Date: 27-04-2023
Location: ಬೆಂಗಳೂರು
“ಮೂಲಬೂತವಾಗಿ ವಚನ ಎನ್ನುವುದು ನಾಮಪದಗಳ ಗುಂಪಿಕೆಗೆ ಸಂಬಂದಪಟ್ಟದ್ದು, ನಾಮಪದಗಳನ್ನು ಗುಂಪಿಸುವುದಕ್ಕೆ ನಾಮಪದದ ಮೇಲೆ ಬರುವ ಒಂದು ವ್ಯಾಕರಣ ರಚನೆ. ಇಲ್ಲಿ ಒಂದು ಮತ್ತು ಒಂದಕ್ಕಿಂತ ಹೆಚ್ಚು ಎಂಬ ಗುಂಪನ್ನು ಕನ್ನಡದಲ್ಲಿ ಈ ವಚನ ಮಾಡುವುದನ್ನು ಕಾಣಬಹುದು,” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಬಹು-ವಚನ' ಎಂಬ ವಿಚಾರ ಕುರಿತು ಬರೆದಿದ್ದಾರೆ.
ವಚನ ಎಂದರೆ ವ್ಯಾಕರಣದಲ್ಲಿ ನಾಮಪದಗಳ ಎಣಿಕೆಗೆ ಸಂಬಂದಿಸಿದ್ದು. ಬಾಶೆಯಲ್ಲಿ ಎಣಿಸುವುದಕ್ಕೆ ಒಂದು, ಎರಡು ಎಂಬ ಅಂಕಿಗಳು ಇರುವುದು ಒಂದು ವಿದಾನ. ಇದು ಪದಾತ್ಮಕ, ಪದಕೋಶಕ್ಕೆ ಸಂಬಂದಿಸಿದ್ದು. ವ್ಯಾಕರಣದ ಬಾಗವಾಗಿ ಬರುವಂತದ್ದು ಅಲ್ಲ. ವಾಕ್ಯವೊಂದರಲ್ಲಿ ಬರುವ ನಾಮಪದಗಳ ಎಣಿಕೆಯನ್ನು ಕೊಡುವ ವ್ಯಾಕರಣದ ಬಾಗವಾಗಿ ಬರುವುದು ವಚನ. ಸಾಮಾನ್ಯವಾಗಿ ‘ಬಹುವಚನ’ ಎಂದು ಮಾತನಾಡಲಾಗುತ್ತದೆಯಲ್ಲ ಅದು. ಕ್ರಿಯಾಪದಗಳ ಮೇಲೆ ಬರುವ ಲಿಂಗ-ವಚನ ಎಂಬುದು ಇದಕ್ಕಿಂತ ಬಿನ್ನವಾದುದು. ಅದನ್ನು ಮುಂದಿನ ಬರಹದಲ್ಲಿ ಮಾತಾಡಬಹುದು.
ಈ ಕೆಳಗಿನ ಒಂದು ವಾಕ್ಯವನ್ನು ತೆಗೆದುಕೊಂಡು ಮಾತುಕತೆಯನ್ನು ಮುಂದುವರೆಸಬಹುದು.
ಹುಡುಗಿ ಊರಿಗೆ ಹೋದಳು
ಹುಡುಗಿಯರು ಊರಿಗೆ ಹೋದರು
ಇಲ್ಲಿ ಮೊದಲ ವಾಕ್ಯದಲ್ಲಿ ಬಂದಿರುವ ನಾಮಪದ (ಹುಡುಗಿ) ಏಕವಚನ, ಯಾಕೆಂದರೆ ಅದು ಒಂದು ಇದೆ. ಎರಡನೆ ವಾಕ್ಯದಲ್ಲಿ ಬಂದಿರುವುದು (ಹುಡುಗಿಯರು) ಅದು ಬಹುವಚನ, ಯಾಕೆಂದರೆ ಅದರಲ್ಲಿ ಒಂದಕ್ಕಿಂತ ಹೆಚ್ಚು ಹುಡುಗಿಯರು ಇದ್ದಾರೆ. ಇದು ನಾಮಪದಗಳ ಎಣಿಕೆಯನ್ನು ಮಾಡುವುದಕ್ಕೆ ನಾಮಪದಗಳ ಮೇಲೆ ಬರುವ ಗುರುತಿಕೆ. ಹಾಗಾದರೆ ಈ ಮೇಲೆ ಹೇಳಿದ ಅಂಕಿಗಳು ಕೂಡ ಎಣಿಸುತ್ತವೆಯಲ್ಲವೆ? ಅವು ನಿರ‍್ದಿಶ್ಟವಾಗಿ ಎಶ್ಟು ಎಂಬುದನ್ನು ಎಣಿಸುತ್ತವೆ. ಆದರೆ, ವ್ಯಾಕರಣದಲ್ಲಿ ಈ ಅಪರಿಮಿತ ಎಣಿಕೆಯನ್ನು ಒಳಗೊಳ್ಳುವುದಕ್ಕೆ ಸಾದ್ಯವಾಗಲಿಕ್ಕಿಲ್ಲ. ಹಾಗಾಗಿ ಜಗತ್ತಿನ ಬಹುತೇಕ ಬಾಶೆಗಳು ವ್ಯಾಕರಣದ ಬಾಗವಾಗಿ ವಚನವನ್ನು ಎಣಿಕೆಯ ಅಂಕಿಗಳ ಜೊತೆಗೆ ಬೇರೆಯಾಗಿ ಮಾಡಿಕೊಂಡಿರುತ್ತವೆ. ಕನ್ನಡದಲ್ಲಿ ಇದು ಏಕವಚನ ಮತ್ತು ಬಹುವಚನ ಎಂದು ಎರಡು ತೆರನಾಗಿದೆ.
ಸಾಮಾನ್ಯವಾಗಿ ವಚನ ಜಗತ್ತಿನ ಬೇರೆ ಬೇರೆ ಬಾಶೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿದೆ. ಕೆಲವು ಬಾಶೆಗಳಲ್ಲಿ ಎರಡು ವಚನಗಳಿದ್ದರೆ, ಇನ್ನು ಕೆಲವು ಬಾಶೆಗಳಲ್ಲಿ ಮೂರು ವಚನಗಳು, ಇನ್ನು ಕೆಲವರಲ್ಲಿ ನಾಲ್ಕು, ಇನ್ನೂ ಕೆಲವರಲ್ಲಿ ಇನ್ನೂ ಹೆಚ್ಚಿನ ನಿರಿಗೆಯ ವಚನ ರಚನೆ ಕಂಡುಬರುತ್ತದೆ.
ಕನ್ನಡದಲ್ಲಿ ಎರಡು ವಚನಗಳು. ಒಂದು ಮತ್ತು ಒಂದಕ್ಕಿಂತ ಹೆಚ್ಚು. ಒಂದು ಇರುವುದನ್ನು ಏಕವಚನ ಎಂದು ಕರೆಯುತ್ತಿದ್ದರೆ ಒಂದಕ್ಕಿಂತ ಹೆಚ್ಚು ಇರುವವುಗಳನ್ನು ಬಹುವಚನ ಎಂದು ಕರೆಯಲಾಗುತ್ತದೆ. ಸಂಸ್ಕ್ರುತದಲ್ಲಿ ಇದು ಮೂರು ತೆರನಾಗಿದೆ. ಅಲ್ಲಿ ಒಂದು ಇರುವಂತದ್ದು ಏಕವಚನ, ಎರಡು ಇರುವಂತದ್ದು ದ್ವಿವಚನ ಮತ್ತು ಎರಡಕ್ಕಿಂತ ಹೆಚ್ಚು ಇರುವಂತವು ಬಹುವಚನ. ಹೀಗೆ ಬಿನ್ನ ಬಾಶೆಗಳಲ್ಲಿ ವಚನ ವ್ಯವಸ್ತೆ ಬಿನ್ನವಾಗಿರಲು ಸಾದ್ಯ.
ಇಲ್ಲಿ ಸಂಸ್ಕ್ರುತದ ನಾಮಪದಗಳ ಉದಾಹರಣೆಗಳನ್ನು ಕೊಟ್ಟಿದೆ.
ಏಕವಚನ ದ್ವಿವಚನ ಬಹುವಚನ
ದೇವಹ್ (ಒಬ್ಬ ದೇವ) ದೇವವ್ (ಬ್ಬರು ದೇವರು) ದೇವಾಹ್ (ಹಲವು ದೇವರು)
ಸಂಸ್ಕ್ರುತದಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನ ಮೂರಕ್ಕೂ ಪ್ರತ್ಯೇಕವಾದ ಪ್ರತ್ಯಯಗಳು ಬಂದು ಸೇರಿವೆ. ಆದರೆ ಕನ್ನಡದಲ್ಲಿ ರಚನೆ ಹೀಗಿಲ್ಲದೆ ಏಕವಚನಕ್ಕೆಂದು ಒಂದು ಬೇರೆ ಪ್ರತ್ಯಯ ಇಲ್ಲ. ಬಹುವಚನಕ್ಕೆ ಮಾತ್ರ ಪ್ರತ್ಯಯ ಬಳಕೆಯಾಗುತ್ತದೆ.
ಈ ಮೇಲೆ ನೋಡಿದಂತೆ ಹುಡುಗಿ ಎಂಬ ನಾಮಪದ ಒಂದು ಆಗಿದ್ದಾಗ ಅದರ ಮೇಲೆ ಯಾವುದೆ ಪ್ರತ್ಯಯ ಬಂದಿಲ್ಲ. ಪದವೊಂದು ತನ್ನ ರೂಪದಲ್ಲಿಯೆ ಬಳಕೆಯಾಗುತ್ತಿದೆ. ಕನ್ನಡದಲ್ಲಿ ಪ್ರತಿಯೊಂದು ಪದವು ತನ್ನ ರೂಪದಲ್ಲಿ ಅದು ಏಕವಚನವೆ ಆಗಿರುತ್ತದೆ. ಕಲ್ಲು, ನಾಯಿ, ಮೇಶ್ಟ್ರು ಮೊ. ಈ ನಾಮಪದಗಳು ಒಂದಕ್ಕಿಂತ ಹೆಚ್ಚು ಆದಕೂಡಲೆ ಅದರ ಮೇಲೆ ಪ್ರತ್ಯಯವೊಂದು ಬಂದು ಸೇರುತ್ತದೆ. ಈ ಮೇಲೆ ನೋಡಿದ ಉದಾಹರಣೆಯಲ್ಲಿ ಹುಡುಗಿ ಎನ್ನುವುದು ಒಂದಕ್ಕಿಂತ ಹೆಚ್ಚು ಆದಕೂಡಲೆ ಅದು –ಅರು ಎಂಬ ಪ್ರತ್ಯಯವನ್ನು ಪಡೆದುಕೊಂಡು ಹುಡುಗಿಯರು ಎಂದಾಗುತ್ತದೆ. ಹುಡುಗಿಯರು, ಹುಡುಗರು, ಮನುಶ್ಯರು ಮೊ.
ಇನ್ನು ಕೆಲವು ಹೆಚ್ಚಿನ ಉದಾಹರಣೆಗಳನ್ನು ಗಮನಿಸೋಣ. ಕುರಿ-ಕುರಿಗಳು, ಕಲ್ಲು-ಕಲ್ಲುಗಳು. ಇಲ್ಲಿ ಈ ಮೇಲೆ ಮಾತಾಡಿದ –ಅರು ಎಂಬ ಪ್ರತ್ಯಯ ಬರುತ್ತಿಲ್ಲ, ಬದಲಿಗೆ –ಗಳು ಎಂಬ ಇನ್ನೊಂದು ಪ್ರತ್ಯಯ ಬರುತ್ತಿದೆ. ಯಾಕೆ ಹೀಗೆ ಎಂಬುದನ್ನು ಗಮನಿಸಿದಾಗ ಕನ್ನಡ ಬಾಶೆಯ ರಚನೆಗೆ ಸಂಬಂದಿಸಿದ ಒಂದು ಮಹತ್ವದ ವಿಚಾರವನ್ನು ಮಾತಾಡಬೇಕಾಗುತ್ತದೆ.
ಮೂಲಬೂತವಾಗಿ ವಚನ ಎನ್ನುವುದು ನಾಮಪದಗಳ ಗುಂಪಿಕೆಗೆ ಸಂಬಂದಪಟ್ಟದ್ದು, ನಾಮಪದಗಳನ್ನು ಗುಂಪಿಸುವುದಕ್ಕೆ ನಾಮಪದದ ಮೇಲೆ ಬರುವ ಒಂದು ವ್ಯಾಕರಣ ರಚನೆ. ಇಲ್ಲಿ ಒಂದು ಮತ್ತು ಒಂದಕ್ಕಿಂತ ಹೆಚ್ಚು ಎಂಬ ಗುಂಪನ್ನು ಕನ್ನಡದಲ್ಲಿ ಈ ವಚನ ಮಾಡುವುದನ್ನು ಕಾಣಬಹುದು. ನಾಮಪದಗಳನ್ನು ಲಿಂಗ ಎಂಬ ಇನ್ನೊಂದು ಬಗೆಯಲ್ಲಿಯೂ ಗುಂಪಿಸಲು ಸಾದ್ಯವಿದೆ. ಲಿಂಗ ಮೂಲಬೂತವಾಗಿ ಮನುಶ್ಯ-ಮನುಶ್ಯರಲ್ಲದ ಎಂಬ ರಚನೆಯನ್ನು ಹೊಂದಿರುವುದನ್ನು ಈ ಹಿಂದೆ ಮಾತಾಡಿದೆ. ಈ ಗುಂಪಿಕೆಯನ್ನು ನಾಮಪದದ ಮೇಲೆ ವಚನ ಗುರುತಿಕೆ ಬರುವಾಗಲೂ ಕಾಣಬಹುದು.
ಕನ್ನಡದಲ್ಲಿ ನಾಮಪದಗಳು ಮನುಶ್ಯ ಮತ್ತು ಮನುಶ್ಯರಲ್ಲದ ಎಂಬ ಮೂಲಬೂತ ಗುಂಪಿಕೆಯನ್ನು ಹೊಂದಿರುವುದರಿಂದ ಈ ಮೇಲೆ ನೋಡಿದಂತೆ ಮನುಶ್ಯರನ್ನು ಹೇಳುವ ಪದಗಳಿಗೆ ಒಂದು ಪ್ರತ್ಯಯ ಮತ್ತು ಮನುಶ್ಯರಲ್ಲದ ನಾಮಪದಗಳಿಗೆ ಇನ್ನೊಂದು ಪ್ರತ್ಯಯ ಬಳಕೆಯಾಗುತ್ತವೆ.
ಕನ್ನಡದ ಬಹುವಚನ ಪ್ರತ್ಯಯಗಳ ರಚನೆ-ಹಂಚಿಕೆ ಕುತೂಹಲದಾಯಕವಾಗಿದೆ. ಮನುಶ್ಯದಲ್ಲಿ ಇದು ಹೆಚ್ಚಿನ ವಿವಿದತೆಯನ್ನು ತೋರಿಸುತ್ತದೆ. ಕೆಳಗಿನ ಪ್ರತ್ಯಯಗಳನ್ನು ಗಮನಿಸಿ.
-ಅರು: ಹುಡುಗ+-ಅರು=ಹುಡುಗರು, ಹುಡುಗಿ+-ಯ್-+-ಅರು=ಹುಡುಗಿಯರು (ಎರಡನೆ
ಉದಾಹರಣೆಯಲ್ಲಿ –ಯ್- ಇದು ಆಗಮವಾಗಿ ಬಂದಿದೆ, ಸಂದಿ ನಿಯಮದಲ್ಲಿ)
-ಅಂದಿರು: ಅಕ್ಕ+-ಅಂದಿರು=ಅಕ್ಕಂದಿರು, ಅಣ್ಣ+-ಅಂದಿರು=ಅಣ್ಣಂದಿರು
-ಕಳ್-ಕಳು: ಮಗು+-ಕಳು=ಮಕ್ಕಳು
-ಗಳು: ಸ್ವಾಮಿಗಳು, ಮಂತ್ರಿಗಳು
ಇಲ್ಲಿ ಮನುಶ್ಯ ನಾಮಪದಗಳ ಮೇಲೆ ಸೇರುವ ನಾಲ್ಕು ವಿಬಿನ್ನ ಪ್ರತ್ಯಯಗಳು ಇವೆ. ಸಂಬಂದವಾಚಕಗಳನ್ನು ಹೊರತುಪಡಿಸಿ ಮನುಶ್ಯರನ್ನು ಹೇಳುವ ಕನ್ನಡ ಮೂಲದ ನಾಮಪದಗಳ ಮೇಲೆ ಸಾಮಾನ್ಯವಾಗಿ –ಅರು ಎಂಬ ಪ್ರತ್ಯಯ ಬರುತ್ತದೆ, ಉದಾ. ಹೆಂಗಸರು, ಗಂಡಸರು ಮೊ. ಆದರೆ, ಸಂಬಂದವಾಚಕಗಳ ಮೇಲೆ ಮಾತ್ರ -ಅಂದಿರು ಎಂಬ ಪ್ರತ್ಯಯ ಬರುತ್ತದೆ, ಉದಾ. ಗಂಡಂದಿರು, ಮಾವಂದಿರು, ಸೊಸೆಯಂದಿರು ಮೊ. ಮಕ್ಕಳು, ಹಯ್ಕಳು ಇಂತಾ ಕೆಲವೆ ಕೆಲವು ನಾಮಪದಗಳಲ್ಲಿ –ಕಳು ಎಂಬ ಪ್ರತ್ಯಯ ಬಳಕೆಯಲ್ಲಿದೆ.
ಈ ಮೇಲಿನ ವಿಚಾರದಂತೆ ಮಂತ್ರಿ, ಗುರು ಎಂಬ ಮನುಶ್ಯರನ್ನು ಹೇಳುವ ಪದಗಳ ಮೇಲೆ –ಅರು ಎಂಬ ಪ್ರತ್ಯಯವನ್ನು ನಿರೀಕ್ಶಿಸಬಹುದು. ಆದರೆ, ಬಳಕೆಯಲ್ಲಿ ಇವುಗಳ ಮೇಲೆ –ಗಳು ಎಂಬ ಮನುಶ್ಯರಲ್ಲದ ನಾಮಪದಗಳ ಮೇಲೆ ಬರುವ ಪ್ರತ್ಯಯವು ಬರುತ್ತದೆ, ಮಂತ್ರಿಗಳು, ಗುರುಗಳು ಮೊ. ಹೀಗೇಕೆ? ಮನುಶ್ಯ-ಮನುಶ್ಯರಲ್ಲದ ಎಂಬುದು ಕನ್ನಡದಲ್ಲಿ ಕಂಡುಬರುವ ನಾಮಪದಗಳ ಮೂಲಬೂತ ಗುಂಪಿಕೆ ಎಂದಾದರೆ ಇಲ್ಲೇಕೆ ಆ ಗುಂಪಿಕೆ ಸರಿಯಾಗಿ ಹಂಚಿಕೊಂಡಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಹೀಗೆ ಮನುಶ್ಯ ಬಹುವಚನ ಪ್ರತ್ಯಯವನ್ನು ತೆಗೆದುಕೊಳ್ಳದಿರುವ ನಾಮಪದಗಳು ಯಾವ ಬಗೆಯವು ಎಂದು ಗುಂಪಿಸಲು ಸಾದ್ಯವೆ ಎಂಬುದನ್ನು ಗಮನಿಸಬಹುದು. ಕುತೂಹಲವೆಂದರೆ ಬಹುತೇಕ ಬೇರೆ ಬಾಶೆಗಳಿಂದ ತೆಗೆದುಕೊಂಡ ಪದಗಳು ಮಾತ್ರ ಹೀಗೆ ಬಹುವಚನ ಪ್ರತ್ಯಯ ತೆಗೆದುಕೊಳ್ಳುವುದರಲ್ಲಿ ಹೆಚ್ಚೂಕಡಿಮೆ ಆಗುತ್ತವೆ. ಗುರುಗಳು, ವಿದ್ಯಾರ್ತಿಗಳು, ಸ್ವಾಮಿಗಳು, ಮಿನಿಸ್ಟ್ರುಗಳು ಮೊ. ಹೀಗೆ ತೆಗೆದುಕೊಂಡ ಪದಗಳು ಅಕಾರಾಂತಗಳಾಗಿದ್ದರೆ ಅಂತಾ ನಾಮಪದಗಳು ಉಳಿದ ನಾಮಪದಗಳಂತೆ –ಅರು ಪ್ರತ್ಯಯವನ್ನು ತೆಗೆದುಕೊಳ್ಳುತ್ತವೆ. ಉದಾ.: ತಹಶೀಲ್ದಾರ+-ಅರು>ತಹಶೀಲ್ದಾರರು, ಕಂಡಕ್ಟರ+-ಅರು> ಕಂಡಕ್ಟರರು. ಇದರ ಹೊರತಾಗಿಯೂ ಹಲವು ಅಕಾರಾಂತವಲ್ಲದ ಪದಗಳು ಬಹುವಚನ ಪ್ರತ್ಯಯ ತೆಗೆದುಕೊಳ್ಳುವುದರಲ್ಲಿ ಹೆಚ್ಚೂಕಡಿಮೆ ಆಗುತ್ತವೆ. ಉದಾ.: ನಾರಿಯರು. ಇದು ಬೇರೆ ಬಾಶೆಯಿಂದ ತೆಗೆದುಕೊಂಡ ಪದವಾಗಿದ್ದರೂ –ಅರು ಎಂಬ ಪ್ರತ್ಯಯವನ್ನು ಮಾತ್ರ ತೆಗೆದುಕೊಳ್ಳುತ್ತದೆ. ಕನ್ನಡದ್ದೆ ಪದವಾದ ತಂದೆ, ತಾಯಿ ಮೊದಲಾದವು ಹಲವು ಪ್ರತ್ಯಯಗಳನ್ನು ಪಡೆದುಕೊಳ್ಳುತ್ತವೆ, ಗಮನಿಸಿ, ತಾಯಿಯರು, ತಾಯಿಯಂದಿರು, ತಾಯಿಗಳು. ಕೆಲವು ಪದಗಳಿಗೆ –ಅರು ಮತ್ತು –ಗಳು ಈ ಎರಡೂ ರೂಪಗಳನ್ನು ಹಾಕಬಹುದು. ಲಂಬಾಣಿಯರು, ಲಂಬಾಣಿಗಳು. ಹೀಗೆ ಗಮನಿಸಿದಾಗ ಕನ್ನಡದಲ್ಲಿ ಬಹುವಚನ ಪ್ರತ್ಯಯ ಹತ್ತುವಲ್ಲಿ ಹಲವು ಗೊಂದಲಗಳು ಇವೆ. ಇವುಗಳನ್ನು ಅರಿತುಕೊಳ್ಳುವುದಕ್ಕೆ ಆಳವಾದ ಅದ್ಯಯನದ ಅವಶ್ಯಕತೆ ಇದೆ. ಇದರಿಂದ ಕನ್ನಡ ಮಾತುಗ ಸಮುದಾಯದ ಪರಿಕಲ್ಪನೆಗಳನ್ನು ಅರಿತುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ.
ಮನುಶ್ಯರಲ್ಲದ ನಾಮಪದಗಳಲ್ಲಿ ಈ ಬಗೆಯ ಬಿನ್ನತೆ ಇಲ್ಲ. ಅವು ಬಹುತೇಕ –ಗಳು ಎಂಬ ಪ್ರತ್ಯಯವನ್ನು ಪಡೆದುಕೊಳ್ಳುತ್ತವೆ.
ಇದರ ಹೊರತಾಗಿ ಹೆಚ್ಚಿನ ಗವುರವವನ್ನು ಕೊಡುವುದಕ್ಕೆ ಒಬ್ಬರೆ ಇರುವಾಗಲೂ ಬಹುವಚನ ಪ್ರತ್ಯಯವನ್ನು ಬಳಸುವುದೂ ಕಂಡುಬರುತ್ತದೆ. ಮುಕ್ಯಮಂತ್ರಿಗಳು, ರಾಜ್ಯಪಾಲರು ಮೊ. ಇನ್ನೂ ಕುತೂಹಲವೆಂದರೆ ಒಬ್ಬ ವ್ಯಕ್ತಿ ಇರುವ ಒಂದು ನಾಮಪದದ ಮೇಲೆ ಇನ್ನೂ ಹೆಚ್ಚಿನ ಗವುರವ ಕೊಡುವುದಕ್ಕೆ ಎರಡೆರಡು ಬಹುವಚನ ಪ್ರತ್ಯಯಗಳನ್ನು ಬಳಸುವುದನ್ನು ಕಾಣಬಹುದು. ಉದಾ. ರಾಜ್ಯಪಾಲರುಗಳು, ವಿದ್ವಾಂಸರುಗಳು ಮೊ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.