"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹೆಸರು. “ಈ ಶಬ್ದದ ಗ್ರಾಂಥಿಕ ಅರ್ಥ ಅಪಶ್ರುತಿ. ಹಿಂದಿಯಲ್ಲಿ ಬೇಸುರ್ ಎನ್ನುತ್ತಾರಾದರೂ ಯಾರಾದ್ರೂ ಶ್ರುತಿ ತಪ್ಪಿ ಹಾಡಿದರೆ ನಾವು ಆಡು ಮಾತಿನಲ್ಲಿ “ಏನ್ ಬೇಸೂರ್ ಹಾಡ್ತಾರೆ ನೋಡು" ಎನ್ನುವ ವಾಡಿಕೆಯಿದೆ," ಎನ್ನುತ್ತಾರೆ ಶಮ ನಂದಿಬೆಟ್ಟ. ಅವರು ವಿದ್ಯಾ ಭರತನಹಳ್ಳಿ ಅವರ ‘ಬೇಸೂರ್’ ಕೃತಿ ಕುರಿತು ಬರೆದ ವಿಮರ್ಶೆ.
ದೇಶದ ಮೂಲೆಯೋ ಕುಗ್ರಾಮವೋ ಎನ್ನಬಹುದಾದ (ನನ್ನಮ್ಮನ ಮನೆಗೆ ಟಿ.ವಿ ಪ್ರವೇಶವಾಗಿದ್ದು 2012ರಲ್ಲಿ) ಪುಟ್ಟ ಹಳ್ಳಿಗಳಲ್ಲಿ ಬಾಲ್ಯ ಕಳೆದ ನನ್ನ ಮಟ್ಟಿಗೆ ಸಂಗೀತವೆಂದರೆ ಮನೆಯ ಹತ್ತಿರವಿದ್ದ ದೇವಸ್ಥಾನಗಳಿಂದ ನಿತ್ಯ ಕೇಳಿಸುತ್ತಿದ್ದ, ಯಾರು ಬರೆದದ್ದೆಂದೂ ಗೊತ್ತಿಲ್ಲದ ದಾಸರ ಪದಗಳು. ಅದರ ಸಂಪೂರ್ಣ ಏಕಸ್ವಾಮ್ಯ ಪುತ್ತೂರು ನರಸಿಂಹ ನಾಯಕ್ ಸರ್ ಅವರದ್ದೇ ಆಗಿದ್ದ ಕಾರಣ ಹಾಡಲು ಬರುವುದು ಅವರೊಬ್ಬರಿಗೆ ಮಾತ್ರ ಎಂದುಕೊಂಡಿದ್ದೆ. ಸಂಗೀತ ಎಷ್ಟು ದೊಡ್ಡ ಸಾಮ್ರಾಜ್ಯವೆಂದು ಅರಿವಾಗಿದ್ದು ಪ್ರಮೀಳಕ್ಕ ಸಂಗೀತ ಕ್ಲಾಸ್ ಮಾಡಲು ಶುರು ಮಾಡಿದಾಗ. ಕ್ಲಾಸ್ ಶುರುವಾಗಿ ಮೂರನೇ ತಿಂಗಳ ಒಂದು ಸಂಜೆ ನಾನಿದ್ದ ಅನಾಥಾಶ್ರಮದ ಹಿಂಭಾಗದಲ್ಲಿದ್ದ ಖಾಲಿ ಜಾಗದಲ್ಲಿ ತೆಂಗಿನ ಗಿಡ ನೆಡಲು ಹೊಂಡ ತೋಡುತ್ತಿದ್ದ ಒಂದು ಶುಭ ಘಳಿಗೆಯಲ್ಲಿ ಸಂಗೀತ ನನ್ನೊಳಗಿಲ್ಲ, ಎಷ್ಟು ವರ್ಷಗಳ ಕಾಲ ಕಲಿತರೂ ಹಾಡಲಾರೆ ಎಂಬ ಜ್ಞಾನೋದಯ ಆಗಿ ಕ್ಲಾಸ್ ಬಿಡಲು ನಿರ್ಧರಿಸಿದ್ದು ಭುವನದ ಭಾಗ್ಯ.
ಬೆಳೆಯುತ್ತ ಹೋದಂತೆ ಸಂಗೀತದ ಮಾಂತ್ರಿಕತೆ ಅರ್ಥವಾಗುವ ಹೊತ್ತಿಗಾಗಲೇ, ಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯಮಯ ಪ್ರಕಾರದ ಸಂಗೀತಗಳಿವೆಯೋ ಅಷ್ಟೇ ಸಹಸ್ರ ಸಂಗೀತಗಾರರೂ ಇದ್ದಾರೆಂಬ ಅರಿವಾಗಿತ್ತು. ಜೊತೆಗೇ ನನಗೆ ಸಂಗೀತ ಕಲಿಯುವ ಕೌಶಲ್ಯವಿಲ್ಲ ಎನ್ನುವ ಕೊರಗು ನನ್ನೊಳಗೆ ಖಾಯಂ ಆಗಿ ಮನೆ ಮಾಡಿಯೂ ಆಗಿತ್ತು. ಜೊತೆಜೊತೆಗೇ ಗಾನಮಾಧುರ್ಯದ ಆಸ್ವಾದನೆಯ ಹುಚ್ಚೂ ಅಷ್ಟೇ ಖಾಯಮ್ಮಾಗಿ ರಕ್ತದಂತೆ ನನ್ನೊಳಗೆ ಸೇರಿದ್ದು ನನ್ನ ಭಾಗ್ಯ.
ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹೆಸರು. “ಈ ಶಬ್ದದ ಗ್ರಾಂಥಿಕ ಅರ್ಥ ಅಪಶ್ರುತಿ. ಹಿಂದಿಯಲ್ಲಿ ಬೇಸುರ್ ಎನ್ನುತ್ತಾರಾದರೂ ಯಾರಾದ್ರೂ ಶ್ರುತಿ ತಪ್ಪಿ ಹಾಡಿದರೆ ನಾವು ಆಡು ಮಾತಿನಲ್ಲಿ “ಏನ್ ಬೇಸೂರ್ ಹಾಡ್ತಾರೆ ನೋಡು" ಎನ್ನುವ ವಾಡಿಕೆಯಿದೆ. ಈ ಹಿನ್ನೆಲೆಯಲ್ಲಿ ವಾಡಿಕೆಯ ಶಬ್ದವಾದ ಬೇಸೂರ್ ಎಂಬುದನ್ನೇ ಹೆಸರಾಗಿಸಿದೆ” ಎಂದರು ಕಥೆಗಾರ್ತಿ ವಿದ್ಯಾ ಭರತನಹಳ್ಳಿಯವರು.
ನಕ್ಕಾಗ ತಾನೇ ನಲ್ಗಾವ್ಯದಂತೆ ಕಾಣುವ ಇವರು ಕವನದಷ್ಟೇ ಚೆನ್ನಾಗಿ ಕಥೆಗಳನ್ನೂ ಬರೆಯಬಲ್ಲರು ಎಂದು ಸಾಬೀತುಪಡಿಸಿದ್ದಾರೆ. ನಾಟಕಗಳಲ್ಲಿ ಸನ್ನಿವೇಶದ ಭಾವ ಹುಟ್ಟು ಹಾಕುವುದಕ್ಕಾಗಿ ಹಿಂದೆ ಇಳಿಬಿಡುವ ತೆರೆಯ ಪರಿಯಲ್ಲಿ ಇಲ್ಲಿನ ಬಹಳಷ್ಟು ಕಥೆಗಳಲ್ಲಿ ಸಂಗೀತ ಪಾತ್ರ ವಹಿಸಿದೆ. ಸಂಕಲನದ ಹೆಸರಿನ ಅರ್ಥ ಅಪಶ್ರುತಿಯಾದರೂ ಕಥೆಗಳಲ್ಲಿ ದುರ್ಬೀನು ಹಾಕಿ ಹುಡುಕಿದರೂ ಅಪಶ್ರುತಿಗಳಿಲ್ಲ.
ಕ್ಲಿಷ್ಟ ಉಪಮೆ, ರೂಪಕಗಳ ಭಾರವಿಲ್ಲದ ಸಂಕಲನದ ಹದಿಮೂರು ಕಥೆಗಳೂ ಅತ್ಯಂತ ಸರಳವಾಗಿವೆಯಲ್ಲ ಎನಿಸುವುದಾದರೂ ಬಹುಕಾಲ ಒಳಗೇ ಇದ್ದು ಸೂಕ್ಷ್ಮ ಸಂವೇದನೆಯುಳ್ಳ ಓದುಗರ ಒಳಗುಳಿದು ಕಾಡಿ, ಕಲಕಬಲ್ಲ ಸಾಮರ್ಥ್ಯ ಹೊಂದಿವೆ. ಮನುಷ್ಯ ಲೋಕದ ಭಾವಸಮುದ್ರದ ಏರಿಳಿತಗಳನ್ನು ವಿಶಿಷ್ಟವಾಗಿ ಮತ್ತು ನವಿರಾಗಿ ಹಿಡಿದಿಟ್ಟು ಕಟ್ಟಿರುವ ಕಥೆಗಳಲ್ಲಿ ಎಲ್ಲೂ ಅನವಶ್ಯಕ ಆವೇಶವಿಲ್ಲ. ದಿನ ನಿತ್ಯದ ಜಂಜಾಟಗಳ ಬಗ್ಗೆ, ಕೌಟುಂಬಿಕ ಕಲಹಗಳ ಬಗ್ಗೆ ಮಾತನಾಡುತ್ತ ಬದುಕೇ ಹೋರಾಟ; ಸಾಂಸಾರಿಕ ಬದುಕು ಇನ್ನೂ ದೊಡ್ಡ ಹೋರಾಟ ಎಂಬುದನ್ನು ಅಡಿಗಡಿಗೆ ಕೇಳುತ್ತಲೇ ಬಂದಿರುತ್ತೇವೆ. ಇಲ್ಲಿನ ಪ್ರತಿ ಕಥೆಯಲ್ಲೂ ಆ ಹೋರಾಟ ಇದೆಯಾದರೂ ಏರು ದನಿಯ ಕಿರುಚಾಟವಿಲ್ಲ; ಬದಲಿಗೆ ಅಂತರಂಗದ ಹೊಯ್ದಾಟವಿದೆ ಮತ್ತು ಅದನ್ನು ನಿಭಾಯಿಸುತ್ತಲೇ ಗೆಲ್ಲುವ ಜೀವಗಳು ಬದುಕಿನ ಹಾಡು ಶ್ರುತಿ ತಪ್ಪದಂತೆ, ಹೊರ ಜಗತ್ತಿಗೆ ತಮ್ಮ ಸಂಸಾರವೆಂಬ ಸಂಗೀತ ಕಛೇರಿ ʼಬೇಸೂರ್ʼ ಅನಿಸದಂತೆ ಹದ ಕಾಯ್ದುಕೊಳ್ಳುವ ಮೋದವಿದೆ.
ಹೆಣ್ಮನದ ತುಡಿತ, ಮಿಡಿತಗಳು ಮತ್ತು ನಿತ್ಯ ಆಕೆ ಅನುಭವಿಸುವ ಶೋಷಣೆಗಳು ಚಿತ್ರಿತವಾದರೂ ಅವುಗಳು ‘ಇದೇನಪ್ಪಾ ಗೋಳುʼ ಎನಿಸದಂತೆ ಚಿತ್ರಿಸುವ ಜಾಣ್ಮೆ ಕಥೆಗಾರ್ತಿಗೆ ಸಿದ್ಧಿಸಿದೆ. ಎಲ್ಲ ಕಥೆಗಳಲ್ಲೂ ಸಂಬಂಧಗಳು ಕೇಂದ್ರ ಬಿಂದುವಾಗಿರುವ ಕಾರಣಕ್ಕೇನೋ ಇವ್ಯಾವುದೂ ಯಾರದೋ ಕಥೆ ಎನಿಸುವುದಿಲ್ಲ. ನಮ್ಮ ಸುತ್ತಮುತ್ತ ನಡೆದ ಕಥೆಗಳು ಅಥವಾ ನಾವು ಯಾವುದೋ ಮದುವೆ ಮನೆಯಲ್ಲೋ, ಅರಳಿಕಟ್ಟೆಯಲ್ಲೋ ಕೂತಾಗ ಕೇಳಿದ ಕಥೆಗಳಂತೆ ಭಾಸವಾಗುತ್ತವೆ. ಮುಕ್ತಾಳನ್ನು ಹುಡುಕಿ ಬರುವ ವಾಸುಕಿ ಏಳನೇ ಕ್ರಾಸಿನ ಸರಿತಾ ಮನೆಯದ್ದಾ ಎಂಬ ಭಾವ ಹಾದು ಹೋದರೆ, ಮೇದಿನಿ ಕಥೆ ಓದಿ ಮುಗಿಸಿದ ನಂತರ ಕಾಲೇಜು ಓದುವಾಗ ಕಂಡ, ಮದುವೆಯಾಗಿ ಒಂದೇ ವಾರದಲ್ಲಿ ಗಂಡನನ್ನು ಬಿಟ್ಟು ಬಂದು ಛಲಕ್ಕೆ ಬಿದ್ದು ಓದಿ ಮೊದಲ rank ಪಡೆದ ಗಟ್ಟಿಗಿತ್ತಿ ಕಣ್ಮುಂದೆ ಬರುತ್ತಾಳೆ. ಶರ್ವಾಣಿಯೆಂಬ ಕವಿತೆ ಬರೆಯುವ ಹುಡುಗಿಯ ಕಥೆಗೂ ಗೆಳತಿ ಹರಿಣಿಯ ಸಂಸಾರಕ್ಕೂ ಎಷ್ಟು ತಾಳೆಯಾಗುತ್ತಿದೆಯಲ್ಲ; ಅದೇ ಇರಬಹುದಾ ಎನಿಸುತ್ತದೆ.
ಬೇಸೂರ್ ಕಥೆ ಯಲ್ಲಿ ಸಂಗೀತ ಶಿಕ್ಷಕಿ “ನಿನ್ನ ಜೀವನದಾಗ ನಿನಗೆ ಸರಿ ಸೂರ್ ಹಚ್ಚುವವನನ್ನೇ ಮದುವೆ ಆಗು. ಶ್ರುತಿ ಕೂಡದ ಹಾಡು ಹಾಡಿದ್ರೆಷ್ಟು ಬಿಟ್ರೆಷ್ಟು ?”
ಜೀವಂತ ಶವವಾಗಿದ್ದ ಪತಿ ಸೇವೆಯನ್ನು ಏಳೆಂಟು ವರ್ಷಗಳು ಮಾಡಿ ಸಂವೇದನೆಯನ್ನೇ ಕಳಕೊಂಡಂತಾದ ಹೆಣ್ಣಿಗೆ ಪತಿಯನ್ನು ಕಳಕೊಂಡ ಬಳಿಕ ಮತ್ತೊಬ್ಬ ತನ್ನ ಮೇಲೆ ಕಣ್ಣು ಹಾಕಿದ್ದು ಅರಿವಾದಾಗ “ಬಣ್ಣ ರುಚಿ ವಾಸನೆ ಮೂರನ್ನೂ ಕಳೆದುಕೊಂಡು ಆರೇಳು ವರ್ಷಗಳಾಗಿದ್ದವು. ಈಗ ಹೆಸರನ್ನೂ ಕಳೆದುಕೊಳ್ಳಲಾರೆ”
ಅಪಶ್ರುತಿಯಾಗಬಹುದಾಗಿದ್ದ ಬದುಕನ್ನು ನೇರ್ಪು ಮಾಡಲೆಂದೇ ಆಡುವ ಇಂಥ ಮಾತುಗಳು ನಮ್ಮ ಮನೆಯ ಹಿರಿಯರು ಆಡುವ ಹಿತನುಡಿಗಳೂ ಆಗಿವೆ.
ಕಥೆಯನ್ನೋದುತ್ತ ಹೋದಂತೆ ಅದರ ಕೊನೆಯನ್ನು ಕಲ್ಪಿಸಿಕೊಳ್ಳುವ ಓದುಗ ಮನಸ್ಥಿತಿಯೊಂದಿರುವುದು ಸಹಜ. ಅದನ್ನು ಸಂಪೂರ್ಣ ಅರಿತವರಂತೆ ಇಲ್ಲಿ ಕಥೆಗಾರ್ತಿ ಅನೂಹ್ಯವಾದ ಕ್ಲೈಮಾಕ್ಸ್ ನೀಡಿರುವುದು ಓದಿನ ಕೊನೆಗೆ ಅರಿವಿಲ್ಲದೇ ನಸುನಗು ಮೂಡಿಸುತ್ತದೆ. ಮೊದಲೇ ಹೇಳಿದಂತೆ ಸಂಕಲನದ ಹೆಸರು ಅಪಶ್ರುತಿಯಾದರೂ ಭಾಷೆಯಲ್ಲಿ, ಕಥೆಗಳಲ್ಲಿ ವಾಹ್ ಎನಿಸುವಂಥ ಶ್ರುತಿಯಿದೆ, ಸಹಜತೆಯಿದೆ.
ಕಥೆಗಾರ್ತಿ ತಮ್ಮ ಮಾತಿನಲ್ಲಿ ಹೇಳಿದಂತೆ “… ಅರಳಿದ ಹೂವಿನೊಳಗೆ ಕಣ್ಣಿಗೆ ಕಾಣಿಸದ ಹುಳ ಹೊಕ್ಕಿದ್ದನ್ನು ತೆಗೆಯುವಾಗ, ಫಕ್ಕನೆ ಯಾವುದೋ ನೆನಪಾಗಿ ಕಣ್ಣು ತುಂಬಿದಾಗ…” ಇಲ್ಲಿನ ಯಾವುದೋ ಕಥೆಯೋ ಪಾತ್ರವೋ ನೆನಪಾದರೆ ಅಚ್ಚರಿಯಿಲ್ಲ. ಅಷ್ಟರ ಮಟ್ಟಿಗೆ ತನ್ನ ಮೊದಲ ಕಥಾ ಸಂಕಲದಲ್ಲೇ ಅಮೋಘವಾದ ಚಪ್ಪಾಳೆ ಗಿಟ್ಟಿಸಿದ್ದಾರೆ.
ಸಂಗೀತ ಪ್ರಿಯರೂ, ಸಂಗೀತಗಾರರ ವಂಶಜರೂ ಆಗಿದ್ದು ಈ ಕ್ಷೇತ್ರದಲ್ಲಿ ಅಪಾರ ಜ್ಞಾವನ್ನು ಹೊಂದಿರುವ ಶ್ರೀ ಎನ್. ಎಸ್. ಶ್ರೀಧರಮೂರ್ತಿಯವರು ಸಂಕಲನದ ಎಲ್ಲ ಕಥೆಗಳ ಸೂಕ್ಷ್ಮವನ್ನು ಗ್ರಹಿಸಿ, ಕಥೆಗಾರ್ತಿಯ ಭಾವದ ನಾಡಿಮಿಡಿತವನ್ನು ಅರಿತು ಬರೆದ ಮುನ್ನುಡಿ ಪುಸ್ತಕಕ್ಕೆ ಇನ್ನೊಂದಷ್ಟು ಮೆರುಗಿತ್ತಿದೆ.
ಬೇಸೂರ್: ಯಾವುದೋ ವಾಹನದ ಕರ್ಕಶ ಹಾರನ್ನಿನ ಸದ್ದು ಸಂಗೀತ ಕಚೇರಿಯ ನಡುವೆ ಕೇಳಿಸಿ ಆ ಕ್ಷಣದ ಮಾಧುರ್ಯವನ್ನು ಹಾಳುಗೆಡವಿದಂತೆ ಪುಸ್ತಕದಲ್ಲಿ ಕಂಡ ಕಾಗುಣಿತ ಮತ್ತು ವ್ಯಾಕರಣ ದೋಷಗಳು ಓದಿನ ಮೋದಕ್ಕೆ ಅಡ್ಡಿಯಾಗುತ್ತದೆ. ಪ್ರಕಾಶಕರು ಕಥೆಗಳ ಗುಣಮಟ್ಟದ ಜೊತೆ ʼಇದನ್ನೂʼ ಗಮನಿಸಿದರೆ ಪುಸ್ತಕಗಳ ಬೆಲೆಯ ಹೊರತಾಗಿಯೂ ಇರುವಂಥ ಮೌಲ್ಯ ಮತ್ತು ಘನತೆ…
"ಉದಯಗಿರಿಯಲ್ಲಿ ನೆಲ ಅಂತಸ್ತು ಮಾತ್ರವಲ್ಲದೆ ಅದರ ಮೇಲೆ ಎರಡು ಅಂತಸ್ತುಗಳಿವೆ. ಒಳಗಿನಿಂದಲೇ ಮೇಲೆ ಹೋಗಬಹುದಾದ ಕಿಂ...
“ಶೇಷಾದ್ರಿಯವರು ಸಿನಿಮಾ ನಿರ್ದೇಶಕರು, ಮತ್ತು ಅವರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಸಿಕ್ಕಿದೆ...
"‘ಲಿಂಗಾಯತ ಖಾನಾವಳಿ’ ಇಡೀ ಕಥಾಸಂಕಲನದಲ್ಲಿ ಕ್ಲಾಸಿಕ್ ಕಥೆ. ಬದುಕು ಹುಡುಕಿ ನಗರಕ್ಕೆ ಬರುವ ಮುಗ್ಧ ...
©2024 Book Brahma Private Limited.