Date: 17-02-2021
Location: .
ಕನ್ನಡ ಸಾಹಿತ್ಯಲೋಕದ ಮಹತ್ವದ ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಲೇಖಕ, ವಿಮರ್ಶಕ ಶ್ರೀಧರ ಹೆಗಡೆ ಭದ್ರನ್ ಅವರು ಬರೆಯುತ್ತಿರುವ ‘ಬದುಕಿನ ಬುತ್ತಿ’ ಅಂಕಣದಲ್ಲಿ ಈ ಬಾರಿ ಶಿವರಾಮ ಕಾರಂತ ಅವರ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ವಿಶ್ಲೇಷಿಸಿದ ಬರಹವಿದು.
ಸಾಹಿತ್ಯದ ಹಲವು ಪ್ರಕಾರ ಮತ್ತು ಕ್ಷೇತ್ರಗಳಲ್ಲಿ ಕೃಷಿ ಮಾಡಿದ್ದರೂ ಶಿವರಾಮ ಕಾರಂತರನ್ನು ನಾವು ಸ್ಮರಿಸುವುದು ಕಾದಂಬರಿಕಾರರನ್ನಾಗಿ. ನಲವತ್ತೈದು ಕಾದಂಬರಿಗಳನ್ನು ಬರೆದಿರುವ ಕಾರಂತರು, ಅವುಗಳಲ್ಲಿ; ಬದುಕಿನ ಭಿನ್ನ ಭಿನ್ನ ಮುಖಗಳನ್ನು ಪರಿಚಯಿಸುವ ಪ್ರಯತ್ನವನ್ನು ಉದ್ದಕ್ಕೂ ಮಾಡಿದ್ದಾರೆ. 1933ರಲ್ಲಿ ಪ್ರಕಟವಾದ ಅವರ ’ಚೋಮನ ದುಡಿ’ ಕಾದಂಬರಿ ಅತ್ಯಂತ ಜನಪ್ರೀತಿಯನ್ನು ಪಡೆದುಕೊಂಡು ಕಾರಂತರನ್ನು ಮನೆಮಾತಾಗಿಸಿತ್ತು. ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಕಾರಂತರ ಹೆಸರನ್ನು ಚಿರಸ್ಥಾಯಿಗೊಳಿಸಿದ ಕೃತಿ- ’ಮರಳಿ ಮಣ್ಣಿಗೆ’ 1941ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಲೇಖಕರೇ ಹೇಳಿರುವಂತೆ; ಪರ್ಲ್ ಬಕ್ ಎಂಬ ಇಂಗ್ಲಿಷ್ ಕಾದಂಬರಿಗಾರ್ತಿಯ ’ಗುಡ್ ಅರ್ಥ್’ ಇದಕ್ಕೆ ಪ್ರೇರಣೆಯನ್ನೊದಗಿಸಿದೆ. ’ಮರಳಿ ಮಣ್ಣಿಗೆ’ ಕಾದಂಬರಿಗೆ ಬರೆದ ಮೊದಲ ಮಾತಿನಲ್ಲಿ ಕಾರಂತರು; ನನ್ನ ಊರಿನ ಬಡತನದ ಬಾಳ್ವೆಯೇ ಕತೆಯ ವಸ್ತುವಾಗಿದೆ. ಈ ಬಾಳ್ವೆಯ ಪ್ರಶ್ನೆ ಮೂರು ತಲೆಮಾರುಗಳಲ್ಲಿ ಹೇಗೆ ಪ್ರತ್ಯುತ್ತರಗೊಳ್ಳುತ್ತದೆ- ಎಂಬುದು ಚಿತ್ರಿಸಲ್ಪಟ್ಟಿದೆ -ಎಂದು ಹೇಳುವ ಮೂಲಕ ಕಾದಂಬರಿಯ ವಸ್ತುವನ್ನು ಕುರಿತ ಸೂಚನೆಯನ್ನು ನೀಡಿದ್ದಾರೆ.
1850ರಿಂದ 1940ರ ವರೆಗಿನ ಸುಮಾರು ಒಂದು ನೂರು ವರ್ಷಗಳ ಕಾಲಾವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಡುಗಡಲ ತೀರದ ಕೋಡಿ ಎಂಬ ಹಳ್ಳಿಯ ಕೇಂದ್ರದಲ್ಲಿ ಬದುಕು ಮಾಡಿಕೊಂಡಿದ್ದ ಬಡ ಬ್ರಾಹ್ಮಣ ಮನೆತನದ ಚಿತ್ರಣದ ಹಿನ್ನೆಲೆಯನ್ನು ಕಾದಂಬರಿ ಒಳಗೊಂಡಿದೆ. ಕಥನದೊಂದಿಗೆ ಹಳ್ಳಿಯ ಜೀವನದ ಆರ್ಥಿಕ; ಸಾಮಾಜಿಕ; ನೈತಿಕ ನೆಲೆಯಲ್ಲಾದ ಸ್ಥಿತ್ಯಂತರಗಳು ಹಾಗೂ ಅವುಗಳಿಗೆ ಕಾರಣವಾಗುವ ಮೌಲ್ಯ ಕ್ರಮಗಳನ್ನು ಕಾರಂತರು ನಿರೂಪಿಸಿದ್ದಾರೆ.
’ಮರಳಿ ಮಣ್ಣಿಗೆ’ ಕಾದಂಬರಿ ಮೂರು ತಲೆಮಾರುಗಳ ಚಿತ್ರಣವನ್ನು ಒಳಗೊಂಡಿದೆ ಎಂಬುದು ಅದರ ಬಗ್ಗೆ ಬಂದಿರುವ ಚರ್ಚೆಯ ಕೇಂದ್ರ ಬಿಂದು. ಕಾಲದ ಸ್ಥಿತ್ಯಂತರಗಳನ್ನು ಗುರುತಿಸಲು ಬೇಕಾದ ಕಾಲದ ಅಂತರದ ನೆಲೆಯನ್ನು ಲೇಖಕರು ಸ್ಪಷ್ಟವಾಗಿ ಕಲ್ಪಿಸಿಕೊಂಡಿದ್ದಾರೆ. ಸದಾ ಮೊರೆಯುವ ಅರಬ್ಬೀ ಸಮುದ್ರ ಹಾಗೂ ಪಶ್ಚಿಮ ಘಟ್ಟಗಳ ನಡುವಿನ ಪಡುವಣ ಕರಾವಳಿ ಪ್ರದೇಶ ಕಾದಂಬರಿ ನಡೆಯುವ ಪ್ರಧಾನ ಕ್ಷೇತ್ರ. ಕೋಡಿ, ಮಣೂರು, ಐರೋಡಿ, ಪಾರಂಪಳ್ಳಿ, ಸಾಲಿಗ್ರಾಮ, ಶಾನಾಡಿ, ಪಡುಮುನ್ನೂರು ಮುಂತಾದ ಹಳ್ಳಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಅಲ್ಲಿಯ ಬದುಕಿನ ಕ್ರಮವನ್ನು ನಿರುಮ್ಮಳವಾಗಿ ಬಿಚ್ಚುತ್ತಾ ಹೋಗುತ್ತದೆ. ಹೀಗಾಗಿ ಕನ್ನಡದ ಪ್ರಾತಿನಿಧಿಕ ಪ್ರಾದೇಶಿಕ ಕಾದಂಬರಿಗಳಲ್ಲಿ ಒಂದಾಗಿಯೂ ಇದು ಜಾಗಪಡೆದಿದೆ.
ಕಾದಂಬರಿ ಪ್ರಾರಂಭವಾಗುವುದು ಹಿರಿಯ ರಾಮೈತಾಳರ ಮದುವೆಯ ವರ್ಣನೆಯಿಂದ ಹಾಗೂ ಮುಕ್ತಾಯವಾಗುವುದು ಮೂರನೇ ತಲೆ ಅಂದರೆ ಮೊಮ್ಮಗ ರಾಮನ ಮದುವೆಯ ಚಪ್ಪರದ ಸಿದ್ಧತೆಯಲ್ಲಿ. ಈ ಎರಡು ಘಟನೆಗಳ ನಡುವಿನ ನೂರು ವರ್ಷಗಳ ಅಂತರದಲ್ಲಿ ಆ ಮನೆತನ ಕಂಡ ಏರಿಳಿತಗಳು, ಘಟನಾವಳಿಗಳು ಕಾದಂಬರಿಯ ವ್ಯಾಪ್ತಿಯನ್ನು ನಿರ್ಧರಿಸಿವೆ. ರಾಮೈತಾಳರ ಸಾಂಪ್ರದಾಯಿಕ ಪೌರೋಹಿತ್ಯದ ಬದುಕಿನ ಜಂಜಾಟ, ಇದಕ್ಕೆ ಜೊತೆಯಾಗುವ ಸಹೋದರಿ ಸರಸೋತಿ ಹಾಗೂ ಹೆಂಡತಿ ಪಾರೋತಿಯರ ಗಟ್ಟಿತನ, ಎರಡನೆಯ ಹೆಂಡತಿಯಾಗಿ ಬಂದರೂ ಸಾವಯವವಾಗಿ ಇವರೆಲ್ಲರೊಂದಿಗೆ ಒಂದಾಗಿ ಬಾಳುವ ಸತ್ಯಭಾಮೆಯರ ಬದುಕಿನ ಚಿತ್ರಣ ಮೊದಲನೆಯ ಹಂತದಲ್ಲಿ ಚಿತ್ರಿತವಾಗಿವೆ. ಎರಡನೆಯ ಹಂತದಲ್ಲಿ ಆಧಾರ ತಪ್ಪಿದ, ಹಳ್ಳಿಗೂ ಸೇರದ ಪಟ್ಟಣಕ್ಕೂ ಸೇರದ ಎಡಬಿಡಂಗಿಯಾದ ಲಚ್ಚನ ಅರೆಬರೆ ಜ್ಞಾನ, ದುರ್ಬುದ್ಧಿಯಿಂದಾಗಿ ಮನೆ ದುರ್ದೆಸೆಗಿಳಿಯುವುದನ್ನು ಚಿತ್ರಿಸಿದ್ದಾರೆ. ದುಶ್ಚಟಗಳಿಗೆ ದಾಸನಾದ ಲಚ್ಚ; ತಂದೆ ರಾಮೈತಾಳರು ಮಾಡಿಟ್ಟ ಆಸ್ತಿಯೆಲ್ಲವನ್ನೂ ಕಳೆಯುತ್ತಾನೆ. ತನ್ನ ಹೆಂಡತಿ ನಾಗವೇಣಿಯನ್ನೂ ವಂಚಿಸುತ್ತಾನೆ. ಅತ್ತೆಯಂದಿರ ಹೋರಾಟ ಪ್ರಕೃತಿಯ ಜೊತೆಗಾದರೆ; ಸೊಸೆ ನಾಗವೇಣಿಯ ಹೋರಾಟ ಗಂಡನೊಂದಿಗೆ. ಲಚ್ಚನೊಂದಿಗಿನ ಸಂಸಾರ ಅವಳಿಗೆ ರೋಗವನ್ನು ತರುತ್ತದೆ. ಅಪ್ಪನಾದ ಲಚ್ಚನ ಕೆಟ್ಟ ವರ್ತನೆಯಿಂದ ಕಂಗಾಲಾಗಿರುವ ತಾಯಿ ನಾಗವೇಣಿಯ ದೈನ್ಯವಾದ ಬದುಕು, ನರಕ ಸದೃಶವಾದ ಇಡೀ ಕುಟುಂಬದ ಬಾಳು, ಇವುಗಳನ್ನು ನೋಡಿ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತ, ಕಷ್ಟಪಟ್ಟು ಓದಿ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಾನೆ. ಮುಂಬೈ ನಗರದಲ್ಲಿ ಓದಲು ಹೋದ ರಾಮ; ಅದೇ ಕಾಲದಲ್ಲಿಕಾವೇರುತ್ತಿದ್ದ ಗಾಂಧೀಜಿಯವರ ನೇತೃತ್ವದ ರಾಷ್ಟೀಯ ಚಳವಳಿಯಲ್ಲಿ ಪಾಲ್ಗೊಂಡು ಜೈಲು ಸೇರುತ್ತಾನೆ. ಈ ಸಂದರ್ಭವನ್ನು ವಿಷ್ಲೇಷಿಸಿರುವ ಮಾಲಿನಿ ಮಲ್ಯರು; ಈ ಚಳವಳದಲ್ಲಿ ಪಾಲ್ಗೊಂಡಿದ್ದ ಕಾರಂತರು ತಾವೇ ಒಂದು ಪಾತ್ರವಾಗಿ ಈ ಕಾದಂಬರಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಮೂಲಕ ಮೂರನೆಯ ತಲೆಮಾರಿನ ರಾಮನಲ್ಲಿ ಕಾರಂತರನ್ನು ಕಂಡಿದ್ದಾರೆ. ಬಿ.ಎ. ಪದವಿ ಓದಿದರೂ ರಾಮನಿಗೆ ಕೆಲಸ ಸಿಗುವುದಿಲ್ಲ. ಕೆಲವು ದಿನ ಮುಂಬೈಯಲ್ಲಿಯೇ ನಿಂತು ಕಲಾವಿದೆಯೊಬ್ಬಳಿಂದ ಚಿತ್ರಕಲೆಯನ್ನು ಕಲಿಯುತ್ತಾನೆ. ಕೊನೆಗೆ ನಗರದ ಕಷ್ಟ ಜೀವನ, ಬದುಕಿಗೆ ಭದ್ರತೆ ಇಲ್ಲದೆ ಇರುವಾಗ; ಊರಿನಲ್ಲಿ ಅಜ್ಜ ಮನೆಯ ಗೋಡೆಯಲ್ಲಿ ಹುಗಿದಿಟ್ಟಿದ್ದ ಚಿನ್ನದ ನೆರವಿನಿಂದ ಬದುಕಲು ನಿರ್ಧರಿಸಿ ಊರಿಗೆ ಮರಳುತ್ತಾನೆ. ಜೊತೆಗೆ ತಂದೆ ಪರರ ಪಾಲು ಮಾಡಿದ್ದ ತಮ್ಮ ಜಮೀನು-ಭೂಮಿಯನ್ನೂ ಮರಳಿ ಪಡೆಯುವ ನಿರ್ಧಾರ ಮಾಡುತ್ತಾನೆ. ತನ್ನ ನೆಲದ, ಜಾತಿಯ ಹೆಣ್ಣನ್ನು ಮದುವೆಯಾಗಲು ತೀರ್ಮಾನಿಸುತ್ತಾನೆ. ಹೀಗೆ ತಾಯಿ ನೆಲಕ್ಕೆ ಮರಳುವ ರಾಮನ ಜೀವನ ಚಿತ್ರಣದೊಂದಿಗೆ ಕಾದಂಬರಿ ಸಂಪನ್ನವಾಗುತ್ತದೆ.
ಹಳ್ಳಿಯ ಬದುಕಿನ ಸಂಕ್ರಮಣ ಕಾಲಘಟ್ಟದ ಸಮಯವನ್ನು ಹಿಡಿಯ ಹೊರಟಿರುವ ಲೇಖಕರಿಗೆ ತುಂಬಾ ಕಾಡಿಸುವ ಸಂಗತಿಯೆಂದರೆ; ನಾಶದ ಹಾದಿಯನ್ನು ಹಿಡಿದಿರುವ ಸಾಂಪ್ರದಾಯಿಕ ವೃತ್ತಿಗಳು, ಅದರಿಂದ ಉಂಟಾದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳೇ ಆಗಿವೆ. ಹೀಗಾಗಿಯೇ ರಾಮೈತಾಳರ ಬದುಕಿನೊಂದಿಗೆ ಶೀನಮಯ್ಯರ ಬದುಕು ತಳುಕು ಹಾಕಿಕೊಳ್ಳುವುದು. ಹೊಟ್ಟೆಪಾಡಿಗಾಗಿಯೋ ಹಣಗಳಿಸುವ ಆಸೆಯಿಂದಲೋ ಊರು ಬಿಟ್ಟು ಹೋಟೆಲುಗಳನ್ನು ತೆರೆದೋ ಇನ್ನೆನೋ ಮಾಡಿಯೋ ಬದುಕುವ ಮಹತ್ವಾಕಾಂಕ್ಷೆಯನ್ನು ಮಯ್ಯರ ಮಕ್ಕಳು ವ್ಯಕ್ತ ಮಾಡುತ್ತಾರೆ. ಆದರೆ ರಾಮೈತಾಳರಿಂದ ಬಂದ ಮನೆತನದ ಸಾಂಪ್ರದಾಯಿಕ ಪೌರೋಹಿತ್ಯವನ್ನು ತಿರಸ್ಕರಿಸುವ, ಹೊಸ ವಿದ್ಯಾಭ್ಯಾಸವನ್ನು ಪಡೆದ ಅವರ ಮಗ ಲಚ್ಚ ಹಾಳಾಗಿ ಹೋಗುವುದೂ ಇದೇ ಆಧುನಿಕತೆಯ ಪ್ರಲೋಭನೆಯಿಂದಾಗಿಯೇ ಅಗಿದೆ. ಇಂತಹ ಆಯ್ಕೆಗಳ ಸಂದರ್ಭದಲ್ಲಿ ಕಾರಂತರ ಗಮನ ಮನುಷ್ಯ ಮತ್ತು ಅವನ ಪ್ರವೃತ್ತಿಯ ಕಡೆಗೇ ಇದೆ. ಅವರ ತುಡಿತ; ಒಳ್ಳೆಯತನ ಹಾಗೂ ವಿಕಾಸದತ್ತಲೇ ಹೊರತು ತೀವ್ರವಾಗಿ ಬೆಳೆಯುತ್ತಿರುವ ಅಪಮೌಲ್ಯಗಳತ್ತ ಅಲ್ಲ. ಹೀಗಾಗಿ ಒಳ್ಳೆಯತನ, ಉದಾತ್ತ ಬದುಕು, ಕುಗ್ಗದ ಆತ್ಮವಿಶ್ವಾಸಗಳು ಇಲ್ಲಿಯ ಮೌಲ್ಯಗಳೇ ಆಗಿಬಿಡುತ್ತವೆ.
ಈಗಾಗಲೇ ಗಮನಿಸಿರುವಂತೆ ಕಾದಂಬರಿ ಆರಂಭವಾಗುವುದು ರಾಮೈತಾಳರು ಮತ್ತು ಪಾರೋತಿಯರ ಮದುವೆಯ ವರ್ಣನೆಯಿಂದ. ಮದುವೆಯ ದಿನ ಸುರಿದ ಕರಾವಳಿಯ ಕಾರ್ಗಾಲದ ವರ್ಣನೆಯನ್ನು ನೋಡಬೇಕು; ಮಣೂರಿನ ನಾರಯಣ ಮಯ್ಯರ ಮಗಳು ಪಾರ್ವತಿಯನ್ನು ಕೋಡಿಯ ಕೋದಂಡ ರಾಮೈತಾಳರಿಗೆ ಕೊಟ್ಟು ಸುತ್ತು ಹಳ್ಳಿಗಳಲ್ಲಿ ಪ್ರಸಿದ್ಧವಾದ ’ಕೊರಗ’ನ ಓಲಗದಲ್ಲಿ ಮದುವೆ ನಡೆಯಿತು. ಮದುವೆ ನಾಲ್ಕು ದಿನ ನಡೆದರೆ; ನಾಲ್ಕೂ ದಿವಸ ಎಂಥ ಮಳೆಗಾಳಿ ಅದು; ಮದುವೆಯ ಚಪ್ಪರದ ಮಡಲು ಹೆಡಲುಗಳನ್ನು ಆರಾರು ಬಾರಿ ಬಿಗಿದರೂ ಉಳಿದುದು ಬಿದಿರು ಮಾತ್ರ. ಸಂತ ದ್ವಾರಾ ಸುರಿಯುವ ಇಂಥ ಮಳೆಯಲ್ಲಿಯೇ ದಿಬ್ಬಣ ಹೊರಟು, ಗರ್ನಾಲು, ಕದಿನಿ, ಬಿರುಸು, ಬಾಣ ಎಲ್ಲವನ್ನೂ ಇಂದ್ರದೇವನೇ ಪೂರೈಸಿ; ಒಬ್ಬರ ಮಾತು ಒಬ್ಬರಿಗೆ ಕೇಳಿಸದಂತಾಗಿ ಮದುವೆಯ ಮಂಟಪಕ್ಕೆ ತಲುಪಿದ್ದು, ಅದು ಕೇವಲ ನೆನಪಾಗಿ ಉಳಿದದ್ದು, ಹಣ್ಣೆಲೆಗಳೆಲ್ಲ ಉದುರಿ ಈಗ ಉಳಿದಿರುವುದು ಐತಾಳರು, ಹೆಂಡತಿ ಪಾರೋತಿ, ಅವರ ವಿಧವೆ ತಂಗಿ ಸರಸೋತಿ ಮಾತ್ರ. ಹೀಗೆ ಕರಾವಳಿಗೆ ಸಹಜವಾದ ಅದ್ಭುತ ಮಳೆಯ ವರ್ಣನೆ, ಕಾದಂಬರಿಯಲ್ಲಿ ಮುಂದೆ ಬರುವ; ವಾಸ್ತೇವ ಗುರಿಕಾರರ ಮಗಳ ಮದುವೆಯ ಸಂದರ್ಭದಲ್ಲಿ; ಐತಾಳರ ಮಗ ಲಚ್ಚನ ಮದುವೆಯ ದಿನ ಕೂಡಾ ಅಧ್ಯಾಹಾರವಾಗಿ ಬರುತ್ತದೆ. ಮಳೆ ಮತ್ತು ಕಡಲು ಕಾರಂತರ ಕಾದಂಬರಿಯ ಎರಡು ಜೀವಂತ ಪ್ರತೀಕಗಳು.
ಕಾದಂಬರಿಯಲ್ಲಿ ಬರುವ ಸ್ತ್ರೀಯರು ವಿಶೇಷವಾಗಿ ಗಮನ ಸೆಳೆಯುತ್ತಾರೆ. ಪರಂಪರಾಗತವಾಗಿ ಬಂದ ಮೌಲ್ಯಗಳನ್ನು ಸಹಜವಾಗಿ ಸ್ವೀಕರಿಸಿದವರು ಇವರು. ಜೀವನ ಹೋರಾಟದಲ್ಲಿ ಧನಾತ್ಮಕವಾದುದನ್ನೇ ಕಾಣುತ್ತಾ ಬದುಕುವವರು. ಮೂಕ ಪ್ರೇಮದ ಸಾಕ್ಷಾತಾರ ಮಾಡಿತೋರಿಸುವ ಪಾರೋತಿ, ಕೆಚ್ಚೆದೆಯ ಹೆಣ್ಣಾಗಿ ದುಡಿಯುವ ಸರಸೋತಿ, ನಿಷ್ಠೆಯ ಪ್ರತೀಕವಾಗಿ ಬಾಳು ಸವೆಸುವ ನಾಗವೇಣಿ -ಈ ಮೂರು ಹೆಂಗಳು ಕಾದಂಬರಿಯ ವ್ಯಾಪ್ತಿಯನ್ನು ಹೆಚ್ಚಿಸಿದ್ದಾರೆ. ಈ ಪಾತ್ರಗಳ ಬಗ್ಗೆ ಸ್ವತಃ ಕಾರಂತರು ಕಾದಂಬರಿಯ ಮೂರನೆಯ ಮುದ್ರಣದ ಮುನ್ನುಡಿಯಲ್ಲಿ; ಈ ಬರಹದಲ್ಲಿ ಕಾಣುವ ನಾಯಕಿಯರ ಸೌಜನ್ಯ, ವಾತ್ಸಲ್ಯಗಳೆಂದರೆ ನಾನು ನನ್ನ ತಾಯಿಯಲ್ಲಿ ಕಂಡ ಆ ಸದ್ಗುಣಗಳ ತೀರಾ ಸಣ್ಣ ಅಂಶವೆನ್ನಬೇಕು. ಸೈರಣೆಯ ಮೂರ್ತಿಯಾಗಿದ್ದ ಅವಳು ನನ್ನ ಜೀವನಕ್ಕೆ ಒಂದು ಹಿರಿಯ ಆದರ್ಶವಾಗಿದ್ದಳು ಎಂದಿರುವ ಮಾತನ್ನು ಸ್ಮರಿಸಬೇಕು. ಅಲ್ಲಿಗೆ; ಇವೇನು ಕೇವಲ ಕಲ್ಪನೆಯ ಚಿತ್ರಣಗಳಲ್ಲ ಎಂಬ ವಾಸ್ತವದ ಅರಿವುಂಟಾಗುತ್ತದೆ.
ಮಲೆನಾಡು-ಕರಾವಳಿಯ ತೋಟಪಟ್ಟಿ ಸೀಮೆಯ ಸಾಮಾಜಿಕ ಪಲ್ಲಟಗಳನ್ನು ಕಾದಂಬರಿ ದಟ್ಟವಾಗಿ ಚಿತ್ರಿಸಿದೆ. ರಾಮೈತಾಳರ ತಲೆಮಾರು ತಲತಲಾಂತರದಿಂದ ಇದ್ದಲ್ಲಿಯೇ ಬದುಕು ಕಟ್ಟಿಕೊಂಡು ಬಂದದ್ದು. ಅವರಿಗೆ ಹೊಸ ತಲೆಮಾರಿನವರು ಒಳ್ಳೆಯ ವಿದ್ಯಾಭ್ಯಾಸ ಪಡೆದು ಹೊರಗೆ ಹೋಗಿ ದುಡಿಯಲಿ ಎಂಬ ಅಭಿಲಾಷೆ. ನಮ್ಮ ಕರಾವಳಿ ಸೀಮೆಯ ಅನಿವಾರ್ಯತೆಯೂ ಅದೇ ಆಗಿತ್ತು. ನಮ್ಮ ಹಿಂದಿನ ತಲೆಮಾರು ಮಕ್ಕಳು ವಿದ್ಯೆ ಕಲಿತು ಹೊರಹೋಗಲಿ ಎಂದೇ ಬಯಸುತ್ತಿತ್ತು. ಈ ಸಾಮಾಜಿಕ ಪಲ್ಲಟದ ಚರ್ಚೆಯನ್ನು ನಾಗವೇಣಿ ಮತ್ತು ಅವಳ ಚಿಕ್ಕಪ್ಪ ನಡೆಸುವ ಸಂಭಾಷಣೆಯಲ್ಲಿ ಕಾಣಬಹುದು; ಚಿಕ್ಕಪ್ಪ ನಾನೊಬ್ಬಳೆ ಆಗಿದ್ದರೆ ಕೋಡಿಯಲ್ಲೆ ಬಿದ್ದಿರಬಹುದು ಎನಿಸುತ್ತದೆ. ಆದರೆ ರಾಮ ಅಲ್ಲಿದ್ದುಕೊಂಡು ಮಾಡುವುದೇನು? ನಟ್ಟಿ, ಕೊಯ್ಲು, ಸುಡುಮಣ್ಣು ಮಾಡಿ ಕಳೆಯಲು ಬಂದೀತೇನು? ಎಂಬುದು ನಾಗವೇಣಿಯ ಆತಂಕ. ಏಕೆಂದರೆ ರಾಮ ಆಧುನಿಕ ವಿದ್ಯಾಭ್ಯಾಸ ಪಡೆದವನು. ಅದಕ್ಕೆ ಚಿಕ್ಕಪ್ಪನ ಪ್ರತಿಕ್ರಿಯೆ ಕುತೂಹಲಕಾರಿ; ರಾಮನ ವಿಚಾರ ಅನ್ನುತ್ತಿ, ಈಗ ನಮ್ಮೂರಿನಲ್ಲಿ ಗಂಡು ಹುಳುಗಳೇ ಕಾಣಿಸವು. ಬೇಸಾಯದ ಸಮಯಕ್ಕೆ ಬೆಂಗಳೂರಿನಿಂದಲೋ ಹಾವೇರಿಯಿಂದಲೋ ಯಾವ ಯಾವ ಊರುಗಳಿಂದಲೋ ಬರುತ್ತಾರೆ. ಮುಂದೆ ನಟ್ಟಿ ಮಾಡಿಸಿ ಹೋದರೆ, ತಿರುಗಿ ಕೊಯ್ಲಿಗೆ ಬಂದಾರು. ಅಲ್ಲಿಂದ ಮುಂದೆ ಎಂಟು ತಿಂಗಳ ತನಕ ಅಸ್ತವಾಗುತ್ತಾರೆ. ಏನಾದರೂ ಮದುವೆ ಮುಂಜಿ ಇದ್ದರೆ ಮಾತ್ರ ಬರುತ್ತಾರೆ. ಇಂದಿಗೂ ಮಲೆನಾಡಿನ ಹಲವು ಭಾಗಗಳಲ್ಲಿ ಇದೇ ರೀತಿ ನಡೆಯುತ್ತಿದೆ. ಮಕ್ಕಳೆಲ್ಲಾ ಕಲಿತು ಬೆಂಗಳೂರಿನಂತಹ ಪಟ್ಟಣಗಳನ್ನು ಸೇರಿ ದುಡಿಯತೊಡಗಿದ್ದಾರೆ. ಆದರೆ ಊರಿನ ಜಮೀನನ್ನು ಪರಭಾರೆ ಮಾಡುತ್ತಿಲ್ಲ. ಮುಂದೆ ಎಂದಾದರೂ ಮಣ್ಣಿಗೆ ಮರಳುವ ಆಸೆಯನ್ನು ಹೊತ್ತು ಬದುಕುತ್ತಿದ್ದಾರೆ. ಕರಾವಳಿಯ ಕೆಲವು ಭಾಗದ ಸ್ಥಿತಿ ವ್ಯತಿರಿಕ್ತವಾಗಿದೆ. ಹೊಸ ತಲೆಮಾರಿನ ಯುವಕರು ವಿದ್ಯಾಭ್ಯಾಸ ಪಡೆದೂ ಮಣ್ಣಿಗೆ ಅಂಟಿಕೊಳ್ಳುವ ಆಸಕ್ತಿ ತೋರಿಸುತ್ತಿದ್ದಾರೆ. ಕಾದಂಬರಿಯಲ್ಲಿ ರಾಮ ಹೊರ ಹೋಗಿ ವಿದ್ಯಾಭ್ಯಾಸ ಪಡೆದೂ ಯೋಗ್ಯ ಕೆಲಸ ಸಿಕ್ಕದೇ ಮಣ್ಣಿಗೆ ಮರಳುವಲ್ಲಿ ಒಂದು ರೀತಿಯ ಅಸಹಾಯಕತೆಯನ್ನು ಕಾಣುತ್ತೇವೆ. ಇದೂ ಕೂಡ ಹಲವು ಭಾಗದ ಇಂದಿನ ವಾಸ್ತವವೂ ಅಗಿರುವುದನ್ನು ಕಾಣಬಹುದು. ಹೀಗೆ ಕಾರಂತರ ಕಾದಂಬರಿ ನಮ್ಮ ತಲೆಮಾರುಗಳ ಸಾಮಾಜಿಕ ವಾಸ್ತವಕ್ಕೂ ಕನ್ನಡಿ ಹಿಡಿಯುತ್ತದೆ.
’ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಒಂದು ಮುಖ್ಯ ಪ್ರತಿಮೆಯಾಗಿ ಕಾಣಿಸಿಕೊಳ್ಳುವ ಹೋಟೆಲ್ ಅನಂತಮೂರ್ತಿಯವರ ’ಪ್ರಕೃತಿ’, ಆಲನಹಳ್ಳಿಯವರ ’ಭುಜಂಗಯ್ಯನ ದಶಾವತಾರಗಳು’, ದೇವನೂರರ ಕತೆಗಳು ಮುಂತಾದೆಡೆಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಇಲ್ಲೆಲ್ಲ ಆಧುನಿಕ ಮೌಲ್ಯಗಳ ಪ್ರವೇಶದಿಂದ ಪಲ್ಲಟಗೊಳ್ಳುವ ಗ್ರಾಮೀಣ ಬದುಕನ್ನು ಸಂಕೇತಿಸುವ ಪ್ರತೀಕವಾಗಿ ಹೋಟೆಲ್ ಬಳಕೆಯಾಗುತ್ತ ಬಂದಿದೆ.
’ಮರಳಿ ಮಣ್ಣಿಗೆ’ ಕಾದಂಬರಿ ಪ್ರಕಟವಾದಂದಿನಿಂದ ಉದ್ದಕ್ಕೂ ವಿಮರ್ಶಕರಿಂದ ಚರ್ಚೆಗೆ ಗುರಿಯಾಗುತ್ತಾ ಬಂದಿದೆ. ಕಾದಂಬರಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡ ಒಂದು ವರ್ಷದೊಳಗೆ (1943ರಲ್ಲಿ) ಹಿರಿಯ ವಿದ್ವಾಂಸ ಡಿ. ಎಲ್. ನರಸಿಂಹಾಚಾರ್ಯರು ಪ್ರಬುದ್ಧ ಕರ್ಣಾಟಕದಲ್ಲಿ ಇದನ್ನು ವಿಮರ್ಶಿಸಿದ್ದಾರೆ. ಇಡೀ ಕಾದಂಬರಿಯನ್ನು ಮರಳಿ ಮಣ್ಣಿಗೆ ಎಂಬ ಶೀರ್ಷಿಕೆಯ ಹಿನ್ನೆಲೆಯಲ್ಲೇ ನೋಡಿ; ...ಈ ನಮ್ಮ ನಡುವೆ ನಮ್ಮ ಕಲಿತ ಜನ ಅನಿಶ್ಚಿತತೆಯಲ್ಲಿ ಕಂಗೆಟ್ಟಿದೆ...ಇದಕ್ಕೆ ಪ್ರತೀಕಾರವೇನು? ಉತ್ತರ ಮರಳಿ ಮಣ್ಣಿಗೆ ಎಂಬ ಮಾತಿನಲ್ಲಿ ಅಡಗಿದೆ. ರಾಮನ ಜೀವನ ಇದನ್ನು ಆಡಿ ತೋರಿಸುತ್ತಿದೆ. ’ಮರಳಿ ಮಣ್ಣಿಗೆ’ ಎಂದು ನಮ್ಮ ದೇಶದ ತಲೆ ನಾಯಕರು ಆಗಾಗ ಕೂಗಿ ಸಾರುತ್ತಿರುವ ಡಂಗುರದ ಅರ್ಥ ಈ ಕಾದಂಬರಿಯಲ್ಲಿ ಮೂರ್ತೀಭವಿಸುತ್ತದೆ. ಎಂದಿದ್ದಾರೆ. ಇಷ್ಟೇ ಆಗಿದ್ದರೆ ಕೊನೆಯ ಅಂದರೆ ತಮ್ಮ ಸಮಕಾಲೀನನಾದ ರಾಮನ ಕಥೆಯನ್ನಷ್ಟೇ ಕಾರಂತರು ಹೇಳಿರುತ್ತಿದ್ದರು.
1948ರಲ್ಲಿ ಪ್ರೊ. ಎಸ್. ಅನಂತನಾರಾಯಣರು ಕಾರಂತರ ಕಾದಂಬರಿಗಳನ್ನು ಕುರಿತು ಅಧ್ಯಯನವೊಂದನ್ನು ಪ್ರಕಟಿಸಿದರು. ಮುಂದೆ ಎಲ್ಲ ತಲೆಮಾರಿನ ಎಲ್ಲ ಪಂಥಗಳ ವಿಮರ್ಶಕರೂ ಮರಳಿ ಮಣ್ಣಿಗೆ ಕುರಿತು ಬರೆದಿದ್ದಾರೆ. ಕಾರಂತರ ಅಭಿನಂದನ ಗ್ರಂಥ ’ಕಾರಂತ ಪ್ರಪಂಚ’ (1969)ದಲ್ಲಿ ಒಟ್ಟಿಗೆ ಐದು ಲೇಖನಗಳು ಇದೇ ಕಾದಂಬರಿಯನ್ನು ಚರ್ಚಿಸಿವೆ. ಬಹುತೇಕ ವಿಮರ್ಶಕರು ಕಾದಂಬರಿಯ ಕೊನೆಯ ಭಾಗದ ಬಗ್ಗೆ ತಕರಾರು ಎತ್ತಿದ್ದನ್ನು ಕಾಣುತ್ತೇವೆ. ಅದು ಕಲಾತ್ಮಕತೆಗೆ ಸಂಬಂಧಿಸಿದ ತಗಾದೆ. ಕೊನೆಯ ಭಾಗ ಅವಸರವಾಗಿ ನಡೆಯುವ, ಬದ್ಧ ತೀರ್ಮಾನದ ಅಭಿವ್ಯಕ್ತಿ ಎಂಬುದು ಗಿರಡ್ಡಿ ಗೋವಿಂದರಾಜ, ಎಂ. ಜಿ. ಕೃಷ್ಣಮೂರ್ತಿ, ಗೋಪಾಲಕೃಷ್ಣ ಅಡಿಗ ಮೊದಲಾದ ವಿಮರ್ಶಕರ ತಕರಾರು. ಜಿ. ಎಸ್. ಆಮೂರ ಅವರು ಕೊನೆಯ ಭಾಗದ ಕಲಾತ್ಮಕತೆಯನ್ನೂ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ; ಯು. ಆರ್. ಅನಂತಮೂರ್ತಿಯವರ ’ಸಂಸ್ಕಾರ’ ಕಾದಂಬರಿಯ ಮೇಲೆ ’ಮರಳಿ ಮಣ್ಣಿಗೆ’ ಮಾಡಿರುವ ಪರಿಣಾಮವನ್ನೂ ಸೂಚಿಸಿದ್ದಾರೆ. ಇನ್ನೊಂದೆಡೆ; ಸ್ವತಃ ಅನಂತಮೂರ್ತಿಯವರೇ ’ಮರಳಿ ಮಣ್ಣಿಗೆ’ಯಿಂದ ತಾವು ಪಡೆದ ಸೃಜನಶೀಲ ಪ್ರೇರಣೆಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಬೇರೆ ಬೇರೆ ಕಾಲಘಟ್ಟದ ವಿಮರ್ಶಕರು ಭಿನ್ನ ನೆಲೆಗಳಲ್ಲಿ ಈ ಕೃತಿಗೆ ಸ್ಪಂದಿಸಿದ್ದಾರೆ. ಟಿ.ಪಿ.ಅಶೋಕ ಅವರು ಗುರುತಿಸಿರುವಂತೆ; ನವೋದಯ ವಿಮರ್ಶಕರು ಕಥೆಯ ಓಟ, ಪಾತ್ರ ಚಿತ್ರಣ, ಕಾದಂಬರಿ ಸೂಚಿಸುವ ನೀತಿ, ಜೀವನದ ವರ್ಣನೆಗಳತ್ತ ನೋಟ ಹಾಯಿಸಿದರೆ; ನವ್ಯ ವಿಮರ್ಶಕರು ಕಾದಂಬರಿಯ ಶಿಲ್ಪ, ಬಂಧ, ಪ್ರಬಂಧ ಧ್ವನಿಗಳನ್ನು ಕುರಿತ ಪ್ರಶ್ನೆಗಳನ್ನು ಎತ್ತಿದ್ದಾರೆ. ನವ್ಯೋತ್ತರ ವಿಮರ್ಶಕರು ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಶ್ಲೇಷಣೆಯತ್ತ ಹೆಚ್ಚಿನ ಒಲವು ತೋರಿದ್ದಾರೆ. ಹೀಗಾಗಿಯೇ ’ಮರಳಿ ಮಣ್ಣಿಗೆ’ ಕಾದಂಬರಿ ವಿವಿಧ ಕಾಲಮಾನದ, ವಿವಿಧ ಮನೋಭಾವದ ವಿಮರ್ಶಕರನ್ನು ಆಹ್ವಾನಿಸುತ್ತಲೇ ಬಂದಿದೆ.
’ಮರಳಿ ಮಣ್ಣಿಗೆ’ ಕಾದಂಬರಿಯ ನೇರ ಮುಂದುವರಿಕೆಯಾಗಿ ಇನ್ನೊಂದು ಕೃತಿ ಬಂದಿಲ್ಲವಾದರೂ ಕನ್ನಡದ ವಾಸ್ತವವಾದಿ ಕಾದಂಬರಿ ಪರಂಪರೆಯ ಮೇಲೆ ಇದರ ಪ್ರಭಾವವನ್ನು ನಿರಾಕರಿಸಲಾಗದು.
ಈ ಅಂಕಣದ ಹಿಂದಿನ ಬರೆಹ
ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.