ಬಾಶೆಯ ಬೆಳವಣಿಗೆ-ಬದಲಾವಣೆ

Date: 09-07-2022

Location: ಬೆಂಗಳೂರು


“ಬಾಶೆಯಲ್ಲಿ ನಡೆಯುವ ಬದಲಾವಣೆಗೆ ಸಾಮಾಜಿಕ ಪ್ರಬಾವ ಕಾರಣವಾಗಿರುತ್ತದೆ. ಆದ್ದರಿಂದಲೆ ಬಾಶೆಯ ಬದಲಾವಣೆ ಎನ್ನುವುದು ಸಮಾಜದ ಬದಲಾವಣೆಯನ್ನು ನಿರಂತರ ಪ್ರತಿನಿದಿಸುತ್ತಿರುತ್ತದೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಭಾಷೆ ಬದಲಾಗುವ ಬಗೆಯನ್ನು ವಿಶ್ಲೇಷಿಸಿದ್ದಾರೆ.

ಬಾಶೆ ನಿರಂತರ ಬದಲಾಗುತ್ತಲೆ ಇರುತ್ತದೆ. ಬದಲಾವಣೆ ಬಾಶೆಯ ಅತ್ಯಂತ ಸಹಜ ಲಕ್ಶಣ. ಬಳಕೆಯಲ್ಲಿರುವಂತದ್ದು ಸಹಜವಾಗಿಯೆ ಬದಲಾಗುತ್ತಲೆ ಇರಬೇಕು. ಬದಲಾವಣೆ ಬದುಕಿನ ಲಕ್ಶಣವೂ ಆಗಿದೆ. ಬದಲಾವಣೆ ಕಾಣಿಸದ ಯಾವುದಾದರೂ ಬಾಶೆ ಇದ್ದರೆ ಅದನ್ನು ಸತ್ತ ಬಾಶೆ ಎಂದು ಕರೆಯಲಾಗುವುದು. ಬಾಶೆಯು ಎಲ್ಲ ಹಂತಗಳಲ್ಲಿ ಅಂದರೆ ದ್ವನಿ, ಆಕ್ರುತಿಮಾ, ವಾಕ್ಯ, ಅರ‍್ತ ಹೀಗೆ ಎಲ್ಲ ವಲಯಗಳಲ್ಲಿ ಬದಲಾಗುತ್ತಲೆ ಇರುತ್ತದೆ. ಈ ಬದಲಾವಣೆ ಕಾರಣವಾಗಿ ಬಾಶೆಯಲ್ಲಿ ಕಾಲದಿಂದ ಕಾಲಕ್ಕೆ ಬಿನ್ನತೆ ಕಂಡುಬರುತ್ತದೆ. ಅಲ್ಲದೆ ಈ ಬದಲಾವಣೆಯು ಒಂದು ಬಾಶೆಯ ಒಳಗೆ ಎಲ್ಲ ಪ್ರಾದೇಶಿಕ ಪರಿಸರಗಳಲ್ಲಿ ಒಂದೆ ರೀತಿಯಾಗಿ ಬದಲಾಗುವುದಿಲ್ಲ. ಪ್ರಾದೇಶಿಕವಾಗಿಯೂ ಬಿನ್ನವಾದ ಬದಲಾವಣೆಗಳು ಆಗುತ್ತವೆ. ಮುಂದೆ ಇವು ಒಂದು ಕಾಲದ ಬಾಶೆ ಇನ್ನೊಂದು ಕಾಲಕ್ಕೆ ಅರ‍್ತವಾಗದಂತೆ ಬಿನ್ನವಾಗಿ ಬೆಳೆಯುತ್ತವೆ. ಹಳಗನ್ನಡ ಮತ್ತು ಇಂದಿನ ಕಾಲದ ಹೊಸಗನ್ನಡ ಬಾಶೆಗಳ ನಡುವಿನ ಬಿನ್ನತೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅದೇ ರೀತಿ ಬಿನ್ನ ಪರಿಸರಗಳಲ್ಲಿ ಬಿನ್ನವಾದ ಬದಲಾವಣೆ ಆಗಿ ಪ್ರಾದೇಶಿಕವಾಗಿಯೂ ಬಾಶೆಯ ಒಳಗೆ ಬಿನ್ನತೆ ಕಂಡುಬರುತ್ತದೆ. ಕನ್ನಡ ಹೀಗೆ ಹಲವಾರು ಬಿನ್ನತೆಗಳನ್ನು ತೋರಿಸುತ್ತದೆ. ಕೋಲಾರ ಕನ್ನಡ, ಚಾಮರಾಜನಗರ ಕನ್ನಡ, ಬೀದರ ಕನ್ನಡ, ಮಸ್ಕಿ ಕನ್ನಡ, ಬೆಳಗಾವಿ ಕನ್ನಡ ಹೀಗೆ ಇಂತ ಹಲವು ಕನ್ನಡಗಳನ್ನು ಕಾಣಬಹುದು.

ಒಂದು ಬಾಶೆಯನ್ನಾಡುವ ಸಮುದಾಯದಲ್ಲಿ ಬಿನ್ನ ನೆಲೆಯ ಸಾಮಾಜಿಕ ಗುಂಪುಗಳನ್ನು ಕಾಣಬಹುದು. ಸಾಮಾಜಿಕವಾದ ಮತ್ತು ಇತರೇತರ ಮಹತ್ವದ ಕಾರಣಗಳಿಂದಾಗಿ ಈ ವಿಬಿನ್ನ ಸಾಮಾಜಿಕ ಒಳಗುಂಪಿನ ನಡುವೆ ಹೆಚ್ಚಿನ ಸಂಪರ‍್ಕವು ಇದ್ದಿತು. ಈ ಕಾರಣದಿಂದಾಗಿ ಆಯಾ ಸಾಮಾಜಿಕ ಗುಂಪಿನ ಒಳಗೆ ಬಾಶೆಯಲ್ಲಿ ಸಮಾನಾಂಶಗಳು ಇಲ್ಲವೆ ಸಮಾನ ಬೆಳವಣಿಗೆಗಳು ಕಂಡುಬರುತ್ತವೆ. ಇಂದಿಗೂ ಬಾರತೀಯ ಪರಿಸರದಲ್ಲಿ ಜಾತಿ ಆದಾರಿತ ಸಮಾಜದಲ್ಲಿ ಜಾತಿ ಆದಾರಿತ ಬಾಶಿಕ ಬಿನ್ನತೆಗಳು ಕಾಣಿಸುತ್ತವೆ. ಇದರೊಟ್ಟಿಗೆ ಪ್ರದಾನ ಉದ್ಯೋಗಗಳು, ಕೆಲಸಗಳಲ್ಲಿ ಬಳಕೆಯಾಗುವ ಬಾಶೆಯೂ ಸಹಜವಾಗಿ ಬಿನ್ನವಾಗುತ್ತದೆ. ಅಂದರೆ ಒಕ್ಕಲುತನದಲ್ಲಿ ಬಳಕೆಯಾಗುವ ಬಾಶೆ ಇನ್ನಿತರ ವಲಯಗಳಲ್ಲಿ ಸಿಗುವುದಿಲ್ಲ. ಹಾಗೆಯೆ ಇತರ ಹಲವು ಕಸುಬುಗಳಲ್ಲಿನ ಬಾಶಯೂ ಕೂಡ. ಇಲ್ಲಿಯೂ ಬಾಶೆ ಬದಲಾಗುತ್ತದೆ. ಹಾಗೆಯೆ ಸಮಾಜದ ಇನ್ನಿತರ ಹಲವಾರು ರಚನೆಗಳ ನಡುವೆ ಬಿನ್ನವಾದ ಬೆಳವಣಿಗೆಗಳು ಕಂಡುಬರುತ್ತವೆ.

ಸಮಾಜದಲ್ಲಿ ಆಡಳಿತ, ಪಂತಗಳು, ವಿಗ್ನಾನ ಮೊದಲಾದ ವಲಯಗಳಲ್ಲಿ ಆಗುವ ವ್ಯಾಪಕವಾದ ಬದಲಾವಣೆಗಳೂ ಬಾಶೆಯಲ್ಲಿ ಬದಲಾವಣೆಗಳಾಗಲು ಕಾರಣವಾಗುತ್ತವೆ. ಹಾಗಾಗಿ ಕಾಲಾಂತರದಲ್ಲಿ ಬಾಶೆಯಲ್ಲಿ ಈ ಎಲ್ಲ ಬಗೆಯ ಬದಲಾವಣೆಗಳೂ ಆಗಿರುವುದನ್ನು ಕನ್ನಡದಲ್ಲಿ ಕಾಣಬಹುದು.

ಬಾಶೆಯಲ್ಲಿ ವಿವಿದ ಹಂತಗಳನ್ನು ಕಾಣಬಹುದು. ದ್ವನಿ ಹಂತ, ಆಕ್ರುತಿಮಾ (ಪದ ಮತ್ತು ಪ್ರತ್ಯಯ) ಹಂತ, ವಾಕ್ಯ ಹಂತ ಮತ್ತು ಅರ‍್ತ ಹಂತ. ಹೀಗೆ ಬಾಶೆಯ ಹಂತಗಳನ್ನು ಸ್ತೂಲವಾಗಿ ನೋಡಬಹುದು. ಈ ಎಲ್ಲ ಹಂತಗಳಲ್ಲಿಯೂ ಬಾಶೆಯಲ್ಲಿ ಬದಲಾವಣೆ ಆಗುತ್ತವೆ. ಕೂತೂಹಲದ ವಿಚಾರವೆಂದರೆ ಬಾಶೆಯ ವಿವಿದ ಹಂತಗಳಲ್ಲಿ ಕಾಣಿಸುವ ಈ ರಾಚನಿಕ ಬದಲಾವಣೆ ಈ ಮೇಲೆ ಹೇಳಿದ ಸಮಾಜದ ಎಲ್ಲ ಆಯಾಮಗಳಲ್ಲಿ, ಬಾಶೆಯ ಎಲ್ಲ ಪರಿಸರಗಳಲ್ಲಿ ಕಂಡುಬರುತ್ತದೆ. ವಿಬಿನ್ನ ಪರಿಸರಗಳಲ್ಲಿ ಬಾಶೆಯ ಬದಲಾವಣೆ ಕೆಲವು ನೆಲೆಗಳಲ್ಲಿ ಸಮಾನವಾಗಿಯೂ ಇನ್ನು ಹಲವು ನೆಲೆಗಳಲ್ಲಿ ಬಿನ್ನವಾಗಿಯೂ ನಡೆಯುತ್ತಿರುತ್ತವೆ.

ಬಾಶೆಯ ಬೆಳವಣಿಗೆ ಎನ್ನುವುದು ನಿರಂತರ, ಒಂದು ಬೆಳವಣಿಗೆ ಒಂದು ದಿನದಿಂದ ಇನ್ನೊಂದು ದಿನದವರೆಗೆ ಹೀಗೆ ಇಶ್ಟು ಬೆಳೆಯಿತು ಎಂದು ಹೇಳಲು ಆಗದು. ಯಾವುದಾದರೂ ಒಂದು ನಿರ‍್ದಿಶ್ಟ ಬೆಳವಣಿಗೆಯನ್ನು ತೆಗೆದುಕೊಂಡರೆ ಆ ಬೆಳವಣಿಗೆಗೆ ತುದಿ-ಕೊನೆ ಎಂದು ನಿರ‍್ದಿಶ್ಟಗೊಳಿಸಿ ಹೇಳುವುದು ಆಗಲ್ಲ. ಒಂದು ಉದಾಹರಣೆಯನ್ನು ತೆಗೆದುಕೊಂಡು ನೋಡಬಹುದು. ಕನ್ನಡದ ಹಳೆಯ ಕಾಲದಿಂದ ಬಳಕೆಯಲ್ಲಿರುವ ಪ್ ದ್ವನಿಯು ಹ್ ದ್ವನಿಯಾಗಿ ಬದಲಾಗಿದೆ. ಇದನ್ನು ಕನ್ನಡದ ಬಹುತೇಕ ಎಲ್ಲ ಪಟ್ಯಪುಸ್ತಕಗಳು ಹೇಳುತ್ತವೆ. ಆದರೆ, ಪ್ ದ್ವನಿಯೂ ಹ್ ದ್ವನಿಯೂ ನಿರ‍್ದಿಶ್ಟ ಪರಿಸರದಲ್ಲಿ ಇಂದಿಗೂ ಬಳಕೆಯಾಗುತ್ತಲಿವೆ. ಪದನಡುವಿನ ನಿರ‍್ದಿಶ್ಟ ಪರಿಸರದಲ್ಲಿ ಪ್ ದ್ವನಿಯು ಹ್ ದ್ವನಿಯಾಗಿ ಬಳಕೆಯಾಗಿದೆ. ಆದರೆ ಈ ಬದಲಾವಣೆ ಆಗುವುದಕ್ಕೆ ಕನಿಶ್ಟ ಸಾವಿರ ವರುಶಗಳಶ್ಟು ಚರಿತ್ರೆ ಇದೆ. ಇದು ಮೊದಲು ಎಲ್ಲೊ ಒಂದು ಒಳನುಡಿಯಲ್ಲಿ ಶುರುವಾಗುತ್ತದೆ. ಆನಂತರ ಯಾವುದೊ ನಿರ‍್ದಿಶ್ಟ ದಿಕ್ಕಿನಲ್ಲಿ ಪಸರಿಸಿಕೊಂಡು ವ್ಯಾಪಿಸಿಕೊಳ್ಳುತ್ತದೆ. ವಿವಿದ ದಿಕ್ಕುಗಳಲ್ಲಿ ಇದು ಒಂದೆ ವೇಗದಲ್ಲಿ ಪಸರಿಸಿಕೊಳ್ಳುವುದಿಲ್ಲ, ಹೆಚ್ಚೂಕಡಿಮೆ ಆಗುತ್ತದೆ. ಹೀಗಾಗಿ ವಿವಿದ ಕನ್ನಡಗಳಲ್ಲಿ ಈ ಬದಲಾವಣೆಯ ಪ್ರಕ್ರಿಯೆ ಬಿನ್ನವಾಗಬಹುದು, ಸಮಯ, ಪರಿಸರ ಇವೆಲ್ಲವೂ ಬಿನ್ನವಾಗಬಹುದು. ವಿಬಿನ್ನ ಒಳನುಡಿಗಳಲ್ಲಿ ಈ ಬದಲಾವಣೆ ಮತ್ತೆ ಬಿನ್ನ ಪರಿಸರಗಳನ್ನು, ನಿರ‍್ಬಂದಗಳನ್ನು ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಪ್ರತಿ ತಲೆಮಾರಿನಲ್ಲಿ ಬಾಶೆಯ ಬದಲಾವಣೆ ಪ್ರಕ್ರಿಯೆ ನಿರಂತರವಾಗಿರುತ್ತದೆ ಮತ್ತು ಜಾಗ್ರುತವಾಗಿರುತ್ತದೆ. ಕೆಲವು ಸಾಮಾಜಿಕ ನಿರ‍್ದಿಶ್ಟ ಪರಿಸರಗಳಲ್ಲಿ ತಲೆಮಾರುಗಳ ನಡುವಿನ ಬಾಶಿಕ ಬಿನ್ನತೆಯು ಎದ್ದು ಕಾಣಿಸುವಂತಿರುತ್ತದೆ. ಅತೀವ ಸಾಮಾಜಿಕ ಪಲ್ಲಟಗಳು, ಹೊರಗಿನ ವಿಪರೀತ ಅನುಕರಣೆ ಮೊದಲಾದ ಕಾರಣಗಳಿಂದಾಗಿ ಬಾಶೆಯಲ್ಲಿ ಬದುಕಿರುವ ಎರಡು ತಲೆಮಾರುಗಳ ನಡುವೆ ವಿಪರೀತ ಬಾಶಿಕ ಬಿನ್ನತೆ ಕಾಣಿಸಲು ಸಾದ್ಯ. ಬೆಂಗಳೂರಿನಂತ ನಗರ ಪ್ರದೇಶದ ಮದ್ಯಮ ವರ‍್ಗದ ಕುಟುಂಬಗಳಲ್ಲಿನ ತಂದೆ ಮತ್ತು ಮಕ್ಕಳ ತಲೆಮಾರಿನ ನಡುವೆ ಈ ಬಿನ್ನತೆಯನ್ನು ಕಾಣಬಹುದು. ಇದರಂತೆಯೆ ಎರಡು ಕುಟುಂಬಗಳ ನಡುವೆ ನಡೆಯುವ ಮದುವೆಯಂತ ಕಾರಣಗಳಿಂದಲೂ ಕುಟುಂಬಗಳಲ್ಲಿ ಬಾಶಿಕ ಬದಲಾವಣೆ ಕಾಣಿಸುತ್ತದೆ.

ವ್ಯಾಪಾರ ಮೊದಲಾಗಿ ಹಲವಾರು ಬಗೆಯ ವಲಸೆ ಕೂಡ ಬಾಶಿಕ ಬದಲಾವಣೆಗೆ ಕಾರಣವಾಗುತ್ತವೆ. ಈ ಬಗೆಯ ಹೊರಗಿನ ಸಂಪರ‍್ಕ ಸಾಮಾನ್ಯವಾಗಿ ಬಾಶೆಯ ಬದಲಾವಣೆಯ ದಿಕ್ಕನ್ನು ನಿರ‍್ದರಿಸುತ್ತಿರುತ್ತದೆ. ಆರ‍್ತಿಕತೆ, ರಾಜಕೀಯ, ಹೊರಗಿನ ಪ್ರಬಾವಿ ಸಂಪರ‍್ಕ ಮೊದಲಾದವು ಸಾಮಾನ್ಯವಾಗಿ ಬಾಶೆಯಲ್ಲಿನ ಬದಲಾವಣೆಯನ್ನು ನಿರಂತರ ಪ್ರಬಾವಿಸುತ್ತಿರುತ್ತವೆ.

ಬಾಶೆಯ ಬದಲಾವಣೆ ಕಣ್ಣಿಗೆ ಕಾಣಿಸುವಂತೆ ತಕ್ಶಣ ನಡೆದುಹೋಗುವಂತದ್ದಲ್ಲ. ಬದಲಿಗೆ ಪ್ರತಿಯೊಂದು ಬದಲಾವಣೆಗೆ ಸಾಕಶ್ಟು ಕಾಲ ಬೇಕಾಗುತ್ತದೆ. ಯಾವುದೆ ಬಾಶೆಯಲ್ಲಿ ಒಂದು ಸಣ್ಣ ಬದಲಾವಣೆ ನಡೆಯಬೇಕಾದರೆ ನೂರಾರು ವರುಶಗಳ ಕಾಲವಾಗುತ್ತದೆ.

ಬಾಶೆಯಲ್ಲಿ ನಡೆಯುವ ಬದಲಾವಣೆಗೆ ಸಾಮಾಜಿಕ ಪ್ರಬಾವ ಕಾರಣವಾಗಿರುತ್ತದೆ. ಆದ್ದರಿಂದಲೆ ಬಾಶೆಯ ಬದಲಾವಣೆ ಎನ್ನುವುದು ಯಾಂತ್ರಿಕವಾಗಿ ದ್ವನಿಗಳ ಬದಲಾವಣೆ, ಪದರೂಪಗಳಲ್ಲಿನ ಬದಲಾವಣೆ ಮಾತ್ರ ಆಗಿರುವುದಿಲ್ಲ. ಬದಲಿಗೆ ಅದು ಸಮಾಜದ ಬದಲಾವಣೆಯನ್ನು ನಿರಂತರ ಪ್ರತಿನಿದಿಸುತ್ತಿರುತ್ತದೆ. ಬಾಶೆಯ ಬದಲಾವಣೆ ಅದ್ಯಯನ ಇಲ್ಲವೆ ಬಾಶೆಯೊಂದರ ಇತಿಹಾಸದ ಅದ್ಯಯನ ಇದು ಆ ಬಾಶಿಕ ಸಮುದಾಯದ ಇತಿಹಾಸದ ಅದ್ಯಯನವೂ ಆಗಿರುತ್ತದೆ.

ಈ ಅಂಕಣದ ಹಿಂದಿನ ಬರೆಹ:
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

02-10-2024 ಬೆಂಗಳೂರು

"ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ...

ತಾಯ್ಮಾತು-ತಾಯಿ ಮಾತು-ಗುರ‍್ತಿಕೆ  

28-09-2024 ಬೆಂಗಳೂರು

"ತಾಯ್ಮಾತು ಎಂಬುದು ಸಹಜವಾಗಿಯೆ ತಾಯಿ ಪದವನ್ನು ಒಳಗೊಂಡಿರುವುದರಿAದ ತಾಯಿಯೊಂದಿಗೆ ನಂಟನ್ನು ತೋರಿಸುತ್ತದೆ. ಈ ಪದದ...

ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು

26-09-2024 ಬೆಂಗಳೂರು

"ಎನ್. ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್...