Date: 20-08-2020
Location: ಬೆಂಗಳೂರು
ಹಿರಿಯ ವಿಮರ್ಶಕರಾದ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ಬರೆವ ಅಂಕಣ ’ಆವಗೆಯ ಕಿಚ್ಚು’. ಈ ಸರಣಿಯಲ್ಲಿ ಅವರು ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲಿದ್ದಾರೆ. ವರ್ತಮಾನದ ಬಿಕ್ಕಟ್ಟು ಮತ್ತು ಅದನ್ನು ಮುಖಾಮುಖಿಯಾಗುವ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಈ ಬರೆಹ ಓದಿನ ಖುಷಿಯ ಅನುಭವ ನೀಡುತ್ತದೆ.
ಪಂಜೆಯವರ ‘ತೆಂಕಣ ಗಾಳಿಯಾಟ’ ಕವಿತೆಯು ಬಾಲ್ಯದಿಂದಲೂ ನನ್ನ ಸಂಗಾತಿ. ಅದರಲ್ಲಿ ದಕ್ಷಿಣದಿಂದ ಬೀಸುವ ಗಾಳಿಯು ‘ಪಾತಾಳದ ಬುಸುಗುಟ್ಟುವ ಹಾವೂ’ ಹೌದು, ‘ಹಸಿವಿನ ಭೂತದ ಕೂಗುವ ಕೂವೂ’ ಹೌದು. ಈಗ ಇರುವುದು ಸುತ್ತಲಿನ ಗಾಳಿಯೇ ವಿಷವೂಡಿಸುವ ಕಾಲ ಅಥವಾ ಹಾಗೆ ತಿಳಿದಿರುವ ನಾವು ಸುತ್ತಲೂ ಓಡಾಡುತ್ತಿರುವ ಪರಿಚಿತರು, ಅಪರಿಚಿತರು ಎಲ್ಲರೂ ಯಮದೂತರೆನ್ನುವ ಭಯ ಸಂಶಯಗಳಿಂದ ಪೀಡಿತರಾಗಿ ಮುಖವಾಡಗಳನ್ನು ತಗುಲಿಸಿಕೊಂಡು ಕಷ್ಟಪಟ್ಟು ಉಸಿರಾಡುತ್ತಿದ್ದೇವೆ. ಹೌದು. ಇದುವರೆಗೆ ಯಾರಿಗೂ ಕಾಣಿಸದಿದ್ದ ನಮ್ಮ ಮುಖವಾಡಗಳು ಈಗ ಢಾಳಾಗಿ ಕಾಣುತ್ತಿವೆ. ಯಾವ ಕಾಲದಿಂದಲೂ ನಾವು ಅವುಗಳನ್ನು ತಗುಲಿಸಿಕೊಂಡೇ ಬದುಕಿದ್ದೇವೆ. ಅನ್ಯರಿಗೆ ನಾವು ಕಾಣಿಸದೆ, ಅನ್ಯರು ನಮಗೆ ಕಾಣಿಸದೆ ನಾವೆಲ್ಲರೂ ಬದುಕತೊಡಗಿ ದಶಕಗಳೇ ಕಳೆದವು. ಕವಿ ಎಲಿಯಟ್ ಹೇಳಿದ “To prepare a face to meet the faces that you meet.” ಎನ್ನುವ ಮಾತು ನಮ್ಮ ಘೋಷವಾಕ್ಯವಾಗಿದೆ. ನಾವೇ ಕಟ್ಟಿಕೊಂಡಿರುವ ‘ನಾನೆ ಸರಿತನ’ದ ಲೋಕದಲ್ಲಿ ‘ಅನ್ಯ’ರು ಮಾತ್ರ ಅಪರಾಧಿಗಳು. ಬೇರೆ ವ್ಯಕ್ತಿಯಾದರೂ ಅಷ್ಟೆ, ಬೇರೆ ಸಮುದಾಯ-ದೇಶಗಳಾದರೂ ಅಷ್ಟೆ. ನಾವು ಪಡೆಯುತ್ತಿರುವ ಸಂಬಳ, ಪಿಂಚಣಿಗಳು ಬೆವರು ಸುರಿಸಿ ಪಡೆದವು. ಉಳಿದವರದು ವಂಚನೆಯಿಂದ ಬಂದ ಹಣ. ಎಲ್ಲೋ ದೂರದ ಕಾಡುಗಳಲ್ಲಿ, ‘ಸಲ್ಲದ’ ಆದರ್ಶಗಳಿಗಾಗಿ ರಕ್ತ ಚೆಲ್ಲುತ್ತಿರುವ ತರುಣ-ತರುಣಿಯರು ಭಯೋತ್ಪಾದಕರಾದರೆ, ದಿನದಿನಕ್ಕೂ ‘ಶ್ರೀಮಂತ’ವಾಗುತ್ತಿರುವ ದೇಶದಲ್ಲಿ ಕ್ಷಣಕ್ಷಣಕ್ಕೂ ‘ನಿರ್ಗತಿಕ’ರಾಗುತ್ತಿರುವ ಜನರು ಅಸಂಸ್ಕೃತರು, ಸೋಮಾರಿಗಳು. ಹೀಗೆಂದು ನಾವು ಇದೆಲ್ಲವನ್ನೂ ಪ್ರತಿಭಟಿಸದೆ ಇರುವ ತಟಸ್ಥರೇನೂ ಅಲ್ಲ. ಹಲವು ಹುತಾತ್ಮರ ಬ್ಯಾನರುಗಳ ಆಸರೆಯಲ್ಲಿ ತೂಗಾಡುವ, ಕೂಗಾಡುವ ನಾವು ಅಡಿಗರ ‘ನನ್ನ ಅವತಾರ’ದ ನಾಯಕನ ಹಾಗೆ, ‘ಸಣ್ಣ ಕಲ್ಲಿನಂತೆ ಕೆಸರ ನಡುವೆ ಉಸಿರು ಕಟ್ಟಿ ಪಾಚಿ ಕಟ್ಟಿ‘ ಕಾಯುತ್ತಿರುವವರು. ಹೌದು. ಸುತ್ತಲಿನ ಗಾಳಿಯಲ್ಲಿ ತುಂಬಿರುವ ನಂಜಿನಲ್ಲಿ ನಾವು ಕಕ್ಕಿದ ವಿಷವೂ ಇದೆ.
ಇಲ್ಲಿ ಬರೆಯುತ್ತಿರುವ ನಾನು, ಓದುತ್ತಿರುವ ನೀವು ನಿಜಕ್ಕೂ ಅಲ್ಪಸಂಖ್ಯಾತರು. ಸಾಹಿತ್ಯವನ್ನು ಇತರ ಕಲೆಗಳನ್ನು ಸೃಷ್ಟಿಸಬಲ್ಲೆವು, ಸವಿಯಬಲ್ಲೆವು ಎಂಬ ಹಮ್ಮು ನಮ್ಮದು. ಬುದ್ಧಿಜೀವಿಗಳಾದ ನಾವು ವಿಶೇಷವಾದ ಸವಲತ್ತುಗಳನ್ನು ಪಡೆಯುವುದು ನಮ್ಮ ಹಕ್ಕು ಎನ್ನುವಂತೆ ಕೇಳುತ್ತೇವೆ, ಪಡೆಯುತ್ತೇವೆ. ಉಳಿದವರಿಗೆ ಅಂತಹ ಹಕ್ಕುಗಳೇ ಇಲ್ಲವಾಗಿದೆ ಎನ್ನುವುದನ್ನು ಮರೆಯುತ್ತೇವೆ. ಅದರ ಜೊತೆಗೆ, ನಮಗೆ ಇರಬಹುದಾದ, ಎಂದೋ ಒಮ್ಮೆ ಇದ್ದಿರಬಹುದಾದ ಕಲೆಗಾರಿಕೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿಯಿಂದ ಬಿಡುಗಡೆ ಪಡೆದವರಂತೆ ನಿರಾಳವಾಗಿ ಬದುಕುತ್ತೇವೆ. ನಮ್ಮಲ್ಲಿ ಹಲವರು ಕಲೆಯ ಬಗ್ಗೆ, ಕಲಾಕೃತಿಗಳ ಬಗ್ಗೆ ಒಂದಿಷ್ಟೂ ತಲೆಕಡಿಸಿಕೊಳ್ಳದ ‘ಕಲಾವಿದ’ರು.
ಇದು ಕೇವಲ ನೈತಿಕತೆಯ ಪ್ರಶ್ನೆಯಲ್ಲ. ಹಾಗೆ ನೋಡಿದರೆ, ನಿರಪಾಯಕರವಾದ ಆತ್ಮನಿಂದೆಯೂ ಅಪರಾಧವೇ. ಈ ಪ್ರಶ್ನೆ ಹೆಚ್ಚು ತಾತ್ವಿಕವಾದುದು. ಮನುಷ್ಯನ ಮೂಲಭೂತ ಸ್ವ-ಭಾವ ಯಾವುದು ಎನ್ನುವುದು ಸದಾ ಕಾಡುವ ಪ್ರಶ್ನೆ. ಒಂಟಿಯಾಗಿರುವಾಗ, ಯಾವುದೋ ಒಂದು ಗುಂಪಿನ ಭಾಗವಾಗಿರುವಾಗ, ಅನ್ಯರ ಜೊತೆಗಿನ ಸಂಬಂಧಗಳಲ್ಲಿ, ತಮ್ಮ ಸಮುದಾಯದ ಒಳಗೆ, ಇತರ ಸಮುದಾಯಗಳ ಜೊತೆಗಿನ ಒಗೆತನದಲ್ಲಿ, ನಡವಳಿಕೆಯಲ್ಲಿ ಅವನು/ಅವಳು ಹೇಗಿರುತ್ತಾರೆ? ಮಹತ್ವಾಕಾಂಕ್ಷೆ, ಸ್ವಾರ್ಥ ಮತ್ತು ಕ್ರೌರ್ಯಗಳು ಮಾತ್ರ ನಮ್ಮ ನಡವಳಿಕೆಯನ್ನು ನಿಯಂತ್ರಿಸುತ್ತವೆಯೇ? ಅನ್ಯರಿಗೆ ನೆರವು ನೀಡಬೇಕು ಎನ್ನುವ ಹಂಬಲವು ಸಹಜವೋ ಅಥವಾ ಕಲಿತುಕೊಂಡುದೋ.. ಇಂತಹ ಪ್ರಶ್ನೆಗಳು ಮುಖ್ಯವಾದವು. ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ಮನುಷ್ಯನನ್ನು ‘ಮನುಷ್ಯನಾಗಿ’ ಮಾಡುವ ಎಲ್ಲ ಪ್ರಯತ್ನಗಳೂ ವಿಫಲವಾಗಿರುವುದನ್ನೇ ನೋಡುತ್ತೇವೆ. ಅಶೋಕನಿಗೆ ಮೂಡಿದ ತಿಳಿವಳಿಕೆಯು ಯುದ್ಧಗಳನ್ನು ನಿಲ್ಲಿಸಲಿಲ್ಲ. ಬಸವಣ್ಣನವರ ಆರ್ತ ಮೊರೆಯು ಜಾತಿಗಳನ್ನು ಮಾಯ ಮಾಡಲಿಲ್ಲ. ಸಮಾನವಾದ ಹಿತಾಸಕ್ತಿಗಳನ್ನು ಹೊಂದಿರುವ ಗುಂಪುಗಳು ಒಂದುಗೂಡಿ ಉಳಿದವರನ್ನು ತುಳಿಯುವುದನ್ನೇ ಮತ್ತೆ ಮತ್ತೆ ನೋಡುತ್ತೇವೆ. ಶೋಷಿತರಾದವರಿಗೆ ಅಧಿಕಾರ ಸಿಕ್ಕಾಗ ಅವರೇ ಶೋಷಕರಾಗುತ್ತಾರೆ. ಜನಾಂಗಹತ್ಯೆಗೆ ಪರಿಹಾರವೆಂಬಂತೆ ಅಸ್ತಿತ್ವ ಪಡೆದ ಇಸ್ರೇಲ್ ಇಂದು ತಾನೇ ಭಯೋತ್ಪದಕ ರಾಷ್ಟ್ರವಾಗಿದೆ. ‘ಬಲಿಷ್ಢನಾದವನು ಬದುಕುತ್ತಾನೆ’ ಎನ್ನುವ ಡಾರ್ವಿನ್ ಕೊಟ್ಟ ತಿಳಿವಳಿಕೆಯು ಕ್ರೌರ್ಯಕ್ಕೆ ನೀಡಿದ ಇನ್ನೊಂದು ಹೆಸರೇ? ಕೊನೆಗೂ ಪ್ರೀತಿ ಮತ್ತು ಸ್ವಾರ್ಥಗಳಲ್ಲಿ ಯಾವುದರ ಮೇಲುಗೈ ಆಗುತ್ತದೆ? ನಾವು ತೋರಿಸುವ ಬಹು ಪಾಲು ಪ್ರೀತಿಗೆ ಸ್ವಾರ್ಥದ ಲೇಪ ಇರುತ್ತದೆಯೇ? ತ್ಯಾಗವೆನ್ನುವುದು ಕೂಡ ಆತ್ಮವಂಚನೆಯ ಇನ್ನೊಂದು ರೂಪವೇ? ಈ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಉತ್ತರಕ್ಕಾಗಿ ಹುಡುಕದೆ ನಾವು ಬದುಕಬಹುದು. ಆದರೆ ಆಗಲೂ ನಮ್ಮ ನಡವಳಿಕೆಯು ಇಂತಹ ಸಂಗತಿಗಳಿಂದಲೇ ನಿಯಂತ್ರಿತವಾಗಿರುತ್ತದೆ.
ಇದನ್ನು ಇನ್ನೊಂದು ಬಗೆಯಾಗಿಯೂ ನೋಡಬಹುದು. ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ನಿರ್ದಿಷ್ಟವಾದ ಗುಣಲಕ್ಷಣಗಳು ನೆಲೆ ನಿಂತಿರುತ್ತವೆ. ಹಾಗಾಗಲು ಹತ್ತು ಹಲವು ಕಾರಣಗಳು ಇರುತ್ತವೆ. ನಮ್ಮ ನಡವಳಿಕೆಯು ಅವುಗಳಿಂದಲೇ ನಿಯಂತ್ರಿತವಾಗಿರುತ್ತವೆ. ಈ ಸ್ವ-ಭಾವಕ್ಕೆ ವಂಶವಾಹಿಗಳು ಕಾರಣವೋ ಶೈಶವ-ಬಾಲ್ಯಗಳ ಅನುಭವಗಳು ಕಾರಣವೋ ಸಾಮಾಜಿಕ ಒತ್ತಡಗಳು ಕಾರಣವೋ ಅಥವಾ ಸ್ವಭಾವವು ಇವೆಲ್ಲದರ ಸಂಯೋಜನೆಯೋ..? ಒಟ್ಟಿನಲ್ಲಿ ಅದು ದತ್ತವೇ ವಿನಾ ಸ್ವಯಾರ್ಜಿತವಲ್ಲ. ಇದನ್ನು ಬದಲಾಯಿಸಿ ಕೊಳ್ಳಬೇಕೆಂಬ ಬೌದ್ಧಿಕ ತಿಳಿವಳಿಕೆ ಮತ್ತು ಅಪೇಕ್ಷೆಗಳು ಕೂಡ ಹೆಚ್ಚಿನ ಬದಲಾವಣೆ ತರುವುದಿಲ್ಲ. ಯಾವುದೋ ಒಂದು ಗುಣ ಸರಿಯಲ್ಲವೆಂದು ಗೊತ್ತಿದ್ದರೂ ಅದನ್ನು ಕಳೆದು ಕೊಳ್ಳಲಾರದ ಅಳಲು ಮನುಷ್ಯರ ವಿಷಾದಕ್ಕೆ ಮುಖ್ಯ ಕಾರಣ. ಕೋಪಿಷ್ಟನು ಶಾಂತನಾಗುವುದಾಗಲೀ ಪುಕ್ಕಲು ಸ್ವಭಾವದವನು ಧೀರನಾಗುವುದಾಗಲೀ ಕನಸು ಮಾತ್ರವೇನೋ. ಸ್ವಭಾವದ ಗೋಡೆಗಳನ್ನು ದಾಟುವುದು ಹೇಗೆ ತಾನೇ ಸಾಧ್ಯ?
ಹೌದು. ದುಷ್ಟತನ ಇದೆ, ‘ಸೂಸೂಕರಿಸುತ ಬರಬರ ಭರದಲಿ’ ಬರುವ ‘ಕಾಲನ ಕೋಣನ ಉಸುರಿನ ಸುಯ್ಲು’ ಕೂಡ ಕಿವಿದೆರೆಗಳನ್ನು ತುಂಬುತ್ತಲೇ ಇದೆ. ಕೆಡುಕು ಮತ್ತು ಸಾವುಗಳನ್ನು ಮೀರಲು ಸಾಧ್ಯವಿಲ್ಲ. ಹಾಗಾದರೆ ಪ್ರೀತಿ ಮಾಡುವುದೇನು? ಅದು ಒಂದು ಪುಟ್ಟ ಅಗ್ಗಿಷ್ಟಿಕೆ. ಚಳಿಯನ್ನು ಗೆಲ್ಲುವುದಿಲ್ಲ. ಕತ್ತಲನ್ನು ಗೆಲ್ಲುವುದಿಲ್ಲ. ಆದರೆ ಒಂದಿಷ್ಟು ಶಾಖ, ಒಂದಿಷ್ಟು ಬೆಳಕು ಕೊಡುತ್ತದೆ. ಸದ್ಯಕ್ಕೆ ಅಷ್ಟು ಸಾಕು. ಅದು ವೈದ್ಯನ ಹಾಗೆ. ಅವನು ಸಾವನ್ನು ನೋವನ್ನು ಸೋಲಿಸುವುದಿಲ್ಲ. ಆದರೆ ಅವುಗಳನ್ನು ಮುಂದೆ ಹಾಕುತ್ತಾನೆ, ಕಡಿಮೆ ಮಾಡುತ್ತಾನೆ. ನಮಗೆ ಇಷ್ಟು ಮಾತ್ರ ಸಾಧ್ಯ, ಇಷ್ಟು ಸಾಕು. ಒಮ್ಮೆ ‘ಜೀವವಿರೋಧಿ ಕವಿಯೆಂದು ಕರೆಸಿಕೊಂಡ ಅಡಿಗರು ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ’ ಎಂದು ಹೇಳಿದರು. ಜೀವಪೋಷಣೆ ಮತ್ತು ‘ಜೀವನಾಶನ’ಗಳು ಒಂದೇ ನಾಣ್ಯದ ಎರಡು ಮುಖಗಳೆಂದು ತೋರುತ್ತದೆ. ಈ ಪರಸ್ಪರ ವಿರೋಧದ ನಡುವೆಯೇ ಬಾಳು ಅರಳಬೇಕು. “ಒಳ್ಳೆತನ ಸಹಜವೇನಲ್ಲ……ಒಳ್ಳೆತನ ಅಸಹಜವೂ ಅಲ್ಲ, ಅದು ಬೆಳವಣಿಗೆ, ಸವಾಲು.” ಎಂದವರೂ ಅಡಿಗರೇ. ಕವಿ ಸತ್ಯವನ್ನು ಅದರ ಹಲವು ಮುಖಗಳಲ್ಲಿ ಕಾಣಿಸಬಲ್ಲ. ಸ್ವತಃ ನಾವು ಜಡತನವನ್ನು ಕಳೆದುಕೊಂಡಾಗ ಮಾತ್ರವೇ “ತೆಗೆ ಜಡವೆಂಬುದೆ ಬರಿ ಸುಳ್ಳು” (ಕುವೆಂಪು) ಎಂಬ ತಿಳಿವಳಿಕೆ ಮೂಡುತ್ತದೆ. ಆಗ ‘ಬಿಂದು’ ಮತ್ತು ‘ಸಿಂಧು’ಗಳ ಒಂದುಗೂಡುವಿಕೆ ಸಾಧ್ಯವಾಗುತ್ತದೆ.
ತೆಂಕಣಗಾಳಿಯ ಮಾತು ಬಂದಾಗಲೇ ‘ಪಶ್ಚಿಮ ಮಾರುತ’ವೂ ನೆನಪಾಗುತ್ತದೆ. ಷೆಲ್ಲಿಯ ‘ಓಡ್ ಟು ದ ವೆಸ್ಟ್ ವಿಂಡ್’, ಅಂದಿಗೂ ಇಂದಿಗೂ ನನ್ನ ಮೈನವಿರೇಳಿಸುವ ಕವಿತೆ. ಅವನು ಅರ್ತವಾಗಿ, ಆರ್ದ್ರವಾಗಿ ಹೇಳುವ
“Oh, lift me as a wave, a leaf, a cloud!
I fall upon the thorns of life! I bleed!
………. ……… ……..
A heavy weight of hours has chain'd and bow'd
One too like thee: tameless, and swift, and proud.
Make me thy lyre, even as the forest is:
What if my leaves are falling like its own!”
ಎಂಬ ಸಾಲುಗಳನ್ನು ಕನ್ನಡದಲ್ಲಿ ಹೇಳಲು ನನಗೆ ಸಾಧ್ಯವಿಲ್ಲ. ಆದರೂ ಅಲ್ಲಿರುವುದು ನಮ್ಮೆಲ್ಲರ ಕನಸು….
ನಿಜ. ಕಾಲವು ಬುಸುಗುಟ್ಟುವ ಹಾವು. ಇಂದಲ್ಲ ನಾಳೆ ತಣ್ಣಗಾಗುವ ನಾವು ನೀವು ಕೂಡ ಬುಸುಗುಟ್ಟುವ ಹಾವುಗಳೇ. ಆದರೆ
ಇದೆಲ್ಲದರ ನಡುವೆಯೂ ನಮ್ಮೊಳಗಿನ ಪ್ರೀತಿಯೆಂಬ ಕಾವು ನಮ್ಮನ್ನು ಮತ್ತು ಜೊತೆಜೀವಿಗಳನ್ನು ಬೆಚ್ಚಗಿಡುತ್ತದೆ.
ನಾವು ಆ ಬಿಸುಪನ್ನು ಕಾಪಿಟ್ಟುಕೊಳ್ಳೋಣ.
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.