪನಿಗಳು ಪೈಪೋಟಿ ಮೇಲೆ ಕ್ಯಾಂಪ್ ಮಾಡಿವೆ.
ಗುಬ್ಬಿ ವೀರಣ್ಣನವರ ನಾಟಕ ಕಂಪನಿಯ ರಂಗಸಜ್ಜಿಕೆ ಸಾಮಾನು ಸರಂಜಾಮುಗಳು ದಾವಣಗೆರೆಗೆ ರೈಲುವೆ ವ್ಯಾಗಿನ್ನುಗಳಲ್ಲಿ ಬರುತ್ತಿದ್ದವು. ಒಂದು ವ್ಯಾಗಿನ್ನಿನಲ್ಲಿ ಮೊಲ, ಜಿಂಕೆ, ಕುದುರೆ, ಪಾರಿವಾಳ, ನವಿಲು ಇತ್ಯಾದಿ ಪ್ರಾಣಿ ಪಕ್ಷಿಗಳು ಮತ್ತು ಅವಕ್ಕೆ ಸಂಬಂಧಿಸಿದ ಸಾಮಾನು ಸರಂಜಾಮುಗಳೇ ತುಂಬಿರುತ್ತಿದ್ದವು. ಸಣ್ಣದೊಂದು ಸರ್ಕಸ್ ಕಂಪನಿಯೇ ಬಂದಿಳಿದ ಅನುಭವ ನೋಡುಗರಿಗೆ. ಅಂತೆಯೇ ಆಗ ಕಂಪನಿ ನಾಟಕಗಳನ್ನು ನೋಡುವುದೆಂದರೆ ಮನೆಮಂದಿಯ ಕಣ್ಮನಗಳ ತುಂಬೆಲ್ಲ ಹಬ್ಬ, ಜಾತ್ರೆಯ ಸಡಗರ, ಸಂಭ್ರಮಗಳ ಸುಗ್ಗಿ.
ಹಳ್ಳಿ, ಹಳ್ಳಿಗಳಿಂದ ಹೆಣ್ಣು, ಗಂಡು, ಮಕ್ಕಳು, ಮುದುಕರು ಹೀಗೆ ಕುಟುಂಬದ ಸರ್ವ ಸದಸ್ಯರು ಎತ್ತಿನ ಗಾಡಿ ಕಟ್ಟಿಕೊಂಡು ಹತ್ತಿರದ ಉದ್ಯಾನದಲ್ಲಿ ಬುತ್ತಿರೊಟ್ಟಿ ಉಂಡುಬಂದು ಸಂತೃಪ್ತ ಭಾವದಿಂದ ಸದಭಿರುಚಿಯ ಸದಾರಮೆಯನ್ನೋ, ಲವಕುಶ, ಕುರುಕ್ಷೇತ್ರ ನಾಟಕಗಳನ್ನು ನೋಡಿ ಆನಂದ ಪಡುತ್ತಿದ್ದರು. ಆ ಮೂಲಕ ರಂಗಸಂಸ್ಕೃತಿಯ ಅವಿನಾಭಾವ ಸಂಬಂಧ ಬಂಧುರಗೊಳಿಸಿದ್ದನ್ನು ಮರೆಯಲಾಗದು.
ಕಂಪನಿ ನಾಟಕಗಳ ಪ್ರಭಾವ ಅವತ್ತಿನಿಂದ ಇವತ್ತಿನವರೆಗೂ ರಂಗ ಬಂಧುರತೆಯನ್ನು ತುಂಬಿ ತುಳುಕಿಸಿದೆ. ನಮ್ಮ ಗ್ರಾಮೀಣರು ಹವ್ಯಾಸಕ್ಕಾಗಿ ಆಡುವ ವೃತ್ತಿ ಕಂಪನಿ ನಾಟಕಗಳ ಪ್ರಭಾವ ಭಾವಸಂಪನ್ನತೆ ಉಳಿಸಿಕೊಂಡಿವೆ. ಅಂತೆಯೇ ಹಳ್ಳಿಗಳಲ್ಲಿ ಇವತ್ತಿಗೂ ವೃತ್ತಿ ನಾಟಕಗಳನ್ನೇ ಆಡುತ್ತಾರೆ. ವರ್ಷಕ್ಕೆ (ಕೊರೊನಾ ಪೂರ್ವ) ಏನಿಲ್ಲವೆಂದರೂ ದಾವಣಗೆರೆ ಜಿಲ್ಲೆಯಾದ್ಯಂತ ಇನ್ನೂರಕ್ಕೂ ಹೆಚ್ಚು ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಆ ಎಲ್ಲ ನಾಟಕಗಳು ಗ್ರಾಮೀಣ ಜನರ ಆರ್ಥಿಕ ನೆರವು ಸಹಕಾರಗಳಿಂದಲೇ ಜರುಗುತ್ತವೆ.
ದಾವಣಗೆರೆ ಸೇರಿದಂತೆ ಕರ್ನಾಟಕದ ಏಳು ಹೊಸ ಜಿಲ್ಲೆಗಳ ಸೃಷ್ಟಿಕರ್ತರಾದ ಜೆ. ಎಚ್. ಪಟೇಲರು ವೃತ್ತಿ ನಾಟಕಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅಷ್ಟೇ ಯಾಕೆ ಅವರು ಕಂದಗಲ್ಲ ಹಣಮಂತರಾಯರ "ಬಡತನದಭೂತ" ಎಂಬ ನಾಟಕವನ್ನು ಓದಿ, ಪ್ರಭಾವಿತರಾಗಿ ನಾಟಕ ಕಲಿತು ತಮ್ಮ ಹುಟ್ಟೂರು ಕಾರಿಗನೂರಲ್ಲಿ ಅಮೋಘವಾಗಿ ಪ್ರದರ್ಶನ ನೀಡುತ್ತಾರೆ. ಬಡತನದಭೂತ ನಾಟಕದ ಇಂದ್ರಚರಣ್ ಎಂಬ ನಾಯಕ ನಟನಾಗಿ ಅವರು ಸೊಗಸಾಗಿ ಅಭಿನಯಿಸುತ್ತಾರೆ. ಅವರ ತಮ್ಮ ಎಸ್. ಎಚ್. ಪಟೇಲ್ ಇಂದ್ರಚರಣನ ತಂಗಿ ನೀಲಾ ಎಂಬ ಸ್ತ್ರೀ ಪಾತ್ರ ಮಾಡುತ್ತಾರೆ. ಹೀಗೆ ವೃತ್ತಿಪರತೆಯ ಕಂಪನಿ ನಾಟಕಗಳು ಸುಶಿಕ್ಷಿತ ಶ್ರೀಮಂತರಾದ ಪಟೇಲ್ ಸೋದರರ ಪ್ರಾಜ್ಞ ರಂಗಾಸಕ್ತಿ ಮಾತ್ರವಲ್ಲದೆ ದಿವಿನಾದ ರಂಗಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದ್ದವು. ತನ್ಮೂಲಕ ರಂಗಪರಂಪರೆಯ ಅಸ್ಮಿತೆಗೂ ಕಾರಣವಾಗಿವೆ.
ಕನ್ನಡ ರಂಗಭೂಮಿಗೆ ಅಜಮಾಸು ನೂರೈವತ್ತು ವರುಷಗಳ ಇತಿಹಾಸ. ಹತತ್ರ ಅಷ್ಟೇ ಪ್ರಮಾಣದಷ್ಟು ದಾವಣಗೆರೆ ರಂಗಭೂಮಿಯ ಚಾರಿತ್ರಿಕ ರಂಗೇತಿಹಾಸ. ಸಿದ್ರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ನಿಸರ್ಗ ಪರಿಸರದಲ್ಲಿ "ವೃತ್ತಿರಂಗಭೂಮಿ ಕೇಂದ್ರ" ಸ್ಥಾಪನೆಗೆ( 19-02-2018) ಸರಕಾರ ನಿರ್ಧಾರ ಮಾಡಿತು. ಸದರಿ ಕೇಂದ್ರದ ಹೆಸರನ್ನು "ವೃತ್ತಿ ರಂಗಾಯಣ" ಎಂದು ಬದಲಾಯಿಸಿ ಅದಕ್ಕೊಬ್ಬ ನಿರ್ದೇಶಕರನ್ನು ಸರಕಾರ (04-09-2020) ನೇಮಿಸಿದೆ. ವೃತ್ತಿ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನೆ, ರಂಗಶಿಕ್ಷಣ, ರಂಗಭಂಡಾರ ಸಂಗ್ರಹಾಲಯ ಅದರ ಆದ್ಯತೆಯಾಗಬೇಕಿದೆ.
ದಾವಣಗೆರೆಯ ವೃತ್ತಿರಂಗಭೂಮಿ ಚರಿತ್ರೆ ಮಾತ್ರವಲ್ಲ ಸಮಗ್ರ ಕರ್ನಾಟಕದ ರಂಗೇತಿಹಾಸವನ್ನೇ ಮಸ್ತಕದ ತುಂಬಾ ತುಂಬಿಕೊಂಡಿದ್ದ ನೂರಾರು ರಂಗಪೋಷಕರ ಊರು ದಾವಣಗೆರೆ. ಅವರುಗಳ ಪೈಕಿ ಪ್ರಮುಖರೆಂದರೆ ಪುರಾಣಿಕ ಮಠದ ವೀರಬಸಯ್ಯ, ಆರ್. ಜಿ. ಶಿವಕುಮಾರ್, ಆರ್. ಜಿ. ಗೌರೀಶಂಕರ, ಪಿ. ಹಾಲೇಶಪ್ಪ, ದುಗ್ಗಪ್ಪ, ಬಾತಿ ಜಯಣ್ಣ ಮುಂತಾದವರು. ಈಗ ನಮ್ಮ ನಡುವಿನ ಶ್ರೀಕಂಠಮೂರ್ತಿ, ಬಂಕಾಪುರದ ಚನ್ನಬಸಪ್ಪ, ಸಾಂ. ಹಿ. ಉಮಾಶಂಕರ, ನಾ. ರೇವನ್, ಜಿ. ಕೊಟ್ರೇಶ್, ಆರ್. ಟಿ. ಅರುಣಕುಮಾರ್... ಹೀಗೆ ಪಟ್ಟಿ ಮುಂದುವರೆಯುತ್ತದೆ. ದಾವಣಗೆರೆ ನಗರದವರಾದ ಮಲ್ಲಿಕಾರ್ಜುನ ಕಡಕೋಳ ಅವರು "ವೃತ್ತಿ ರಂಗಭೂಮಿ ವರ್ತಮಾನದ ಸವಾಲುಗಳು" ವಿಷಯ ಕುರಿತು ಕರ್ನಾಟಕ ನಾಟಕ ಅಕಾಡೆಮಿಗೆ ಸಂಶೋಧನಾ ಪ್ರಬಂಧ ಸಲ್ಲಿಸಿ ಫೆಲೋಶಿಪ್ ಪಡೆದಿದ್ದಾರೆ.
ದಾವಣಗೆರೆಯ ಹೊಸಅಲೆ ಹೆಸರಿನ ಆಧುನಿಕ ರಂಗಭೂಮಿ ಅಷ್ಟೊಂದು ಅವಧಿಯ ಚರಿತ್ರಾರ್ಹ ಬಾಹುಳ್ಯದ್ದಲ್ಲ. ಆದರೆ ಅದರ ರಂಗಸಾಧ್ಯತೆಯ ಕ್ಷಿತಿಜಕ್ಕೆ ಹೆಗ್ಗಳಿಕೆಯ ಕೆಲವು ಮಗ್ಗಲುಗಳಿರುವುದು ಗಮನಾರ್ಹ. ಅದು ಮುಖ್ಯವಾಗಿ ಅನುಕೂಲಸ್ಥರು, ಸುಶಿಕ್ಷಿತರು, ವಣಿಕರ ರಂಗಪ್ರೀತಿಗೆ ದಕ್ಕಿದ ಅವಕಾಶ. 1950ರ ಸುಮಾರಿಗೆ "ದಾವಣಗೆರೆ ಯುವಕ ಸಂಘ" ಹೆಸರಲ್ಲಿ ಹವ್ಯಾಸಿ ರಂಗಪ್ರಯೋಗಗಳು ಕಂಡಿವೆ. ಭೂಸನೂರು ಜಯಣ್ಣ, ವಕೀಲ ಚನ್ನಪ್ಪ, ಸಾ. ಮ. ಸದಾಶಿವಯ್ಯ ಮತ್ತು ಸಾ. ಮ. ಹಾಲಯ್ಯ, ಟಿ. ಎನ್. ಫಕೀರಪ್ಪ, ಟಿ. ಎಚ್. ತೇಲ್ಕರ್, ಪಿ. ಎಂ. ರುದ್ರಯ್ಯ ಮುಂತಾದವರು ರಾಜ್ಯಮಟ್ಟದ ಹವ್ಯಾಸಿ ನಾಟಕ ಸ್ಪರ್ಧೆಗಳನ್ನೇ ಏರ್ಪಡಿಸಿದ್ದಾರೆ.
ಅದೇ ಸುಮಾರಿಗೆ ಆರ್ಟಿಸ್ಟ್ ಕಂಬೈಂಡ್ಸ್ ಸಂಸ್ಥೆಯವರ ಕೈಲಾಸಂ ನಾಟಕ ಸ್ಪರ್ಧೆ, ಹಿರಣ್ಣಯ್ಯ ಸ್ಮಾರಕ ಏಕಾಂಕ ನಾಟಕ ಸ್ಪರ್ಧೆ ಏರ್ಪಡಿಸಿದವರು ಸ್ಥಳೀಯ ನಾಗೇಂದ್ರರಾವ್. "ಸಾಮಸ" ಕಲಾವೃಂದದ ಗೆಳೆಯರು 'ವಗ್ಗರಣಿ ಸುಬ್ಬಣ್ಣ' ಎಂಬ ಅವರ ಪೆಟೆಂಟ್ ಹಾಸ್ಯನಾಟಕವನ್ನು ಹಾವೇರಿ, ಹುಬ್ಬಳ್ಳಿಗೂ ಹೋಗಿ ಆಡಿ ಬಂದಿದ್ದಾರೆ. ಹತ್ತು ವರ್ಷಕ್ಕು ಹೆಚ್ಚುಕಾಲ ದಾಶರಥಿ ದೀಕ್ಷಿತ್, ಪರ್ವತವಾಣಿ, ಎ. ಎಸ್. ಮೂರ್ತಿಯವರ ಅನೇಕ ನಾಟಕಗಳನ್ನು ಪ್ರಯೋಗಿಸಿದ್ದಾರೆ.
ಅದಕ್ಕೆ ಕೆಲವುಕಾಲ ಮೊದಲು ಕಲಾಜ್ಯೋತಿ ಕಲಾ ಬಳಗದವರು ಚಲನ ಪ್ರಪಂಚ, ಮದುವೆ ಹುಚ್ಚು, ಜಾರಿದ ಜಗದ್ಗುರು, ಪತ್ರ ಪ್ರಸಂಗ, ಮಾನವತಿ ಮುಂತಾದ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಎಂ. ಸಿ. ಶರ್ಮಾ, ನೀಲಕಂಠರಾವ್, ಜೀಕೊ, ಸಿಂಧೆ ಅನಂತ್ರಾವ್, ಶ್ರೀಕಂಠಮೂರ್ತಿ, ರಾಜಶೇಖರಯ್ಯ, ಚಿದಂಬರರಾವ್, ಅಣಬೂರು ಪುಟ್ಟಯ್ಯ, ಆರ್.ಟಿ. ಪ್ರಭಾ ಮತ್ತು ಆರ್. ಟಿ. ರಮಾ ಹೀಗೆ ಈ ಊರಲ್ಲಿ ಅನೇಕ ಮಂದಿ ಹವ್ಯಾಸಿ ಕಲಾವಿದರ ಬಳಗವೇ ಇತ್ತು.
ಎಪ್ಪತ್ತರ ದಶಕಾರಂಭದಲ್ಲಿ ಸರಕಾರಿ ಉದ್ಯೋಗಿಯಾಗಿ ಬಂದ ರಾಜಾರಾಂ ಗಿರಿಯನ್ 'ಸ್ನೇಹಸಂಪದ' ಹೆಸರಿನ ರಂಗತಂಡ ಕಟ್ಟಿ ಶ್ರೀರಂಗ, ಚಂದ್ರಶೇಖರ ಕಂಬಾರರ ಅನೇಕ ನಾಟಕಗಳನ್ನು ರಂಗಕ್ಕೆ ತರುತ್ತಾರೆ. ನಾಟಕದ ಪ್ರೀತಿ ಈ ಊರಿನ ಹೇಮಾಹೇಮಿ ರಾಜಕಾರಣಿಗಳನ್ನು ಹರಿಗಡಿಯದೇ ಕಾಡಿದೆ. ಇದೇ ಊರಿನವರಾದ ಬಿ.ಡಿ.ಎ. ಅಧ್ಯಕ್ಷರಾಗಿದ್ದ ಬಿ. ಟಿ. ಸೋಮಣ್ಣ, ದಾವಣಗೆರೆ ನಗರಾಭಿವೃದ್ಧಿ ಮಂಡಳಿ ಪ್ರಥಮ ಅಧ್ಯಕ್ಷರಾಗಿದ್ದ ಸಿ. ಕೇಶವಮೂರ್ತಿ, ವಕೀಲ ಚನ್ನಪ್ಪ ಮತ್ತು ಇವರೊಂದಿಗೆ ಹಿರಿಯ ಸಾಹಿತಿ ಡಾ. ಸಾ. ಶಿ. ಮರುಳಯ್ಯ ಈ ಎಲ್ಲರೂ ಸೇರಿ ದಾವಣಗೆರೆ ಹವ್ಯಾಸಿ ಕಲಾವಿದರ (ದಾಹಕ) ತಂಡ ಕಟ್ಟಿ "ಅಖಿಲ ಕರ್ನಾಟಕ ಕ್ಷಾಮ ನಿವಾರಣ ಸಮ್ಮೇಳನ" ಎಂಬ ಹೆಸರಿನ ನಾಟಕವನ್ನು ಅದ್ದೂರಿಯಾಗಿ ಸಿದ್ಧಗೊಳಿಸಿದರು. ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಹಳೇ ಮೈಸೂರು ಪ್ರಾಂತ್ಯದ ರಾಜಕಾರಣಿಗಳ ವೇಷ ಮತ್ತು ಪ್ರಾದೇಶಿಕ ಡೈಲಾಗುಗಳ ಮೂಲಕ ನಾಟಕ ಯಶಸ್ವಿಯಾಗಿ ಕರ್ನಾಟಕದ ಎಲ್ಲ ಪ್ರಾಂತಗಳಲ್ಲಿ ದಿಗ್ವಿಜಯ ಸಾಧಿಸಿತು.
1969 ರಲ್ಲಿ ಪ್ರತಿಮಾ ಕಲ್ಚರಲ್ ಆ್ಯಂಡ್ ಸ್ಪಿರಿಚ್ಯುಯಲ್ ಸೊಸಾಯಿಟಿ ಕೆಲವು ಪ್ರದರ್ಶನಗಳ ಮೂಲಕ ಶೈಕ್ಷಣಿಕ ವಲಯದಲ್ಲಿ ಆಸಕ್ತಿ ಮೂಡಿಸಿದ್ದು ಖರೇ. ತರುವಾಯ ಪ್ರೊ. ಹಾಲಪ್ಪ, ಪ್ರೊ. ಬಿ. ಜಿ. ನಾಗರಾಜ, ಸತ್ಯಮೂರ್ತಿ, ಎ. ಎನ್. ಪ್ರಸನ್ನ, ಕಾ. ನಾ. ಶ್ರೀನಿವಾಸ ಇನ್ನೂ ಮೊದಲಾದವರ ತೀವ್ರ ರಂಗಾಸಕ್ತಿಯ ಪರಿಣಾಮವಾಗಿ "ಪ್ರತಿಮಾಸಭಾ" ಹುಟ್ಟಿಕೊಂಡಿತು. ಒಂದೆರಡು ವರ್ಷಗಳ ನಂತರ ಎಂ. ಜಿ. ಈಶ್ವರಪ್ಪ, ಡಾ. ಶಾಮಲಾಂಬಿಕಾ ಇನ್ನೂ ಅನೇಕರ ಪ್ರವೇಶದಿಂದ ಪ್ರತಿಮಾಸಭಾ ಹೊಸ ಹುರುಪು ಪಡೆಯಿತು. ಪ್ರೊ. ಬಿ. ವಿ. ವೀರಭದ್ರಪ್ಪ, ಪ್ರೊ. ಎಸ್. ಎಚ್. ಪಟೇಲರ ಪ್ರೋತ್ಸಾಹದ ವರತೆಯೂ ಅದಕ್ಕೆ ಕಾರಣವಾಗಿತ್ತು.
ರಿದಂ ಪ್ರಕಾಶ ಬೆಳಗಾವಿ, ಬಾ. ಮ. ಬಸವರಾಜಯ್ಯ, ಡಾ. ಪಂಚಣ್ಣ, ಪ್ರೊ. ವೃಷಬೇಂದ್ರಪ್ಪ ಮೊದಲಾದವರೆಲ್ಲ ಸೇರಿ ಪ್ರತಿಮಾಸಭಾ ಪ್ರತಿಷ್ಠಿತವಾಗಿ ಬೆಳೆಸಿದರು. ಅದರ ಸದಸ್ಯತ್ವ ದೊರಕುವುದು ದುಸ್ತರ ಎನ್ನುವಷ್ಟು ಒಂದೆರಡು ದಶಕಗಳ ಕಾಲ ಯಶಸ್ವಿಯಾಗಿ ಮುನ್ನಡೆಯಿತು. ಈ ನಡುವೆ "ಅಭಿವ್ಯಕ್ತಿ ದಾವಣಗೆರೆ" ಸಾಂಸ್ಕೃತಿಕ ವೇದಿಕೆ ಕ್ರಾಂತಿಸೂರ್ಯ, ತಾಯಿ, ಕಲ್ಯಾಣಿ, ನಾಟಕಗಳ ಪ್ರದರ್ಶನ ಮತ್ತು ಬಸವ ವಿಜಯ, ಕಿತ್ತೂರು ಚನ್ನಮ್ಮ, ಏಕಲವ್ಯ ಎಂಬ ಆಧುನಿಕ ದೊಡ್ಡಾಟಗಳ ಪ್ರದರ್ಶನ ನೀಡಿತು. ರಂಗಕ್ಷಿತಿಜ, ನೀವು-ನಾವು, ಅಭಿಯಂತರಂಗ, ಭೂಮಿಕಾ ಎಂಬ ಮಹಿಳಾ ತಂಡ ಹೀಗೆ ಅನೇಕ ಹವ್ಯಾಸಿ ಸಂಘಟನೆಗಳು ರಂಗ ಚಟುವಟಿಕೆಗಳನ್ನು ಮೆರೆದಿವೆ.
ಚನ್ನಗಿರಿಯ 'ರಂಗಸೌರಭ' ತಂಡ ಅನೇಕ ಹವ್ಯಾಸಿ ನಾಟಕಗಳ ನಿರ್ಮಾಣಕ್ಕೆ ಕಾರಣವಾಯಿತು. ಅದೇ ತಾಲೂಕಿನ ಕ್ಷೌರಿಕ ಕಾಯಕದ ಎಸ್. ಎನ್. ರಂಗಸ್ವಾಮಿ ವೃತ್ತಿ ನಾಟಕಕಾರನಾಗಿ ಹೆಸರು ಮಾಡಿದ್ದು ಅವರ "ದುಡುಕಿ ಹೋದ ಮಗ ಹುಡುಕಿ ಬಂದ ಸೊಸೆ'' ಚಿಂದೋಡಿ ಕಂಪನಿಯ ಸುಪ್ರಸಿದ್ದ ನಾಟಕ. ಹೊನ್ನಾಳಿಯ ರಂಗಕೀರ್ತಿ ರಾಷ್ಟ್ರಮಟ್ಟದ್ದು. ನ್ಯಾಮತಿಯ ರಂಗವಿದ್ವಾನ್ ದೇವೇಂದ್ರಪ್ಪನವರಿಗೆ 1962ರಷ್ಟು ಹಿಂದೆಯೇ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ. ಹೊಳೆರಂಗ ಮತ್ತು ಅಭಿವ್ಯಕ್ತಿಯ ತಂಡಗಳಿಗೆ ಕೇರಳದ ಚಂದ್ರದಾಸನ್ ಅವರಂತಹ ಹೆಸರಾಂತರು ಆಧುನಿಕ ಶೈಲಿಯ ನಾಟಕ ಕಲಿಸಿದ ಹೆಗ್ಗಳಿಕೆ.
ಹರಿಹರದ ಹೊಳೆ ದಡದಲೊಂದು ರಂಗಸಮಾಧಿ ಇದೆ. ಆಂಜನೇಯ ಪಾತ್ರಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ರಂಗಮಾಂತ್ರಿಕ ನಂಜುಂಡಯ್ಯನವರ ಸಮಾಧಿ ಅದು. ಜಗಳೂರಿನ ಚನ್ನದಾಸರ ಕರಿಬಂಟನ ಕಾಳಗ ಗಮನೀಯ. ಮತ್ತೊಂದು ರಂಗಸಂಪತ್ತು ಎಂದರೆ ಬಿದರಕೆರೆ ಓಬಳೇಶ್. ವರನಟ ರಾಜಕುಮಾರ್ ಓಬಳೇಶ ಅವರ ಅಭಿನಯ ಮನಸಾರೆ ಮೆಚ್ಚಿದ್ದರು. ಕನ್ನಡ ರಂಗಭೂಮಿಯಲ್ಲಿ ಓಬಳೇಶ ಹೆಸರು ಅಜರಾಮರ.
ಏನಿಲ್ಲವೆಂದರೂ ಎರಡು ದಶಕಗಳ ಕಾಲದ ಸೋದರ ಸಂಬಂಧಿಯಂತಿದ್ದ ಹರಪನಹಳ್ಳಿಯ ರಂಗಸಂಬಂಧ ಮರೆಯಲಾಗದು. ರೇಡಿಯೋ ನಾಟಕಗಳಿಗೆ ಹೊಸ ಭಾಷ್ಯ ಬರೆದ ಬೀಚಿ, ಜನಪದ ನಾಟಕಗಳ ಮುದೇನೂರ ಸಂಗಣ್ಣ ಅವರನ್ನು ಎಂದಾದರೂ ಮರೆಯಲುಂಟೇ.? ಹಾಗೇನೆ ನೀನಾಸಂ ತಿರುಗಾಟ, ಸಾಣೇಹಳ್ಳಿಯ ಶಿವಸಂಚಾರ ನಾಟಕಗಳ ರಂಗ ಘಮಲು ಮರೆಯಲಾಗದು.
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು:
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.