Date: 17-09-2023
Location: ಬೆಂಗಳೂರು
''ದೇಹದಲ್ಲಾಗುವ ಬದಲಾವಣೆ, ಮುಟ್ಟಿನ ಕ್ರಿಯೆ, ಮುಟ್ಟಾದಾಗ ಏನೆಲ್ಲಾ ಬಳಸಬೇಕು, ಯಾವ ಆಹಾರ ತಿನ್ನಬೇಕು, ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಹೇಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಅನ್ನೋದನ್ನು ತಿಳಿಸ್ತಾ ಬಂದ್ವಿ. ಇದರ ಜೊತೆಗೆ ದೌರ್ಜನ್ಯ ಆದಾಗ ಕಾನೂನನ್ನು ಹೇಗೆ ಬಳಸಿಕೊಳ್ಳಬೇಕು, ದೌರ್ಜನ್ಯಕ್ಕೊಳಪಟ್ಟವರ ಜೊತೆಗೆ ಸಾಮಾಜಿಕವಾಗಿ ನಾವು ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನು 6000ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಮುಟ್ಟಿಸಿದ್ದೇವೆ,'' ಎನ್ನುತ್ತಾರೆ ಚಿದಾನಂದ. ಅವರು ಅಂಕಣಗಾರ್ತಿ ಜ್ಯೋತಿ ಎಸ್. ಅವರ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ “ಬದುಕಿನ ಪರೀಕ್ಷೆಯಲ್ಲಿ ಮನಗೆದ್ದ”ವಿಚಾರದ ಕುರಿತು ಹೀಗೆ ಹಂಚಿಕೊಂಡಿದ್ದಾರೆ.
ಪರೀಕ್ಷೆಗಳಲ್ಲಿ ಫೇಲಾದ ಮಾತ್ರಕ್ಕೆ ಬದುಕು ಮುಗಿಯುವುದಿಲ್ಲ. ಒಂಚೂರು ತಾಳ್ಮೆಯಿಂದ ಯೋಚಿಸಿದರೆ ಹೊಸದಾದ ಗಟ್ಟಿ ಬದುಕನ್ನು ಕಟ್ಟಿಕೊಳ್ಳಬಹುದು. ಅಂತಹ ಹಲವಾರು ವ್ಯಕ್ತಿಗಳನ್ನು ನಾವು ನೋಡಿರುತ್ತೇವೆ. SSLC ಯಲ್ಲಿ ಫೇಲಾಗಿ ಸಮಾಜ ಮೆಚ್ಚುವಂತೆ ಬದುಕು ಕಟ್ಟಿಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರದ ಶಾಂತಿನಗರದ ಪರಿಸರ ಪ್ರೇಮಿ, ಬರಹಗಾರ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರರಾದ ಚಿದಾನಂದ ಮೂರ್ತಿ ಅವರ ಯುವ ಸಂಚಲನದ ಪರಿಚಯ ಇಂದಿನ ನಿಮ್ಮ ಓದಿಗೆ. SSLC ಯಲ್ಲಿ ಅನುತ್ತೀರ್ಣರಾಗಿ ಬದುಕಿನ ಪರೀಕ್ಷೆಯಲ್ಲಿ ಎಲ್ಲರ ಮನಗೆದ್ದ ಚಿದಾನಂದ ಅವರ ಮಾತುಗಳನ್ನು ಓದೋಣ ಬನ್ನಿ.
'ನನ್ನ ಅಪ್ಪ ಮಹಾಂತೇಶ್ ಅಮ್ಮ ಮಂಜುಳಾ. ನಾನು ತುಂಬ ಚೆನ್ನಾಗಿ ಓದುತ್ತೇನೆ ಎನ್ನುವ ನಿರೀಕ್ಷೆ ಮನೆಯ ಎಲ್ಲರದ್ದು. ಆದರೆ ನನಗೆ ಓದಲು ಆಗುತ್ತಿರಲಿಲ್ಲ. ಮನೆಯಲ್ಲಿ ನಾನು ಓದಲೇಬೇಕು ಎನ್ನುವ ಒತ್ತಡ ನನ್ನನ್ನು ತೀವ್ರ ಸ್ವರೂಪದ ಖಿನ್ನತೆ, ಒತ್ತಡಕ್ಕೆ ಒಳಮಾಡಿತ್ತು. ಆ ಸಮಯದಲ್ಲಿ ಬದುಕೇ ಬೇಡ ಎಂದು ನಿರ್ಧರಿಸಿದ್ದು ಇದೆ. ಅದಾದ ಮೂರು ವರ್ಷಗಳ ನಂತರ ಎಸ್ ಎಸ್ ಎಲ್ ಸಿ ಅನುತ್ತೀರ್ಣರಾದವರಿಗೆ ಉಚಿತವಾಗಿ ಟ್ಯೂಷನ್ ಮಾಡುತ್ತೇವೆ ಎಂಬ ಅನೌನ್ಸ್ ಮೆಂಟ್ ನ್ಯೂಸ್ ಪೇಪರ್ ನಲ್ಲಿ ಬಂದಿತ್ತು. ಆಗ ನನ್ನ ಅಪ್ಪ ಇದೊಂದು ಸಲ ಪ್ರಯತ್ನ ಮಾಡು ನಾವು ಮತ್ತೆ ಇದರ ಬಗ್ಗೆ ಏನೂ ಹೇಳಲ್ಲ ಅಂತ ಹೇಳಿದ್ರು. ಆ ಸಮಯದಲ್ಲಿ ಬದುಕಬೇಕಾ! ಬೇಡ್ವಾ? ಎನ್ನುವ ಪ್ರಶ್ನೆ ಕೂಡ ಎದುರಾಯಿತು. ಅದಕ್ಕೂ ಮುಂಚೆ ಓದಿಲ್ಲ ಅಂದ್ರೆ ನಾನು ಬದುಕಲು ಅರ್ಹನೇ ಅಲ್ಲ ಎಂಬೆಲ್ಲ ಪ್ರಶ್ನೆಗಳಿಗೆ ಪರಿಹಾರವಾಗಿ ಸಿಕ್ಕಿದ್ದು ಸಂವಾದ ಎಂಬ ಸಂಸ್ಥೆ. ಸಂವಾದದಲ್ಲಿ ಟ್ಯೂಷನ್ ಜೊತೆಗೆ ಬೇರೆ ಬೇರೆ ಕಾರ್ಯಕ್ರಮಗಳು ನಡೀತಿತ್ತು. ನನಗೂ ಅದರಲ್ಲೆಲ್ಲ ಭಾಗವಹಿಸಬೇಕು ಅಂತನ್ನಿಸ್ತಿತ್ತು. ಒಂದೊಂದೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ. ಮೊದಲ ಬಾರಿಗೆ ಮಾತನಾಡಲು ಪ್ರಾರಂಭಿಸಿದೆ. ಮಾತೆಲ್ಲ ಮುಗಿದ ಮೇಲೆ ಅಲ್ಲಿದ್ದವರು ಎಷ್ಟು ಚೆನ್ನಾಗಿ ಮಾತಾಡ್ತೀಯಾ ಅಂತ ಬೆನ್ನುತಟ್ಟಿದ್ರು. SSLC ಪರೀಕ್ಷೆ ಬರೆದು ಪಾಸ್ ಆದೆ. ಮನೆಯವರೆಲ್ಲರ ಬಲವಂತಕ್ಕೆ ITI ಮಾಡಲು ಮುಂದಾದೆ. ಆಗ ನನಗೆ ಅನ್ನಿಸಿದ್ದು ಇದು ನನ್ನ ಹಾದಿಯಲ್ಲ. ಸಂವಾದದ ಒಡನಾಟ ಇದ್ದುದರಿಂದ ಸ್ವಯಂಸೇವಕನಾಗಿ ಸಂವಾದದ ಪ್ರತೀ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಕಾರ್ಯಕ್ರಮಗಳನ್ನು ನಾನೆ ಸಂಘಟಿಸುತ್ತಿದ್ದೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಂಡೆ. ಸಂವಾದದಲ್ಲಿ ಕಲಿತ ಒಳನೋಟ, ಹೊರನೋಟ ಕಾರ್ಯಕ್ರಮಗಳು ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಬಹಳಷ್ಟು ಸಹಕಾರಿಯಾದವು. 2013ರಲ್ಲಿ ದೊಡ್ಡ ಬಳ್ಳಾಪುರದಲ್ಲಿ ಇದ್ದ ಸಂವಾದ ಸಂಸ್ಥೆ ಮುಚ್ಚಿತು. ಅಷ್ಟರಲ್ಲಿ ನಾನು ಸ್ವಂತವಾಗಿ ಏನಾದರೂ ಮಾಡಬೇಕು ಎಂಬ ಆಲೋಚನೆ ಬಂದಾಗ "ಯುವ ಸಂಚಲನ" ಎಂಬ ತಂಡವನ್ನು ಕಟ್ಟಿದೆ. ನಾನು SSLC ಫೇಲ್ ಆದ್ದರಿಂದ ಆ ಕಷ್ಟ ಅವಮಾನಗಳೆಲ್ಲ ಗೊತ್ತಿತ್ತಲ್ಲ, ಅಂತಹ ಸಮಯದಲ್ಲಿ ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಸರವೆನಿಸಿತ್ತು. ನನಗಾದ ಅವಮಾನ ಬೇರೆ ಯಾರಿಗೂ ಆಗಬಾರದು ಎಂದು ಫೇಲಾದವರಿಗೆ ಏನಾದರೂ ಒಳಿತು ಮಾಡಬೇಕು ಅನ್ನಿಸ್ತು. ನಮ್ಮ ತಂಡದ ಮುಖಾಂತರ ಫಲಿತಾಂಶ ಬರುವ ಹಿಂದಿನ ದಿನವೇ ಪೋಷಕರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಫಲಿತಾಂಶವೇ ಮುಖ್ಯ ಅಲ್ಲ. ಮಕ್ಕಳು ಬದುಕುಳಿದರೆ ಇಂತಹ ಸಾವಿರ ಪರೀಕ್ಷೆಗಳನ್ನು ಬರೆಯಬಹುದು. ಹಾಗಾಗಿ ಪೋಷಕರೇ ನಿಮ್ಮ ಮಕ್ಕಳ ಮೇಲೆ ದಯವಿಟ್ಟು ಒತ್ತಡ ಹೇರಬೇಡಿ. ಬದಲಿಗೆ ಧೈರ್ಯ ತುಂಬಿ. ಮಕ್ಕಳಿಗೆ ಇದು ನಿಮ್ಮ ಜ್ಞಾಪಕ ಶಕ್ತಿ ಅಳತೆ ಮಾಡಿಕೊಳ್ಳಲು ಅಷ್ಟೇ ಇದಕ್ಕಾಗಿ ಬದುಕು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಫೇಲಾದರೂ ಬದುಕು ಇದೆ. ನೀವು ಫೇಲ್ ಆಗಿದ್ರೆ ಬನ್ನಿ ನಾವು ಟ್ಯೂಷನ್ ಮಾಡ್ತೀವಿ ಅಂತ ಉಚಿತವಾಗಿ ಟ್ಯೂಷನ್ ಗಳನ್ನು ಮಾಡಿ ಧೈರ್ಯ ತುಂಬುವ ಕೆಲಸ ಮಾಡ್ತಾ ಬಂದ್ವಿ. ಆಗ ಫಂಡ್ ಏನೂ ಇರಲಿಲ್ಲ. ಸಂಬಂಧಪಟ್ಟ ಶಿಕ್ಷಕಕ ಹತ್ತಿರ ಹೋಗಿ ಮಾತಾಡಿದ್ವಿ. ಅವರಿವರ ಹತ್ತಿರ ಹೋಗಿ ನಾವು ಇಂತಹ ಕೆಲಸ ಮಾಡ್ತಾ ಇದ್ದೇವೆ ಜಾಗ ಕೊಡಿ ಅಂತ ಕೇಳಿದ್ವಿ. ಪೇಪರ್ ನಲ್ಲಿ ಅನೌನ್ಸ್ಮೆಂಟ್ ಮಾಡಿದ್ದಕ್ಕೆ 30-40 ಫೇಲ್ ಆದ ಮಕ್ಕಳು ಟ್ಯೂಷನ್ ಗೆ ಬಂದರು. ತುಂಬ ಜನ ಶಿಕ್ಷಕರು ನಮ್ಮ ಜೊತೆಗೆ ನಿಂತರು. '0' ಬಜೆಟ್ ನಲ್ಲಿ ನಾವು ಅಂದುಕೊಂಡಿದ್ದನ್ನು ಮಾಡಬೇಕು ಅಂತ ಪ್ರಾರಂಭ ಮಾಡಿದ ಮೊದಲ ಕಾರ್ಯಕ್ರಮ ಇದು. ಬಹಳ ಯಶಸ್ವಿಯಾಯ್ತು. ಬಹಳಷ್ಟು ಮಕ್ಕಳು ಪಾಸ್ ಆದ್ರು. ಫೇಲ್ ಆದವರೂ ಕೂಡ ನಾವು ಬದುಕಬಹುದು ಅಂತ ಧೈರ್ಯ ತುಂಬಿಕೊಂಡರು. ಅವರನ್ನು ಪಾಸ್ ಮಾಡಿಸುವುದಕ್ಕಿಂತ ಒಳಗಿನಿಂದ ಆತ್ಮಸ್ಥೈರ್ಯ ತುಂಬುವುದೇ ನಮ್ಮ ಮುಖ್ಯ ಉದ್ದೇಶ ಆಗಿತ್ತು. ಹಾಗಾಗಿ ಮೊದಲ ಕಾರ್ಯಕ್ರಮವೇ ಯಶಸ್ವಿಯಾಗಿ ಕೈಗೂಡಿತು. ನಾನು ಯುವ ಜನರ ಒಂದು ಭಾಗವಾದ್ದರಿಂದ ನಮ್ಮ ಭಾಗದ ಗ್ರಾಮೀಣ ಮಕ್ಕಳ, ಯುವಜನರ ಸಮಸ್ಯೆಗಳು ಸುಲಭಕ್ಕೆ ಅರ್ಥವಾಗುತ್ತ ಹೋಯಿತು. ಸ್ಪೋಕನ್ ಇಂಗ್ಲಿಷ್, ನಾಯಕತ್ವ ತರಬೇತಿ, ಆರೋಗ್ಯ ಸಮಸ್ಯೆ, ಸಮಾಜ, ಪರಿಸರ ಇತ್ಯಾದಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳನ್ನು ಒಳಗೊಂಡು ಮಾಡುವುದು, ಅವರನ್ನು ಮುಂಚೂಣಿಗೆ ತರುವುದು, ಅವರಿಂದಲೇ ಕಾರ್ಯಕ್ರಮ ನಿರೂಪಣೆ ಮಾಡಿಸುವುದು, ಕಾರ್ಯಕ್ರಮ ಸಂಘಟನೆ ಮಾಡಿಸುವುದು ಮಾಡಿದೆವು. ಇದರಿಂದ ಅವರಲ್ಲಿ ಒಂದೊಂದೆ ಬದಲಾವಣೆ ಆಗಲು ಶುರುವಾಯ್ತು. ನದಿ, ಅರಣ್ಯ ಉಳಿಸಬೇಕು ಅಂತ ನಾವು ಯೋಜನೆಗಳನ್ನು ಹಾಕಿಕೊಂಡೆವು. ಅದಕ್ಕೆಲ್ಲ ಈ ಮಕ್ಕಳು, ಯುವಜನರೇ ಮುಖ್ಯವಾಗಿ ಹೋರಾಟ ಮಾಡೋಕೆ ನಿಂತರು. ಹೀಗೆ ಮಾಡ್ತಾ ಮಾಡ್ತಾ ನಮಗೆ ತುಂಬ ವಿದ್ಯಾರ್ಥಿಗಳು ಸಿಗೋಕೆ ಪ್ರಾರಂಭಿಸಿದರು. ಅವರ ಸಮಸ್ಯೆಗಳನ್ನು ಗುರುತಿಸಲು ಪ್ರಾರಂಭಿಸಿ, ಅದಕ್ಕಾಗಿ ಹೋರಾಟ ಮಾಡ್ತಾ ಇದ್ವಿ. ಸ್ಕಾಲರ್ ಶಿಪ್ ಸಿಕ್ಕಿಲ್ಲ ಅಂದ್ರೆ, RTIನ ಸಮರ್ಪಕ ಬಳಕೆಯಾಗದಿದ್ದರೆ, ಫ್ರೀ ಹಾಸ್ಟೆಲ್ ಸಿಗದಿದ್ದರೆ ಹೋರಾಟ ಮಾಡಿ ಅವರಿಗೆ ಸಿಗಬೇಕಾದ ನ್ಯಾಯವನ್ನು ಅವರಿಗೆ ಸಿಗುವಂತೆ ಮಾಡ್ತಾ ಇದ್ವಿ. ತುಂಬ ಜನ ಹೆಣ್ಣು ಮಕ್ಕಳಿಗೆ ಸಮಸ್ಯೆಯಾದಾಗ ಹೇಳಿಕೊಳ್ಳಲು ಅವಕಾಶ ಇರಲಿಲ್ಲ. ಅವರಿಗಂತಲೆ "ಲೈಂಗಿಕ ಕಿರುಕುಳ ದೂರು ಸಮಿತಿ" ಅಂತ ಇದೆ. ಇದರ ಸಮರ್ಪಕ ಬಳಕೆಯಾಗಬೇಕು. ಕಳೆದ ಎಂಟು ವರ್ಷಗಳಿಂದ ದೊಡ್ಡ ಬಳ್ಳಾಪುರದ ಪ್ರತೀ ಸರ್ಕಾರಿ ಶಾಲೆಗಳಿಗೆ ಹೋಗಿ ಲೈಂಗಿಕ ಕಿರುಕುಳ ದೂರು ಸಮಿತಿ ಅಂದ್ರೆ ಏನು? ದೌರ್ಜನ್ಯ ಆದಾಗ ಏನೆಲ್ಲಾ ಕಾನೂನುಗಳಿವೆಯೋ ಅದಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುತ್ತ ಬಂದೆ. ಇದರಿಂದ ಹೆಣ್ಣು ಮಕ್ಕಳ ಪರಿಚಯ ಆಗ್ತಾ ಹೋಯ್ತು. ಅವರಿಗೇನಾದರೂ ಸಮಸ್ಯೆಗಳಾದರೆ ನಮಗೆ ಹೇಳಿಕೊಳ್ಳುತ್ತಿದ್ದರು. ನಮ್ಮಿಂದ ಏನೆಲ್ಲಾ ಸಹಾಯ ಮಾಡಬಹುದೊ ಅದನ್ನೆಲ್ಲ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾದ್ವಿ. ಪ್ರತೀ ಕಾಲೇಜುಗಳಿಗೆ ಹೋಗಿ ಹೆಣ್ಣು ಮಕ್ಕಳಿಗೆ ರಕ್ತ ಹೀನತೆಯ ಸಮಸ್ಯೆ, ಮುಟ್ಟಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೆವು. ಮುಟ್ಟಿನ ಬಗ್ಗೆ ಕಾರ್ಯಕ್ರಮಗಳನ್ನು ಮಾಡುವಾಗ ಎಲ್ಲಾ ಕಡೆ ನಾನು ಫೀಡ್ ಬ್ಯಾಕ್ ತಗೊಳ್ತಿದ್ದೆ. ಅಲ್ಲಿ ಒಂದು ಕಾಲೇಜ್ ನಲ್ಲಿ ಮುಟ್ಟಿನ ಬಗ್ಗೆ ಕಾರ್ಯಕ್ರಮ ಮಾಡುವಾಗ ಒಂದು ಹೆಣ್ಣುಮಗು ಬಂದು ಮಾತಾಡ್ತು. ಆ ಹೆಣ್ಣುಮಗು ಕಣ್ಣೀರು ಹಾಕ್ತಾ ಸಾರ್ವಜನಿಕವಾಗಿ ಹೇಳಿಕೊಂಡದ್ದು ಏನಂದ್ರೆ ಮೊದಲ ಮುಟ್ಟಿನ ಬಗ್ಗೆ ಸಮಾಜ, ಪೋಷಕರು, ಶಿಕ್ಷಕರು ಯಾರೂ ಸಂಪೂರ್ಣವಾಗಿ ಹೇಳಿರೋದಿಲ್ಲ. ಮೊದಲ ಮುಟ್ಟು ಆ ಮಗುವಿಗೆ ಆಗಿದೆ. ಆದರೆ ಆ ಹುಡುಗಿಗೆ ಗೊತ್ತಿಲ್ಲ, ಗಾಯ ಆಗಿ ರಕ್ತ ಬರತ್ತಲ್ಲ, ಆಗ ಅರಿಶಿನ ಹಚ್ಚಿಕೊಳ್ಳುತ್ತೇವಲ್ಲ ಹಾಗೆ ಅರಿಶಿನ ಹಚ್ಚಿಕೊಂಡಿದ್ದೆ ಅಂತ ಹೇಳಿದಳು. ಅದೇ ಹೆಣ್ಣು ಮಗು ತನ್ನ ಇನ್ನೊಂದು ಅನುಭವವನ್ನು ಹೇಳಿತು. ಪ್ಯಾಡ್ ನ ಹೇಗೆ ಬಳಸಬೇಕು ಅಂತಲೂ ಅವಳಿಗೆ ಯಾರೂ ಹೇಳಿರಲಿಲ್ಲವಂತೆ, ಆಗ ಬಟ್ಟೆಗೆ ಗಮ್ ಅನ್ನು ಹಾಕಿ ತನ್ನ ಮಾರ್ಮಂಗಕ್ಕೆ ಅಂಟಿಸಿಕೊಂಡು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ ನೋವನ್ನು ಹಂಚಿಕೊಳ್ಳುವಾಗ ನನ್ನ ಜೀವ ಹಿಂಡಿತು. ನನ್ನ ಇಡೀ ತಾಲೂಕಿನ ಹೆಣ್ಣು ಮಕ್ಕಳಿಗೆ ಮುಟ್ಟಿನ ಬಗ್ಗೆ ಅರಿವು ಮೂಡಿಸಬೇಕು ಅಂತ ನಿರ್ಧರಿಸಿ 'ತಡೆ ನಡೆ' ಎನ್ನುವ ಅಭಿಯಾನ ಶುರು ಮಾಡಿದ್ವಿ. ಇಡೀ ದೊಡ್ಡ ಬಳ್ಳಾಪುರ ತಾಲ್ಲೂಕಿನ ಸರ್ಕಾರಿ ಶಾಲೆಗಳ 5 ರಿಂದ 10ನೇ ತರಗತಿಯ ಹೆಣ್ಣು ಮಕ್ಕಳು, ಮುಟ್ಟಾಗದಿರುವ, ಮುಟ್ಟಾದ ಹೆಣ್ಣು ಮಕ್ಕಳಿಗೆ ಕೆಲವು ವಿಚಾರಗಳನ್ನು ಹೇಳ್ತಾ ಬಂದ್ವಿ'.
'ದೇಹದಲ್ಲಾಗುವ ಬದಲಾವಣೆ, ಮುಟ್ಟಿನ ಕ್ರಿಯೆ, ಮುಟ್ಟಾದಾಗ ಏನೆಲ್ಲಾ ಬಳಸಬೇಕು, ಯಾವ ಆಹಾರ ತಿನ್ನಬೇಕು, ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಮತ್ತು ಹೇಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಅನ್ನೋದನ್ನು ತಿಳಿಸ್ತಾ ಬಂದ್ವಿ. ಇದರ ಜೊತೆಗೆ ದೌರ್ಜನ್ಯ ಆದಾಗ ಕಾನೂನನ್ನು ಹೇಗೆ ಬಳಸಿಕೊಳ್ಳಬೇಕು, ದೌರ್ಜನ್ಯಕ್ಕೊಳಪಟ್ಟವರ ಜೊತೆಗೆ ಸಾಮಾಜಿಕವಾಗಿ ನಾವು ಹೇಗೆ ನಡೆದುಕೊಳ್ಳಬೇಕು ಅನ್ನೋದನ್ನು 6000ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಮುಟ್ಟಿಸಿದ್ದೇವೆ. ನಾವು ಯಾವಾಗಲು ಮಹಿಳಾ ದೌರ್ಜನ್ಯದ ಬಗ್ಗೆ ಹೆಣ್ಣು ಮಕ್ಕಳ ಬಗ್ಗೆಯೇ ಮಾತಾಡ್ತೀವಿ ಹಾಗಾಗಿ ಗಂಡು ಮಕ್ಕಳಿಗೂ ತರಗತಿಗಳನ್ನು ತಗೋಳೋಕೆ ಶುರು ಮಾಡಿದ್ವಿ. ಬೆಳೆಯುತ್ತಾ ಗಂಡು ಮಕ್ಕಳಲ್ಲಿ ದೈಹಿಕವಾಗಿ ಏನೆಲ್ಲಾ ಬದಲಾವಣೆ ಆಗತ್ತೆ, ಹೆಣ್ಣು ಮಕ್ಕಳಲ್ಲಿ ಏನಾಗತ್ತೆ ಎಂಬ ಬಗ್ಗೆ 5 ರಿಂದ 10ನೇ ತರಗತಿಯ ಗಂಡು ಮಕ್ಕಳಿಗೂ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಈ ತರಹದ ಒಂದೊಂದೆ ಕೆಲಸಗಳನ್ನು ಮಾಡ್ತಾ ಮರಳು ದಂಧೆಯನ್ನು ಮಾಡೋದನ್ನು, ಅಕ್ರಮವಾಗಿ ಕಾಡುಗಳಲ್ಲಿ ಮರಗಳನ್ನು ಕಡಿಯುವುದನ್ನು, ಕದ್ದು ಸಾಗಿಸುವುದನ್ನು ಹುಡುಕಿ ಕಂಪ್ಲೇಂಟ್ ಮಾಡ್ತಾ ಇದ್ವಿ. ಪ್ರತಿಯೊಬ್ಬರು ಪರಿಸರವಾದ ಅಂದ ತಕ್ಷಣ ಭಾಷಣ ಮಾಡೋದು, ಪುಸ್ತಕ ಬರೆಯೋದು ಅಂತಲ್ಲ ಅನ್ನಿಸಿ ಗಿಡಗಳನ್ನು ನೆಡಲು ಪ್ರಾರಂಭಿಸಿದೆವು. ಬೀಜಗಳ ಉಂಡೆ ಮಾಡಿ ಮಳೆಗಾಲದಲ್ಲಿ ಬಯಲು ಪ್ರದೇಶಗಳಲ್ಲಿ ಎಸೆಯುತ್ತಿದ್ದೆವು. ಯಾವ ಗಿಡ ನೆಟ್ಟರೆ ಚೆನ್ನಾಗಿರತ್ತೆ, ಪರಿಸರಕ್ಕೆ ನಮ್ಮಿಂದ ಯಾವ ರೀತಿಯ ಸಹಾಯ ಮಾಡಬಹುದು ಅಂತೆಲ್ಲಾ ವಿಚಾರ ಮಾಡುತ್ತಿದ್ದೆವು. ಕೆಲವೊಮ್ಮೆ ಏಕಜಾತಿಯ ಗಿಡಗಳನ್ನು ನೆಡುವುದರಿಂದ ಜೀವ ವೈವಿಧ್ಯತೆಗೆ ತೊಂದರೆ ಕೊಟ್ಟ ಹಾಗೆ. ಒಂದು ಸಣ್ಣ ಗಿಡಕ್ಕೂ ಯಾವುದೋ ಒಂದು ಕೀಟ ಅವಲಂಬಿಸಿರತ್ತೆ. ಒಂದೇ ಜಾತಿಯ ಮರಗಳಿರೋದು ತಪ್ಪು. ಹಾಗಾಗಿ ನಾವು ಸಸ್ಯ ವೈವಿಧ್ಯತೆಯನ್ನು ಪ್ರಾರಂಭಿಸಿದ್ವಿ. ಹೂವರ್ಚಿ, ರೋಸಿಯಾ, ಹೊಳೆಮತ್ತಿ, ಗುಲ್ ಮೋಹರ್, ಹೊಳೆ ದಾಸವಾಳ, ಕದಂಬ, ಸೀತಾ ಅಶೋಕ, ಇತ್ಯಾದಿಯಾಗಿ ಇದುವರೆಗೂ ನಾಲ್ಕುನೂರಕ್ಕೂ ಹೆಚ್ಚು ಸಸ್ಯಗಳನ್ನು ನೆಟ್ಟಿದ್ದೇವೆ. ಜನಗಳಲ್ಲಿ ಮರಗಳು ಗಿಡಗಳ ಜೊತೆಗೆ ಉತ್ತಮ ಸಂಬಂಧ ಬೆಳೆಸಬೇಕು ಅಂತ ಒಂದು ಯೋಜನೆ ಮಾಡಿ ಮರಗಳನ್ನು ದತ್ತು ಕೊಡಲು ಪ್ರಾರಂಭಿಸಿದ್ವಿ. ಉದಾ : ಈಗ ನನ್ನ ಹುಟ್ಟುಹಬ್ಬಕ್ಕೆ ಬೇರೆಯವರ ಮನೆ ಮುಂದೆ ಗಿಡ ನೆಡೋದು. ಬೇರೆಯವರ ಮನೆಮುಂದೆ ಯಾಕೆ ಅಂದ್ರೆ ಅವರಿಗೊಂದು ಜವಾಬ್ದಾರಿ ಬರಬೇಕು. ಜೊತೆಗೆ ಇರುವುದನ್ನು ಉಳಿಸಿಕೊಳ್ಳಬೇಕು ಮರಕಡಿಯುವುದನ್ನು ತಡೀಬೇಕು ಅಂತ. ನಾವು ಅಭಿವೃದ್ಧಿ ವಿರೋಧಿಗಳಲ್ಲ. ಮರ ಕಡಿಯುವ ಅಗತ್ಯ ಇದ್ದಲ್ಲಿ ಕಡಿದ ಮರಗಳ ಸಂಖ್ಯೆಯಷ್ಟು ಗಿಡಗಳನ್ನು ಮತ್ತೆ ನೆಡಬೇಕು. ಹೀಗೆ ಮಾಡದೆ ಹೋದರೆ ಅದಕ್ಕೆ ನಾವೇ ಒಂದು ಸ್ಲೋಗನ್ ಕೊಟ್ಟು "ಇನ್ನು ಮುಂದೆ ಮರ ಗಿಡಗಳ ಸಂಬಂಧಿಕರು ನಾವಿದ್ದೇವೆ, ಕಡಿಯುವ ಮುನ್ನ ಎಚ್ಚರಿಕೆ" ಅಂತ ಹೇಳುತ್ತ, ಗಾಡಿ ತಗೊಂಡ್ರೆ, ಪ್ರಮೋಷನ್ ಆದ್ರೆ, ಮಗು ಹುಟ್ಟಿದ್ರೆ, ಯಾರಾದರೂ ಸತ್ತರೆ ಅದರ ನೆನಪಿಗಾಗಿ ಒಂದೊಂದು ಗಿಡಗಳನ್ನು ನೆಟ್ಟು ಪೋಷಣೆ ಮಾಡ್ತಾ ಬಂದ್ವಿ. ಜೊತೆಗೆ ಬೀದಿ ನಾಟಕಗಳು, ಹಾಡುಗಳ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ್ವಿ. ನಮ್ಮಈ ಕಾರ್ಯದಲ್ಲಿ ಜೊತೆಯಾದ ಹೋರಾಟಗಾರರು, ಸಾರ್ವಜನಿಕರು, ಯುವಜನರು, ಸಾಹಿತಿಗಳು, ಪತ್ರಕರ್ತರು ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ. ಮೊದಲಿನಂತೆ ಅರ್ಕಾವತಿ ನದಿ ಸ್ವಚ್ಛವಾಗಿ ಹರಿಯಬೇಕು, ಕಾಡುಗಳು ಮರು ಸೃಷ್ಟಿಯಾಗಬೇಕು ನಮ್ಮ ಮುಂದಿನ ಪೀಳಿಗೆಗೂ ಕಾಡು, ನದಿ, ಬೆಟ್ಟ, ಗುಡ್ಡ ಉಳಿಸಬೇಕು. ತೇಜಸ್ವಿ, ಕುವೆಂಪು, ಬೇಂದ್ರೆ, ಕಾರಂತ, ಲಂಕೇಶ್, ಚೆಗುವೆರಾ ಇವರ ಬರವಣಿಗೆ ನನ್ನಲ್ಲಿ ಸಾಕಷ್ಟು ಬದಲಾವಣೆ ಅರಿವನ್ನು ಮೂಡಿಸುವಲ್ಲಿ ಸಹಾಯವಾಯ್ತು. ಫೋಟೋಗ್ರಫಿ, ಪೇಂಟಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್ ಮಾಡುವುದು, ಹಾಡುವುದು ನನ್ನ ಹವ್ಯಾಸಗಳು. 0' ಬಜೆಟ್ ನಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು 'ಯುವ ಸಂಚಲನ' ಟೀಮ್ ಕಟ್ಟಿದೆ. ನಾನು ಒಂದೇ ಸಲಕ್ಕೆ SSLC ಪಾಸ್ ಆಗಿದ್ರೆ ಯಾವುದೋ ಒಂದು ಡಿಗ್ರಿ ಮಾಡ್ಕೊಂಡು ಕೆಲಸ ಮಾಡ್ಕೊಂಡು ಇದ್ದು ಬಿಡುತ್ತಿದ್ದೆ. ಫೇಲ್ ಆದ್ದರಿಂದ ನಾನು ನನ್ನ ಎಲ್ಲ ಎಲ್ಲೆಗಳನ್ನು ಮೀರಿ ಬದುಕುತ್ತಿದ್ದೇನೆ. ನಾನಿನ್ನು ಕಲಿಯುವ ವಿದ್ಯಾರ್ಥಿ' ಎಂದು ಮುಗುಳ್ನಗೆ ಬೀರುತ್ತಾರೆ ಇಪ್ಪತ್ತೊಂಬತ್ತು ವರ್ಷದ ಚಿದಾನಂದ್.
ಯಾವುದೇ ಒಂದು ಸಂಸ್ಥೆಯೇ ಈ ರೀತಿಯ ಕೆಲಸಗಳನ್ನು ಮಾಡಲಿ ಅಂತ ಕಾಯ್ತಾ ಕೂರಬೇಕಿಲ್ಲ. ಸಮಾಜದಲ್ಲಿ ಬದುಕುತ್ತಿರುವ ಎಲ್ಲರಿಗೂ ಒಂದು ಸಾಮಾಜಿಕ ಜವಾಬ್ದಾರಿ ಇದೆ. ಮನಸ್ಸು ಮಾಡಿದ್ರೆ ಎಲ್ಲರಿಂದಲೂ ಈ ಕೆಲಸ ಸಾಧ್ಯ. ಸಾಮಾಜಿಕ ಕಳಕಳಿ, ಪರಿಸರ ಜಾಗೃತಿ ಇಂದಿನ ತುರ್ತು ಅಗತ್ಯಗಳಾಗಿವೆ. ಇವುಗಳನ್ನು ನಾವೆಲ್ಲ ಬೆಳೆಸಿಕೊಂಡು ಸಮರ್ಪಕವಾಗಿ ನಿರ್ವಹಿಸೋಣ. ಈ ನಿಟ್ಟಿನಲ್ಲಿ ಅತ್ಯಂತ ಪ್ರೀತಿಯಿಂದ ಕಾಳಜಿಯಿಂದ ಕೆಲಸ ಮಾಡುತ್ತಿರುವ ಚಿದಾನಂದ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪ್ರಜಾವಾಣಿ ಕೊಡಮಾಡುವ ರಾಜ್ಯಮಟ್ಟದ ಯುವ ಸಾಧಕ ಪ್ರಶಸ್ತಿ, ಗಾಂಧಿ ಸ್ಮಾರಕ ನಿಧಿಯಿಂದ ಪ್ರೇರಣಾ ಶ್ರೇಷ್ಠ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಸನ್ಮಾನಗಳು ಇವರನ್ನರಸಿ ಬಂದಿವೆ. ಶಾಲಾಕಾಲೇಜಗಳ ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಖಿನ್ನತೆಗೆ ಜಾರಿ ಬದುಕನ್ನು ಜಟಿಲ ಮಾಡಿಕೊಂಡ ಸಾವಿರಾರು ವಿದ್ಯಾರ್ಥಿಗಳಿಗೆ ಚಿದಾನಂದ್ ಅವರು ಪ್ರೇರಣಾದಾಯಿಯಾಗಿದ್ದಾರೆ. ಇವರ ಬೆಂಬಲ ಶಕ್ತಿ ಇನ್ನಷ್ಚು ಹೆಚ್ಚಾಗಲಿ ಎಂದು ಆಶಿಸುತ್ತೇವೆ.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ಮಕ್ಕಳಲ್ಲಿ ಮಕ್ಕಳಾಗಿ ಮಕ್ಕಳ ಜೀವನ ರೂಪಿಸುವಲ್ಲಿ ಸದಾ ತುಡಿದ ಜೀವ ಎಂ. ಆರ್. ಕಮಲ
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
ವಿಶೇಷ ಚೇತನರೆಂದರೆ ಸೆಣಸಾಟಗಳೊಂದಿಗೆ ಕನಸುಗಳನ್ನು ಕಟ್ಟುವವರು
ಚುಕ್ಕಿಯಿಟ್ಟು ಚಿತ್ರ ಬರೆಯುವ ಮಾಂತ್ರಿಕ..
ಕಥೆಯಲ್ಲ, ಬದುಕಿನ ವ್ಯಥೆ ಇದು...
ಅಬ್ದುಲ್ ಅವರ ಬದುಕಿನ ಏಳುಬೀಳು
ಹಾಡನ್ನೇ ಬದುಕಾಗಿಸಿದ ದಂಪತಿ ತಂಬೂರಿ ಜವರಯ್ಯ ಮತ್ತು ಬೋರಮ್ಮ
ಶ್ರವಣ್ ಹೆಗ್ಗೋಡು ಅವರ ಗೊಂಬೆಗಳ ಜೊತೆಗಿನ ಪಯಣ
ಕಾಡುಜನರ, ಬುಡಕಟ್ಚು ಸಮುದಾಯಗಳ ಏಳಿಗೆಯ ವಿನೂತನ ‘ವನಚೇತನ’
ಸಮುದಾಯ, ಸಂಸ್ಕೃತಿಗಳ ಸಮ್ಮಿಶ್ರಣವೇ ಭಾರತ
ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯಿಂದ ಹೊರಬಂದ ಮಂಜುಳ ಮಾಳ್ಗಿ
ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
ಸಬ್ ಇನ್ಸ್ಪೆಕ್ಟರ್ ಸೋಮಶಂಕರ್ ಜೀವನಯಾನ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ಪ್ರಕೃತಿ ಹಾಗೂ ಪಕ್ಷಿ ಪ್ರೇಮಿ ವಿನೋದ್ ಕುಮಾರ್ ವಿ.ಕೆ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.