Date: 17-09-2020
Location: ಬೆಂಗಳೂರು
ಎರಡಳಿದು ಒಂದಾಗುವ ಅದ್ವಯ ಸ್ಥಿತಿಯನ್ನು ಪ್ರತಿಪಾದಿಸುವ ಮಹಾದೇವಿ ಅಕ್ಕನ ವಚನಗಳ ಬಗ್ಗೆ ಹಿರಿಯ ಲೇಖಕ- ವಿಮರ್ಶಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಬರೆದಿದ್ದಾರೆ. ಅಕ್ಕನ ವಚನಗಳ ಚರ್ಚೆಯನ್ನು ಸಂಬಂಧ ವಾಚಕಗಳ ಹಿನ್ನೆಲೆಯಲ್ಲಿ ವಿಭಿನ್ನವಾಗಿ ನೋಡಬಹುದಾದ ನೋಟಕ್ರಮವನ್ನು ಈ ಬರೆಹದಲ್ಲಿ ಪ್ರಸ್ತಾಪಿಸಿದ್ದಾರೆ.
1
ಅಕ್ಕನವು ಎಂದು ನಂಬಲಾಗಿರುವ ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳ ನಿರೂಪಕಿಯನ್ನು ಸ್ವತಃ ಅಕ್ಕನೆಂದು ನಾವು ಭಾವಿಸಿದ್ದೇವೆ. ಹಾಗೆಯೆ ನಾವು ಆ ನಿರೂಪಣೆಗಳನ್ನೆಲ್ಲ ಅಕ್ಕ ಮಹಾದೇವಿಯ ಆತ್ಮಚರಿತ್ರೆಯ ನಿರೂಪಣೆಗಳೆಂದು ಕೂಡ ಹಲವಷ್ಟು ಸಲ ಭಾವಿಸಿದ್ದೇವೆ. ಆ ವಚನಗಳಲ್ಲಿ ನಿರೂಪಕಿ ಮತ್ತು ನಿರೂಪಿತರ ನಡುವಣ ಸಂಬಂಧ ಪ್ರೇಮ ಸಂಬಂಧ, ಪತಿಪತ್ನಿ ಸಂಬಂಧ, ದೇಹಸಂಗಾತ ಮತ್ತು ಆತ್ಮಸಂಗಾತ ಸಂಬಂಧ ಮಾತ್ರ ಎಂದೂ ಹಲವಷ್ಟು ಸಲ ಭಾವಿಸಿದ್ದೇವೆ. ಇದು ಶರಣಸತಿ ಲಿಂಗಪತಿ ಎಂಬ ಸಂಬಂಧದ ನಿರೂಪಣೆ ಎಂಬುದು ನಮ್ಮ ತಿಳಿವು. ಆದರೆ ಈ ಅಂಕಿತದ ವಚನಗಳಲ್ಲಿ ಇದೊಂದು ಹೆಚ್ಚು ಕಂಡುಬರುವ ಸಂಬಂಧವಾದರೂ ಇದೊಂದೆ ಸಂಬಂಧ ಮಾತ್ರ ಈ ನಿರೂಪಣೆಗಳಲ್ಲಿ ಇಲ್ಲ. ಇಲ್ಲಿ ಮಗಳು, ಹಳೆಮಗಳು, ತೊತ್ತು, ತೊತ್ತಿನ ಮಗಳು ಇತ್ಯಾದಿಯಾಗಿ ತಂದೆ ಮಗಳ (ಒಂದೆಡೆ ತಾಯಿ ಮಗಳ) ಸಂಬಂಧದಲ್ಲಿ ಕೂಡ ವಿಚಾರಗಳನ್ನು ನಿರೂಪಿಸಲಾಗಿದೆ. ಅಲ್ಲದೆ ಈ ಅಂಕಿತದ ವಚನಗಳಲ್ಲಿ ದ್ವಯವಾಗಿ ಭಕ್ತ ಮತ್ತು ದೈವಗಳ ಸಂಬಂಧವನ್ನು ಗುರ್ತಿಸಿಕೊಳ್ಳುವ ಹಾಗೆಯೆ ಅದ್ವಯವಾಗಿ ಅಂದರೆ ಎರಡಿಲ್ಲದಂತೆ ಒಂದಾಗಿ ಐಕ್ಯಗೊಂಡ ಸಂಬಂಧದಲ್ಲಿ ಕೂಡ ಗುರ್ತಿಸಿಕೊಳ್ಳಲಾಗಿದೆ.
ʼತನುವೆಂಬ ಕದಳಿ, ಮನವೆಂಬ ಕದಳಿ, ವಿಷಯಗಳೆಂಬ ಕದಳಿ, ಭವದ ಘೋರ ಅರಣ್ಯವೆಂಬ ಕದಳಿಯ ಗೆದ್ದು ಬಂದ ಮಗಳೆ ಎಂದು ಕರುಣೆಯಿಂದ ಬಿಗಿದು ಅಪ್ಪಿದರೆ ನಾನು ನಿನ್ನ ಹೃದಯಕಮಲದಲ್ಲಿ ಅಡಗುತ್ತೇನೆʼ ಎಂದು ಒಂದು ವಚನದಲ್ಲಿ (143) ತಂದೆ ಮಗಳ ಸಂಬಂಧದ ನಿರೂಪಣೆಯಿದೆ. ʼನಿನ್ನ ಬೆನ್ನುಬಿದ್ದ ಹಳೆ ಮಗಳು ನಾನು ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನು ಎನ್ನ ತಂದೆ ಕೇಳಾ ಚೆನ್ನಮಲ್ಲಿಕಾರ್ಜುನಾʼ ಎಂದು ಇನ್ನೊಂದು ವಚನದಲ್ಲಿ (10) ಸಂಬೋಧಿಸಲಾಗಿದೆ. ʼನಿಮ್ಮ ನಂಬಿದ ನೆಚ್ಚಿದ ಮಗಳ ಬೆಂಬಿಟ್ಟರೆ ಎಂತು ಬದುಕುವೆನಯ್ಯಾʼ ಎಂದು ಮತ್ತೊಂದು ವಚನದಲ್ಲಿ (148) ಕೇಳಲಾಗಿದೆ. ʼನೀನು ಮಾಡೆಂದ ಕೆಲಸವ ಮಾಡಿಕೊಂಡು, ನಿಮ್ಮ ಬೆಸಲಾದ ಮಗಳಾಗಿರ್ದೆ ಕಾಣಾ ಚೆನ್ನಮಲ್ಲಿಕಾರ್ಜುನಾʼ ಎಂದು ಮತ್ತೊಂದು ಕಡೆ (265) ಹೇಳಲಾಗಿದೆ. ಇನ್ನೊಂದೆಡೆ ಬಹಳ ಸ್ಪಷ್ಟವಾಗಿ ʼಗಂಡಹೆಂಡಿರ ಸಂಬಂಧವಿಲ್ಲಯ್ಯಾ, ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ, ನೀ ಮನೆಯೊಡೆಯನೆಂದು ನಾ ದುಡಿವೆ ತೊತ್ತುಗೆಲಸವನುʼ (193) ಎನ್ನಲಾಗಿದೆ. ʼಎನ್ನ ದೇವ ಚೆನ್ನಮಲ್ಲಿಕಾರ್ಜುನ ತನ್ನೊಳಗೆನ್ನ ಇಂಬಿಟ್ಟುಕೊಂಡನಾಗಿ ಇನ್ನು ನಿನ್ನ ತಂದೆ ತಾಯಿತನವನೊಲ್ಲೆ ನಾನುʼ ಎಂಬಂತೆ ಮತ್ತೊಂದು ವಚನದಲ್ಲಿ (414) ದೈವದೊಂದಿಗಿನ ತಂದೆ ತಾಯಿ ಸಂಬಂಧವನ್ನು ನಿರಾಕರಿಸಲಾಗಿದೆ. ಲಿಂಗತಂದೆ (230), ಎನ್ನದೇವ, ಎನ್ನ ಪ್ರಭುವೆ ಎಂಬ ಸಂಬೋಧನೆಗಳೂ ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳಲ್ಲಿ ಸಾಕಷ್ಟಿವೆ. ಚೆನ್ನ ಇರುವುದು ತನಗೆ ಆತ್ಮಸಂಗಾತಕ್ಕೆ ಎಂಬ ಮಾತೂ ಒಂದು ವಚನದಲ್ಲಿದೆ. (413)
ಅಂದರೆ ಪ್ರೇಮ, ಆತ್ಮಸಂಗಾತ, ಶರಣಸತಿ ಲಿಂಗಪತಿ, ಎರಡಿಲ್ಲದಂತೆ ಒಂದಾಗಿ ಬೆರೆತ ಸ್ಥಿತಿಗಳಲ್ಲದೆ ಹಲವು ಬಗೆಯ ಮಾನವ ಸಂಬಂಧಗಳಲ್ಲಿ ಚೆನ್ನಮಲ್ಲಿಕಾರ್ಜುನ ಅಂಕಿತದ ನಿರೂಪಣೆಗಳು ಇವೆ.
ವಚನ ಚಳವಳಿ ಬಸವರಾಜನನ್ನು ಅಣ್ಣ ಎಂದು ಕರೆದಿದೆ. ಮಹಾದೇವಿಯನ್ನು ಅಕ್ಕ ಎಂದು ಕರೆದಿದೆ. ಹಾಗಾಗಿಯೆ ಈ ಇಬ್ಬರೂ ಬಸವಣ್ಣ ಅಕ್ಕಮಹಾದೇವಿ ಎಂದೇ ಹೆಸರಾಗಿದ್ದಾರೆ. ಅಕ್ಕ ಆಕೆಯ ಹೆಸರಲ್ಲ. ಮಹಾದೇವಿಯನ್ನು ನಮ್ಮ ಸಮಾಜ ಹಾಗೆ ಭಾವಿಸಿದೆ. ಆಕೆ ಎಲ್ಲರಿಗೂ ಅಕ್ಕ. ಮನುಷ್ಯ ಸಂಬಂಧಗಳ, ರಕ್ತಸಂಬಂಧಗಳ ಮೂಲಕವೆ ನಮ್ಮವರನ್ನು ನಾವು ಗುರ್ತಿಸಿಕೊಳ್ಳುವುದು ನಮ್ಮಲ್ಲಿ ವಾಡಿಕೆ. ಹಾಗೇ ಅಣ್ಣ, ಅಕ್ಕ, ಕಕ್ಕ, ಚಿಕ್ಕ ಇವೆಲ್ಲ ರಕ್ತಸಂಬಂಧಗಳು ಮಾತ್ರವಲ್ಲ. ಸರ್ವನಾಮರೂಪಿ ಸಂಬಂಧಗಳು. ಯಾರನ್ನು ಬೇಕಾದರೂ ನಾವು ಪ್ರೀತಿಯಿಂದ ಅಣ್ಣ ಅಕ್ಕ ಎಂದು ಕರೆಯಬಹುದು.
ಲೋಕದ ಗಂಡಸರನ್ನು ಅಣ್ಣಾ, ತಂದೆ ಎಂದೆಲ್ಲ ಸಂಬೋಧಿಸುವ ಕೆಲವು ವಚನ ನಿರೂಪಣೆಗಳಲ್ಲಿ ತಂಗಿ, ತಾಯಿ, ಮಗಳು, ಪತ್ನಿ ಹೀಗೆ ಸಂಬಂಧಗಳ ಹೆಸರಿನಲ್ಲಿ ಹೆಣ್ಣನ್ನು ಅಧೀನವಾಗಿ ಇರಿಸುವ ರಕ್ತಸಂಬಂಧಗಳನ್ನೆ ನಿರಾಕರಿಸುವ ಮಾತುಗಳು ಬರುತ್ತವೆ. ದೈವದ ಜೊತೆ ರಕ್ತಸಂಬಂಧ ಏರ್ಪಡಿಸಿಕೊಳ್ಳುವ ಉದ್ದೇಶವೇ ಲೋಕದ ಅಸಮಾನ ಸಂಬಂಧಗಳನ್ನು ನಿರಾಕರಿಸುವುದು. ಚೆನ್ನನ ಜೊತೆ ನಿರೂಪಕಿ ಏರ್ಪಡಿಸಿಕೊಂಡಿರುವ ರಕ್ತಸಂಬಂಧ ಬಿಸಿಲಿನ ಒಳಗೆ ಶಾಖ ಅಂತರ್ಗತ ಆಗಿರುವ ರೀತಿಯ ಸಂಬಂಧ (418). ಲೋಕದ ಅಸಮಾನ ರಕ್ತಸಂಬಂಧಗಳನ್ನು ನಿರಾಕರಿಸಲು ಹೆಣ್ಣೊಬ್ಬಳು ಈ ಲೋಕದ ಅದೇ ಅಸಮಾನ ಸಂಬಂಧಗಳನ್ನೆ ದೈವದ ಜೊತೆ ಏರ್ಪಡಿಸಿಕೊಳ್ಳುವುದು ಮತ್ತು ಅದೇ ಅಸಮಾನ ಸಂಬಂಧಗಳ ಪರಿಭಾಷೆಯಲ್ಲೆ ಮಾತಾಡುವುದು ವಿಪರ್ಯಾಸ. ಆದರು ಈ ಸಂಬಂಧದ ಚಲನೆ ಎಲ್ಲಿಗೆ ತಲುಪುತ್ತದೆ ಎಂದರೆ ಅದು ಎರಡಳಿದು ಒಂದೆ ಆಗುವಲ್ಲಿಗೆ ತಲುಪುತ್ತದೆ. ಇವಳನ್ನು ಅವನು ಇಂಬಿಟ್ಟುಕೊಳ್ಳುವುದು ಅವನೊಳಗೆ ಇವಳು ಒಳಗಾಗುವುದು ಎರಡೂ ಇಲ್ಲಿವೆ. ಅದೊಂದು ರೀತಿಯಲ್ಲಿ ಹೊರಗೆ ತೋರಿ ಕಾಣದಂತಹ ಹಾಲಿನ ಒಳಗೆ ತುಪ್ಪ ಅಡಗಿ ಇರುವಂತಹ ಸಂಬಂಧ. ಹೆಣ್ಣು ತಾನು ಹುಟ್ಟಿ ಬೆಳೆದ ಮನೆಯ ಮತ್ತು ಕೊಟ್ಟು ಬದುಕಿದ ಮನೆಯ ಎಲ್ಲ ಕಟ್ಟು ಕಟ್ಟಳೆ ಹೊರೆಗಳನ್ನು ಕಳಚಿಕೊಂಡ ಸಂಬಂಧ. (427)
2
ದೇವ, ಲಿಂಗ, ಪ್ರಭು, ತಂದೆ ಎಂಬುವೆಲ್ಲ ದೇವರನ್ನು ಭಕ್ತರು ಸಂಬೋಧಿಸುವ ಸಾಮಾನ್ಯ ಸಂಬೋಧನೆಗಳು. ಅಜಗಣ್ಣದೇವ, ಅಜಗಣ್ಣತಂದೆ ಅಜಗಣ್ಣಲಿಂಗ ಹೀಗೆ ದೇವ ಅಣ್ಣ ತಂದೆ ಎಂಬೆಲ್ಲ ಸಂಬಂಧ ಸಂಬೋಧನೆಗಳನ್ನು ಅಜಗಣ್ಣ ಅಂಕಿತದ (ಮುಕ್ತಾಯಕ್ಕನ) ವಚನಗಳಲ್ಲಿ ಬಳಸಲಾಗಿದೆ. ಅಣ್ಣ, ತಂದೆ, ದೇವ ಎಂಬುವೆಲ್ಲ ಇಲ್ಲಿ ಸಾಮಾನ್ಯವಾದ ಆತ್ಮೀಯತೆಯ ದ್ಯೋತಕವಾದ ಬಳಕೆಗಳು. ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳಂತೆ ಇವಕ್ಕೆ ರಕ್ತಸಂಬಂಧಗಳನ್ನು ಏರ್ಪಡಿಸಿಕೊಳ್ಳುವ ಉದ್ದೇಶವಾಗಲೀ, ಅವುಗಳ ನಿರಸನದ ಉದ್ದೇಶವಾಗಲಿ ಇಲ್ಲವೆ ಅಸಮಾನ ಸಂಬಂಧಗಳ ನಿರಾಕರಣೆಯ ಉದ್ದೇಶವಾಗಲಿ ಇಲ್ಲ. ಅಕ್ಕನ ನಂತರ ಅತಿ ಹೆಚ್ಚು ವಚನಗಳು ದೊರಕಿರುವುದು ನೀಲಮ್ಮನ ಹೆಸರಿನಲ್ಲಿ. (ಒಟ್ಟು 288 ವಚನಗಳು) ಅಲ್ಲಿ ಅಂಕಿತದ ಜೊತೆ ಈ ಯಾವ ರೀತಿಯ ಸಂಬಂಧವಾಚಿ ಸಂಬೋಧನೆಗಳೂ ಇಲ್ಲ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ ಅಂಕಿತದ (ಮೋಳಿಗೆ ಮಹಾದೇವಿಯ) ವಚನಗಳಲ್ಲಿ ಅಲ್ಲಲ್ಲಿ ಮಲ್ಲಿಕಾರ್ಜುನ ಲಿಂಗ ಎಂಬ ಪ್ರಯೋಗವುಂಟು. ಶಂಭುಜಕ್ಕೇಶ್ವರ ಅಂಕಿತದ (ಸತ್ಯಕ್ಕನ) ವಚನಗಳಲ್ಲಿ ಒಂದೆರಡು ಕಡೆ ದೇವ ಎಂಬ ಪದ ಸೇರಿಸಲಾಗಿದೆ. ಇವೂ ಕೂಡ ಆತ್ಮೀಯತೆಯ ಸಂಬೋಧನೆಗಳಷ್ಟೆ. ಸಂಗಯ್ಯ ಅಂಕಿತದ (ನೀಲಮ್ಮನ) ವಚನಗಳಲ್ಲಿ ಒಂದೆಡೆ ನಾನು ನಿಮ್ಮ ಹೆಸರಿಲ್ಲದ ಮಗಳು ಎಂಬ ನಿರೂಪಣೆ ಇದೆ. (944) ಹಾಗೆಯೆ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ಅಂಕಿತದ (ಹಡಪದ ಅಪ್ಪಣ್ಣಗಳ ಪುಣ್ಯಶ್ರೀ ಲಿಂಗಮ್ಮನ) ವಚನದಲ್ಲಿ ಒಂದೆಡೆ ಚೆನ್ನಮಲ್ಲೇಶ್ವರನ ಕರುಣದ ಶಿಶು ನಾನು ಎಂಬ ಹೇಳಿಕೆಯಿದೆ. (1302)
ಇವನ್ನೆಲ್ಲ ನೋಡಿದರೆ ಮನುಷ್ಯ ಸಂಬಂಧಗಳ ಮೂಲಕ ದೇವ ಭಕ್ತ ಸಂಬಂಧವನ್ನು ನಿರೂಪಿಸುವುದು ವಚನಕಾರರ ಒಂದು ಮುಖ್ಯವಾದ ವಿಚಾರಮಂಡನಾ ಕ್ರಮ ಎಂಬುದು ತಿಳಿಯುತ್ತದೆ. ಮತ್ತು ಆ ಸಂಬಂಧಗಳು ವೈವಿಧ್ಯಮಯ ಆಗಿವೆ ಎನ್ನುವುದು ಕೂಡ ಇಲ್ಲಿ ಗಮನಾರ್ಹ. ಶರಣಸತಿ ಲಿಂಗಪತಿ ಸಂಬಂಧ ಇಂತಹ ಸಂಬಂಧಗಳಲ್ಲಿ ಒಂದು ಮುಖ್ಯವಾದ ಸಂಬಂಧ ಹೌದು. ಆದರೆ ಇದಲ್ಲದೆ ಪ್ರಾಣ ಪ್ರಾಣಿ, ದೇವ ಮಾನವ, ತೊತ್ತು ಒಡೆಯ, ಲಿಂಗ ಅಂಗ, ತಂದೆ ಮಗಳು (ಮಗ), ತಾಯಿ ಮಗಳು (ಮಗ), ಎರಡಲ್ಲದ ನಾನೆ ಶಿವ ಮತ್ತು ಶಿವನೇ ನಾನು ಎಂಬ ಅದ್ವಯ ಸಂಬಂಧ ಇಂತಹ ಹಲವು ಸಂಬಂಧಗಳು ಇಲ್ಲಿವೆ. ಹಾಗೆಯೆ ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳಲ್ಲಿನ ನಿರೂಪಕಿ ಮತ್ತು ಚೆನ್ನರ ಸಂಬಂಧವಂತು ಈಗಾಗಲೆ ಹೇಳಿರುವಂತೆ ಪ್ರೇಮ ಸಂಬಂಧ ಮಾತ್ರ ಅಲ್ಲ. ಅದು ಹಲ ಬಗೆಯ ಮಾನವ ಸಂಬಂಧಗಳ ನಿರೂಪಣೆ.
3
ಭಕ್ತಳಾಗುವುದು ಎಂದರೆ ಕಾಮವಿಕಾರವನ್ನು ಕಳೆದುಕೊಳ್ಳುವುದು. ಕಾಮವಿಕಾರಿಗಳ ಸಂಗವನ್ನು ತೊರೆಯುವುದು. (159). ಕಾಯಸಂಗ ಲಿಂಗಸಂಗ ಎರಡೂ ತದ್ವಿರುದ್ಧ. ಕಾಯಸಂಗ ಮಾಡುವವರು ಲಿಂಗಸಂಗ ಮಾಡಲಾರರು. ಚೆನ್ನ ಮಲ್ಲಿಕಾರ್ಜುನ ಎರಡು ಮನವಾದವರಿಗೆ ಒಲಿಯುವುದಿಲ್ಲ. ಅವನಲ್ಲಿ ಮಾತ್ರವೇ ಮನವಿದ್ದರೆ ಅವನು ಒಲಿಯುತ್ತಾನೆ. (155). ಏಕದೇವ ಉಪಾಸನೆಯ ತತ್ವ ಮತ್ತು ಏಕಪತಿನಿಷ್ಠೆ ಎರಡೂ ಸ್ತ್ರೀ ವಚನಕಾರ್ತಿಯರಲ್ಲಿ ಸಮಾನವಾಗಿ ಪ್ರತಿಪಾದಿಸಲ್ಪಟ್ಟಿವೆ. ಒಳಗು ಹೊರಗು ಎಂಬ ಉಭಯ ಶಂಕೆಯ ಕಳೆದುಕೊಳ್ಳುವ ಬಗ್ಗೆ 133ನೆ ವಚನ ಹೇಳುತ್ತದೆ. ಶಿವಶರಣರ ಬಳಗ ʼಒಂದುʼ ಆದ ಮೇಲೆ ಅದರಾಚೆಗೆ ಇರಬಹುದಾದ ಎಲ್ಲ ಜಾತಿ, ಧರ್ಮ, ಭಾಷೆ, ನೀತಿ, ಆಚಾರಗಳನ್ನು ಕಳೆದುಕೊಳ್ಳುವ ಭಕ್ತನು ಶಿವಶರಣರ ಜೊತೆ ಸೇರಿ ಶರಣ/ಣೆ ಮಾತ್ರ ಆಗುವ ಕಟ್ಟಳೆಯನ್ನು ಇಲ್ಲಿ ಹೇಳಲಾಗಿದೆ. ತನ್ನನ್ನು ತಾನು ಹಲವಕ್ಕೆ ಹಂಚಿಕೊಳ್ಳದೆ ಒಂದರೊಳಗೆ ಒಂದಾಗಿ ಇರುವ ಜೀವನ ತತ್ವ ಇಲ್ಲಿದೆ.
4
131 ಮತ್ತು 132ನೆ ವಚನಗಳಲ್ಲಿ ಭಕ್ತಿ ಮತ್ತು ಸಂಸಾರ ಎರಡನ್ನೂ ಏಕಕಾಲಕ್ಕೆ ಸಂಭಾಳಿಸುವ ಬಗ್ಗೆ ನಿರಾಕರಣೆ ಇದೆ. ಅಲ್ಲಿಯೂ ಸಲ್ಲದ ಇಲ್ಲಿಯೂ ಸಲ್ಲದ ಸ್ಥಿತಿಯ ನಿರಾಕರಣೆ ಇದು. ಲೋಕದ ಸ್ಥಾಪಿತ ಆಚಾರಗಳ ಬಗೆಗಿನ ಪ್ರತಿರೋಧ ಇದು. ಒಲೆಯ ಒಳಕ್ಕೆ ಬಂದು ಉರಿ ತಾಕದಂತೆ ಇರುವ, ಕಾಡಿನ ಒಳಕ್ಕೆ ನಡೆದು ಮಾತೇ ಮರೆತಂತೆ ಇರುವ ಸಾಧ್ಯತೆ ಬಗ್ಗೆ; ಸರ ಮತ್ತು ನಿಸ್ಸರ ಅಂದರೆ ಶಬ್ದ ಮತ್ತು ನಿಶ್ಶಬ್ದ ಎರಡೂ ಒಂದಾದ ಸ್ಥಿತಿಯ ಸಾಧನೆ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಗಂಡ ಮತ್ತು ಮಿಂಡ ಹೇಗೆ ಇಬ್ಬರಲ್ಲೂ ಇರುವುದು ತರವಲ್ಲವೊ ಹಾಗೆ ಲೌಕಿಕ ಪಾರಮಾರ್ಥಿಕ ಎಂಬ ಎರಡಳಿದು ಒಂದೇ ಆಗಿ ಇರುವ ಬಗ್ಗೆ ಇಲ್ಲಿ ಹೇಳಲಾಗುತ್ತಿದೆ. ಇದು ಅವಳಿ ವೈರುಧ್ಯಗಳಲ್ಲಿ ಲೋಕವನ್ನು ನೋಡುವ ಮತ್ತು ಬಾಳುವ ಎರಡರ ನಿರಾಕರಣೆಯೂ ಹೌದು.
ಕಂಗಳ ಕಳೆದು ಕಾಮನ ಮೂಗ ಕೊಯ್ದು, ಭಂಗದ ಬಟ್ಟೆಯ ಭವ ಗೆಲಿದವಳಿಗೆ ಅಂಗವೆಲ್ಲಿಯದು ಹೇಳಾ?
ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದಡೇನುಂಟು? ಅಂಗವೆ ಲಿಂಗವಹ ಪರಿಯನೆನಗೆ ಹೇಳಾ,
ಶ್ರೀ ಗಿರಿ ಚೆನ್ನಮಲ್ಲಿಕಾರ್ಜುನ. (135).
ಇಲ್ಲಿ ಅಂಗ ಮತ್ತು ಲಿಂಗ ಎರಡಾಗಿ ಲೋಕವನ್ನು ಕಾಣುವ ಕಾಣುವಿಕೆಯನ್ನು ನಿರಾಕರಿಸಲಾಗುತ್ತಿದೆ. ಆ ಮೂಲಕ ಗಂಡುಗಳ ಲೌಕಿಕ ಸುಖಕ್ಕಾಗಿಯೆ ಹೆಣ್ಣಿನ ಅಂಗ ಇದೆ ಎಂದು ಭಾವಿಸುವ ಭಾವನೆಯನ್ನೂ ನಿರಾಕರಿಸಲಾಗುತ್ತಿದೆ. ಅಂಗವೇ ಲಿಂಗವಾದ ಬಳಿಕ ಆ ಅಂಗವನ್ನು ಕಾಮದಿಂದ ನೋಡಲಾದೀತೆ? ಶಿವಲಿಂಗವನ್ನು ಕಾಮದಿಂದ ನೋಡಲು ಸಾಧ್ಯವೇ? ಲಿಂಗೈಕ್ಯಂಗೆ ಅಂಗಸಂಗ ಮತ್ತೆಲ್ಲಿಯದು?! (145). ಹೆಣ್ಣೊಬ್ಬಳ ದೇಹ ಶಿವದೇಹವೆ ಆದಾಗ ಶಿಮೂರ್ತಿಯೆ ಆದಾಗ ಆ ದೇಹವನ್ನು ಇನ್ನೊಬ್ಬ ಗಂಡು ಕಾಮದಿಂದ ನೋಡುವ ಪ್ರಶ್ನೆಯೇ ಇಲ್ಲ. ಇಲ್ಲಿ ದೈವ ಮತ್ತು ಹೆಣ್ಣು ಈ ಇಬ್ಬರ ಅದ್ವಯತೆಯು ಲೌಕಿಕ ಕಾಮುಕ ದೃಷ್ಟಿಯಿಂದ ಪಡೆಯುವ ಬಿಡುಗಡೆಯು ಕೂಡ. ಹೆಣ್ಣಿಗೆ ಹೀಗೆ ಭಕ್ತಿ ಹಲವು ಗಂಡುಗಳ ಉಪಟಳದಿಂದ ಬಿಡುಗಡೆ ನೀಡುವ ಸಾಧನ. ಶೃಂಗಾರವೆಂಬ ಹಂಚಿಗೆ ಹಲ್ಲು ತೆರೆಯುವುದೆಂದರೆ ಹಂಚಿಯ ಹುಲ್ಲಿಗೆ (ತೃಣಕ್ಕೆ) ನಾಲಿಗೆ ಹಾಕಿದರೆ ನಾಲಿಗೆ ಹರಿದು ರಕ್ತ ಬರುವುದಲ್ಲದೆ ಸುಖವಿಲ್ಲ. ಹಾಗಾಗಿ ಲೋಕದ ಗಂಡಸರೊಂದಿಗಿನ ಶೃಂಗಾರಕ್ಕೆ ದೇಹ ಒಡ್ಡಿ ಅದನ್ನು ಸವೆಸುವುದು ತರವಲ್ಲ. ಭಕ್ತಿಯೆ ಸರಿಯಾದ ಜೀವನ ಮಾರ್ಗ ಎಂಬ ತತ್ವವೂ ಇಲ್ಲಿದೆ. ಭಕ್ತೆಯಾದ ಹೆಣ್ಣು ಮತ್ತು ಗಂಡಸಾದ ದೈವ ಇವುಗಳ ನಡುವೆ ಲಿಂಗಭೇದವೇ ಇಲ್ಲದ; ಗಂಡು ಹೆಣ್ಣೆಂಬ ಇಬ್ಬಗೆಯ ಲೈಂಗಿಕ ಅಸ್ತಿತ್ವ ಅಳಿದ ಒಂದುತನ ಇಲ್ಲಿ ಪ್ರತಿಪಾದಿತವಾಗಿದೆ. ಇಂತಹ ಪ್ರತಿಪಾದನೆಗಳಲ್ಲಿ ನಾನು ನೀನು ಎಂಬ ಭೇದ ಇಲ್ಲವಾಗಿ ಸಂಬಂಧದ ಪ್ರಶ್ನೆಯೇ ಉದ್ಭವಿಸುವುದಿಲ್ಲ.
5
ಹೊನ್ನು ಮುರಿದಡೆ ಬೆಸಸಬಹುದಲ್ಲದೆ, ಮುತ್ತು ಒಡೆದಡೆ ಬೆಸಸಬಹುದೆ?
ಮನ ಮುರಿದಡೆ ಮನಕೊಬ್ಬರೊಡೆಯರುಂಟೆ? ಚೆನ್ನಮಲ್ಲಿಕಾರ್ಜುನ ಸಾಕ್ಷಿಯಾಗಿ,
ಬೇಟವುಳ್ಳಲ್ಲಿ ಬೆರೆಸೆ ಘನ. (431)
ಚೆನ್ನಮಲ್ಲಿಕಾರ್ಜುನನೇ ಸಾಕ್ಷಿಯಾಗಿ ಇರುವಾಗ ಎಲ್ಲೆಲ್ಲಿ ಬೇಟ ದೊರೆಯುತ್ತದೊ ಅಲ್ಲೆಲ್ಲ ನಾನು ನನ್ನ ಮನವನ್ನು ಒಡೆದು ಅವನು ಇವನು ಮತ್ಯಾವನೊ ಎಂದು ಸಿಕ್ಕವರಲ್ಲೆಲ್ಲ ಬೆರೆಯಲಾರೆ. ನನ್ನ ಮನ ಚೆನ್ನನಿಗೆ ಮಾತ್ರ ಮೀಸಲು. ಅವನು ಸದಾ ನನ್ನ ಮನದಲ್ಲೆ ನನ್ನ ಜೊತೆಯಲ್ಲೆ ಇರುತ್ತಾನೆಯಾಗಿ ಅವನಿಲ್ಲದ ಜಾಗವಾಗಲಿ ಸ್ಥಳವಾಗಲಿ ನನಗೆ ಇಲ್ಲ. ಹಾಗಾಗಿ ಮುರಿದ ಮನದ ತುಣುಕುಗಳಿಗೆ ಒಬ್ಬೊಬ್ಬ ಒಡೆಯನನ್ನು ನಾನು ಕಲ್ಪಿಸಿಕೊಳ್ಳಲಾರೆ. ನನ್ನ ಮನ ಅವನದೆ. ನನ್ನ ತನುವೂ ಅವನೆದೆ. ನನಗೆ ಮನ ಮತ್ತು ತನುವಿನಲ್ಲಿ ಭೇದವಿಲ್ಲ. ಇನ್ನೊಬ್ಬನಿಗೆ ನನ್ನ ಮನವ ಒಡೆದು ನೀಡಲಾರೆ. ಒಡೆದ, ಮುರಿದ ಚಿನ್ನ ಬೆಸುಗೆ ಮಾಡಬಹುದು ಆದರೆ ಮುತ್ತು ಬೆಸಸಲಾಗದು. (ಮನ/ದೇಹ ಮುತ್ತಿನ ಹಾಗೆ ಒಡೆದರೆ ಬೆಸೆಯಲಾಗದು) ಮನ ಒಡೆದು ಇವನಿಗೆ ಒಂದು ಚೂರು ಇನ್ನೊಬ್ಬನಿಗೆ ಒಂದು ಚೂರು ಕೊಡಲಾಗದು. ನನ್ನ ಮನ ಚೆನ್ನನಲ್ಲೆ ನಟ್ಟಿರುವಾಗ ಅದು ಒಡೆಯಲೂ ನಾನು ಬಿಡಲಾರೆ. ಬೇಟವುಳ್ಳಲ್ಲಿ ಬೆರೆಸೆ. ಒಮ್ಮೆ ಸಿಕ್ಕವನು ಕೆಲವು ದಿನ ಹೊಂದಾಣಿಕೆ ಆಗದಿದ್ದರೆ ಮತ್ತೊಬ್ಬ ಸಿಕ್ಕಾಗ ಅವನನ್ನು ಕೂಡಲಾರೆ ಎಂಬ ಏಕೊನಿಷ್ಠೆ ಈ ನಿರೂಪಣೆಯಲ್ಲಿದೆ.
ಹೊಸ ಹೊಸ ಸಂಗಾತಿಯ ಹುಡುಕಾಟಗಳ ಬದಲಿಗೆ ಲೈಂಗಿಕ ನಿಷ್ಠೆಯ ಬಗ್ಗೆ ಈ ಪದ್ಯ ಹೇಳುತ್ತಿದೆ ಎಂದು ಅನ್ನಿಸುತ್ತದೆ. ಆದರೆ ಹೊಸ ಹೊಸ ಸಂಗಾತಿಗಳು ಕಾಡುವ, ಕೂಡುವ ಒತ್ತಡ/ಅವಕಾಶ ಬಂದಾಗ ಅದೆಲ್ಲ ನನ್ನಿಂದ ಸಾಧ್ಯವಿಲ್ಲ ಎಂದೆ ಇಲ್ಲಿ ನಿರೂಪಕಿ ತನ್ನ ಮನ ಘನ, ಅದು ಚೆನ್ನನಲ್ಲಿ ಈಗಾಗಲೆ ಎರಡಿಲ್ಲದೆ ಒಂದಾದದ್ದು ಎಂದು ಹೇಳುತ್ತಿದ್ದಾಳೆ. ಹಾಗೆಯೆ ತನು ಮತ್ತು ಮನಗಳು ಎರಡಲ್ಲ. ಒಂದೆ. ಹಾಗೆ ಒಂದೇ ಅದ ತನುವನ್ನು ಒಡೆದು ಇನ್ನೊಬ್ಬರಿಗೆ ನೀಡಲಾಗದು. ನೀಡಿದರೆ ಮತ್ತೆ ಬೆಸಸಲಾಗದು ಎಂದು ಇಲ್ಲಿ ಹೇಳಲಾಗುತ್ತಿದೆ.
ಚಿನ್ನ ಬೆಸೆಯುವುದು ಮತ್ತು ಸಂಭೋಗ ಎರಡೂ ಒಂದೆ ಎಂದು ಒಮ್ಮೆ ಈ ಕವಿತೆ ಓದಿದಾಗ ಅನ್ನಿಸಬಹುದು. ಆದರೆ ವ್ಯಕ್ತಿ ಎಂದರೆ ಅದು ದೇಹ ಮಾತ್ರವಲ್ಲ. ದೇಹ ಮನಗಳು ಎರಡಲ್ಲದಂತೆ ಒಂದೇ ಮುತ್ತಿನ ಹಾಗೆ ಒಂದಾದ ಸ್ಥಿತಿ ಎಂಬುದು ಇಲ್ಲಿ ಇಂಗಿತ. ಹಾಗೆ ಮುತ್ತಿನ ಹಾಗೆ ಕೂಡಿದ ಮನ ತನುಗಳ 'ನಾನು' (ವ್ಯಕ್ತಿತ್ವ) ಒಡೆದರೆ ಬೆಸಸಲಾಗದು. ಒಡೆದು ಇಬ್ಬರಿಗೋ ಮೂವರಿಗೋ ತನುಮನವ ಹಂಚಲಾಗದು. ಇಲ್ಲಿ ಸಂಭೋಗ, ಸ್ನೇಹ, ಪ್ರೇಮ, ಪ್ರೀತಿ, ಲೈಂಗಿಕ ನಿಷ್ಠೆ, ದೇಹ-ಮನಗಳ ಏಕತ್ರ ಸ್ಥಿತಿ ಇವೆಲ್ಲವೂ ಏಕತ್ರ ಭಕ್ತಿ ಮತ್ತು ಏಕದೇವೋಪಾಸನೆಗು ದುಡಿಯುತ್ತವೆ.
6
ʼಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು. ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರೆಲೆ ಅವ್ವಾʼ (214) ಎಂದು ಒಂದು ವಚನದಲ್ಲಿ ಹೇಳಲಾಗಿದೆ. ಗಂಡ ಮತ್ತು ಹೆಂಡತಿ ಇಬ್ಬರದು ಇಲ್ಲಿ ಒಂದೆ ದೇಹ. ಅದು ಗಂಡನ ಕಾಲುಭಾಗ ಮತ್ತು ಹೆಂಡತಿಯ ತಲೆಭಾಗ ಜೋಡಿಸಿದ ದೇಹ. ನಮ್ಮ ಪಾರಂಪರಿಕ ಅರ್ಧನಾರೀಶ್ವರ ಕಲ್ಪನೆಗಿಂತ ಭಿನ್ನವಾದ ಅರ್ಧನಾರೀಶ್ವರ (ಅಕ್ಕನಾರೀಶ್ವರ) ಕಲ್ಪನೆ ಇದು. ಅಂದರೆ ಚೆನ್ನಮಲ್ಲಿಕಾರ್ಜುನ ಮತ್ತು ವಚನ ನಿರೂಪಕಿ ಇಬ್ಬರದೂ ಎರಡಲ್ಲದ ಒಂದೆ ದೇಹ. ಮನ ಮಾತ್ರ ಒಂದಾದ ಭಾವವಲ್ಲ; ದೇಹ ಪ್ರಾಣಗಳೆಲ್ಲ ಒಂದಾದ ಗಂಡು ಹೆಣ್ತನಗಳು ಕೂಡ ಅಳಿದು ಬೆರೆದ ಕಲ್ಪನೆಯಿದು. ಇದು ನಮ್ಮ ಪಾರಂಪರಿಕ ಗಂಡು ಹೆಣ್ಣೆಂಬ ದ್ವಯಲಿಂಗಿ ಕಲ್ಪನೆಯನ್ನೂ ಮೀರುವ ಕಲ್ಪನೆ. ಇಂತಹ ಹಲ ಬಗೆಯ ಒಂದುತನದ ಕಲ್ಪನೆಗಳು ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳಲ್ಲಿ ಇವೆ.
ಇನ್ನೊಂದು ಆಸಕ್ತಿಕರ ಮತ್ತು ಅಸಮಾನ ಸಂಗತಿ ಇಲ್ಲಿ ಉಲ್ಲೇಖಾರ್ಹ ಮತ್ತು ಪ್ರಶ್ನಾರ್ಹ. ಒಟ್ಟು 12ನೆ ಶತಮಾನದ ಆಸುಪಾಸು ಇದುವರೆಗೆ ದೊರಕಿರುವ 35 ಮಂದಿ ವಚನಕಾರ್ತಿಯರಲ್ಲಿ 14 ಮಂದಿ ಪುಣ್ಯಸ್ತ್ರೀಯರು ಇದ್ದಾರೆ. ಅಂದರೆ ಸಂಬಂಧದಲ್ಲಿ ಪುಣ್ಯಸ್ತ್ರೀಯರು ಸಾಕಷ್ಟು ವಚನಕಾರ್ತಿಯರಿದ್ದಾರೆ. ಆದರೆ ಪುಣ್ಯಪುರುಷರು ಯಾರೂ ಇಲ್ಲ. ಹಾಗಾದರೆ ಈ ಪುಣ್ಯಸ್ತ್ರೀ ಸಂಬಂಧ 'ಶರಣರ ಹೆಣ್ಣಿನ ಕುರಿತ ಆಚಾರ'ದ ಬಗ್ಗೆ ಏನು ಹೇಳುತ್ತದೆ?
7
ಲೈಂಗಿಕ ಸೂತಕದ, ಲೈಂಗಿಕ ಅಸ್ಪೃಶ್ಯತೆಯ ಅಲಿಖಿತ ನಿಯಮಗಳು ನಮ್ಮಲ್ಲಿ ಸಾಕಷ್ಟು ಚಾಲ್ತಿಯಲ್ಲಿವೆ. ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು ಇಂತಹ ಆಚಾರವನ್ನು ಪ್ರಶ್ನಿಸಿವೆ.
ಸೂತಕ ಮನಸ್ಸಿಗೊ ದೇಹಕ್ಕೊ? ಮನದ ಸೂತಕ ಇಲ್ಲವಾದಾಗ ದೇಹದ ಸೂತಕಕ್ಕೆ ಅವಕಾಶವುಂಟೆ? ಜೀವದ ಆದಿಯಲ್ಲಿ ಇಲ್ಲದಿರುವ ಸೂತಕ ಆನಂತರವಾದರೂ ಏತಕ್ಕೆ? ಮನುಷ್ಯ ಹುಟ್ಟಿದಾಗ ಚಿಕ್ಕಮಕ್ಕಳಿಗೆ ಇಲ್ಲದ ಲೈಂಗಿಕ ಸೂತಕ ದೊಡ್ಡವರಾದಾಗ ಏತಕ್ಕೆ ಬರುತ್ತದೆ? ಇದಕ್ಕೆಲ್ಲ ನಾವು ಮಾಡಿಕೊಂಡಿರುವ ರೀತಿ ರಿವಾಜೇ ಕಾರಣವಲ್ಲವೆ? ನಮ್ಮ ಮನಸ್ಸು ಲೌಕಿಕ ವ್ಯಕ್ತಿಗಳಲ್ಲಿ ನೆಡದೆ ದೈವದಲ್ಲಿ ನೆಟ್ಟಿದ್ದೆ ಆದರೆ ಆಗ ಈ ಹೆಣ್ಣು ಗಂಡು ಎಂಬ ಲಿಂಗಭೇದ ಆದರೂ ಎಲ್ಲಿರುತ್ತದೆ? ದೇವರ ದೃಷ್ಟಿಯಲ್ಲಿ ಈ ಲೋಕದಲ್ಲಿ ಇರುವವರೆಲ್ಲರೂ ಹೆಣ್ಣು ಎಂದ ಮೇಲೆ ಇನ್ನು ಎಲ್ಲರೂ ಆತನ ಶರಣಸತಿಯರು ಎಂದ ಮೇಲೆ ಶರಣಸತಿಯರಲ್ಲೆ ಗಂಡು ಹೆಣ್ಣೆಂಬ ಭೇದ ಮಾಡುವುದು ಏತಕ್ಕೆ?
ಭಕ್ತಿಯ ಮೂಲಕ ಸಮಾಜದಲ್ಲಿ ಜಾತಿ ಭೇದ, ವರ್ಣಭೇದ, ಪಂಥ ಭೇದಗಳನ್ನು ತೊಡೆಯುವಂತೆಯೇ ಲಿಂಗಭೇದವನ್ನೂ ತೊಡೆಯಬೇಕು ಎಂಬುದು ಇಲ್ಲಿನ ಇಂಗಿತ. ಲೋಕದ ಎಲ್ಲರೂ ಶರಣಸತಿಯರು. ಅಕ್ಕನ ಇನ್ನೊಂದು ವಚನದಲ್ಲಿ (06) ಅಂಗ ಲಯವಾಗಿ ಅನಂಗವಾಗುವ, ಮನ ಲಯವಾಗಿ ಅಮನಸ್ಕವಾಗುವ, ಭಾವ ಬಯಲಾಗಿ ಅಭಾವವಾಗುವ, ಆಂಗ ಮನ ಭಾವಗಳೆಲ್ಲ ಅಳಿದಾಗ ಕಾಯವು ಅಕಾಯವಾಗುವ ವಿಚಾರ ಬರುತ್ತದೆ. ʼಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ ಶರಣಪತಿ ಲಿಂಗಪತಿಯಾದೆನುʼ ಎಂಬ ಮಾತು ಬರುತ್ತದೆ. ನಾವು ದೇವನಿಗೆ ಅರ್ಪಿಸಿಕೊಂಡ ಮೇಲೆ ನಮ್ಮ ದೇಹವೂ ದೇವನದೆ ಅಲ್ಲವೆ? ಅದರ ಅಂಗ, ಮನ, ಭಾವಗಳ ಮೇಲೆ ನಮ್ಮ ಒಡೆತನವಾದರೂ ಎಲ್ಲಿರುತ್ತದೆ? ಅದನ್ನು ಇತರರಿಗೆ ಅರ್ಪಿಸಲು ಎಲ್ಲಾದರೂ ಅವಕಾಶವುಂಟೆ? ಹೀಗಿರುವಾಗ ತನುವಿನ ಸೂತಕ, ಮನದ ಸೂತಕ, ಭಾವಸೂತಕಗಳ ಪ್ರಶ್ನೆಯೇ ಬರಬಾರದು.
ಇವತ್ತು ನಾವು ಏನು ಸಾಮಾಜಿಕ ಅಂತರದ ಬಗ್ಗೆ ಕೊರೊನಾ ಕಾಲದಲ್ಲಿ ಮಾತನಾಡುತ್ತಿದ್ದೇವೆ; ಇಂತಹ ಅಸ್ಪೃಶ್ಯತೆಯ ಬಗೆಗೆ ಈ ಪದ್ಯ ಮಾತಾಡುತ್ತಿದೆ. ಅಂದರೆ ಲೈಂಗಿಕ ಅಸ್ಪೃಶ್ಯತೆಯನ್ನು ನೀಗಿ ನಾವೆಲ್ಲರೂ ಲೈಂಗಿಕ ಸ್ವೇಚ್ಛೆಯಲ್ಲಿ ತೊಡಗಬೇಕು ಎಂಬುದು ಇಲ್ಲಿನ ಪ್ರತಿಪಾದನೆಯಲ್ಲ. ದೇಹದ ಸೂತಕಗಳ ದೊಡ್ಡ ವಿಧಿನಿಷೇಧಗಳ ಮೂಲಕ ಲಿಂಗತಾರತಮ್ಯವನ್ನು ಸಮಾಜವು ಜಾರಿ ಮಾಡಿರುವುದನ್ನು ಇಲ್ಲಿ ಪ್ರಶ್ನಿಸಲಾಗುತ್ತಿದೆ. ಜಗವೆಲ್ಲ ಲಿಂಗತಾರತಮ್ಯದಲ್ಲಿ (ತನುವಿನ ಸೂತಕದಲ್ಲಿ) ಹುಚ್ಚಾಗಿರುವುದನ್ನು ಇಲ್ಲಿ ಟೀಕಿಸುತ್ತ ದೇವರ ಎದುರು ನಾವೆಲ್ಲರೂ ಸಮಾನರು ಎಂದೆ ಹೇಳಲಾಗುತ್ತಿದೆ. ಗಂಡು ಹೆಣ್ಣೆಂಬ ಭೇದ ಅಳಿದು ನಾವೆಲ್ಲರೂ ಶರಣಸತಿಗಳೆಂಬ ತಿಳಿವು ಮತ್ತು ಆಚಾರ ಮೂಡಬೇಕು ಎಂಬುದು ಇಲ್ಲಿನ ಪ್ರತಿಪಾದನೆ.
ಅಂಗ ಮತ್ತು ಲಿಂಗಗಳ ನಡುವಣ ದ್ವಯತನವನ್ನು, ಭಕ್ತ ದೇವರ ನಡುವಣ ದ್ವಯತನವನ್ನು, ಈ ಅಂಕಿತದ ಹಲವು ವಚನಗಳಲ್ಲಿ ನಿರಾಕರಿಸಲಾಗಿದೆ. ಎರಡಿಲ್ಲದಂತೆ ಲೋಕವೂ ಒಂದಾಗುವ, ಎರಡಿಲ್ಲದಂತೆ ದೇವ ಭಕ್ತರೂ ಒಂದಾಗುವ ಅಖಂಡ ಅದ್ವಯ ತತ್ವ ಇಲ್ಲೆಲ್ಲ ಪ್ರತಿಪಾದಿತವಾಗಿದೆ. (ನೋಡಿ 01ರಿಂದ 09 ವಚನಗಳು) ನಾನು ನೀನೆಂಬ ಭೇದ ಕೂಡ ಅಳಿದು ನೀನು ʼಆನುʼ ಆಗುವ ಬಗೆಗೆ ಇಲ್ಲಿ (27) ಚಿಂತಿಸಲಾಗಿದೆ. ಬಟ್ಟೆ ಮಾತ್ರ ಬಿಚ್ಚುವುದಲ್ಲ; ಮನಸ್ಸು ಬಿಚ್ಚಿ ನಿನ್ನಲ್ಲಿ ಒಂದಾಗಲು ಬಂದಾಗ ದೈವವನ್ನು ಮುಟ್ಟಿಯೂ ಮುಟ್ಟದಂತೆ ಮನ ಬೇರೆಯೇ ಆಗಿ ಉಳಿದರೆ ಅದನ್ನು ಭಕ್ತಿ ಎನ್ನಲಾದೀತೆ? ಎರಡೆಂಬುದನ್ನು ಮರೆತು ಮನವು ಒಂದಾಗದೆ ಕೂಡಿಕೆ ಆಗುವುದಿಲ್ಲ. ಎರಡಳಿದು ಒಂದಾಗದ ಕೂಡಿಕೆ ಭಕ್ತಿಯಲ್ಲ. ನೀನು ನಾನು ಎಂಬ ಎರಡು ಅಳಿದು ನೀನೆ ನಾನಾಗುವ ಪರಿಯೆ ಭಕ್ತಿ.
ಎರಡಿಲ್ಲದಂತೆ ಒಂದೇ ಆಗುವುದು; ಹಲವು ಬಗೆಯ ಅಸಮಾನತೆಗಳನ್ನು ಮೀರುವ ಆಲೋಚನೆ. ಇಂತಹ ಆಲೋಚನೆಗಳ ಹೆಚ್ಚಿನ ಮಂಡನೆಗಳಿಗೆ 54, 72, 77, 89, 92, 97, 98, 104, 16 ರಿಂದ 111,114, 125, 132, 135, 159, 155 ರಿಂದ 157, 166 ರಿಂದ 169, 207, 219, 247, 354, 410, 431 ಮೊದಲಾದ ವಚನಗಳನ್ನು ನೋಡಬಹುದು. ಇಲ್ಲೆಲ್ಲ ಅದ್ವಯ ತತ್ವವೇ ಪ್ರತಿಪಾದಿತವಾಗಿದೆ.
*
ಆಕರ:
1. ಶಿವಶರಣೆಯರ ವಚನ ಸಂಪುಟ-05. ಸಂ: ಡಾ. ವೀರಣ್ಣ ರಾಜೂರ, ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಣೆ, ಬೆಂಗಳೂರು, 2001.
*
ಈ ಅಂಕಣದ ಹಿಂದಿನ ಬರೆಹ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.