“ಲೇಖಕಿ ಗಾಯತ್ರಿ ಅನಂತ್ ಮಹಿಳಾ ಹಾಗೂ ಯುವ ಬರಹಗಾರರಿಗೆ ಉತ್ತೇಜನ ನೀಡುವ ಅಗತ್ಯತೆಯ ಬಗ್ಗೆ ಅರಿವು ಚೆಲ್ಲಿದ್ದಾರೆ,” ಎನ್ನುತ್ತಾರೆ ಚೇತನ ಭಾರ್ಗವ. ಅವರು ಪದ್ಮಾವತಿ ಚಂದ್ರು ಅವರ “ಸ್ಪಂದನ” ಕೃತಿ ಕುರಿತು ಬರೆದ ವಿಮರ್ಶೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಪದ್ಮಾವತಿ ಚಂದ್ರು ಅವರ ಸಂಪಾದಕತ್ವದಲ್ಲಿ ಹಾಗೂ ಶುಭಾ ಶ್ರೀನಾಥ್ ಅವರ ಸಹ ಸಂಪದಾಕತ್ವದಲ್ಲಿ ಅನಾವರಣಗೊಂಡ “ಸ್ಪಂದನ” ಕೃತಿ ಹತ್ತು ಲೇಖಕಿಯರ ಲೇಖನಗಳ ಕಥಾ ಗುಚ್ಛ ಅತ್ಯುತ್ತಮವಾಗಿ ಮೂಡಿ ಬಂದಿರುವ ಪುಸ್ತಕ ಕೃತಿ. ಹತ್ತು ವಿವಿಧ ಲೇಖಕಿಯರ ಲೇಖನ ಹತ್ತು ವಿಧದ ಬಣ್ಣದ ಹೂಗಳಿಂದ ಸಮ್ಮಿಳಿತವಾದ ಹೂಗುಚ್ಚದಂತೆಯೇ ಇದೆ. ಹೆಸರಿಗೆ ತಕ್ಕಂತೆ ಸ್ಪಂದನೆ ಓದುಗರಲ್ಲೆರ ಮನಸ್ಸನ್ನು ತಟ್ಟುವುದು ಸುಳ್ಳಲ್ಲ.
ಶ್ರೀಮತಿ ಅಚಲ ಬಿ ಹೆನ್ಲೀ , ಆಶ್ರಿತ ಕಿರಣ್ ,ಗಾಯತ್ರಿ ಅನಂತ್, ರಶ್ಮಿ ಪ್ರಶಾಂತ್, ಶಾರದ ವೀರೇಶ್ ಶೆಟ್ಟಿ,ಶಶಿ ಶಂಕರ್ ,ಶುಭಾ ಶ್ರೀನಾಥ್, ಸಂಧ್ಯಾ ಶ್ಯಾಮ್ ಭಟ್ , ಉಷಾ ಜಯರಾಂ ಹಾಗೂ ವೀಣಾ ರಮೇಶ್ ಅವರ ಆಯ್ದ ಕಥೆಗಳ ಸಂಕಲನವೇ ಸ್ಪಂದನ.
ಹತ್ತು ಮಹಿಳಾ ಲೇಖಕಿಯರ ಲೇಖನಿಯಿಂದ ಮೂಡಿಬಂದಿರುವ ಕಥೆಗಳು ಒಂದಕ್ಕಿಂತ ಒಂದು ವಿಶಿಷ್ಟವಾಗಿದೆ. ಹೂಗುಚ್ಛದಲ್ಲಿ ಎಲ್ಲಾ ಹೂಗಳೂ ಸುಂದರ ಯಾವುದೂ ಹೆಚ್ಚಲ್ಲ ಯಾವೂದೂ ಕಡಿಮೆಯಲ್ಲ. ಹಾಗೆಯೇ ಎಲ್ಲಾ ಕಥೆಗಳ ವಸ್ತು ವಿಷಯಗಳು ವೈವಿಧ್ಯಮಯವಾಗಿದೆ. ಹೆಣ್ಣು ಮಕ್ಕಳಿಗೆ ಜೀವನವನ್ನು , ಸಂಬಂಧಗಳನ್ನು , ದಿನನಿತ್ಯದ ಘಟನೆಗಳನ್ನೇ ವಿವಿಧ ಮಜಲುಗಳಿಂದ ,ಆಯಾಮದಿಂದ ವಿಶ್ಲೇಷಿಸಿ ನಮ್ಮ ಮುಂದೆ ಇಡುವ ಕಲೆ ಸ್ವಭಾವತಃ ಸಿದ್ಧಿಸಿರುತ್ತದೆ. ಜೀವನವನ್ನು ಆಳವಾಗಿ ಅನುಭವಿಸುವ ಅವರಿಗೆ ಕಥೆ , ಲೇಖನಗಳ ವೇದಿಕೆ ಅದನ್ನು ಅಭಿವ್ಯಕ್ತಿಸುವ ಅವಕಾಶ ಕೊಟ್ಟಿರುವುದು ಅಭಿವಂದನೀಯ . ಆ ಮಟ್ಟಿಗೆ “ಸ್ಪಂದನೆ” ಗೆ ಅಭೂತಪೂರ್ವ ಸ್ಪಂದನೆ ಸಿಗುವುದು ಖಚಿತ ಎಂದೇ ನನ್ನ ಭಾವನೆ
ಕ್ರಮಾನುಗತವಾಗಿ ಲೇಖಕಿಯರ ಲೇಖನಗಳನ್ನು ಓದುತ್ತಾ ಹೋದಾಗ ಆಚಲಾ ಬಿ ಹೆನ್ಲೀ ಅವರ “ ಅರ್ಥ ಅಪಾರ್ಥಗಳ ನಡುವೆ “ ಇಂದ ಆರಂಭವಾಗುವ ಪುಸ್ತಕ ನಮಗೆ ಪರಿಚಿತವಿರುವ ವಿಷಯಗಳಲ್ಲೇ ಹೊಸ ಲೋಕ ತೆರೆಸುತ್ತದೆ. ಹೇಗೆ ಭಾಷೆ ಶುದ್ಧ ಇರದಿದ್ದರೆ ವ್ಯಾಕರಣ ದೋಷ ನುಸುಳಿದರೆ ಮನಸ್ಸಿನ ಒಳ್ಳೆಯ ಆಶಯವೂ ಅಪಾರ್ಥವಾಗುತ್ತದೆ ಎಂಬುದನ್ನು ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ. ಇನ್ನು ನಾವೆಲ್ಲರೂ ಅನುಭವಿಸಿರುವ “ಗಿಫ್ಟ್ ಸೆಲೆಕ್ಷನ್” ದ್ವಂದದ ಮಾಯಲೋಕ ಅದರ ಉಪಯೋಗ ಅನುಪಯೋಗಗಳು , ಸಮಯದ ಒತ್ತಡ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನು ಬಾಲ್ಯದಲ್ಲಿ ಎಲ್ಲರೂ ಆಡಿರುವ “ಕಣ್ಣ ಮುಚ್ಚಾಲೆ ಆಟ” ಹೇಗೆ ಬದುಕು ವ್ಯಕ್ತಿಗಳು ಸಂಬಂಧಗಳು ಕೂಡ ನಮ್ಮ ಜೊತೆ ಕಣ್ಣು ಮುಚ್ಚಾಲೆ ಆಟ ಆಡುತ್ತದೆ ಎಂದು ವಿಶದವಾಗಿ ಮೂಡಿಸಿದ್ದಾರೆ. ಮಕ್ಕಳ ಬೆಳವಣಿಗೆಗೆ ಪೋಷಕರ ಸಹಕಾರ ಹೇಗೆ ಅಗತ್ಯ, ಅದು ಮೋಹದ ಬಲೆಯಲ್ಲಿ ಕುರುಡಾಗದೆ ಅವರ ನೈಜ ಪ್ರತಿಭೆಯನ್ನು ಹೊಮ್ಮಿಸಲು ಸಹಕಾರಿಯಾಗಲಿ ಎಂಬ ಆಶಯ “ ಗಿಡಕ್ಕೆ ಹೂವು ಚಂದ ತಾಯಿಗೆ ಮಗು ಚಂದ’ ಲೇಖನದ ಆಶಯ. ಇನ್ನು ಬೆಳೆಯಲಿ ಎಲ್ಲರಲ್ಲೂ ಪ್ರಶ್ನಿಸುವ ಮನೋಭಾವ ಮಕ್ಕಳಲ್ಲಿ ಸಹಜವಾಗಿರುವ ಮನುಷ್ಯನ ಬೆಳವಣಿಗೆಗೆ ಬೇಕಾದ ನೈಜ ಜಿಜ್ಞಾಸೆಯ ಬಗ್ಗೆ ಬೆಳಕು ಚೆಲ್ಲುತ್ತದೆ.ಇನ್ನು ಹಗಲು ರಾತ್ರಿಯೆನ್ನದೆ ಸಂಸಾರಕ್ಕಾಗಿ ಗಂಡ ಮಕ್ಕಳಿಗೆ ದುಡಿಯುವ ಹೆಣ್ಣು ಮಕ್ಕಳ ಮನಸ್ಸಿನ ತುಮುಲಗಳನ್ನು. ಕುಟುಂಬಕ್ಕಾಗಿ ಹೆಣ್ಣು ಮಾಡುವ ತ್ಯಾಗ ಹಾಗೂ ಗೃಹಿಣಿಯ ಆದಾಯದ ಬಗ್ಗೆ ಏಳುವ ಪ್ರಶ್ನೆಯನ್ನು “ ಗೃಹಿಣಿಗೆ ಆದಾಯವೆಂದರೆ ಬರೀ ಹಣವೊಂದೆಯೇ? “ ಎಂಬ ಲೇಖನದಲ್ಲಿ ಮನೋಜ್ಞವಾಗಿ ಕಟ್ಟಿ ಕೊಟ್ಟಿದ್ದಾರೆ . ಆ ಮೂಲಕ ಆದಾಯದ ದೃಷ್ಟಿಕೋನದಿಂದ ಅಳೆಯುವ ಮಾನದಂಡವನ್ನು ಒರೆಗೆ ಹಚ್ಚಿದ್ದಾರೆ ಶ್ರೀಮತಿ ಅಚಲ ಬಿ ಹೆನ್ಲೀ ಅವರು.
ಇದೇ ವಿಚಾರಧಾರೆಯನ್ನು “ಅನಿರ್ಧಿಷ್ಟಾವಧಿ ಕೆಲಸ” ಲೇಖನದ ಮೂಲಕ ಮುಂದುವರೆಸಿದ್ದಾರೆ ಶ್ರೀಮತಿ ಆಶ್ರಿತ ಕಿರಣ್ . 24/7 ಸಮಯ ಬೇಡುವ ಹೆಣ್ಣು ಮಕ್ಕಳ ಜವಾಬ್ದಾರಿ , ತ್ಯಾಗ ಅವರ ಒತ್ತಡ ಹಾಗೂ ಹೇಗೂ ಇದು ಹೆಣ್ಣು ಮಕ್ಕಳ ಕೆಲಸ ಹಾಗೂ ಕರ್ತವ್ಯ ಎಂದೇ ಬಿಂಬಿತವಾಗುವ ಗೃಹಿಣಿಯ ಕಾರ್ಯ ಬಾಹುಳ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ .ಇನ್ನು “ಅಸುರಕ್ಷತೆಯ ಭಾವ “ ಈಗಿನ ಜೀವನಶೈಲಿಯು ನಮ್ಮಲ್ಲಿ ಹುಟ್ಟುಹಾಕುವ ಭಯ, ತಿನ್ನುವ ಪ್ರತಿ ತುತ್ತಿನಲ್ಲಿಯೂ ವಿಷ ಬೆರೆತಿರಬಹುದಾದ ಅನುಮಾನದ ಅಸುರಕ್ಷತಾ ಭಾವವನ್ನು ಮನಮುಟ್ಟುವಂತೆ ಮೂಡಿಸಿದ್ದಾರೆ.ಇನ್ನು ಮನೆಯನ್ನು ಮಕ್ಕಳನ್ನು ಕಾಯುವ ಅಪ್ಪ ಅಜ್ಜನಾದಾಗ ಆತ ಸಂದರ್ಭಗಳನ್ನು ಸ್ವೀಕರಿಸುವ ಬಗೆ, ದೇಹ ಮನದ ಪಕ್ವತೆ ಹೀಗೆ ವ್ಯಕ್ತಿ ಒಬ್ಬನೇ ಆದರೂ ಅಪ್ಪ- ಅಜ್ಜರ ಪಾತ್ರದ ವಿಭಿನ್ನತೆಯ ಬಗೆಯನ್ನು ತೆರೆದಿಟ್ಟಿದ್ದಾರೆ. ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಗಳೇ ಬೇಕು ಎಂಬುವ ಪೋಷಕರ ಮನೋಭಿಲಾಷೆ, ಹೆಣ್ಣು ಮಕ್ಕಳ ಪೋಷಣೆ ,ಬೆಳವಣಿಗೆ ಹಾಗೂ ಆಕೆ ಮುಂದೆ ಜೀವನದ ಹಲವು ಪಾತ್ರಗಳಲ್ಲಿ ಮುಳುಗಿಹೋದಾಗ ಹೆತ್ತವರು ಒಳಪಡುವ ಧಾವಂತ ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ “ ಮಗಳೆಂಬ ಕನಸು” ಲೇಖನದಲ್ಲಿ ಬೆಳಕು ಚೆಲ್ಲುತ್ತಾರೆ .ಇನ್ನು ತಾಯಿಯ ನಿಸ್ವಾರ್ಥ ಪ್ರೀತಿ ಹಾಗೂ ತ್ಯಾಗವನ್ನು ರಾಧೇಯ ಕೃಷ್ಣ ಪ್ರೇಮಕ್ಕೆ ಹೋಲಿಸಿರುವುದು ಎಲ್ಲವಿಧದಲ್ಲೂ ಯುಕ್ತಪೂರ್ಣವಾಗಿದೆ. ಆಧುನೀಕತೆ ತಂದಿರುವ ಸವಾಲಿನಲ್ಲಿ ಮೊಬೈಲ್ ಗೀಳು ಕೂಡ ಒಂದು . ಇದನ್ನು ಬಿಡಿಸಿ ಪುಸ್ತಕದ ಓದಿಗೆ ಮನಸ್ಸನ್ನು ಹರಿಸುವ ಆಶಯದ ಲೇಖನ ಈಗಿನ ಅಗತ್ಯವೂ ಆಗಿದೆ. ಹೀಗೆ ಬಗೆ ಬಗೆಯ ವಿಷಯಗಳ ಬಗ್ಗೆ ವಿಶದವಾಗಿ ನಿರೂಪಿಸುವ ಆಶ್ರಿತ ಕಿರಣ್ ಅಭಿನಂದನೀಯರು.
ಇನ್ನು ಗಾಯತ್ರಿ ಅನಂತ್ ಅವರು “ ವಾಸವಿ ಜೀವನ ಚರಿತ್ರೆ “ ಮೂಲಕ ರಾಜನ ಅಡಿಯಾಳಾಗದೆ ಕುಟುಂಬದ ಮಾನ ರಕ್ಷಣೆಗೆ ಅಗ್ನಿಪ್ರವೇಶಗೈಯ್ಯುವ ಸಾಧ್ವಿ ವಾಸವಿಯ ಕಥೆ ನಮ್ಮ ಮನವನ್ನು ತಟ್ಟುತ್ತದೆ. ಆಂಧ್ರದಲ್ಲಿ ನಡೆದ ಕತೆಯಾದರೂ ನಮ್ಮ ಶ್ರೇಷ್ಠ ಕವಯತ್ರಿ ಪೂಜ್ಯ ಅಕ್ಕಮಹಾದೇವಿಯ ಜೀವನದ ಎಳೆಯಂತೆಯೇ ಇದೇ ವಾಸವಿ ದೇವಿಯ ಕಥೆ ಕೂಡ. “ ಮಾತೃ ದೇವೋಭಾವ ತಾಯಿಯ ಹಿರಿಮೆಯನ್ನು ಸಾರುವ ಹಿರಿದಾದ ವಸ್ತುವುಳ್ಳ ಲೇಖನ . ಹೆಣ್ಣಿನ ಬಾಳು ನಮ್ಮ ಜಾನಪದದಲ್ಲಿ ಹೇಗೆ ಬಿಂಬಿತವಾಗಿದೆ , ಆಡು ನುಡಿಯಲ್ಲೇ ಆಕೆಯ ತ್ಯಾಗ ಬಲಿದಾನ ಹಾಗೂ ಆಕೆಯ ಮಹತ್ವ ಹೇಗೆ ಮೂಡಿ ಬಂದಿದೆ ಎಂಬುದನ್ನು ಲೇಖನ “ ಹೆಣ್ಣಿನ ಬಾಳು : ಜಾನಪದರು ಕಂಡಂತೆ” ವಿವರಿಸುತ್ತದೆ. ಜಾನಪದ ಪದ್ಯಗಳ ಸಂಗ್ರಹ ಅದರ ಸಂದರ್ಭೋಚಿತ ಬಳಕೆಗೆ ಲೇಖಕಿಗೆ ಅಭಿನಂದನೆ ಸಲ್ಲಬೇಕು.ಇನ್ನು “ ನಾವು ಮತ್ತು ಸಂಘಗಳು “ ಲೇಖನ ಬರಹದ ದಾಸೋಹ ಜಾರಿಯಿಟ್ಟಿರುವಲ್ಲಿ ಸಂಘಗಳ ಪಾತ್ರ ಹಾಗೂ ಲೇಖಕಿಯರು ಇದನ್ನು ಬಳಸಿಕೊಂಡು ಬೆಳೆಯಬೇಕಾದ ಮಾರ್ಗ , ಜವಾಬ್ದಾರಿ ಹಾಗೂ ಸಹಕಾರದ ಪಾತ್ರದ ಬಗ್ಗೆ ವಸ್ತುನಿಷ್ಟವಾಗಿ ಬೆಳಕು ಚೆಲ್ಲುತ್ತದೆ. ಈ ಮೂಲಕ ಲೇಖಕಿ ಗಾಯತ್ರಿ ಅನಂತ್ ಮಹಿಳಾ ಹಾಗೂ ಯುವ ಬರಹಗಾರರಿಗೆ ಉತ್ತೇಜನ ನೀಡುವ ಅಗತ್ಯತೆಯ ಬಗ್ಗೆ ಅರಿವು ಚೆಲ್ಲಿದ್ದಾರೆ.
ಲೇಖಕಿ ರಶ್ಮಿ ಪ್ರಶಾಂತ್ “ ಸ್ನೇಹ ಒಂದಿದ್ದರೇ ಸಾಕು “ ಮೂಲಕ ಸ್ನೇಹ ಹೇಗೆ ಜೀವನದ ಬುನಾದಿ ಆಗುವದಲ್ಲದೆ ಸಾಮರಸ್ಯದ ಸೇತುವಾಗಬಲ್ಲದು ಎಂಬುದನ್ನು ಹೇಳುತ್ತಾ ಸ್ನೇಹ ಒಂದಿದ್ದರೆ ಸಾಕು ಜಗತ್ತು ಹೇಗೆ ಸುಂದರವಾಗುತ್ತದೆ ಎಂದು ವಿಶದೀಕರಿಸುತ್ತಾರೆ . ಅವರ ನಮ್ಮಮ್ಮ – ನಮ್ಮಪ್ಪ ನಿಜವಾಗಿಯೂ ಮನ ತಟ್ಟುವ ಲೇಖನ . ತಮ್ಮದೇ ಜೀವನಾನುಭವಗಳ ಮೂಲಕ ತಮ್ಮ ಅಪ್ಪ ಅಮ್ಮರ ತ್ಯಾಗ , ಅವರ ಪ್ರತಿಭೆ , ಆ ಪರಿ ಕೆಲಸದ , ಆರ್ಥಿಕ ಒತ್ತಡಗಳ ನಡುವೆಯೂ ಕಲಿಯುವ , ಕಲಿಸುವ ಮನೋಭಾವ ಅವರನ್ನು ನಾವು ನೋಡದೆಯೂ ಪೂಜ್ಯ ಭಾವವನ್ನು ಸ್ಪುರಿಸುತ್ತದೆಂದರೆ ತಪ್ಪಲ್ಲ. ಇನ್ನು “ ನನ್ನ ಅಸ್ಮಿತೆ “ ಲೇಖನ ಎಲ್ಲಾ ಹೆಣ್ಣು ಮಗಳ ಸ್ವಗತ ಹಾಗೂ ಆತ್ಮವಿಮರ್ಶೆ . ಎಲ್ಲ ಸಾಧನೆಯಿದ್ದರೂ ಮತ್ತೆ ಪ್ರಶ್ನೆಗೊಳಪಡುವ ಸಮಾಜದ ಪರಿಶೀಲನೆಯ ವಸ್ತುವಾಗುವ ಹೆಣ್ಣಿನ ಜೀವನದ ಕಟು ಸತ್ಯಗಳ ಪರಾಮರ್ಶೆ ಇಲ್ಲಿ ವಿಶದವಾಗಿದೆ.ಇನ್ನು ಸೌಂದರ್ವೆಂದರೆ ಲೇಖನ ಸೌಂದರ್ಯವನ್ನು ನೋಡುವ ಆರಾಧಿಸುವ ಮನಸ್ಥಿತಿಯೇ ಹೊರತು ಬರಿಯ ಬಾಹ್ಯದ ತೋರುಗಾಣಿಕೆಯಲ್ಲ ಎಂಬ ವಸ್ತುನಿಷ್ಟತೆ ಲೇಖಕಿಯ ವಿಷಯ ಪ್ರಸ್ತುತತೆಗೆ ಹಿಡಿದ ಕನ್ನಡಿ.
ಶಾರದ ವೀರೇಶ್ ಶೆಟ್ಟಿ ಯವರ ಬರಹಗಳು ಅರ್ಥಪೂರ್ಣವಾಗಿವೆ. “ ಹೂವೆ ನೀ ಒಲವೇ “ ಹೂವಿನ ಅಂದದ ವರ್ಣನೆಗೆ ಮೀಸಲಿಡದೆ ಬಸ್ನಲ್ಲಿ ಪ್ರಯಾಣಿಸುತ್ತಿರುವ ತಾಯಿ ತನ್ನ ಮಗುವಿನ ಗಮನವನ್ನು ತಾನು ಮುಡಿದುಕೊಂಡ ಹೂವಿನ ಮೇಲೆ ತಿರುಗಿಸಿ ಅದರ ಆಟವನ್ನು ನೋಡುತ್ತಾ ಅನುಭವಿಸುವ ತೃಪ್ತ ಮನಸ್ಥಿತಿ ಕೋಟಿ ದುಡ್ಡಿದ್ದರೂ ಸಿಗದಂತಹುದು. ಎಷ್ಟೆಲ್ಲ ಇದ್ದರೂ ಹೂ ಮುಡಿಯದಿದ್ದರೆ ವ್ಯರ್ಥ ಅಂತೆಯೇ ತೃಪ್ತಿ ಇರದಿದ್ದರೆ ಎಲ್ಲವೂ ವ್ಯರ್ಥ ಎಂಬುದನ್ನು ಸರಳವಾಗಿ ಮನೋಜ್ಞವಾಗಿ ಬಿಂಬಿಸಿದ್ದಾರೆ. ಹಾಗೆಯೇ ಗಂಡನ ಜೊತೆ ಆದ ಮನಸ್ತಾಪದಿಂದ ಮನೆ ಬಿಟ್ಟು ಹೊರಟು ಬಂದ ಹೆಣ್ಣಿನ ಮನಸ್ಥಿತಿ ಮಕ್ಕಳ ಪರಿಸ್ಥಿತಿಯ ಅರಿವಾಗಿ ವಾಪಸ್ಸು ಬಂದು ತನ್ಮೂಲಕ ಗಂಡನಿಗೂ ತನ್ನ ತಪ್ಪಿನ ಅರಿವುಗಾಣಿಸುವ ಅನುಭವದ ಸ್ಪಂದನೆ ಮನಮುಟ್ಟುತ್ತದೆ.ಇನ್ನು “ಅವರರವರ ಭಾವಕ್ಕೆ” ಆಟೋ ಡ್ರೈವರ್ ಹಾಗೂ ಪ್ರಯಾಣಿಕನೋರ್ವಣ ಸಹಜ ಸಂಭಾಷಣೆ ಆ ಮೂಲಕ ಮನೆಯಲ್ಲಿ ಸಂಸಾರ ಕಾಯುವ ಹೆಣ್ಣು ಮಕ್ಕಳ ಭಾವನೆಗೆ ಸ್ಪಂದಿಸುವ ಮನೋಭಾವ ಇರಬೇಕು ಎನ್ನುವ ಸಂದೇಶ ಕೊಡುವ ಸರಳ ಕಥೆ ಮೂಲಕ ಸಾರುವ ಶಾರದಾ ರವರು ತಮ್ಮ ನಿರೂಪಣೆಯಲ್ಲಿಯೇ ಓದುಗರನ್ನು ಗೆಲ್ಲುತ್ತಾರೆ. ಇನ್ನು ಅವರ “ ಕೋಪ ತುಂಬಾ ಕಾಸ್ತ್ಲೀ” ಕೋಪದ ಭಯಾನಕ ಪರಿಣಾಮಗಳನ್ನು ನಮ್ಮ ಮುಂದೆ ಇಡುತ್ತದೆ. ಕೊನೆಯಲ್ಲಿ ಉಳಿದದ್ದೇನು ಕಥೆ ಮದ್ಯವ್ಯಸನ ಗಂಡ ತಾನು ಕಂಡ ಭಯಾನಕ ಕನಸಿನ ಮೂಲಕ ವಾಸ್ತವದ ಅರಿವಾಗುವ ತನ್ಮೂಲಕ ಹೆಂಡತಿಯ ಹಾಗೂ ಮಕ್ಕಳ ಒಳಿತಿಗೆ ಕುಡಿತ ಬಿಡುವ ನಿರ್ಧಾರ ಕೈಗೊಳ್ಳುವ ನಿರೂಪಣೆ ಮನ ತಟ್ಟುವುದು ಸುಳ್ಳಲ್ಲ. ಸರಳ ನಿರೂಪಣೆ ಕಥೆಯ ಎಳೆಗಳಿಂದಲೇ ಶಾರದಾ ವೀರೇಶ್ ಶೆಟ್ಟಿ ಯವರು ಓದುಗರ ಮನವನ್ನು ಕದಿಯುತ್ತಾರೆ.
ಅಳಿಯ ಮಗನಾಗಲಾರೆನೇ ? ಒಂದು ವಿನೂತನ ಸಂಭಾಷಾನಾತ್ಮಕ ಲೇಖನ. ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಅಳಿಯನೂ ಅತ್ತೆ ಮಾವಂದಿರ ಹೊಣೆ ಹೊರುವ ಸಾಧ್ಯತೆ ಭಾದ್ಯತೆ , ಮಗಳ ತುಮುಲ ತಲ್ಲಣ , ತಲ ತಲಾಂತರದಿಂದ ಬಂದಿರುವ ಸಂಪ್ರದಾಯ , ಕಟ್ಟುಪಾಡು , ಬೀಗರ ಮುಂದೆ ಸಣ್ಣವರಾಗುವ ಹಾಗೂ ಮಗಳ ಮನೆಯಲ್ಲಿ ಇರುವ ಸಂಕೋಚ ಹೀಗೆ ಹತ್ತು ಹಲವಾರು ವಿಷಯಗಳ ಸುತ್ತ ಗಿರಕಿ ಹೊಡಿಸುತ್ತಾ ನಮ್ಮನ್ನು ಯೋಚನೆಗೆ ಹಚ್ಚುತ್ತಾರೆ ಲೇಖಕಿ ಶಶಿ ಶಂಕರ್ ಅವರು. ಹಾಗೆಯೇ ಆಸೆ ಪಡೋದು ತಪ್ಪಾ? ಕೂಡ ಒಂದು ವಿಮರ್ಶಾತ್ಮಕ ಲೇಖನವೇ ... ಎಷ್ಟು ಆಸೆ ಒಳ್ಳೆಯದು, ಇದ್ದುದರಲ್ಲಿಯೇ ತೃಪ್ತಿ ಮುಖ್ಯ ಹಾಗಂತ ನಮ್ಮ ಮನಸಿನಾಳದ ಬಯಕೆಗಳಿಗೆ ಎಷ್ಟು ಬೇಲಿ ಹಾಕಲು ಸಾಧ್ಯ ಹೀಗೆ ಪ್ರಶ್ನೆಗಳಲ್ಲಿಯೇ ಉತ್ತರ ಹುಡುಕುವ ಪ್ರಯತ್ನ ಶಶಿ ಶಂಕರ್ ಅವರದು. ಹಾಗೆ ಈಗ ಅತಿಯೆನ್ನುವಷ್ಟು ಆವರಿಸಿರುವ ಉಚಿತ ..ಉಚಿತ ಎಂಬುವ ಮಾರುಕಟ್ಟೆಯ ಕರೆ ಅಲ್ಲದೆ ಚುನಾವಣಾ ಪ್ರಣಾಳಿಕೆಗೂ ದಾಪುಗಾಲಿಟ್ಟಿರುವ ಉಚಿತ ಎಂಬ ಪದದ ಆಕರ್ಷಣೆಯಬಗ್ಗೆ ವಿಶದವಾಗಿ ವಿವರಿಸುತ್ತಾರೆ ಅಲ್ಲದೆ ಉಚಿತವಾಗಿ ದೊರೆಯುವ ಕೊಡಮಾಡುವ ವಸ್ತುಗಳ ಹಿಂದಿನ ಅಸಲಿ ಭಾವದ ಬಗ್ಗೆಯೂ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಸೆಳೆಯಲು ಸೃಷ್ಟಿಸುವ ಆಕರ್ಷಕವೆನಿಸುವ ಆದರೆ ತಪ್ಪು ಮಾಹಿತಿಯುಳ್ಳ ಸುದ್ದಿಗಳು ತರುವ ಅವಾಂತರ , ಅವುಗಳಿಂದ ಆಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಹಲವು ಮಜಲುಗಳ ವಿಶ್ಲೇಷನಾತ್ಮಕ ವಿಚಾರಗಳನ್ನು ಬರೆದಿದ್ದಾರೆ ತಮ್ಮ “ ತಪ್ಪು ಸುದ್ದಿಗಳು “ ಲೇಖನದಲ್ಲಿ. ಅಂತೆಯೇ ಅವರ “ ಸುಂದರ .. ಸುಮಧುರ ಈ ದಿನ “ ಲೇಖನದಲ್ಲಿ ಉಯ್ಯಲೆಯಂತೆ ಭೂತ ಹಾಗೂ ಭವಿಷ್ಯದ ಬಗ್ಗೆ ಯೋಚಿಸುತ್ತಾ ತನ್ನ ಪ್ರಸಕ್ತ ವರ್ತಮಾನದ ಅವಿಸ್ಮರಣೀಯವೆನಿಸದೆ ಕಳೆಯುವ ಮನದ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ಹೀಗೆ ತಮ್ಮ ವೈವಿಧ್ಯಮಯ ವಿಷಯಗಳಿಂದ ಲೇಖನದ ಗುಚ್ಛವನ್ನು ಶ್ರೀಮಂತವಾಗಿಸಿದ್ದಾರೆ ಶ್ರೀಮತಿ ಶಶಿ ಶಂಕರ್ ಅವರು.
“ಸ್ಪಂದನ “ ಲೇಖನ ಗುಚ್ಛದ ಸಹ ಸಂಪಾದಕಿ ಶುಭಾ ಶ್ರೀನಾಥ್ ಕೂಡ ತಮ್ಮ ಲೇಖನ ಗುಚ್ಚಗಳಲ್ಲಿ ಬಗೆ ಬಗೆ ವಿಷಯಗಳ ಬಣ್ಣವನ್ನು ಸೇರಿಸಿದ್ದಾರೆ. ಅವರ “ ಅಮ್ಮನ ಸೀರೆ” ಲೇಖನ ಅಮ್ಮಂದಿರ ತ್ಯಾಗದ ಮಮಕಾರದ ಇನ್ನೊಂದು ಪ್ರತೀಕ. ತಾಯಿಯ ತ್ಯಾಗ ಮತ್ತು ಪ್ರೀತಿ ತಾವು ಪೋಷಕರಾದಗಲೇ ತಿಳಿಯುವುದು ಎಂಬುವಂತೆ ಅವರ ತಾಯಿಯ ಸರಳ ಬದುಕು , ಇದ್ದುದರಲ್ಲಿಯೇ ಪರರಿಗೆ ಕೊಟ್ಟು ತಮ್ಮ ಪುಟ್ಟ ಇಷ್ಟಗಳಾದ ನೆಚ್ಚಿನ ಸೀರೆಯನ್ನೂ ದಾನಮಾಡುವ ಗುಣ ಎಲ್ಲರಿಗೂ ಬರುವುದಿಲ್ಲ. ಅವರ ಮಗ ನಾನು ನಿನಗೆ ಸೀರೆ ಕೊಡಿಸುತ್ತೇನೆ ಎಂಬ ಮಾತು ಎಲ್ಲ ತಾಯಂದಿರ ಕಣ್ಣಂಚಿನಲ್ಲಿ ಸಣ್ಣ ನೀರ ಹನಿ ತರುವುದು ಖರೆ. ಅವರ “ ಮಳೆನಹಳ್ಳಿ ಬ್ರಹ್ಮ ರಥೋತ್ಸವ “ ಹಳ್ಳಿಗಳ ಜಾತ್ರೆ , ತೇರು ಎಳೆಯುವಿಕೆಯ ಚಿತ್ರಣ ರಥ ಸಪ್ತಮಿಯ ಆಚರಣೆ ನಾವೇ ಖುದ್ದಾಗಿ ನೋಡಿದಷ್ಟು ನೈಜವಾಗಿ ಮೂಡಿ ಬಂದಿದೆ. ಇನ್ನು ಆಂತರಿಕ ಸೌಂದರ್ಯ ಲೇಖನ ಜನಗಣತಿಗೆಂದು ಮನೆ ಮನೆಗಳಿಗೆ ಹೋದಾಗ ಹಲವಾರು ಜನಗಳ ಮನೆ, ಮನಗಳ ಸ್ವಚ್ಛತೆ ಬಗ್ಗೆ ಅವರ ಒಳಗಿನ ಸಂಸ್ಕಾರದ ಬಗ್ಗೆ , ಮಾಹಿತಿ ಕಲೆಹಾಕಲು ಬರುವ ಉದ್ಯೋಗಿಗಳ ಜೊತೆ ಜನರ ವರ್ತನೆ ಹೇಗಿದೆ ಎಂಬುದರ ಬಗ್ಗೆ ವಿಶದವಾಗಿ ಬೆಳಕು ಚೆಲ್ಲುತ್ತಾರೆ. ಇನ್ನು “ ಹೆಚ್ಚಿದ ತೂಕ “ ತೂಕ ಇಳಿಸಿಕೊಳ್ಳುವ ಅದಕ್ಕೆ ಸಾಹಸ ಪಡುವ ಎಲ್ಲಾ ವ್ಯಕ್ತಿಗಳ ಅದರಲ್ಲೂ ಹೆಂಗಳೆಯರ ಕಷ್ಟಗಳ ಬಗ್ಗೆ ತಮಾಷೆಯ ಧಾಟಿಯಲ್ಲಿಯೇ ಗಂಭೀರ ಸಮಸ್ಯೆಯನ್ನು ಪರಿಚಯಿಸಿದ್ದಾರೆ. ಸಂಪಾದಕತ್ವದ ಜೊತೆ ತಾವೂ ಕೃತಿಗೆ ಲೇಖನದ ಗುಚ್ಚಗಳನ್ನು ಸೇರಿಸಿ ಕಲಾತ್ಮಕತೆ ತಂದಿರುವ ಶುಭಾ ಶ್ರೀನಾಥ್ ಅವರಿಗೆ ಅಭಿನಂದನೆಗಳು.
ಸಂಧ್ಯಾ ಶ್ಯಾಮ್ ಭಟ್ ಅವರು “ ನಮಗೆ ಹೊಸವರ್ಷ ಯುಗಾದಿಯಂದೆ” ಲೇಖನದ ಮೂಲಕ ಜನವರಿ 1 ರ ಹೊಸವರುಷದ ಆಚರಣೆಯ ಯುಕ್ತಾಯುಕ್ತತೆಯನ್ನು ಪ್ರಶ್ನಿಸಿದ್ದಾರೆ. ಪ್ರಕೃತಿಯಲ್ಲಿ ಯಾವ ಬದಲಾವಣೆ ತಾರದ ಬರಿಯ ಪಾಶ್ಚಾತ್ಯ ಅನುಕರಣೆಯುಳ್ಳ ಜನವರಿ 1 ರ ಪಾರ್ಟಿ ಪ್ರವೃತ್ತಿಗೂ ಬೇವು ಬೆಲ್ಲ ಹಂಚಿ ಋತು ಮಾನದ ಬದಲಾವಣೆಯ ಮೂಲಕ ಹೊಸ ವರುಷ ಬರಮಾಡುವ ಸಂಪ್ರದಾಯದ ಬೇರುಗಳನ್ನು ಗಟ್ಟಿ ಮಾಡುವ ಸಂಕಲ್ಪವನ್ನೂ ಲೇಖನ ತೆರೆದಿಡುತ್ತದೆ. ಹಾಗೆಯೇ ಸುಖದ ಮೂಲ ಎಲ್ಲಿದೆ ಲೇಖನ ಆತ್ಮವಿಮರ್ಶೆ ಗೆ ಜಿಜ್ಞಾಸೆಗೆ ನಮ್ಮನ್ನು ದೂಡುತ್ತದೆ. ತಾಯಿಯ ಪ್ರೀತಿಯ ಎತ್ತರ ಹಾಗೂ ಉಪ್ಪಿನ ರುಚಿಯ ಹದ ಯಾರಿಂದಲೂ ಮೀರಿಸಲು ಆಗುವುದಿಲ್ಲ. ಈ ಗಾದೆ ಮಾತಿನ ಅರ್ಥವನ್ನು ನೂಲಿನಂತೆ ಬಿಡಿಸಿ ಇಟ್ಟಿದ್ದಾರೆ ಲೇಖಕಿ ಸಂಧ್ಯಾ ರವರು. ಹಾಗೆಯೇ ಅವರ ಇನ್ನೊಂದು ಲೇಖನ “ ನಿಜವಾದ ಆತ್ಮಬಂಧು “ ಗಹನವಾದ ವಿಷಯವನ್ನು ಪ್ರಶ್ನೋತ್ತರ ರೂಪದಲ್ಲಿ ನಮ್ಮ ಮುಂದೆ ಇಟ್ಟಿದ್ದಾರೆ. ಭಗವಂತನೆ ಕೊನೆಗೆ ಎಲ್ಲ, ಆತನ ಕೃಪೆಯೇ ನಮ್ಮ ಗುರಿಯಾಗಬೇಕು ಎಂಬ ಆಶಯ ಈ ಲೇಖನದ್ದು. ಹಾಗೆಯೇ “ ಬದಲಾವಣೆ ಜಗದ ನಿಯಮ “ ಲೇಖನ ಕೂಡ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ, ಬದಲಾಗುತ್ತಿರುವ ಜೀವನಶೈಲಿಯಂತೆಯೇ ಜಗತ್ತು ಕೂಡ ಬದಲಾಗುತ್ತದೆ ಅದರಲ್ಲಿ ಸತ್ಯದ ಅನ್ವೇಷಣೆ ಸದಾ ಇರಬೇಕು ಸದಾಚಾರ , ಶಿಸ್ತು ಎಂದೂ ಇರಬೇಕು ಆಗ ಸಾರ್ವಕಾಲಿಕವಾಗಿ ಸಲ್ಲುತ್ತೇವೆ ಎಂಬ ಆಶಯ ಲೇಖನದ್ದಾಗಿದೆ. ಅಂತೆಯೇ ಹೆಣ್ಣು ಮಕ್ಕಳ ಶ್ರೇಷ್ಠತೆಯನ್ನು ಗರಿಮೆಯನ್ನು ತಮ್ಮ “ ಹೆಣ್ಣು ಬಾಳಿನ ಕಣ್ಣು “ ಲೇಖನದಲ್ಲಿ ಎತ್ತಿ ಹಿಡಿದಿದ್ದಾರೆ.
ಉಷಾ ಜಯರಾಂ ಅವರು ತಮ್ಮ ಲೇಖನಗಳಾದ “ ಅಂದದ ಹೆಣ್ಣಿಗೆ ಕಾಡಿಗೆ ಚಂದ”, “ ಶುಭ ಸಂಕೇತದ ಬಳೆಗಳು” ಹಾಗೂ “ ಕಾಲುಂಗುರ “ ಲೇಖನಗಳಲ್ಲಿ ನಮ್ಮ ಸಂಪ್ರದಾಯಿಕತೆ ಹಾಗೂ ಸಂಸ್ಕೃತಿಯೇ ಎನಿಸಿದ ಕಾಡಿಗೆ , ಬಳೆಗಳು ಹಾಗೂ ಕಾಲುಂಗುರಗಳ ಬಗ್ಗೆ ವಿಶದವಾಗಿ ವರ್ಣಿಸಿ ಅದರ ಹಿಂದಿನ ವೈಜ್ನಾನಿಕ ಕಾರಣಗಳನ್ನೂ ತೆರೆದಿಟ್ಟಿದ್ದಾರೆ. ಹಾಗೆಯೇ
“ಕಪ್ಪು ಬಿಳುಪು ದೂರದರ್ಶನ “ ಹಾಗೂ “ ಮೊದಲ ಸೈಕಲ್ ನೆನಪು” ಲೇಖನಗಳ ಮೂಲಕ ನಮ್ಮನ್ನು ಹಳೆಯ ಕಾಲಕ್ಕೆ ಒಯ್ದು ಸೈಕಲ್ ಸವಾರಿ ಹಾಗೂ ದೂರದರ್ಶನದ ಪ್ರಭಾವದ ಹಾಗೂ ಅದರೊಂದಿಗಿನ ಬಾಲ್ಯದ ಮಧುರ ಕ್ಷಣಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ.
ಕೊನೆಯ ಗುಚ್ಚದಲ್ಲಿ ವೀಣಾ ರಮೇಶ್ ಅವರು “ ಮತ್ಸರವೆಂಬ ಮದ್ದಿಲ್ಲದ ಖಾಯಿಲೆ” ಆತ್ಮವಿಶಾಸವೆಂಬ ಕಲ್ಪವೃಕ್ಷ ಅಲ್ಲದೆ ನಗು ಎಂಬ ಲೇಖನಗಳ ಮೂಲಕ ಅರಿಷಡ್ವರ್ಗಗಳಲ್ಲೊಂದಾದ ಮತ್ಸರ ತರುವ ಅಧೋಗತಿಯನ್ನು ತೆರೆದಿಟ್ಟಿದ್ದಾರೆ. ಅಲ್ಲದೆ ಮನುಷ್ಯನಿಗೆ ಆತ್ಮವಿಶ್ವಾಸ ಹಾಗೂ ನಗೆಯ ಬಲ ಇದ್ದರೆ ಎಲ್ಲವನ್ನೂ ಹೇಗೆ ಗೆಲ್ಲಬಹುದು ಎಂಬ ಸಂದೇಶ ಬೀರಿದ್ದಾರೆ .ಅಲ್ಲದೆ ತಪ್ಪು ಮಾಹಿತಿ ಕೊಡುವುದರಿಂದ ಬದುಕಿನಲ್ಲಿ ಆಗುವ ಅವಾಂತರಗಳನ್ನು ಹೇಳಿದರೆ , “ ತನು ಕರಗದವರು” ಸ್ಥೂಲ ಕಾಯದವರ ದೈಹಿಕ ಹಾಗೂ ಮಾನಸಿಕ ಬವಣೆಗಳನ್ನು ತೆಗೆದಿಡುತ್ತದೆ. ಮೂಢ ನಂಬಿಕೆಗಳು ಲೇಖನ ಆ ನಂಬಿಕೆಗಳು ಹುಟ್ಟಿರಬಹುದಾದ ಪರಿಸ್ಥಿತಿ ಹಾಗೂ ಪ್ರಸಂಗಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಹಾಗೂ ಅದರ ಆಚರಣೆ ಹಾಗೂ ದುಷ್ಪರಿಣಾಮಗಳ ಬಗ್ಗೆ ವಿಶದವಾಗಿ ಬೆಳಕು ಚೆಲ್ಲುತ್ತದೆ. ಇನ್ನೊಂದು ವಿಚಾರಾತ್ಮಕವಾದ ಲೇಖನ
ಗಂಡು- ಹೆಣ್ಣು ಸರಿ ಸಮಾನತೆ “ ಲಿಂಗ ತಾರತಮ್ಯದ ಬಗ್ಗೆ ಬೆಳಕು ಚೆಲ್ಲುತ್ತದೆ. ಅಲ್ಲದೆ ಅದನ್ನು ಮೀರಿ ಸಮಾನತೆಯ ಅಗತ್ಯವನ್ನು ಸಾರಿ ಹೇಳುತ್ತದೆ. ಹಾಗೆಯೇ ಸ್ಪಂದನದ ಲೇಖನಗಳ ಹೂಗುಚ್ಛ ಮುಗಿಯುತ್ತದೆ
ಕರುನಾಡ ಓದುಗ ದೊರೆಗಳು ಎಲ್ಲ ಒಳ್ಳೆಯ ಹೊತ್ತಗೆಯನ್ನು ಪ್ರೋತ್ಸಾಹಿಸುತ್ತಾರೆ. ಮನೆಯ ಗ್ರಂಥಾಲಯದಲ್ಲಿ ಇರಬೇಕಾದ ಪುಸ್ತಕ “ ಸ್ಪಂದನ”. ಇದನ್ನು ನಮಗೆ ಕೊಟ್ಟ ಶ್ರೇಯ ಬುಕ್ ಏಜನ್ಸೀಸ್ ಅವರ ಕಾಣಿಕೆ ಅಪಾರ.
"ಮೂಲತಃ ಸಂಶೋಧಕ ಪ್ರವೃತ್ತಿಯ ಕೃತಿಕಾರರು, ಒಂದು ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವುದರ ಜೊತೆ ಜೊತೆಗೆ ಒಂದು ಕೌಟ...
“ಈ ಕಾವ್ಯ ಅನುಸರಿಸಿದ್ದು ಸರಳ ಮಾದರಿಯ ತಂತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ವೈಯಕ್ತಿಕ ಬದುಕಿನ ನಿಷೇಧಗಳು, ಪಾಪ ಪ...
"ಪಾರಿಜಾತದ ಸುವಾಸನೆಯ ಕುರಿತಾದ ಒಂದು ಕವನ. ಬಹಳ ನಾಜೂಕಾದ, ದೂರ ದೂರದವರೆಗೂ ತನ್ನ ಘಮವನ್ನು ಹಬ್ಬಿ ಸೆಳೆಯುವ ಪುಷ್...
©2025 Book Brahma Private Limited.