Date: 25-03-2022
Location: ಬೆಂಗಳೂರು
'ಒಂದು ಬಾಶೆಯಲ್ಲಿ ಲಿಪಿಯನ್ನು ಸಂಯೋಜಿಸುವಾಗ ಇಲ್ಲವೆ ಬಳಸುವಾಗ ಆ ಬಾಶೆಯ ದ್ವನಿಮಾಗಳು ಯಾವು ಮತ್ತು ಎಶ್ಟು ಎಂಬುದನ್ನು ತಿಳಿದುಕೊಳ್ಳಬೇಕು. ಲಿಪಿ ಎನ್ನುವುದು ಬಾಶೆಯನ್ನು ಬರಹದ ರೂಪಕ್ಕಿಳಿಸುವ ಪ್ರಯತ್ನ' ಎನ್ನುತ್ತಾರೆ ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಭಾರತದ ಬರೆವ ಲಿಪಿಯ ಉದಯದ ಕುರಿತು ವಿಶ್ಲೇಷಿಸಿದ್ದಾರೆ.
ಬಾಶೆ ಎನ್ನುವುದು ಮನುಶ್ಯ ಪ್ರಾಣಿಗೆ ಸಾದ್ಯವಾಗಿರುವ ಒಂದು ವಿಶಿಶ್ಟ ಕಸುವು. ಮಾತನಾಡುವ ಮತ್ತು ಆಲೋಚಿಸುವ ಕಸುವು ಮನುಶ್ಯ ಪ್ರಾಣಿಗೆ ದಕ್ಕಿದ್ದರಿಂದ ಬೂಮಿಯ ಮೇಲಿನ ಇತರೆಲ್ಲ ಜೀವಿಗಳಿಗಿಂತ ಇದು ಬಿನ್ನವಾಗಿ ಬೆಳೆಯುವುದಕ್ಕೆ ಸಾದ್ಯವಾಗಿದೆ. ಒಬ್ಬ ವ್ಯಕ್ತಿಗೆ ಒಂದು ಬಾಶೆ ಬರುತ್ತದೆ ಎಂದರೆ ಆ ಬಾಶೆಯನ್ನು ಮಾತನಾಡಲು ಮತ್ತು ಅರ್‍ತ ಮಾಡಿಕೊಳ್ಳಲು ತಿಳಿದಿದೆ ಎಂದರ್‍ತ. ಬಾಶೆಯಲ್ಲಿ ದ್ವನಿ, ಪದ, ವಾಕ್ಯ, ಅರ್‍ತ ಹೀಗೆ ವಿವಿದ ಗಟಕಗಳು ಇರುತ್ತವೆ. ಇದರಲ್ಲಿ ಮನುಶ್ಯ ವಾಸ್ತವದಲ್ಲಿ ಉಚ್ಚರಿಸುವುದು ಏನನ್ನು? ದ್ವನಿಯನ್ನು ಮಾತ್ರ ಮನುಶ್ಯರು ಉಚ್ಚರಿಸಬಹುದು. ಬಾಶೆಯ ಉಳಿದ ಯಾವುದೆ ಗಟಕವನ್ನು ಉಚ್ಚರಿಸಲು ಸಾದ್ಯವಿಲ್ಲ. ಆದ್ದರಿಂದ ದ್ವನಿ ಬಾಶೆಯ ಮೂಲಬೂತ ಗಟಕ. ಬಾಯಿಯ ನಿರ್‍ದಿಶ್ಟ ಅಂಗಗಳ ಸಹಾಯದಿಂದ ಉಚ್ಚರಿಸಲಾದ ದ್ವನಿಯ ಸಹಾಯದಿಂದ ಉಳಿದ ಗಟಕಗಳನ್ನು ಕಟ್ಟಲಾಗುತ್ತದೆ. ದ್ವನಿಗಳನ್ನು ನಿರ್‍ದಿಶ್ಟವಾದ ಅನುಕ್ರಮದಲ್ಲಿ ಹೊಂದಿಸಿ ಪದಗಳನ್ನೂ ಪ್ರತ್ಯಯಗಳನ್ನೂ ಕಟ್ಟಲಾಗುತ್ತದೆ. ಇವುಗಳನ್ನು ಕಟ್ಟುವುದಕ್ಕೆ ಬಳಸುವ ‘ನಿರ್‍ದಿಶ್ಟ ಅನುಕ್ರಮ’ ಎಂದರೇನು ಎಂದರೆ ಕಾಲಾಂತರದಲ್ಲಿ ಸಮಾಜ ಒಪ್ಪಿಕೊಂಡು ಬಂದುದು ಎಂದು ಮಾತ್ರ ಉತ್ತರಿಸಬಹುದು. ಹೀಗೆ ಕಟ್ಟಿದ ಪದಗಳಿಗೆ ಆಯಾ ನಿರ್‍ದಿಶ್ಟ ಸಮಾಜದಿಂದ ಅರ್‍ತ ಬಂದು ಆರೋಪಿತಗೊಳ್ಳುತ್ತದೆ. ಹೇಗೆ ಬರುತ್ತದೆ ಎಂಬುದಕ್ಕೂ ಸರಳವಾಗಿ ಉತ್ತರಿಸಲು ಸಾದ್ಯವಿಲ್ಲ. ಪ್ರತ್ಯಯಗಳು ಸಾಮಾನ್ಯವಾಗಿ ಆ ಬಾಶೆಯ ವ್ಯಾಕರಣದ ಕೆಲಸವನ್ನು ಹೊತ್ತುಕೊಂಡಿರುತ್ತವೆ. ಈ ಪ್ರತ್ಯಯಗಳ ರಚನೆ, ಬಳಕೆ ಮೊದಲಾದವು ಬೆಳೆದು ಬಂದ ಬಗೆ ಕೂಡ ಉತ್ತರಿಸಲು ಸುಲಬವಾಗಿ ಸಾದ್ಯವಿಲ್ಲದ ಸಂಕೀರ‍್ಣ ಬೆಳವಣಿಗೆ. ಪದ ಮತ್ತು ಪ್ರತ್ಯಯಗಳನ್ನು ಒಟ್ಟಿಗೆ ಆಕ್ರುತಿಮಾ ಎಂದು ಕರೆಯಲಾಗುತ್ತದೆ. ಹೀಗೆ ಮೊದಲ ಹಂತದಲ್ಲಿ ಪದಗಳನ್ನು ಕಟ್ಟಿದ ನಂತರ, ಎರಡನೆ ಹಂತದಲ್ಲಿ ಈ ಪದಗಳನ್ನು ನಿರ್‍ದಿಶ್ಟವಾದ ಅನುಕ್ರಮದಲ್ಲಿ ಹೊಂದಿಸಿ ವಾಕ್ಯವನ್ನು ತಯಾರಿಸಲಾಗುತ್ತದೆ. ಇಲ್ಲಿ ಮತ್ತೊಮ್ಮೆ ಬಳಸಿರುವ ‘ನಿರ್‍ದಿಶ್ಟ ಅನುಕ್ರಮ’ ಎನ್ನುವುದು ಆಯಾ ಬಾಶೆಗೆ ನಿರ್‍ದಿಶ್ಟವಾಗಿದ್ದು ಇತಿಹಾಸಿಕ ಬೆಳವಣಿಗೆಯನ್ನು ಪಡೆದುಕೊಂಡಿರುತ್ತದೆ. ಪದ ಹಂತದಲ್ಲಿ ಕಾಣಿಸುವ ಅರ್‍ತ ವಾಕ್ಯ ಹಂತದಲ್ಲಿ ಬೇರೆ ರೀತಿಯಲ್ಲಿ ಪರಿಪೂರ‍್ಣತೆಯೊಂದಿಗೆ ದೊರೆಯುತ್ತದೆ. ಹೀಗೆ ಅರ್‍ತವೊದಗುವುದಕ್ಕೂ ಇತಿಹಾಸಿಕ ಬೆಳವಣಿಗೆ ಇರುತ್ತದೆ. ಒಟ್ಟಾರೆ ಬಾಶೆಯಲ್ಲಿ ಮೂಲಬೂತ ಗಟಕ ದ್ವನಿ.
ಬಾಶೆಯ ಮೂಲಬೂತವಾದ ಗಟಕವಾಗಿರುವ ದ್ವನಿ ಆ ಬಾಶೆಯನ್ನು ಬರಹದ ರೂಪಕ್ಕೆ ಇಳಿಸುವಾಗಲೂ ಮೂಲಬೂತವಾದ ಗಟಕವಾಗುತ್ತದೆ. ಒಂದು ಬಾಶೆಗೆ ಲಿಪಿಯನ್ನು ಹೇಗೆ ಸಂಯೋಜಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬೇಕು. ಪಾರಂಪರಿಕ ವ್ಯಾಕರಣದಲ್ಲಿ ಉಚ್ಚರಣೆಯ ದ್ವನಿಗಳನ್ನು ಸೂಕ್ಶ್ಮವಾಗಿ ಗಮನಿಸಿ ಅವುಗಳನ್ನು ಅಕ್ಶರ, ವರ‍್ಣ ಮೊದಲಾದ ಪದಗಳಿಂದ ಕರೆಯಲಾಯಿತು. ಕನ್ನಡದಲ್ಲಿ ಶುದ್ದಗೆ ಎಂಬ ಪದವನ್ನೂ ಬಳಸಲಾಗಿದ್ದಿತು. ಆದುನಿಕ ಬಾಶಾವಿಗ್ನಾನ ದ್ವನಿ, ದ್ವನಿಮಾ ಮತ್ತು ಅಕ್ಶರ ಎಂಬ ಬಿನ್ನ ಪರಿಕಲ್ಪನೆಗಳನ್ನು ಬೆಳೆಸುತ್ತದೆ. ‘ದ್ವನಿ’ ಮಾನವ ದೇಹದ ಮುಕದ ನಿರ್‍ದಿಶ್ಟ ಅಂಗಗಳ ಸಹಾಯದಿಂದ ಉಚ್ಚರಿಸುವಂತದ್ದು. ‘ದ್ವನಿಮಾ’ ಸಮಾನ ದ್ವನಿಗಳ ರಚನೆಯನ್ನು ಹೊಂದಿರುವ ಎರಡು ಪದಗಳಲ್ಲಿ ನಿರ್‍ದಿಶ್ಟ ಸ್ತಾನದ ಒಂದು ದ್ವನಿ ಮಾತ್ರ ಬಿನ್ನವಾಗಿದ್ದು, ಈ ಬಿನ್ನತೆಯಿಂದಾಗಿ ಆ ಎರಡು ಪದಗಳ ನಡುವೆ ಅರ್‍ತವ್ಯತ್ಯಾಸಕ್ಕೆ ಕಾರಣವಾಗುವಂತದ್ದು. ಇವುಗಳಲ್ಲಿ ದ್ವನಿ ವಾಸ್ತವ, ಇದನ್ನು ಉಚ್ಚರಿಸಲಾಗುತ್ತದೆ. ಹೀಗೆ ಉಚ್ಚರಿಸುವ ದ್ವನಿಗಳಲ್ಲಿ ಸಾಮಾನ್ಯವಾಗಿ ಬರಿಯ ಕಿವಿಯಿಂದ ಕೇಳಿ ಗುರುತಿಸಲು ಸಾದ್ಯವಾಗದ ಸಾಕಶ್ಟು ಬಿನ್ನತೆಗಳು ಇರುತ್ತವೆ. ಹೀಗೆ ಸೂಕ್ಶ್ಮವಾದ ವ್ಯತ್ಯಾಸಗಳನ್ನು ಹೊಂದಿ, ಸಮಾನ ಗುಣಗಳನ್ನು ಹೊಂದಿರುವ ದ್ವನಿಗಳ ಒಂದು ಪ್ರತಿನಿದಿಯನ್ನು ದ್ವನಿಮಾ ಎನ್ನಲಾಗುತ್ತದೆ. ಹೀಗಾಗಿ ದ್ವನಿಮಾ ಅದ್ಯಯನಾನುಕೂಲಕ್ಕಾಗಿ ಪರಿಕಲ್ಪಿಸಿಕೊಂಡಿರುವಂತದ್ದು, ಇದು ಕಾಲ್ಪನಿಕ. ಪದವನ್ನು ಕಟ್ಟುವಲ್ಲಿ ರಚನೆಯ ಅವಶ್ಯಕತೆಗೆ ತಕ್ಕಂತೆ ಬರುವುದು ‘ಅಕ್ಶರ’. ಅಂದರೆ, ಪದವನ್ನು ಕಟ್ಟುವಲ್ಲಿ ಬಳಕೆಯಾಗುವ ದ್ವನಿಗಳಲ್ಲಿ ಸ್ವರ ತನ್ನಶ್ಟಕ್ಕೆ ಸ್ವತಂತ್ರವಾಗಿ ಬಳಕೆಯಾದರೆ ವ್ಯಂಜನ ಸಾಮಾನ್ಯವಾಗಿ ಸ್ವರಾಶ್ರಯದಲ್ಲಿ ಬಳಕೆಯಾಗುತ್ತವೆ. ಹಾಗಾಗಿ ಸ್ವರ ತನ್ನಶ್ಟಕ್ಕೆ ಅಕ್ಶರವಾದರೆ, ವ್ಯಂಜನ ಸ್ವರಾಶ್ರಯದಲ್ಲಿ ಒಂದು ಅಕ್ಶರವಾಗುತ್ತದೆ. ಹೀಗೆ ಅಕ್ಶರಗಳಲ್ಲಿ ಪ್ರತಿ ಬಾಶೆಯಲ್ಲಿ ವಿಬಿನ್ನ ರಚನೆಗಳು ಇರುತ್ತವೆ. ಹೀಗೆ ದ್ವನಿ, ದ್ವನಿಮಾ ಮತ್ತು ಅಕ್ಶರ ಎಂಬ ಮೂರು ಗಟಕಗಳು ಬಿನ್ನವಾಗಿವೆ. ಇವುಗಳಲ್ಲಿ ಲಿಪಿಯನ್ನು ಕಲ್ಪಿಸಿಕೊಳ್ಳಲು ಸಾದ್ಯವಾಗುವಂತದ್ದು ಸಮಾನ ರಚನೆಯ ಎರಡು ಪದಗಳಲ್ಲಿ ನಿರ್‍ದಿಶ್ಟ ಸ್ತಾನದಲ್ಲಿ ಬಂದು, ಆ ಪದಗಳ ನಡುವೆ ಅರ್‍ತವ್ಯತ್ಯಾಸಕ್ಕೆ ಕಾರಣವಾಗಿ, ದ್ವನಿಮಾ ಸ್ತಾನವನ್ನು ಪಡೆದುಕೊಳ್ಳುವ ದ್ವನಿಗಳಿಗೆ. ಉಚ್ಚರಿಸುವ ಪ್ರತಿ ದ್ವನಿಗೂ ಲಿಪಿಯನ್ನು ಮಾಡಿಕೊಳ್ಳುವುದು ಅಸಾದ್ಯ ಮತ್ತು ಅನವಶ್ಯಕ. ಹಾಗಾಗಿಯೆ ಅದ್ಯಯನದ ಅನುಕೂಲಕ್ಕಾಗಿ ದ್ವನಿಮಾಗಳನ್ನು ಕಲ್ಪಿಸಿಕೊಳ್ಳಲಾಗಿದೆ.
ಒಂದು ಬಾಶೆಯಲ್ಲಿ ಲಿಪಿಯನ್ನು ಸಂಯೋಜಿಸುವಾಗ ಇಲ್ಲವೆ ಬಳಸುವಾಗ ಆ ಬಾಶೆಯ ದ್ವನಿಮಾಗಳು ಯಾವು ಮತ್ತು ಎಶ್ಟು ಎಂಬುದನ್ನು ತಿಳಿದುಕೊಳ್ಳಬೇಕು. ಲಿಪಿ ಎನ್ನುವುದು ಬಾಶೆಯನ್ನು ಬರಹದ ರೂಪಕ್ಕಿಳಿಸುವ ಪ್ರಯತ್ನ. ಮನದ ಬಾವನೆಗಳನ್ನು ಚಿತ್ರರೂಪದಲ್ಲಿ ಅಬಿವ್ಯಕ್ತಿಸುವ ಮೊದಮೊದಲ ಪ್ರಯತ್ನಗಳು ಶಿಲಾಯುಗದ ಉದ್ದಕ್ಕೂ ಜಗದೆಲ್ಲೆಡೆ ದಾಕಲಾಗಿವೆ. ಬಾಶೆಯ ಮೂಲಕ ಅಬಿವ್ಯಕ್ತಿಯನ್ನು ಚಿತ್ರರೂಪಕ್ಕೆ ತಂದಾಗ ಅದು ನಾವೀಗ ಕರೆಯುವ ಚಿತ್ರಲಿಪಿ ಎಂಬಂತೆ ಬಳಕೆಯಾಗುತ್ತಿತ್ತು. ಚಿತ್ರಲಿಪಿಯಲ್ಲಿ ಸಂಕೇತವಾಗಿ ಒಂದು ನಿರ್‍ದಿಶ್ಟ ರೂಪ ಒಂದು ಸಾಮಾಜಿಕ-ಬೂತಿಕ ವಸ್ತುವನ್ನು ಪ್ರತಿನಿದಿಸುವಂತೆ ಬಳಕೆಯಾಗುತ್ತಿತ್ತು. ಮುಂದೆ ಬಾಶೆಯ ಕೆಲಸದ ಬಾರವನ್ನು ಈ ಲಿಪಿಗಳು ವಹಿಸಿಕೊಳ್ಳತೊಡಗಿದಾಗ ಹೆಚ್ಚಿನ ಸಂಕೀರ‍್ಣತೆಯನ್ನು ಪಡೆದುಕೊಳ್ಳುತ್ತಾ ಬಾಶೆಯ ಕೆಲಸದ ಕಡೆಗೆ ಹೆಚ್ಚು ಒತ್ತು ಬಿತ್ತು. ಇದು ಮುಂದೆ ಕ್ರಮೇಣ ಬಾಶೆಯ ರಚನೆಯನ್ನು ತಿಳಿದುಕೊಳ್ಳುವುದಕ್ಕೆ ದಾರಿಯಾಯಿತು. ಬಾರತದಲ್ಲಿ ಸಂಸ್ಕ್ರುತದ ಸಂದರ‍್ಪದಲ್ಲಿ ಬಾಶೆಯ ಅದ್ಯಯನ ಅದರಲ್ಲೂ ಮುಕ್ಯವಾಗಿ ದ್ವನಿಯ ಅದ್ಯಯನ ಹೆಚ್ಚಿನ ಆಳಕ್ಕೆ ಹೋದದ್ದು ಸುಮಾರು ಮೂರು ಸಾವಿರ ವರುಶಗಳಶ್ಟು ಹಿಂದೆ. ಈ ಪರಿಕಲ್ಪನೆ ‘ಅ-ಕ್ಶರ’ ಎಂಬ ಹೆಸರನ್ನೆ ಪಡೆದುಕೊಂಡಿತು. ಕ್ಶರವಾಗದ್ದು ‘ಅಕ್ಶರ’ ಎಂಬರ‍್ತದಲ್ಲಿ. ಉಚ್ಚರಿತ-ಕೇಳುವ ದ್ವನಿರೂಪಗಳಿಗೆ ಕಾಣುವ-ನೋಡುವ ಲಿಪಿರೂಪವಾಗಿಸಿದ್ದೆ ಅಕ್ಶರ. ಹಾಗೆಯೆ ಇದನ್ನು ‘ವರ‍್ಣ’ ಎಂದೂ ಕರೆಯಲಾಯಿತು. ‘ಬಣ್ಣ’ ಎಂಬ ಅರ್‍ತದ ಈ ಪದ ನೋಡುವುದಕ್ಕೆ ಸಂಬಂದಿಸಿದ್ದೆ ಆಗಿದೆ. ಆದರೆ, ಕುತೂಹಲವೆಂದರೆ ಪಾಣಿನಿಯ ಕಾಲಕ್ಕೆ ಈ ಪದಗಳು ಬಳಕೆಯಲ್ಲಿದ್ದರೂ ಅವು ಲಿಪಿ ಇದ್ದಿತು ಎಂಬ ಅರ್‍ತವನ್ನು ಕೊಡುವುದಿಲ್ಲ. ದ್ವನಿಯ ಬಹು ಆಳವಾದ ಅದ್ಯಯನದಿಂದಾಗಿ ಬಾರತದಲ್ಲಿ ‘ಮಾಹೇಶ್ವರ ಸೂತ್ರಗಳು’ ಬಂದವು. ಇವು ಮನುಶ್ಯ ಬಾಶೆಯ ಮೂಲಬೂತ ಗಟಕಗಳಾದ ದ್ವನಿಗಳ ಉಚ್ಚರಣೆಯ ಸ್ತಾನ ಮತ್ತು ರೀತಿಯ ಬಗೆಗೆ ಹೆಚ್ಚು ವಿಗ್ನಾನಿಕವಾದ ತಿಳುವಳಿಕೆಯನ್ನು ಕೊಡುತ್ತವೆ. ಆದರೆ, ನಮಗೆ ಈಗ ತಿಳಿದಿರುವಂತೆ ಬಾರತದಲ್ಲಿ ಲಿಪಿ ಸಂಯೋಜನೆ ಆದದ್ದು ಪಾಲಿ ಬಾಶೆಗೆ. ಅದಕ್ಕಿಂತ ಮೊದಲಿನ ಲಿಪಿ ಬಗೆಗೆ ನಮಗೀಗ ತಿಳುವಳಿಕೆ ಇಲ್ಲ.
ಹರಪ್ಪದಲ್ಲಿ ಸಿಕ್ಕಿರುವ ಲಿಪಿ ಚಿತ್ರಲಿಪಿ ಎಂಬುದರಲ್ಲಿ ವಿದ್ವಾಂಸರಿಗೆ ಅನುಮಾನವಿಲ್ಲವಾದರೂ ಅದನ್ನು ಸೂಕ್ತವಾಗಿ ಓದಲು ಇದುವರೆಗೆ ಯಾರಿಗೂ ಸಾದ್ಯವಾಗಿಲ್ಲ. ಹಾಗಾಗಿ ಬಾರತೀಯ ಲಿಪಿ ಎಂದಾಗ ಸಂಸ್ಕ್ರುತದ ದ್ವನಿವಿಗ್ನಾನ ಇಲ್ಲವೆ ಮಾಹೇಶ್ವರ ಸೂತ್ರದ ಆದಾರವನ್ನು ಇಟ್ಟುಕೊಂಡುದು, ಬರಹಕ್ಕೆ ಒತ್ತುಕೊಟ್ಟ ಬವುದ್ದ ಚಿಂತನೆಗಳ ಹಿನ್ನೆಲೆಯಿಂದ ಬಂದುದು, ಬವುದ್ದ ಮತಪ್ರಸಾರದ ತೀವ್ರ ಪ್ರಯತ್ನದಲ್ಲಿದ್ದ ಅಸೋಕನ ಪ್ರಯತ್ನದಿಂದ ಆದುದು, ಅಸೋಕ ತಾನು ಅನುಸರಿಸುತ್ತಿದ್ದ ಬುದ್ದನ ಬಾಶೆಯಾದ ಪಾಲಿಯ ಬಳಕೆಯನ್ನು ಮಾಡುತ್ತಿದ್ದುದು ಮತ್ತು ಹೇಳುತ್ತಿದ್ದುದು. ಇವೆಲ್ಲ ಹಿನ್ನೆಲೆಗಳಲ್ಲಿ ಅಸೋಕನು ದೂರದೇಶದಿಂದ ಕರೆಸಿದ ಲಿಪಿತಗ್ನನೊಬ್ಬನ ಸಹಾಯದಿಂದ ಬಾರತದಲ್ಲಿ ಸುಮಾರು ಕ್ರಿಸ್ತಪೂರ‍್ವ ಮೂರನೆಯ ಶತಮಾನದಲ್ಲಿ ಲಿಪಿ ಚಲಾವಣೆಗೆ ಬಂದಿತು.
ವಯಿದಿಕಕ್ಕೆ ವಿರುದ್ದವಾಗಿ ಬವುದ್ದ, ಜಯ್ನ ಪಂತಗಳು ಅಕ್ಶರಕ್ಕೆ ಒತ್ತುಕೊಟ್ಟದ್ದು ಸ್ಪಶ್ಟವಿದೆ. ಅಕ್ಶರದ ಪರಿಕಲ್ಪನೆ ಬೆಳೆದಿದ್ದರೂ ವಯಿದಿಕದಲ್ಲಿ ಲಿಪಿ ಬಳಕೆ ಇಲ್ಲದಿರುವುದಕ್ಕೆ ಇದು ಕಾರಣವಿದ್ದಿರಬಹುದು. ಮಾಹೇಶ್ವರ ಸೂತ್ರಗಳೆ ಅಸೋಕನ ಕಾಲದ ಲಿಪಿಗಳಿಗೆ ಆದಾರ ಎನ್ನುವುದಕ್ಕೆ ಅನುಮಾನಗಳೇನೂ ಇರಲಾರವು. ಇವತ್ತಿಗೂ ದಕ್ಶಿಣ ಏಸಿಯಾದ ಬಹುತೇಕ ಲಿಪಿಗಳಿಗೆ ಮಾಹೇಶ್ವರ ಸೂತ್ರಗಳೆ ಆದಾರವಾಗಿವೆ ಎಂಬುದು ವಾಸ್ತವ. ಮೆಸಪಟೋಮಿಯಾದಿಂದ ತಂದ ಲಿಪಿ ಬಲದಿಂದ ಎಡಕ್ಕೆ ಬಳಕೆಯಲ್ಲಿದ್ದರೂ ಇತ್ತ ಬಾರತಕ್ಕೆ ಅತ್ತ ಯುರೋಪಿಗೆ ಚಲಿಸಿದ ಈ ಲಿಪಿ ಎಡದಿಂದ ಬಲಕ್ಕೆ ಬಳಕೆಯಲ್ಲಿ ರೂಡಿಯಾಯಿತು. ಅಸೋಕನ ಕಾಲದಲ್ಲಿಯೆ ನಿರ್‍ದಿಶ್ಟವಾಗಿ ಯಾಕೆ ಲಿಪಿ ಸಂಯೋಜನೆ ಮತ್ತು ಬಳಕೆ ಆಗಿದ್ದಿರಬಹುದು ಎಂದು ಅಂದಾಜಿಸಬಹುದು. ಬವುದ್ದ ಚಿಂತನೆಗಳು ಬೂತಿಕ ಸ್ಮಾರಕಗಳಿಗೆ ಒತ್ತು ಕೊಟ್ಟದ್ದನ್ನು ಬುದ್ದನ ಪ್ರತಿಮೆಗಳು ದೊಡ್ಡದಾಗಿ ಬೆಳೆದಿರುವುದರಲ್ಲಿ ಕಾಣಬಹುದು. ಲಿಪಿಯೂ ಕೂಡ ಹೀಗೊಂದು ಸಂಕೇತ ಎಂಬುದನ್ನು ಬವುದ್ದ ಮತ್ತು ಸಾಮಾನ್ಯವಾಗಿ ಬಾರತೀಯ ಪರಂಪರೆ ಒಪ್ಪಿಕೊಳ್ಳುತ್ತದೆ. ಹೀಗೆ ಆರಂಬವಾದ ಲಿಪಿ ಮೊದಮೊದಲಿಗೆ ವಿಸ್ತಾರವಾಗಿ ಯಾವುದಕ್ಕೆ ಬಳಕೆಯಾಗಿದೆ ಎಂಬುದನ್ನು ಅವಲೋಕಿಸಿದಾಗ ಇದರ ಬಗೆಗೆ ತಿಳುವಳಿಕೆ ಬರಬಹುದು. ಅಸೋಕನ ಬಹುತೇಕ ಬರಹಗಳು ಬವುದ್ದ ಪ್ರಚಾರ ಮತ್ತು ಬವುದ್ದ ಪ್ರಸಾರವೆ ಆಗಿರುವುದನ್ನು ಕಾಣಬಹುದು. ನಂತರ ಬರಹವೊಂದು ರೂಪಿಯಾಗಿ ಸಾಮಾಜಿಕ ಲಾಬಗಳು ತಿಳಿದು ಅದರ ಬಳಕೆ, ಮಹತ್ವ ಎಲ್ಲವೂ ವಿಸ್ತರಿಸಿಕೊಂಡಿತು. ಅಂದಿನ ದಾರ್‍ಮಿಕ ಒಳಗೊಂಡು ಬವುದ್ದಿಕ ಕೆಲಸಗಳು ನಡೆಯುತ್ತಿದ್ದ ಪಾಲಿ ಬಾಶೆಗೆ ಒಂದು ದೊಡ್ಡ ನೆಗೆತವನ್ನು ಲಿಪಿ ತಂದುಕೊಟ್ಟಿರಬೇಕು.
ಈ ಅಂಕಣದ ಹಿಂದಿನ ಬರೆಹ:
ಬಾಶೆ ಅರಿವ ಹರವು
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.