Date: 26-07-2022
Location: ಬೆಂಗಳೂರು
“ಸಿದ್ಧರಾಮಯ್ಯನಂಥವರು ಕೇವಲ ಕಾಂಗ್ರೆಸ್ ಪಕ್ಷದ ಗುತ್ತಿಗೆಯಲ್ಲ. ಶೋಷಿತರೆಲ್ಲರ ಆಶಾದಾಯಕ ನಾಯಕ. ಅಂತೆಯೇ ಸಾರ್ವಜನಿಕವಾದ ಅಭಿಮಾನಿಗಳ ವೇದಿಕೆ ಮೇಲೆ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬ ಆಚರಿಸುವ ಮೂಲಕ ಶುಭ ಕೋರುವ ಅವಕಾಶಗಳಿದ್ದವು” ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಜಾತ್ರೆಯಾಗಿ ಆಚರಿಸಬೇಕಾದ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.
ಈಗ ಬರುವ ಆಗಸ್ಟ್ ಮೂರನೇ ತಾರೀಖಿನಂದು (03.08.22) ದಾವಣಗೆರೆಯ ಹೊರ ವಲಯದಲ್ಲಿ ಕೋಟಿ, ಕೋಟಿ ಖರ್ಚು ಮಾಡಿ ಸಿದ್ಧರಾಮಯ್ಯ ಹುಟ್ಟುಹಬ್ಬದ ಉತ್ಸವವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಮುಖರು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅದು ಅಂತಿಂತಹ ಉತ್ಸವದ ಆಚರಣೆ ಆಗಿರದೇ ದಾವಣಗೆರೆಯ ದುಗ್ಗಮ್ಮನ ಜಾತ್ರೆ ಮೀರಿಸುವ ಮಹಾ ಮಹೋತ್ಸವ. ಅಂತಹದ್ದೊಂದು ಮಹಾ ಜಾತ್ರೆಯನ್ನು ವರುಣಾರ್ಭಟದ ಮಹಾಮಳೆಯಲ್ಲಿ ಕೆ.ಪಿ.ಸಿ.ಸಿ. ಟೀಮ್ ಮಾಡುತ್ತಲಿದೆ. ಇದೇ ಊರಲ್ಲಿ ಅದೇ ಸಿದ್ಧರಾಮಯ್ಯ ಸಾರಥ್ಯದಲ್ಲಿ ಈ ಹಿಂದೆ ಅಹಿಂದ ಸಮಾವೇಶ ಯಶಸ್ವಿಯಾಗಿ ಜರುಗಿತ್ತು. ದಾವಣಗೇರಿ ನಗರದೇವತೆ ದುಗ್ಗಮ್ಮನ ಜಾತ್ರೆಗೂ ಸಿದ್ರಾಮಯ್ಯನ ಈ ಜಾತ್ರೆಗೂ ಇರುವ ಒಂದೇ ಒಂದು ಫರಕು ಏನೆಂದರೆ ಸಿದ್ರಾಮಯ್ಯ ಜಾತ್ರೆಯಲ್ಲಿ ಕೋಣಬಲಿ ಇಲ್ಲವಷ್ಟೇ. ಆದರೆ ದುಗ್ಗಮ್ಮನ ಜಾತ್ರೆ ಮೀರಿಸುವ ಸಂಭ್ರಮಕ್ಕೇನು ಅಲ್ಲಿ ಕಮ್ಮಿಇಲ್ಲ. ಲಕ್ಷ ಲಕ್ಷ ಕುರಿ, ಕೋಳಿಗಳ ಮಾಂಸದೂಟದ ಭರ್ಜರಿ ಭೋಜನದ ಭರಾಟೆ.
ಸಿದ್ರಾಮಯ್ಯರ ಜನ್ಮದಿನದ ಈ ಜಾತ್ರೆ ಕಾಂಗ್ರೆಸ್ ಮುಖಂಡರಿಗೆ "ನಃ ಭೂತೋ ನಃ ಭವಿಷಃ ತಿ" ಎನ್ನುವಂತೆ ಸಿದ್ಧು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಸಡಗರ. ಅಂತಹದ್ದೇ ಮುಂದಿನ ಚುನಾವಣಾ ಲಾಭದ ರಾಜಕೀಯ ಲೆಕ್ಕಾಚಾರ. ಎಪ್ಪತ್ತೈದು ವರ್ಷದಲ್ಲಿ ಕಾಲಿಡಲಿರುವ ಸಿದ್ರಾಮಯ್ಯ ಹುಟ್ಟುಹಬ್ಬಕ್ಕೆ ಒಂದು ಅಂದಾಜಿನಂತೆ ಅಷ್ಟೇ ಕೋಟಿ ಪ್ರಮಾಣದ ಹಣ ಖರ್ಚು ಮಾಡುವ ಉಮೇದು ಇದೆಯಂತೆ. ಆ ಮೂಲಕ ಮುಂಬರುವ ಚುನಾವಣೆ ಮತ್ತು ಮುಖ್ಯಮಂತ್ರಿ ಆಯ್ಕೆಯ "ಹವಾ ಸೃಷ್ಟಿಸುವ" ಝಲಕಿನ ಅದೊಂದು ರಾಜಕೀಯ ಸವಾಲು ಸಂಕಲ್ಪವೇ ಆಗಿದೆ. ಹಾಗಂತ ಅನೇಕ ಮಂದಿ ರಾಜಕೀಯ ವಿಶ್ಲೇಷಕರ ಸೂಕ್ಷ್ಮ ವಿಶ್ಲೇಷಣೆಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.
ಅಷ್ಟೇ ಯಾಕೆ ಜನ ಸಾಮಾನ್ಯರು ಸಹಿತ ಅಂತಹದ್ದೇ ಮಾತುಗಳನ್ನು ಅಗ್ದೀ ಸೋಜಾಗಿ ಮಾತಾಡುವಷ್ಟು ಸಿದ್ಧರಾಮೋತ್ಸವದ ಸಂಗತಿ ರಾಜ್ಯದ ತುಂಬಾ ತುಂಬಿ ತುಳುಕುವ ಸುದ್ಧಿ ಮಾಡಿದೆ. ಆದರೆ ಸಿದ್ರಾಮೋತ್ಸವದ ಹಳೆಯ ಜನತಾ ಪರಿವಾರಿಗಳು ಆಗಿರುವ ಹಾಲಿ ಕೆ.ಪಿ.ಸಿ.ಸಿ. ಪ್ರಮುಖರಲ್ಲದೇ ಖುದ್ದು ಸಿದ್ಧರಾಮಯ್ಯ ಅವರ ಪ್ರಕಾರ "ಉತ್ಸವ ಗಿತ್ಸವ ಅಂತೇನೂ ಇಲ್ಲ ಕಣ್ರೀ" ಅದು ಹುಟ್ಟುಹಬ್ಬವಷ್ಟೇ. "ಸಿದ್ಧರಾಮಯ್ಯ - 75 ಅಮೃತೋತ್ಸವ" ಮಾತ್ರವಂತೆ.
ಯಾರು ಏನೇ ಸಬೂಬು ಹೇಳಿದರೂ ಅದು ಮುಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯ ಬಲಾಬಲದ ಶಕ್ತಿ ಪ್ರದರ್ಶನ. ಅದೊಂದು ಬಗೆಯ ಸ್ವಮರುಕ ಪ್ರದರ್ಶನವೂ ಆದೀತು. ಮರುಕದ ಪೈಪೋಟಿಯಂತೆ ಒಳಗೊಳಗೇ ಹಗ್ಗ ಜಗ್ಗಾಟವಲ್ಲ, ಅದು ಉಕ್ಕಿನ ಸರಪಳಿಯ ಜಗ್ಗಾಟ. ಈ ಪೈಪೋಟಿ ಮೇಲಾಟ ಮುಟ್ಟುತ್ತಲಿರುವ ಒಳಹೇತು ರಾಜಕೀಯದ ಜಂಗೀ ಹುನ್ನಾರಗಳನ್ನು ಅಲ್ಲಗಳೆಯಲಾಗದು.
ಸಿದ್ದು ಜಾತ್ರೆಯ ವ್ಯಕ್ತಿ ಆರಾಧನಾಸನ್ನಿ ಪಾರಮ್ಯದ ಮುಖಾಂತರ ಕಾಂಗ್ರೆಸ್ ಪಕ್ಷದ ಆಂತರಿಕ ವರ್ಚಸ್ಸು ತುಸು ಹಿನ್ನಡೆಗೆ ಸರಿಯುವ ಸಾಧ್ಯತೆಗಳೇ ಅಧಿಕವಾಗುತ್ತಲಿವೆ. ಆದರೆ ಅದು ವ್ಯಕ್ತಿಪೂಜೆಯಲ್ಲ. ಅಲ್ಲಿ ಪಕ್ಷದ ಧ್ವಜ ಬಳಕೆ ಆಗಲ್ಲ... ಮುಂತಾಗಿ, ಮುಂತಾಗಿ ಅದರ ಆಯೋಜಕರ ತಾರ್ಕಿಕ ಪ್ರತಿಕ್ರಿಯೆಗಳು. ಅದೇನೇ ಇರಲಿ ಕಾಂಗ್ರೆಸ್ಸಿಗರ 'ಸಿದ್ರಾಮಯ್ಯಜಾತ್ರೆ' ಅವರ ಮಹತ್ವಾಕಾಂಕ್ಷೆಯ ಬಹುಪರಾಕಿನ ಆಡಂಬರದ ಕಾರ್ಯಕ್ರಮ ಎಂಬುದನ್ನು ಸಣ್ಣಕೂಸು ಕೂಡಾ ಅರ್ಥ ಮಾಡಿಕೊಳ್ಳಬಲ್ಲದು. ಲೋಹಿಯಾವಾದಿ ಅಗ್ರೆಸ್ಸಿವ್ ಸಿದ್ಧರಾಮಯ್ಯ ಚೀಪ್ ಪಾಪ್ಯುಲಾರಿಟಿಗೆ ಈಲ್ಡ್ ಆಗಬಾರದಿತ್ತು. ಅದ್ದೂರಿತನಕ್ಕೆ ಒಪ್ಪಿಗೆ ಕೊಡಬಾರದಿತ್ತು. ಇದು ಮತ್ತೆ ಕೆಲವರ ಅಂಬೋಣ.
*ಹಾಗೆಂದು ಹುಟ್ಟುಹಬ್ಬವೇ ಬೇಡವೆಂದು ಅರ್ಥವಲ್ಲ. ಅದರಲ್ಲೂ ಸಮಾಜವಾದಿ ಚಿಂತನ ಗರಡಿಯಲ್ಲಿ ಸಾಮು ತೆಗೆದ ಓರ್ವ ಹಿಂದುಳಿದ ಮಹಾ ಮುತ್ಸದ್ದಿ ಧುರೀಣನ ಹುಟ್ಟುಹಬ್ಬ ಆಚರಿಸಬಾರದೆಂದು ಹೇಳಲಾಗದು. ಖಂಡಿತವಾಗಿ ಪ್ರೀತಿಯಿಂದ ಆಚರಿಸಲೇಬೇಕು. ಆದರೆ ಸಾರ್ವಜನಿಕವಾಗಿ ಸಿದ್ಧರಾಮಯ್ಯ ಅವರನ್ನು ಹಾರೈಸುವ, ಶುಭ ಕೋರುವ, ಪಕ್ಷಾತೀತ ಸರಳ ಆಚರಣೆ ಆಗಿದ್ರೇ ಸಾಕಿತ್ತು. ಏಕೆಂದರೆ ಸಿದ್ಧರಾಮಯ್ಯನಂಥವರು ಕೇವಲ ಕಾಂಗ್ರೆಸ್ ಪಕ್ಷದ ಗುತ್ತಿಗೆಯಲ್ಲ. ಶೋಷಿತರೆಲ್ಲರ ಆಶಾದಾಯಕ ನಾಯಕ. ಅಂತೆಯೇ ಸಾರ್ವಜನಿಕವಾದ ಅಭಿಮಾನಿಗಳ ವೇದಿಕೆ ಮೇಲೆ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬ ಆಚರಿಸುವ ಮೂಲಕ ಶುಭ ಕೋರುವ ಅವಕಾಶಗಳಿದ್ದವು.
ಯಡಿಯೂರಪ್ಪನವರ ಎಪ್ಪತ್ತೇಳನೇ ಹುಟ್ಟುಹಬ್ಬದಲ್ಲಿ ಇದೇ ಸಿದ್ಧರಾಮಯ್ಯ ಭಾಗವಹಿಸಿ ತಮ್ಮ ಪ್ರಬುದ್ಧ ಚಿಂತನೆಗಳ ಮೂಲಕ ಮನುಷ್ಯ ಸಂಬಂಧಗಳ ಹೃದ್ಯ ಪ್ರೀತಿ ಹಂಚಿಕೊಂಡಿದ್ದರು. ಆದರೆ ತನ್ನದೇ ಈ ಹುಟ್ಟುಹಬ್ಬವನ್ನು ಲೋಕಸಂವೇದನೆಯ ಸರಳ ಹಬ್ಬವಾಗಿ ಆಚರಿಸುವ ಕ್ಷಿತಿಜಗಳ ಮಿತಿಗಳನ್ನು ದಾಟಿ ಬೇರೊಂದು ಘಟ್ಟ ತಲುಪಿದಾಗ ಸುಮ್ಮನಿರುವುದು ಎಷ್ಟು ಸರಿ.? ಅಷ್ಟಕ್ಕೂ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವ ಹಂತ ಎಂಬಂತಾಗಿದೆ. ಇನ್ನೇನು ಬಹುಮತ ದೊರಕಿ ಬಿಟ್ಟು ಬಾಕಿ ಉಳಿದಿರುವ ಕನಸಿನ ಮುಖ್ಯಮಂತ್ರಿ ಆಯ್ಕೆಯ ಶಕ್ತಿ ಪ್ರದರ್ಶನದಂತಾಗಿದೆ. ಅದಕ್ಕೆ ಬದಲು ಕಳೆದ ಐದು ವರ್ಷಗಳಿಂದ ತಳಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆ ಕಟ್ಟುವ ಕ್ರಿಯೆಗೆ ತೊಡಗಬಹುದಿತ್ತು.
ಆದಾಗ್ಯೂ ಕಾಂಗ್ರೆಸ್ಸಿಗೆ ಈಗೀಗ ತುಸು ಅನುಕೂಲಕರ ವಾತಾವರಣದ ಸಿಹಿಗಾಳಿ. ಹೀಗಾಗೇ ಅದೀಗ ಮುಖ್ಯಮಂತ್ರಿ ಸಾರಥ್ಯ ಯಾರಿಗೆ ದಕ್ಕಬೇಕೆಂಬ ಹಂತಕ್ಕೆ ಕೈ ಚಾಚಿದಂತಿದೆ. ಸಾಮಾನ್ಯ ಜನರೂ ಅದನ್ನು ಮಾತಾಡುವ ಮಟ್ಟ ಮುಟ್ಟಿರುವುದು ಅಷ್ಟೇನು ಗುಟ್ಟಾಗಿ ಉಳಿದಿಲ್ಲ. ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಗಮನಿಸುವುದಾದರೆ ಅದು ಸಿದ್ದು ಮತ್ತು ಡಿಕೆಶಿ ನಡುವೆ ನಿರ್ಧಾರವಾಗಬೇಕಾದ ಜಿದ್ದಾಜಿದ್ದಿನ ಮದಗಜಗಳ ಗುದ್ದಾಟದಂತಿದೆ. ದುರಂತವೆಂದರೆ ದಾವಣಗೆರೆಯ 'ಸಿದ್ದುಜಾತ್ರೆ' ಜನಬಲ ಪ್ರದರ್ಶನವೇ ಆಗಿದ್ದರೂ ಅದು ಹಣದ ಬಲದ ಮೂಲದಿಂದ ಅವತರಿಸಿದೆ. ಸಿದ್ದರಾಮಯ್ಯ ಎಂಬ ಸಮಾಜವಾದಿ ಸೈದ್ಧಾಂತಿಕ ನೆಲೆಗಳ ಮೇಲೆ ಸದ್ಯದ ಕಾಂಗ್ರೆಸ್ 'ಅಸ್ಮಿತೆ' ಜಾಗೃತವಾಗಿದೆ ಎಂಬುದು ಸಹಿತ ಅಷ್ಟೇ ಸತ್ಯ.
ಆದರೆ ಕಲ್ಯಾಣ ಕರ್ನಾಟಕದ ರಾಷ್ಟ್ರೀಯ ನಾಯಕ ಖರ್ಗೆ ಅವರಂತಹ ಹಿರಿಯ ಜೀವ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿರುವುದರ ನೆನಪೇ ಇಲ್ಲದಂತೆ ದಕ್ಷಿಣ ಕರ್ನಾಟಕ ಶಕ್ತ ರಾಜಕಾರಣದ ಸೆಳವಿನಾಟ. ಅದು ಕೇವಲ ಕಾಂಗ್ರೆಸ್ ಪಕ್ಷದ ಆಂತರಿಕ ವಿದ್ಯಮಾನ ಮಾತ್ರವಾಗಿ ಉಳಿಯದೇ ಯಾರ ಕಡೆಗೆ ಮುಖ್ಯಮಂತ್ರಿ ಒಲವಿನ ಜನಶಕ್ತಿ ತಕ್ಕಡಿಯ ವಜನು ಎಂಬುದರ ಪರೀಕ್ಷೆಯ ಕಾಲ ಇದಾಗಿದೆ ಎಂದು ಬಿಂಬಿತವಾಗುತ್ತಿದೆ. ರಾಹುಲ್ ಗಾಂಧಿಯ ಸಮಕ್ಷಮ ಅಂತಹದ್ದೊಂದು ಒಲವಿನ ಬಲಾಬಲ ಪರೀಕ್ಷೆ ಪ್ರದರ್ಶನದ ಹೆಗ್ಗಳಿಕೆ. ಆ ರೀತಿಯಾಗಿ ಸಿದ್ರಾಮಯ್ಯ ಉತ್ಸವದ 'ಹವಾ' ಸೃಷ್ಟಿಯಾಗಲಿದೆ. ಸಿದ್ಧರಾಮಯ್ಯ ಐದು ವರ್ಷಗಳ ಕಾಲ ಯಶಸ್ವಿ ಮುಖ್ಯಮಂತ್ರಿಯಾಗಿದ್ದಾಗಲೇ ಇಂತಹ ಅದ್ದೂರಿ ಉತ್ಸವಗಳು ನೆರವೇರಿದ ನೆನಪುಗಳಿಲ್ಲ. ಅವರ ಐದು ವರ್ಷಗಳ ಜನಪರ ಆಡಳಿತದ ದಟ್ಟ ಪರಿಚಯವನ್ನು ಚಾಮುಂಡೇಶ್ವರಿ ಕ್ಷೇತ್ರದ ಬೂತ್ ಮಟ್ಟದಲ್ಲಿ ಮುಟ್ಟಿಸಿದ್ದರೆ ಸಿದ್ಧರಾಮಯ್ಯ ಖಂಡಿತವಾಗಿ ಅಲ್ಲಿ ಇಷ್ಟು ದಯನೀಯವಾಗಿ ಸೋಲುತ್ತಿರಲಿಲ್ಲ.
ಸಿದ್ಧರಾಮಯ್ಯ ಅದ್ದೂರಿ ಹುಟ್ಟುಹಬ್ಬ ಕಾಂಗ್ರೆಸ್ಸಿಗರಿಗೆ ಅನಿವಾರ್ಯದ ಅವಕಾಶವಾಗಿದೆ. ಸೋನಿಯಾ ಮತ್ತು ರಾಹುಲ್ ಗಾಂಧಿ ಮುಖಗಳನ್ನು ತೋರಿಸಿದರೆ ಮತಗಳು ಉದುರುವುದಿಲ್ಲ. ಅರಸು ತರುವಾಯ ಸಿದ್ಧರಾಮಯ್ಯ ಅವರಿಗೆ ಮಾಸ್ ಲೀಡರ್ ಚಾರಿಸ್ಮಾ. ಅಂತಹ ಫೇಸ್ ವ್ಯಾಲ್ಯುಗೆ ಪಕ್ಷದ ಮುಖಂಡರ ಬಣ ಬೆಂಬಲ. ಅದರಲ್ಲೂ ಬಿಜೆಪಿ ಮತ್ತು ಆರೆಸೆಸ್ ಹಿಂದುತ್ವದ ಹಿಡನ್ ಅಜೆಂಡಾಗಳಿಗೆ ಸೂಕ್ತ ಉತ್ತರ ಕೊಡುವ ಜವಾರಿ ಮಾತುಗಳ ಮೋಹಕ ದೇಹಭಾಷೆ ಸಿದ್ಧರಾಮಯ್ಯಗೆ ಸಿದ್ಧಿಸಿದೆ. "ಹೌದ್ದ ಹುಲಿಯಾ" ಎಂದು ಅರಳುವ ಲೋಕಪ್ರಿಯ ಪ್ರತಿಕ್ರಿಯೆಗಳ ಮಟ್ಟಕ್ಕೆ ಅವರಿಗೆ ಮಾಸ್ ಅಪೀಲಿಂಗ್ ಆಕರ್ಷಣೆ.
ಆದರೆ ಅದೇ ಕಾಂಗ್ರೆಸ್ಸಿನಲ್ಲಿರುವ ಮೃದುತ್ವದ ಕೆಲವು ಹಿಂದುತ್ವವಾದಿಗಳಿಗೆ ಇದರಿಂದ ತುಸು ಮುಜುಗರ. ಹೀಗಾಗಿ ಆಗಸ್ಟ್ ಮೂರನೇ ತಾರೀಖಿನ ದಾವಣಗೆರೆಯ ಸಿದ್ಧರಾಮಯ್ಯ ಜಾತ್ರೆ ನಂತರ ಕರ್ನಾಟಕದ ರಾಜಕೀಯರಂಗ ಹೊಸದೊಂದು ಆಖಾಡಕ್ಕೆ ಸಿದ್ಧವಾಗಬಲ್ಲದು. ಇದು ಕಾಂಗ್ರೆಸ್ ಮಾತ್ರವಲ್ಲದೇ ಆಡಳಿತ ಪಕ್ಷದ ಮೇಲೂ ತೀವ್ರ ಪರಿಣಾಮ ಬೀರದಿರದು. ಈ ನಡುವೆ ಕೆಲವು ಪ್ರಗತಿಪರರು ಬಲಪಂಥೀಯತೆಯನ್ನು ಸೋಲಿಸುವ ಭರದ ನಾಜೂಕಿನಾಟಕ್ಕೆ ಅಣಿಗೊಳ್ಳುತ್ತಿರುವುದು ಸಂತಸ. ಅದು ಅಡ್ಡಗೋಡೆ ಮೇಲೆ ದೀಪ ಇಡುವಂತಾಗಿ ಅದರ ಬದಿಪೆಟ್ಟು ಸಿದ್ರಾಮಯ್ಯಗೆ ಬೀಳದಿದ್ದರೆ ಅಷ್ಟೇ ಸಾಕು.
ಹಾಗೆ ನೋಡಿದರೆ ಹುಟ್ಟುಹಬ್ಬಗಳ ಕುರಿತು ಕಾಂಗ್ರೆಸ್ಸಿಗರಲ್ಲಿ ಮಹತ್ತರ ಪರಂಪರೆಯೇನಿಲ್ಲ. ಅಷ್ಟೇ ಯಾಕೆ ಹತ್ತು ವರುಷಗಳ ಕಾಲ ನಿರ್ವಿವಾದದ ಪ್ರಧಾನ ಮಂತ್ರಿಯಾಗಿ ದೇಶ ಮುನ್ನಡೆಸಿದ ಮನಮೋಹನ್ ಸಿಂಗ್ ಅವರ ಹುಟ್ಟುಹಬ್ಬವನ್ನು ಕಾಂಗ್ರೆಸ್ ಪಾರ್ಟಿ ಈಪಾಟಿ ಆಚರಿಸಿದ ನೆನಪುಗಳಿಲ್ಲ. ತಮ್ಮ ಬದುಕನ್ನೇ ಕಾಂಗ್ರೆಸ್ ಪಕ್ಷಕ್ಕೆ ಮುಡಿಪಿಟ್ಟ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇನ್ನೂ ನಿನ್ನೆ ಜುಲೈ ಇಪ್ಪತ್ತೊಂದರಂದು ಎಂಬತ್ತೊಂದನೇ ವಸಂತಕ್ಕೆ ಕಾಲಿಟ್ಟರು. ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವ ಸಂಕಲ್ಪವೇ ಈ ಸಲದ ತಮ್ಮ ಹುಟ್ಟುಹಬ್ಬದ ಆಚರಣೆಯೆಂಬ ಭಾವಾನುಭೂತಿ ಖರ್ಗೆ ತೋರಿದ್ದಾರೆ. ಇದುವರೆಗೆ ಅವರ ಬರ್ತಡೇ ಇಂತಹದ್ದೊಂದು ಅದ್ದೂರಿ ಉತ್ಸವ ಕಂಡಿಲ್ಲ. ಎಚ್. ಕೆ. ಪಾಟೀಲ, ಜನಾರ್ದನ ಪೂಜಾರಿ, ತೊಂಬತ್ತೆರಡರ ಏರುವಯದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಇನ್ನೂ ಅನೇಕ ಹಿರಿಯ ಕಾಂಗ್ರೆಸ್ಸಿಗರು ಇಂತಹ ಅದ್ದೂರಿ ಜನ್ಮದಿನೋತ್ಸವಗಳನ್ನು ಕಂಡಿಲ್ಲವೆಂದು ಕಾಣುತ್ತದೆ.
ಆದರೆ ಇದೇ ದಾವಣಗೆರೆಯ ಹೊರ ವಲಯದಲ್ಲಿ ಇಪ್ಪತ್ತೆಂಟು ವರ್ಷಗಳ ಹಿಂದೆ 1994ರ ಸುಮಾರಿಗೆ ಹತ್ತುಕೋಟಿ ಖರ್ಚುಮಾಡಿ ಎಸ್. ಬಂಗಾರಪ್ಪ ಅಂದು ಕಾಂಗೈಗೆ ಸೆಡ್ಡು ಹೊಡೆದು "ಕರ್ನಾಟಕ ಕಾಂಗ್ರೆಸ್ ಪಾರ್ಟಿಯ" ಜನ್ಮದಿನದಂದು ಬೃಹತ್ ಪ್ರಮಾಣದ 'ಜನಾದೇಶ ಸಮಾವೇಶ' ಮಾಡಿದ್ದರು. ಆಗ ಅಜಮಾಸು ಹತ್ತುಲಕ್ಷ ಜನರು ಸೇರಿದ್ದರು. ವಿದೇಶದಿಂದಲೂ ಪತ್ರಕರ್ತರು ಆಗ ಆಗಮಿಸಿದ್ದ ಶತಮಾನದಂತಹ ನೆನಪು ನನ್ನದು. ವಿದ್ಯುನ್ಮಾನ ಮಾಧ್ಯಮಗಳು ಇಂದಿನ ಹಾಗೆ ಅಂದು ವಿಜೃಂಭಿಸುತ್ತಿರಲಿಲ್ಲ.
ಸಿದ್ಧು ಜನ್ಮ ದಿನಾಚರಣೆಯ ಅಮೃತ ಮಹೋತ್ಸವ. ಸಹಜವಾಗಿ ಸಿದ್ರಾಮಯ್ಯ ಮುಖ್ಯಮಂತ್ರಿ ಕಾಲದಲ್ಲಿ ಋಣ ಉಂಡ ಋಣ ಬಾಧ್ಯಸ್ಥರು ಪೂರ್ಣ ಪ್ರಮಾಣದಲ್ಲಿ ಋಣಸಂದಾಯಕ್ಕೆ ಸಿದ್ಧಗೊಂಡಿರುವ ಸುದ್ಧಿಗಳಿವೆ. ಅಲ್ಲದೇ ಡಾವಣಗೇರಿ ಧಣಿಯ ದೊಡ್ಡ ಸಾಹುಕಾರಿಕೆಯ ದೊಡ್ಡ ಪ್ರಮಾಣದ ಸಹಕಾರವೂ ಅದಕ್ಕಿದೆ. ಅಷ್ಟಕ್ಕೂ ಸಿದ್ಧರಾಮಯ್ಯ ಸೆವೆಂಟಿಫೈವ್ ಸಂಭ್ರಮ ಜರುಗುತ್ತಿರುವುದೇ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬದಿಯ ಶಾಮನೂರು ಸಾಹುಕಾರರ ಜಮೀನಿನಲ್ಲಿ. ಒಂದು ಮೂಲದ ಪ್ರಕಾರ ಅಜಮಾಸು ಐದಾರು ಲಕ್ಷ ಜನರು ಸಿದ್ರಾಮಯ್ಯ ಜಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮೈಸೂರು, ಬೆಂಗಳೂರು, ರಾಮನಗರ, ಚಾಮರಾಜನಗರ ಪ್ರಾಂತ್ಯಗಳಿಗಿಂತ ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶಗಳಿಂದಲೇ ಹೆಚ್ಚು ಸಂಖ್ಯೆಯ ಮಂದಿ ಆಗಮಿಸುವ ಮಹತ್ತರ ನಿರೀಕ್ಷೆಗಳು. ಆಗಸ್ಟ್ ಮೂರರ ನಂತರ ಅಂತಹದ್ದೇ ಮಹತ್ತರ ಬದಲಾವಣೆಗಳು.
-ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.