Date: 18-01-2022
Location: ಬೆಂಗಳೂರು
ಹಿರಿಯ ಲೇಖಕಿ ಡಾ.ವಿಜಯಶ್ರೀ ಸಬರದ ಅವರ ಮಹತ್ವದ ಕೃತಿ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’. ಮೂವತ್ತೊಂಬತ್ತು ವಚನಕಾರ್ತಿಯರ ಇತಿವೃತ್ತಗಳನ್ನು ಒಳಗೊಂಡ ಈ ಸಂಶೋಧನಾತ್ಮಕ ಕೃತಿ ಮುದ್ರಣಕ್ಕೂ ಮೊದಲು ‘ಬುಕ್ ಬ್ರಹ್ಮ’ ಸಾಹಿತ್ಯಿಕ ವೇದಿಕೆಯ ಪಾಕ್ಷಿಕ ಅಂಕಣವಾಗಿ ಪ್ರಕಟವಾಗುತ್ತಿದೆ. 'ಶಿವಶರಣೆಯರ ಸಾಹಿತ್ಯ ಚರಿತ್ರೆ'ಯ ಮೊದಲ ಭಾಗವಾಗಿ ಲೇಖಕಿ ವಿಜಯಶ್ರೀ ಸಬರದ ಅವರು ಬರೆದಿರುವ ‘ಚರಿತ್ರೆ ಅಂದು-ಇಂದು’…ಕೃತಿಯ ಪ್ರವೇಶಿಕೆ ಇಲ್ಲಿದೆ.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯನ್ನು ನೋಡುವ ರೀತಿಯೇ ತುಂಬ ವೈರುಧ್ಯಗಳಿಂದ ಕೂಡಿದೆ, ದಲಿತರು-ಮಹಿಳೆಯರು ಈ ದೇಶವ್ಯವಸ್ಥೆಯಲ್ಲಿ ಶತಮಾನಗಳಿಂದ ಶೋಷಣೆಗೊಳಗಾಗಿದ್ದಾರೆಂಬ ಸತ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹೆಣ್ಣನ್ನು ದೇವತೆಯೆಂದು ಪೂಜಿಸಿದ ನಾಡಿನಲ್ಲಿಯೇ ಅವಳನ್ನು ರಾಕ್ಷಸಿಯೆಂದು ಹಿಯಾಳಿಸಲಾಗಿದೆ. ಹೆಣ್ಣನ್ನು ತಾಯಿಯೆಂದು ಗೌರವಿಸಿದ ಸಮಾಜದಲ್ಲಿಯೇ ಆಕೆಯನ್ನು ಭೋಗದವಸ್ತುವೆಂದು ತಿಳಿಯಲಾಗಿದೆ. “ಯತ್ರ ನಾರ್ಯಂತು ಪೂಜ್ಯಂತೇ ತತ್ರ ರಮಂತೇ ದೇವತಾಃ” ಎಂದು ಹೇಳಿದವರೇ “ನ ಸೀ ಸ್ವಾತಂತ್ರಮರ್ಹತಿ” ಎಂದು ಆದೇಶಿಸಿದ್ದಾರೆ. ಹೆಣ್ಣನ್ನು ಸೂತ್ರಿಯೆಂದು, ಅಂಗನೆಯೆಂದು, ಅಮಂಗಲೆಯೆಂದು, ಅಪಶಕುನವೆಂದು, ಅದೃಶ್ಯಳೆಂದು, ಮಾಯಯೆಂದು ಕರೆದು ಅವಮಾನಿಸಲಾಗಿದೆ.
ಈ ಸಮಾಜ ವ್ಯವಸ್ಥೆಯಲ್ಲಿ ಹೆಣ್ಣನ್ನು ಭಯಾನಕವಾಗಿ ಚಿತ್ರಿಸಲಾಗಿದೆ ಋಗ್ವೇದದಲ್ಲಿ ಹೆಣ್ಣನ್ನು ಕಿರುಬನ ಹೃದಯದವಳೆಂದು ಕರೆದರೆ, ತೈತರೇಯ ಬ್ರಾಹ್ಮಣ್ಯಕದಲ್ಲಿ ಹೆಣ್ಣನ್ನು ಹೃದಯ ಭೇದಿಸುವವಳೆಂದು ತಿಳಿಸಲಾಗಿದೆ, ಒಳ್ಳೆಯ ಹೆಂಗಸು ಕೆಟ್ಟ ಗಂಡಿಸಿಗಿಂತ ಕಡೆ' ಎಂದು ತೈತ್ತರೇಯ ಸಂಹಿತೆ ಹೇಳಿದರೆ 'ಹೆಣ್ಣ ಅಸತ್ಯವೆಂದು' ಮೈತ್ರೀಯ ಸಂಹಿತೆ ಸಾರುತ್ತದೆ.
ಹೀಗೆ ವೇದ - ಉಪನಿಷತ್ತು - ಪುರಾಣ - ಬ್ರಾಹ್ಮಣ್ಯಕ ಮತ್ತು ಸ್ಮೃತಿಗಳಲ್ಲಿ ಉಲ್ಲೇಖವಾಗಿರುವ ಮಹಿಳೆಯ ಸ್ಥಾನಮಾನಗಳು ನಿರಾಶಾದಾಯಕವಾಗಿವೆ. ಮುಂದೆ ಬಂದ ಜೈನ-ಬೌದ್ಧ ಧರ್ಮಗಳಲ್ಲಿ ಮಹಿಳೆಯ ಸ್ಥಾನಮಾನಗಳು ಸುಧಾರಿಸಿದರೂ ಕೂಡ ಅಷ್ಟೊಂದು ತೃಪ್ತಿಕರವಾಗಿ ಕಾಣುವುದಿಲ್ಲ, ಬೌದ್ಧ ಧರ್ಮಕ್ಕಿಂತ ತುಸು ಪ್ರಾಚೀನವಾದ ಜೈನಧರ್ಮದಲ್ಲಿ ಶ್ವೇತಾಂಬರರು ಮಹಿಳೆಗೆ ಧರ್ಮದಲ್ಲಿ ಅವಕಾಶ ನೀಡಿದರೆ, ದಿಗಂಬರರು ಅದನ್ನು ನಿರಾಕರಿಸಿದ್ದಾರೆ. ಬೌದ್ದಧರ್ಮ ಮಹಿಳಾ ವಿಮೋಚನೆಯ ದೃಷ್ಟಿಯಿಂದ ಪ್ರಗತಿಪರವೆನಿಸಿದರೂ ಅಲ್ಲಿ ಮಹಿಳೆಯರಿಗಾಗಿ ಕೆಲವು ಪ್ರತ್ಯೇಕ ಕಟ್ಟಳೆಗಳನ್ನು ವಿಧಿಸಿದ್ದು ಕಂಡುಬರುತ್ತದೆ.
ಪ್ರಾಚೀನಕಾಲದಲ್ಲಿ ಕೆಲವು ಮಹಿಳೆಯರು ಆಧ್ಯಾತ್ಮದಲ್ಲಿ ಉನ್ನತ ಸಾಧನೆ ಮಾಡಿದ್ದರೆಂಬ ವಿಷಯವನ್ನು ಇಲ್ಲಿ ಮರೆಯವಂತಿಲ್ಲ, ಗಾರ್ಗಿ, ವಾಚಕ್ನವೀ, ಸುಲಭಾ, ಮೈತ್ರೇಯೀ ಇವರನ್ನು ಬ್ರಹ್ಮವಾದಿನಿಯರೆಂದು ಕರೆಯಲಾಗುತ್ತಿತ್ತೆಂದು ತಿಳಿದುಬರುತ್ತದೆ. ವಿಧವಾ ವಿವಾಹವು ಪ್ರಾಚೀನ ಭಾರತದಲ್ಲಿ ಪ್ರಚಲಿತವಾಗಿತ್ತೆಂದು ಬೃಹತ್ಸಂಹಿತಾದಲ್ಲಿ ಹೇಳಲಾಗಿದೆ.
ಜಾನಪದಸಂಸ್ಕೃತಿ ಮತ್ತು ಶಿಷ್ಟಸಂಸ್ಕೃತಿಯಲ್ಲಿ ಮಹಿಳೆ ಬೇರೆ ಬೇರೆಯಾಗಿಯೇ ಚಿತ್ರಿತಳಾಗಿದ್ದಾಳೆ, ಜಾನಪದಸಂಸ್ಕೃತಿಯಲ್ಲಿ ಮಹಿಳಾ ಸಾದ್ಯತೆಗಳು ಕಾಣಿಸಿದರೆ, ಶಿಷ್ಟ ಸಂಸ್ಕೃತಿಯಲ್ಲಿ ಅಂದರೆ ಯಜಮಾನ ಸಂಸ್ಕೃತಿಯಲ್ಲಿ ಹೆಣ್ಣನ್ನು ಕೇವಲ ಅಡಿಗೆಮನೆಗೆ. ಮಾತ್ರ ಸೀಮಿತಗೊಳಿಸಲಾಗಿದೆ. ಗ್ರಾಮೀಣ ಬದುಕಿನಲ್ಲಿ ದುಡಿವ ಮಹಿಳೆಯರು ಗಂಡನನ್ನು ಕಳೆದುಕೊಂಡಾಗ, ಮರು ವಿವಾಹವಾಗುವ ಅವಕಾಶವಿದೆ. ಕೂಡಿಕೆ ವಿವಾಹ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಯಜಮಾನ ಸಂಸ್ಕೃತಿಯಲ್ಲಿ ಇದು ಸಾದ್ಯವೇ ಇಲ್ಲ. ಬೇಂದ್ರೆಯವರ 'ಪುಟ್ಟವಿಧವೆ' ಕವನ ಈ ಮಾತಿಗೆ ಜ್ವಲಂತ ಸಾಕ್ಷಿಯಾಗಿದೆ.
ಇನ್ನು ಜನಪದದೇವತೆಗಳು-ಶಿಷ್ಟದೇವತೆಗಳ ಕಡೆ ಗಮನ ಹರಿಸಿದಾಗ ಕುತೂಹಲಕಾರಿ ಸಂಗತಿಗಳು ಕಾಣಿಸಿಕೊಳ್ಳುತ್ತವೆ, ಜನಪದ ದೇವತೆಗಳಲ್ಲಿ ಹೆಣ್ಣು ದೇವತೆಗಳೇ ಪ್ರಧಾನವಾಗಿದ್ದರೆ ಶಿಷ್ಟದೇವತೆಗಳಲ್ಲಿ ಗಂಡು ದೇವತೆಗಳೇ ಪ್ರಧಾನವಾಗಿವೆ. ಈ ಜನಪದ ದೇವತೆಗಳನ್ನು ಭಯಾನಕವಾಗಿ ಉಗ್ರವಾಗಿ ಚಿತ್ರಿಸಲಾಗಿದೆ. ಜನಪದ ದೇವತೆಗಳ ಬಣ್ಣ ಕಪ್ಪಾಗಿದ್ದರೆ, ಶಿಷ್ಟದೇವತೆಗಳ ಬಣ್ಣ ಬಿಳಿಯದಾಗಿರುತ್ತದೆ. ಜನಪದ ದೇವತೆಗಳ ವಾದ್ಯಗಳು ಚರ್ಮದಿಂದ ಮಾಡಲ್ಪಟ್ಟಿದ್ದರೆ ಶಿಷ್ಟದೇವತೆಗಳ ವಾದ್ಯಗಳು ಲೋಹದಿಂದ ಮಾಡಲ್ಪಟ್ಟಿರುತ್ತವೆ.
ಜನಪದಕಾವ್ಯ-ಶಿಷ್ಟಕಾವ್ಯವನ್ನು ಪರಿಶೀಲಿಸಿದರೆ ಅಲ್ಲಿಯೂ ಭಿನ್ನತೆ ಕಾಣಿಸುತ್ತದೆ, “ಹೆಣ್ಣು ಖಡ್ಗದ ಅಲಿಗಿಗಿಂತ ಹರಿತಳಾದವಳು ಚಂಚಲೆ' ಎಂದು ವಾಲ್ಮೀಕಿರಾಮಾಯಣ ಹೇಳಿದರೆ, ಸೀತೆಯ ಸಾಧ್ಯತೆಗಳನ್ನು ಜನಪದದ “ಚಿತ್ರಪಟ ರಾಮಾಯಣ” ತಿಳಿಸುತ್ತದೆ. ವ್ಯಾಸನ “ಮಹಾಭಾರತದಲ್ಲಿ ಬ್ರೌಪದಿಯ ಸೀರೆಸೆಳೆವ ಪ್ರಸಂಗದಲ್ಲಿ ಆಕೆಯನ್ನು ಅವಮಾಗೊಳಿಸಿದರೆ, ಜನಪದ ಕಾವ್ಯದಲ್ಲಿ ದೌಪದಿ ದುರ್ಯೋಧನನನ್ನು ಪಗಡೆಯಾಟಕ್ಕೆ ಕರೆದು ಸೋಲಿಸಿ ಸಾಮ್ರಾಜ್ಯವನ್ನು ಮರಳಿ ಪಡೆಯುತ್ತಾಳೆ. ಹೀಗೆ ಜಾನಪದಸಂಸ್ಕೃತಿ-ಶಿಷ್ಟಸಂಸ್ಕೃತಿ, ಜನಪದದೇವತೆಗಳು-ಶಿಷ್ಟದೇವತೆಗಳು, ಜನಪದಕಾವ್ಯ-ಶಿಷ್ಟಕಾವ್ಯ, ಇವುಗಳಲ್ಲಿರುವ ಅಂತರವನ್ನು ಕಾಣಬಹುದಾಗಿದೆ.
ಸಾಹಿತ್ಯ ಚರಿತ್ರೆಗಳನ್ನು ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲಿಯೂ ವಚನಸಾಹಿತ್ಯ ಚರಿತ್ರೆಯನ್ನು ರಚಿಸುವುದು ಇನ್ನು ಕಷ್ಟ. ವಚನಕಾರರು ತಮ್ಮ ಬಗೆಗೆ ಏನನ್ನೂ ಹೇಳಿಕೊಂಡಿಲ್ಲ. ಅವರ ಜೀವನಚರಿತ್ರೆಗೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳು ಸಿಗುವುದಿಲ್ಲ. ಆದರೂ ಚರಿತ್ರೆಯನ್ನು ಕಟ್ಟುವ ಕೆಲಸಗಳು ನಡೆಯುತ್ತಲೇ ಇರಬೇಕು. ವರ್ತಮಾನವನ್ನು ಕಂಡುಕೊಳ್ಳಲು ಚರಿತ್ರೆಯೆಂಬ ಕನ್ನಡಿ ಅತ್ಯಗತ್ಯವಾಗಿದೆ. ಸಾಮಾನ್ಯವಾಗಿ ಯಾವ ಚರಿತೆಗಳೂ ಪೂರ್ಣವಾಗಿರುವುದಿಲ್ಲ. ಹೀಗೆ ಅಪೂರ್ಣತೆಯಿಂದ ಪೂರ್ಣತೆಯ ಕಡೆಗೆ ಸಾಗುವುದೇ ಚರಿತ್ರೆಕಾರನ ಉದ್ದೇಶವಾಗಿರುತ್ತದೆ.
ಸಾಮಾನ್ಯವಾಗಿ ಈ ದೇಶದ ಚರಿತ್ರೆ ರಾಜಮಹಾರಾಜರ ಚರಿತ್ರೆಯೇ ಆಗಿದೆ. ಕನ್ನಡ ಸಾಹಿತ್ಯಚರಿತ್ರೆಗಳು ಪ್ರಕಟವಾಗಿವೆಯಾದರೂ ಅವು ಪರಿಪೂರ್ಣವಾಗಿಲ್ಲ. ಹೀಗಾಗಿ ಚರಿತ್ರೆಯ ವಿಷಯಗಳು ಆಗಾಗ ವರ್ತಮಾನದಲ್ಲಿ ಚರ್ಚೆಗೊಳಗಾಗುತ್ತಲೇ ಇರುತ್ತವೆ. ವಚನಕಾರರ ಚರಿತ್ರೆಗೆ ಸಂಬಂಧಿಸಿದಂತೆ ಅನೇಕ ಹೊಸ ವಿಷಯಗಳು ಇಂದಿಗೂ ಸಿಗುತ್ತಲೇ ಇವೆ. ಆದುದರಿಂದ ಚರಿತ್ರೆಗಳನ್ನು ಮತ್ತೆ ಮತ್ತೆ ಕಟ್ಟಿಕೊಳ್ಳಬೇಕಾಗುತ್ತದೆ.
ವಚನಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಮೊದಲ ಪ್ರಯತ್ನ ಕಾಣಿಸುವುದು ವಚನ ಪಿತಾಮಹ ಫ.ಗು. ಹಳಕಟ್ಟಿಯವರಲ್ಲಿ. ಅವರು ವಚನಗಳನ್ನು ಸಂಗ್ರಹಿಸುತ್ತಲೇ, ವಚನಕಾರರ ಪರಿಚಯವನ್ನು ಬರೆದುಕೊಟ್ಟರು. ಶಿವಶರಣರ ಚರಿತ್ರೆ ಭಾಗ-1, ಭಾಗ-2, ಭಾಗ-3, ಈ ಸಂಪುಟಗಳು ವಚನಸಾಹಿತ್ಯ ಚರಿತ್ರೆಯ ಪ್ರಾರಂಭದ ಕೃತಿಗಳಾಗಿವೆ. ಇವುಗಳ ಜತೆಗೆ ಹಳಕಟ್ಟಿಯವರ “ ಶಿವಶರಣೆಯರ ಚರಿತ್ರೆಗಳು” ಕೂಡಾ ಪ್ರಕಟವಾಗಿದೆ, ಈ ಎಲ್ಲ ಕೃತಿಗಳು 1945ರಿಂದ 1956ರ ಅವಧಿಯಲ್ಲಿ ಪ್ರಕಟವಾಗಿವೆ.
1961ರಲ್ಲಿ ಪ್ರಕಟವಾಗಿರುವ ಆರ್. ನರಸಿಂಹಾಚಾರ್ ಅವರ “ಕರ್ನಾಟಕ ಕವಿಚರಿತೆ'ಯ ಸಂಪುಟದಲ್ಲಿ “ಶರಣ ಚರಿತ್ರೆ” ಸಂಕ್ಷಿಪ್ತವಾಗಿ ದಾಖಲಾಗಿದೆ, 1964 ರಲ್ಲಿ ಸಿದ್ದಯ್ಯ ಪುರಾಣಿಕರ “ಶರಣ ಚರಿತಾಮೃತ” ಪ್ರಕಟವಾಗಿದ್ದರೆ, 1967 ರಲ್ಲಿ ತ.ಸು. ಶಾಮರಾವ್ ಅವರ “ಶಿವಶರಣ ಕಥಾರತ್ನಕೋಶ''ಪ್ರಕಟವಾಗಿದೆ, 1977ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾದ “ಕನ್ನಡ ಅಧ್ಯಯನ ಸಂಸ್ಥೆಯ ಕನಡಸಾಹಿತ್ಯ ಚರಿತ್ರೆ'ಯ ನಾಲನೆಯ ಸಂಪುಟದಲ್ಲಿ ಶರಣರ ಚರಿತ್ರೆಯಿದೆ. 1976ರಲ್ಲಿ ಪ್ರಕಟವಾದ ಬೆಂಗಳೂರು ವಿಶ್ವವಿದ್ಯಾಲಯದ ಸಮಗ್ರ ಸಾಹಿತ್ಯಚರಿತ್ರೆಯ ಮೂರನೇ ಸಂಪುಟದಲ್ಲಿ ವಚನ ಸಾಹಿತ್ಯವನ್ನು ಕುರಿತಾದ ವಿಮರ್ಶಾ ಲೇಖನಗಳಿವೆ. ನಂತರದಲ್ಲಿ ಬಂದ ರಂ.ಶ್ರೀ ಮುಗಳಿಯವರ ಸಾಹಿತ್ಯ ಚರಿತ್ರೆಯಲ್ಲಿ ಶರಣರ ಪ್ರಸ್ತಾಪವಿದೆ.
2018 ರಲ್ಲಿ ಧಾರವಾಡದ ಶ್ರೀಮುರುಘಾಮಠದಿಂದ ಪ್ರಕಟವಾದ “ಹೈದ್ರಾಬಾದ್ ಕರ್ನಾಟಕದ ವಚನಸಾಹಿತ್ಯ ಚರಿತ್ರೆ” ಎಂಬ ಡಾ. ಬಸವರಾಜ ಸಬರದ ಅವರ ಕೃತಿಯು ಹೈದ್ರಾಬಾದ್ ಕರ್ನಾಟಕ ಪ್ರದೇಶದ ಮೂರೂ ಘಟ್ಟಗಳ ವಚನಕಾರರನ್ನು ಪರಿಚಯಿಸುತ್ತದೆ. ಇದು ಪ್ರಥಮ ಪ್ರಾದೇಶಿಕ ಸಾಹಿತ್ಯಚರಿತ್ರೆಯಾಗಿದೆ. ಹೀಗೆ ಅನೇಕ ಸಾಹಿತ್ಯಚರಿತ್ರೆಗಳಲ್ಲಿ ಶರಣರ ಕಥಾನಕವಿದ್ದರೂ ಅವುಗಳು ಸಂಪೂರ್ಣ ಚರಿತ್ರೆಗಳಾಗಲು ಸಾಧ್ಯವಾಗಿಲ್ಲ ಶರಣರ ಬಗೆಗೆ ಹೆಚ್ಚಿನ ದಾಖಲೆಗಳು ಸಿಗದೇ ಇದ್ದುದರಿಂದ ಅವೆಲ್ಲ ಅಪೂರ್ಣವೆನಿಸುತ್ತವೆ. ಶರಣರ ಬಗೆಗೆ ಹೀಗಿರುವಾಗ ಶರಣೆಯರನ್ನು ಕುರಿತು ಪೂರ್ಣಪ್ರಮಾಣದ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಡುವುದು ಇನ್ನೂ ಕಷ್ಟವಾಗಿದೆ. ಶ್ರೀ ಫ. ಗು. ಹಳಕಟ್ಟಿಯವರ "ಶಿವಶರಣೆಯರ ಚರಿತ್ರೆಯ ಕೃತಿಯಲ್ಲಿ ಕೆಲವು ಶರಣೆಯರ ಪ್ರಸ್ತಾಪವಿದೆ. 1993ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟವಾದ, ಡಾ.ವೀರಣ್ಣ ರಾಜೂರ ಅವರು ಸಂಪಾದಿಸಿರುವ "ಶಿವಶರಣೆಯರ ವಚನ ಸಂಪುಟದಲ್ಲಿ ಮೂವತ್ತು ಮೂರು ವಚನಕಾರ್ತಿಯರ ಸಂಕ್ಷಿಪ್ತ ಪರಿಚಯವಿದೆ. ಈ ಕೆಲವು ಕೃತಿಗಳನ್ನು ಹೊರತುಪಡಿಸಿದರೆ ಶರಣೆಯರ ಚರಿತ್ರೆಯನ್ನು ಕುರಿತು ಮತ್ತೆ ಹೆಚ್ಚಿನ ಕೃತಿಗಳು ಪ್ರಕಟವಾಗಿಲ್ಲ. ಆ ಕೊರತೆಯನ್ನು ತುಂಬುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ. - 12ನೇ ಶತಮಾನದ ವಚನಚಳವಳಿಯಲ್ಲಿ ಅನೇಕ ಶರಣೆಯರು ಭಾಗವಹಿಸಿದ್ದರು. ಅವರುಗಳಲ್ಲಿ ವಚನಗಳನ್ನು ರಚಿಸಿದವರ ಸಂಖ್ಯೆ 39ಆಗಿದೆ. ವಚನ ರಚಿಸದೇ ಇರುವ ಅನೇಕ ಶರಣೆಯರಿದ್ದಾರೆ. ಅವರಲ್ಲಿ ವರದಾನಿ ಗುಡ್ಡವ್ವಯಂತಹ ಶರಣೆಯರನ್ನು ಉದಾಹರಿಸಬಹುದು. ವರದಾನಿ ಗುಡ್ಡಿಯಂತೆ ಇನ್ನೂ ಇಪ್ಪತ್ತೈದು ಶರಣೆಯರು ಇದ್ದಾರೆಂದು ತಿಳಿದುಬರುತ್ತದೆ. ಆದರೆ ಅವರ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ ಮತ್ತು ವಚನಗಳೂ ಸಿಕ್ಕಿಲ್ಲ. ಈ ಕೃತಿಯಲ್ಲಿ 39 ವಚನಕಾರ್ತಿಯರ ಬಗೆಗೆ ಮಾತ್ರ ಚರ್ಚಿಸಲಾಗಿದೆ. ಇದು ಸಾಹಿತ್ಯ ಚರಿತ್ರೆಯಾಗಿರುವುದರಿಂದ ವಚನ ರಚನೆ ಮಾಡದ ಶರಣೆಯರ ಬಗೆಗೆ ಇಲ್ಲಿ ಪ್ರಸ್ತಾಪವಿಲ್ಲ. ಶರಣೆಯರ ಸಾಹಿತ್ಯವೆಂದರೆ ಅದು 12ನೇ ಶತಮಾನದ ವಚನಕಾರ್ತಿಯರ ಚರಿತ್ರೆಯೇ ಆಗಿದೆ. ಆಧುನಿಕ ಸಂದರ್ಭದಲ್ಲಿ ಅನೇಕ ಮಹಿಳೆಯರು ವಚನಗಳನ್ನು ರಚಿಸಿದ್ದಾರೆ. ವಚನಕಾರ್ತಿಯರ ಚರಿತ್ರೆಯೆಂದು ಕರೆದರೆ ಅವರನ್ನೂ ಸೇರಿಸಬೇಕಾಗುತ್ತದೆ. ಆದುದರಿಂದ ಈ ಕೃತಿಗೆ ಶಿವಶರಣೆಯರ ಸಾಹಿತ್ಯ ಚರಿತ್ರೆಯೆಂದು ಹೆಸರಿಡಲಾಗಿದೆ.
ಶಿವಶರಣೆಯರನ್ನು ಕುರಿತಂತೆ ಹಾಗೂ ಅವರ ವಚನಸಾಹಿ ಸಂಗ್ರಹಿಸಿರುವ ಬಗೆಗೆ ಹಿಂದೆ ಕೆಲವು ಪ್ರಯತ್ನಗಳು ನಡೆದಿವೆ. 1959ರಲ್ಲಿ ಪ್ರಕಟವಾಗಿರುವ ಫ.ಗು. ಹಳಕಟ್ಟಿಯವರ "ಶಿವಶರಣೆಯರ ಚರಿತ್ರೆಗಳು" ಕನ್ನಡದಲ್ಲಿ ಬಂದ ಮೊದಲ ಕೃತಿಯಾಗಿದೆ. 1961ರಲ್ಲಿ ಪ್ರಕಟವಾದ ಆರ್. ನರಸಿಂಹಾಚಾರ್ ಅವರ "ಕರ್ನಾಟಕ ಕವಿಚರಿತೆ"ಯಲ್ಲಿ ಕೆಲವು ವಚನಕಾರ್ತಿಯರ ಪರಿಚಯವಿದೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಚರಿತ್ರೆ" ಹಾಗೂ ಡಾ.ವೀರಣ್ಣ ರಾಜೂರ ಅವರು ಸಂಪಾದಿಸಿರುವ "ಶಿವಶರಣೆಯರ ವಚನಸಂಪುಟ' (ಸಮಗ್ರ ವಚನಸಾಹಿತ್ಯ ಚರಿತ್ರೆಯ 5ನೇ ಸಂಪುಟ) ಈ ಮೊದಲಾದ ಕೃತಿಗಳು ಶಿವಶರಣೆಯರ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಫ.ಗು. ಹಳಕಟ್ಟಿಯವರದು ಈ ದಿಸೆಯಲ್ಲಿ ನಡೆದ ಪ್ರಥಮ ಪ್ರಯತ್ನವಾಗಿದೆ. ಇವರ ಕೃತಿಯಲ್ಲಿ ಕೆಲವು ಶರಣೆಯರ ಪರಿಚಯ ಮಾತ್ರವಿದೆ. ಆರ್. ನರಸಿಂಹಾಚಾರ್ ಅವರ "ಕರ್ನಾಟಕ ಕವಿಚರಿತೆ"ಯಲ್ಲಿ ಬೆರಳೆಣಿಕೆಯಷ್ಟು ವಚನಕಾರ್ತಿಯರು ಕಾಣಿಸಿಕೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ' ಮಾತ್ರ ಹೆಚ್ಚಿನ ವಚನಕಾರ್ತಿಯರ ಇತಿವೃತ್ತಗಳನ್ನು ಕಟ್ಟಿಕೊಟ್ಟಿದೆ. ಈ ಕೃತಿಯಲ್ಲಿ 32 ವಚನಕಾರ್ತಿಯರ ಇತಿವೃತ್ತವನ್ನು ಒಬ್ಬೊಬ್ಬ ವಿದ್ವಾಂಸರು ರಚಿಸಿದ್ದಾರೆ. ಹೆಚ್ಚು ಸಂಖ್ಯೆಯ ವಚನಕಾರ್ತಿಯರನ್ನು ಮೊದಲು ಪರಿಚಯಿಸಿದ ಮಹತ್ವದ ಸಂಶೋಧನಾ ಕೃತಿ ಇದಾಗಿದೆ. ಇಲ್ಲಿಯ ಶರಣೆಯರ ಇತಿವೃತ್ತಗಳು ಸಂಕ್ಷಿಪ್ತವಾಗಿ, ಸಂಶೋಧನಾತ್ಮಕವಾಗಿ, ವಸ್ತುನಿಷ್ಠವಾಗಿವೆ. ಇದೇ ಅವಧಿಯಲ್ಲಿ ಪ್ರಕಟವಾದ ಬೆಂಗಳೂರು ವಿಶ್ವವಿದ್ಯಾಲಯದ ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯ ಮೂರನೇ ಸಂಪುಟದಲ್ಲಿ ಶಿವಶರಣರ ಪ್ರಸ್ತಾಪವಿದೆ. ಆದರೆ ಅದು ವಿಮರ್ಶಾತ್ಮಕ ಲೇಖನಗಳಿಂದ ಕೂಡಿದೆಯೇ ಹೊರತು, ವಚನಕಾರರ ಚರಿತ್ರೆಯ ಬಗ್ಗೆ ವಿವರಗಳಿಲ್ಲ. ಶರಣೆಯರ ವಚನಗಳನ್ನಿಟ್ಟುಕೊಂಡು ಅಧ್ಯಯನ ಮಾಡಿದ ವಿಮರ್ಶಾತ್ಮಕ ಲೇಖನಗಳು ಮಾತ್ರ ಅಲ್ಲಿ ಕಾಣಿಸುತ್ತವೆ. ಡಾ.ಎಂ.ಎಂ. ಕಲಬುರಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸಮಗ್ರ ವಚನಸಾಹಿತ್ಯ ಸಂಪುಟಗಳಲ್ಲಿ ಐದನೇ ಸಂಪುಟವು ಶಿವಶರಣೆಯರ ವಚನಗಳ ಸಂಗ್ರಹವಾಗಿದೆ. ಇದು ವಚನಗಳ ಸಂಗ್ರಹ ಕೃತಿಯಾದರೂ, ಈ ಕೃತಿಯ ಸಂಪಾದಕರಾದ ಡಾ. ವೀರಣ್ಣ ರಾಜೂರ ಅವರು ಸುದೀರ್ಘವಾದ ಪ್ರಸ್ತಾವನೆ ಬರೆದಿದ್ದಾರೆ. ಈ ಕೃತಿಯಲ್ಲಿ ಅವರು ಮೂವತ್ತೈದು ವಚನಕಾರ್ತಿಯರ ವಚನಗಳನ್ನು ಪ್ರಕಟಿಸಿದ್ದಾರೆ. ಮೂವತ್ತು ಮೂರು ವಚನಕಾರ್ತಿಯರ ಪರಿಚಯ ಮಾಡಿಕೊಟ್ಟಿದ್ದಾರೆ. ಇಬ್ಬರು ವಚನಕಾರ್ತಿಯರ ಹೆಸರುಗಳು ತಿಳಿಯದೇ ಇದ್ದುದರಿಂದ ಅವರ ಅಂಕಿತಗಳ ಹೆಸರಿನಲ್ಲಿ ಅವರ ವಚನಗಳನ್ನು ಪ್ರಕಟಿಸಿದ್ದಾರೆ. ಮುದ್ದೇಬಿಹಾಳದ ಶ್ರೀಮತಿ ಗಂಗಮ್ಮ ಚಿನಿವಾರ ಅಭಿನಂದನ ಗ್ರಂಥವನ್ನು ಪ್ರೊ. ಚ.ವಿ. ಮುಳಗುಂದ ಅವರು ಸಂಪಾದಿಸಿದ್ದು ಅದರಲ್ಲಿ ವಿವಿಧ ಲೇಖಕರ ಮೂವತ್ತೊಂದು ವಚನಕಾರ್ತಿಯರನ್ನು ಕುರಿತ ಲೇಖನಗಳಿವೆ. ಇವುಗಳಲ್ಲಿ ಹೆಚ್ಚಿನ ಲೇಖನಗಳು ಪರಿಚಯಾತ್ಮಕವಾಗಿವೆ.
ಡಾ. ಬಸವರಾಜ ಸಬರದವರು ರಚಿಸಿರುವ 'ಹೈದ್ರಾಬಾದ ಕರ್ನಾಟಕದ ವಚನಸಾಹಿತ್ಯ ಚರಿತ್ರೆ' ಕೃತಿಯು ಧಾರವಾಡದ ಶ್ರೀಮುರುಘಾಮಠದಿಂದ ಪ್ರಕಟವಾಗಿದ್ದು ಇದು ಪ್ರಥಮ ಪ್ರಾದೇಶಿಕ ಚರಿತ್ರೆಯಾಗಿದೆ. ಇದರಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಸೇರಿದ ವಚನಕಾರ್ತಿಯರ ಬಗೆಗೆ ಮಾತ್ರ ಬರೆಯಲಾಗಿದೆ. ಇನ್ನೂ ಕೆಲವು ಕೃತಿಗಳಲ್ಲಿ ವಚನಕಾರ್ತಿಯರ ಬಗೆಗೆ ಕೆಲವು ಲೇಖನಗಳು ಪ್ರಕಟವಾಗಿವೆ, ಆದರೆ ಅವುಗಳಲ್ಲಿ ಹೊಸ ಸಂಶೋಧನೆ ಕಾಣಿಸಿಲ್ಲ. ವಚನಕಾರ್ತಿಯರ ಚರಿತ್ರೆಗೆ ಸಂಬಂಧಿಸಿದಂತೆ ಇದು ಸಂಕ್ಷಿಪ್ತವಾದ ಹಿನ್ನೋಟವಾಗಿದೆ. ಶಿವಶರಣೆಯರ ಸಾಹಿತ್ಯಚರಿತ್ರೆಗೆ ಸಂಬಂಧಿಸಿದ ಈ ಮೊದಲಾದ ಹಿಂದಿನ ಕೃತಿಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಚರಿತ್ರೆ" (ನಾಲ್ಕನೇ ಸಂಪುಟ) ಕೃತಿಯು ಸಂಶೋಧನಾತ್ಮಕ ಕೃತಿಯಾಗಿದೆ.
ರೇವಣಸಿದ್ಧರು ವಚನಕಾರರ ಹಿರಿಯ ಸಮಕಾಲೀನರು. ಅವರನ್ನು ಕುರಿತು ಅನೇಕ ಕಾವ್ಯಕೃತಿಗಳು ರಚನೆಯಾಗಿವೆ. ಅವರ ನಾಲ್ವರು ಪತ್ನಿಯರು ವಚನಗಳನ್ನು ರಚಿಸಿದ್ದಾರೆ. ಆ ವಚನಗಳು, ಡಾ. ಆರ್.ಸಿ. ಹಿರೇಮಠ ಅವರು ಸಂಪಾದಿಸಿರುವ "ಮುಕ್ತಿಕಂಠಾಭರಣ ಕೃತಿಯಲ್ಲಿ ಪ್ರಕಟವಾಗಿವೆ. ಆದರೆ ಡಾ. ವೀರಣ್ಣ ರಾಜೂರ ಅವರು ಈ ನಾಲ್ಕು ಜನ ವಚನಕಾರ್ತಿಯರ ವಚನಗಳನ್ನು ತಮ್ಮ "ಶಿವಶರಣೆಯರ ವಚನ ಸಂಪುಟ'ದಲ್ಲಿ ಸೇರಿಸಿಕೊಂಡಿಲ್ಲ. "ಮುಕ್ತಿಕಂಠಾಭರಣ" ಕೃತಿಯು ತೋಂಟದ ಸಿದ್ದಲಿಂಗ ಸಂಪ್ರದಾಯದ ಸಂಕಲನಕಾರರ ಕೊಡುಗೆಯಾಗಿದ್ದು 19ನೇ ಶತಮಾನದಲ್ಲಿ ರಚನೆಯಾಗಿದೆ. ಈ ವಚನಕಾರ್ತಿಯರ ಪರಿಚಯವನ್ನು ಮೈಸೂರು ವಿಶ್ವವಿದ್ಯಾಲಯದ ಸಾಹಿತ್ಯಚರಿತ್ರೆಯಲ್ಲಿ ಕೊಡಲಾಗಿದೆ.
ಈ ವಚನಕಾರ್ತಿಯರಲ್ಲದೆ ಇನ್ನೂ 23 ಪ್ರಕ್ಷಿಪ್ತ ವಚನಕಾರ್ತಿಯರಿದ್ದಾರೆಂದು ಡಾ. ಎಂ.ಎಂ. ಕಲಬುರಗಿಯವರು ಹೇಳಿದ್ದಾರೆ. (ನೋಡಿ -"ಪ್ರಕ್ಷಿಪ್ತ ವಚನಕಾರರು" ಲೇಖನ, ಡಾ. ಎಂ.ಎಂ. ಕಲಬುರಗಿ, 'ಕರ್ನಾಟಕ ಭಾರತಿ" ಸಂಪುಟ - 21, ಸಂಚಿಕೆ-4, ಪುಟ-24, 1991) ಈ ಪ್ರಕ್ಷಿಪ್ತ ವಚನಕಾರ್ತಿಯರ ಬಗೆಗೆ ಸರಿಯಾದ ಮಾಹಿತಿ ದೊರೆತರೆ 12ನೇ ಶತಮಾನದ ವಚನಕಾರ್ತಿಯರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಹೊಸ ಹೊಸ ಸಂಶೋಧನೆಗಳು ನಡೆದಾಗ, ಹೊಸ ಹೊಸ ಸಾಹಿತ್ಯ ಚರಿತ್ರೆಗಳು ಹುಟ್ಟಿಕೊಳ್ಳುತ್ತವೆ.
'ಕುರಂಗೇಶ್ವರಲಿಂಗ" ಅಂಕಿತವು ಶರಣೆಯೊಬ್ಬಳ ವಚನಾಂಕಿತವಾಗಿದೆಯೆಂದು ತಿಳಿದು ಡಾ. ವೀರಣ್ಣ ರಾಜೂರ ಅವರು ತಾವು ಸಂಪಾದಿಸಿರುವ "ಶಿವಶರಣೆಯರ ವಚನಸಂಪುಟ' (ಸಂಪುಟ-5)ದಲ್ಲಿ ಈ ವಚನಕಾರ್ತಿಯ ವಚನವನ್ನು ಸೇರಿಸಿದ್ದಾರೆ. ಆದರೆ ಇದೇ ವಚನವನ್ನು ಇದೇ 'ಕುರುಂಗೇಶ್ವರಲಿಂಗ' ಅಂಕಿತದಲ್ಲಿ ಸಮಗ್ರ ವಚನ ಸಾಹಿತ್ಯ ಚರಿತ್ರೆಯ 9ನೇ ಸಂಪುಟದಲ್ಲಿ ಅಜ್ಞಾತ ವಚನಕಾರನ ವಚನವೆಂದು ಸೇರಿಸಿ ಪ್ರಕಟಿಸಲಾಗಿದೆ. ಈ ಸಂಪುಟವನ್ನು ಡಾ.ಬಿ.ಆರ್. ಹಿರೇಮಠರು ಸಂಪಾದಿಸಿದ್ದಾರೆ. ಹೀಗೆ "ಕುರಂಗೇಶ್ವರಲಿಂಗ' ಅಂಕಿತದ ವಚನವು 5ನೇ ಸಂಪುಟದಲಿ ವಚನಕಾರ್ತಿಯ ವಚನವೆಂದು ಪ್ರಕಟವಾಗಿದ್ದರೆ, 9ನೇ ಸಂಪಟದಲ್ಲಿ ವಚನಕಾರನ ವಚನವೆಂದು ಪ್ರಕಟವಾಗಿದೆ. ಸಮಗ್ರ ವಚನ ಸಾಹಿತ್ಯ ಚರಿತ್ರೆಯ ಸಂಪುಟಗಳಲ್ಲಿ ಇಂತಹ ಕೆಲವು ಗೊಂದಲಗಳು ಕಾಣಿಸಿಕೊಂಡಿವೆ. ಹೆಚ್ಚಿನ ಸಂಶೋಧನೆ ನಡೆದಾಗ ಇದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ.
ಶಿವಶರಣೆಯರ ಜೀವನಚರಿತ್ರೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ. ಅವರ ಪತಿಯ ಪರಿಚಯದ ಮೂಲಕವೇ ಅವರನ್ನು ಗುರುತಿಸಬೇಕಾದ ಅನಿವಾರ್ಯತೆ ಇದೆ. ವಚನಕಾರ್ತಿಯರು ತಮ್ಮ ಬಗೆಗೆ ಏನನ್ನೂ ಹೇಳಿಕೊಂಡಿಲ್ಲ. ಹೀಗಾಗಿ ಇಂತವರ ಚರಿತ್ರೆ ಕಟ್ಟಿಕೊಡುವುದು ತುಂಬ ಕಷ್ಟದ ಕೆಲಸವಾಗುತ್ತದೆ. ಪ್ರಥಮ ಶಿವಶರಣೆಯರ ಚರಿತ್ರೆ, ಫ.ಗು. ಹಳಕಟ್ಟಿಯವರಿಂದ ಪ್ರಕಟವಾಗಿ ಏಳು ದಶಕಗಳು ಕಳೆದಿವೆ. ನಂತರದಲ್ಲಿ ಹೊಸ ನೀರು ಹರಿದಿದೆ. ಈ ಅವಧಿಯಲ್ಲಿ ಶರಣೆಯರ ಬಗೆಗೆ ಕೆಲವು ಹೊಸ ಸಂಗತಿಗಳು ದೊರಕಿವೆ.
ಇದು ಹಿಂದಿನ ಚರಿತ್ರೆಯ ಕತೆಯಾಯಿತು, ಇಂದು ನಾನೇಕೆ ಈ ಚರಿತ್ರೆಯನ್ನು ಬರೆದೆ ಎಂಬುದನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಬಯಸುತ್ತೇನೆ. ಹಿಂದಿನ ಚರಿತ್ರೆಗಳಲ್ಲಿ ಕೇವಲ ಮಧ್ಯಕಾಲೀನ ಕಾಲಘಟ್ಟದ ಪುರಾಣ ಕವಿಗಳ ವಿಚಾರಗಳನ್ನು ಮಾತ್ರ ಪರಿಗಣಿಸಿ ಶರಣರ ಚರಿತ್ರೆಯನ್ನು ಕಟ್ಟಲಾಗಿದೆ, ಇದು ಅಪೂರ್ಣವಾದುದೆಂದು ನನಗನಿಸಿತು. ಹಿಂದಿನ ಚರಿತ್ರೆಗಳು ಪ್ರಕಟವಾಗಿ ಏಳು ದಶಕಗಳಾದವು. ಈ ಅವಧಿಯಲ್ಲಿ ಶರಣೆಯರ ಬಗೆಗೆ ಕೆಲವು ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಅವುಗಳನ್ನು ಅಪ್‌ಡೇಟ್ ಮಾಡಬೇಕೆನಿಸಿತು. ಇಂತಹ ಕೆಲವು ಕಾರಣಗಳಿಂದ ನಾನು ಈ ಸಾಹಿತ್ಯ ಚರಿತ್ರೆಯನ್ನು ರಚನೆ ಮಾಡಿದ್ದು ಇದರ ಮುಖ್ಯಾಂಶಗಳು ಹೀಗಿವೆ.
1. ವಚನಕಾರ್ತಿಯರ ಇತಿವೃತ್ತಗಳ ಬಗೆಗೆ ಬರೆಯುವಾಗ ಈ ಕೆಳಗಿನ ಆಕರಗಳನ್ನು ಬಳಸಿಕೊಂಡಿದ್ದೇನೆ. i) ಶಾಸನಾಧಾರಗಳು ಮತ್ತು ಸಮಕಾಲೀನ ವಚನಕಾರರ ವಚನಗಳು ii) ಮಧ್ಯಕಾಲೀನ ಸಂದರ್ಭದ ಹರಿಹರ ಮೊದಲಾದ ಪುರಾಣ ಕವಿಗಳ ಮಾಹಿತಿಗಳು iii) ಜನಪದ ಕಾವ್ಯದಲ್ಲಿ ಚಿತ್ರಿತವಾಗಿರುವ ಶರಣೆಯರ ಕಥಾನಕಗಳು iv) ಆಧುನಿಕ ಸಾಹಿತ್ಯದ ಕಾವ್ಯ, ನಾಟಕ, ಕಾದಂಬರಿಗಳಲ್ಲಿ 12ನೇ ಶತಮಾನದ - ಶರಣೆಯರು ಮರುಹುಟ್ಟು ಪಡೆದ ಸಂದರ್ಭಗಳು. v) ಸ್ವಂತಃ ವಚನಕಾರ್ತಿಯರು ತಮ್ಮ ಬಗೆಗೆ ತಾನೇ ಹೇಳಿಕೊಂಡ ವಿಚಾರಗಳು.
2. ವಚನಕಾರ್ತಿಯರ ಅನುಕ್ರಮಣಿಕೆಯನ್ನು ಅವರ ಹೆಸರಿನ ಆಕಾರಾದಿಯಲ್ಲಿ ಕೊಟ್ಟಿಲ್ಲ. ಕಾರಣವೆಂದರೆ ಅನೇಕ ವಚನಕಾರ್ತಿಯರ ಹೆಸರುಗಳು, ತಮ್ಮ ಹೆಸರಿನೊಂದಿಗೆ ಪ್ರಾರಂಭವಾಗದೆ ತಮ್ಮ ಪತಿಯ ಹೆಸರಿನಿಂದ ಇಲ್ಲವೆ ಕಾಯಕದ ಹೆಸರಿನಿಂದ ಪ್ರಾರಂಭವಾಗಿವೆ. ಹೀಗಾಗಿ ಯಾರು ಹೆಚ್ಚಿನ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿರುವರೋ ಅವರ ಹೆಸರುಗಳನ್ನು ಮೊದಲು ಪರಿಗಣಿಸಿ, ಆ ಅನುಕ್ರಮಣಿಕೆಯಲ್ಲಿ ವಚನಕಾರ್ತಿಯರ ಹೆಸರುಗಳನ್ನು ಜೋಡಿಸಲಾಗಿದೆ.
3. ವಚನಕಾರ್ತಿಯರ ಇತಿವೃತಗಳ ಜತೆಗೆ ಕೊನೆಗೆ ಅವರ ವಚನಗಳ ರಚನೆಯ ವಿಶಿಷ್ಟತೆಯನ್ನು ಕುರಿತು ಹೇಳಲಾಗಿದೆ.
4. ಈ ಕೃತಿಯ ಒಂದು ಅಧ್ಯಾಯದಲ್ಲಿ ವಚನಕಾರ್ತಿಯರ ಇತಿವೃತ್ತಗಳಿದ್ದರೆ, ಮತ್ತೊಂದು ಅಧ್ಯಾಯದಲ್ಲಿ ಅವರ ವಚನಗಳನ್ನು ಅಧ್ಯಯನ ಮಾಡಿ ವಿಮರ್ಶಾ ಲೇಖನಗಳನ್ನು ಕೊಡಲಾಗಿದೆ. ಹೀಗಾಗಿ ವಚನಕಾರ್ತಿಯರ ಚರಿತ್ರೆಯ ಜತೆಗೆ ಅವರ ವಚನಗಳ ವಿಮರ್ಶೆಯೂ ಇಲ್ಲಿ ಕಾಣಿಸಿಕೊಂಡಿದೆ.
5. ಈಗಾಗಲೇ ಶಿವಶರಣರ ಸ್ಮಾರಕಗಳ ಕುರಿತು ಕೆಲವು ಕೃತಿಗಳು ಪ್ರಕಟವಾಗಿರುವುದರಿಂದ ಇಲ್ಲಿ ಅವುಗಳ ಪುನರಾವರ್ತನೆಗೆ ಕೈ ಹಾಕಿರುವುದಿಲ್ಲ. 6. ಇದುವರೆಗಿನ ಚರಿತ್ರೆಗಳಲ್ಲಿ ಮೂವತ್ತು ಮೂರು ವಚನಕಾರ್ತಿಯರ ಪರಿಚಯವಿದ್ದರೆ, ಈ ಕೃತಿಯಲ್ಲಿ ಮೂವತ್ತೊಂಬತ್ತು ವಚನಕಾರ್ತಿಯರ ಇತಿವೃತ್ತಗಳಿವೆ. ಹೀಗೆ ಇನ್ನೂ ಅನೇಕ ಹೊಸ ಸಂಗತಿಗಳ ಕಾರಣಕ್ಕೆ ಈ ಕೃತಿ ರಚನೆಯಾಗಿದ್ದು ಓದುಗರು, ಸಂಶೋಧಕರು ಈ ಕೃತಿಯನ್ನು ಸ್ವಾಗತಿಸುವರೆಂದು ನಂಬಿದ್ದೇನೆ...
ವಿಜಯಶ್ರೀ ಸಬರದ
9845824834
ಮುಂದುವರೆಯುವುದು....
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.