ಭೂಮಿ ಮತ್ತು ಹೆಣ್ಣಿನ ಒಡೆತನ ಬಿಂಬಿಸುವ ಅದ್ಭುತ ಕಾದಂಬರಿ ‘ಪುಣ್ಯ ಭೂಮಿ’

Date: 13-07-2024

Location: ಬೆಂಗಳೂರು


'ಇಡೀ ಕಾದಂಬರಿಯು ಅಂದಿನ ಚೀನಾದಲ್ಲಿರುವ ನಂಬಿಕೆಯಂತೆ ಭೂಮಿಯ ಘನತೆಯನ್ನು ಎತ್ತಿ ಹಿಡಿಯುತ್ತ ಹೆಣ್ಣಿನ ಘನತೆಯನ್ನು ಕಾಲಡಿಗೆ ತಳ್ಳುವ ಚಿತ್ರಣವನ್ನು ಮಾರ್ಮಿಕವಾಗಿ ಚಿತ್ರಿಸಿದೆ' ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿಕಡಲು ಅಂಕಣದಲ್ಲಿ ಕೆ. ಶ್ರೀನಾಥ್ ಅವರು ಅನುವಾದಿಸಿರುವ ಭವ್ಯ ಭೂಮಿ ಕೃತಿಗೆ ಬರೆದ ವಿಶ್ಲೇಷಣೆ ನಿಮ್ಮ ಓದಿಗಾಗಿ

ಹೆಣ್ಣು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹೆಣ್ಣು ಮತ್ತು ಒಬ್ಬ ಗಂಡಸು ಎಲ್ಲಿಯೇ ಹೋದರೂ ಅವನು ಗಂಡಸು ಮಾತ್ರ. ಹೆಣ್ಣಿನ ಬವಣೆ, ಜೀವನದಲ್ಲಿ ಎದುರಿಸಬೇಕಾದ ಕಷ್ಟಕಾರ್ಪಣ್ಯಗಳು ಪ್ರಪಂಚದಾದ್ಯಂತ ಇದ್ದೆ ಇರುತ್ತವೆ. ಆದರೆ ಅವಗಳ ಸ್ವರೂಪ ಬದಲಾಗಬಹುದು ಅಷ್ಟೆ. ಹೆಣ್ಣನ್ನು ಆಳತ್ತೇನೆ ಎಂದು ಹೊರಟ ಪುರುಷ ಪ್ರಪಂಚದ ನಿಲುವುಗಳು ಸದಾಕಾಲ ಹಾಗೆಯೇ ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯುತ್ತಲೆ ಇರುತ್ತದೆ. ಹೀಗೊಂದು ಪುರುಷ ಶ್ರೇಷ್ಠತೆಯ, ಜಮಿನ್ದಾರಿ ಪದ್ದತಿಯ ಸೂಕ್ಷ್ಮ ಒಳನೋಟಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟವರು ಪರ್ಲ್ ಎಸ್. ಬಕ್. ಅದನ್ನು ಅದ್ಭುತವಾಗಿ ಕನ್ನಡದ ಓದುಗರಿಗೆ ಉಣಬಡಿಸಿದ್ದು ಕೆ ಶ್ರೀನಾಥ. ಈ ಕಾದಂಬರಿಯ ವಿಶೇಷವೆಂದರೆ ಇದು ಚೀನಾದ ಜಮಿನ್ದಾರಿಶಾಹಿ ಪದ್ದತಿಯನ್ನು ಕಟ್ಟಿಕೊಡುವಷ್ಟೇ ಸಶಕ್ತವಾಗಿ ಮಧ್ಯಮವರ್ಗದ ಚಿತ್ರಣವನ್ನೂ ಓದುಗರ ಕಣ್ಣೆದುರಿಗೆ ತೆರೆದಿಡುತ್ತದೆ. ಹೊರ ಪ್ರಪಂಚಕ್ಕೆ ಅಷ್ಟೇನೂ ಗೊತ್ತಿರದ ಚೀನಾದ ಸಾಮಾಜಿಕ ತಲ್ಲಣಗಳು, ಬಡತನ ಹಾಗೂ ಪ್ರಾಕೃತಿಕ ವಿಕೋಪಗಳಂತಹ ಸನ್ನಿವೇಶಗಳ ಯಥಾವತ್ತು ಚಿತ್ರಣ ಇಲ್ಲಿರುವುದರಿಂದ ಓದಿದಷ್ಟೂ ಆಳವಾಗಿ ಓದಿಸಿಕೊಳ್ಳುತ್ತದೆ.

ನಾವು ಯಾಕೆ ಬೇರೆ ಭಾಷೆಯ, ಬೇರೆ ಜನಾಂಗದ, ಬೇರೆ ದೇಶದ ಸಾಹಿತ್ಯವನ್ನು ಓದಬೇಕು ಎನ್ನುವ ಪ್ರಶ್ನೆ ಸದಾ ಎಲ್ಲರ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಯಾಕೆ ಓದಬೇಕು ಎನ್ನುವುದಕ್ಕೆ ಉತ್ತರವಾಗಿ ಈ ಪುಸ್ತಕ ನಮ್ಮೆದುರಿಗಿದೆ. ಪರ್ಲ್ ಎಸ್ ಬಕ್ ಅವರ ದಿ ಗುಡ್ ಅರ್ಥ್. ಸಾಮಾನ್ಯವಾಗಿ ನಾವು ಭಾರತೀಯರು ಪಾಶ್ಚಾತ್ಯ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದುತ್ತೇವೆ. ನಮ್ಮ ಪಠ್ಯದ ಅಧ್ಯಯನಗಳನ್ನು ಪಾಶ್ಚಾತ್ಯ ಸಾಹಿತ್ಯಗಳು ತಮ್ಮದೆ ಆದ ಸ್ಥಾನವನ್ನು ಪಡೆದಿದೆ. ಆದರೆ ನಮ್ಮ ಅಕ್ಕಪಕ್ಕದ ರಾಜ್ಯಗಳ, ದೇಶಗಳ ಸಾಹಿತ್ಯವನ್ನು ಓದುವುದಕ್ಕೆ ಅದ್ಯಾಕೋ ಇಲ್ಲಿಯವರೆಗೆ ಹಿಂದೇಟು ಹಾಕುತ್ತಲೇ ಇದ್ದೇವೆ. ನಮಗೆ ಇಂಗ್ಲೆಂಡ್ ಗೊತ್ತಿದ್ದಷ್ಟು ಪಕ್ಕದ ಚೀನಾ ಪಾಕಿಸ್ತಾನಗಳು ಗೊತ್ತಿಲ್ಲ. ಇಂಗ್ಲೆಂಡ್ ಬಿಡಿ ಅದು ನಮ್ಮನ್ನು ಇನ್ನೂರು ವರ್ಷಗಳವರೆಗೆ ಆಳ್ವಿಕೆ ನಡೆಸಿ ಅದರ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ನಮ್ಮ ಮೇಲೆ ಹೇರಿದ ದೇಶ ಎಂದುಕೊಳ್ಳೋಣ. ಆದರೆ ಜರ್ಮನಿ, ರಷ್ಯಾ, ರೋಮ್, ಇಟಲಿಗಳು ಅರಿವಾಗುವಷ್ಟು ಸುಲಭವಾಗಿ ನಮ್ಮದೇ ದೇಶದ ಮೇಘಾಲಯ, ನಾಗಾಲ್ಯಾಂಡ್ ಮುಂತಾದ ರಾಜ್ಯಗಳು, ಅಷ್ಟೇ ಏಕೆ ಪಕ್ಕದ ಕೇರಳ, ತಮಿಳುನಾಡು, ಆಂದ್ರಪ್ರದೇಶಗಳು ಅರ್ಥವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ನಾವು ಓದಿಗೆ ಆರಿಸಿಕೊಳ್ಳುವ ಸಾಹಿತ್ಯ. ಆಂಗ್ಲ ಸಾಹಿತ್ಯ ಕನ್ನಡವಷ್ಟೇ ಅಲ್ಲ ಇತರ ಭಾರತೀಯ ಭಾಷೆಗಳಲ್ಲೂ ಹಾಸುಹೊಕ್ಕಾಗಿದೆ. ಅದೇ ರೀತಿ ನಮ್ಮ ದೇಶದ ಇತರ ಭಾಷೆಯ ಸಾಹಿತ್ಯಗಳಾಗಲಿ ಅಥವಾ ನಮ್ಮಕ್ಕ ಪಕ್ಕದ ದೇಷಗಳ ಸಾಹಿತ್ಯಗಳಾಗಲಿ ನಮಗೆ ಅಷ್ಟೇನೂ ಬಳಕೆಯಲ್ಲಿಲ್ಲ. ಅವರ ಸಂಸ್ಕೃತಿ ಜನಜೀವನ, ನಂಬಿಕೆ ಸಂಪ್ರದಾಯಗಳ ಅರಿವು ನಮಗಿಲ್ಲ. ಯಾಕೆಂದರೆ ನಾವು ಈ ಸಾಹಿತ್ಯಗಳನ್ನು ಓದುವ ಗೋಜಿಗೆ ಹೋಗುತ್ತಿಲ್ಲ. ಆದರೆ ಇತ್ತೀಚೆಗೆ ಕಾಣುತ್ತಿರುವ ಅತ್ಯುತ್ತಮ ಬೆಳವಣಿಗೆ ಎಂದರೆ ಈ ಭಾಷೆಗಳ ಸಾಹಿತ್ಯಗಳು ಇಂಗ್ಲೀಷ್‍ನ ಮುಖಾಂತರವಾದರೂ ನಮಗೆ ತಲುಪುತ್ತಿವೆ ಎಂಬುದು. ಆದರೆ ಅಮೇರಿಕಾದ ಪರ್ಲ್ ಎಸ್ ಬಕ್ ತಮ್ಮ ತಂದೆ ತಾಯಿಯರ ಜೊತೆ ನಾಲ್ಕು ತಿಂಗಳ ಮಗುವಾಗಿದ್ದಾಗಲೇ ಚೀನಾಕ್ಕೆ ಪ್ರಯಾಣ ಬೆಳೆಸಿ ಅಲ್ಲಿಯೆ ವಾಸಿಸಿದವರು. ವರ್ಜಿನಿಯಾದ ಲಿಂಚ್‍ಬರ್ಗ್‍ನಲ್ಲಿರುವ ರಾಂಡೋಲ್ಫ-ಮಾಕೋನ್ ವುಮೆನ್ಸ್ ಕಾಲೇಜಿನಲ್ಲಿ ವಿದ್ಯಾಭ್ಯಾ ಮುಗಿಸಿದ ನಂತರ ಮತ್ತೆ ಚೀನಾದ ಝೆಂಜಿಯಾಂಗ್ (Zhenjiang) ಪ್ರದೇಶಕ್ಕೆ ಹಿಂದಿರುಗುವ ಪರ್ಲ್ ಎಸ್ ಬಕ್ 1914 ರಿಂದ 1932ರವರೆಗೆ ಚೀನಾದಲ್ಲಿ ವಾಸಿಸುವ ಇವರು ಚೀನಾದ ಜೀವನದ ಸಂಪೂರ್ಣ ಒಳನೋಟಗಳನ್ನು ಹೊಂದಿದವರು. ಹೀಗಾಗಿ 1932ರ ಸಮಯಕ್ಕೆ ಬಂದ ಈ ಪುಸ್ತಕ ಅಂದಿನ ಚೀನಾದ ಸಮಗ್ರ ಚಿತ್ರಣವನ್ನು ನೀಡಲು ಯಶಸ್ವಿಯಾಗಿದೆ.

ಬಡ ಯುವಕ ವಾಂಗ್ ಲಂಗ್‍ನ ಜೀವನ ಚಿತ್ರಣ ಇಲ್ಲಿ ಅಟೊಬಯೊಗ್ರಫಿಯಂತೆ ಮೂಡಿ ಬಂದಿದೆ. ಮುದುಕನಾದ ಆತನ ತಂದೆ ಒಬ್ಬ ಚಿಕ್ಕ ಹಿಡುವಳಿದಾರ. ಅನಾರೋಗ್ಯಪೀಡಿತ. ಬಡವನಾದ ವಾಂಗ್‍ಗೆ ಮದುವೆಯಾಗಲು ಎಲ್ಲೂ ಹೆಣ್ಣು ಸಿಗದೆ, ಆ ಪ್ರದೇಶದ ಬಡ, ವಿವಾಹಾಕಾಂಕ್ಷಿ ಗಂಡಸರಂತೆ ಒಬ್ಬ ಶ್ರೀಮಂತ ಜಮಿನ್ದಾರನ ಮನೆಯ ಗುಲಾಮ ಸೇವಕಿಯನ್ನು ಮದುವೆಯಾಗಲು ಬಯಸುವುದರೊಂದಿಂಗೆ ಕಥೆ ಪ್ರಾರಂಭವಾಗುತ್ತದೆ. ಅಂತಹ ಸ್ಥಿತಿಯಲ್ಲೂ ಆ ಸೇವಕಿ ನೋಡಲು ಸುಂದರವಾಗಿರಬೇಕು, ಮುಖದಲ್ಲಿ ಕಲೆಗಳು ಇರಬಾರದು ಹಾಗೂ ಅವಳನ್ನು ಆ ಜಮಿನ್ದಾರ ಮತ್ತು ಅವನ ಮಕ್ಕಳು ಹಾಸಿಗೆಗೆ ಕರೆದಿರಬಾರದು ಎನ್ನುವ ನಿಬಂಧನೆಗಳೊಂದಿಗೆ ಆತ ಮದುವೆಯ ತಯಾರಿ ಮಾಡಿಕೊಳ್ಳುವುದರೊಂದಿಗೆ ಹೆಣ್ಣಿನ ಮೊದಲ ಶೋಷಣೆಯೊಂದಿಗೆ ಮುಂದುವರೆಯುವ ಕಾದಂಬರಿ ಕೊನೆಯ ಪುಟದವರೆಗೂ ಹೆಜ್ಜೆ ಹೆಜ್ಜೆಯಲ್ಲೂ ಹೆಣ್ಣನ್ನು ದ್ವಿತಿಯ ದರ್ಜೆಯ ಪ್ರಜೆಯನ್ನಾಗಿ ಚಿತ್ರಿಸುತ್ತ ಹೋಗಿರುವುದನ್ನು ಕಾಣಬಹುದು.

ಗುಲಾಮಳಾದ ಓ-ಲಾನ್ ಅದೆಷ್ಟು ಸೇವಕಿಯಿಂದ ವರ್ತಿಸುತ್ತಿದ್ದಳು ಎಂದರೆ ಅದನ್ನು ಓದುವಾಗಲೆಲ್ಲ ಜಗದ ಎಲ್ಲ ಹೆಂಗಸರೂ ಗುಲಾಮರೆ ಎಂಬುದು ಅರಿವಿಲ್ಲದಂತೆ ತಲೆಯೊಳಗೆ ತುಂಬಿಕೊಳ್ಳುತ್ತದೆ. ಓ-ಲಾನ ತನ್ನ ಮೊದಲನೆಯ ಹೆರಿಗೆಯನ್ನು ಯಾರ ಸಹಾಯವೂ ಇಲ್ಲದೆ ಒಬ್ಬಳೇ ಮಾಡಿಕೊಳ್ಳುವ ಮುನ್ನ ಹೊಲದಲ್ಲಿ ಗಂಡನಿಗೆ ಸರಿಸಮನಾಗಿ ಪೈರನ್ನು ಕೊಯ್ಯುತ್ತಿರುತ್ತಾಳೆ. ಹೆರಿಗೆಯ ನೋವು ಪ್ರಾರಂಭವಾದ ನಂತರವೂ ಮನೆಗೆ ಬಂದು ವೃದ್ಧ ಮಾವನಿಗೆ ಅಡುಗೆ ತಯಾರಿಸಿ ಟೇಬಲ್ ಮೇಲೆ ಒಪ್ಪವಾಗಿ ಜೋಡಿಸಿಟ್ಟಿರುತ್ತಾಳೆ. ಇಷ್ಟೆಲ್ಲ ಆದ ನಂತರವೂ ಹೆರಿಗೆ ಕೋಣೆಯಿಂದ ಪ್ರಾಣಿಯೊಂದು ಬುಸುಗುಡುತ್ತ ಏದುಸಿರು ಬಿಡುತ್ತ ಮಗುವನ್ನು ಹೆರುವಾಗಲೂ ಹೊರಗೆ ಕಾಯುತ್ತ ನಿಂತ ಗಂಡಸಿಬ್ಬರಿಗೆ ಮಗು ಗಂಡು ಆಗಿರಲೆಂಬ ಆಸೆ. ಹೆರಿಗೆ ಪೂರ್ಣವಾಗುವ ಮುನ್ನವೇ ಗಂಡು ಮಗುವೇ ಆಗಿದ್ದರ ಕುರಿತು ಹೇಳಿಬಿಡಬೇಕೆನ್ನುವ ಆತುರ. ಹೆಣ್ಣು ಇಲ್ಲಿ ಕೇವಲ ಹೆರುವ ಯಂತ್ರ. ಎಷ್ಟಾಗುತ್ತದೆಯೋ ಅಷ್ಟು ಹೆತ್ತು ಬಿಡಬೇಕು ಎಂದು ವೃದ್ಧ ತಂದೆ ಹೇಳುತ್ತಾನೆ. ಬಹುಶಃ ಹೆಚ್ಚುಹೆಚ್ಚು ಮಕ್ಕಳನ್ನು ಹುಟ್ಟಿಸುತ್ತಿದ್ದ ಕಾರಣದಿಂದಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಎನ್ನಿಸಿಕೊಂಡಿರಬಹುದು. ಆದರೆ ಆಗಿನ ಬಡತನ, ಆಗಾಗ ಕಾಡುವ ಭೀಕರ ಬರಗಾಲ ಹಾಗೂ ಪ್ರವಾಹದಂತಹ ಪ್ರಕೃತಿ ವಿಕೋಪಗಳಿಂದಾಗಿ ಆಗುವ ಆಹಾರದ ಅಭಾವ ಮತ್ತು ಜನಸಂಖ್ಯೆಯ ಹೆಚ್ಚಳದಿಂದ ಆಗುವ ಬಡತನಗಳ ಕಾರಣದಿಮದಾಗಿ ಬಹುಶಃ ಚೀನಾ ಒಂದು ಮಗುವನ್ನು ಪಡೆಯಲಷ್ಟೆ ಅನುಮತಿ ನೀಡಿರಬಹುದೇ?

ಭೀಕರ ಬರಗಾಲದಿಂದಾಗಿ ತಿನ್ನಲು ಗತಿಯಿಲ್ಲದೆ ದಕ್ಷಿಣದ ಕಡೆ ವಲಸೆ ಹೋಗುವ ವಾಂಗ್ ಕುಟುಂಬ ಅಲ್ಲಿ ಕಳ್ಳತನ, ಸುಲಿಗೆ ಮಾಡುತ್ತ ಜೀವನ ನಡೆಸುತ್ತದೆ. ಕೂಲಿ ಮಾಡಿದ್ದನ್ನು ತಿನ್ನುವೆ. ಆದರೆ ಕಳ್ಳತನ ಮತ್ತು ಸುಲಿಗೆ ಮಾಡಿದ್ದನ್ನು ತಿನ್ನಲಾರೆ ಎನ್ನುವ ವಾಂಗ್ ಕೂಡ ಶ್ರೀಮಂತನೊಬ್ಬನ ಮನೆಯನ್ನು ಲೂಟಿ ಮಾಡಿ ಆ ಹಣದಿಂದ ಊರಿಗೆ ಹಿಂದಿರುಗುತ್ತಾನೆ. ವಿಶೇಷವೆಂದರೆ ಜಮಿನ್ದಾರರ ಮನೆಯಲ್ಲಿ ಚಿಕ್ಕವಳಿದ್ದಾಗಿನಿಂದಲೂ ಗುಲಾಮಳಾಗಿದ್ದ ಓ ಲಾನ್‍ಗೆ ಶ್ರೀಮಂತರು ಎಲ್ಲಿ ಮತ್ತು ಹೇಗೆ ಹಣ, ಒಡವೆಗಳನ್ನು ಅಡಗಿಸಿರುತ್ತಾರೆಂಬುದು ಗೊತ್ತು. ಅವಳೂ ಆ ಶ್ರೀಮಂತನ ಮನೆಯಿಂದ ಅಪಾರವಾದ ಒಡವೆ, ಆಭರಣಗಳನ್ನು ಕದ್ದು ತಂದು ಗಂಡನಿಗೆ ಗೊತ್ತಿಲ್ಲದಂತೆ ಬಚ್ಚಿಟ್ಟಿದ್ದಾಳೆ. ವಾಂಗ್‍ಗೆ ಆ ವಿಷಯ ತಿಳಿದ ತಕ್ಷಣ ಆ ಎಲ್ಲ ಒಡವೆಗಳನ್ನು ತೆಗೆದುಕೊಂಡು ಹೋಗಿ ಹ್ವಾಂಗ್ ಮನೆಯವರಿಂದ ಜಮೀನು ಖರೀದಿಸುತ್ತಾನೆ. ಹೀಗೆ ಜಮೀನು ಖರೀದಿಸುತ್ತ ಶ್ರೀಮಂತನಾಗುವ ವಾಂಗ್ ಲಂಗ್ ತಾನು ಒಬ್ಬ ರೈತನಾಗಿದ್ದೆ ಎಂಬುದನ್ನು ಮರೆತು ಜಮಿನ್ದಾರಿಯ ಪಾಳೆಗಾರಿಕೆಯನ್ನು ಪ್ರಾರಂಬಿಸುತ್ತಾನಲ್ಲದೆ ಶ್ರೀಮಂತರ ಮೋಜು ಮಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ತನಗಾಗಿ ತನ್ನ ಸರಿಸಮಾನವಾಗಿ ದುಡಿದ ಓ-ಲಾನ್‍ಳನ್ನು ಕುರೂಪಿಯೆಂದು ಹಂಗಿಸುತ್ತ ಪಟ್ಟಣದ ಟೀ ಅಂಗಡಿಯಿಂದ ವೇಶ್ಯೆಯೊಬ್ಬಳನ್ನು ಮನೆಗೆ ತರುತ್ತಾನೆ. ಓ-ಲಾನ್ ಆಸೆಪಟ್ಟು ಇಟ್ಟುಕೊಂಡಿದ್ದ ಎರಡು ಮುತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಅವಳಿಗೆ ನೀಡುತ್ತಾನೆ. ಹೆಣ್ಣಿಗೆ ಯಾವುದೇ ಆಸ್ತಿ, ಆಭರಣ, ಅಂತಸ್ತು ಹೊಂದುವ ಅಧಿಕಾರ ಇಲ್ಲ, ಏನಿದ್ದರೂ ಗಂಡಸು ಕೇಳಿದಾಗ ಮರು ಮಾತನಾಡದೆ ಅದನ್ನು ಒಪ್ಪಿಸಬೇಕು ಎಂಬುದನ್ನು ಇದು ಸೂಚಿಸುತ್ತದೆ.

ಭೂ ಹಿಡುವಳಿದಾರರ ವೈಭವೋಪೇತವಾದ ಜೀವನ ಹಾಗೂ ಅಸಹ್ಯ ಕಾಮಪುರಾಣಗಳನ್ನು ಇಲ್ಲಿವೆ. ದಿನವಿಡಿ ಅಫೀಮಿನ ನಶೆಯಲ್ಲಿ ಹೊರಳಾಡುವ ಯಜಮಾನಿ ಮತ್ತು ಹೊಸ ಹೊಸ ಸೇವಕಿಯರನ್ನು ಹಣ ಕೊಟ್ಟು ಖರಿದಿಸುತ್ತ ಮಂಚಕ್ಕೆ ಕರೆಯಿಸಿಕೊಳ್ಳುವ ಯಜಮಾನ. ಅವರವರದ್ದೇ ಲೋಕದಲ್ಲಿರುವಾಗ ಮಾಡಲು ಕೆಲಸವಿಲ್ಲದೆ ಸಿಡಿಮಿಡಿಗೊಳ್ಳುವುದನ್ನು ಹಾಗೂ ಎಲ್ಲರ ಮೇಲೆ ಹರಿಹಾಯುವುದನ್ನು ಓ ಲಾನ್ ತನ್ನ ಮಗುವಿನ ನಡವಳಿಕೆಯನ್ನು ನೋಡಿ ತನ್ನ ಗಂಡನಿಗೆ ಹೇಳುತ್ತ ಅವನಿಗೊಂದು ಗುಲಾಮಳನ್ನು ಒದಗಿಸಿ ಎನ್ನುವುದು ಇಲ್ಲಿ ಇಡೀ ಕಾದಂಬರಿಯ ಓದುಗನನ್ನು ವಾಸ್ತವದ ಕಪ್ಪುರಂದ್ರದೊಳಗೆ ಪ್ರವೇಶಿಸುವಂತೆ ಮಾಡಿದೆ.

ಯಾರೆ ಆದರೂ ತನ್ನ ಮನೆತನದ ಹಿರಿಯನಿಗೆ ಗೌರವ ನೀಡಬೇಕು ಎಂಬುದನ್ನು ತಿಳಿಸಲು ವಾಂಗ್ ಇಷ್ಟವಿಲ್ಲದಿದ್ದರೂ ಚಿಕ್ಕಪ್ಪ ಇವನನ್ನು ದೂಷಿಸುವಾಗಲೂ, ಕೆನ್ನೆಗೆ ಹೊಡೆದಾಗಲೂ ಸಹಿಸಿಕೊಳ್ಳುವ ಘಟನೆಯಿದೆ. ಉಳ್ಳವನು ಇಲ್ಲದವನೊಂದಿಗೆ ಹಂಚಿ ತಿನ್ನುವ ನಿಯಮವನ್ನು ಇಲ್ಲಿ ಕಾಣಬಹುದು. ಚಿಕ್ಕಪ್ಪ ಕೇಳಿದ ತಕ್ಷಣ ಮರುಮಾತಿಲ್ಲದೆ ತಾನು ಕಷ್ಟಪಟ್ಟು ದುಡಿದು ಕೂಡಿಟ್ಟ ಬೆಳ್ಳಿಯ ನಾಣ್ಯವನ್ನು ಮರುಮಾತಿಲ್ಲದೆ ಕೊಟ್ಟು ಬಿಡುತ್ತಾನೆ. ಅಷ್ಟೆ ಅಲ್ಲದೆ ಉಳ್ಳವನನ್ನು ಲೂಟಿ ಮಾಡಿ ತಿನ್ನುವುದೂ ತಪ್ಪಲ್ಲ ಎಂಬ ಸಮಾಜವಾದದ ನಿಷ್ಟೆಯನ್ನೂ ಕಾಣಬಹುದು.

ವಯಸ್ಸಾಗಿ, ಮೊಮ್ಮಕ್ಕಳಾದ ನಂತರವೂ ಸಣ್ಣ ವಯಸ್ಸಿನ ಸೇವಕಿಯೊಬ್ಬಳನ್ನು ತನ್ನವಳನ್ನಾಗಿ ಮಾಡಿಕೊಳ್ಳುವ ವಾಂಗ್ ಪೂರ್ತಿಯಾಗಿ ದೊಡ್ಡ ಭೂಹಿಡುವಳಿದಾರರಂತೆಯೇ ವರ್ತಿಸುತ್ತಾನೆ. ಆ ಹುಡುಗಿಯನ್ನು ಇಷ್ಟಪಟ್ಟಿದ್ದ ಮೂರನೆಯ ಮಗ ಸೈನ್ಯಕ್ಕೆ ಸೇರಿ ಕ್ರಾಂತಿಗೆ ಕಾರಣನಾಗಿ ಸೇನಾಧಿಕಾರಿಯಾಗುವುದರ ಒಂದು ನೋಟವಿದೆ.

ಇಡೀ ಕಾದಂಬರಿಯು ಅಂದಿನ ಚೀನಾದಲ್ಲಿರುವ ನಂಬಿಕೆಯಂತೆ ಭೂಮಿಯ ಘನತೆಯನ್ನು ಎತ್ತಿ ಹಿಡಿಯುತ್ತ ಹೆಣ್ಣಿನ ಘನತೆಯನ್ನು ಕಾಲಡಿಗೆ ತಳ್ಳುವ ಚಿತ್ರಣವನ್ನು ಮಾರ್ಮಿಕವಾಗಿ ಚಿತ್ರಿಸಿದೆ.. ಪುರುಷಾಹಂಕಾರವು ಎಷ್ಟು ಉತ್ತುಂಗದಲ್ಲಿದೆ ಎಂಬುದಕ್ಕೆ ಒಂದು ನಿದರ್ಶನವಿದೆ. ತನ್ನ ಮೊದಲ ಸೊಸೆಯ ಹೆರಿಗೆಯ ಸಂದರ್ಭದಲ್ಲಿ ನಗರದ ಹೆಣ್ಣು ದೇವತೆಯ ದೇಗುಲಕ್ಕೆ ಹೋಗುವ ವಾಂಗ ಗಂಧದ ಕಡ್ಡಿಗಳನ್ನು ಪೂಜಾರಿಗೆ ನೀಡುತ್ತ “ಗಂಡಾದ ನಾನು ಈ ಹೆಣ್ಣು ದೇವತೆಯನ್ನು ಬೇಡಿಕೊಳ್ಳುವುದು ಸಮಂಜಸವಲ್ಲದಿದ್ದರೂ ಕೂಡ ನಮ್ಮ ಮನೆಯಲ್ಲಿ ಹೆಣ್ಣು ಇಲ್ಲದ ಕಾರಣದಿಂದ ಬಂದಿದ್ದೇನೆ” ಎನ್ನುತ್ತಾನೆ. ಅಂದರೆ ಗಂಡಸಾದವನು ಹೆಣ್ಣು ದೇವತೆಗಿಂತ ಮೇಲು ಮತ್ತು ಆತ ಹೆಣ್ಣು ದೇವತೆಯನ್ನು ಪ್ರಾರ್ಥಿಸುವುದು ಕೂಡ ನಾಚಿಕೆಯ ವಿಷಯ ಆಗಿನ ಸಮಾಜಕ್ಕೆ. ಆದರೆ ಆತ ಮಾನಸಿಕ ಅಸ್ವಸ್ತಳಾದ ತನ್ನ ಮಗಳ ಕುರಿತಾಗಿ ಮಾಡುವ ಕಾಳಜಿ ಮಾತ್ರ ಮೆಚ್ಚಿಕೊಳ್ಳತಕ್ಕದ್ದು.

ಸಾವಿನಂಚಿನಲ್ಲಿಯೂ ಭೂಮಿಯನ್ನು ಮಾರಬೇಕೆಂದು ಮಕ್ಕಳು ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿದ ವೃದ್ಧ ವಾಂಗ್ ಭೂಮಿ ಮಾರಿದರೆ ನಾಶವಾಗಿ ಹೋಗುತ್ತೀರಿ ಎನ್ನುತ್ತಾನೆ. ಈ ಕಾರಣದಿಂದಾಗಿಯೇ ಆತ ತನ್ನ ಜೀವಮಾನವಿಡಿ ಕೂಡಿಟ್ಟ ಎಲ್ಲ ಬೇಳ್ಳಿ ನಾಣ್ಯಗಳನ್ನು ಭೂಮಿಯನ್ನು ಖರೀದಿಸಲು ಬಳಸಿಕೊಳ್ಳುತ್ತಾನೆ. ಬರಿಗಾಲಿನಿಂದ ಭೂಮಿಯಲ್ಲಿ ಓಡಾಡುವುದು, ಉಳುಮೆ ಮಾಡುವುದು ಹಾಗೂ ಗದ್ದೆಯಲ್ಲಿ ದುಡಿಯುವುದು ಶ್ರೇಷ್ಠ ಎಂಬ ಭಾವನೆ ಅವನಲ್ಲಿದೆ. ಮೂವತ್ತರ ದಶಕದ ಚೀನಾವನ್ನು ಸಮಗ್ರವಾಗಿಕಟ್ಟಿಕೊಡುವ ಈ ಕಾದಂಬರಿಯನ್ನು ಕೆ. ಶ್ರೀನಾಥ ಕನ್ನಡದ ಓದುಗರಿಗೆ ಸುಲಭವಾಗಿ ನಿಲುಕುವಂತೆ ಅದ್ಭುತವಾಗಿ ಅನುವಾದಿಸಿದ್ದಾರೆ. ಕಾದಂಬರಿಯು ಚೀನಾದ ಸಂಸ್ಕೃತಿ, ನಂಬಿಕೆ, ಆಚಾರ-ವಿಚಾರ ಹಾಗೂ ಜೀವನಕ್ರಮಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಲು ಯೋಗ್ಯವಾಗಿದೆ.

MORE NEWS

ಬಾಶೆ ಮತ್ತು ಮಾತು

01-09-2024 ಬೆಂಗಳೂರು

"ಪ್ರತಿಯೊಬ್ಬ ವ್ಯಕ್ತಿ ತನ್ನ ಸಮಾಜ ಮತ್ತು ಆ ಸಮಾಜದ ಸಂಸ್ಕೃತಿಯ ಒಳಗೆ ಯಾವುದೆಲ್ಲ ಸಾದ್ಯವೊ ಅದನ್ನು ಸಹಜವಾಗಿ, ಸರ...

ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ 

24-08-2024 ಬೆಂಗಳೂರು

"ಕನ್ನಡದ ಹಳೆಯ ರಾಜಕೀಯ ಸಂಬಂದಗಳು ಹೆಚ್ಚಾಗಿ ಗುಜರಾತಿನೊಂದಿಗೆ ಇದ್ದವು. ಬಾದಾಮಿ ಚಾಲುಕ್ಯರ ಒಂದು ಮನೆತನ ಬಹುಕಾಲ ...

ಬೆಂಗಳೂರಿನ ಬಿಬಿಎಲ್ಎಫ್ 2024 ಸಾಹಿತ್ಯ ಉತ್ಸವ

19-08-2024 ಬೆಂಗಳೂರು

"ಐದೇ ಐದು ವರ್ಷಗಳ ಹಿಂದೆ ಹುಟ್ಟಿದ ಕನ್ನಡದ "ಬುಕ್ ಬ್ರಹ್ಮ" ಎಂಬ ಸ್ವತಂತ್ರ ಮಾಧ್ಯಮ ಹಮ್ಮಿಕೊಂಡ ಹಬ್ಬ...