Date: 15-12-2022
Location: ಬೆಂಗಳೂರು
“ಹೆಣ್ಣನ್ನು ಅನುಭವಿಸಲು ಇರುವ ಮೊದಲ ಹೆಸರು ಪ್ರೇಮವಾದರೆ ಕೊನೆಯ ಅಸ್ತ್ರ ಬಲಾತ್ಕಾರ. ಇದರ ನಡುವೆ ಆಕೆಯನ್ನು ವಿವಿಧ ಹಂತಗಳಲ್ಲಿ ದಂಡಿಸಿ ದೂಷಿಸಲಾಗುತ್ತದೆ. ವಿನಾ ಕಾರಣ ಜಾರಿಣಿಯ ಪಟ್ಟ ಹೊರೆಸಲಾಗುತ್ತದೆ. ನಂತರ ತಮಗೆ ಬೇಕಾದಂತೆ ಆಕೆಯ ಮನಸ್ಥಿತಿಯನ್ನು ತಿದ್ದಲಾಗುತ್ತದೆ. ಇಲ್ಲಿ ಕಂದೀಲು ಕಾದಂಬರಿಯ ಕಥಾ ಹೂರಣವೂ ಇದೇ ಆಗಿದೆ” ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಲೇಖಕ ಸೋಮು ರೆಡ್ಡಿ ಅವರ ‘ಕಂದೀಲು’ ಕೃತಿಯ ಕುರಿತು ಬರೆದಿದ್ದಾರೆ.
ಕಂದೀಲು
ಲೇಖಕ- ಸೋಮು ರೆಡ್ಡಿ
ಬೆಲೆ- 130
ಕನ್ನಡ ಸಾಹಿತ್ಯದಲ್ಲಿ ಪ್ರೇಮದ ವಿಷಯದ ನಂತರ ವೇಶ್ಯಾವೃತ್ತಿಗೆ ಸಂಬಂಧಿಸಿದಂತೆ ಬಂದಷ್ಟು ಕಥೆ ಕಾದಂಬರಿಗಳು ಇನ್ಯಾವ ವಿಷಯದಲ್ಲೂ ಬಂದಿರಲಿಕ್ಕಿಲ್ಲವೇನೋ. ಪ್ರೀತಿ ಪ್ರೇಮ ವಿರಹದ ಹಳಹಳಿಕೆಯ ನಂತರದ ಸ್ಥಾನ ಈ ವೇಶ್ಯೆಯರಿಗೆ ಸಂಬಂಧಿಸಿದ ವಿಷಯವೇ ಆಗಿರಬಹುದು. ಪ್ರತಿ ಲೇಖಕನಿಗೂ ಈ ವಿಷಯದ ಮೇಲೆ ಬರೆಯಬೇಕೆನ್ನುವ ಒಳತುಡಿತವೊಂದು ಇರುವುದನ್ನು ನಾನು ಗಮನಿಸಿದ್ದೇನೆ. ಗಿರಿಜಾ ಕಲ್ಯಾಣದಲ್ಲಿಯೂ ಹರಿಹರ ಬ್ರಹ್ಮಚಾರಿ ನಾರದನನ್ನು ವೇಶ್ಯಾಗೃಹಗಳಲ್ಲಿ ಓಡಾಡಿಸಿ ಅವನ ಬಾಯಿಂದಲೇ ವಾರಾಂಗನೆಯರ ವೈಭವವನ್ನು ವರ್ಣನೆ ಮಾಡಿಸಿರುವ ಅಧ್ಯಾಯವೊಂದಿದೆ. ಚಂಪೂ ಕಾವ್ಯಗಳಲ್ಲಿ ಹದಿನೆಂಟು ವರ್ಣನೆಗಳು ಬರಲೇ ಬೇಕು ಎಂಬ ನಿಯಮಕ್ಕೆ ಒಳಗಾಗಿ ಈ ವರ್ಣನೆಯಿದೆ ಎಂಬ ಮಾತುಗಳಿದ್ದರೂ ಚಂಪೂ ಕಾವ್ಯದಲ್ಲಿ ಹದಿನೆಂಟು ವರ್ಣನೆಗಳಲ್ಲಿ ಕಾಮಕನ್ನಿಕೆಯರ ವರ್ಣನೆ ಇರಲೇಬೇಕೆಂದು ಸೇರಿಸಿದ ಕುರಿತಾಗಿಯೇ ನನ್ನ ಅಸಮ್ಮತಿಯಿದೆ. ಅಂದರೆ ಚಂಪೂ ಕಾವ್ಯ ಬರೆದವರೆಲ್ಲರೂ ವೇಶ್ಯೆಯರ ಬಗ್ಗೆ ಮಾತಾಡಲೇಬೇಕು. ಯಾಕೆಂದರೆ ತಮ್ಮ ಕಾವ್ಯವನ್ನು ಚಪ್ಪರಿಸುವಂತೆ ಮಾಡಲು ಹೆಣ್ಣಿನ ಅಂಗಾಂಗಗಳ ವರ್ಣನೆ ಕಡ್ಡಾಯ ಎಂಬುದೊಂದು ನಿಯಮವಾಗಿಯೇ ರೂಪುಗೊಂಡಿದೆ ಎನ್ನಬಹುದೇನೋ.
ಇಷ್ಟಾಗಿಯೂ ಈ ಸೂಳೆಗಾರಿಕೆಯ ಕುರಿತಾಗಿ ಅಷ್ಟೊಂದು ಆಸಕ್ತಿ ನಮ್ಮೊಳಗೆ ಹೇಗೆ ಮೂಡುತ್ತದೆ? ಸಹಜವಾದ ಕಾಮವನ್ನು ವೈಭವಿಕರಿಸುತ್ತ ಸಾಗುವ ಪ್ರಕ್ರಿಯೆಯೊಂದರ ಮುಂದುವರಿದ ಭಾಗ ಇದು. ಅಷ್ಟಕ್ಕೂ ಈ ಕಾಮವನ್ನು ನೈಸರ್ಗಿಕ ಎಂದು ನೋಡದೇ ಅದನ್ನು ಹೆಚ್ಚುಗಾರಿಕೆ ಎಂದು ನೋಡುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತ ಹೋದರೆ ಮತ್ತೆ ಬಂದು ನಿಲ್ಲುವುದು ಗಂಡಸಿನ ದೌರ್ಬಲ್ಯದತ್ತಲೇ. ತನಗೆ ಬೇಕಾದ ಅತಿಕಾಮಕ್ಕಾಗಿ ಹೆಣ್ಣಿಗೆ ಗಂಡಿಗಿಂತ ಏಳುಪಟ್ಟು ಹೆಚ್ಚಿನ ಕಾಮವನ್ನು ಆರೋಪಿಸಿ ಅವಳನ್ನು ಸಂತೃಪ್ತಿಪಡಿಸುವ ಜವಾಬ್ಧಾರಿ ಹೊತ್ತಂತೆ ವರ್ತಿಸುವ ಗಂಡಸರಿಗೆ, ಹೆಚ್ಚಿನ ಕಾಮದಿಂದಷ್ಟೇ ತಮ್ಮ ಪೌರುಷವನ್ನು ಸಾಬೀತುಪಡಿಸಬಹುದು ಎಂಬ ಮೂಢನಂಬಿಕೆಯಲ್ಲಿ ಮುಳುಗಿ ಹೋದವರಿಗೆ ವೇಶ್ಯಾವಾಟಿಕೆ ಎಂಬುದು ಆಟದ ಮೈದಾನವಷ್ಟೇ. ಈ ಕಾರಣಕ್ಕಾಗಿಯೇ ಹಲವಾರು ಹೆಸರುಗಳಿಂದ ಹಲವಾರು ವಿಧದಲ್ಲಿ ಹೆಣ್ಣನ್ನು ಬಳಸಿಕೊಳ್ಳುತ್ತಲೇ ಇರುವುದು ಲಾಗಾಯತ್ತಿನಿಂದಲೂ ಬಂದ ರೂಢಿಯೇ ಆಗಿದೆ. ಹೆಣ್ಣನ್ನು ಅನುಭವಿಸಲು ಇರುವ ಮೊದಲ ಹೆಸರು ಪ್ರೇಮವಾದರೆ ಕೊನೆಯ ಅಸ್ತ್ರ ಬಲಾತ್ಕಾರ. ಇದರ ನಡುವೆ ಆಕೆಯನ್ನು ವಿವಿಧ ಹಂತಗಳಲ್ಲಿ ದಂಡಿಸಿ ದೂಷಿಸಲಾಗುತ್ತದೆ. ವಿನಾ ಕಾರಣ ಜಾರಿಣಿಯ ಪಟ್ಟ ಹೊರೆಸಲಾಗುತ್ತದೆ. ನಂತರ ತಮಗೆ ಬೇಕಾದಂತೆ ಆಕೆಯ ಮನಸ್ಥಿತಿಯನ್ನು ತಿದ್ದಲಾಗುತ್ತದೆ. ಇಲ್ಲಿ ಕಂದೀಲು ಕಾದಂಬರಿಯ ಕಥಾ ಹೂರಣವೂ ಇದೇ ಆಗಿದೆ.
ಯುವ ಕಾದಂಬರಿಕಾರ ಸೋಮು ತಮ್ಮ ಹೊಸ ಕಾದಂಬರಿಯಲ್ಲಿ ಹೀಗೆ ಅಸಹಾಯಕಳಾಗಿ ನೀತಿಗೆಟ್ಟವಳೆಂದು ಆಪಾದನೆ ಹೊತ್ತು, ಯಾರಿಂದಲೂ ಸಹಾಯ ಸಿಗದೇ ಹಸಿವೆಯಿಂದ ನರಳಿ, ಹೊಟ್ಟೆ ಪಾಡಿಗಾಗಿ ಊರಿನ ಸದ್ಗ್ರಹಸ್ತನ ಕುತಂತ್ರಕ್ಕೆ ಬಲಿಯಾಗಿ ನಂತರ ಮುಂಬೈನ ಕೆಂಪು ದೀಪದಲ್ಲಿ ನರಳಿ, ಹುಬ್ಬಳ್ಳಿಯಲ್ಲೂ ವೃತ್ತಿ ನಡೆಸಿದ ಹೆಣ್ಣೊಬ್ಬಳ ಕಥೆಯನ್ನು ಹೇಳುತ್ತಲೇ ವೇಶ್ಯಾವೃತ್ತಿಯ ಆಳ ಅಗಲಗಳನ್ನೂ ನಮ್ಮೆದುರು ಬೆತ್ತಲೆ ನಿಲ್ಲಿಸುತ್ತಾರೆ. ಈಗಾಗಲೇ ಕನ್ನಡದ ಬಹಳಷ್ಟು ಯುವ ಕಥೆಗಾರರು, ಕಾದಂಬರಿಕಾರರು ಈ ವಿಷಯವನ್ನು ಚರ್ವಿತಚರ್ವಣವನ್ನಾಗಿಸಿದರೂ ಮತ್ತೆ ಮತ್ತೆ ಆ ವಿಷಯ ಒಂದಿಲ್ಲೊಂದು ರೂಪದಲ್ಲಿ ನಮ್ಮೆದುರು ಕಾಣಿಸಿಕೊಳ್ಳುತ್ತದೆ. ಒಂದು ವಿಷಯ ಈಗಾಗಲೇ ಸಾಕಷ್ಟು ಸಲ ಚರ್ಚೆ ಆಗಿದೆ ಎಂಬುದು ಅರಿವಾದ ನಂತರವೂ ಅದೇ ವಿಷಯದ ಮೇಲೆ ಮತ್ತೊಂದು ಕಾದಂಬರಿಯನ್ನು ಬರೆದು ಗೆಲ್ಲಬಲ್ಲೆ ಎಂದು ಯೋಚಿಸುವುದಿದೆಯಲ್ಲ ಅದೇ ಬರಹಗಾರನಿಗಿರಬೇಕಾದ ಮೂಲಗುಣ ಎಂದು ನನಗನ್ನಿಸುತ್ತದೆ. ಹಾಗೆ ನೋಡಿದರೆ ಯಾವ ಹೆಣ್ಣೂ ಸ್ವತಃ ವೇಶ್ಯೆಯಾಗಲು ಬಯಸುವುದಿಲ್ಲ. ಪರಪುರುಷನ ಸಂಗ ಮಾಡಬೇಕಾದರೆ ಆಕೆಗಿರಬೇಕಾದ ಮಜಬೂರಿ ಅಥವಾ ಒತ್ತಡಗಳು ಹಲವಿರಬಹುದು. ಆ ವ್ಯಕ್ತಿಯ ಮೇಲೆ ಅಪಾರವಾದ ಪ್ರೀತಿ ಗೌರವಗಳಿರಬೇಕು ಅಥವಾ ಇನ್ನೇನು ಬದುಕಲು ಬೇರೆ ದಾರಿಯೇ ಇಲ್ಲದಂತಹ ಸಂದರ್ಭ ಎದುರಾಗಬೇಕು. ಈ ಕಾದಂಬರಿಯ ಕುಸುಮಿಯ ಸ್ಥಿತಿಯೂ ಅದೇ. ಕಟ್ಟಿಕೊಂಡ ಗಂಡ ರಂಗಪ್ಪ ಊರ ಗಣ್ಯ ದೇಸಾಯಿಯವರ ಮನೆಯಲ್ಲಿ ಕಂದಿಲು ಕೆಲಸ ಮಾಡುವವನು. ದೇಸಾಯಿಯವರ ವಾಡೆಯ ಸುತ್ತಲೂ ಕಂದಿಲನ್ನು ಬೆಳಗಿಸಿ ಮನೆ ಸುತ್ತ ಗಸ್ತು ತಿರುಗುತ್ತ ರಾತ್ರಿಯಿಡೀ ವಾಡೆಯನ್ನು ಕಾಯುವ ಕಾಯಕ ಅವನದ್ದು. ಹೀಗಾಗಿ ಚೆಂದುಳ್ಳಿ ಚಲುವೆ ಹೆಂಡತಿಯಿದ್ದರೂ ರಾತ್ರಿ ಮನೆಯಲ್ಲಿ ಮಲಗುವ ಅದೃಷ್ಟ ಅವನಿಗಿಲ್ಲ. ದೇಸಾಯಿ ಮನೆಯವರ ಸಂಕಟ ಕಳೆಯಲು ನಟ್ಟನಡು ರಾತ್ರಿ ಸುಡುಗಾಡಿಗೆ ಮಂತ್ರಿಸಿದ್ದನ್ನು ಹುಗಿದಿಡಲು ಹೋದವನು ಅಲ್ಲೇ ಹೆಣವಾಗುತ್ತಾನೆ. ಆಗ ಪ್ರಾರಂಭವಾಗುತ್ತದೆ ಅವನ ಹೆಂಡತಿ ಕುಸುಮಿಯ ಬಾಳಿನ ಹೊಯ್ದಾಟ. ಕುಲವೃತ್ತಿ ಮುಂದುವರೆಸಲು ಮಕ್ಕಳಿಲ್ಲ. ಗಂಡ ಸತ್ತಾಗ ಅನುಕಂಪ ತೋರಿ ಆಹಾರ ನೀಡಿದವರು ಎಷ್ಟು ದಿನವೆಂದು ಹಾಗೆ ಮಾಡಿಯಾರು? ಅದೆಲ್ಲಕ್ಕಿಂತ ಹೆಚ್ಚಾಗಿ ಯೌವ್ವನದಲ್ಲಿರುವ ಸುಂದರ ಹೆಣ್ಣು ಒಂಟಿಯಾಗಿದ್ದರೆ ಆಕೆ ಅದೆಷ್ಟು ಸಂಯಮ ತೋರಿದರೂ ಸೆರಗು ಜಾರಿಸಿದ ಅಪವಾದ ತಪ್ಪುವುದಿಲ್ಲ. ಮಗನನ್ನು ಪಡೆದು ಕುಲವೃತ್ತಿಯನ್ನು ಮುಂದುವರೆಸುವ ಆಸೆ, ಹೊಟ್ಟೆಗಿಲ್ಲದ ಸಂಕಟ ಎಲ್ಲವೂ ಸೇರಿ ಅನಿವರ‍್ಯವಾಗಿ ಮನೆಯ ಮುಂದೆ ಕಂದೀಲು ಹೊತ್ತಿಸಿ ದಂದೆಗಿಳಿದ ಕುಸುಮಿಯ ಬಾಳಿನ ಕಥೆ ಇಲ್ಲಿದೆ. ಕಥಾವಸ್ತುವೇನೋ ತೀರಾ
ಸರಳ ಎಂದೆನಿಸಿದರೂ ಅದನ್ನು ನಿರೂಪಿಸುವ ಭಿನ್ನತೆಯಲ್ಲಿಯೇ ಕಥೆಗಾರ ಸೋಮುರೆಡ್ಡಿ ಗೆಲ್ಲುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆ ಅದರ ಗಟ್ಟಿತನವನ್ನು ಕಾದಂಬರಿಗೂ ನೀಡಿದೆ. ಹೀಗಾಗಿ ಭಾಷೆಯ ಆಯ್ಕೆಯಲ್ಲಿ ಸೋಮು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಅದು ಅವರ ಆಡುಭಾಷೆಯೇ ಆಗಿರುವುದರಿಂದ ತೀರಾ ನಿರ್ಭೀಡೆಯಿಂದ, ಎಲ್ಲಿಯೂ ಭಾಷೆ ಮುಕ್ಕಾಗದಂತೆ ಧ್ವನಿಪೂರ್ಣವಾಗಿ ಮೂಡಿಬಂದಿದೆ. ಈ ಭಾಷೆಗೆ ಇರುವ ಸತ್ವವೇ ಅಂತಹುದ್ದು. ಒಬ್ಬ ಕರಾವಳಿ ಪ್ರದೇಶದ ಲೇಖಕ ಈ ವಿಷಯವನ್ನಿಟ್ಟುಕೊಂಡು ತಮ್ಮ ಭಾಷೆಯಲ್ಲಿ ಈ ಕಥೆಯನ್ನು ನಿರೂಪಿಸಲು ಹೊರಟಿದ್ದರೆ ಖಂಡಿತಾ ಸೋತುಹೋಗಬಹುದಾಗಿದ್ದ ವಿಷಯ ಇಲ್ಲಿ ಅವರ ಭಾಷೆಯಿಂದಾಗಿಯೇ ಗೆಲ್ಲುತ್ತದೆ ಎಂದರೆ ಅದು ಅತಿಶಯೋಕ್ತಿ ಏನಲ್ಲ.
ಕಾದಂಬರಿ ಎಂದರೆ ಎಷ್ಟೋ ಸಲ ಏಕತಾನತೆ ಹೊಮ್ಮುತ್ತದೆ. ಅದು ಸಹಜವೇ ಆದರೆ ಇಲ್ಲಿ ಕಥೆಯನ್ನು ಹೇಳಲು ಹೊರಟಿರುವ ಮಾರ್ಗ ಭಿನ್ನವಾಗಿದೆ. ಒಂದಿಷ್ಟು ಕಥೆಯನ್ನು ಪ್ರಸ್ತುತ ಪಡಿಸಿ ನಂತರ ಅವಲೋಕನ ಕ್ರಮದಿಂದ ಹಿಂದಿನದ್ದನ್ನೆಲ್ಲ ನೆನಪಿಸಿಕೊಳ್ಳುತ್ತ, ನಂತರ ಹಠಾತ್ತನೆ ವರ್ತಮಾನದೊಂದಿಗೆ ಬೆಸೆದುಕೊಂಡು ಕಥೆ ಸಾಗುವ ಈ ಪರಿಕ್ರಮವೇ ಕಾದಂಬರಿಯನ್ನು ಎಲ್ಲೂ ಬಣ್ಣ ಕಳೆದುಕೊಳ್ಳುವಂತೆ ನೋಡಿಕೊಳ್ಳುತ್ತದೆ. ಪ್ರತಿ ಘಟನೆಯ ನಿರೂಪಣೆಯ ಅಂತ್ಯದೊಂದಿಗೆ ಹೊಸದೊಂದು ಎಳೆಯನ್ನು ಎತ್ತಿಕೊಳ್ಳುವ ಚಾಕಚಕ್ಯತೆಯಲ್ಲಿ ಒಬ್ಬ ನುರಿತ ನಾಟಕಕಾರನ ನಟನೆಯ ಕಲೆಯಿದೆ. ಒಂದೊಂದು ಘಟನೆಯೂ ಹೊಸತೇ ಆದ ಒಂದು ಗುಟ್ಟನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆಯೇನೋ ಎಂದು ಭಾಸವಾಗುತ್ತ, ಆ ಗುಟ್ಟೇನಿರಬಹುದು ಎಂದು ಮುಂದಿನ ಓದಿಗೆ ಓದುಗ ತಕ್ಷಣ ಸಿದ್ಧವಾಗಿ ನಿಲ್ಲುವಂತೆ ಮಾಡುತ್ತದೆ. ಪ್ರತಿಯೊಂದು ವಿವರಣೆಯೂ ಮುಂದಿನ ಕಥೆಗಾಗಿ ತುದಿಗಾಲಲ್ಲಿ ನಿಂತು ಓದುಗನನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಲು ಯಶಸ್ವಿಯಾಗಿದೆ. ಎಲ್ಲಕ್ಕಿಂತಲೂ ಅಚ್ಚರಿಯೆಂದರೆ ಕಥೆಯೊಳಗಿನ ತಿರುವುಗಳು ಅನಿರೀಕ್ಷಿತವಾಗಿ ಎದ್ದು ನಿಂತು ನಾವು ಒಂದಿಷ್ಟೂ
ಊಹಿಸದ ರೀತಿಯಲ್ಲಿಯೇ ವರ್ತಿಸಲಾರಂಭಿಸಿ ಒಂದು ಕ್ಷಣ ಕಕ್ಕಾಬಿಕ್ಕಿಗೊಳಿಸುತ್ತದೆ. ಉದಾಹರಣೆಗೆ ಕುಸುಮಿಗೆ ತನ್ನ ಮಾವ ಅನಂತ ದೇಸಾಯಿ ಕೊಡುವುದಾಗಿ ಹೇಳಿದ್ದ ಹಳ್ಳದಂಚಿನ ಆಸ್ತಿಯನ್ನು ಕೊಡಿಸಲು ಬದ್ಧನಾಗಿದ್ದ ಶ್ರೀಪಾದ ಏಕಾಏಕಿ ಮನಸ್ಸು ಬದಲಾಯಿಸಿ ಆ ಕೆಲಸ ತನ್ನಿಂದಾಗದು ಎಂದು ಕೈಚೆಲ್ಲಿ ಬಿಡುತ್ತಾನೆ. ‘ಥೂ ಈ ಗಂಡಸರೇ ಇಷ್ಟು. ಬೇಕಾದಾಗ ಮೈಯ್ಯ ಸುಖ ಉಣ್ಣಲು ಬೇಕಾದಷ್ಟು ಆಶ್ವಾಸನೆ ನೀಡುತ್ತಾರೆ. ಆದರೆ ಅದ್ಯಾವಾಗ ಮನಸ್ಸು ಬದಲಾಯಿಸಿ ಕೈಕೊಡುತ್ತಾರೋ ಹೇಳಲಾಗದು’ ಎಂದು ಓದುಗ ಶಪಿಸಿಕೊಳ್ಳುತ್ತಿರುವಾಗಲೇ ತನ್ನ ಪಾಲಿಗೆ ಬರಬೇಕಾಗಿದ್ದ ಗದ್ದೆ ಬರಲಾರದು ಎಂದುಕೊಂಡ ಕುಸುಮಿ ಎಚ್ಚರ ತಪ್ಪಿ ಬಿದ್ದಾಗ ಹಗಲಲ್ಲಿ ಮುಟ್ಟಿಸಿಕೊಳ್ಳ ಬಾರದ ಜಾತಿಯಲ್ಲಿ ಹುಟ್ಟಿದ ಅವಳಿಗೆ ಯಾರನ್ನೂ ಲೆಕ್ಕಿಸದೇ ನೀರು ಕುಡಿಸಿ, ತಲೆಗೆ ನೀರು ತಟ್ಟಿ ಎಚ್ಚರಗೊಳಿಸುತ್ತಾನೆ. ಕುಸುಮಿಯಂತಹ ಹೆಣ್ಣುಗಳ ಸ್ಥಿತಿಯೇ ಇಷ್ಟು. ರಾತ್ರಿಯೆಲ್ಲ ರಮಿಸಿ ಮುದ್ದಾಡಿದ ಗಂಡು ಹಗಲಲ್ಲಿ ಮುಟ್ಟಿಸಿಕೊಳ್ಳುವುದಿಲ್ಲ. ಮನೆಯೊಳಗೆ ಸೇರಿಸುವುದಿಲ್ಲ. ರಾತ್ರಿ ದೇಹದ ಕಣಕಣವನ್ನೂ ಆಸ್ವಾದಿಸಿದಾತನಿಗೆ ಹಗಲಲ್ಲಿ ಅವಳು ಹನಿ ನೀರಿಗಾಗಿ ಗೋಗರೆಯುತ್ತ ಸಾಯುತ್ತ ಬಿದ್ದರೂ ಕನಿಕರವಾಗುವುದಿಲ್ಲ. ಇಚ್ಟಕ್ಕೂ ಇಲ್ಲಿ ಇಂತಹ ಸೂಳೆಗಾರಿಕೆಗೆ ಇಳಿಯುವವರು ಸಾಮಾಜಿಕವಾಗಿ ಕೆಳವರ್ಗದವರು ಎಂದು ನಾವೇನು ಬಹಿಷ್ಕರಿಸಿದ್ದೇವೋ ಅವರೇ. ಯಾವ ಉನ್ನತ ಕುಲದ ಸ್ತ್ರೀಯರೂ ವೇಶ್ಯೆಯರಾಗುವುದಿಲ್ಲ ಎಂಬುದನ್ನು ನಾವು ಗಮನಿಸಬೇಕಿದೆ. ಅಂದಹಾಗೆ ವೇಶ್ಯೆ ಎನ್ನುವ ಬದಲು ದೇವದಾಸಿ ಎನ್ನುವ ಹೆಸರಿಟ್ಟು ಮುತ್ತನ್ನು ಕಟ್ಟಿಸಿಕೊಳ್ಳುವ ಸ್ತ್ರೀಯರದ್ದೂ ಬೇರೇನಿಲ್ಲ. ದೇವರ ಹೆಸರಿನಲ್ಲಿ ಬಯಸಿ ಬಂದ ವಟುಗಳಿಗೆ ದೇಹವನ್ನೊಪ್ಪಿಸಬೇಕು. ಇಂತಹ ಅವಮಾನಗಳು ಕೇವಲ ಕೆಳ ವರ್ಗದ ಮಹಿಳೆಯರಿಗೆ ಮಾತ್ರ ಆಗುವಂತಹುದ್ದು ಎಂಬುದನ್ನು ಗಮನಿಸಬೇಕು.
ಅನಂತ ದೇಸಾಯಿಯವರು ತನ್ನ ಗಂಡನ ಸಾವಿಗಾಗಿ ಕೊಡುತ್ತೇನೆ ಎಂದಿದ್ದ ಹೊಲವನ್ನು ತೆಗೆದುಕೊಂಡು ಬೆಳೆ ತೆಗೆದು ಚಂದದ ಬಾಳುವೆ ಮಾಡಬೇಕು, ತನ್ನ ಕುಲ ಕಸುಬಾದ ಕಂದೀಲು ಹಿಡಿಯುವ ಕಾಯಕವನ್ನು ಮುಂದುವರೆಸಿ ಒಂದು ಗೌರವಯುತವಾದ ಬಾಳನ್ನು ಕಟ್ಟಿಕೊಳ್ಳಬೇಕು, ಮಗನನ್ನು ಓದಿಸಿ ದೊಡ್ಡವನ್ನಾಗಿ ಮಾಡಬೇಕು ಎಂದೆಲ್ಲ ಕನಸು ಕಟ್ಟಿಕೊಂಡು ಹೋರಾಟದ ಬಾಳೇವು ಮಾಡುತ್ತಲೇ ಬಂದ ಕುಸುಮಿಯನ್ನು ಕಾದಂಬರಿಕಾರ ಕೊನೆಯಲ್ಲಿ ಸಾಯಿಸುವುದರ ಬದಲಾಗಿ ಅವಳ ಹೋರಾಟಕ್ಕೊಂದು ಜಯ ದೊರಕಿಸಿಕೊಟ್ಟಿದ್ದರೆ ಅತ್ಯಂತ ತಾರ್ಕಿಕ ಅಂತ್ಯವಾಗುತ್ತಿತ್ತು ಎಂದು ಓದಿದಾಗಲೆಲ್ಲ ಅನ್ನಿಸಿದ್ದಿದೆ. ಸೋಮುವಿನಂತಹ ದೃಢ ಮನಸ್ಸಿನ ಯುವಕರು ತಮ್ಮ ಕಥೆ, ಕಾದಂಬರಿಗಳಲ್ಲಾದರೂ ಇಂತಹ ಅಸಹಾಯಕ, ಅಸ್ಪçಶ್ಯ ಹೆಣ್ಣುಗಳ ಬದುಕಿನ ಹೋರಾಟಕ್ಕೆ ಜಯ ದೊರಕಿಸಿ ಕೊಟ್ಟರೆ ಇದೇ ದಾರಿಯಲ್ಲಿ ನರಳುತ್ತಿರುವ ಅದೆಷ್ಟೋ ಅಸಹಾಯಕ ಮಹಿಳೆಯರಿಗೆ ನೈತಿಕ ಬೆಂಬಲ ದೊರಕಿಸಿ, ಹೊಸದೊಂದು ಬದುಕುವ ಛಲವನ್ನು ಮೂಡಿಸಿ, ಅವರ ಬಾಳಿನಲ್ಲೂ ಕಂದೀಲು ಬೆಳಗುವ ಸಾಧ್ಯತೆಗಳುಂಟು ಎನ್ನುವ ನಂಬಿಕೆ ಹುಟ್ಟಿಸಿ ಬದುಕುವ ಭರವಸೆ ಕೊಡುವ ಮನಸ್ಸು ಮಾಡಿದ್ದರೆ ಅದೊಂದು ಉತ್ತಮ ಅಂತ್ಯವಾಗುತ್ತಿತ್ತು. ಒಂದಿನಿತೂ ಭಾವನೆಗಳು ಬೆನ್ನಿಗೆ ಅಂಟಬಾರದ ವೃತ್ತಿಯಲ್ಲಿದ್ದರೂ ಅತ್ಯಂತ ಸೂಕ್ಷ್ಮ ಸಂವೇದನೆಯ ಕಾದಂಬರಿ, ನಾಟಕಗಳನ್ನು ಬರೆಯುತ್ತಿರುವ ಸೋಮುವಿನಿಂದ ಇನ್ನೂ ಹೆಚ್ಚಿನ ನಿರೀಕ್ಷೆಯಿದೆ.
ಈ ಅಂಕಣದ ಹಿಂದಿನ ಬರಹಗಳು:
ಕಿರಿದರಲ್ಲೇ ಮೆರೆವ ಹಿರಿತನದ ಚುಟುಕುಗಳು
ಹಾಸ್ಯದ ಲೇಪನವಿಟ್ಟು ಮಕ್ಕಳ ಮನಸ್ಥಿತಿಯನ್ನು ಬಿಂಬಿಸುವ ಕಥೆಗಳು
ಭೂತ ವರ್ತಮಾನಗಳ ಬೆಸೆಯುವ ಕಥಾನಕ
ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ
ತಣ್ಣಗೆ ಕಥೆಯಾಗಿ ಹರಿಯುವ ಗಂಗಾವಳಿ
ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.