Date: 01-09-2024
Location: ಬೆಂಗಳೂರು
"ಪ್ರತಿಯೊಬ್ಬ ವ್ಯಕ್ತಿ ತನ್ನ ಸಮಾಜ ಮತ್ತು ಆ ಸಮಾಜದ ಸಂಸ್ಕೃತಿಯ ಒಳಗೆ ಯಾವುದೆಲ್ಲ ಸಾದ್ಯವೊ ಅದನ್ನು ಸಹಜವಾಗಿ, ಸರಳವಾಗಿ ಯೋಚಿಸಬಲ್ಲರು. ಅದರಾಚೆಗಿನದನ್ನು ವ್ಯಕ್ತಿ ಯೋಚಿಸಲು ಸಾದ್ಯವಿಲ್ಲ. ಅದರಂತೆ ಒಂದು ಬಾಶೆಯ ರಚನೆಯ ಒಳಗೆ ಯಾವುದೆಲ್ಲದಕ್ಕೆ ಅವಕಾಶವಿದೆಯೊ ಅದನ್ನು ಆ ಬಾಶೆಯ ವ್ಯಕ್ತಿ ಆಲೋಚಿಸಲು ಸಾದ್ಯವಾಗುತ್ತದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಬಾಶೆ ಮತ್ತು ಮಾತು’ ಕುರಿತು ಬರೆದಿರುವ ಲೇಖನ.
ಬಾಶೆ ಸಕಲ ಪ್ರಾಣಿಗಳಲ್ಲಿ ಮನುಶ್ಯ ಪ್ರಾಣಿಯನ್ನು ಬಿನ್ನವಾಗಿಸುವ ಒಂದು ವ್ಯವಸ್ತೆ. ಹಾಗಾದರೆ ಬಾಶೆಯನ್ನು ಮನುಶ್ಯ ಮಾನಸಿಕತೆಯ ಒಂದು ಅಂಗ ಎನ್ನಬಹುದೆ? ಬಾಶೆ ಬೆಳೆದಿರುವುದರಿಂದ ಮನುಶ್ಯ ಸಮಾಜಪ್ರಾಣಿಯಾಗಲು ಸಾದ್ಯವಾಗಿದೆ. ಹಾಗಾದರೆ ಬಾಶೆಯನ್ನು ಸಮಾಜದ ಒಂದು ಅಂಗವೆನ್ನಬಹುದೆ? ಈ ಎರಡೂ ಸರಿ. ಬಾಶೆ ಮನುಶ್ಯ ಮಾನಸಿಕತೆಯ ಮತ್ತು ಮನುಶ್ಯ ಸಮಾಜದ ಒಂದು ಅವಿಬಾಜ್ಯ ಅಂಗ. ಆದರೆ, ವಾಸ್ತವ ಇನ್ನೂ ತುಸು ಹೆಚ್ಚು ಆಳವಾಗಿದೆ. ಮನುಶ್ಯರೊಬ್ಬರು ಹೇಗೆ ಆಲೋಚಿಸಬಲ್ಲರು ಎಂಬ ಪ್ರಶ್ನೆಗೆ ತುಸು ಆಳವಾದ ಉತ್ತರ ಬಯಸಿದರೆ ಪ್ರತಿ ಮನುಶ್ಯರು ಅವರ ಸಮಾಜದ ಸಂಸ್ಕೃತಿನಿಶ್ಟರಾಗಿ ಮತ್ತು ಅವರ ಬಾಶೆಯ ರಚನೆನಿಶ್ಟರಾಗಿ ಆಲೋಚಿಸಬಲ್ಲರು ಎಂಬ ಉತ್ತರವನ್ನು ಹೇಳಲು ಸಾದ್ಯ. ಪ್ರತಿಯೊಬ್ಬ ವ್ಯಕ್ತಿ ತನ್ನ ಸಮಾಜ ಮತ್ತು ಆ ಸಮಾಜದ ಸಂಸ್ಕೃತಿಯ ಒಳಗೆ ಯಾವುದೆಲ್ಲ ಸಾದ್ಯವೊ ಅದನ್ನು ಸಹಜವಾಗಿ, ಸರಳವಾಗಿ ಯೋಚಿಸಬಲ್ಲರು. ಅದರಾಚೆಗಿನದನ್ನು ವ್ಯಕ್ತಿ ಯೋಚಿಸಲು ಸಾದ್ಯವಿಲ್ಲ. ಅದರಂತೆ ಒಂದು ಬಾಶೆಯ ರಚನೆಯ ಒಳಗೆ ಯಾವುದೆಲ್ಲದಕ್ಕೆ ಅವಕಾಶವಿದೆಯೊ ಅದನ್ನು ಆ ಬಾಶೆಯ ವ್ಯಕ್ತಿ ಆಲೋಚಿಸಲು ಸಾದ್ಯವಾಗುತ್ತದೆ. ಅದರಾಚೆಗಿನದನ್ನು ಯೋಚಿಸುವುದು ಸಾದ್ಯವಿಲ್ಲ. ಅಂದರೆ ಮದುವೆ ಬಗೆಗೆ, ಸಂಬಂದಗಳ ಬಗೆಗೆ ವ್ಯಕ್ತಿಯೊಬ್ಬರು ಯೋಚಿಸುವುದಕ್ಕೆ ಸಾದ್ಯವಿರುವುದು ಅವರ ಸಮಾಜ, ಸಂಸ್ಕೃತಿಗಳಲ್ಲಿ ಇರಬಹುದಾದ ಮದುವೆ ವ್ಯವಸ್ತೆ ಮತ್ತು ಸಂಬಂದಗಳ ವ್ಯವಸ್ತೆಯನ್ನು ಮಾತ್ರ. ಅದರಾಚೆಗೆ ಯೋಚಿಸುವುದು ಸಾದ್ಯವಿಲ್ಲ. ಅದರಂತೆಯೆ ಅವರ ಸಮಾಜ-ಸಂಸ್ಕೃತಿನಿಶ್ಟವಾದ ಆ ಸಮಾಜದ ಆಚೆಗಿನ ಸಂಬಂದಗಳಿಗೆ ಆ ಬಾಶೆಯಲ್ಲಿ ಪರಿಕಲ್ಪನೆಗಳೂ, ಪದಗಳೂ ಇರುವುದಿಲ್ಲ. ಅವುಗಳನ್ನು ಗ್ರಹಿಸುವುದೂ ಸಾದ್ಯವಿಲ್ಲ.
ನಯಿಜಿರಿಯನ್ ಇಂಗ್ಲೀಶಿನಲ್ಲಿ ‘ಗಂಡ’ ಎನ್ನುವ ಕನ್ನಡದ ಒಂದು ಸಂಬಂದ ‘ಮೇಜರ್ ಹಸ್ಬಂಡ್’ ಎಂದಾಗಬಹುದು, ‘ಮಗ’ ಎಂಬ ಇನ್ನೊಂದು ಸಂಬಂದ ‘ಮಯ್ನರ್ ಹಸ್ಬಂಡ್’ ಎಂದಾಗಬಹುದು. ಅದರಂತೆಯೆ ‘ಹೆಂಡತಿ’ ಎಂಬ ಕನ್ನಡದ ಸಂಬAದ ‘ಮೇಜರ್ ವಯಿಪ್’ ಎಂದಾದರೆ ‘ಮಗಳು’ ಎಂಬುದು ‘ಮಯ್ನರ್ ವಯಿಪ್’ ಎಂದಾಗುತ್ತದೆ. ಕನ್ನಡ ಬಾಶೆಯನ್ನಾಡುವವರು ಈ ಸಂಬಂದಗಳನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾದ್ಯವಾಗಲಿಕ್ಕಿಲ್ಲ. ಅದರಂತೆ ಆ ಪದಗಳನ್ನು ಗ್ರಹಿಸಿಕೊಳ್ಳುವುದಕ್ಕೂ ಸಾದ್ಯವಿಲ್ಲ. ಆದರೆ ಆ ಬಾಶೆಯಲ್ಲಿ ಇದುವೆ ಅತ್ಯಂತ ಸಹಜವಾದ ಸಂಬಂದಗಳು. ಹಾಗೆಯೆ ಕನ್ನಡದಲ್ಲಿರುವ ಸಂಬಂದಸೂಚಕಗಳು ಆ ಬಾಶೆಯನ್ನಾಡುವವರಿಗೆ ಅಚ್ಚರಿಯವು ಆಗಿ ಕಾಣುವುದು ಕೂಡ ಇಶ್ಟೆ ಸಹಜ. ಕಾಲದ ಬಗೆಗೆ, ಸ್ತಳದ ಬಗೆಗೆ ಹೀಗೆ ಯಾವುದೆ ಪರಿಕಲ್ಪನೆ ಬಗೆಗೆ ಒಬ್ಬ ವ್ಯಕ್ತಿ ಯೋಚಿಸಬೇಕಾದರೆ ಆ ವ್ಯಕ್ತಿಯ ಬಾಶೆಯ ರಚನೆಯಲ್ಲಿ ಆ ಪರಿಕಲ್ಪನೆ ಹೇಗಿದೆಯೊ ಹಾಗೆ ಮಾತ್ರ ಯೋಚಿಸಲು ಸಾದ್ಯ. ಅದರಾಚೆಗೆ ಯೋಚಿಸಲು ಸಾದ್ಯವಿಲ್ಲ.
ಕನ್ನಡದಲ್ಲಿ ಮೇಲೆ ಎನ್ನುವುದನ್ನು ‘ಮೇಲೆ’ ಎಂದು ಹೇಳಬಹುದು. ಅದು ಎಶ್ಟು ಎತ್ತರದಲ್ಲಿ ಇದೆ ಎಂಬುದನ್ನು ನರ‍್ದಿಶ್ಟಪಡಿಸಿ ಇಲ್ಲವೆ ಬಿನ್ನ ಎತ್ತರಗಳನ್ನು ವರ‍್ಗೀಕರಿಸಿ ಹೇಳುವ ಸಾಮರ್‍ತ್ಯ ಆ ಪದಕ್ಕೆ ಇಲ್ಲ. ಅದು ನೆಲದ ಮೇಲೆ ಇರಬಹುದು, ಒಂದು ಟೇಬಲ್ಲಿನ ಮೇಲೆ ಇರಬಹುದು, ಮನೆಯ ಮೇಲೆ ಇರಬಹುದು, ಗುಡ್ಡದ ಮೇಲೆ ಇರಬಹುದು, ಮುಗಿಲ ಮೇಲೆ ಇರಬಹುದು. ಅದರಂತೆಯೆ ಅಯ್ದು ಅಂತಸ್ತಿನ ಮನೆಯನ್ನು ತೆಗೆದುಕೊಂಡರೆ ಮೇಲೆ ಎನ್ನುವುದು ಮೊದಲ ಅಂತಸ್ತಿನ ಮೇಲೆ ಇಲ್ಲವೆ ಯಾವುದೆ ಅಂತಸ್ತಿನ ಮೇಲೆ ಇದ್ದರೂ ಒಂದೆ ಪದ ಬಳಸಬೇಕು. ಹೆಚ್ಚಿನ ನಿರ‍್ದಿಶ್ಟ ವಿವರಣೆ ಬೇಕಾದಾಗ ಆ ಅಂತಸ್ತನ್ನು ಹೇಳಬೇಕು. ಆದರೆ ಕಾಸಿ ಎಂಬ ಹಿಮಾಲಯದ ತಪ್ಪಲಿನ ಒಂದು ಬಾಶೆಯಲ್ಲಿ ವಿವಿದ ಎತ್ತರಗಳಿಗೆ ವಿವಿದ ಪದಗಳಿವೆ. ಆ ಬಾಶೆಯಲ್ಲಿ ಒಟ್ಟು ಏಳು ಎತ್ತರಗಳನ್ನು ಹೀಗೆ ಬಿನ್ನವಾಗಿ ಗುರುತಿಸುವುದಕ್ಕೆ ಸಾದ್ಯ.
ಅದರಂತೆ ಕನ್ನಡದಾಗ ದೂರವನ್ನು ಹೇಳುವುದಕ್ಕೆ ‘ಹತ್ತಿರ’ ಮತ್ತು ‘ದೂರ’ ಎಂಬ ಎರಡು ಪದಗಳಿವೆ. ಅಂದರೆ ಕನ್ನಡದಾಗ ದೂರದ ಎರಡು ಪರಿಕಲ್ಪನೆಗಳಿವೆ. ಅದಕ್ಕಿಂತ ಬಿನ್ನವಾದುದನ್ನು ಹೇಳುವುದಕ್ಕೆ ಇಲ್ಲವೆ ಎಶ್ಟು ದೂರ ಎಂದು ಹೇಳುವುದಕ್ಕೆ ಈ ಪದಗಳೊಳಗೆ ಅರ‍್ತ ಸಾಮರ್‍ತ್ಯ ಇಲ್ಲ. ಹತ್ತಿರ ಮತ್ತು ದೂರ ಇವುಗಳನ್ನು ವ್ಯಾಕರಣ ರಚನೆಯಲ್ಲಿ ‘ಈ, ಇದು’ ಮತ್ತು ‘ಆ, ಅದು’ ಎಂದು ಸೂಚಿಸಲಾಗುವುದು. ಈ ರಚನೆಯನ್ನು ಆದರಿಸಿಯೆ ‘ಅವನು, ಇವನು’, ‘ಅವಳು, ಇವಳು’, ‘ಅದು, ಇದು’ ಮತ್ತು ‘ಅಲ್ಲಿ, ಇಲ್ಲಿ’ ಎಂಬ ಪದಗಳು ಬೆಳೆದಿವೆ. ಈ ಎರಡು ದೂರಗಳ ಜೊತೆಗೆ ಹಳಗನ್ನಡದಾಗ ‘ಉದು, ಊ’, ‘ಉವನ್, ಉವಳ್, ಉದು, ಉಲ್ಲಿ’ ಎಂಬ ನಡುತೋರುಗವೂ ಇದ್ದಿತು. ಅಂದರೆ ದೂರವೂ ಅಲ್ಲದ್ದು, ಸಮೀಪವೂ ಅಲ್ಲದ್ದನ್ನು ಹೇಳುವುದಕ್ಕೆ ಇದು ಬಳಕೆಯಾಗುತ್ತಿತ್ತು. ಆದರೆ ಕಾಸಿಯಲ್ಲಿ ಇಂತಾ ನಾಲ್ಕು ದೂರಗಳ ಪರಿಕಲ್ಪನೆ ಇದೆ ಮತ್ತು ಆ ನಾಲ್ಕೂ ದೂರಗಳಿಗೆ ನಾಲ್ಕು ಬಿನ್ನವಾದ ಪದಗಳಿವೆ. ಇವುಗಳನ್ನು ತಿಳಿದುಕೊಳ್ಳುವುದಕ್ಕೆ ಆಯಾ ಬಾಶೆಯ ಪರಿಣತಿ ಇರಬೇಕಾಗುತ್ತದೆ.
ಈ ಒಂದೆರಡು ಉದಾಹರಣೆಗಳ ಮೂಲಕ ಇಲ್ಲಿ ಒಂದು ವಿಶಯವನ್ನು ಸ್ಪಶ್ಟ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಯ ಮಾನಸಿಕ ರಚನೆಗೂ ಆ ವ್ಯಕ್ತಿಯ ಬಾಶೆಗೂ ಹೀಗೆ ಬಿಡಿಸದ ನಂಟು ಬೆಳೆದಿರುತ್ತದೆ. ಅದರಂತೆ ವ್ಯಕ್ತಿಯ ಮಾನಸಿಕತೆಗೂ, ಆ ವ್ಯಕ್ತಿಯ ಸಮಾಜ ರಚನೆಗೂ ಅಂತದೆ ಬಿಡಿಸದ ನಂಟು ಇರುತ್ತದೆ. ಮಗುವಾಗಿದ್ದಾಗ ಈ ಸಂಬಂದಗಳ ಆಚೆಗೆ ಬಂದು ಆಲೋಚಿಸುವುದಕ್ಕೆ ಸಾದ್ಯವಾಗುವುದಿಲ್ಲ. ಮಗುವಿಗೆ ಏನನ್ನಾದರೂ ಕೊಡಬೇಕಾದರೆ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲೇಬೇಕು. ಇಲ್ಲದಿದ್ದರೆ ಮಗುವಿಗೆ ಏನನ್ನು ಕೊಡುವ ಆಶಯ ಇಟ್ಟುಕೊಂಡಿದೆಯೊ ಅದು ಈಡೇರುವುದು ಕಶ್ಟ.
ಮಗುವಿಗೆ ಏನನ್ನಾದರೂ ಕಲಿಸಬೇಕಾದರೆ, ಅದು ಶಿಕ್ಶಣ ಇರಲಿ ಇಲ್ಲವೆ ಇನ್ನೇನಾದರೂ ಇರಲಿ, ಈ ಸೂಕ್ಶ್ಮಗಳನ್ನು ಗಮನದಲ್ಲಿಟ್ಟುಕೊಳ್ಳಲೇಬೇಕು. ಇವುಗಳೆಲ್ಲ ಸಹಜವಾಗಿ ಎಲ್ಲರೂ ಅವಲೋಕಿಸಬಹುದಾದವು ಇರಲಿಕ್ಕಿಲ್ಲ ಆದರೆ, ಇವು ಕಂಡಿತವಾಗಿಯೂ ಮನುಶ್ಯರ ಲೋಕಗ್ರಹಿಕೆಯನ್ನು ರೂಪಿಸುತ್ತಿರುತ್ತದೆ. ಈ ಬಗೆಯ ವ್ಯತ್ಯಾಸಗಳು ಯಾವುದೊ ದೂರದಲ್ಲಿ ಇರುವ ಬಾಶೆಗಳ ನಡುವೆ ಕಾಣಿಸುತ್ತವೆ ಎಂದು ಅಂದುಕೊಳ್ಳಬೇಕಿಲ್ಲ. ಬದಲಿಗೆ, ಕನ್ನಡದ ಸುತ್ತ ಇರುವ ಬಾಶೆಗಳಲ್ಲಿಯೂ ಇಂತಾ ವ್ಯತ್ಯಾಸಗಳು ಕಾಣಿಸುತ್ತವೆ. ಅದು ಮಾತ್ರವಲ್ಲದೆ ಕನ್ನಡದ ಒಳನುಡಿಗಳ ನಡುವೆಯೂ ಇಂತ ವ್ಯತ್ಯಾಸಗಳು ಕಾಣಬಹುದು.
ಬಾಶೆ ಮತ್ತು ಅದರ ರಚನೆ ಬಗೆಗೆ ಇಲ್ಲಿ ತುಸು ಮಾತನಾಡಬಹುದು. ಬಾಶೆ ಎಂಬುದು ಒಂದು ನಿಯಮಗಳ ಕಟ್ಟು. ಬಾಶೆ ವ್ಯವಸ್ತಿತವಾದ ರಚನೆಯನ್ನು ಹೊಂದಿರುತ್ತದೆ. ಈ ರಚನೆಯನ್ನು ಚಾಮಸ್ಕಿ ಮೇಲುಹಂತದ ರಚನೆ (Surface Structure) ಮತ್ತು ಆಳಹಂತದ ರಚನೆ (Deep Structure) ಎಂದು ಎರಡು ಬಗೆಯಾಗಿ ವಿವರಿಸುತ್ತಾನೆ. ಜಗತ್ತಿನ ಬಾಶೆಗಳು ಸರ‍್ವತ್ರಿಕವಾದ ಒಂದು ವಿಶ್ವಾತ್ಮಕ ವ್ಯಾಕರಣವನ್ನು (Universal Grammar) ಹೊಂದಿವೆ ಎಂದು ಆತನು ಪ್ರತಿಪಾದಿಸಿದನು. ಆತನ ವಾದದ ಪ್ರಕಾರ ಜಗತ್ತಿನಲ್ಲಿ ಇರುವ ಎಲ್ಲ ಬಾಶೆಗಳು ಒಂದು ಆಳಹಂತದ ರಚನೆಯನ್ನು ಹೊಂದಿವೆ. ಈ ಆಳಹಂತದ ರಚನೆಗಳನ್ನು ಅಬಿವ್ಯಕ್ತಿಸಲು ವಿವಿದ ಬಾಶೆಗಳು ಸಾದ್ಯವಿರುವ ಬಿನ್ನ ರೀತಿಗಳನ್ನು ಅನುಸರಿಸುತ್ತವೆ. ಒಂದು ಉದಾಹರಣೆಯನ್ನು ತೆಗೆದುಕೊಂಡು ಮಾತನಾಡುವುದಾದರೆ ಒಂದು ವಾಕ್ಯವನ್ನು ಮಾಡುವುದಕ್ಕೆ ಜಗತ್ತಿನ ಯಾವುದೆ ಬಾಶೆಯಲ್ಲಿ ಕರ‍್ತು, ಕರ‍್ಮ ಮತ್ತು ಕ್ರಿಯೆ ಎಂಬ ಈ ಮೂರು ಗಟಕಗಳು ಮೂಲಬೂತವಾಗಿ ಅವಶ್ಯಕ. ಈ ಮೂರು ಗಟಕಗಳನ್ನು ಹೇಗೆ ಹೊಂದಿಸಲಾಗುತ್ತದೆ ಎಂಬುದು ಆಯಾ ಬಾಶೆಯ ಆಯ್ಕೆ. ಅಂದರೆ ಈ ಮೂರು ಗಟಕಗಳಲ್ಲಿ ಪ್ರತಿ ಗಟಕವೂ ವಾಕ್ಯದಲ್ಲಿ ಯಾವ ಸ್ತಾನದಲ್ಲಿ ಬೇಕಾದರೂ ಬರಬಹುದು.
ಬಾಶೆ ಎಂಬ ಪದವನ್ನು ಕನ್ನಡದಾಗ ಇದುವರೆಗೆ ಸರಳವಾಗಿ ಬಳಸಲಾಗುತ್ತಿದೆ. ಆದರೆ ಬಾಶೆಯ ಚಿಂತನೆಗಳ ಮಾತುಕತೆಗೆ ‘ಮಾತು’ ಮತ್ತು ‘ಬಾಶೆ’ ಈ ಎರಡು ಪದಗಳನ್ನು ತುಸು ಬಿನ್ನ ರೀತಿಯಲ್ಲಿ ಚರ‍್ಚಿಸಿಬೇಕಿದೆ. ‘ಮಾತು’ ಎನ್ನುವುದನ್ನು ವ್ಯಕ್ತಿಯೊಬ್ಬರ ವಯಕ್ತಿಕ ಬಾಶಿಕ ಸ್ತಿತಿಯನ್ನು ಹೇಳುವುದಕ್ಕೆ ಮತ್ತು ‘ಬಾಶೆ’ ಎನ್ನುವುದನ್ನು ಆ ಬಾಶೆಯನ್ನು ಆಡುವ ಒಟ್ಟು ಸಮುದಾಯದ ಬಾಶಿಕ ಅರಿವಿನ ಮೊತ್ತವನ್ನು ಹೇಳುವುದಕ್ಕೆ ಬಳಸಿದೆ. ಇವುಗಳನ್ನು ಸ್ತೂಲವಾಗಿ ಸಸ್ಸೂರ್‌ನ ಲಾಂಗ್ (Langue) ಮತ್ತು ಪೆರೋಲ್ (Parole) ಪರಿಕಲ್ಪನೆಗಳ ಕನ್ನಡ ಸಂವಾದಿಗಳೆಂಬ ಅರ‍್ತದಲ್ಲಿ ಚರ‍್ಚಿಸಿದೆ. ಒಬ್ಬ ವ್ಯಕ್ತಿ ಎಶ್ಟು ಬಾಶೆಯನ್ನು ಅರಿತುಕೊಳ್ಳಬಹುದೊ ಅಶ್ಟನ್ನು ಬಳಸಲು ಆಗುವುದಿಲ್ಲ. ಒಬ್ಬ ವ್ಯಕ್ತಿ ಎಶ್ಟು ಅರ‍್ತ ಮಾಡಿಕೊಳ್ಳಬಲ್ಲರೊ ಅಶ್ಟನ್ನು ಮಾತಾಡಲು ಆಗುವುದಿಲ್ಲ. ಅಂದರೆ ಗ್ರಹಿಸಿಕೊಳ್ಳುವುದು ಹೆಚ್ಚು ಸಾದ್ಯ, ಆದರೆ, ಅಬಿವ್ಯಕ್ತಿಸುವುದು ಕಡಿಮೆ ಸಾದ್ಯ. ಈ ವ್ಯತ್ಯಾಸವನ್ನು ಗಮನದಲ್ಲಿ ಇಟ್ಟುಕೊಂಡು, ಒಬ್ಬ ವ್ಯಕ್ತಿ ಮಾತಾಡಲು ಸಾದ್ಯವಿರುವುರು ಒಬ್ಬ ವ್ಯಕ್ತಿಯ ಗ್ರಹಿಕೆಯ ಸಾಮರ್‍ತ್ಯ, ಇದನ್ನು ʼಮಾತುʼ ಎಂದು ಇಲ್ಲವೆ ʼಲಾಂಗ್ʼ ಎಂದು ಕರೆಯಬಹುದು. ಅದರಂತೆಯೆ ಒಬ್ಬ ವ್ಯಕ್ತಿಗೆ ಅಬಿವ್ಯಕ್ತಿಸಲು ಸಾದ್ಯವಿರುವುದನ್ನು ʼಬಾಶೆʼ ಅಂದರೆ ʼಪೆರೋಲ್ʼ ಎಂದು ಕರೆಯಬಹುದು. ಆದರೆ ಕನ್ನಡದಾಗ ಈ ಪರಿಕಲ್ಪನೆಗಳ ಮತ್ತು ಈ ಪದಗಳ ರ‍್ಚೆ ಇನ್ನೂ ಹೆಚ್ಚು ಆಗಿಲ್ಲದಿರುವುದರಿಂದ ಸದ್ಯದ ಮಟ್ಟಿಗೆ ಇವುಗಳನ್ನು ಸ್ತೂಲವಾಗಿ ಪರಿಗಣಿಸಬಹುದು. ಪ್ರತಿಯೊಬ್ಬ ವ್ಯಕ್ತಿಯ ಗ್ರಹಿಕೆ ಸಾಮರ್‍ತ್ಯ (Competence) ಮತ್ತು ಅಬಿವ್ಯಕ್ತಿಸಾಮರ್‍ತ್ಯ (Performance) ಬಿನ್ನವಾಗಿರುತ್ತವೆ. ಈ ಪರಿಕಲ್ಪನೆಗಳನ್ನು ಚಾಮಸ್ಕಿ ಚರ‍್ಚಿಸುತ್ತಾನೆ. ಇವನ್ನೂ ಈ ಚರ‍್ಚೆಯಲ್ಲಿ ಗಮನದಲ್ಲಿ ಇರಿಸಿಕೊಳ್ಳಬೇಕು.
ಆರಂಬದಲ್ಲಿ ಹೇಳಿದಂತೆ ಬಾಶೆ ಎಂಬುದು ಮನುಶ್ಯರ ಮಾನಸಿಕತೆಯೂ, ಸಾಮಾಜಿಕತೆಯೂ ಒಟ್ಟೊಟ್ಟಿಗೆ ಆಗಿರುತ್ತದೆ. ಇದನ್ನು ಮುಂದಿನ ಬರಹಗಳಲ್ಲಿ ಮಾತಾಡಲಾಗುವುದು, ಆ ಮೂಲಕ ತಾಯ್ಮಾತು ಎನ್ನುವುದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬಹುದು.
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.