ಲೇಖಕರಿಗೆ ಕೌತುಕಮಯವಾಗಿ ಬರೆಯುವ ಕಲೆ ಒಲಿದಿದೆ


“ಬರೆಹ ಸರಳವಾಗಿದೆ. ಸ್ವಾರಸ್ಯಕರವಾಗಿದೆ, ಪುಸ್ತಕದಲ್ಲಿ ಪದ-ಅಕ್ಷರಗಳ ಲೋಪಗಳಿಲ್ಲ, ಎಲ್ಲೂ ಅನಗತ್ಯವಾದ ವಿಶ್ಲೇಷಣೆಗಳಿಲ್ಲ, ಉಪದೇಶಗಳಿಲ್ಲ, ಮಾಟದ ವಿವರಣೆಗಳು ಕಥೆಯ ಓಘಕ್ಕೆ ಎಲ್ಲೂ ಭಂಗ ತರುವುದಿಲ್ಲ,” ಎನ್ನುತ್ತಾರೆ ರಮೇಶ್‌ ಶೆಟ್ಟಿಗಾರ್‌. ಅವರು ಗುರುರಾಜ ಕೊಡ್ಕಣಿ ಅವರ “ಅತಿಮಾನುಷ” ಕೃತಿ ಕುರಿತು ಬರೆದ ವಿಮರ್ಶೆ.

ಲೇಖಕರಾದ ಗುರುರಾಜ ಕೊಡ್ಕಣಿಯವರು ಹಾರರ್‌ ಕಂಟೆಂಟ್‌ ಇರುವ ಥ್ರಿಲ್ಲರ್‌ ಬರೆಯುವುದಕ್ಕೆ ಸಿದ್ಧಹಸ್ತರು. ಲೇಖಕರು ಶತಕಂಪಿನೀ, ವಿಕ್ಷಿಪ್ತ, ಪ್ರತಿಜ್ಞೆ ಎಂಬ ಕೃತಿಗಳನ್ನು ಬರೆದಿದ್ದಾರೆ. ಹಾಯ್‌ ಬೆಂಗಳೂರು, ಹಿಮಾಗ್ನಿ ವಾರಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿರುವ ಇವರು ಸಾಹಿತ್ಯಕ್ಷೇತ್ರಕ್ಕೆ ಪರಿಚಿತ ಹೆಸರಾಗಿದ್ದಾರೆ. ಇವರು ಬರೆಯುತ್ತಿದ್ದ ಥ್ರಿಲ್ಲರ್‌ ಸಣ್ಣಕಥೆಗಳನ್ನು ನಾನು ಉದಯವಾಣಿ ನಿಯತಕಾಲಿಕದಲ್ಲಿ ಓದಿದ್ದೇನೆ. ನನಗೆ ಹಾರರ್ ಕಥೆಗಳನ್ನು ಬರೆಯಲು ಇದು ಕೂಡಾ ಪ್ರೇರಣೆಯಾಗಿತ್ತು. ಇವರ “ಅತಿಮಾನುಷ” ಹಾರರ್‌ ಸಸ್ಪೆನ್ಸ್‌ ಕಾದಂಬರಿಯಾದ ಕಾರಣ ಈ ಕೃತಿಯ ಬಗ್ಗೆ ನನಗೆ ಸಹಜ ಕುತೂಹಲವಿತ್ತು.

ಅಂದುಕೊಂಡಂತೆ ಭರಪೂರವಾಗಿ ಹಾರರ್‌ ಸಸ್ಪೆನ್ಸ್‌ ಸಮಮಿಶ್ರಣವನ್ನು ಈ ಕಾದಂಬರಿಯ ಮೂಲಕ ಗುರುರಾಜ್‌ ನೀಡಿದ್ದಾರೆ. ಮೊದಲ ಪುಟದಲ್ಲಿ ಆರಂಭವಾದ ಕುತೂಹಲ, ಹೆಜ್ಜೆ ಹೆಜ್ಜೆಗೆ ಮುಂದೇನು, ಮುಂದೇನು ಎಂದು ನನ್ನನ್ನು ಸೋಫಾದ ತುದಿಯಲ್ಲಿ ಕುಳ್ಳಿರಿಸಿ ಓದಿಸಿಕೊಂಡು ಹೋಗುವಂತೆ ಮಾಡಿತು. ಲೇಖಕರಿಗೆ ಕೌತುಕಮಯವಾಗಿ ಬರೆಯುವ ಕಲೆ ಒಲಿದಿದೆ. ಹಾಗಾಗಿ ಪ್ರತಿ ಅಧ್ಯಾಯವನ್ನು ಒಂದು ಹೊಸ ಟ್ವಿಸ್ಟ್‌ ಇಟ್ಟುಕೊಂಡು ಪುಸ್ತಕವನ್ನು ಕೆಳಗಿಡದೆ ಓದಿಸುವಂತೆ ಮಾಡಿದ್ದಾರೆ. ಬರೆಹ ಸರಳವಾಗಿದೆ. ಸ್ವಾರಸ್ಯಕರವಾಗಿದೆ, ಪುಸ್ತಕದಲ್ಲಿ ಪದ-ಅಕ್ಷರಗಳ ಲೋಪಗಳಿಲ್ಲ, ಎಲ್ಲೂ ಅನಗತ್ಯವಾದ ವಿಶ್ಲೇಷಣೆಗಳಿಲ್ಲ, ಉಪದೇಶಗಳಿಲ್ಲ, ಮಾಟದ ವಿವರಣೆಗಳು ಕಥೆಯ ಓಘಕ್ಕೆ ಎಲ್ಲೂ ಭಂಗ ತರುವುದಿಲ್ಲ. ಹಾರರ್‌ ಕಥೆಯಾದರೂ ತರತರನೆ ನಡುಗಿಸುವುದಿಲ್ಲ. ಆದ್ರೆ ಕಥೆಯ ಗುಂಗಿನಲ್ಲಿದ್ದಾಗ ಕಪಾಟಿನ ಒಳಗೆ ಏನೋ ಸದ್ದು, ಬೆಡ್ಶೀಟ್‌ ಅಲ್ಲಾಡಿದಂತೆ ಅನುಭವ, ಉದ್ದನೆಯ ತಲೆಗೂದಲು ಕಂಡಾಗ ಅದು ಕ್ಷುದ್ರವೇಣಿಯದ್ದಿರಬಹುದೇ, ಎಂಬ ಭಯಾತಂಕ, ಬಾಲ್ಕನಿಯಲ್ಲಿ ನೇತಾಡುವ ನನ್ನ ಬಟ್ಟೆಗಳು ನನ್ನನ್ನು ಕಂಡಾಕ್ಷಣ ಆಚೀಚೆ ಓಲಾಡಿದಾಗ ಇದರಲ್ಲಿ ಯಾರಾದರೂ ನನ್ನ ಮೇಲೆ “ವಸ್ತ್ರ ಸಂಯಕ್ಷಿ ಪ್ರಯೋಗ” ಮಾಡಿರಬಹುದೇ ಎನ್ನುವ ಅನುಮಾನ, ಕಿಟಿಕಿಯ ಹತ್ತಿರ ಹೋಗಿ ನಿಂತರೆ ಹೊರಗಿನಿಂದ ಯಾರೋ “ಮಾರ್ಜಾಲ ಬೈರವಿ ಸಮ್ಮೋಹಿನಿ” ಮೂಲಕ ನನ್ನನ್ನು ವಶೀಕರಣ ಮಾಡಿದಂತೆ ಭಾಸವಾಗುವುದು ತಪ್ಪಲಿಲ್ಲ. ಅಂತೂ ನಾನು ಎರಡು ದಿವಸ ತಡರಾತ್ರಿಯ ತನಕ [ಹಾರರ್‌ ಪುಸ್ತಕ ಓದುವುದಕ್ಕೆ ಅದುವೇ ಸೂಕ್ತ ಸಮಯ, ಅದೂ ಕಿಟಿಕಿಯ ಪಕ್ಕ ಕುಳಿತುಕೊಂಡು] ಕೂತು ಓದಿ ಮುಗಿಸಿದೆ.

“ಅತಿಮಾನುಷ” ಕೃತಿಯನ್ನ ಓದುತ್ತಿರುವಾಗ ಯಂಡಿಮೂರಿಯವರ ತುಳಸೀದಳ ನನ್ನ ನೆನಪಿಗೆ ಬರುತ್ತಿತ್ತು. ಅದೇ ಶೈಲಿಯ ಬರೆವಣಿಗೆ, ಅದೇ ಬಗೆಯ ಸ್ವಾರಸ್ಯಕರವಾದ ಘಟನೆಗಳು, ಆದರೆ ಕಥಾವಸ್ತುಗಳು ಮಾತ್ರ ಬೇರೆ ಬೇರೆ! ಇಂತಹ ಕೃತಿಗಳು ನಮ್ಮನ್ನು ಕಾಡುತ್ತವೆ. ಓದಿದ ನಂತರವೂ ಕೆಲದಿನಗಳ ತನಕ ನಾವು ಕೃತಿಯ ಗುಂಗಿನಲ್ಲಿರುತ್ತೇವೆ.

ಅಂತೂ “ಅತಿಮಾನುಷ” ಮೂಲಕ ಒಂದೊಳ್ಳೆಯ ಸಸ್ಪೆನ್ಸ್‌ ಥ್ರಿಲ್ಲರ್‌ ಓದಿದ ಸಂತೃಪ್ತಿ ಹಾಗೂ ಸಂತಸ ನನ್ನದು. ನನಗೆ ಇದು ಸಂಗ್ರಹಯೋಗ್ಯವಾದ ಕೃತಿಯಾಗಿದೆ. ಲೇಖಕರಾದ ಗುರುರಾಜ್‌ ಅವರಿಂದ ಇನ್ನಷ್ಟು ರೋಚಕ ಕೃತಿಗಳು ಲೋಕಾರ್ಪಣೆಯಾಗಲಿ, ಕೃತಿಯು ಜನಪ್ರಿಯವಾಗಲಿ ಎಂಬ ಹಾರೈಕೆಗಳು.

MORE FEATURES

ಅಕ್ಕಿಯಿದ್ದಲ್ಲಿ ಹಕ್ಕಿಗಳು ಬರುತ್ತವೆ...

11-04-2025 ಬೆಂಗಳೂರು

"ಬಹು ಆಯಾಮದ ವ್ಯಕ್ತಿತ್ವದ, ವೃತ್ತಿಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಸದಾ ಚಟುವಟಿಕೆಯುಳ್ಳ, ಕ್ರಿಯಾಶೀಲಗುಣವ...

ಒಂದು ಸಮುದಾಯವು ತನ್ನ ಒಳಿತಿಗಾಗಿ ಶ್ರಮಿಸಿದವರನ್ನು ಆರಾಧಿಸುವುದು ಸಾಮಾನ್ಯ

11-04-2025 ಬೆಂಗಳೂರು

"‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಪ್ರಸ್ತುತ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ...

ಪ್ರಯೋಗಾತ್ಮಕ ಹಾಗು ಸಹಜ ಹರಿವಿನ ಕಥೆಗಳ ನಡುವೆ 

11-04-2025 ಬೆಂಗಳೂರು

"ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಕಾಣಸಿಗುವ ಹೆಣ್ಣಿನ ಪಾವಿತ್ಯ್ರತೆಯ ಪ್ರಶ್ನೆ ಹಾಗೂ ಅಸಮ ದಾಂಪತ್ಯದಲ್...